ಕಥೆ

ನನ್ನ ದೇಶ ನನ್ನ ಜನ -2 (ನಾಗ ನೃತ್ಯ ) 

ನನ್ನ ದೇಶ ನನ್ನ ಜನ -1 

ಭತ್ತದ ಗದ್ದೆಯಲ್ಲಿ ತೋಟ ಮಾಡಿದ್ದರಿಂದ ದಿನಕ್ಕೊಂದು ಸಮಸ್ಯೆ ತಲೆದೋರುತಿತ್ತು. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು, ತಕ್ಷಣವೇ ಅಡಿಕೆಗೆ ಔಷಧಿ ಸಿಂಪಡಿಸಬೇಕಿತ್ತು. ನಾರ್ವೆಯ ನಾಗನಿಗೆ ಹೇಳಿ ಕಳಿಸಿ ಹದಿನೈದು ದಿನವೇ ಆಗಿ ಹೋಗಿತ್ತು, ಅದ್ಯಾವ ಹುತ್ತದಲ್ಲಿ ಅವನು ಅಡಗುತ್ತಾನೋ ದೇವರೇ ಬಲ್ಲ. ಅವ ಅಡಗಿದನೆಂದರೆ ದೇವರಿಗೂ ಅವನು ಸಿಗುವ ಆಸಾಮಿಯಲ್ಲ. ನನ್ನ ತೋಟ ದಿನದಿಂದ ದಿನಕ್ಕೆ ಶೋಚನೀಯ ಸ್ಥಿತಿ ತಲುಪುತ್ತಿತ್ತು. ಎಲ್ಲಿ ಏನೇನು ಆಗಿದೆ ಎಂದು ನೋಡಲು ದಿನವೂ ತೋಟ ಸುತ್ತುವುದು ನನ್ನ ಹವ್ಯಾಸ. ನಿಜ ಹೇಳಬೇಕು ಎಂದರೆ ಅದು ನೆಪ ಮಾತ್ರ, ನಾನು ಪೇಟೆ ಬಿಟ್ಟು ಮಲೆನಾಡಿಗೆ ಬಂದಿದ್ದೇ ಹೇಗೆ ಬೇಕೋ ಹಾಗೆ ಕಾಡು ಅಲೆದುಕೊಂಡು ಯಾವುದೇ ಚಿಂತೆ ಇಲ್ಲದೆ ಬದುಕಬಹುದೆಂದು. 30X40 ಸೈಟಿನಲ್ಲಿ ಮನೆ ಕಟ್ಟಿ ಕಿಟಕಿಗಳನ್ನು ರಸ್ತೆಗೇ ತೆರೆದು ಕುಳಿತುಕೊಳ್ಳುವ ಸಿಟಿಯ ಆ ಯಾಂತ್ರಿಕ ಜೀವನ ನನ್ನಿಂದ ಆಗದು.

ಇಲ್ಲಿ ನನ್ನೆಲ್ಲಾ ಇಂತಹ ಹುಚ್ಚುತನಕ್ಕೆ ಜೊತೆಯಾಗುತ್ತಿದ್ದವನು ನಾಗ. ಅವನ ಬಗ್ಗೆ ‘ಇದಂ ಇತ್ತಂ’ ಎಂದು ಹೇಳುವುದು ಕಷ್ಟ. ಆತ ಹೇಳುವ ಪ್ರಕಾರ ಆತನ ವಯಸ್ಸು ನೂರೈವತ್ತು ವರ್ಷ ಇರಬಹುದು, ನನ್ನಜ್ಜ ಮಗುವಾಗಿದ್ದಾಗಲೇ ಅವನಿಗೆ ಗಡ್ಡ ಬಂದಿತ್ತಂತೆ. ಆದರೆ ಆತ ಗಿಡ-ಮೂಲಿಕೆ ಔಷಧಗಳ ಭಂಡಾರ. ಅವನ ಕೆಲವೊಂದು ಪ್ರಸಂಗಗಳು ನನ್ನ ಮನಸ್ಸಿನಲ್ಲಿ ಇನ್ನೂ ನಗು ತರಿಸುತ್ತವೆ.

ಒಮ್ಮೆ ಅವನು ಕೆಲಸಕ್ಕೆ ಬಂದವನೇ ಬಾಲ ಸುಟ್ಟ  ಬೆಕ್ಕಿನಂತೆ ಆಡುತ್ತಿದ್ದ. ಯಾವಾಗಲೂ ಕಾಪಿ ಎಂದು ಕುಣಿಯುವವನು ಅವತ್ತು ಕಾಪಿಯೇ ಬೇಡ ಎನ್ನುವುದೇ!

