ಪ್ರೀತಿ – 2
ಪ್ರೀತಿ ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದಳು..ಅಪಘಾತವಾದಾಗ ಅಲ್ಲಿದ್ದವರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರು.ಅದೃಷ್ಟವಶಾತ್ ಅವಳ ಪ್ರಾಣ ಅಪಾಯದಿಂದ ಪಾರಾಗಿತ್ತು…ಆದರೆ ತಲೆಗೆ ಬಿದ್ದ ಏಟಿನಿಂದಾದ ನೋವಿನಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ…ಅವಳಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟಿದ್ದರು ವೈದ್ಯರು…ಅವಳ ಕಾಲಿನ ಮೂಳೆ ಪುಡಿ ಪುಡಿಯಾಗಿತ್ತು.ವೈದ್ಯರು ಪ್ರೀತಿಯ ಬಲಗಾಲು ತೆಗೆಯಲೇಬೇಕು ಇಲ್ಲದಿದ್ದರೆ ಇನ್ಪೆಕ್ಷನ್ ಆಗುವ ಸಂಭವವಿದೆ ಎಂದಾಗ ತಂದೆ ಕಣ್ಣೀರು ಹಾಕುತ್ತ ಒಪ್ಪಿಕೊಂಡಿದ್ದರು…ಜಿಂಕೆಯಂತೆ ಮನೆ ತುಂಬ ಓಡಾಡಿಕೊಂಡಿದ್ದ ಮಗಳಿಗೆ ಕಾಲೇ ಇಲ್ಲವಾಯಿತಲ್ಲ….ಎಂದು ಅವಳ ತಾಯಿ ಕಣ್ಣೀರು ಹಾಕುತ್ತಿದ್ದರು …ಆದಿಯ ದುಃಖವಂತೂ ಹೇಳತೀರದಾಗಿತ್ತು …ಒಂದು ದಿನದ ನಂತರ ಪ್ರೀತಿ ಸ್ವಲ್ಪ ಸ್ವಲ್ಪವಾಗಿ ಕಣ್ಣು ತೆರೆದಾಗ ಅವಳಗೆ ಕಂಡಿದ್ದು ದುಃಖತಪ್ತರಾದ ತಂದೆ, ತಾಯಿ ,ಅಣ್ಣ…ಅವಳ ಗೆಳತಿಯರೆಲ್ಲ ಬಂದು ಅವಳನ್ನು ನೋಡಿ, ಅವಳ ತಂದೆ ತಾಯಿ ಅಣ್ಣನಿಗೆ ಸಮಾಧಾನ ಹೇಳಿ ಹೋಗಿದ್ದರು…ಅವಳೇ ಕ್ಷೀಣ ಸ್ವರದಲ್ಲಿ “ಯಾಕಮ್ಮ ಅಳ್ತಿಯಾ? ಬೇಗ ಹುಷಾರಾಗ್ತಿನಿ ಬಿಡು..”ಎಂದು ಏಳಲು ಪ್ರಯತ್ನಿಸಿದಾಗ ಬಲಗಾಲು ವಿಪರೀತ ನೋವೆನಿಸಿತು.ಅವಳಪ್ಪ “ಇನ್ನೂ ಸ್ವಲ್ಪ ಹೊತ್ತು ರೆಸ್ಟ್ ತಗೋ ಚಿನ್ನು….