ವಂದನಾ ಕಣ್ಮುಚ್ಚಿ ಹತ್ತು ದಿನಗಳು ಕಳೆದಿದ್ದವು.. ಮಗುವಿಗೆ ಭಾರತಿ ಅಮ್ಮನಾಗಿದ್ದಳು….ಸೂರ್ಯ ಮಗುವಿನ ಮುಖ ನೋಡಿ ಹೆಂಡತಿಯ ಅಗಲುವಿಕೆಯನ್ನು ಸಹಿಸಿಕೊಂಡಿದ್ದ. ಆದರೇನು ಸೂರ್ಯನ ಬಾಳಲ್ಲಿ ಮಗುವೂ ಕೂಡಾ ಉಳಿಯಲಿಲ್ಲ. ಜ್ವರ ಬಂದಿದ್ದಷ್ಟೇ ನೆಪ….ಆಸ್ಪತ್ರೆಗೆ ಸಾಗಿಸಿದರೂ ಮಗು ಕೊನೆಯುಸಿರೆಳೆಯಿತು. ಸೂರ್ಯನಿಗೆ ಗ್ರಹಣ ಹಿಡಿದಂತಾಗಿತ್ತು. ಮೌನಿಯಾದ. ವಿಭಾ ಶುಭಾ ಚಿಕ್ಕಪ್ಪನ ಕೊರಳಿಗೆ ಜೋತು ಬಿದ್ದರೂ ಏನಂದೂ ಮಾತನಾಡುತ್ತಿರಲಿಲ್ಲ. ಇಷ್ಟ ಬಂದಾಗ ಊಟ.. ನಿದ್ದೆ……ಬದುಕಲೇಬಾರದೆಂದು ನಿದ್ರೆ ಮಾತ್ರೆಗಳನ್ನು ನುಂಗಿದ್ದ ಸೂರ್ಯ. ರವಿ ನೋಡದೇ ಇದ್ದಿದ್ದರೆ ಅವನು ಬದುಕುತ್ತಿರಲಿಲ್ಲ. ಆ ದಿನ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಸೂರ್ಯನಿಗೆ ವಿಭಾ “ಚಿಕ್ಕಪ್ಪ……..ಚಿಕ್ಕಮ್ಮ, ಪಾಪು ಇಲ್ಲ ಅಂತ ಬೇಜಾರಾಗ್ಬೇಡ. ನಾವಿಲ್ವಾ ನಿಂಗೆ?” ಅಂತ ತನ್ನ ಪುಟ್ಟ ಭಾಷೆಯಲ್ಲಿ ದೊಡ್ಡವರ ತರ ನುಡಿದಾಗ ಬಿಕ್ಕಿ ಅತ್ತಿದ್ದ ಸೂರ್ಯ. ಆದರೂ ದಿನ ಕಳೆದಂತೆ ಸೂರ್ಯ ಅಂತರ್ಮುಖಿ ಯಾಗಿದ್ದ. ಇತ್ತಿಚೆಗಂತೂ ಅಣ್ಣನೊಂದಿಗೂ ಮಾತು ಬಿಟ್ಟಿದ್ದ. ಏಳು ವರ್ಷ ಕಳೆಯುವುದರಲ್ಲಿ ಹುಚ್ಚನಂತಾಗಿದ್ದ ಸೂರ್ಯ. ನಿದ್ದೆಯಲ್ಲೂ “ವಂದೂ…ವಂದೂ..” ಎಂದು ಹೆಂಡತಿಯ ಹೆಸರನ್ನು ಕನವರಿಸುತ್ತಿದ್ದ. “ಯಾಕೇ ವಂದೂ ನನ್ ಬಿಟ್ ಹೋದೆ..? “ಎಂದು ನಿದ್ರೆಯಲ್ಲಿಯೇ ಅಳುತ್ತಿದ್ದ. ಭಾರತಿ ,ರವಿ ಅವನಿಗೆ ಇನ್ನೊಂದು ಮದುವೆ ಮಾಡಬೇಕೆಂದರೆ ಅವನು ಹುಚ್ಚನಂತಾಡುವುದನ್ನು ಕಂಡು ಸುಮ್ಮನಾಗಿದ್ದರು. ಅಕ್ಕ ಪಕ್ಕದವರ ಸಲಹೆಯಂತೆ ಅವನನ್ನು ಸೈಕಿಯಾಟ್ರಿಸ್ಟ್ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿರಲಿಲ್ಲ.” ಸುಮ್ನೆ ಹುಚ್ಚನ್ನ ಯಾಕೆ ಮನೇಲಿಟ್ಕೊತೀರಾ ಭಾರತಿಯಮ್ಮ..ನಿಮ್ ಯಜಮಾನ್ರಿಗೆ ಹೇಳಿ ಯಾವುದಾದ್ರೂ ಹುಚ್ಚಾಸ್ಪತ್ರೆಗೆ ಸೇರಿಸೋಕೆ..”ಅಂತ ನೆರೆಹೊರೆಯವರು ಭಾರತಿಗೆ ಸಲಹೆ ಕೊಟ್ಟಿದ್ದೂ ಆಗಿತ್ತು. ಅವಳಿಗೂ ಮೈದುನನ್ನು ಹುಚ್ಚಾಸ್ಪತ್ರೆಗೆ ಸೇರಿಸಲು ಇಷ್ಟವಿರಲಿಲ್ಲ. ಅದೂ ಅಲ್ಲದೇ ಅವನೇನು ಹುಚ್ಚನ ತರಹ ಕಾಣುತ್ತಿರಲಿಲ್ಲ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ.”ವಂದೂ…. ವಂದೂ….”ಎಂದು ಅಳುವುದನ್ನು ನೋಡಿ ನೆರೆಹೊರೆಯವರು ಅವನನ್ನು ಹುಚ್ಚನೆಂದು ತೀರ್ಮಾನಿಸಿದ್ದರು. ಅಸಲಿಗೆ ಅವನು ಹುಚ್ಚನಾಗಿರಲಿಲ್ಲ. ಬರೀ ಡಿಪ್ರೆಶನ್’ಗೆ ಒಳಗಾಗಿದ್ದ. ರವಿ ಯಾರ ಮಾತಿಗೂ ತಲೆ ಕೆಡಿಸಿಕೊಂಡಿರಲಿಲ್ಲ.”ಇರುವವನು ಒಬ್ಬ ತಮ್ಮ..ಅವನಿಗೆ ನಮ್ಮನ್ನು ಬಿಟ್ರೆ ಯಾರಿದಾರೆ? ಅಷ್ಟಕ್ಕೂ ಅವನು ಯಾರಿಗೇನು ತೊಂದರೆ ಮಾಡಿಲ್ಲ. ಕೊನೆಯವರೆಗೂ ಅವನು ನಮ್ಮ ಜೊತೆನೇ ಇರ್ತಾನೆ. ನಾವು ಅವನನ್ನು ಯಾವ ಆಸ್ಪತ್ರೆಗೂ ಸೇರಿಸುವುದಿಲ್ಲ….ದಯವಿಟ್ಟು ನಿಮ್ಮ ಸಲಹೆಗಳನ್ನು ನಿಲ್ಲಿಸಿ…”ಎಂದು ಅಕ್ಕ ಪಕ್ಕದವರ ಬಾಯ್ಮುಚ್ಚಿಸಿದ್ದ.
ಅದೊಂದು ದಿನ ಭಾರತಿ ಅಡುಗೆ ಮಾಡುತ್ತಿದ್ದಳು. ವಿಭಾ ಶುಭಾ ಕಾಲೇಜ್’ಗೆ ಹೋಗಿದ್ದರು. ರವಿಯೂ ಆಫಿಸ್’ಗೆ ಹೋಗಿದ್ದ. ಮನೆಯಲ್ಲಿ ಸೂರ್ಯ ಭಾರತಿ ಇಬ್ಬರೇ..