“ಏನಾಯ್ತೋ ನಾಗ” ಎಂದರೂ ಬಾಯಿ ಬಿಡುತ್ತಿಲ್ಲ. ನಂತರ ನಿಧಾನವಾಗಿ ಬಾಯಿ ಬಿಡಿಸಿದೆ.

ಪ್ರತಿ ದಿನ ಅವನು ಬೂದಿಯಲ್ಲಿ ಹಲ್ಲು ತಿಕ್ಕುವುದಂತೆ, ಅಂದೂ ಸಹ ಬೆಳಿಗ್ಗೆ ಎದ್ದವನೇ ನಿದ್ದೆಗಣ್ಣಿನಲ್ಲಿ ಬೂದಿಗೆ ಕೈ ಹಾಕಿದನಂತೆ. ಬೂದಿ ಮೇಣ ಮೇಣವಾಗಿ ಅನಿಸಿತಂತೆ. ಮಗಳಿಗೆ ಕೇಳಿದಾಗ

“ಹೊನ್ನೆ ಮರದ್ ಕಟ್ಗೆ ಕಾಣ್ತಿತೆ, ಸುಮ್ನೆ ಹಲ್ ತಿಕ್ಕು” ಎಂದಳಂತೆ. ಹಲ್ಲು ತಿಕ್ಕಿದ ಮೇಲೆ ಬೆಕ್ಕು ಒಲೆಯೊಳಗೆ ಹೇತಿದ್ದು ಕಾಣಿಸಿತಂತೆ. ಆಸಾಮಿ ಎರಡು ದಿನ ಊಟ ಮುಟ್ಟಲಿಲ್ಲ. ಇನ್ನು ಅವನ ಭಾಷೆಯೋ? ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಬಿಡಿ. ಒಮ್ಮೆ ಆತ ಅಡಿಕೆ ಮರ ಹತ್ತಿದ್ದ, ಮೇಲಿನಿಂದ

“ಪಿಂಗ ಕೊಡಿ ಸೋಮಿ” ಎಂದು ಬಡಿದುಕೊಳ್ಳತೊಡಗಿದ. ಅದ್ಯಾವ ಭಾಷೆ ಎಂದು ನನಗೂ ಅರ್ಥವಾಗಲಿಲ್ಲ. ಬಹುಷಃ ಗೂಗಲ್ ಟ್ರಾನ್ಸ್’ಲೇಟರ್ ಸಹ ಇದಕ್ಕೆ ಉತ್ತರ ನೀಡಲಾರದು. ಸಿಟ್ಟಿನಿಂದ ಆತ ಮರದಿಂದ ಇಳಿದು ಬಂದು

“ಏ ಅವಾಗಿಂದ ಕೂಗ್ತಾ ಇದೀನಿ ಪಿಂಗ ಕೊಡಿ” ಎಂದು ನನ್ನ ಕೈಲಿದ್ದ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆದುಕೊಂಡು ಹೋದ. ಅವತ್ತೇ ನನ್ನ ಡೈರಿಯಲ್ಲಿ ಬರೆದುಕೊಂಡೆ

ಪಿಂಗ=ಪ್ಯಾಕೆಟ್.

ತೋಟದ ಬೇಲಿಗಳಲ್ಲಿ ಅಲ್ಲಲ್ಲಿ ನೇಣಿನ ಕುಣಿಕೆಗಳು ನನಗೆ ಕಾಣಿಸಿತು. ಚಿಟ್ಟು ಕೋಳಿಗಳನ್ನು ಹಿಡಿಯಲು ಆದಿವಾಸಿಗಳು ಈ ನೇಣಿನ ಕುಣಿಕೆ ಹಾಕುತ್ತಾರೆ. ನಾನು ಅದರ ಬಗ್ಗೆ ಕಂಪ್ಲೇಂಟ್ ಕೊಟ್ಟೂ ಕೊಟ್ಟು ಸುಸ್ತಾಗಿದ್ದೆ. ಕೊನೆ ಕೊನೆಗೆ ಪೋಲಿಸರೇ ನನಗೆ ಸಲಹೆ ನೀಡುತ್ತಿದ್ದರು.

“ಬಿಡ್ರಿ ಪಾಪ ಏನೋ ಹೊಟ್ಟೆ ಪಾಡು ಅವ್ರುದ್ದು” ಎಂದು.

