ವಾಟ್ಸಾಪು… ಫೇಸ್ಬುಕ್… ಟ್ವಿಟರ್ಗಳಲ್ಲೆಲ್ಲಾ ಈಗ ತಿಥಿಯದ್ದೇ ಮಾತು. ಇಂಥಾ ಸಿನಿಮಾ ಮಿಸ್ ಮಾಡ್ಕೊಳೋದಾ ಅಂದ್ಕೊಂಡು ನಾನೂ ಸಿನಿಮಾಗೆ ಹೋಗಿದ್ದಾಯ್ತು. ಲಿಫ್ಟಲ್ಲಿ ಹೋಗ್ತಿದ್ದ ಹಾಗೇ ಅದ್ಯಾವುದೋ ಮೂಲೆಯಿಂದ ಮುರಿದು ಬೀಳುತ್ತಿದ್ದ ಕರ ಕರ ಕರ ಸೌಂಡು ಕೇಳಿ ತಿಥಿ ಈಗ್ಲೇ ಶುರುವಾಗೋಯ್ತಾ ಅನ್ಸಿತ್ತು. ಆಮೇಲೆ 5.15ಕ್ಕೆ ತಿಥಿ ಶುರುವಾಗತ್ತೆ ಅಂದಿದ್ದ ಸಿನೆಪೊಲಿಸ್ನವರು ‘ಇನ್ನೊಂದು ಹತ್ತು ನಿಮೀಷ ತಡೀರಿ… ಇನ್ನೇನು ಶುರವಾಗಿ ಬಿಡುತ್ತೆ’ ಅಂದಿದ್ದನ್ನ ಊಟ ಅಂದ್ಕೊಂಡ್ರೋ ಏನೋ ನಮ್ಮ ಪರಿಶುದ್ಧ ಕನ್ನಡಿಗರು. ನೀಟಾಗಿ ಡ್ರೆಸ್ ಮಾಡಿಕೊಂಡು ಅರ್ಧಮರ್ಧ ಇಂಗ್ಲೀಷಲ್ಲೂ ಕನ್ನಡದಲ್ಲೂ ವಠಾಯಿಸುತ್ತಿದ್ದ ಅಧಿಕಾರಿಗೆ ಬೆವರು ನೀರಿಳಿಸಿದ್ರು. ಆ ಹತ್ತು ನಿಮಿಷದಲ್ಲಿ ಅವನ ತಿಥಿ ಮುಗಿದಿತ್ತು.
ಸಿಗರೇಟು ಸುಡೋರನ್ನೆಲ್ಲಾ ಕತ್ಲಲ್ಲಿ ಹೆದರಿಸಿದ್ಮೇಲೆ ತಿಥಿ ಶುರುವಾಯ್ತು. ಸೆಂಚುರಿ ಗೌಡ್ರು ಮಂತ್ರ ಶುರು ಮಾಡಿದ್ರು. ಈ ಮುಂಚೆ ಸುಮಾರು ‘ಅವಾರ್ಡ್’ ಸಿನಿಮಾ ನೋಡಿದ್ದ ನನಗೆ ತುಂಬಾ ನಿರೀಕ್ಷೆ ಇಲ್ಲದಿದ್ದರೂ, ಕ್ಲಾಸಿಕ್ ಸಿನಿಮಾ ಅಂತ ಕರ್ಕೊಂಡೋಗಿ ಚೆನ್ನಾಗಿಲ್ಲ ಅಂತ ಹೆಂಡ್ತಿ ಹತ್ರ ಬೈಸಿಕೊಳ್ಳೋದು ತಪ್ಪಿದ್ರೆ ಸಾಕು ಅನ್ಸಿತ್ತು. ನೋಡೋಕೂ ಮೊದಲೇ ಥರಥರದ ವಿಮರ್ಶೆ ಓದಿದ್ದೆ. ಕೆಲವರು ಇದನ್ನು ವಿಮರ್ಶೆ ಮಾಡಕ್ಕಾಗಲ್ಲ. ಅನುಭವಿಸ್ಬೇಕು ಅಂದಿದ್ರು. ಇನ್ನೂ ಕೆಲವು ಮಾಸ್ ವೀಕ್ಷಕರು ಸಖತ್ತಾಗಿದೆ ಅಂದವರೂ ಇದ್ದರು. ಆದರೆ ನಾನಂತೂ ಒಂದಷ್ಟು ಲೇಜೀ ಶಾಟ್ಗಳು, ಸ್ಟಿಲ್ ಫ್ರೇಮ್ಗಳು, ಬ್ಲಾಂಕ್ ಫ್ರೇಮ್ಗಳು, ಆಗಾಗ್ಗೆ ಸೌಂಡ್ ಆಫ್… ಬ್ಲಾಕ್ ಸ್ಕ್ರೀನ್ನಲ್ಲಿ ಡೈಲಾಗ್ಸ್, ಕಥೆಯ ಮೇನ್ ಫ್ರೇಮಿಗಿಂತ ಸೈಡ್ ಫ್ರೇಮ್ಗಳೇ ಹೆಚ್ಚಾಗಿರೋದು… ಇದನ್ನೆಲ್ಲಾ ನಿರೀಕ್ಷಿಸಿದ್ದೆ.
ಬಹುಶಃ ಪ್ರಾದೇಶಿಕ ಭಾಷೆಗಳಲ್ಲಿ ಅವಾರ್ಡ್ ಸಿನಿಮಾಗೆ ಒಂದು ಸ್ಟೈಲ್ಶೀಟ್ ಇದೆ. ಅದೇ ಸ್ಟೈಲ್ಶೀಟ್ನಲ್ಲೇ ಎಲ್ಲ ಸಿನಿಮಾಗಳೂ ಬರುತ್ತವೆ. ಇತ್ತೀಚೆಗೆ ನ್ಯಾಷನಲ್ ಅವಾರ್ಡ್ ಬಂದ ಮರಾಠಿ ಸಿನಿಮಾ ‘ಕೋರ್ಟ್’ ನೋಡಿದ್ದಾಗಲೂ ನನಗೆ ಅನಿಸಿದ್ದು ಹೀಗೇ. ಅಲ್ಲಿ ಹೆಚ್ಚು ಕಡಿಮೆ ಎಂದರೂ ಒಂದಿಪ್ಪತ್ತು ಬ್ಲಾಂಕ್ ಫ್ರೇಮುಗಳಿವೆ. ಆದರೆ ಯಾಕೆ ‘ಸ್ಪಾಟ್ಲೈಟ್’ನಲ್ಲಿ (ಆಸ್ಕರ್ ಅವಾರ್ಡ್ ಬಂದ ಸಿನಿಮಾ) ಹೀಗಿಲ್ಲ ಅಂತ ನನಗೆ ಅಚ್ಚರಿ ಆಗಿತ್ತು. ಕನ್ನಡದ ಸಿನಿಮಾಗೂ ಆಸ್ಕರ್ ಅವಾರ್ಡ್ ಬಂದ ಇಂಗ್ಲಿಷ್ ಸಿನಿಮಾಗೂ ಯಾಕ್ರೀ ಹೋಲಿಸ್ತೀರಿ ಅಂತ ನೀವು ಕೇಳಬಹುದು. ಹಾಲಿವುಡ್ನ ನಿರ್ಮಾಪಕರ ಜೇಬು ದೊಡ್ಡದಿರಬಹುದು, ಅವರ ಮಾರ್ಕೆಟ್ ದೊಡ್ಡದಿರಬಹುದು. ಆದರೆ ಅಷ್ಟೇ ಫ್ರೇಮ್ನಲ್ಲೇ ಅವರೂ ಸಿನಿಮಾ ತೆಗೆಯುತ್ತಾರೆ. ಅವರ ಸಿನಿಮಾ ರಿಚ್ ಇರಬಹುದು. ನಮ್ಮದು ಕಡಿಮೆ ರಿಚ್ ಇದ್ದೀತು. ಹಾಗಂತ ಕಲ್ಪನೆಯಲ್ಲೋ ಸ್ಕ್ರಿಪ್ಟ್ನಲ್ಲೋ ಹೋಲಿಸೋದ್ರಲ್ಲಿ ಏನ್ ತಪ್ಪು?
