ಕಥೆ ಕಾದಂಬರಿ

ಆತ್ಮ ಸಂವೇದನಾ -37

ಆತ್ಮ ಸಂವೇದನಾ -36

ಆತ್ಮ ಸಂವೇದನಾ ಇಬ್ಬರೂ ಬರೆಯುವಷ್ಟನ್ನು ಬರೆದು ಮುಗಿಸಿದ್ದರು. ಬರೆಯುವುದಕ್ಕೆ ಅಂತ್ಯವೆಲ್ಲಿ!?
ಬರೆಯಲು ಕುಳಿತರೆ ಬದುಕೂ ಮುಗಿಯಬಹುದು; ಬರವಣಿಗೆ ಮುಗಿಯುವುದೇ ಇಲ್ಲ.
ಆತ್ಮ ಸಂವೇದನಾಳ ಪಕ್ಕದಲ್ಲಿ ಕುಳಿತಿದ್ದ. ಭುಜಕ್ಕೆ ಭುಜ,ಕೈಲಿ ಕೈ ಸೇರಿಸಿ ಕುಳಿತಿದ್ದರು. ಮನಸ್ಸು ಯಾವಾಗಲೂ ಸೇರಿಕೊಂಡೆ ಇದ್ದದ್ದು. ಮೊದಲ ದಿನದ ಮುಗ್ಧ ಪ್ರೀತಿ ಮನೆ ಮಾಡಿತ್ತು. ಇವಳು ನನಗಿಂತ ಚೆನ್ನಾಗಿ ಬರೆಯಬಳ್ಳಲು ಎಂದುಕೊಂಡಿದ್ದ ಆತ್ಮ. ಹಾಗೆ ಬರೆದಿದ್ದಳು ಕೂಡ.
“ಆತ್ಮ, ಏನೋ ಹೇಳಲೇ!?” ಪ್ರಶ್ನೆಯಾದಳು ಸನಾ.
“ನಿನಗೆ ನನ್ನೆದೆಯ ಬಾಗಿಲು ಯಾವಾಗಲೂ ತೆರೆದೇ ಇರುತ್ತದೆ” ಕೈಗಳ ಮೇಲೆ ಸಿಹಿಮುತ್ತನಿಟ್ಟ.
“ನೀನು ನನ್ನ ಮಾತಿಗೆ ಆ ಯುದ್ಧದ ಭಾಗವನ್ನು ಬರೆದೆ. ನಿನ್ನ ಮನದಾಳದ ಬಯಕೆಯಲ್ಲ. ಅದು ನನ್ನ ಒತ್ತಾಯಕ್ಕೆ ಬರೆದಿರುವುದು ಅಷ್ಟೆ”
“ಹಾಗೇನಿಲ್ಲ” ಅವಳ ಕಣ್ಣುಗಳಲ್ಲಿ ಕಣ್ಣು ಸೇರಿಸದೆ.
“ಈಗ ಹೇಳು ಆತ್ಮ, ಕಣ್ಣಲ್ಲಿ ಕಣ್ಣಿಟ್ಟು ಹೇಳು” ಎನ್ನುತ್ತಾ ಮುಖವನ್ನು ಇನ್ನೂ ಹತ್ತಿರ ತಂದಳು.
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಕಷ್ಟ, ಅದೂ ಸುಳ್ಳನಾಡುವಾಗ…..
ಅವಳ ತುಟಿಗೆ ತುಟಿ ಸೇರಿಸಿದ.
“ಆತ್ಮ, ಹೊತ್ತಲ್ಲದ ಹೊತ್ತಲ್ಲಿ ಮಾತು ಮರೆಸುವ ರೀತಿ” ಎಂದು ಗುನುಗಿಕೊಳ್ಳುತ್ತಲೇ ಕಳೆದು ಹೋದಳು. ಅವಳ ಕಂಗಳು ಅರ್ಧ ಮುಚ್ಚಿದ್ದವು. ಅವನ ತುಟಿಗಳಲ್ಲಿ ಅದೇನೋ ಸೆಳೆತವಿದೆ ಎಂದುಕೊಳ್ಳುತ್ತಿದ್ದಳು. ಆತ್ಮ ತುಟಿಗೆ ತುಟಿ ಸೇರಿಸಿದರೆ ಉಸಿರಾಡುವುದು ಮರೆತು ಹೋಗುತ್ತಿತ್ತು.
