ಕಥೆ

ಶಾಸ್ತ್ರೋಕ್ತ ಭಾಗ ೪

ಶಾಸ್ತ್ರೋಕ್ತ ಭಾಗ ೩

ನಡುಗುತ್ತಿರುವ ಕೈಯ್ಯನ್ನು ಕಷ್ಟ ಪಟ್ಟು ಸಂಭಾಳಿಸಿಕೊಂಡು ಓದ ತೊಡಗಿದೆ…

ನಮಸ್ಕಾರಗಳು…

ನನ್ನ ಹೆಸರು ವಿಶ್ವೇಶ ಜೋಯಿಸ. ಈಶ್ವರ ಜೋಯಿಸರ ಮಗ. ವೃತ್ತಿಯಲ್ಲಿ ಪುರೋಹಿತ ಇಲ್ಲಿಯತನಕ. ಆತ್ಮಹತ್ಯೆಗಿಂತ ಹೇಯ ಕೃತ್ಯ ಇನ್ನೊಂದಿಲ್ಲ ಎಂದು ನಾನು ಕೂಡ ಕೇಳಿದ್ದೆ, ನಂಬಿದ್ದೆ. ಆತ್ಮಹತ್ಯೆಗಯ್ಯುವವರಿಗಿಂತ ಹೇಡಿಗಳು ಬೇರಿಲ್ಲ ಎಂಬುದು ನನ್ನ ನಿಲುವಾಗಿತ್ತು ಕೂಡ. ಪುರೋಹಿತನಾಗಿ, ಜನರ ಮತ್ತು ದೇವರ ನಡುವಿನ ಮಧ್ಯಸ್ತಿಕನಾಗಿ ಕೆಲಸ ಮಾಡುವಂಥ ನನ್ನಂಥವರಿಗಂತೂ ಆತ್ಮಹತ್ಯೆ ಖಂಡಿತ ಸಲ್ಲದು. ಹಾಗೆ ನೋಡಲು ಹೋದರೆ ಈ ಮಧ್ಯಸ್ಥಿಕೆಯ ಕೆಲಸವೇನು ನಾನು ಸ್ವಂತ ಆಯ್ಕೆ ಮಾಡಿದ್ದಲ್ಲ. ನನಗೆ ಸರಿಯಾಗಿ ಬುದ್ಧಿ ಬೆಳೆಯುವ ಮುಂಚೆಯೇ, ನನ್ನ ಹಣೆಬರಹವನ್ನು ಅಪ್ಪನೇ ನಿರ್ಧರಿಸಿದ್ದರು. ನಾನು ಮಾಡಿದ ಸಾಮಾನ್ಯ ವಿದ್ಯಾಭ್ಯಾಸ ಬರೀ ಹತ್ತನೇ ತರಗತಿಯ ತನಕ ಮಾತ್ರ. ಆಮೇಲೆ ಅಪ್ಪ ಸಂಸ್ಕೃತ ಪಾಠಶಾಲೆಗೆ ನನ್ನನ್ನು ದಾಖಲಿಸಿದರು. ಓಡಿಸಿದ್ದನ್ನು ನಿಷ್ಠೆಯಿಂದ ಓದಿ ವಿದ್ವಾಂಸನಾದರೂ ಮನಸ್ಸಿನಲ್ಲಿ ಕೊರಗು ಇದ್ದೇ ಇತ್ತು. ಹತ್ತನೇ ತರಗತಿಯ ತನಕ ನನ್ನದೇ ಸಹಪಾಠಿಗಳಾಗಿದ್ದವರೆಲ್ಲ ಪಟ್ಟಣ ಸೇರಿ ಆಧುನಿಕ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಸಾಗಿಸುತ್ತಿರುವ ಐಶಾರಾಮ ಜೀವನ ನನ್ನ ಕಣ್ಣು ಕುಕ್ಕುತ್ತದೆ. ನಾನು ಅಂತ ಜೀವನಕ್ಕೆ ಅವರೆಲ್ಲರಿಗಿಂತ ಜಾಸ್ತಿ ಅರ್ಹನಾಗಿದ್ದೆ. ಆದರೆ ಈ ಪೌರೋಹಿತ್ಯ ನನ್ನನ್ನ ಕೂಪ ಮಂಡೂಕನನ್ನಾಗಿ ಮಾಡಿತು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಇದಕ್ಕೆ ಕಾರಣ ಅಪ್ಪನೇ? ಸ್ವಲ್ಪ ಮಟ್ಟಿಗೆ ಹೌದಾದರೂ ಪೂರ್ತಿ ಆಪಾದನೆ ಅವರ ಮೇಲೆ ಹೊರಿಸಿದರೆ ಅದೂ ಕೂಡ ತಪ್ಪಾದೀತು. ಅಪ್ಪನ ಪ್ರಪಂಚ ಬೆಳ್ಯಾಡಿಯ ಸುತ್ತ ಮುತ್ತಕ್ಕೆ ಸೀಮಿತವಾಗಿತ್ತು. ಅವರ ಜ್ಞಾನ ಪೌರೋಹಿತ್ಯದ ಸಂಸ್ಕೃತ ಮಂತ್ರಗಳಿಗೆ ಸೀಮಿತವಾಗಿತ್ತು. ಅವರ ಕಾಲಕ್ಕೆ ಪುರೋಹಿತರು ಸಮಾಜದಲ್ಲಿ ಮೇಲಿನ ಸ್ತರದಲ್ಲಿದ್ದರು. ಸಾಮಾನ್ಯ ಜನರ ಆದರ, ಗೌರವ, ನಿಷ್ಠೆಗಳಿಗೆ ಪಾತ್ರರಾಗಿದ್ದರು. ಇಂದು ಕಾಲ ಬದಲಾಗಿದೆ. ಮಂತ್ರ, ಪೂಜೆ, ರೀತಿ ರಿವಾಜು ಗೊತ್ತಿಲ್ಲದ, ಯಾವುದೋ, ಮಾಡಿದ ಪಾಪ ನಿವಾರಣೆಗೋ ಅಥವಾ ಇನ್ನಷ್ಟು ಸಮೃದ್ಧಿಯ ಅಭಿಲಾಷೆಯಿಂದಲೋ ನಡೆಸಬೇಕಾದ ಆಚರಣೆಗೆ ಅವಶ್ಯಕವಾದ ಅನಿವಾರ್ಯ ಮಧ್ಯವರ್ತಿಗಳಾಗಿ ಮಾತ್ರ ನಾವು ಉಳಿದಿದ್ದೇವೆ. ಇಷ್ಟರ ಮೇಲೆ ನಮ್ಮ ಸಂಭಾವನೆಯ ಮೇಲೆ ಕೂಡ ಕೆಂಗಣ್ಣು ಜನರಿಗೆ. ಇಂದು ಕೂಡ ನೆನಪಿದೆ, ಚಿಕ್ಕಂದಿನಲ್ಲಿ ಅಪ್ಪನ ಜೊತೆಗೆ ದುರ್ಗಾ ಪೂಜೆಗೆಂದು ಹೋದ ರಾತ್ರಿ. ಯಾಕೋ ಅಪ್ಪ ಅವತ್ತು ಬಿಡಿಸಿದ್ದ ದುರ್ಗೆಯ ಚಿತ್ರ ಅಷ್ಟೊಂದು ಸುಂದರವಾಗಿ ಮೂಡಿ ಬಂದಿರಲಿಲ್ಲ. ಮನೆಯ ಯಜಮಾನನ ಮುಖದಲ್ಲಿ ಒಂದು ಬಗೆಯ ಅಸಮಾಧಾನ ತೋರುತ್ತಿತ್ತು. ಪೂಜೆಯ ಕೊನೆಯಲ್ಲಿ ಆ ಯಜಮಾನನ ತಾಯಿ ತನ್ನ ಸಂಬಂಧಿಕರಲ್ಲಿ ಅಪ್ಪನ ಮಂತ್ರೋಚ್ಚಾರದ ಬಗ್ಗೆ, ಅಷ್ಟಲ್ಲದೇ ಶಾಸ್ತ್ರದ ಬಗ್ಗೆ ಅಪ್ಪನಿಗಿರುವ ಜ್ಞಾನದ ಬಗ್ಗೆ ಗುಮಾನಿಯ ಗುಸು ಗುಸು ಮಾತನಾಡುತ್ತಿದ್ದದ್ದು ನನಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಅಂದಿನ ದಿನವೇ ಈ ಜನರ ಮೇಲೆ ಅಸಹ್ಯ ಹಾಗೂ ಇವರಿಗೆ ಸಾಧಿಸಿ ತೋರಿಸಬೇಕೆಂಬ ಛಲ ಮೂಡಿದ್ದು. ಇಂದು ನನ್ನ ಪೌರೋಹಿತ್ಯದ ಬಗ್ಗೆ, ಆಚರಣೆ, ಶಾಸ್ತ್ರಗಳ ಬಗ್ಗೆ, ನನ್ನ ಪಾಂಡಿತ್ಯದ ಬಗ್ಗೆ ಬೊಟ್ಟು ಮಾಡಿ ಠೀಕೆ ಮಾಡುವ ತಾಕತ್ತು ಇಡೀ ಬೆಳ್ಯಾಡಿಯ ಯಾವ ಬ್ರಾಹ್ಮಣನಿಗೂ ಇಲ್ಲ. ಸುತ್ತಮುತ್ತಲಿನ ಎಲ್ಲರೂ ನನ್ನನ್ನು ಕೊಂಡಾಡುವವರೇ. ಇವರೆಲ್ಲರ ಮನೆಗಳಲ್ಲಿ ಮದುವೆಯ ಪೌರೋಹಿತ್ಯ ನಾನೇ ವಹಿಸಬೇಕು ಆದರೆ ವಿಪರ್ಯಾಸವೆಂದರೆ ಯಾವಾಗ ಅಪ್ಪ ನನ್ನ ಮದುವೆ ಮಾಡುವ ಯೋಚನೆಯಿಂದ ಇದೇ ಎಲ್ಲ ಹೊಗಳುಭಟ್ಟರ ಮನೆ ಬಾಗಿಲು ತಟ್ಟಿದರೋ ಅಂದು ಪ್ರತಿಯೊಬ್ಬರ ಬಾಯಲ್ಲೂ ಹೊಸ ಹೊಸ ಕಾರಣಗಳು ರಾರಾಜಿಸಿದವು. ಆದರೆ ಇವರದೆಲ್ಲ ಕಾರಣಗಳ ಪರದೆಯನ್ನು ಸರಿಸಿ ಒಳ ನೋಡಿದರೆ ಸ್ಪಷ್ಟವಾಗಿ ತೋರುತ್ತಿದ್ದ ಕಹಿ, ಕರಿ ಸತ್ಯ ಒಂದೇ. ನನ್ನ ಅನಿರ್ದಿಷ್ಟ ಸಂಭಾವನೆಯ ನೌಕರಿ ಮತ್ತು ಮುಂದೊಂದು ದಿನ ಖಾಯಿಲೆ ಬೀಳಬಹುದಾಗಿದ್ದ ನನ್ನ ಅಪ್ಪ. ವಯಸ್ಸಿನ ಜೊತೆ ಕ್ಷೀಣಿಸಿ ಹೋಗುತ್ತಿರುವ ಅಪ್ಪನ ಜ್ಞಾಪಕ ಶಕ್ತಿಯ ಕಾರಣವನ್ನೇ ಮುಂದಿಟ್ಟುಕೊಂಡು  ಊರ ಜನರೆಲ್ಲಾ ಅಪ್ಪನ ಮಾನಸಿಕ ಸ್ವಾಸ್ಥ್ಯವನ್ನು ಆಗಲೇ ಸಂಶಯದ ದೃಷ್ಟಿಯಿಂದ ನೋಡಿ ಹಿಂದಿನಿಂದ ಗೇಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬರದೇ ಹೋಗಲಿಲ್ಲ. ಇವರೆಲ್ಲರಿಗೆ ತಕ್ಕ ಶಾಸ್ತಿ ಮಾಡಿಸಲೆಂದೇ ನಾನು ಆ ನಿರ್ಣಯ ತೆಗೆದುಕೊಂಡದ್ದು. ಅದೇ ನಿರ್ಣಯ ನನಗೆ ಮುಖವಾಡ ಧರಿಸಿದ ಈ ಸಮಾಜದ ಹಿಂದಿನ ನಿಜ ರೂಪವನ್ನು ಪರಿಚಯ ಮಾಡಿಸಿ ನನ್ನನ್ನು, ನನ್ನ ಈ ಜೀವನದ ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸಿದೆ.