ಸೂರ್ಯ ಏಳು ವರ್ಷ ಕಳೆದರೂ ಇನ್ನೂ ವಂದನಾಳ ಕನವರಿಕೆಯಲ್ಲೇ ಇದ್ದ. ಬಾಯಾರಿಕೆಯಾಗಿ ನೀರು ಕುಡಿಯುವಂತಾಗಿ ಅಡುಗೆ ಮನೆಗೆ ಬಂದಿದ್ದ. ವಂದನಾ ಉಡುತ್ತಿದ್ದಂತಹ ಸೀರೆಯನ್ನು ಆ ದಿನ ಭಾರತಿ ಉಟ್ಟಿದ್ದಳು. ಅಸಲಿಗೆ ಆ ಸೀರೆಯನ್ನು ವಂದನಾ ಬದುಕಿದ್ದಾಗ ದೀಪಾವಳಿಗೆಂದು ತಾನೇ ಹೋಗಿ ಇಬ್ಬರಿಗೂ ಒಂದೇ ತರಹದ ಸೀರೆಗಳನ್ನು ಆರಿಸಿ ತಂದಿದ್ದಳು. ಭಾರತಿಯನ್ನು ಪಕ್ಕದ ಮನೆಯ ವನಜಾ ದೇವಸ್ಥಾನಕ್ಕೆ ಕರೆದಿದ್ದಳು. ಅವಳೂ ದೆವಸ್ಥಾನಕ್ಕೆ ಹೋಗಿ ಬರಲು ತೀರ್ಮಾನಿಸಿ ತಯಾರಾಗಿದ್ದಳು. ದೇವಸ್ಥಾನಕ್ಕೆ ಹೋಗಿ ಬರುವುದು ತಡವಾದರೆ ಎಂದುಕೊಂಡು ಸೂರ್ಯನಿಗೆ ಅನ್ನ ಮಾಡಿಟ್ಟು ಹೋದರಾಯಿತೆಂದು ಅನ್ನಕ್ಕಿಡಲು ಅಡುಗೆ ಮನೆಗೆ ಹೋಗಿದ್ದಳು. ನೀರು ಕುಡಿಯಲೆಂದು ಅಡುಗೆ ಮನೆಗೆ ಬಂದ ಮೊದಲೇ ವಂದನಾಳ ಕನವರಿಕೆಯಲ್ಲಿದ್ದ ಸೂರ್ಯನಿಗೆ ಹಿಂದಿನಿಂದ ಭಾರತಿ ಆ ಸೀರೆಯಲ್ಲಿ ವಂದನಾಳಂತೆಯೇ ಕಂಡಳು. “ವಂದೂ…!”ಎಂದು ನುಡಿದವನೇ ಅದೇನೆನ್ನಿಸಿತೋ ಅವನಿಗೆ ಭಾರತಿಯನ್ನು ಹಿಂದಿನಿಂದ ತಬ್ಬಿಕೊಂಡುಬಿಟ್ಟ…ಭಾರತಿ “ಏಯ್ ಸೂರ್ಯ ಏನು ತಲೆ ಕೆಟ್ಟಿದೆಯಾ ಬಿಡೋ ನನ್ನ…ನಾನು ನಿಮ್ಮಣ್ಣನ ಹೆಂಡತಿ..ಬಿಡೋ… ” ಎಂದು ಕೊಸರಾಡಿದರೂ ಬಿಡಲಿಲ್ಲ. ಆ ಹೊತ್ತಿಗೆ ವನಜಾ “ಏನ್ರಿ ಭಾರತಿ ಇನ್ನೂ ರೆಡಿಯಾಗಿಲ್ವಾ…?ಮೊದ್ಲೇ ಬಿಸಿಲು ಜಾಸ್ತಿ …ಬೇಗ ಹೋಗಿ ಬರೋಣ “ಎಂದು ಹೇಳುತ್ತಲೇ ಭಾರತಿ ಮನೆಯ ಹಾಲ್’ಗೆ ಬಂದಳು.”ಬಿಡೋ….ಬಿಡೋ….” ಎನ್ನುವ ಚೀರಾಟ ಕೇಳಿ ಗಾಬರಿಯಾಗಿ ಅಡುಗೆ ಮನೆಯತ್ತ ಧಾವಿಸಿದಳು. ಅಲ್ಲಿಯ ದೃಶ್ಯ ಕಂಡು ಅವಾಕ್ಕಾದಳು. ಅವಳ ಬಾಯಿಯ ಪಸೆ ಆರಿ ಹೋಯಿತು. ಸೂರ್ಯ ಭಾರತಿಯನ್ನು ಬಿಗಿಯಾಗಿ ತಬ್ಬಿಕೊಂಡಿದ್ದ. ತಡಮಾಡದೇ ವನಜಾ ಮುಂದೆ ಹೋಗಿ ಅವನ ಕೆನ್ನೆಗೆ ಫಟೀರ್ ಎಂದು ಹೊಡೆದಳು. ಸೂರ್ಯ ಗಾಬರಿಯಿಂದ ಭಾರತಿಯನ್ನು ಬಿಟ್ಟು ಹಿಂದೆ ಸರಿದ. “ನಿಮ್ಮತ್ತಿಗೆ ಅವಳು..