ಆಮೇಲೆ ಏಳುವಂತೆ” ಎಂದಾಗ “ಇಲ್ಲ ಸ್ವಲ್ಪ ಹೊತ್ತು ಎದ್ದು ಕೂರುತ್ತೇನೆಂದು ಹಠ ಹಿಡಿದಳು ಪ್ರೀತಿ. ಪ್ರೀತಿಗೆ ಏಳಲು ಅವಳಣ್ಣ ಸಹಾಯ ಮಾಡಿದ.ಎದ್ದು ಹೊದಿಕೆಯನ್ನು ತೆಗೆದಾಗ ಅರ್ಧ ಬಲಗಾಲೇ ಇಲ್ಲ ! ಜೋರಾಗಿ ಚೀರಿ ಮೂರ್ಛೆ ಹೋದಳು ಪ್ರೀತಿ..ವೈದ್ಯರ ಆರೈಕೆಯ ನಂತರ ಕಣ್ಣು ಬಿಟ್ಟಿದ್ದಳು.ಅವಳ ಕಣ್ಣೀರು ನಿಂತಿರಲಿಲ್ಲ …ಅತ್ತು ಅತ್ತು ಸುಸ್ತಾಗಿದ್ದಳು ಪ್ರೀತಿ..ವೈದ್ಯರಿಂದ ಹಿಡಿದು ಎಲ್ಲರಿಗೂ ಅವಳನ್ನು ಸಮಾಧಾನ ಪಡಿಸುವುದರಲ್ಲಿ ಸಾಕು ಸಾಕಾಗಿತ್ತು.ಎಲ್ಲರೂ ಅವಳಿಗೆ ಧೈರ್ಯ ಹೇಳಿದ್ದರು.ಎಂಟು ದಿನಗಳಲ್ಲಿ ಕಾಲಿಲ್ಲದೆ ಬದುಕುವ ಅನಿವಾರ್ಯತೆಗೆ ಒಗ್ಗಿಕೊಂಡು ಸ್ವಲ್ಪ ಸುಧಾರಿಸಿದ್ದಳು ಪ್ರೀತಿ.ಇತ್ತ ಮನೆ ತಲುಪಿದ ಪ್ರೇಮ್ ಅವಳಿಗಿನ್ಯಾವತ್ತೂ ಕರೆ,ಸಂದೇಶ ಮಾಡಬಾರದೆಂಬ ಗಟ್ಟಿ ನಿರ್ಧಾರ ಮಾಡಿದ್ದ.”ಎಂಟು ದಿನಗಳಾದರೂ ಅವಳು ಮಾಡಿದ ಘನಕಾರ್ಯಕ್ಕೆ ಕ್ಷಮೆ ಕೇಳುವ ಸೌಜನ್ಯವನ್ನೂ ತೋರಲಿಲ್ಲವಲ್ಲಾ..ಎಷ್ಟು ಕೊಬ್ಬಿವಿವಳಿಗೆ ! ಈ ಹುಡುಗಿಯರೇ ಇಷ್ಟು ಛೇ! “ಎಂದುಕೊಂಡು ಸುಮ್ಮನಾಗಿದ್ದ.ಆದರೂ ಅವಳ ಮಧುರ ಧ್ವನಿ ಮಾತ್ರ ಅವನ ಕಿವಿಗಳಲ್ಲಿ ಮಾರ್ದನಿಸಿತ್ತು.
ಪ್ರೀತಿಗೀಗ “ನಾನು ಅವನನ್ನು ಅಷ್ಟು ದೂರದಿಂದ ಕರೆಸಿ ನಾನು ಹಾಗೆ ಮಾಡಬಾರದಿತ್ತು “ಎಂದೆನಿಸಿತು ..ಮೊದಲ ಬಾರಿಗೆ ತನ್ನ ಬೇರೆಯವರನ್ನು ಕಾಡಿಸಿ ಮೋಜು ನೋಡುವ ಕೆಟ್ಟತನದ ಬಗ್ಗೆ ಅಸಹ್ಯವೆನಿಸಿತ್ತು ಅವಳಣ್ಣನನ್ನು ತನ್ನ ಮೊಬೈಲ್ ಕೇಳಿದಳು , “ಪ್ರೇಮ್ ಎನ್ನುವವರು ಕರೆ ಮಾಡಿದ್ದರಾ?” ಎಂದು ವಿಚಾರಿಸಿದಳು. ನಕಾರಾತ್ಮಕ ಉತ್ತರ ಸಿಕ್ಕಿತು ಅವಳಣ್ಣನಿಂದ..