ಆದರೂ ಅವರು ಎಷ್ಟರ ಮಟ್ಟಿಗೆ ಬೇಟೆ ಆಡುತ್ತಾರೆ ಎಂದರೆ ನಮ್ಮೂರಿನಲ್ಲಿ ಈಗ ಚಿಟ್ಟು ಕೋಳಿಗಳು ಅಪರೂಪವೇ ಆಗಿ ಹೋಗಿದೆ. ನಮ್ಮ ಚಿಟ್ಟು ಕೋಳಿಗಳು, ಡೋಡೋ ಪಕ್ಷಿಗಳ ಹಾದಿ ಹಿಡಿಯದೆ ಹೋದರೆ ಅಷ್ಟೇ ಸಾಕು.

ನನ್ನ ತೋಟದ ಅಂಚಿನಲ್ಲೇ ಮಂಜನ ಮನೆ, ಅವನ ಹೆಂಡತಿ  ರಸ್ತೆಯಲ್ಲಿ ಹೋಗುತ್ತಿದ್ದಳು,

“ಎಲ್ಲಮ್ಮ ನಿನ್ನ ಗಂಡ ಅವತ್ತು ನನಗೆ ತಿರುಪತಿ ಕ್ಷೌರ ಮಾಡಿದ ಮೇಲೆ ಪತ್ತೆ ಇಲ್ಲ” ಎಂದು ಕೇಳಿದೆ. ಧಾರಾಕಾರವಾಗಿ ಅವಳು ಅಳಲು ಶುರುಮಾಡಿದಳು.

“ಅವತ್ತಿನ ಜಗಳದಲ್ಲಿ ಹೊಡ್ದಾಡ್ಕಂಡು,ಜೈಲಿನಾಗೆ ಹಾಕಿದಾರೆ ಸೋಮಿ ಅವನ್ನ” ಎಂದು ಕಣ್ಣೊರಸಿಕೊಂಡಳು.

“ಒಂದ್ ತಿಂಗಳು ಒಳಗೆ ಇಟ್ಗಂಡು ಆಮೇಲೆ ಬಿಟ್ಟ್ ಕಳಿಸ್ತಾರೆ, ಚಿಂತೆ ಮಾಡ್ಬೇಡ” ಎಂದು ಸಮಾಧಾನಿಸಿದೆ.

“ಆ ಶನಿ ಮುಂಡೆಗಂಡಂಗೆ ನೀವೇ ಸ್ವಲ್ಪ ಬುದ್ದಿ ಹೇಳಿ ಒಡೆಯ” ಎಂದು ದುಂಬಾಲು ಬಿದ್ದಳು. ಗಂಡನಿಗೆ ಮುಂಡೆಗಂಡ ಎಂದು ಬೈದರೆ ತನಗೆ ತಾನೇ ಬೈದು ಕೊಂಡಂತೆ ಆಯಿತು ಅಲ್ಲವೇ? ಅದೆಲ್ಲಾ ಸೂಕ್ಷ್ಮಗಳು ಇವರಿಗೆ ತಿಳಿಯದು, ಇವರು ಕನ್ನಡದ ಕೊರಳು ಪಟ್ಟಿ ಹಿಡಿದುಕೊಂಡು ದುಡಿಸಿಕೊಳ್ಳುತ್ತಾರೆ. ಅವನು ನನ್ನ ಮಾತು ಕೇಳುತ್ತಾನೆಯೇ?  ಉಹುಂ ಸಾಧ್ಯವೇ ಇಲ್ಲ. ಅದೂ ಅಲ್ಲದೇ ಅವನ ಸಂಸಾರದಲ್ಲಿ ವಿನಾಕಾರಣ ಮೂಗು ತೂರಿಸುವುದು ನನಗೆ ಇಷ್ಟವಿರಲಿಲ್ಲ. ಸುಮ್ಮನೆ ಬಾಯಿ ಮಾತಿಗೆ, “ಆಯ್ತಮ್ಮ ಹೇಳಿ ನೋಡ್ತೀನಿ” ಎಂದು ಮನೆ ಕಡೆ ತಿರುಗಿದೆ.

ಮನೆಯ ಜಗುಲಿಯಲ್ಲಿ ನಾಗ ಕಾಫಿ ‘ಚೊರ್’ ಎಂದು ಹೀರುತ್ತಾ ಕುಳಿತಿದ್ದ, ಕೊನೆಗೂ ನಾಗ ಹುತ್ತದಿಂದ ಮೇಲೆದ್ದು ಬಂದಿದ್ದ.

-Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!