ನೀನು ಈ ತರ ಮಾಡಬಹುದಾ?” ಎಂದು ಭಾರತಿಯತ್ತ ತಿರುಗಿ “ನಿನಗೆ ಎಷ್ಟು ಬಾರಿ ಹೇಳಿದೆ…. ಇವನನ್ನು ಹುಚ್ಚಾಸ್ಪತ್ರೆಗೆ ಸೇರಿಸು ಎಂದು…ನೀನೂ ಕೇಳ್ಲಿಲ್ಲ..ನಿನ್ನ ಗಂಡಾನೂ ಕೇಳ್ಲಿಲ್ಲ. ನಾನು ಬರುವುದು ತಡವಾಗಿದ್ದರೆ…. ನಾಲ್ಕು ಜನ ಬಂದಿರೋರು ನಿನ್ನ ಚೀರಾಟ ಕೇಳಿ….ಆಗ ಮರ್ಯಾದೆ ಹೋಗಿರೋದು. ನನ್ ಮೈದುನ ಒಳ್ಳೆಯವನು ಅವನಿಗೆ ಹುಚ್ಚು ಹಿಡಿದಿಲ್ಲ..ಸತ್ತು ಹೋದ ಹೆಂಡ್ತಿ ಚಿಂತೆಯಲ್ಲಿದಾನೆ ಅಷ್ಟೇ ಅಂದೇ….ಈಗೇನಾಯಿತು?..ಇಲ್ಲಿ ನಿಲ್ಬೇಡ ಬಾ..ನಿನ್ ಗಂಡ ಬರೋವರೆಗೂ ನಮ್ಮ ಮನೆಲಿರುವಂತೆ “ಎಂದು ಗ್ಯಾಸ್ ಸ್ಟವ್ ಆಫ್ ಮಾಡಿ ತನ್ನ ಮನೆಗೆ ಭಾರತಿಯನ್ನು ಎಳೆದುಕೊಂಡು ಹೋದಳು. ಅವಳ ಮೊಬೈಲ್’ನಿಂದ ರವಿಗೆ ಕರೆ ಮಾಡಿ ಆಗಿದ್ದನ್ನು ವಿವರಿಸಿದಳು.. ಭಾರತಿ ನಡುಗುತ್ತಿದ್ದಳು. ಅವಳಿಗೆ ಒಂದು ಗ್ಲಾಸ್ ಜ್ಯೂಸ್ ಕುಡಿಸಿ ಮಲಗಿಸಿ ರವಿಯ ಬರುವಿಕೆಗಾಗಿ ಕಾದಳು. ಇತ್ತ ಸೂರ್ಯ ” ನನ್ನದು ತಪ್ಪಾಯಿತು ಅತ್ತಿಗೆ..ವಂದನಾಳ ಹುಚ್ಚು ನನಗೆ ಹೀಗೆ ಮಾಡಿಸುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನದಲ್ಲಾದ ಜಿಗುಪ್ಸೆಯಿಂದ ಸಾವನ್ನಪ್ಪುತ್ತಿದ್ದೇನೆ..”ಎಂದು ಪತ್ರ ಬರೆದಿಟ್ಟು ಮತ್ತೆ ನಿದ್ರೆ ಮಾತ್ರಗಳನ್ನ ನುಂಗಿದ್ದ.
ರವಿ ಮನೆಗೆ ಓಡಿಬಂದರೆ ಅಲ್ಲಿ ಸೂರ್ಯ ಅರೆ ಬರೆ ಕಣ್ಣು ಬಿಡುತ್ತಿದ್ದ. “ಭಾರತೀ……” ಎಂದು ಜೋರಾಗಿ ಕೂಗಿದ. ವನಜಾ ರವಿ ಬಂದಿದ್ದನ್ನು ಕಾರಿನ ಸಪ್ಪಳದಿಂದಲೇ ತಿಳಿದಿದ್ದಳು. ಭಾರತಿ, ವನಜಾ ಮನೆಯತ್ತ ಧಾವಿಸಿದರು. ರವಿ “ಮೊದಲು