ಆದಿ ,ಎಪ್ಪತ್ತೆರಡು ತಪ್ಪಿದ ಕರೆಗಳನ್ನು ನೋಡಿ ದಂಗಾಗಿದ್ದ…ಹಾಗೇ “ಗೆಟ್ ಲಾಸ್ಟ್ , ಗೋ ಟು ಹೆಲ್ ,ಗುಡ್ ಬೈ” ಎನ್ನುವ ಸಂದೇಶವನ್ನೂ… …ಈ ಬಗ್ಗೆ ಪ್ರೀತಿಯನ್ನು ಕೇಳಿದಾಗ ಅವಳು ಅಳಲಾರಂಭಿಸಿದಳು…ಎಲ್ಲವನ್ನೂ ಆದಿಗೆ ವಿವರಿಸಿದ ಪ್ರೀತಿ “ನಾನವನ ಭಾವನೆಗಳ ಜೊತೆ ಆಟವಾಡಬಾರದಾಗಿತ್ತು…ದೇವರು ಅದಕ್ಕೇ ನನಗೆ ಈ ಶಿಕ್ಷೆ ಕೊಟ್ಟಿದ್ದಾನೆ…ನಾನವನನ್ನ ನೋಡದೇ ಪ್ರೀತಿಸಿದೆ ..ಆದರೆ ಹೇಳಲಿಲ್ಲ. ಅದೂ ಒಳ್ಳೆಯದೇ ಆಯಿತು ..ಒಂದು ಕಾಲಿಲ್ಲದ ಕುಂಟಿ ನಾನು..ಆದರೆ.. ಅಣ್ಣಾ ನಾನೊಂದು ಬಾರಿ ಅವನನ್ನು ನೇರವಾಗಿ ಭೇಟಿಯಾಗಿ ಕ್ಷಮೆ ಕೇಳಬೇಕು…ಫೋನ್ ಕೊಡು ಅವನಿಗೆ ಕಾಲ್ ಮಾಡುತ್ತೇನೆ” ಎಂದು ಫೋನ್ ತೆಗೆದುಕೊಂಡು ಪ್ರೇಮ್ ಗೆ ಕರೆ ಮಾಡಿದಳು ..ಪ್ರೇಮ್ ಮಾತ್ರ ಕರೆ ತೆಗೆದುಕೊಳ್ಳಲೇ ಇಲ್ಲ..ಇನ್ನೆಂದಿಗೂ ಅವಳೊಂದಿಗೆ ಮಾತನಾಡಬಾರದೆಂದು ನಿರ್ಧಾರ ಮಾಡಿದ್ದ.ಕರೆ ಮಾಡಿ ಮಾಡಿ ಅಳುತ್ತ ಮಲಗಿದ ತನ್ನ ತಂಗಿಯ ಬಗ್ಗೆ ಅಯ್ಯೋ ಎನಿಸಿತು ಆದಿಗೆ..ಅವಳ ಮೊಬೈಲ್ ತೆಗೆದುಕೊಂಡು ಪ್ರೇಮ್ ನ ನಂಬರ್ ತೆಗೆದುಕೊಂಡು ತನ್ನ ಫೋನಿನಿಂದ ಪ್ರೇಮ್ ಗೆ ಕರೆ ಮಾಡಿದ ..ಪ್ರೇಮ್ ಯಾರದೋ ಹೊಸ ನಂಬರ್ ಎಂದುಕೊಂಡು ಕಾಲ್ ರಿಸೀವ್ ಮಾಡಿದ..”ಹಲೋ ಪ್ರೇಮ್ .