ಅದೇನೋ ಸಮಾರಂಭದ ಪುರೋಹಿತಿಕೆಗೆಂದು ಘಟ್ಟದಾಚೆಯ ಆ ಊರಿಗೆ ಹೋಗಿದ್ದೆ. ಪೂಜೆಯ ನಂತರ ಒಬ್ಬ ಮಧ್ಯವಯಸ್ಕ ನನ್ನ ಬಳಿ ಬಂದು ಮಾತಿಗೆ ಶುರು ಹಚ್ಚಿಕೊಂಡ. ಆತನಿಗೆ ನನ್ನ ಪೂರ್ವಾಪರಗಳೆಲ್ಲ ತಿಳಿದಿದ್ದವು. ನನ್ನ ಮದುವೆಯ ಸಲುವಾಗಿ ಇನ್ನು ಬ್ರಾಹ್ಮಣ ಹುಡುಗಿಯನ್ನು ಕಾಯುವುದರಲ್ಲಿ ಅರ್ಥವಿಲ್ಲವೆಂದು ಹೇಗೋ ಆತ ನನ್ನನ್ನು ನಂಬಿಸುವುದರಲ್ಲಿ ಸಫಲನಾಗಿದ್ದ. ಅಲ್ಲೇ ಹತ್ತಿರದ ಆತನ ಊರಿನ ಪಕ್ಕದಲ್ಲೇ ಆತನ ಪರಿಚಯಸ್ಥರ ಅತೀ ಬಡ ಕುಟುಂಬದ, ಮದುವೆಯ ವಯಸ್ಸಿನ ಹುಡುಗಿಯೊಬ್ಬಳು ತಯಾರಿರುವುದಾಗಿಯೂ, ತಾನು ಆಕೆಯನ್ನು ಸರಳವಾಗಿ ವರಿಸಿ ಆಕೆಯ ಬಡ ಕುಟುಂಬದ ಮೇಲೆ ಕೃಪೆ ತೋರಿ ಪುಣ್ಯ ಸಂಪಾದಿಸಿಕೊಳ್ಳಬೇಕೆಂದು ಪರಿ ಪರಿಯಾಗಿ ವಿನಂತಿಸಿದ. ಅಂದು ರಾತ್ರಿ ನಾನೊಬ್ಬನೇ ಯೋಚಿಸಿದೆ. ಆಕೆಯನ್ನು ತಾನು ಯಾಕೆ ಮದುವೆಯಾಗಬಾರದು? ಆ ವ್ಯಕ್ತಿ ಹೇಳಿದಂತೆ ಹೇಗಿದ್ದರೂ ಆಕೆ ಸಸ್ಯಾಹಾರಿ. ಮದುವೆ ಆದ ಮೇಲೆ ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಆಕೆಯನ್ನು ಬದಲಾಯಿಸುವುದು ಕಷ್ಟವೇನಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನನ್ನನ್ನು ಪರೋಕ್ಷವಾಗಿ ಅವಮಾನಿಸಿದ ಊರ ಜನರಿಗೆ ನಾನು ಪ್ರತ್ಯಕ್ಷವಾಗಿ ಸಡ್ಡು ಹೊಡೆದಂತಾಗುತ್ತದೆ ಈ ನಿರ್ಣಯದಿಂದ. ನಾನು ಕೂಡ ನೋಡುತ್ತೇನೆ. ಹೊರ ಜಾತಿಯ ಹುಡುಗಿಯನ್ನು ಮದುವೆ ಆಗಿ ನಾನು ಬ್ರಾಹ್ಮಣತ್ವ ಕಳೆದುಕೊಂಡೆನೆಂದು ಊರ ಜನ ನಿರ್ಧರಿಸುವರೋ? ಹಾಗಾದಲ್ಲಿ ಅವರ ಮನೆಯ ಕಾರ್ಯಗಳಿಗೆ ಪುರೋಹಿತಿಕೆ ಮಾಡುವವರಾರು? ಅವರು ಆಕೆಯನ್ನು ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ ಎಂದೆಲ್ಲ ಲೆಕ್ಕಾಚಾರ ಹಾಕಿಯೇ ಮರುದಿನವೇ ಹಿಂದಿನ ದಿನ ಸಿಕ್ಕಿದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಿ ತನಗೆ ಮದುವೆ ಒಪ್ಪಿಗೆಯೆಂದೂ ಆದರೆ ಮದುವೆ ಮರುದಿನವೇ ನಡೆಯಬೇಕೆಂದು ಒತ್ತಾಯಿಸಿದೆ. ನಾನು ಆಕೆಯನ್ನು ನೋಡಿದ್ದು ಮದುವೆಯ ದಿನವೇ. ಆಕೆಯ ಕಡೆಯಿಂದ ಆಕೆಯ ಅಪ್ಪ ಅಮ್ಮ ಬಿಟ್ಟರೆ ಆ ವ್ಯಕ್ತಿ ಮಾತ್ರ ಹಾಜರಿದ್ದದ್ದು. ನನ್ನ ಕಡೆಯಿಂದ ನಾನೊಬ್ಬನೇ. ಅಪ್ಪನಿಗೆ ತಿಳಿಸುವ ಗೋಜಿಗೆ ನಾನು ಹೋಗಲಿಲ್ಲ. ಹುಡುಗಿಯ ಮನೆ ಕೂಡ ತಾನು ನೋಡಿರಲಿಲ್ಲ. ಅದರ ಅವಶ್ಯಕತೆ ಕೂಡ ತನಗಿರಲಿಲ್ಲ ಯಾಕೆಂದರೆ ಅಲ್ಲಿಗೆ ನಾನೆಂದು ಹೋಗುವುದಿಲ್ಲವೆಂದು ಮೊದಲೇ ನಿಶ್ಚಯಿಸಿದ್ದೆ. ಆಕೆ ನೋಡಲು ರೂಪವತಿಯಲ್ಲದಿದ್ದರೂ ಸಾಧಾರಣವಾಗಿ ಲಕ್ಷಣವಾಗಿದ್ದಳು. ಹೀಗೆ ಅದೇ ಊರಿನ ಒಂದು ದೇವಸ್ಥಾನದಲ್ಲಿ ನಮ್ಮ ಮದುವೆ ನಡೆದು ಹೋಯಿತು. ಅದೇ ದಿನ ರಾತ್ರಿ ಜೊತೆಗೆ ಹೆಚ್ಚೇನೂ ಸಾಮಾನುಗಳನ್ನು ತರದೇ ಆಕೆಯ ಆ ಊರಿಗೆ ವಿದಾಯ ಹೇಳಿ ಬೆಳ್ಯಾಡಿಯ ಕಡೆಗೆ ಪ್ರಯಾಣಿಸಿದೆವು. ಊರಿಗೆ ತಲುಪಿದ ಸಂಜೆಯ ಒಳಗೆ ಸುದ್ದಿ ಊರೆಲ್ಲ ಹಬ್ಬಿತ್ತು. ಯಾರಿಗೂ ಮುಖ ಕೊಟ್ಟು ಕೇಳುವ ಧೈರ್ಯವಿಲ್ಲ. ಒಂದಿಬ್ಬರು ವಿಚಾರಿಸಿದಾಗ ಸೂಕ್ತ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದೆ. ಒಂದೆರಡು ದಿನಗಳಲ್ಲಿ ಮೇಲ್ನೋಟಕ್ಕೆ ಎಲ್ಲ ಮಾಮೂಲಿಯಂತಾಯಿತು. ಬೆಳ್ಯಾಡಿಯ ಜನರ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಅರಿತಿದ್ದ ನನಗೆ ಮಾತ್ರ ತಿಳಿದಿತ್ತು  ಜನರ ಕುತೂಹಲದ ಕೆಂಡದ ಮೇಲೆ ಬರಿ ಬೂದಿ ಮೆತ್ತಿದೆ ಅಷ್ಟೇ, ಅದು ಸಂಪೂರ್ಣವಾಗಿ ಆರಿ ಹೋಗಿಲ್ಲ ಎಂದು.

ಇನ್ನು ಹೆಂಡತಿಯಾಗಿ ಬಂದವಳು ಮೊದ ಮೊದಲು ಮಾತನಾಡಲು ಕೂಡ ಅಳುಕುತ್ತಿದ್ದಳು. ಹೊಸ ಊರಿನ, ಹೊಸ ಸಂಪ್ರದಾಯದ ಭಯವಿರಬಹುದೆಂದು ನಾನು ಹೆಚ್ಚೇನು ತಲೆ ಕೆಡಿಸಕೊಳ್ಳಲಿಲ್ಲ. ಆದರೆ ಬರು ಬರುತ್ತಾ ತಿಳಿಯಿತು ಆಕೆ ತನ್ನನ್ನು ಗಂಡನ ಸ್ಥಾನದಲ್ಲಿ ಇರಿಸಿಯೇ ಇಲ್ಲವೆಂದು. ಸರಸದ ಮಾತಾಡಲು ಹೋದರೆ ವಿಚಿತ್ರವಾಗಿ ನನ್ನ ಮುಖ ನೋಡಿ ಅಸಹ್ಯದಿಂದ ಎದ್ದು ಹೋಗುವಳು. ಅಪ್ಪನ ಬಗ್ಗೆ ಎಳ್ಳಷ್ಟು ಗೌರವ ತೋರಿಸಲೊಲ್ಲಳು. ಮದುವೆಯ ಹೊಸತರಲ್ಲಿಯೇ ಜಗಳ ಬೇಡವೆಂದು ನಾನು ಕೂಡ ಸುಮ್ಮನಾಗಿ ದೈನಂದಿನ ಚಟುವಟಿಕೆಗಳಲ್ಲಿ ನನ್ನನ್ನು ತೊಡಿಸಿಕೊಂಡೆ.

