ಕಥೆ

ನಕ್ಷತ್ರ-2

ನಕ್ಷತ್ರ-1

ಸುಧಿಯ ಪತ್ರ ಚುಕ್ಕಿಯ ಕನಸನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಯಾಕೋ ಕಣ್ಣೀರೇ ಬರುತ್ತಿಲ್ಲ. ಹಾಸಿಗೆಯಿಂದ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ , ದೀಪ ಹಚ್ಚಿ ದೇವರ ಮುಂದೆ ಕುಳಿತವಳ ಮನಸು ಖಾಲಿಯಾಗಿತ್ತು. ನಿರ್ಧಾರವೊಂದು ಕಣ್ಮುಂದೆ ಗೋಚರಿಸಿತ್ತು. ತನ್ನ ಬಟ್ಟೆ ಬರೆ, ವಸ್ತುಗಳನ್ನ ಬ್ಯಾಗಲ್ಲಿ ತುಂಬಿಕೊಂಡು ಮನೆಗೆ ಬೀಗ ಹಾಕಿ ಬಾಡಿಗೆ ಹಣ, ಬೀಗವನ್ನ ಮನೆ ಯಜಮಾನನ ಕೈಗಿತ್ತು ಅವರು ಪ್ರಶ್ನಿಸುವ ಮುನ್ನ ಅಲ್ಲಿಂದ ಕಾಲ್ಕಿತ್ತಿದ್ದಳು.

ಅಲ್ಲಿಂದ ಅವಳು ಬಂದಿದ್ದು ತಂದೆಯ ಮನೆಗೆ. ಬಂದವಳು ಎಲ್ಲ ಭಾವನೆಗಳು ಸತ್ತಿವೆಯೇನೋ ಎನ್ನುವಂತೆ ತನ್ನ ಗಂಡ ಮನೆ ಬಿಟ್ಟು ಹೋಗಿದ್ದನ್ನ ತಂದೆಯ ಎದುರು ಹೇಳಿದ್ದಳು. ಅವರೇ ಸುಧಿಯನ್ನ ಹುಡುಕಿಸಲು ಪ್ರಯತ್ನಿಸಲಾರಂಭಿಸಿದಾಗ. “ಬಲವಂತವಾಗಿ ಸಂಸಾರ ನಡೆಸುವುದರಲ್ಲಿ ಅರ್ಥವಿಲ್ಲ ” ಎಂದು ತಂದೆಗೆ ತಿಳಿಸಿ, ತಂದೆಯ ಪ್ರಯತ್ನಕ್ಕೆ ಪೂರ್ಣ ವಿರಾಮ ಹಾಕಿದ್ದಳು. ಮೂರು ವರ್ಷದ ಸಂಸಾರ ಮಾಡಿದ್ದರೂ ಮಕ್ಕಳ ಭಾಗ್ಯವೂ ಅವಳಿಗೆ ಒದಗಿ ಬಂದಿರಲಿಲ್ಲ. ಬದುಕಲು ಯಾವ ಆಸರೆಯೂ ಇರಲಿಲ್ಲ ಅವಳಿಗೆ. ಮನುವಿಗೆ ಅವಳು ತಂದೆಯ ಮನೆಗೆ ಬಂದಿರುವುದು ಹೋಳಿಗೆ ತುಪ್ಪ ತಿಂದಷ್ಟು ಖುಷಿಯಾಗಿತ್ತು. ತನ್ನ ಪ್ರಯತ್ನಕ್ಕೆ ಸಿಕ್ಕ ಗೆಲುವಿನಲ್ಲಿದ್ದ.

ಚುಕ್ಕಿ ಅದೊಂದು ದಿನ ದೇವಸ್ಥಾನಕ್ಕೆ ಹೋಗಿ ಬರುವಾಗ ಮನು ಎದುರಿಗೆ ಸಿಕ್ಕಿದ್ದ. ಅವನನ್ನ ನೋಡಿದ ಚುಕ್ಕಿ ಪರಿಚಯವೇ ಇಲ್ಲವೇನೋ ಎನ್ನುವಂತೆ ಮುಂದೆ ಹೋಗಿದ್ದಳು. ಮನುವಿಗೆ ನಿರಾಸೆಯಾಗಿತ್ತು. ಅವಳ ಪಕ್ಕದ ಮನೆಯ ಹುಡುಗಿಯನ್ನ ಪುಸಲಾಯಿಸಿ ಅವಳ ಹೊಸ ಫೋನ್ ನಂಬರ್ ಪಡೆದುಕೊಂಡಿದ್ದ. ಹೊಸ ನಂಬರಿನಿಂದ ಬಂದ ಕರೆ ನೋಡಿದ ಚುಕ್ಕಿ ಯಾರಿರಬಹುದು ಎಂದು ಕರೆ ಸ್ವೀಕರಿಸಿದ್ದಳು. ಮನುವೆಂದು ತಿಳಿದಾಗ “ಮತ್ತೆ ನನಗೆ ಕರೆ ಮಾಡಬೇಡ ನಾನು ಮದುವೆಯಾಗಿರುವ ಹೆಣ್ಣು” ಎಂದು ಅವನು ಮಾತನಾಡುವ ಮೊದಲೇ ಮೋಬೈಲ್ ನ್ನ ಸ್ವಿಚ್ ಆಫ್ ಮಾಡಿದ್ದಳು. ಒಂದು ವರ್ಷದಲ್ಲಿ ಅವನು ಅವಳನ್ನು ಒಲಿಸಿಕೊಳ್ಳುವ ಎಲ್ಲ ಪ್ರಯತ್ನಗಳಲ್ಲಿ ವಿಫಲನಾಗಿದ್ದ.