ಆಸ್ಪತ್ರೆಗೆ ಹೋಗೋಣ. ಉಳಿದದ್ದು ಆಮೇಲೆ ಮಾತಾಡೋಣ “ಎಂದು ಸೂರ್ಯನನ್ನು ಕೈ ಹಾಕಿ ಎಬ್ಬಿಸಲು ಪ್ರಯತ್ನಿಸಿದ ಆಗಲಿಲ್ಲ. ಭಾರತಿ,ವನಜಾ ಭಯದಿಂದಲೇ ಸಹಾಯ ಮಾಡಿದರು. ಅವನ್ನು ಕಾರಿನಲ್ಲಿ ತಂದು ಮಲಗಿಸಿ ಆಸ್ಪತ್ರೆಯತ್ತ ವೇಗವಾಗಿ ಕಾರು ಓಡಿಸಿದ ರವಿ. ಹೇಗೋ ಮತ್ತೆ ಸೂರ್ಯ ಬದುಕಿದ್ದ. ಕಣ್ಣು ಬಿಟ್ಟಾಗ ಅಳುತ್ತಿದ್ದ.”ಅತ್ತಿಗೆ… ಕ್ಷಮಿಸಿ “ಅಂತ ಗೋಗರೆಯುತ್ತಿದ್ದ. ಭಾರತಿ ಭಯದಿಂದ ಹಿಂದೆ ನಿಂತಿದ್ದಳು.”ವಂದೂ ನೀನಿದ್ದಿದ್ರೆ ಹೀಗಾಗ್ತಿರ್ಲಿಲ್ಲ ಕಣೇ..ನನ್ನೂ ಕರ್ಕೊಂಡ್ ಬಿಡೇ…” ಅಂತ ಜೋರು ಧ್ವನಿಯಲ್ಲಿ ಅಳುವುದನ್ನು ಕಂಡ ವೈದ್ಯರು ಅವನಿಗೆ ಮತ್ತು ಬರುವ ಇಂಜೆಕ್ಷನ್ ನೀಡಿದ್ದರು. ಆ ಡಾಕ್ಟರ್ ರವಿಗೆ ಮೊದಲಿನಿಂದ ಪರಿಚಯ. ಅವರು ರವಿಯನ್ನು ತಮ್ಮ ರೂಮಿಗೆ ಕರೆಸಿ “ನೋಡಿ ರವಿ…ನಿಮ್ಮ ತಮ್ಮ ತುಂಬಾ ಡಿಪ್ರೆಶನ್’ನಲ್ಲಿ ಇದಾರೆ. ಈಗ ಎರಡನೇ ಸಲ ಅವರು ಹೀಗೆ ಆತ್ಮಹತ್ಯೆಗೆ ಯತ್ನಿಸಿದ್ದು…..ಹಿಂದೊಮ್ಮೆ ಹೀಗೆ ಮಾಡಿಕೊಂಡಿದ್ದರು. ಆಗಲೇ ನಿಮಗೆ ಹೇಳಿದ್ದೆ…..ಮಾನಸಿಕ ರೋಗಿಗಳ ವಿಭಾಗಕ್ಕೆ ಕಳಿಸಿ ಚಿಕಿತ್ಸೆ ಕೊಡಿಸ್ತಿನಿ ಅಂತ. ನೀವು ಕೇಳ್ಲಿಲ್ಲ..ಸ್ವಲ್ಪ ದಿನ ಸರಿ ಹೋಗ್ತಾನೆ ಅಂದ್ರಿ…..ಈಗ ನೋಡಿ ಏನಾಯಿತು ಅಂತ..ಈಗ್ಲೂ ಕಾಲ ಮಿಂಚಿಲ್ಲ….ನೀವು ಹೂಂ ಅಂದರೆ ನಾನು ಅವರನ್ನು ಮಾನಸಿಕ ರೋಗಿಗಳ ವಿಭಾಗಕ್ಕೆ ಕಳುಹಿಸಿ ಕೊಡುತ್ತೇನೆ..ಏನಂತಿರಾ ?”