ನಿನ್ನೆ ಮಧ್ಯಾಹ್ನ ಹೀಗೆಯೆ ಕಾರ್ಯನಿಮಿತ್ತ ಹೊರ ಹೋದವನು ಮನೆಗೆ ಮರುಳಲು ತೋರಿದ್ದು ಹಾಗೆ ತೆರೆದಿದ್ದ ಬಾಗಿಲು. ಗಾಬರಿಯಿಂದ ಒಳಗೆ ಹೋಗಿ ನೋಡಲು ಆಘಾತವೇ ಕಾದಿತ್ತು. ದೇವರ ಕೋಣೆಯ ಪಕ್ಕದಲ್ಲೇ ಇದ್ದ ತಿಜೋರಿಯ ಬಾಗಿಲು ಕೂಡ ತೆರೆದಿದೆ. ಈ ಮುಂಚೆ ಆ ತಿಜೋರಿಯಲ್ಲಿ ಅಮ್ಮನ ಹಳೆಯ ಬೆಲೆಬಾಳುವ ಆಭರಣ ಬಿಟ್ಟರೆ ಬೇರೇನು ಇದ್ದಿರಲಿಲ್ಲ. ಕಳ್ಳರು ಮನೆಗೆ ನುಗ್ಗಿದ್ದು ಖಚಿತವಾಗುತ್ತಲೇ ಹೆಂಡತಿಯೆಂದು ಮನೆಗೆ ತಂದವಳಿಗಾಗಿ ಹುಡುಕಾಡಿದೆ. ಆಕೆಯ ಪತ್ತೆ ಕೂಡ ಇಲ್ಲ. ಎಲ್ಲಿ ಆಕೆಯ ಪ್ರಾಣಕ್ಕೆ ಕೂಡ ಸಂಚಕಾರ ಬಂದಿರಬಹುದೇನೋ ಎಂದು ಯೋಚಿಸುತ್ತ ಕುಳಿತಾಗಲೇ ಆಕೆ ಜೊತೆಗೆ ತಂದ ಒಂದು ಚೀಲವನ್ನು ಇಡುತ್ತಿದ್ದ ಮೂಲೆಯ ಕಡೆಗೆ ಗಮನ ಹೋದದ್ದು. ಆ ಮೂಲೆಯಲ್ಲಿ ಇಂದು ಆ ಚೀಲವಿಲ್ಲ. ಅನುಮಾನ ಬಂದಂತಾಗಿ ಮನೆಯೆಲ್ಲಾ ತಡಕಾಡಲು, ಆಕೆಯು ಈ ಮನೆಯಲ್ಲೇ ತಂಗಿದ್ದಳು ಎಂದು ಹೇಳುವ ಒಂದೇ ಒಂದು ಕುರುಹು ಕೂಡ ಉಳಿದಿಲ್ಲ ಎಂದು ತಿಳಿದದ್ದು. ವಿಷಯ ಸ್ಪಷ್ಟವಾಗಿತ್ತು. ಕಳ್ಳ ಮನೆಯ ಹೊರಗಿಂದ ಒಳ ಬಂದಿಲ್ಲ, ಒಳಗಿಂದವೇ ಹೊರ ನಡೆದಿರುವುದು ಎಂದು. ಆಕೆ ಬಗೆದ ಅನಿರೀಕ್ಷಿತ ದ್ರೋಹದಿಂದಾಗಿ ಮಂಕಾಗಿ ಮೂಲೆಯಲ್ಲಿ ಕುಳಿತ ನನಗೆ ಎಚ್ಚರಾಗಿದ್ದು ಬೆಳಗ್ಗೆದ್ದು ದೇವಸ್ಥಾನದ ಕಡೆಗೆ ಹೋಗಿದ್ದ ಅಪ್ಪ ಬಂದು ಏನಾಯ್ತು ವಿಶ್ವೇಶ ಎಂದು ಕೇಳಿದಾಗಲೇ. ಏನನ್ನು ಉತ್ತರಿಸದೇ ಸುಮ್ಮನೆ ಕೋಣೆಗೆ ಹೋಗಿ ಮಲಗಿದೆ. ಮನಸ್ಸಲ್ಲಿ ಬಗೆ ಬಗೆಯ ವಿಚಾರದ ಅಲೆಗಳು ಏಳತೊಡಗಿದವು. ಇಷ್ಟು ದಿನ ಈ ಊರಿನ ಜನರ ಮನಸ್ಥಿತಿಯನ್ನು ಧಿಕ್ಕರಿಸಿ ಅವರ ಅಸಹಾಯಕತೆಯನ್ನು