ಕಥೆ

ಶಾಸ್ತ್ರೋಕ್ತ : ಭಾಗ ೩

ಶಾಸ್ತ್ರೋಕ್ತ ಭಾಗ-೨

ಬೆಳಗಾದದ್ದು ತಿಳಿಯದಷ್ಟು ಮೋಡಭರಿತವಾದ ಬೆಳಗು. ರಾತ್ರಿಯಿಂದೆಂಬಂತೆ ಬಿಡದೆ ಸುರಿಯುತ್ತಿರುವ ಮಳೆಯ ಸದ್ದಿನ ಲಾಲಿ. ಕೇಳುವವರಿಲ್ಲದಿದ್ದರೆ ಇಡೀ ದಿನ ಹೊದಿಕೆಯಡಿ ಅಡಗಿ ಬಿಡಬಹುದು. ಆದರೆ ನಮ್ಮೂರಿನ ಮಳೆಗಾಲದ ಮುಂಜಾವಿನ ಸೌಂದರ್ಯ ಸವಿಯದಿದ್ದರೆ ರಜೆ ಹಾಕಿ ಇಲ್ಲಿಗೆ ಬಂದದ್ದೆ ವ್ಯರ್ಥ. ಹಾಗೆಂದುಕೊಂಡೇ ಹಾಸಿಗೆಯಿಂದೆದ್ದು, ಹಲ್ಲುಜ್ಜಿ, ಅಮ್ಮ ಮಾಡಿದ ಫಿಲ್ಟರ್ ಕಾಫಿ ಕುಡಿದು, ಕೊಡೆಯನ್ನು ಹಿಡಿದು ಮನೆಯ ಅಂಗಳಕ್ಕೆ ಬಂದಾಗ ಆಗಲೇ ಎಲ್ಲೋ ಹೊರಗೆ ಹೋಗಿದ್ದ ಅಪ್ಪನ ಸವಾರಿ ಗೇಟಿನ ಬಳಿ ಬರುತ್ತಿರುವುದು ತೋರಿತು. ಹಾಗೆ ರಾತ್ರಿ ಅಲ್ಲೇ ಬದಿಯಲ್ಲಿ ನಿಲ್ಲಿಸಿದ್ದ ಬೈಕಿಗೆ ಮೆತ್ತಿದ್ದ ಕೆಸರಿನ ಕಡೆ ಗಮನ ಹೋಯಿತು. ಕೂಡಲೇ ರಾತ್ರಿ ಬೈಕಿನ ಬಾಕ್ಸಿನೊಳಗೆ ತುರುಕಿದ್ದ ಜೋಯಿಸರ ಮನೆಯ ಬಳಿ ಹಾರಿ ಬಂದ ಪತ್ರದ ನೆನಪಾಗಿ, ಬಾಕ್ಸಿನ ಮುಚ್ಚಳ ತೆರೆದು ಸ್ವಲ್ಪ ನೀರಿನ ಪಸೆಯಿಂದಾಗಿ ಒದ್ದೆಯಾದಂತಿದ್ದ ಪತ್ರವನ್ನು ಬಿಡಿಸಿದೆ. ಪತ್ರ ನೆನೆದಂತಿದ್ದರೂ ಅಕ್ಷರಗಳು ಸ್ಪಷ್ಟವಾಗಿದ್ದದ್ದು ಸಮಾಧಾನ ತಂದಿತು.

ಹಾಗೆ ಜಾಗರೂಕತೆಯಿಂದ ಬಿಡಿಸಿ ಪತ್ರವನ್ನು ಓದಲು ಶುರುವಿಟ್ಟುಕೊಂಡೆ.

“ನಮಸ್ಕಾರಗಳು… ನನ್ನ ಹೆಸರು”

“ಏ ರಾತ್ರಿ ಬೈಕ್ ಹಿಡ್ಕಂಡು ಕಂಬಳಕ್ಕೆ ಹೋಯಿದ್ಯನ? ಎಂತ ಇದು ಈ ಥರ ಕೆಸರು ಮಾರಾಯ ಇದ್ರಲ್ಲಿ?” ಪತ್ರ ಓದಲು ಶುರು ಮಾಡುತ್ತ ಇದ್ದ ಹಾಗೆ ಗೇಟಿನ ಒಳಗೆ ಬಂದ ಅಪ್ಪ, ಅವರ ಬೈಕಿನ ಅವಸ್ಥೆಯನ್ನು ನೋಡಿ  ಆಕ್ರೋಶದಿಂದ ಕೇಳಿದರು.