ಕಾಮದಾಟದ ಕ್ರಿಯೆಗಳು, ಪ್ರೇಮದ ಪರಾಕಾಷ್ಟೆಗಳು, ಅವನನ್ನು ದೂರ ತಳ್ಳಿ “ಹೇಳು ಆತ್ಮ…” ಎಂದು ಮುದ್ದು ಮಗುವಿನಂತೆ ಹಠ ಮಾಡತೊಡಗಿದಳು.
ಆತ್ಮ ಅಲ್ಲೇ ಎದುರಿನಲ್ಲಿದ್ದ ಆತ್ಮ ಸಂವೇದನಾ ಪ್ರತಿ ನೋಡಿದ. ಅದರ ಪುಟಗಳನು ಯಾರೋ ಓದುತ್ತಿರುವಂತೆ ಒಂದರ ನಂತರ ಇನ್ನೊಂದು ತೆರೆದು ಮುಚ್ಚುವ ಆಟ ನಡೆದಿತ್ತು. ಗಾಳಿಯ ಕೆಲಸವಿರಬೇಕು ಎಂದುಕೊಂಡ ಆತ್ಮ.
“ನೀನು ಹೇಳುವುದು ನಿಜವೇ ಸನಾ, ನಾನದನ್ನು ಅಷ್ಟು ಸೂಕ್ಷ್ಮವಾಗಿ ಬರೆದಿಲ್ಲ. ಅದಕ್ಕೂ ಕಾರಣವಿದೆ.” ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು ನೋಡಿದ.
ಸನಾ ಆತ್ಮನ ಸಂಗಾತಿ. “ಆತ್ಮ, ನಿನ್ನ ಬಳಿ ಎಲ್ಲದಕ್ಕೂ ಉತ್ತರವಿರುತ್ತದೆ. ಆದರೆ ತಪ್ಪು ತಪ್ಪೇ.” ನಿನ್ನನ್ನು ಅರ್ಥ ಮಾಡಿಕೊಂಡಿರುವೆ ಎಂಬಂತೆ ಮಾತನಾಡಿದಳು.
“ನಾನು ಹೇಳುವುದನ್ನು ಪೂರ್ತಿಯಾಗಿ ಕೇಳು ಸನಾ. ಇದು ಕಾದಂಬರಿಯಲ್ಲ, ಬದುಕು. ಜನರಿಗೆ ಥ್ರಿಲ್, ಸಸ್ಪೆನ್ಸ್ ನೀಡಲು ನಾನಿದನ್ನು ಬರೆದಿಲ್ಲ. ಇದು ಬದುಕುವ ನೀತಿ ತಿಳಿಸುವ ಪುಟ್ಟ ಪ್ರಯತ್ನ. ಪ್ರತಿಯೊಬ್ಬರ ಅಂತರಂಗಕ್ಕೆ ಹಿಡಿಯುವ ಕನ್ನಡಿ. ಕಾಣುವ ಪ್ರತಿಬಿಂಬ ನನ್ನೊಳಗಿನ ಆತ್ಮದ್ದು, ಸ್ವಂತ ಅಸ್ತಿತ್ವದ್ದು.
ಇದು ನಿರಂತರ ಸತ್ಯದೆಡೆಗಿನ ಮಹಾಪಯಣ. ನಾನು ವ್ಯತ್ಯಾಸ ತಿಳಿಸಿದೆ. ಮನಸ್ಸು ಹೇಳಿ ಮಾಡುವುದಕ್ಕೂ, ಮನಸ್ಸನ್ನು ಮೀರಿ ಬೇರೆಯವರು ಹೇಳಿರುವುದನ್ನು ಕೇಳಿ ಮಾಡುವುದಕ್ಕೂ ಇರುವ ವ್ಯತ್ಯಾಸ ತೋರಿಸಿದೆನಷ್ಟೆ.
