ಕಥೆ

ನನ್ನ ದೇಶ ನನ್ನ ಜನ – ಅಂತ್ಯ (ಕಾಪಾಡಿ…….ಕಾಪಾಡಿ )

ನನ್ನ ದೇಶ ನನ್ನ ಜನ – 4 


ನಾಗ, ಮಂಜ ಹಾಗೂ ಮಲೆನಾಡಿನ ಕಾಡು ಈ ಮೂರೂ ಸಹ ಅವನತಿಯ ಅಂಚಿನಲ್ಲಿದೆ. ನಾಗ, ಮಂಜ ಎಂದರೆ ಇಲ್ಲಿ ನಾನು ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ, ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ನಾಗ ಗಿಡ ಮೂಲಿಕೆ ಔಷಧಿಯ ಭಂಡಾರ, ನನಗೇ ಗೊತ್ತಿಲ್ಲದ ಎಷ್ಟೋ ಗಿಡ ಮರಗಳ ಬಗ್ಗೆ ಅವನಿಗೆ ಗೊತ್ತಿತ್ತು. ಆದರೆ ಆತ ಅದನ್ನು ಯಾರಿಗೂ ಹೇಳಿ ಕೊಟ್ಟಿರಲಿಲ್ಲ. ನಮ್ಮ ಸಾಂಪ್ರದಾಯಿಕ ಔಷಧೀಯ ಪದ್ಧತಿ ನಶಿಸಿ ಹೋಗುತ್ತಿರುವುದಕ್ಕೆ ಇದೇ ಕಾರಣ. ನೀವೇನಾದರೂ ಪಂಡಿತರ ಬಳಿ ಔಷಧಿ ತೆಗೆದುಕೊಂಡಿದ್ದರೆ ನಿಮಗೆ ಈ ಮಾತು ಅರ್ಥವಾಗುತ್ತದೆ, ಅವರು ಔಷಧಿಯನ್ನು ಕುಟ್ಟಿಯೋ, ರುಬ್ಬಿಯೋ ಇಲ್ಲ ಎಲೆಯನ್ನು ಮುದುರಿ ಕೊಡುತ್ತಾರೆ. ಕೆಲವೊಮ್ಮೆ ವಾಸನೆ ತಿಳಿಯಬಾರದೆಂದು ಜೀರಿಗೆ ಸೇರಿಸಿ ಕೊಡುವುದೂ ಇದೆ.

ಅವರ ಕುಟುಂಬದವರಿಗೆ ಮಾತ್ರ ಆ ಔಷಧಿಯ ಬಗ್ಗೆ ಗೊತ್ತಿರುತ್ತದೆ. ಒಂದೊಮ್ಮೆ ಪಂಡಿತರಿಗೆ ಅಕಾಲಿಕ ಸಾವು ಬಂದರೆ ಆ ಔಷಧಿ ಅಲ್ಲಿಗೇ ನಶಿಸಿ ಹೋಗುತ್ತದೆ.

ನಾಗನ ಚೇಷ್ಟೆಯೇ ಅವನ ಪ್ರಾಣಕ್ಕೆ ಅಪಾಯ ತಂದಿಡುತ್ತದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಅಡಿಕೆ ಮರ ಹತ್ತಲು ಅವನಿಗೆ ಬರುತ್ತಿರಲಿಲ್ಲ, ಆದರೂ ಮೊಂಡು ಧೈರ್ಯದಿಂದ ಹತ್ತಿದ್ದನಂತೆ. ಸುಮಾರು ನಲವತ್ತು ಅಡಿ ಎತ್ತರದಿಂದ ಕೆಳಕ್ಕೆ ಬಿದ್ದನಂತೆ. ಅವನಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಕೆಲವೇ ದಿನಗಳಲ್ಲಿ ಅವನು ಸತ್ತು ಹೋದ. ಅದಾಗುವ ಕೆಲ ತಿಂಗಳ ಹಿಂದೆ ನಮ್ಮ ಮನೆಯ ಅಂಗಳದಲ್ಲಿ ಅವನು ಮಾವಿನ ಮರ ನೆಟ್ಟು ಹೋಗಿದ್ದ. ಅದನ್ನು ನೋಡಿದಾಗಲೆಲ್ಲ ನನಗೆ ನಾಗನ ನೆನಪಾಗುತ್ತದೆ. ಆತ ನಮ್ಮ ಮನೆಯ ಆಳಾಗಿರಲಿಲ್ಲ, ಅವನಿಗೆ ಯಾವ ಕೆಲಸವನ್ನೂ ಮಾಡಲು ಬರುತ್ತಿರಲಿಲ್ಲ. ನಾವಿಬ್ಬರೂ ಸ್ನೇಹಿತರು ಎಂದರೆ ಸುಳ್ಳಲ್ಲ. ಅವನಿಗೆ ನಾನು ಸಂಬಳ ಕೊಡುತ್ತಿದ್ದದ್ದೂ ಕಡಿಮೆಯೇ.

ಮಂಜನ ಅಂತ್ಯ ಇನ್ನೂ ವಿಚಿತ್ರ ಅನಿಸುತ್ತದೆ. ಆಧುನಿಕತೆ ನಮ್ಮೂರಿಗೂ ಬಡಿದಿತ್ತು, ಜಾಗತೀಕರಣ ತನ್ನ ಕಬಂಧ ಬಾಹುಗಳನ್ನು ಚಾಚಿತ್ತು. ನಮ್ಮೂರಿನ ಯುವಕರು ತರ ತರದ ಸ್ಟೈಲ್ ಕೇಳತೊಡಗಿದರು, ಕ್ರಮೇಣ ಅವನಿಗೆ ಗ್ರಾಹಕರು ಕಡಿಮೆಯಾಗತೊಡಗಿದರು. ಊರೂರು ಸುತ್ತತೊಡಗಿದ, ಕುಡಿತ ಜಾಸ್ತಿಯಾಗತೊಡಗಿತು. ಕೊನೆಗೆ ಅರೆ ಹುಚ್ಚನಾಗಿ ಓಡಿ ಹೋದನಂತೆ.

