ಕಥೆ

ನನ್ನ ದೇಶ ನನ್ನ ಜನ – 1  (ತಿರುಪತಿ ಕ್ಷೌರ )

“ಓಹ್ ಇವತ್ತು ಭಾನುವಾರ” ನನಗೆ ನಾನೇ ಹೇಳಿಕೊಂಡೆ. ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ. ಜಗಳೂರು, ಗೊಂದಲಗೇರಿ, ಕೆಸರೂರು, ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ. ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ. ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ. ಇನ್ನು ತಡ ಮಾಡುವುದು ಸರಿಯಲ್ಲ ಎಂದು ಅನಿಸಿ ತಕ್ಷಣವೇ ಕಾರು ತೆಗೆದುಕೊಂಡು ಹೊರಟೆ.

ಮಳೆಗಾಲ ಆಗಷ್ಟೇ ಮುಗಿದಿತ್ತು. ರಸ್ತೆಯಲ್ಲಿನ ಕೆಸರು ಹಾಗೂ ಕಾಲ ಮೇಲಿನ ಕೆಸರು ಹುಣ್ಣುಗಳು ಇನ್ನೂ ಆರಿರಲಿಲ್ಲ. ಕಳಪೆ ರಸ್ತೆ ಮಾಡಿದ ಗುತ್ತಿಗೆದಾರನಿಗೆ  ಹಿಡಿ ಶಾಪ ಹಾಕುತ್ತಾ ‘ರೊಯ್ಯೋ’ ಎಂದು ಅಳುತ್ತಾ ಕಾರು ಮುಂದೆ ಸಾಗುತಿತ್ತು. ಭತ್ತದ ನಾಟಿ ಅದಾಗಲೇ ಮುಗಿದಿತ್ತು, ಗೊಬ್ಬರ ಹಾಕಲು ನಾರ್ವೆಯ ನಾಗನಿಗೆ ಹೇಳಿ ಕಳಿಸಿದ್ದೆ. ವಾರ ಕಳೆದರೂ ಅವನ ಸುಳಿವೇ ಇರಲಿಲ್ಲ. ನಾಗನ ಮನೆ ನಾನು ಹೋಗುವ ದಾರಿಯಲ್ಲೇ ಸಿಗುತ್ತದೆ. ಎಲ್ಲಾದರೂ ಅವನ ಮುಖ ನನಗೆ ಕಾಣಿಸುತ್ತದೆಯೇ ಎಂದು ಸುತ್ತಲೂ ಕಣ್ಣಾಡಿಸುತ್ತ ಕಾರು ಓಡಿಸುತ್ತಿದ್ದೆ.

ಬ್ರಿಟೀಷರು ಅಲಂಕಾರಕ್ಕಾಗಿ ತಂದು ನೆಟ್ಟ ಲಂಟಾನದ ಗಿಡಗಳು ಈಗ ನಮ್ಮ ಕಾಡಿನಲ್ಲಿ ಸರ್ವ ವ್ಯಾಪಿಯಾಗಿದೆ. ಇಡಿಯ ಕಾಡಿಗೆ ಕಾಡೇ ಲಂಟಾನದ ಪೊದೆಯೊಳಗೆ ಹುದುಗಿ ಹೋದಂತೆ ಗೋಚರಿಸುತ್ತದೆ. ಪೂರ್ತಿ ಕಾಡೇ ಲಂಟಾನ ಗಿಡಗಳಿಂದ ನಾಶವಾದ ಉದಾಹರಣೆಗಳಿವೆ. ನಾಗನ ಬಗ್ಗೆ ಶುರು ಮಾಡಿದ ಯೋಚನೆ ಜಾಗತೀಕರಣ ಪಡೆದುಕೊಳ್ಳುವ ಹೊತ್ತಿಗೆ ನಾನು ಮಂಜನ ‘ಮಾಡ್ರನ್ ಹೇರ್ ಸಲೂನ್’ಗೆ ತಲುಪಿದ್ದೆ.