ಓದುಗ ತಿಳಿಯಬೇಕಾದದ್ದು ಹಲವಾರಿದೆ. ಕೇವಲ ಮನಸ್ಸಿನ ಸುಖಕಾಗಿ ಓದದೆ ಮನಸ್ಸಿನ ತೃಪ್ತಿಗಾಗಿ, ಆತ್ಮ ತೃಪ್ತಿಗಾಗಿ ಓದಬೇಕು ಮನುಷ್ಯ. ಆಗ ನಾನೇಕೆ ಹೀಗೆ ಬರೆದೆನೆಂದು ಅರಿವಾಗುತ್ತದೆ.
ಬರೀ ಸಮಯ ಕೊಳ್ಳುವ ಕ್ರಿಯೆಯಲ್ಲ ಓದು. ಅದೊಂದಿಷ್ಟು ಅದ್ಭುತ ಕ್ಷಣಗಳು.”
ಸಂವೇದನಾ ಮರುಳಾದಳು. ಏನು ಹೇಳಬೇಕೆಂದೇ ತಿಳಿಯಲಿಲ್ಲ. ಮೌನಿಯಾದಳು.
“ನೋಡಿದೆಯಾ ಮಾತಿಲ್ಲದೆ ಕುಳಿತೆ? ನಿಲ್ಲದೇ ಮೇಲೆ ಬಿದ್ದು ಕಾಡಿಸುವೆ” ಎಂದು ಕೂಗಿಸಿದ.
ಪುಸ್ತಕದ ಪ್ರತೀ ಹಾಳೆಯೂ ಗಾಳಿಯೊಂದಿಗೆ ಆಡಿದಂತೆ ಕಾಣುತ್ತಿತ್ತು. ತೆರೆದು ಮುಚ್ಚುವ ಆಟ ನಡೆಯುತ್ತಲೇ ಇತ್ತು. ಕೊನೆಯ ಪುಟವೂ ಮಗುಚಿ ನಿಂತಿತು. ಆತ್ಮ ಅದನ್ನು ಗಮನಿಸುತ್ತಲೇ ಇದ್ದ.
ಇಂಪಾದ ಸಂಗೀತ. ಆತ್ಮ ಒಮ್ಮೆ ಮಾತ್ರ ಕೇಳಿದ್ದ ಅದನ್ನು. ಪಕ್ಕ ತಿರುಗಿ ನೋಡಿದ. ಸನಾ ನಿದ್ರೆಗೆ ಜಾರಿದ್ದಳು.
ಜೀವದೊಳಗೊಂದು ಮಗು, ಮುಖದಲ್ಲಿ ತಾಯಿಯ ಕಳೆ ಲಾಸ್ಯವಾಡುತ್ತಿತ್ತು.
“ಆತ್ಮಾ” ಅದೇ ಧ್ವನಿ. ಆತ್ಮ ಆ ಧ್ವನಿಯನ್ನು ಎಂದಿಗೂ ಮರೆಯಲಾರ. ಯಾರಿಗೂ ಕೇಳಿಸಲಾರದು; ಕೇಳಿದವರು ಮರೆಯಲಾರರು. ಸುದೀರ್ಘ ಐದು ವರ್ಷಗಳ ನಂತರ ಕೇಳುತ್ತಿದ್ದ. ಆತ್ಮನ ಕಂಗಳು ಕಂಬನಿಯ ಕಡಲಾಯಿತು. “ನೀನು ಅಂದಿಗೂ, ಇಂದಿಗೂ ಸ್ವಲ್ಪವೂ ಬದಲಾಗಿಲ್ಲ” ಎಂದಿತು ಆ ಧ್ವನಿ. “ಅದರ ಅವಶ್ಯಕತೆಯೂ ನನಗಿಲ್ಲ ವಿಶಿ, ಅವೆಷ್ಟೋ ದಿನಗಳ ನಂತರ ನನ್ನೆದುರು!! ಹೇಗೆ ನೆನಪಾದೆ??” ಮತ್ತೆ ಬಿಕ್ಕಿದ.