ಚುಕ್ಕಿ ಎಲ್ಲವನ್ನ ಮರೆಯಲು, ಮನುವಿನಿಂದ ದೂರವಿರಲು ದೂರದ ಪಟ್ಟಣದಲ್ಲಿ ಡೇಟಾ ಎಂಟ್ರಿ ಮಾಡುವ ಕೆಲಸಕ್ಕೆ ಸೇರಿದ್ದಳು. ಮನು ಪಡಬಾರದ ಕಷ್ಟ ಪಟ್ಟು ಅವಳ ಬಾಡಿಗೆ ಮನೆ ವಿಳಾಸ ಪತ್ತೆ ಹಚ್ಚಿದ್ದ. ಅವಳ ಮನೆಗೆ ಬಂದವನಿಗೆ ಮೊದಲು ಕಂಡಿದ್ದು ಸುಧಿ ಮತ್ತು ಚುಕ್ಕಿ ಜೊತೆಗಿರುವ ಫೋಟೋ. ಆದರೂ ಅವನೇನು ನಿರಾಶನಾಗಲಿಲ್ಲ. “ದಯವಿಟ್ಟು ಅರ್ಥ ಮಾಡಿಕೊ ಚುಕ್ಕಿ, ನಿನ್ನ ಪಡೆಯಬೇಕೆಂದು ನಾನು ಹಾಗೆ ಮಾಡಿದೆನೇ ಹೊರತು ನಿನ್ನ ಜೀವನ ಹಾಳು ಮಾಡಲು ಅಲ್ಲ. ನಿನ್ನ ಮರೆಯುವ ಶಕ್ತಿ ನನಗಿಲ್ಲ. ಆಗಿದ್ದನ್ನ ಮರೆತುಬಿಡು. ನಿನ್ನನ್ನ ಮದುವೆಯಾಗುತ್ತೇನೆ. ಕೈಬಿಡುವುದಿಲ್ಲ. ನಾನು ಸುಧಿಯಂತಲ್ಲ. ನಿನಗಾಗಿ ಈ ನಾಲ್ಕು ವರ್ಷಗಳನ್ನ ನಾಲ್ಕು ಯುಗಗಳಂತೆ ಕಳೆದಿದ್ದೇನೆ.” ಚುಕ್ಕಿಯ ಮುಂದೆ ಒಂದೇ ಉಸಿರಿಗೆ ಮನು ಹೇಳಿದಾಗ ಚುಕ್ಕಿಗೆ “ನಾನು ಇಂಥವನಿಗೆ ಮೋಸ ಮಾಡಬಾರದಿತ್ತು” ಅನ್ನಿಸದೇ ಇರಲಿಲ್ಲ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿದ್ದಳು ಅವಳು. “ನಾನಿವನ ಮುಂದೆ ಅತ್ತರೆ ಇವನು ನನ್ನ ಬಿಡುವುದಿಲ್ಲ. ನಾನು ಇದನ್ನ ತೋರಿಸಿಕೊಳ್ಳಬಾರದು, ನಾನು ಮದುವೆಯಾದವಳು “ಎಂದು ಮನಸ್ಸು ಕಲ್ಲು ಮಾಡಿಕೊಂಡು “ಮನು ಈ ಎಲ್ಲ ಹುಚ್ಚುತನ ಬಿಟ್ಟು ಬೇರಯವಳನ್ನ ಮದುವೆಯಾಗಿ ಸುಖವಾಗಿರು. ನಾನೆಂದೂ ನಿನ್ನವಳಾಗುವುದಿಲ್ಲ. ನಿನ್ನ ಮುಖ ಮತ್ತೊಮ್ಮೆ ತೋರಿಸಬೇಡ.” ಮುಖಕ್ಕೆ ಹೊಡೆದಂತೆ ಹೇಳಿ ಮನುವನ್ನ ಆಚೆ ಹಾಕಿ ಬಾಗಿಲು ಮುಚ್ಚಿದ್ದಳು. ನಿರಾಶೆಯಿಂದ ಹಿಂತಿರುಗಿದ ಮನುವಿಗೆ ತಾನಿರುವ ಮಾಡಿದ್ದು ತಪ್ಪು ಎಂದು ಮೊದಲಬಾರಿಗೆ ಅನ್ನಿಸುತ್ತು.ಮತ್ತೆ ಮತ್ತೆ ಅವಳ ಮನವೊಲಿಸಲು ಪ್ರಯತ್ನಿಸಿ ಮನು ಸೋತಿದ್ದ. ನಾಲ್ಕು ವರ್ಷಗಳು ಕಳೆದು ಹೋಗಿದ್ದವು.ಮೂವತ್ತನೆ ವಯಸ್ಸಿಗೇ ಏನೆಲ್ಲ ಅನುಭವಿಸಿದ್ದಳು ಚುಕ್ಕಿ.