ಸ್ಪಾಟ್ಲೈಟ್ನಲ್ಲಿ ಪ್ರತಿ ಫ್ರೇಮ್ನಲ್ಲೂ ಕಥೆಗೆ ಪೂರಕವಾದ, ಕಥೆಯ ಕಡೆಗೇ ಸಾಗುವ ಸ್ಕ್ರಿಪ್ಟ್ ಇದೆ. ಒಂದೊಂದು ಫ್ರೇಮನ್ನೂ ಅವರು ಅದೆಷ್ಟು ಯೂಸ್ಫುಲ್ ಅನಿಸಿದ್ದಾರೆ! ಹಲವು ದೃಶ್ಯಗಳು ತೀರಾ ಅಪ್ಪ ನೆಟ್ಟ ಆಲದ ಮರಕ್ಕೇ ಜೋತುಬಿದ್ದಂತೆ ಕಾಣುತ್ತಿತ್ತು. ಗಡ್ಡಪ್ಪ ಗದ್ದೆ ಬಯಲಲ್ಲಿ ಬಂದು ಕುಳಿತುಕೊಳ್ಳುತ್ತಾನೆ… ಒಂದೂವರೆ ಸೆಕೆಂಡು ಸ್ಟಿಲ್… ನಂತರ ಜೇಬಿಂದ ಬೀಡಿ ಬೆಂಕಿ ಪೊಟ್ಟಣ ತೆಗೆದು ಕಡ್ಡಿ ಗೀರುವುದು… ಬೀಡಿ ಒಂದು ದಮ್ ಎಳೆದುಕೊಂಡು ಹೊಗೆ ಬಿಡುವುದು… ಈ ದೃಶ್ಯ ಒಂದು ಸಿನಿಮಾದಲ್ಲಿ ಎಂಥ ಬಿಲ್ಡಪ್ಗೆ ನಿರ್ಮಿಸೀತು? ಇದೇ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಾಲ್ಗುಡಿ ಡೇಸ್ ನೋಡಿದರೆ ಪ್ರತಿ ಫ್ರೇಮ್ನಲ್ಲೂ ‘ಕ್ರಿಯೆ’ ಇರುವುದನ್ನು ನೋಡುತ್ತೇವೆ. ಯಾವುದೋ ಒಂದು ಎಪಿಸೋಡಿನಲ್ಲಿ, ಗರಡಿ ಮನೆಯ ಸಮೀಪ ತಂದೆ ನಡೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಅಲ್ಲೇ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಒಂದು ಖಾಲಿ ಫ್ರೇಮ್. ಆದರೆ ಅದಾಗಲೇ ಅಪ್ಪನ ಕಣ್ಣು ತಪ್ಪಿಸಿ ಆಟಕ್ಕೆ ಬಂದಿದ್ದ ಮಗ, ಅಪ್ಪ ಈ ಕಡೆಯಿಂದ ಆ ಕಡೆಗೆ ಹೋಗುವವರೆಗೂ ಹಿಂದೆಲ್ಲೋ ಅವಿತು ಕುಳಿತಿರುತ್ತಾನೆ. ಇದು ನಿರ್ದೇಶಕರ ಜಾಣ್ಮೆ ಮತ್ತು ಕಲಾವಿದರ ನಿರ್ವಹಣೆಯ ಸೂಕ್ಷ್ಮ. ಇನ್ನು ‘ತಿಥಿ’ಯಲ್ಲಿ ಕೊಟ್ಟಿಗೆಯಲ್ಲಿ ‘ಸೀನ್’ ನಂತರ ಆಡು ಸೊಪ್ಪು ಮೇಯುವ ದೃಶ್ಯ, ಅದಕ್ಕೂ ಮೊದಲಿನ ‘ಧ್ವನಿ’ ಅಗತ್ಯ ನಿಜಕ್ಕೂ ಇತ್ತಾ? ನನ್ನ ಪಕ್ಕ ಕುಳಿತಿದ್ದ ಸುಮಾರು 60 ವಯಸ್ಸಿನ ದಂಪತಿಗಳ ಮುಜುಗರ ಊಹಿಸಿ ನಾನು ತೆರೆಯ ಮೇಲಿಂದ ಕಣ್ಣು ಕಿತ್ತಿರಲಿಲ್ಲ.