ಎದುರಿಗಿದ್ದಿದ್ದರೆ ಬಿಗಿದಪ್ಪಿ ಬಿಕ್ಕಿ ಬಿಡುತ್ತಿದ್ದನೆನೋ ಆತ್ಮ. ತಬ್ಬಿಕೊಳ್ಳುವಿಕೆ ಭರವಸೆಯ ಹಿಡಿತ. ನೋವುಗಳು ಎದುರಿನವರ ಎದೆಯಲ್ಲಿ ಒಮ್ಮೆ ಕಳೆದುಹೋಗುತ್ತದೆ. ಬದುಕನ್ನೇ ಜಯಿಸಿದಷ್ಟು ನಿರಾಳ.
ವಿಶ್ವಾತ್ಮ ನಕ್ಕ, “ನಾನು ನಿನ್ನ ನೆನಪಾಗಿ ಬಂದಿಲ್ಲ. ಬರಲಿರುವ ಮುದ್ದು ಕಂದನಿಗೆ ಬದುಕುವ ನೀತಿ ತಿಳಿಸಲು ಬಂದೆ..” ಆತ್ಮನ ಮುಖದಲ್ಲಿ ಮಂದಹಾಸ ಮೂಡಿತು. ಭೂಮಿಯ ಪ್ರತೀ ಜೀವಿಗೂ ಬದುಕುವ ನೀತಿ ಹೇಳುತ್ತಾನೆ ವಿಶ್ವಾತ್ಮ.
“ನೀನು ಬರೆದಿರುವುದನ್ನೆಲ್ಲ ಓದಿದೆ ಆತ್ಮ. ನಡೆದಿರುವುದನ್ನೆಲ್ಲ ಇರುವಂತೆಯೇ ಬರೆದಿರುವೆ, ಬದುಕಾಗಿರುವೆ. ಆದರೆ ಇದು ಅಸಂಪೂರ್ಣ.” ಎಂದ.
ಆತ್ಮ ಹೇಗೆಂದು ಕೇಳುವ ಮುನ್ನವೇ ಮುಂದುವರೆಸಿದ.
“ಸಂಬಂಧಗಳು ಹೇಗೆ ನಾಶವಾದವೆಂದು ಬರೆದಿರುವೆ. ಈ ಸಂಬಂಧಗಳು ಎಲ್ಲಿಂದ ಪ್ರಾರಂಭವಾದವು ಗೊತ್ತಾ? ಅದನ್ನು ಮರೆತಿರುವೆ. ಎಲ್ಲವೂ ಸಜೀವಿಗಳೇ. ಸಜೀವ, ನಿರ್ಜೀವ ಮನುಷ್ಯನ ಕಲ್ಪನೆಗಳಲ್ಲಿ ಮಾತ್ರ ಎಂದಿರುವೆ. ಆದರೆ ಅವೆಲ್ಲ ಎಲ್ಲಿಂದ ಮೊದಲ್ಗೊಂಡಿವೆ ತಿಳಿದಿದೆಯಾ!?
ಕತ್ತಲು ಮತ್ತು ಬೆಳಕಿನ ಯುದ್ಧ ಎಂದೆ. ಅದು ಏಕೆ ಪ್ರಾರಂಭವಾಯಿತು ಎಂದು ಬರೆದಿಲ್ಲ. ಯಾಕೆ!??” ಕೇಳಿದ ವಿಶ್ವಾತ್ಮ.
ಕುತೂಹಲಗಳು ಸ್ವಂತ ಬದುಕಿನೆಡೆಗೂ ಆಕರ್ಷಣೆ ಹೆಚ್ಚಿಸುತ್ತದೆ.