ನಾನು ಪ್ರೀತಿಯ ಅಣ್ಣ ಆದಿ…ಪ್ರೀತಿ ಈಗ ಆಸ್ಪತ್ರೆಯಲ್ಲಿದ್ದಾಳೆ. ನಿಮ್ಮನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾಳೆ …ಅವಳು ನಿಮ್ಮ ಭಾವನೆಗಳ ಜೊತೆ ಆಟವಾಡಿದ್ದಾಳೆ ನಿಜ, ಈಗವಳಿಗೆ ಪಶ್ಚಾತ್ತಾಪ ವಾಗಿದೆ ದಯವಿಟ್ಟು ಒಂದು ಸಾರಿ ಆಸ್ಪತ್ರೆಗೆ ಬನ್ನಿ “ಎದಾಗ “ನೀವೂ ಅವಳೊಂದಿಗೆ ಸೇರಿ ಮತ್ತೆ ಆಟವಾಡಿತ್ತಿದ್ದೀರಾ?ಇನ್ನೆಂದೂ ನಾನು ಅವಳಾಟಕ್ಕೆ ಬಲಿಯಾಗುವುದಿಲ್ಲ…ಮತ್ತೆ ಕಾಲ್ ಮಾಡಬೇಡಿ ಗುಡ್ ಬೈ “ಎಂದು ಕೋಪದಿಂದ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ…ಮತ್ತೆ ಸ್ವಿಚ್ ಆನ್ ಮಾಡಿದ್ದು ರಾತ್ರಿಯೇ ..ಸಂದೇಶವೊಂದು ಅದಾಗಲೇ ಮೊಬೈಲ್ ಒಳಗೆ ಬಂದು ಕುಳಿತಿತ್ತು. “ನಾನು ಪ್ರೀತಿಯ ಅಣ್ಣ ನೀವಂದುಕೊಂಡ ಹಾಗೆ ಆಟವಾಡುವವನಲ್ಲ, ಒಂದು ಬಾರಿ ಆಸ್ಪತ್ರೆಗೆ ಬಂದರೆ ನಿಜಸಂಗತಿ ತಿಳಿಯುತ್ತದೆ.ಮನಸಿದ್ದರೆ ಬನ್ನಿ “ಎನ್ನುವ ಸಂದೇಶದ ಜೊತೆ ಆಸ್ಪತ್ರೆಯ ವಿಳಾಸವಿತ್ತು .ಏಕೋ ಹೋಗಬೇಕೆನಿಸಿತು .
ಅಪೀಸಿಗೆ ಕರೆ ಮಾಡಿ ತುರ್ತು ಕಾರ್ಯವಿದೆಯೆಂದು ತಿಳಿಸಿ ರಜೆ ಹೇಳಿ ಆಸ್ಪತ್ರೆಯತ್ತ ಮುಖಮಾಡಿದ. ಆಸ್ಪತ್ರೆಯ ವಿಳಾಸ,ವಾರ್ಡ್ ನಂಬರ್ ಎಲ್ಲಾ ಆ ಸಂದೇಶದಲ್ಲಿದ್ದಿದ್ದರಿಂದ ನೇರವಾಗಿ ಪ್ರೀತಿಯಿರುವ ಕೋಣೆಗೆ ಬಂದ. ಪ್ರೀತಿ ಮುಸುಕು ಹಾಕಿ ಮಲಗಿದ್ದಳು.ಅವಳಣ್ಣ ಅವಳ ಪಕ್ಕದಲ್ಲೇ ಕುಳಿತಿದ್ದ. ಅವಳ ಅಪ್ಪ ಅಮ್ಮ ಮನೆಗೆ ಹೋಗಿದ್ದರು.ಆದಿಗೆ ತಾನೇ ಪ್ರೇಮ್ ಎಂದು ತಿಳಿಸಿದ.ಆದಿ ನಡೆದ ಸಂಗತಿಯನ್ನು ತಿಳಿಸಿದ ಪ್ರೀತಿಯ ಮುಸುಕು ತೆಗೆದ …ಪ್ರೇಮ್ ಗೆ ಶಾಕ್ ! ” ನಾನಿವಳನ್ನು ನೋಡಿದ್ದೇನೆ.