ಇನ್ನು ಮಲೆನಾಡಿನ ಕಾಡು, ಅದು ‘ನ ಭೂತೋ ನ ಭವಿಷ್ಯತಿ’. ಕಾರಂತರ ‘ಬೆಟ್ಟದ ಜೀವ’ ಕಾಲದಲ್ಲಿ ಕಾಡು ಮನುಷ್ಯನಿಗೆ ಸವಾಲಾಗಿ ಪರಿಣಮಿಸಿತ್ತು. ನಂತರ ಕುವೆಂಪುರವರ ಕಾನೂರು ಹೆಗ್ಗಡತಿ ಅಥವಾ ಮಲೆಗಳಲ್ಲಿ ಮದುಮಗಳು ಕಾಲದಲ್ಲಿ ಕಾಡು ನಮ್ಮೆಲ್ಲರ ಪೊರೆಯುವ ತಾಯಿಯಾಗಿ ಕಂಡುಬರುತ್ತಿತ್ತು. ಆದರೆ ನಮ್ಮ ಈಗಿನ ಕಾಲದಲ್ಲಿ ನಾವೇ ಕಾಡನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ನಮ್ಮ ಬಜೆಟ್ನಲ್ಲಿ ದುಡ್ಡನ್ನು ಎತ್ತಿಟ್ಟು ಅಭಯಾರಣ್ಯಗಳನ್ನು ಸೃಷ್ಟಿಸಿ, ಕಾನೂನುಗಳನ್ನು ಮಾಡಿ ಕಾಡು ಉಳಿಸಿಕೊಳ್ಳುವ ವಿಪರ್ಯಾಸ ನಮ್ಮದು. ನಮ್ಮ ನಾಡು ಈಗ ಗಂಧದ ಗುಡಿ ಅಲ್ಲ, ಯಾವಾಗಲೋ ನಾವು ಗಂಧದ ಮರಗಳನ್ನು ತಿಂದು ತೇಗಿ ಮುಗಿದಿದೆ. ಒಂದೊಂದು ಮರ ಐದು-ಆರು ಲಕ್ಷ ಬೆಲೆಬಾಳುತ್ತದೆ ಎಂದಾದರೆ, ಲಕ್ಷ ಲಕ್ಷ ಹೆಕ್ಟೇರು ಇರುವ ನಮ್ಮ ಕಾಡಿನ ಮೌಲ್ಯ ನಿಮಗೆ ಅರ್ಥವಾಗಬಹುದು. ಯಾವಾಗ ನಾವು ಕಾಡನ್ನು ದುಡ್ಡಿನಿಂದ ಅಳೆಯಲು ಶುರುಮಾಡುತ್ತೀವೋ ಅಂದಿನಿಂದ ನಮ್ಮ ಅವನತಿ ಪ್ರಾರಂಭವಾಗುತ್ತದೆ. Forest is an unimaginable treasure. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ.

ಮಲೆನಾಡಿನ ಸಂಸ್ಕೃತಿ ಕವಲು ದಾರಿಯಲ್ಲಿದೆ. ಮಲೆನಾಡಿಗರು ಭವಿಷ್ಯ ಅರಸಿ ಸಿಟಿಗಳತ್ತ ಮುಖಮಾಡುತ್ತಿದ್ದಾರೆ. ದಾರ್ಶನಿಕರು ಹುಟ್ಟಿದ ನಮ್ಮ ಮಲೆನಾಡು ಈಗ ಕೋಮುವಾದದ, ಜಾತಿ ಕಲಹಗಳ ಗೂಡಾಗಿದೆ.

ನನ್ನ ದೇಶ ನನ್ನ ಜನ, ನಾನು ಹುಟ್ಟಿ ಬೆಳೆದ ಊರಿನ ಕಥೆ. ಇದು ತೇಜಸ್ವಿ ಅವರ ಕೃತಿಗಳ ಅನುಕರಣೆ ಅಲ್ಲ. ಅವರ ಬರಹಗಳ ಮುಂದೆ ನಾನು ಸೊನ್ನೆಗಿಂತಲೂ ಕಡಿಮೆ. ಕರ್ವಾಲೋ ಒಂದು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬರೆದ ಅದ್ಭುತ ಕೃತಿ, ಅದಕ್ಕೆ ಇದನ್ನು ಹೋಲಿಸಿದರೆ ಮೂರ್ಖತನವಾಗುತ್ತದೆ.

ನಾನು ಜಾಸ್ತಿ ಸುತ್ತಾಡುತ್ತಿದ್ದದ್ದು ನಮ್ಮ ಮನೆಯ ಆಳುಗಳ ಜೊತೆ. ಕೊನೆಗೌಡನ ಜೊತೆಗೆ ಊಟಕ್ಕೆ ಕೂತು ಬಿಡುತ್ತಿದ್ದೆ, ಗೊಬ್ಬರ ಹಾಕಲು ಬಂದವರ ಜೊತೆ ಗಂಟೆಗಟ್ಟಲೆ ಮಾತಾಡುತ್ತಿದ್ದೆ. ಅವರ ಜೊತೆಗೆ ಕಳೆದ ಕೆಲವು ಅಮೂಲ್ಯ ಹಾಸ್ಯ ಪ್ರಸಂಗಗಳ ಹೊತ್ತಿಗೆಯೇ ‘ನನ್ನ ದೇಶ ನನ್ನ ಜನ’ ….

-Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!