ಅಂದಾಗ ರವಿ ಡಾಕ್ಟರ್ ಹೇಳುವುದು ಸರಿ ಎನಿಸಿ ವಿಧಿಯಿಲ್ಲದೇ ಒಪ್ಪಿಕೊಂಡಿದ್ದ. ಆದರೆ ಪ್ರೀತಿಯ ತಮ್ಮನನ್ನು ಹೇಗೆ ಒಬ್ಬನನ್ನೇ ಬಿಡುವುದು ಅನಿಸಿತು. ಏನಾದರೊಂದು ವ್ಯವಸ್ಥೆ ಮಾಡಿದರಾಯಿತು ಎಂದು ಭಾರತಿ ವನಜಾಳನ್ನು ಮನೆಗೆ ಬಿಟ್ಟು ಅರ್ಧ ಗಂಟೆಯಲ್ಲಿ ವಾಪಸ್ ಬರುತ್ತೇನೆಂದು ಡಾಕ್ಟರ್’ಗೆ ಹೇಳಿ ಮನೆ ಕಡೆ ಕಾರ್ ತಿರುಗಿಸಿದ. ಅದಾಗಲೇ ವಿಭಾ ಶುಭಾ ಮನೆಗೆ ಬಂದು ಬಾಗಿಲಲ್ಲಿ ಕೂತಿದ್ದರು.”ಏನಿದು ಮನೆ ಬೀಗ ಹಾಕಿದೆ..ಯಾವಾಗ್ಲೂ ಅಮ್ಮ ನಾವು ಮನೆಗೆ ಬರೋ ಟೈಮಿಗೆ ಟೀ ,ಏನಾದ್ರೂ ಕುರುಕಲು ತಿಂಡಿ ಮಾಡಿ ಕಾಯ್ದಿರುತ್ತಿದ್ದರು.”ಎಂದು ಮಾತಾಡಿಕೊಂಡರು. ವಿಭಾ ಭಾರತಿಗೆ ಕಾಲ್ ಮಾಡುವಷ್ಟರಲ್ಲಿ ಕಾರು ಮನೆ ಬಾಗಿಲಿಗೆ ಬಂದಿತ್ತು. ಕಾರಿನಿಂದ ಇಳಿದ ಅಮ್ಮ …ಪಕ್ಕದ ಮನೆ ವನಜಾ ಆಂಟಿಯನ್ನು ಕಂಡು… ಏನಾಗಿರಬಹುದು…? ಎಂದು ತಲೆಕೆಡಿಸಿಕೊಂಡು ನಿಂತಿದ್ದರು. ಅಪ್ಪ ಬೇರೆ ಕಾರಿನಿಂದ ಇಳಿಯದೇ ಮತ್ತೆ ವಾಪಸ್ ಹೋಗಿದ್ದಕ್ಕೆ ಏನೂ ತಿಳಿಯದಾಯಿತು. ಅಮ್ಮನ ಮುಖವೂ ಬಿಳಿಚಿಕೊಂಡಿತ್ತು. ವನಜಾ ಭಾರತಿಯನ್ನು ಒಳಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದಳು..ಹಾಯಾಗಿ ಕಣ್ಮುಚ್ಚಿ ಮಲಗಿದಳು ಭಾರತಿ. “ಇವತ್ತು ಅಡುಗೆ ಏನೂ ಮಾಡಬೇಡಿ ನಮ್ಮನೇಲೇ ಮಾಡಿ ತರ್ತಿನಿ..ಅಮ್ಮ ಎದ್ದರೆ ಕಾಫೀ ಮಾಡಿಕೊಡಿ” ಎಂದು ವಿಭಾ ಶುಭಾಗೆ ಹೇಳಿ ಅವರುತ್ತರಕ್ಕೂ ಕಾಯದೇ ಮನೆ ಕಡೆ ನಡೆದಳು ವನಜಾ. ಏನಾಯಿತು ಎಂದು ಕೇಳುವ ಮೊದಲೇ ವನಜಾ ಹೊರಟಿದ್ದರಿಂದ ಅಮ್ಮನನ್ನೇ ಕೇಳಿದರಾಯಿತೆಂದುಕೊಂಡು ಮನೆ ಕೆಲಸ ಮಾಡಲು ಅಣಿಯಾದರು. ವಿಭಾ ಪಾತ್ರೆಗಳನ್ನು ತೊಳೆಯಲು ನಿಂತರೆ ಶುಭಾ ಮನೆ ಕಸ ಗುಡಿಸಲು ನಿಂತಳು..ಚಿಕ್ಕಪ್ಪನ ರೂಮಲ್ಲಿನ ಪತ್ರ ನೋಡಿ ಹೌಹಾರಿದಳು ಶುಭಾ..