ಆತ್ಮನ ಬಳಿ ಇದ್ಯಾವುದಕ್ಕೂ ಉತ್ತರವಿಲ್ಲ. ಆತ್ಮ ಬರೆಯಲು ಹೇಗೆ ಸಾಧ್ಯ? ಸ್ವತಃ ಆತ್ಮನಿಗೆ ಯಾವುದೂ ತಿಳಿದಿರಲಿಲ್ಲ. ಅದನ್ನು ಒಪ್ಪಿಕೊಂಡ ಆತ್ಮ.
ತಪ್ಪುಗಳನ್ನು ಒಪ್ಪಿಕೊಳ್ಳುವುದರಲ್ಲಿ ಬದುಕಿದೆ;
ಸರಿಗಳನ್ನು ಸಮರ್ಥಿಸಿಕೊಳ್ಳುವುದರಲ್ಲಿಯೂ ಅದೇ.
“ನಿನಗೆ ಅವುಗಳನ್ನೆಲ್ಲ ತಿಳಿಸಿದರೆ ಬರೆಯುತ್ತೀಯಾ? ನಾನು ಹೇಳಿದೆನೆಂದು  ಬರೆಯುವುದು ಬೇಡ. ನಿನ್ನ ತೃಪ್ತಿಗಾಗಿ ಬರೆಯುವೆಯಾ??” ಕೇಳಿದ ವಿಶ್ವಾತ್ಮ.
ಆತ್ಮ ಹಿಗ್ಗಿದ. ತಿಳಿದುಕೊಳ್ಳಲು ಎಂದಿಗೂ ಸಿದ್ಧ. ಅದು ವಿಶ್ವಾತ್ಮನಿಗೂ ತಿಳಿದಿರುವುದೇ. ತಿಳುವಳಿಕೆ ಬದುಕನ್ನು ವಿಸ್ತರಿಸುತ್ತದಂತೆ. ಬದುಕು ಬದುಕಿನ ದಿನಗಳನ್ನು ಸಾರ್ಥಕತೆಯೆಡೆಗೆ ಕರೆದು ಸಾಗುತ್ತದೆ. ಆತ್ಮ ಮತ್ತೆ ಬರೆಯಲಾರ. ಈ ಪುಟ್ಟ ಪ್ರಯತ್ನ ಇಲ್ಲಿಗೇ ಮುಗಿಯಬೇಕು.
“ಇದು ಆತ್ಮ ಸಂವೇದನಾ. ನೀನು ಹೇಳುತ್ತಿರುವುದು ವಿಶ್ವದ ಬಗ್ಗೆ, ವಿಶ್ವಾತ್ಮಗಳ ಬಗ್ಗೆ. ಅದನ್ನು ಬೇರೆಯೇ ಬದುಕಾಗಿಸುತ್ತೇನೆ” ಎಂದು ನಿರಾಳವಾದ.
ವಿಶಾತ್ಮನೂ ಒಪ್ಪಿಕೊಂಡ. “ನನಗೆ ಸಮಯವಾದಾಗಲೆಲ್ಲ ನಿನಗೆ ಹೇಳುತ್ತೇನೆ. ನಿನ್ನ ಮಗುವಿಗೆ ಬದುಕುವ ನೀತಿ ತಿಳಿಸಬೇಕು ಈಗ.”
“ಹಾಗಾದರೆ ನನ್ನ ಮಗು ಹುಟ್ಟಿದ ಮರುಕ್ಷಣ ಅಳುವುದಿಲ್ಲವೇ!?” ಕೇಳಿದ ಆತ್ಮ.
ವಿಶ್ವಾತ್ಮ ನಕ್ಕ. “ಬದುಕುವ ನೀತಿ ತಿಳಿದರೂ, ತಿಳಿಯದಿದ್ದರೂ ಹುಟ್ಟಿದ ಕೂಡಲೇ ಮಗು ಅಳುತ್ತದೆ ಆತ್ಮ. ಅದೂ ಒಂದು ಪ್ರಚೋದನೆ. ಪ್ರಕೃತಿಯಲ್ಲಿ ಹೊಸದೊಂದು ಜೀವ ಉಸಿರಾಯಿತು ಎನ್ನಲು ಪ್ರಚೋದನೆ. ತಾಯಿಯ ಎದೆಯ ಕುಂಭಗಳಲ್ಲಿ ಹಾಲು ಜಿನುಗಲು ಒಂದು ಪ್ರಚೋದನೆ.”