“ಇಲ್ಲ ಅಪ್ಪ, ನಿನ್ನೆ ರಾತ್ರಿ ಬಪ್ಪುವಾಗ ಜೋರು ಮಳೆ ಬಂದು ಹೋಯಿತ್ತಲ್ಲ, ರಸ್ತೆ ತುಂಬಾ ಕೆಸರು. ಅದು ಕೂಡ ಆ ಕೆಳಮನೆ ಕಡೆ ಹೋಪು ದಾರಿಯಂತೂ ಒಳ್ಳೆ ತೋಡಿನ ಥರ ಆಯಿ ಹೋಯಿತ್ತು”.

“ಎಂತ? ಕೆಳಮನೆ ದಾರಿಯ? ರಾತ್ರಿ ಹೊತ್ತಿಗೆ ಅಲ್ಲಿಗೆ ಹೋಯಿದ್ಯ ನೀನು?” ಅಪ್ಪನ ಮುಖದಲ್ಲಿ ಭಯಭೀತ ಆತಂಕ ವ್ಯಕ್ತವಾಯಿತು.

“ಯಾಕಪ್ಪಾ ಕೆಳಮನೆ ಹತ್ರ ಹೋದ್ರೆ ಏನಾಯ್ತು?” ಆಶ್ಚರ್ಯದಿಂದ ಕೇಳಿದೆ.

ಅಪ್ಪ ಮುಂದುವರೆಸಿದರು. “ಅದೊಂದು ಕಥೆ ಮರೆ. ಅದು ಕೂಡ ನಮ್ಮೂರು ಬೆಳ್ಯಾಡಿಯಲ್ಲಿ ಕೇಣ್ಕ ನೀನು, ಇಂಥದ್ದೆಲ್ಲ ದೊಡ್ಡ ವಿಷಯ ಆಯಿ ಬಿಡುತ್ತು.”

“ಅಲ್ಲ ಅಪ್ಪ, ಎಂಥ ವಿಷಯ ಮಾರಾಯ್ರೆ. ಕುತೂಹಲ ಸೃಷ್ಟಿಸಿದ್ದು ಸಾಕು. ಬೇಗ ಬೇಗ ವಿಷಯಕ್ಕೆ ಬನ್ನಿ.” ಸಂಯಮ ಕಳೆದುಕೊಂಡಂತೆ ನಾನು ಉತ್ತರಿಸಿದೆ.