ಅವಳ ಚಿಕ್ಕಪ್ಪ ಬರೆದ ಪತ್ರದಿಂದ ಮನೆಯಲ್ಲೇನೋ ಅವಘಡ ಸಂಭವಿಸಿದೆ ಎಂದು ತಿಳಿಯಿತು. ವಿಭಾಳನ್ನು ಕರೆದು ಪತ್ರ ತೋರಿಸಿದಳು. ಅಷ್ಟರಲ್ಲಿ ರವಿಯ ಆಗಮನವಾಗಿದ್ದರಿಂದ ಇಬ್ಬರೂ ತಮ್ಮ ಕೆಲಸಗಳಲ್ಲಿ ತೊಡಗಿದರು. ರವಿ ನೇರವಾಗಿ ರೂಮಿಗೆ ಹೋಗಿ ನೋಡಿದ. ಭಾರತಿ ಮಲಗಿದ್ದಳು.”ಚಿನ್ನೂ…ಪಾಪೂ “ಎಂದು ಕೂಗುತ್ತಾ ಅಡುಗೆ ಮನೆಗೆ ಬಂದ. ಇಬ್ಬರೂ ಮನೆಗೆಲಸ ಮುಗಿಸಿ ಅಪ್ಪನಿಗಾಗಿ ಕಾಫೀಗಿಟ್ಟು ಏನಾಗಿರಬಹುದೆಂದು ಚರ್ಚಿಸುತ್ತ ಇದ್ದರು. ರವಿ ಮಕ್ಕಳ ಕುತೂಹಲ ಏನೆಂದು ತಿಳಿದು ನಡೆದದ್ದನ್ನು ವಿವರಿಸಿದ. ಸಂಜೆ ಭಾರತಿ ಕಣ್ಬಿಟ್ಟಾಗ ವಿಭಾ ಕಾಫಿ ತಂದಿಟ್ಟಳು. ಅಪ್ಪ ರೂಮಿಗೆ ಬಂದಿದ್ದನ್ನು ಅರಿತು ಹೊರನಡೆದಳು ವಿಭಾ.
ಭಾರತಿ ಮುಖ ನೋಡಿದ ರವಿಗೆ ತುಂಬಾ ಹೆದರಿಕೊಂಡಿದ್ದಾಳೆನಿಸಿತು. ಅವಳನ್ನು ತಬ್ಬಿ ತಲೆ ನೇವರಿಸಿದ.” ಸೂರ್ಯನ ಹತ್ತಿರ ಯಾರಿದ್ದಾರೆ ಈಗ…ಒಬ್ಬನನ್ನೇ ಬಿಟ್ಟು ಬಂದಿರಾ”ಎಂದು ಭಾರತಿ ಅವನೆದೆಗೆ ಒರಗಿಕೊಂಡೇ ಪ್ರಶ್ನಿಸಿದಳು.”ಅವನಿಗೆ ಸದ್ಯಕ್ಕೆ ಮತ್ತು ಬರುವ ಇಂಜೆಕ್ಷನ್ ನೀಡಿದ್ದಾರೆ..ಡಾಕ್ಟರ್ ಹೇಳಿದಂತೆ ಮಾನಸಿಕ ರೋಗಿಗಳ ವಿಭಾಗಕ್ಕೆ ಕಳಿಸಿದಾರೆ. ಡಾಕ್ಟರ್’ಗೆ ಹೇಳಿದ್ದೇನೆ ದಿನವೂ ಯಾರಾದರೊಬ್ಬರು ಬಂದು ನೋಡಿಕೊಂಡು ಹೋಗುತ್ತೇವೆ ಅಂತ..ಏನು ಮಾಡೋದು …? ನಾನು ಕೆಲಸ ಬಿಟ್ಟು ಕೂರೋಕಾಗಲ್ಲ..ವಿಭಾ ಶುಭಾ ಕಾಲೇಜ್’ಗೆ ರಜೆ ಹಾಕೋಕಾಗಲ್ಲ…..ಪರೀಕ್ಷೆ ಬೇರೆ ಹತ್ರ ಬರ್ತಿದಾವೆ…ಇನ್ನು ಸಂಬಂಧಿಕರ ಕತೆ ನಿನಗೆ ಗೊತ್ತು….ನಿನ್ನನ್ನು ಮದುವೆ ಆದೆ ಅಂತ ಯಾರೂ ಮಾತಾಡ್ಸಲ್ಲ…ಅವತ್ತಿಂದ ದೂರಾ ಆಗಿದಾರೆ …..” ಅಂತ ನಾಲಿಗೆ ಕಚ್ಚಿಕೊಂಡ..ಕೊನೆಯ ಎರಡು ಮಾತನ್ನು ಅವನು ಬೇಕಂತ ಹೇಳಿರಲಿಲ್ಲ..