“ಹಾಗಾದರೆ ಹುಟ್ಟಿದ ಮಗುವಿಗೆ ಬದುಕುವ ನೀತಿ ತಿಳಿದಿದೆಯೋ ಇಲ್ಲವೋ ತಿಳಿಯುವುದು ಹೇಗೆ?” ಎಂದು ಗೊಂದಲಗೊಂಡ  ಆತ್ಮ.
ವಿಶ್ವಾತ್ಮ ನಗುತ್ತಲೇ ಇರುತ್ತಾನೆ. ಮನುಷ್ಯ ವಿಶ್ವಾತ್ಮನಾಗಲಾರ ಅದಕ್ಕೇ.
“ಅದು ನಿನಗೆ ತಿಳಿಯುವುದು ಬೇಡ. ಸುತ್ತಲಿನ ಪ್ರಕೃತಿಗೆ ತಿಳಿದರೆ ಸಾಕು.”
“ನಿನ್ನ ಮಗುವಿನ ಹೆಸರೇನು ಆತ್ಮ?”
“ಆತನಿಗೆ ಹೆಸರೇ ಇಲ್ಲ. ಆತನನು ಪರಿಧಿಯಿಲ್ಲದೆ ಬೆಳೆಸುತ್ತೇವೆ” ಎಂದ.
“ಗುರುತಿಸಲಾದರೂ ಒಂದು ಹೆಸರು ಬೇಕಲ್ಲವೇ?’ ಉಸುರಿದ ವಿಶ್ವಾತ್ಮ. ಪರಿಧಿಯಿಲ್ಲದೇ ಬೆಳೆಸುತ್ತೇವೆ ಎನ್ನುತ್ತಾನೆ ಆತ್ಮ. ‘ಬೆಳೆಸುತ್ತೇನೆ’ ಎಂಬುದೇ ಪರಿಧಿ.
ಸೂಕ್ಷ್ಮತೆಗಳು ಆತ್ಮನಿಗೂ, ವಿಶ್ವಾತ್ಮನಿಗೂ ಇರುವ ದಿಗಂತದಂಚು. ಬೇರೆ ಎಂಬ ಭಾವ ಹುಟ್ಟಿಸುವುದು ಒಂದಾದ ಜಾಗದಿಂದಲೇ.
“ಹೆಸರಿಡಬೇಕು ಎಂದಾದರೆ!? ಗಂಡಾದರೆ? ಹೆಣ್ಣಾದರೆ?” ಕೇಳಿದ ವಿಶ್ವಾತ್ಮ.
“ಹೆಣ್ಣಾದರೂ, ಗಂಡಾದರೂ ಒಂದೆ ಹೆಸರು. ವಿಶ್ವದ ಅತಿ ದೊಡ್ಡ ಶಕ್ತಿ. ಪ್ರತಿಯೊಬ್ಬರ ಉಸಿರಲ್ಲಿ ಉಸಿರಾದ ಅಭೂತ ಚೇತನದ್ದು” ಎಂದ ಆತ್ಮ.
ವಿಶ್ವಾತ್ಮ ಅರ್ಥವಾದರೂ ಕೇಳಿದ “ಅಂದರೆ!!??”
“ಸಮಯ.”
“ಹೆಣ್ಣಾಗಲಿ, ಗಂಡಾಗಲಿ ಅನ್ವಯಿಸುವ ಹೆಸರು ಸಮಯ” ಪುನರುಚ್ಚರಿಸಿದ ಆತ್ಮ.
“ಕರೆಯಲೊಂದು ಹೆಸರು.
ಹೆಸರು ಬದುಕಿನ ಮೊದಲ ಉಸಿರು.