ಸಿನಿಮಾದಲ್ಲಿರುವವರು ಯಾರೂ ನಟರಲ್ಲ ಎಂಬುದು ಹೆಗ್ಗಳಿಕೆಯೂ, ತೆಗಳಿಕೆಯೂ ಆದೀತು. ತೀರಾ ದೇಸಿ ದೃಶ್ಯಗಳಲ್ಲಿ ನೈಜತೆ ಇದೆ. ಆದರೆ ಕಥೆಗೆ ಬೇಕಿದ್ದ ದೃಶ್ಯಗಳು ಇನ್ನೂ ಅಮೆಚ್ಯೂರ್ ಅನಿಸುತ್ತವೆ. ಡೈಲಾಗ್ಗಳನ್ನು ಹೇಳಿಸಿದಂತಿದೆ. ಹಾಗಂತ ಗಿರೀಶ್ ಕಾಸರವಳ್ಳಿಯವರ ಕೆಲವು ಸಿನಿಮಾಗಳಿಗಿಂತ ನಟರ ಹಾವಭಾವಗಳು ಚೆನ್ನಾಗಿವೆ.
ಇನ್ನು ಕಥೆಯ ಬಗ್ಗೆ, ಒಟ್ಟಾರೆ ಕಥೆಯ ಪ್ಲಾಟ್ ಸಂಬಂಧಗಳ ಸಂಕೀರ್ಣತೆಯನ್ನು ತೋರಿಸುತ್ತದೆ. ಆದರೆ ಯಾವ ಶೇಡ್ಗಳೂ ಇಲ್ಲ. ಇದು ಮಾಸ್ಗೆ ತೀರಾ ಪೇಲವ ಎನಿಸುತ್ತದೆ. ಅವರು ಎಂಜಾಯ್ ಮಾಡುವುದು, ಅಲ್ಲಿನ ಬೈಯ್ಗುಳಗಳನ್ನಷ್ಟೇ ಅನಿಸುತ್ತದೆ. ಒಂದು ಸಮುದಾಯದಲ್ಲಿ ಎಲ್ಲ ಶೇಡ್ಗಳೂ ಇರುತ್ತವೆ. ಊರಿನ ಅಷ್ಟೂ ಜನ ಬೈಯ್ಗುಳ, ಅನೈತಿಕತೆಯಲ್ಲೇ ಮುಳುಗಿದ್ದಾರಾ? ಹಾಗಾದರೆ ಅದಕ್ಕೊಂದು ಹಿನ್ನೆಲೆ ಬೇಕಲ್ಲ! ಕಲಾತ್ಮಕ ಸಿನಿಮಾಗಳ ಸ್ಟೈಲ್ಶೀಟ್ನಲ್ಲಿ ತಿಥಿಗೆ ಮುನ್ನೆಲೆಯಿದೆ. ಆದರೆ ಅದಕ್ಕೊಂದು ಸಕಾರಣ ಹಿನ್ನೆಲೆಯನ್ನು ಕಟ್ಟಿಕೊಡಬೇಕಿತ್ತು ಎಂದು ನನಗೆ ಅನಿಸಿತು. ಅಷ್ಟಕ್ಕೂ ಕುರಿಗಾಹಿಗಳ ಜತೆ ಕುಳಿತು ಹೇಳಿದ ಕಥೆಯ ಗಂಭೀರತೆಯನ್ನು ಕೊನೆಯಲ್ಲಿ ತೇಲಿಸಿಬಿಟ್ಟಿದ್ದು ಹಾಗೆನಿಸಲು ಕಾರಣವಾಗಿರಬಹುದು. ನ್ಯಾಷನಲ್ ಅವಾರ್ಡ್ಗೆ ಹೋಗುವ ಅಥವಾ ಹೋಗಿ (ಗೆದ್ದು) ಬರುವ ಬಹುತೇಕ ಸಿನಿಮಾಗಳಲ್ಲಿ ಈ ಸ್ಟೈಲ್ಶೀಟ್ ಇರುತ್ತದೆ.