ಆದರೆ ಎಲ್ಲಿ ಎಂದು ನೆನಪಾಗುತ್ತಿಲ್ಲ. ಎಲ್ಲಿ?,ಎಲ್ಲಿ?, ಎಂದು ತಲೆ ಕೆರೆದುಕೊಂಡಾಗ ಆ ದಿನ ಪ್ರವಾಹಪೀಡಿತ ಪ್ರದೇಶದ ಜನರಿಗಾಗಿ ಹಣ ಕೇಳಿದವಳು ಇವಳೇ ಅಲ್ಲವೇ? ! ಅಷ್ಟು ಹತ್ತಿರವಿದ್ದರೂ ಅಷ್ಟು ಪ್ರೀತಿಸಿದ ಇವಳು ಗುರುತೇ ಸಿಗಲಿಲ್ಲವಲ್ಲ ಎಂದುಕೊಂಡ ..ಆದಿ ಅವರಿಬ್ಬರನ್ನೂ ಬಿಟ್ಟು ಆಚೆ ನಡೆದಿದ್ದ ..ಪ್ರೀತಿ ಕಣ್ಣು ಬಿಟ್ಟಾಗ ಎದುರಿಗೆ ಪ್ರೇಮ್ ತನ್ನ ಕಣ್ಣುಗಳನ್ನು ತಾನೇ ನಂಬಲಾಗಲಿಲ್ಲ ಅವಳಿಗೆ.ಏನು ಮಾತನಾಡಬೇಕೆಂದು ತಿಳಿಯಲಿಲ್ಲ ಅವಳಿಗೆ.ಮೌನವಾಗಿ ತಲೆ ಬಗ್ಗಿಸಿ ಕೂತಳು.ಪ್ರೇಮ್ ಗೂ ಮಾತೇ ಬರುತ್ತಿಲ್ಲ .”ಪ್ರೀತಿ …”ಎಂದು ಮೆಲ್ಲನೆ ಕರೆದ ಪ್ರೇಮ್. “ತನ್ನ ಹೆಸರು ಇಷ್ಟೊಂದು ಸುಂದರವೇ !ಇವನು ಹೀಗೆ ಜೀವನಪರ್ಯಂತ ನನ್ನ ಹೆಸರನ್ನ ಕರೆಯುವಂತಾದರೆ ಎಷ್ಟು ಚೆನ್ನಾಗಿರುತ್ತದೆ “ಎನಿಸಿತು ಪ್ರೀತಿಗೆ ..ಮರುಕ್ಷಣವೇ ತನ್ನ ಮುರಿದ ಕಾಲು ನೆನಪಾಯಿತು. ಇದ್ದಕ್ಕಿದ್ದಂತೆ ಅವಳ ಮುಖ ಬಾಡಿದ್ದನ್ನ ಕಂಡು “ಏನಾಯಿತು ಪ್ರೀತಿ? ನೀನು ಕಾಡಿಸಿ ಗೋಳು ಹೊಯ್ದುಕೊಂಡ ಪ್ರೇಮ್ …ನಿನ್ನೆದುರಿಗೇ ಇದ್ದೇನೆ ..ಫೋನ್ ನಲ್ಲಿ ಅಷ್ಟು ಮಾತಾಡುತ್ತಿದ್ದೆ ..ಈಗೇನಾಯಿತು? ಮಾತಾಡು ಪ್ರೀತಿ “ಎಂದಾಗ “ನನ್ನನ್ನು ಕ್ಷಮಿಸಿ ಪ್ರೇಮ್…ನಾನು ಆ ದಿನ ನನಗೋಸ್ಕರ ಅಷ್ಟು ದೂರದಿಂದ ಬಂದ ನಿಮ್ಮನ್ನು ಕಾಡಿಸಬಾರದಿತ್ತು ..ನಾನೆಲ್ಲರನ್ನೂ ಕಾಡಿಸಿ ಗೋಳು ಹೊಯ್ದುಕೊಂಡಿದ್ದಕ್ಕಾಗಿ ಆ ದೇವರು ಹೀಗೆ ಮಾಡಿದ, ಜೀವನಪರ್ಯಂತ ಕಾಡಿಸುವುದೆಂದರೆ ಹೀಗೆ….