“ಕೆಳಮನೆ ಈಶ್ವರ ಜೋಯಿಸರು ನಿಂಗೆ ನೆನಪಿತ್ತೋ ಇಲ್ವೋ. ನೀನು ತುಂಬಾ ಸಣ್ಣವ ಇದ್ದಾಗ ನಮ್ಮನೆಗೆ ನಿನ್ ಅಜ್ಜನ ತಿಥಿಗೆ, ಅಥವಾ ಎಂಥಾದ್ರು ಪೂಜೆ, ಹೋಮ ಹವನ ಇದ್ರೆ ಅವರನ್ನೇ ಕರಿತಾ ಇತ್ತು ನಾವು. ಆದ್ರೆ ಅವರದ್ದು ಮಂತ್ರ ಉಚ್ಛಾರ ಅಷ್ಟು ಸ್ಪಷ್ಟ ಇಲ್ಲೆ ಕಾಣು, ಅದ್ಕೆ ನಂಗೆ ಅಷ್ಟೊಂದು ಇಷ್ಟ ಆತಿರ್ಲಿಲ್ಲೆ ಅವ್ರು. ಕಡೆಗೆ ಸ್ವಲ್ಪ ಸಮಯದ ನಂತರ ಇನ್ನು ದಾಕ್ಷಿಣ್ಯ ಮಾಡಿದ್ರೆ ಆಯಿಲ್ಲೆ  ಅಂತ ಜೋಯಿಸರನ್ನ ಬಿಟ್ಟು ನಮ್ಮ ಅಡಿಗರಿಗೆ ಪುರೋಹಿತಿಕೆಗೆ ಕರಿಯುಕೆ ಶುರು ಮಾಡಿದ್ದು ನಾವು. ಜೋಯಿಸರಿಗೆ ಒಬ್ಬ ಮಗ ಇದ್ದ. ವಿಶ್ವೇಶ ಅಂತ. ಅವ್ನು ಹುಟ್ಟಿ ಒಂದು ವರ್ಷದಲ್ಲೇ ಎಂಥದೋ ಖಾಯಿಲೆ ಬಂದು ಜೋಯಿಸರ ಹೆಂಡತಿ ತೀರಿ ಹೋದರು. ಅಲ್ಲಿಂದ ಆ ಕೆಳಮನೆಲ್ಲಿ ಅಪ್ಪ ಮಗ ಇಬ್ರೆ ಇದ್ರು. ಜೋಯಿಸರು ಮಗ ವಿಶ್ವೇಶನ್ನ ಸಮೇತ ಪುರೊಹಿತನನ್ನಾಯೇ ಮಾಡಿದ್ರು. ಅವ್ನು ಬಗ್ಗೆ ತುಂಬಾ ಒಳ್ಳೆ ಮಾತಿತ್ತು ಬೆಳ್ಯಾಡಿಯಲ್ಲೆಲ್ಲ. ಕಂಚಿನ ಕಂಠ ಅವನದ್ದು ಮಂತ್ರ ಉಚ್ಛಾರ ಅಂದ್ರೆ ಅಷ್ಟು ಸ್ಪಷ್ಟ. ಆದ್ರೆ ನಮ್ಮನ್ನ ಕಂಡ್ರೆ ಅವನಿಗೆ ಅಷ್ಟಕ್ಕಷ್ಟೇ. ಅವ್ನ ಅಪ್ಪನನ್ನ ಪುರೋಹಿತಿಕೆಗೆ ನಾವು ಕರಿಯುದು ನಿಲ್ಲಿಸ್ತು ಅಂತನೋ ಏನೋ. ಆದ್ರೆ ಅವ್ನ ಪಾಂಡಿತ್ಯದ ಬಗ್ಗೆ ಎಲ್ಲ ಹೊಗಳುವವ್ರೆ ಇಲ್ಲಿ ಸುತ್ತ ಮುತ್ತ. ಕಳೆದ ವರ್ಷ ಜೋಯಿಸರು ವಿಶ್ವೇಶಂಗೆ ಹೆಣ್ಣು ಹುಡ್ಕುಕೆ ಶುರು ಮಾಡಿದ್ರು. ಈಗ ಈಗ ಒಂದು ಹೊಸ ವಿಚಿತ್ರ ಶುರು ಆಯಿತ್ತು ಮಾರಾಯ ನಮ್ ಬ್ರಾಹ್ಮಣರ ಒಳಗೆ. ಹುಡುಗಿಯರೇ ಸಿಕ್ಕುದಿಲ್ಲೆ ಮದ್ವೆ ಮಾಡ್ಕಂಬುಕೆ. ಹೆಣ್ಮಕ್ಳಿಗೆ ಭಾರಿ ಡಿಮಾಂಡ್ ಈಗ. ಅದರಲ್ಲೂ ಪುರೋಹಿತರು, ಅಡುಗೆ ಭಟ್ರು, ಮತ್ತೆ ಊರಲ್ಲಿ ಸಣ್ಣ ಪುಟ್ಟ ಕೆಲಸ ಮಾಡ್ಕಂಡಿಪ್ಪುವವ್ರಿಗೆಲ್ಲ  ಅಂತು ಕೇಂಬುದೆ ಬೇಡ”. ಅಪ್ಪ ನಿಟ್ಟುಸಿರಿಟ್ಟರು.

ಇದೆಲ್ಲ ಕಥೆ ಜೋಯಿಸರಿಂದ ನಂಗೆ ನಿನ್ನೆನೇ ಗೊತ್ತಾಗಿದ್ದರೂ ಕೂಡ ಅಪ್ಪನ ಬಾಯಿಂದನೇ ಕೇಳುವ ಅಂತ ಸುಮ್ಮನೆ ತಲೆ ಆಡಿಸುತ್ತಾ ಕುಳಿತೆ.