ನಮ್ಮೂರಿನ ಎಲ್ಲಾ ಗಂಡಸರ ತಲೆಯ ಶಿಲ್ಪಗಳ ಶಿಲ್ಪಿ ಈ ಮಂಜ. ಕೆಲಸ ಕಲಿತ ಹೊಸದರಲ್ಲಿ ನಾವು ಹೇಳಿದ ಸ್ಟೈಲ್’ನಲ್ಲೆ ಕ್ಷೌರ ಮಾಡುತ್ತಿದ್ದ. ಕ್ರಮೇಣ ಅದೇ ತಲೆಯ ಬೋಡು ನೋಡಿ ಅವನಿಗೂ ಬೇಸರವಾಗಿರಬೇಕು, ನಾವು ಯಾವುದೇ ಸ್ಟೈಲ್ ಕೇಳಿದರೂ ಎಲ್ಲಾರಿಗೂ ಒಂದೇ ತರ ಬೋಳಿಸಿ ಕಳಿಸುತ್ತಿದ್ದ. ಅವನು ಕೆತ್ತಿದ ಸ್ಟೈಲ್’ಗೆ ನಾವು ಹೊಂದಿಕೊಳ್ಳಬೇಕಿತ್ತು. ಅದೇನೇ ಇರಲಿ ಮಂಜನ ಲೆಕ್ಕಾಚಾರದಲ್ಲಿ ಅವನು ಮಾಡುತ್ತಿರುವುದು ಸಮಾಜ ಸೇವೆ. ಅವನಿಲ್ಲದಿದ್ದರೆ ನಮ್ಮೂರಿನವರು ಜಡೆ ಬಿಟ್ಟು ಸನ್ಯಾಸಿಗಳಂತೆ ಕಾಣುತ್ತಿದ್ದೆವು ಎನ್ನುವುದು ಅವನ ಭಾವನೆ.

ಗಂಟೆ ಹತ್ತಾದರೂ ಸಲೂನ್ ಬಾಗಿಲು ಹಾಕಿಯೇ ಇತ್ತು. ನಾನು ಪಕ್ಕದ ಮೋರಿ ಕಟ್ಟೆಯ ಮೇಲೆ ಕುಳಿತು ಮೇಲೆ ಕೆಳಗೆ ನೋಡುತ್ತಿದ್ದೆ. ಗೋಪಾಲ ತನ್ನ ಹೆಂಡತಿಯನ್ನು ಬಸ್ಸಿಗೆ ಹತ್ತಿಸಲು ಹೊರಟಿದ್ದ.

“ಇದೇನೋ ಮೊನ್ನೆ ತಾನೇ ಮದ್ವೆ ಆಗಿ ಅದಾಗ್ಲೇ ಹೆಂಡತಿನ ತವರಿಗೆ ಕಳಿಸ್ತ ಇದೀಯ” ಎಂದು ನಾನು ತಮಾಷೆ ಮಾಡಿದೆ.

” ಆಷಾಢ ಅಲ್ವ ಸೋಮಿ” ಎಂದು ಅವನು ನಾಚಿಕೆ ಮಿಶ್ರಿತ ನಗುವನ್ನು ನನ್ನೆಡೆ ಬೀರಿದ, ಬಾಯನ್ನು ಕಿವಿಯ ತನಕ ತೆಗೆದು .

“ಈ ಆಷಾಢ ಎಲ್ಲಾ ಏನೂ ಇಲ್ಲ, ಒಂದೆರೆಡ್ ದಿನ ತವರಲ್ಲಿ ಇದ್ದು ಬೇಗ ಬಾ” ಎಂದಿದ್ದು ಬರೀ ಕಂಡಕ್ಟರ್’ಗೆ  ಅಷ್ಟೇ ಕೇಳಿಸಿತಂತೆ.

ಮೋರಿಯ ನೀರಿನಲ್ಲಿ ಮೀನಿನ ಮರಿಗಳು ಈಜು ಕಲಿಯುತ್ತಿತ್ತು. ಮಂಜ ಪತ್ತೆಯೇ ಇರಲಿಲ್ಲ. ಅವ ಬರದಿದ್ದರೆ ನಾನು ಸಾಗರಕ್ಕೇ ಹೋಗಿ ಕ್ಷೌರ ಮಾಡಿಸಬೇಕಿತ್ತು. ಕ್ಷೌರದ ದಿನ ಮುಂದೂಡಿ ಮುಂದೂಡಿ ನನ್ನ ಕೂದಲು ಲಂಟಾನ ಪೊದೆಯಂತೆ ಆಗಿತ್ತು.