ಎಂದು ಶಿಕ್ಷೆ ಕೊಟ್ಟಿದ್ದಾನೆ” ಎನ್ನತ್ತಿದ್ದಂತೆ ಪ್ರೀತಿಯ ಕಣ್ಣಾಲಿಗಳು ತುಂಬಿದ್ದವು.”ಆದದ್ದಾಯಿತು ಪ್ರೀತಿ ಆಗಿರುವುದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ..ಮುಂದಾಗುವುದನ್ನು ನೋಡೋಣ.ಬಹಳ ದಿನಗಳಿಂದ ನನ್ನ ಮನದಲ್ಲಿ ಹೇಳದೆ ಉಳಿದ ಮಾತೊಂದಿದೆ ಹೇಳಲಾ ?” ಎಂದಾಗ. ಪ್ರೇಮ್, ಪ್ರಶ್ನಾರ್ಥಕವಾಗಿ ನೋಡಿದಳು ” ಪ್ರೀತಿ..ಐ ಲವ್ ಯು ಪ್ರೀತಿ ..ಐ ಲವ್ ಯೂ ಸೋ ಮಚ್ “ಎಂದು ಉದ್ವೇಗದಿಂದ ನುಡಿದಾಗ ಪ್ರೀತಿಯ ದೃಷ್ಟಿ ಅವಳ ಮುರಿದ ಕಾಲಿನತ್ತ ಹೊರಳಿತು.ಅದನ್ನು ಅರ್ಥ ಮಾಡಿಕೊಂಡ ಪ್ರೇಮ್ “ನಾನು ನಿನ್ನ ಕೈ ಹಿಡಿದು ನಡೆಸುತ್ತೇನೆ.. ..ಜೀವನದ ಕೊನೆಯವರೆಗೂ… ದಯವಿಟ್ಟು ಒಪ್ಪಿಕೊ..ನಾನು ನಿನ್ನ ಮುಖ ನೋಡದೆಯೇ ಪ್ರೀತಿಸಿದವನು. ನನ್ನ ಪ್ರೀತಿಗೆ ನಿರಾಶೆ ಮಾಡಬೇಡ”ಎಂದಾಗ ಅವಳ ಮೊಗದಲ್ಲಿ ಮುಗುಳ್ನಗೆ ..ಅವಳೂ ಅವನನ್ನು ನೋಡದೆಯೇ ಪ್ರೀತಿಸಿದ್ದವಳು.
ಪ್ರೀತಿಯ ತಂದೆ ತಾಯಿಗಳು “ಮಗಳ ಕಾಲನ್ನು ಕಿತ್ತುಕೊಂಡ ದೇವರು ಚಿನ್ನದಂತ ಹುಡುಗನನ್ನ ಕೈ ಹಿಡಿಯುವ ಭಾಗ್ಯ ಕೊಟ್ಟಿದ್ದಾನೆ.ಅವಳ ಒಳ್ಳೆಯತನಗಳು ಅವಳನ್ನು ಕೈ ಬಿಡಲಿಲ್ಲ ” ಎಂದುಕೊಂಡರು
ಪ್ರೀತಿ ಪ್ರೇಮ್ ಈಗ ದಂಪತಿಗಳು ..ಪ್ರೀತಿಗೆ ಕೃತಕ ಕಾಲನ್ನು ಜೋಡಿಸಲಾಗಿದೆ ..ಪ್ರೀತಿ ತಾಯ್ತನವನ್ನು ಅನುಭವಿಸಲು ಆಶಿಸಿದಾಗ ಅವಳಿಗೆ ತೊಂದರೆಯಾಗಬಹುದೆಂದು ಪ್ರೇಮ್ ಸಮ್ಮತಿಸಿರಲಿಲ್ಲ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ತೀರ್ಮಾನಿಸಿದ್ದ.ಆದರೆ ಪ್ರೀತಿಯೇ “ನಾನು ಎಲ್ಲ ಹೆಣ್ಣು ಮಕ್ಕಳಂತೆ ತಾಯ್ತನವನ್ನು ಅನುಭವಿಸಬೇಕು.ನಮಗೆ ಗಂಡು ಮಗುವಾದರೆ ಹೆಣ್ಣು ಮಗುವನ್ನು ,ಹೆಣ್ಣು ಮಗುವಾದರೆ ಗಂಡು ಮಗುವನ್ನು ದತ್ತು ತೆಗೆದುಕೊಳ್ಳೋಣ “ಎಂದಾಗ , ಅವಳಾಸೆಗೆ ಅವನಿಗೆ ಅಡ್ಡಿ ಬರಲು ಮನಸ್ಸಾಗಲಿಲ್ಲ.ಮುಂದಿನ ಒಂದು ವರ್ಷದಲ್ಲಿ “ವಾತ್ಸಲ್ಯ “ಎನ್ನುವ ಹೆಣ್ಣು ಮಗುವಿನ ತಾಯಿಯಾದಳು ಪ್ರೀತಿ ..ಅವಳನ್ನು ಬಹಳ ಜತನದಿಂದ ನೋಡಿಕೊಂಡಿದ್ದ ಪ್ರೇಮ್ ..ಗಂಡು ಮಗುವಂದನ್ನು ದತ್ತು ತೆಗೆದುಕೊಂಡು ವಸಂತ್ ಎಂದು ನಾಮಕರಣ ಮಾಡಿದ್ದರು..ಈಗ ಅವಳ ಕಥೆ ಕವನಗಳಿಗೆ ಸ್ಪೂರ್ತಿಯಾಗಿದ್ದಾನೆ ಪ್ರೇಮ್ ..ವಸಂತ್ ವಾತ್ಸಲ್ಯ, ಪ್ರೇಮ್ ನನ್ನು ತಬ್ಬಿ ಮಲಗಿದ್ದಾರೆ..ಪ್ರೀತಿ ಪ್ರೇಮ್ ನ ಮುಖ ನೋಡುತ್ತಿದ್ದಾಳೆ “ಚಿನ್ನದಂತಹ ಪ್ರೇಮ್ ನನ್ನು ನನ್ನ ಗಂಡನಾಗಿ ಕೊಟ್ಟಿದ್ದೀಯಾ ದೇವರೇ…ಅದಕ್ಕಾಗಿ ನಾನೆಷ್ಟು ನಿನಗೆ ಋಣಿಯಾಗಿದ್ದರೂ ಸಾಲದು ..ಪ್ರೇಮ್ ಪ್ರೇಮದ ಹೊಳೆಯನ್ನೇ ಹರಿಸಿಬಿಟ್ಟ…. ..ನೋಡದಯೇ ಪ್ರೀತಿಸಿದ ಪ್ರೀತಿ ನಮ್ಮದು ..ನಾನೆಷ್ಟು ಅದೃಷ್ಟವಂತೆ ..ನಿಜವಾದ ಪ್ರೀತಿಯೆಂದರೆ ಇದಲ್ಲವೇ ? “ಎಂದುಕೊಂಡಳು “ಐ ಲವ್ ಯೂ ಪ್ರೇಮ್ “ಎನ್ನುತ್ತ ಪ್ರೇಮ್ ನ ಹಣೆಗೆ ಮುತ್ತಿಕ್ಕಿದಳು ಪ್ರೀತಿ. “ಐ ಲವ್ ಯೂ ಟು”ಎನ್ನುವ ಮಾತನ್ನು ಪ್ರೇಮ್ ನಿದ್ದೆಗಣ್ಣಲ್ಲಿಯೇ ಪಿಸುಗುಟ್ಟಿದ್ದ..ಪ್ರೀತಿಗೆ ನಿಜವಾದ, ನಿಷ್ಕಲ್ಮಷವಾದ ಪ್ರೀತಿ ಸಿಕ್ಕಿತ್ತು…ಪ್ರೀತಿಯ ಮೊಗದಲ್ಲಿ ಮುಗುಳ್ನಗು ಕಂಡಿತ್ತು.