ಅದು ಸ್ಪಷ್ಟವಾಗಿರಬೇಕು ಆಗ ನಿರಾಳ.
ಹಾಗಾದರೆ ನಿನ್ನ ಮುಂದಿನ ಪುಸ್ತಕದ ಹೆಸರು!!?”
“ಅದರ ಬಗ್ಗೆ ನಾನಿನ್ನೂ ಯೋಚಿಸಿಯೇ ಇಲ್ಲ. ನೀನು ಎಲ್ಲವನ್ನೂ ಹೇಳಿದ ಮೇಲೆ ಅದಕ್ಕೊಂದು ಹೆಸರು, ಉಸಿರು. ಯಾರಿಗೆ ತಿಳಿದಿದೆ ಹೆಸರಿಲ್ಲದೆಯೂ ಬದುಕಾಗಬಹುದು” ಎಂದ ಆತ್ಮ.
ಮುಗುಳ್ನಗುತ್ತಲೇ ವಿಶ್ವಾತ್ಮ ಸಂವೇದನಾಳ ಕಡೆ ನೋಡಿದ. ಪ್ರಶಾಂತ ಮುಖಮುದ್ರೆ. ಒಲಿದು ನಿಂತ ನಿದ್ರಾದೇವಿ. ಆತ್ಮ ನೋಡುತ್ತಲೇ ಇದ್ದ. ವಿಶ್ವಾತ್ಮ ಸಂವೇದನಾಳ ದೇಹದಲ್ಲಿ ಕರಗಿಹೋದ. ಸಂಗಿತದ ಅಲೆಯೂ ನಿಂತಿತು.
ಅವಳ ಹೊಟ್ಟೆಯ ಮೇಲೆ ಕೈಯಾಡಿಸಿದ ಆತ್ಮ. ಮಗು ಅತ್ತಿಂದಿತ್ತ ಚಲಿಸುತ್ತಿತ್ತು. ಆತ್ಮನ ಮುಖದಲ್ಲಿ ತೃಪ್ತಿಯ ನಗು ಮೂಡಿತು.
ಪ್ರತಿ ತಂದೆ ತಾಯಿಗೂ ಹುಟ್ಟುವ ಹೊಸ ಜೀವ ತೃಪ್ತಿಯ ಸಂಕೇತ ಎಂದುಕೊಂಡ.
ಸನಾಳ ಮುಚ್ಚಿದ ಕಂಗಳ ಮೇಲೆ, ತೆರೆದ ಹಣೆಯ ಮೇಲೆ ಸಿಹಿ ಮುತ್ತನಿಟ್ಟ. ನಿದ್ರೆಯಲ್ಲೂ ಆತನ ಇರುವು  ತಿಳಿದವಳಂತೆ ಆತನ ಕೈ ಅದುಮಿದಳು ಸನಾ.
ಇದು ಆತ್ಮನ ಮನಸ್ಸಿಗೆ ಸಂವೇದನೆ.
ಸಂವೇದನಾಳ ಆತ್ಮಕ್ಕೆ ತೃಪ್ತಿ.
“ಆತ್ಮ ಸಂವೇದನಾ”
ಹೊಟ್ಟೆಯೊಳಗಿನ ಮಗು ವಿಶ್ವಾತ್ಮನಿಗೆ “ಯಾರು ನೀನು?” ಎಂದು ಪ್ರಶ್ನಿಸಿತು.
ಪ್ರಶೆಗಳು ಯಾರನ್ನೂ ಬಿಟ್ಟಿಲ್ಲ;
ಉತ್ತರಗಳು ಎಲ್ಲರಿಗೂ ಸಿಗುವುದಿಲ್ಲ.
ಮಗುವಿನಂತೆ ನಕ್ಕ ವಿಶ್ವಾತ್ಮ.
“ಕೇಳು ಹೇಳುತ್ತೇನೆ..” ಪಿಸು ನುಡಿದ ವಿಶ್ವಾತ್ಮ.
ಮುಗಿಯಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!