ಅಪ್ಪ ಮತ್ತೆ ಮುಂದುವರೆಸಿದರು, “ಹೀಂಗಿಪ್ಪುವಾಗ ವಿಶ್ವೇಶಂಗೆ ತುಂಬಾ ಹುಡ್ಕಿದ್ರು, ಆದ್ರೆ ಯಾರು ಹೆಣ್ಣು ಕೊಡುಕೆ ತಯಾರಿಲ್ಲೆ. ಇನ್ನು ಆಪುದಲ್ಲ ಅಂತ ಜೋಯಿಸರು ಸುಮ್ನೆ ಆದರು. ದೇವ್ರು ಹ್ಯಾಂಗೆ ಹಣೆಲ್ಲಿ ಬರ್ದಿದ್ದಾನೋ ಹಾಂಗೆ ಆಯ್ಲಿ ಅಂತ. ಆದ್ರೆ ವಿಶ್ವೇಶ ಒಂದು ದಿನ ಒಂದು ಹುಡುಗಿನ್ನ ಮದ್ವೆ ಮಾಡ್ಕಂಡು ಬಂದೆ ಬಿಟ್ಟ. ಊರಿನ ಹುಡುಗಿ ಅಲ್ಲ. ಭಾಷೆಲ್ಲೇ ಗೊತ್ತಾತಿತ್ತು ಯಾವ್ದೋ ಘಟ್ಟದ ಮೇಲಿನ ಹುಡುಗಿ ಅಂತ. ಈ ಊರಿನ ಜನ ಕೇಣ್ಕ, ಎಲ್ಲರಿಗೆ ಮಾತಾಡುಕೆ ಒಂದ್ ವಿಷಯ ಸಿಗ್ತು. ತಲೆಗೆ ಒಂದೊಂದು ಮಾತಾಡುಕೆ ಶುರು ಮಾಡಿದ್ರು ಜನ. ವಿಶ್ವೇಶಂಗೆ ಪರವೂರಲ್ಲಿ ಮೊದ್ಲೇ ಈ ಹುಡುಗಿ ಒಟ್ಟಿಗೆ ಸಂಬಂಧ ಇತ್ತಂತ ಹೇಳುವವರು ಕೆಲವರು, ಬಡ ಹುಡುಗಿ ಮನೆಯವರಿಗೆ ತುಂಬಾ ದುಡ್ಡು ಕೊಟ್ಟು ಮದ್ವೆಗೆ ಒಪ್ಪಿಸಿ ಕರ್ಕಂಡು ಬಂದಿದ್ದ ಅಂತ ಹೇಳುವವರು ಕೆಲವರು. ಮತ್ತೆ ಕೆಲವರು ಹುಡುಗಿ ಮೇಲೆ ಮೋಡಿ ಮಾಡಿ ಕರ್ಕಂಡು ಬಂದಿದ್ದ ಅಂತ ಹೇಳು ಮಟ್ಟಕ್ಕೆ ಗಾಳಿಮಾತುಗಳು ಶುರು ಆಯ್ತು. ವಿಶ್ವೇಶ ಇದಕೆಲ್ಲ ಕ್ಯಾರೇ ಮಾಡ್ಲಿಲ್ಲ. ಆದ್ರು ಅವನನ್ನ ಪುರೋಹಿತಿಕೆಗೆ ಕರಿಯು ಜನ ಏನು ಕಡಮೆ ಆಯ್ಲಿಲ್ಲೆ. ಹೀಂಗೆ ಸ್ವಲ್ಪ ದಿನ ಹೋದವು. ಜೋಯಿಸರ ಕೆಳಮನೆ ಬೆಳ್ಯಾಡಿಯಿಂದ  ಸ್ವಲ್ಪ ಆಚೆ ಇಪ್ಪುಕೆ ಹೋಯಿ ಅವ್ರ ಮನೆ ಸುದ್ದಿ ಇಲ್ಲಿಗೆ ಬಪ್ಪುದು ಸ್ವಲ್ಪ ಕಡಮೆಯೇ. ಆದ್ರು ಆ ಕಡೆಗೆ ಕೆಲ್ಸಕ್ಕೆ ಹೋತಿದ್ದ ಕೆಲವು ಹೆಂಗಸರು ಹೇಳು ಪ್ರಕಾರ ಜೋಯಿಸರ ಹೊಸ ಸೊಸೆ ಭಾರಿ ರಾಟಾಳಿ, ಜೋಯಿಸರ ಕೈಯಲ್ಲೇ ಎಲ್ಲ ಕೆಲಸ ಮಾಡಿಸ್ಕಂತ್ಲು ಅಂತ.

ಹೀಂಗಿಪ್ಪುವಾಗ ಸ್ವಲ್ಪ ದಿನಗಳ ಹಿಂದೆ ವಿಶ್ವೇಶ ದೇವಸ್ಥಾನದ ಕಡೆಗೆ ಬಪ್ಪುದು ಕಡಿಮೆ ಆಯ್ತು. ಕಡೆಗೆ ಕಂಡ್ರೆ ಬರಿ ದೇವಸ್ಥಾನ ಅಲ್ಲ ಯಾರ ಮನೆಗೂ ಕೂಡ ಅವ್ನು ಹೋಯಿಲ್ಲೆ ಸ್ವಲ್ಪ ದಿನದಿಂದ ಅಂತ ಗೊತ್ತಾಯ್ತು. ಹೀಂಗಾದಾಗ  ಎಂತ ಆಯ್ತು ಅಂತ ಕಂಡ್ಕಂಡು ಬಪ್ಪ ಅಂತ ವಿಶ್ವೇಶನ ಒಂದಿಬ್ಬರು ಆಪ್ತರು ಮನೆ ಕಡೆ ಹೋದ್ರೆ ಕೆಟ್ಟ ಕೊಳೆತ ವಾಸನೆ ಅಂಬ್ರು. ಎಲ್ಲಿಂದ ಬತ್ತ ಇತ್ತಪ್ಪ ವಾಸನೆ ಅಂತ ಹುಡುಕ್ತ ಹುಡುಕ್ತ ಬಾವಿ ಹತ್ರ ಹೋದ್ರೆ, ಅದ್ರ ಒಳಗೆ ತೇಲ್ತಾ ಇದ್ದದ್ದು ಕೊಳೆತು ಬೀಗಿ ಹೋಗಿದ್ದ ಒಂದು ಶವ. ಮತ್ತೆ ಪೋಲಿಸ್ರೆಲ್ಲ ಬಂದು ಪೋಸ್ಟ್ ಮಾರ್ಟಂ ಅದೂ ಇದೂ ಅಂತೆಲ್ಲ ಆದ್ಮೇಲೆ ಗೊತ್ತಾದ್ದು ಅದು ವಿಶ್ವೇಶಂದೆ ಹೆಣ ಅಂತ. ಅದ್ರ ಮಧ್ಯೆ ಇನ್ನೊಂದು ವಿಚಾರ ಅಂದ್ರೆ ಅವತ್ತು ಮನೆ ಒಳಗೆ ಹುಡುಕಿದರೆ ಈಶ್ವರ ಜೋಯಿಸರು ಪತ್ತೆ ಇಲ್ಲೆ, ವಿಶ್ವೇಶನ ಹೆಂಡತಿಯೂ ಇಲ್ಲೆ. ಎರಡು ಮೂರು ದಿನ ಆದ್ರೂ ಇಬ್ರು ಪತ್ತೆ ಇಲ್ಲೆ ಅಂಬುವಾಗ ಮನೆ ಸುತ್ತ ಮುತ್ತ ಕೂಲಂಕಷ ಆಯಿ ಹುಡುಕಿದ ಪೋಲಿಸರಿಗೆ ಸಿಕ್ಕಿದ್ದು ಮನೆ ಹಿಂದೆ ಮಾವಿನ ಮರದ ಕೆಳಗೆ ನೆಲದಲ್ಲಿ ಹೂತಿಟ್ಟಿದ್ದ ಜೋಯಿಸರ ಶವ. ಅದು ಕೂಡ ಹ್ಯಾಂಗೆ ಗೊತ್ತಾದ್ದು ಅಂದ್ರೆ ಮೊದಲಿನ ದಿನ ಜೋರಾಗಿ ಮಳೆ ಸುರ್ದು, ಶವ ಹೂತಿಟ್ಟ ಜಾಗದಲ್ಲಿ ಮಣ್ಣು ಸ್ವಲ್ಪ ಅಡಿಗೆ ಹೋಯಿ ಜೋಯಿಸರ ಮೇಲೆ ಹೊದಿಸಿದ್ದ ಬಿಳಿ ಶಾಲು ಮಣ್ಣಿಂದ ಸ್ವಲ್ಪ ಹೊರಗೆ ಬಪ್ಪುಕೆ ಹೋಯಿ. ಆ ಪರವೂರಿನ ಹೆಣ್ಣಿನ ಪತ್ತೆ ಇನ್ನೂ ಆಯಿಲ್ಲೆ. ಎಲ್ಲ ಮಾತಾಡುದು ಎಂತ ಅಂದ್ರೆ ಇವರಿಬ್ರ ಸಾವಿನ ಹಿಂದೆ ಆ ಹುಡುಗಿದ್ದೇ ಕೈವಾಡ ಇತ್ತು ಅಂತ. ಎಲ್ಲ ಒಂಥರಾ ನಿಗೂಢ. ದನ ಎಬ್ಬುಕಂಡು ಗೊತ್ತಿಲ್ದೆ ಆಚೆ ಕಡೆ ಸಂಜೆ ಹೊತ್ತಿಗೆ ಹೋದವರಿಗೆ ಮನೆ ಒಳಗಿಂದ ವಿಶ್ವೇಶ ವಿಶ್ವೇಶ ಅಂತ ಒಂದು ಮುದಿ ಸ್ವರ ಕೂಗು ಶಬ್ದ ಕೇಂತ ಇತ್ತಂಬ್ರು. ಇದೆಲ್ಲ ಆದ್ಮೇಲೆ ಜನ ಕೆಳಮನೆ ಕಡೆ ತಲೆ ಹಾಕಿ ಮಲ್ಕಂಬುದು ಕೂಡ ಇಲ್ಲೆ. ಎಷ್ಟು ನಿಜನೋ ಎಷ್ಟು ಕಟ್ಟು ಕಥೆಯೋ ಗೊತ್ತಿಲ್ಲೆ. ಆದ್ರೂ ನೀನು ಅಲ್ಲೆಲ್ಲ ಬಳಿಯುದು ಬ್ಯಾಡ ಮಾರಾಯ. ಸುಮ್ನೆ ಇಲ್ಲದ್ದೆಲ್ಲ ತಲೆ ಮೇಲೆ ಹಾಕಂಬೇಡ ಇನ್ನು”. ಇಷ್ಟು ಹೇಳಿ ಅಪ್ಪ ಮನೆ ಒಳಗೆ ಹೋದ್ರು.