ಹನ್ನೊಂದು ಗಂಟೆಗೆ ಮಂಜನ ದರ್ಶನ ನನಗೆ ಸಿಕ್ಕಿತು.

“ಇವತ್ತು ಅಮಾವಾಸ್ಯೆ ಮಾರ್ರೆ , ನಿಮಗೆ ಮರ್ತ್ ಹೋತಾ? ನಾ ಇವತ್ತು ಕತ್ತರಿ ಮುಟ್ಟಾದಿಲ್ಲ” ಎಂದು ಅವನ ತಗಾದೆ ತೆಗೆದ.

“ಮಾರಾಯ ನನ್ನ ತಲೆ ಏನು ಚಂದ್ರ ಅಲ್ಲ, ನನಗೆ ಆ ಶಾಸ್ತ್ರ ಎಲ್ಲಾ ಬ್ಯಾಡ, ಸುಮ್ಮನೆ ಕತ್ತರ್ಸು” ಎಂದು ಗದರಿದೆ.

“ಎಲ್ಲಾರೂ ಆಗ್ತದ ಸೋಮಿ ನಮ್ ಸಂಘದವ್ರು ನನ್ನ ಸಾಯ್ಸೆ ಬಿಡ್ತಾರೆ” ಎಂದು ಹೊಸ ರಾಗ ಶುರು ಮಾಡಿದ.

ಕೊನಿಗೂ ಇಪ್ಪತ್ತು ಹೆಚ್ಚಿಗೆ ಕೊಡ್ತೀನಿ ಎಂದ ಮೇಲೆ ನನ್ನ ಕೂದಲಿಗೆ ಮುಕ್ತಿ ಸಿಗಬಹುದೆಂಬ ಆಶಾವಾದ ನನಗೆ ಮೂಡಿತು.

“ಇದ್ಯಾಕೋ ಇಷ್ಟು ಕುಡಿತೀಯಾ, ಕಟಿಂಗ್ ಮಾಡೋವಾಗ್ಲಾದ್ರೂ ನೆಟ್ಟಗೆ ಬರೋಕೆ ಆಗಲ್ವ ನಿಂಗೆ?”.

“ನಂಗೆ ಡಾಕ್ಟ್ರೆ ಹೇಳವ್ರೆ ಕುಡಿಯಕ್ಕೆ, ಒಂದ್ ಸ್ವಲ್ಪ ದಿನ ಚನಾಗಿ ಕುಡುದು ಆಮೇಲೆ ಬಿಟ್ ಬಿಡು ಅಂತ”

ನಾನು ಪ್ರತಿ ಸಲ ಕೇಳಿದಾಗಲು ಅವನ ಬಳಿ ಸಿದ್ಧ ಉತ್ತರವಿರುತ್ತಿತ್ತು.

“ಅಲ್ಲ ಮಾರಾಯ ನೀನು ಕುಡ್ಕೊಂಡ್ ಬಂದು ಕಟಿಂಗ್ ಮಾಡೋಕೆ ಹೋಗಿ ಯಾರದ್ದಾರೂ ಕಿವಿ ಕತ್ತರಿಸಿ ಬಿಟ್ಟೀಯ” ಎಂದೆ

“ಸೋಮಿ ಏನ್ ಹಿಂಗ್ ಅಂದ್ಬಿಟ್ರಿ, ನಾ ಕೆಲ್ಸ ಕಲ್ತಿದ್ದು ಬಲೆಗಾರು ಹುಚ್ಚಪ್ಪನ ಹತ್ರ, ಬೇಕಾದ್ರೆ ಕಣ್ಣ್ ಕಟ್ಟ್ಕಂಡ್ ಕಟಿಂಗ್ ಮಾಡ್ತೀನಿ, ನೋಡ್ತೀರಾ” ಎಂದು ನನಗೇ ಸವಾಲೆಸೆದ.