ನಾನು ಇದನ್ನು ‘ಕನ್ನಡ ಸಿನಿಮಾ’ ಎಂಬ ಮೋಹದಿಂದ ಬರೆದಿದ್ದಲ್ಲ ಅಥವಾ ನನ್ನ ಈ ಅಭಿಪ್ರಾಯಕ್ಕೂ ‘ಕನ್ನಡ ಸಿನಿಮಾ’ ಪರವಾದಕ್ಕೂ ಸಂಬಂಧ ಪಟ್ಟಿದ್ದಲ್ಲ. ನನಗೆ ಬಹುಭಾಷೆಯ ಸಿನಿಮಾಗಳು ಲಭ್ಯವಿದ್ದಂತೆ ಕನ್ನಡ ಸಿನಿಮಾ ಕೂಡ ಲಭ್ಯವಿದೆ. ಹಾಗಿದ್ದಾಗ ಕಥೆ ಮತ್ತು ಮೇಕಿಂಗ್ ಅನ್ನು ನಾನು ಎಲ್ಲ ಭಾಷೆಗಳ ಸಿನಿಮಾಗೂ ಹೋಲಿಸಬಹುದು. ಮಲೆಯಾಳಂ, ಇರಾನಿ, ಕೊರಿಯನ್ ಸಿನಿಮಾಗಳನ್ನು ನೋಡುವಾಗ ನನಗೆ ಮೇಕಿಂಗ್ನಲ್ಲೋ ಅಥವಾ ಇನ್ಯಾವುದೋ ವಿಭಾಗದಲ್ಲೋ ರಿಯಾಯಿತಿ ನೀಡುವ ಅಗತ್ಯವಿರುವುದಿಲ್ಲ. ಹಾಗೆಯೇ ಕನ್ನಡವನ್ನೂ ನಾವು ಈ ರಿಯಾಯಿತಿಯ ಎಲ್ಲೆ ಮೀರಿ ನೋಡುವಂತಾಗಬೇಕು.
ಅಂದ ಹಾಗೆ ದರ್ಶನ್ನ ಫೈಟುಗಳು… ಶರಣ್ನ ವಿಚಿತ್ರ ಕಾಮಿಡಿ… ಎಸ್ಟಾಬ್ಲಿಶ್ಡ್ ಹೀರೋಗಳ ಹೊಲಸು ಹಿರೋಯಿಸಮ್ಮು…ಎಲ್ಲಕ್ಕಿಂತ ತಿಥಿ ನೂರು ಪಟ್ಟು ಚೆನ್ನಾಗಿದೆ. ಹೊಸದೊಂದು ಕಾಲೊನಿಗೆ ಹೋಗಿ ಬಂದಂತಾಗುತ್ತದೆ. ಸಿನಿಮಾ ಚೆನ್ನಾಗಿಲ್ಲ ಎಂದು ಯಾರೂ ಹೇಳುವಂತಿಲ್ಲ. ಹಾಗಂತ ಇನ್ನೂ ಈ ಸಿನಿಮಾ ಹೇಗೆ ಚೆನ್ನಾಗಿರಬಹುದಿತ್ತು ಎಂದು ಹೇಳಬಹುದಷ್ಟೇ!