ನೋಡಿ ಮನದಲ್ಲೇ ಅಟ್ಟಹಾಸಗೈಯ್ಯುತ್ತಿದ್ದ ತಾನು ಅದೇ ಅಟ್ಟಹಾಸಕ್ಕೆ ಕಾರಣವಾದ ವ್ಯಕ್ತಿಯಿಂದಲೇ ಹೀನಾಯವಾಗಿ ಮೋಸ ಅನುಭವಿಸಿದ ವಿಚಾರ ತಿಳಿದು ಸುಮ್ಮನಿರುವರೇ? ಸಾಧ್ಯವಿಲ್ಲ. ಈ ಕೇವಲ ಜನರ ಗೇಲಿಗೆ ನಾನು ಬಲಿಯಾಗಲಾರೆ. ಅಷ್ಟಕ್ಕೂ ನನಗೂ ಕೂಡ ಈ ಜೀವನ ರೋಸಿ ಹೋಗಿದೆ. ಏನಿದೆ ಇಲ್ಲಿ? ಮನಸ್ಸಿನಲ್ಲಿ ವಿಷವಿಟ್ಟುಕೊಂಡು ಇತರರ ಮನೆಯ ದೋಸೆಯ ತೂತು ಹುಡುಕುವ ಮಂದಿಯ ಮಧ್ಯೆ ತನಗೆ ಜೀವಿಸಲು ಸಾಧ್ಯವಿಲ್ಲ. ಇದು ಧೈರ್ಯದ ಮಾತಲ್ಲ, ಅವಶ್ಯಕತೆಯ ಮಾತು. ನನಗೆ ಈ ಜೀವನದ ಅವಶ್ಯಕತೆ ತೋರುತ್ತಿಲ್ಲ.

ರಾತ್ರಿಯ ಹೊತ್ತು ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು. ಕೂಡಲೇ ಎದ್ದು ನಾನೇ ಅಡುಗೆ ಮನೆಗೆ ಹೋಗಿ ರಾತ್ರಿ ಊಟಕ್ಕೆ ಅಡುಗೆ ತಯಾರಿಸಿ ಅಪ್ಪನಿಗೆ ಬಡಿಸಿದೆ. ಅಪ್ಪ ಕೇಳಿದರು, ಆಕೆ ಎಲ್ಲಿ ಎಂದು. ಹಾಗೇ ಅವರ ಮುಖ ನೋಡಿ ಸುಮ್ಮನಾದೆ. ನನ್ನ ಮೌನ ಅವರಿಗೆ ಅಭ್ಯಾಸವಾಗಿದೆ. ಹೆಚ್ಚೇನು ಮಾತನಾಡದೇ ಊಟ ಮಾಡಿ ಅಪ್ಪ ಮಲಗಿದರು. ಆ ರಾತ್ರಿ ತುಂಬಾ ದಿನದಿಂದ ಮಾಯವಾಗಿದ್ದ ಸುಖನಿದ್ರೆ ಹತ್ತಿತು. ಬೆಳಗ್ಗೆ ಬೇಗನೇ ಎದ್ದು ಎಲ್ಲ ತಯಾರಿ ಮಾಡಿದೆ. ಅಪ್ಪ ಏಳುತ್ತಿದ್ದಂತೆ ತಿಂಡಿಯ ಜೊತೆ ಕಾಫಿಯ ಬದಲು ನಾನೇ ತಯಾರಿಸಿದ ಕಹಿ ಅಮೃತವನ್ನು ಕೊಟ್ಟೆ. ಒಂದು ಗುಟುಕು ಕುಡಿದು ಮುಖ ಹೀಕರಿಸಿ ಇದೇನು ಎಂದರು ಅಪ್ಪ. ಇಂದು ಕರ್ಕಾಟಕ ಅಮಾವಾಸ್ಯೆ. ಹಾಳೆ ಕೆತ್ತೆ ಕಷಾಯ ಇದು, ಕುಡಿದು ಖಾಲಿ ಮಾಡಿ ಎಂದೆ. ಹೌದೇ ಎಂದು ಏನೋ ಲೆಕ್ಕಾಚಾರ ಮಾಡಿ ಸುಸ್ತಾಗಿ ಅಪ್ಪ ಕೊಟ್ಟದ್ದನ್ನು ಕುಡಿದು ಖಾಲಿ ಮಾಡಿದರು. ಪಂಚಾಗ ತೆರೆದು ದಿನ, ವಾರ, ತಿಥಿ, ನಕ್ಷತ್ರ ನೋಡುವಂಥ ಸಾಮರ್ಥ್ಯ ಅಪ್ಪ ಯಾವತ್ತೋ ಕಳೆದುಕೊಂಡಿದ್ದಾರೆ ಎಂದು ನನಗೆ ಚೆನ್ನಾಗಿಯೇ ತಿಳಿದಿತ್ತು. ಈಗ ಅವರು ಬರೀ ಬದುಕುತ್ತಿರುವ ಒಂದು ಜೀವ ಅಷ್ಟೇ. ಗುರಿಯಿಲ್ಲದ ಜೀವ. ನನ್ನ ಗುರಿಯೊಂದಿಗೆ ಇಂದು ಅವರನ್ನು ನಾನು ಮುನ್ನಡೆಸುತ್ತೇನೆ. ಮಧ್ಯಾಹ್ನದವರೆಗೂ ಅಪ್ಪನನ್ನೇ ಗಮನಿಸುತ್ತಿದ್ದೆ. ಮಧ್ಯದಲ್ಲಿ ಒಂದು ಬಾರಿ ಎದ್ದು ವಿಶ್ವೇಶ ಯಾಕೋ ಕಹಿ ತೇಗು ಬರುತ್ತಿದೆ, ಯಾವತ್ತೂ ಹೀಗೆ ಆಗಿರಲಿಲ್ಲ ಎಂದು ಹೇಳಿ ಮತ್ತೆ ಮಲಗಿದರು. ಮತ್ತೆ ಪುನಃ ಏಳಲಿಲ್ಲ. ಮನೆಯ ಹಿಂದಿನ ಮಾವಿನ ಮರದಡಿ ಅಪ್ಪನನ್ನು ಮಲಗಿಸಿ ಮಣ್ಣಿನ ಹೊದಿಕೆ ಹೊದಿಸಿ ಬಂದಿದ್ದೇನೆ ಈಗಷ್ಟೆ. ಮಗನಾದವನು ಅಪ್ಪನ ಸಂಸ್ಕಾರ ಕೂಡ ಶಾಸ್ತ್ರೋಕ್ತವಾಗಿ ಮಾಡಲಿಲ್ಲವೆಂಬ ಕೊರಗು ನನ್ನೊಂದಿಗೆ ಸ್ವಲ್ಪ ಸಮಯದಲ್ಲಿ ಅಂತ್ಯಗೊಳ್ಳಲಿದೆ. ಇನ್ನು ಆಕೆಯ ಹೆಸರನ್ನು ಬೇಕೆಂದೇ ಹೆಸರಿಸಿಲ್ಲ. ಆಕೆಯನ್ನು ಹುಡುಕಿ ಪ್ರಯೋಜನವಿಲ್ಲ. ಆಕೆ ನಿಶ್ಚಯಿಸಿದ ಗುರಿ ತಲುಪಿದ್ದಾಳೆ. ಅಲ್ಲಿಗೆ ಆಕೆ ಸಾಧಕಿ. ಈ ಕಾಗದ ಬರೆದ ಏಕೈಕ ಉದ್ದೇಶ ಜನರಿಗೆ ತಿಳಿಪಡಿಸುವುದು ನಾನು ಹೇಡಿ ಅಲ್ಲ ಎಂದು. ಜೀವಿಸುವ ಆಸೆ ನನ್ನಲ್ಲಿ ಸತ್ತು ಹೋಗಿದೆ. ಸತ್ತು ಹೋದದ್ದನ್ನು ಒಳಗಿಟ್ಟುಕೊಂಡು ಕೊಳೆಯಿಸುವುದಕ್ಕಿಂತ ಮಣ್ಣು ಮಾಡುವುದು ಲೇಸು. ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ.

ಇಂತಿ ನಿಮ್ಮವನಲ್ಲದ,

ವಿಶ್ವೇಶ ಜೋಯಿಸ.

-Thilakraj somayaji

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!