“ಅದೆಲ್ಲಾ ಬ್ಯಾಡ ಮಾರಾಯ ನಿನ್ನ ಪಾಡಿಗೆ ನೀನು ಕೆತ್ತು” ಎಂದು ನಾನೇ ಸೋಲೊಪ್ಪಿಕೊಂಡೆ. ಅವನ ಕತ್ತರಿಗೆ ನನ್ನ ಕಿವಿ ಆಹುತಿಯಾಗುವುದು ನನಗೆ ಸುತಾರಾಂ ಇಷ್ಟವಿರಲಿಲ್ಲ.

“ಏಯ್ ಮಂಜ ಯಾದ್ಗಾರ್ ಹೋಟೆಲ್ ಅಲ್ಲಿ ಜಗಳ ಅಂತೆ “, ಬಸ್ಸಿನ ಹತ್ತಿರ ಹೋಗಿದ್ದ ಗೋಪಾಲ ಬಿಬಿಸಿ ವರದಿ ನೀಡಿದ.

“ಹೌದಾ, ಈಗ್ಲೇ ಬಂದೇ ಇರು, ಸೋಮಿ ಒಂದ್ ಹತ್ತ್ ನಿಮಷ ಬಂದೆ” ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೇ ಹೊರಟೇ ಹೋದ.

ಯಾದ್ಗಾರ್ ಎನ್ನುವ ಹೋಟೆಲ್ ಒಂದನ್ನು ಫಾತಿಮಾ ನಡೆಸುತ್ತಿದಳು. ಹೋಟೆಲ್ ಎಂದರೆ ಎರಡು ಟೇಬಲ್ ನಾಲ್ಕು ಕುರ್ಚಿ ಅಷ್ಟೇ. ಮಂಜನಂತಹ ಸೋಮಾರಿಗಳು ಅಲ್ಲಿ ಹೋಗಿ ಜೊಲ್ಲು ಸುರಿಸುವುದು ಸಾಮಾನ್ಯ.

ಅಲ್ಲಿ ಪದೇ ಪದೇ ಜಗಳವಾಗುತಿತ್ತು. ಫಾತಿಮಾ ಬುರ್ಕಾ ಹಾಕುತ್ತಿಲ್ಲ ಎಂದು ಮೌಲ್ವಿಗಳು ಜಗಳ ಮಾಡುತ್ತಿದ್ದರು.

“ಅಲ್ಲ ನಾನು ಬುರ್ಕಾ ಹಾಕಿ ನನ್ ಜಾತಿನೇ ಮುಂದೆ ಮಾಡುದ್ರೆ ನಂಗೆ ವ್ಯಾಪಾರ ಆಯ್ತದ ನೀವೇ ಹೇಳಿ” ಎಂದು ಆಕೆ ಸರಿಯಾಗೇ ತಿರುಗಿ ಬೀಳುತ್ತಿದಳು. ಆಕೆಯೂ ಸಹ ಬಹಳ ಘಾಟಿ ಹೆಣ್ಣು. ಅವಳ ಹೋಟೆಲಿನ ಮೆಣಸಿನ ಕಾಯಿ ಬೋಂಡಕ್ಕೆ ಯಾವುದೇ ಶರಿಯತ್ ಕಾನೂನು ಇರಲಿಲ್ಲ.

ನಾನು ಅರ್ಧ ಕೆತ್ತಿದ ಕೂದಲು ಇಟ್ಟುಕೊಂಡು, ಮಂಜನಿಗೆ ಗಂಟೆಗಟ್ಟಲೆ ಕಾದು ವಾಪಾಸು ಮನೆ ಕಡೆ ತಿರುಗಿದೆ. ನನಗೆ ಅಂದು ಆತ ಮಾಡಿದ್ದು ತಿರುಪತಿ ಕ್ಷೌರ.

ಬಡ್ಡೀ ಮಗ ಸಿಗಲಿ ಇನ್ನೊಂದಿನ ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾ ಮನೆ ತಲುಪಿದೆ.

-Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!