ಅಪ್ಪ ಇಷ್ಟು ಹೊತ್ತು ಹೇಳಿದ್ದನ್ನು ಕೇಳಿಸಿಕೊಂಡು ದೇಹದ ಒಳಗಿನಿಂದ ಭಯದ ಕಂಪನ ಎದ್ದು ಬಂದು ಕಾಲು ನಡುಗಿ, ತಲೆ ಸುತ್ತಿದಂತಾಗಿ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಸಿದುಬಿಟ್ಟೆ. ಹಾಗಾದರೆ ನಾನು ನಿನ್ನೆ ಬೈಕಿನ ಹಿಂದೆ ಕೂರಿಸಿಕೊಂಡು ಬಂದ ಜೋಯಿಸರು ಯಾರು? ಯಾರೋ ನನ್ನನ್ನು ಹೆದರಿಸಲು ಹೀಗೆ ನನ್ನ ಜೊತೆ ಆಟ ಆಡಿರಬಹುದೇ? ಹಾಗಿದ್ದರೆ ಹೀಗೆ ವಿಚಿತ್ರ ಸಾವುಗಳು ಸಂಭವಿಸಿರುವ ಆ ಮನೆಯ ಬಳಿ ಆ ಕತ್ತಲು ರಾತ್ರಿಯಲ್ಲಿ ಇಳಿದು ಹೋಗುವ ಧೈರ್ಯ ನಿಜವಾಗಿಯೂ ಈ ಊರಲ್ಲಿ ಯಾರಿಗಾದರೂ ಇದೆಯೇ? ಹಾಗಾದರೆ ನಾನು ನಿನ್ನೆ ರಾತ್ರಿ ಬೈಕಿನಲ್ಲಿ ಕೂಡಿಸಿ ಮಾತನಾಡಿಕೊಂಡು ಬಂದದ್ದು ಜೋಯಿಸರ ಪ್ರೇತವೇ? ಗಂಟಲು ಒಣಗಿದಂತಾಗಿ ಆಚೀಚೆ ನೋಡಲು ಕೈಯಲ್ಲಿದ್ದ, ಓದಲು ಶುರು ಹಚ್ಚಿದ್ದ ಕಾಗದದ ನೆನಪಾಯಿತು.

ನಡುಗುತ್ತಿರುವ ಕೈಯ್ಯನ್ನು ಕಷ್ಟ ಪಟ್ಟು ಸಂಭಾಳಿಸಿಕೊಂಡು ಓದ ತೊಡಗಿದೆ…

ಮುಂದುವರಿಯುವುದು

-Thilakraj Somayaji

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!