ಬಾಯಿ ತಪ್ಪಿ ಆವೇಶದಲ್ಲಿ ಹೇಳಿಬಿಟ್ಟಿದ್ದ..ಅವಳಿಗೆ ನೋವು ಮಾಡುವ ಉದ್ದೇಶ ಅವನದಾಗಿರಲಿಲ್ಲ. ಅದು ಗೊತ್ತಿದ್ದರೂ ಭಾರತಿಗೆ ಕೊನೆಯ ಎರಡು ಮಾತುಗಳು ನೋವು ನೀಡಿದ್ದವು. ಮೊದಲೇ ಆಘಾತದಲ್ಲಿದ್ದ ಅವಳಿಗೆ ಇಷ್ಟು ವರ್ಷಗಳ ಮೇಲೆ ರವಿಯಾಡಿದ ಮಾತು ಆಘಾತ ತಂದಿತ್ತು… ಆದರೇನು…ಮಾತು ಆಡಿಯಾಗಿತ್ತು…. ಭಾರತಿ ಕಣ್ಣಲ್ಲಿ ನೀರಿನ ಪದರ ಕಂಡಿತ್ತು. “ಕ್ಷಮಿಸು ಭಾರತಿ…ಏನೋ ಟೆನ್ಷನ್’ಲಿ ಅಂದುಬಿಟ್ಟೆ”ಅಂದ ರವಿ….”ಇದರಲ್ಲಿ ನಿಮ್ಮ ತಪ್ಪೇನಿಲ್ಲ….ನನ್ನಿಂದಾಗಿ ನೀವು ಸಂಬಂಧಿಕರನ್ನು ಕಳೆದುಕೊಂಡಿರಿ…”ಎಂದು ಅವನೆದುರು ನಿಲ್ಲಲಾರದೇ ಹೊರನಡೆದಳು ಭಾರತಿ..ಮನಸು ಹೊಲಸು ರಾಟಿಯಾಗಿತ್ತು. ಹತ್ತೊಂಬತ್ತು ವರ್ಷಗಳ ದಾಂಪತ್ಯದಲ್ಲಿ ರವಿಗೂ ತನಗೂ ಮುನಿಸುಗಳು ಬಂದಿದ್ದರೂ ಆ ಒಂದು ವಿಷಯದಲ್ಲಿ ಯಾವತ್ತೂ ರವಿ ನನ್ನನ್ನು ನೋಯಿಸಿರಲಿಲ್ಲ. ಇವತ್ತೇನಾಯಿತೋ…? ಎಂದುಕೊಂಡಳು ಮನಸ್ಸಿನಲ್ಲಿ. ರವಿಗೆ ಗೊತ್ತಾಗಿತ್ತು …. ಭಾರತಿಗೆ ಬೇಸರವಾಗಿದೆ ಎಂದು. ಅವಳು ಸ್ವಲ್ಪ ಹೊತ್ತು ಒಂಟಿಯಾಗಿರಲಿ…ಆಮೇಲೆ ಮಾತನಾಡಿದರಾಯಿತೆಂದುಕೊಂಡು ಹೊರನಡೆದ. ಎಷ್ಟೋ ವರ್ಷಗಳ ನಂತರ ಭಾರತಿ ತನ್ನ ಹಳೆಯ ಧೂಳು ಮುಚ್ಚಿದ್ದ ಡೈರಿ ಹೊರತೆಗೆದಳು..ಅವಳು ಎಂಟನೆಯ ತರಗತಿಯಿಂದಲೇ ಡೈರಿ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಳು. ಆಗಿನಿಂದಲೂ ಅವಳು ಬರೆದ ಡೈರಿಗಳಿಗೆಂದೇ ಒಂದು ಚಿಕ್ಕ ಪೆಟ್ಟಿಗೆ ಮಾಡಿಸಿ ಅದರಲ್ಲಿ ಎಲ್ಲ ಡೈರಿಗಳನ್ನಿಟ್ಟು ಕೀ ಹಾಕಿ ತನ್ನ ಬೀರೂವಿನಲ್ಲಿ ಭದ್ರವಾಗಿರಿಸಿದ್ದಳು
…..
ಮುಂದುವರಿಯುವುದು ….