ಸುಧಿಗೆ ನನ್ನ ನೆನಪೇ ಆಗುವುದಿಲ್ಲವೇ? ಎನ್ನುವ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು. ಚುಕ್ಕಿಗೆ. ಹಾ……ಸುಧಿಗೆ ಆರು ವರ್ಷಗಳ ನಂತರ ಚುಕ್ಕಿ ಯ ನೆನಪು ಕಾಡಿತ್ತು. ಸುಧಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿದ್ದ. ದೂರದ ಮುಂಬೈಗೆ ಹೋಗಿ ತಾಯಿಯೊಂದಿಗೆ ನೆಲೆಸಿದ್ದ ಸುಧಿ ಇನ್ನೊಂದು ಮದುವೆಗೆ ಮೊದಲು ಹಿಂಜರಿದಿದ್ದರೂ ತಾಯಿಯ ಒತ್ತಾಯಕ್ಕೆ ಮಣಿದು, ತಾಯಿಯೇ ನೋಡಿದ್ದ ಹುಡುಗಿ ಚೈತ್ರಳನ್ನ ಮದುವೆಯಾಗಿದ್ದ. ತನ್ನ ಮಗನಿಗೊಂದು ಜೊತೆಯಾದರೆ ಸಾಕು ಎಂದು ಅವಸರಿಸಿದ್ದ ತಾಯಿ ಸಂಬಂಧಿಕರೊಬ್ಬರಿಂದ ಸುಧಿಗೆ ಸಂಬಂಧವೊಂದು ಕೂಡಿ ಬಂದಾಗ ಅವರಿಂದ ಹುಡುಗಿಯ ಬಗ್ಗೆ ತಿಳಿದುಕೊಂಡು ಮದುವೆಗೆ ಅಸ್ತು ಎಂದಿದ್ದರು. ಮದುವೆಯಾಗಿ ಆರು ತಿಂಗಳಿಗೇ ಅವಳು ಬೇರೋಬ್ಬನೊಂದಿಗೆ ಓಡಿ ಹೋದಾಗಲೇ ಅವಳೂ ಅದಾಗಲೇ ಬೇರೆಯವನೊಂದಿಗೆ ಒಡನಾಟ ಹೊಂದಿದ್ದವಳೆಂದು ತಿಳಿದಿದ್ದು.

ಮೊದಲ ಬಾರಿಗೆ ಮನದ ಮೂಲೆಯಲ್ಲಿ ಚುಕ್ಕಿ ನಿಂತಿದ್ದಳು. ಅವಳು ಮದುವೆಯಾದ ಮೇಲೆ ತನಗಂದೂ ಮೋಸ ಮಾಡಲಿಲ್ಲ. ಆದರೆ ನಾನು ಅವಳಿಗೆ ಮಾಡಿದ್ದೇನು? ಪ್ರಶಿಸಿಕೊಳ್ಳುತ್ತಲೇ ಮತ್ತೆ ಆರು ತಿಂಗಳುಗಳು ಉರುಳಿದ್ದವು. ತಾಯಿ ಮಗನ ಚಿಂತೆಯಲ್ಲಿ ಹಾಸಿಗೆ ಹಿಡಿದವರು ನಿದ್ದೆಯಲ್ಲಿಯೇ ಶಾಶ್ವತವಾಗಿ ಕಣ್ಮುಚ್ಚಿದ್ದರು. ಸುಧಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿದ್ದ. ಮನೆ, ಮನಸ್ಸು ಎರಡೂ ಬಿಕೊ ಎನ್ನುತ್ತಿದ್ದವು. ಚುಕ್ಕಿಯ ಬಳಿ ಹೋಗಲು ಸ್ವಾಭಿಮಾನ, ಹಠ ಅಡ್ಡ ಬಂದಿದ್ದವು. ಸಾಲದೆಂಬಂತೆ ಕುಡಿತದ ದಾಸನಾಗಿದ್ದ. ಚುಕ್ಕಿಯಿಂದ ಅವನು ದೂರವಾಗಿ ಆರು ವರ್ಷಗಳೇ ಉರುಳಿದ್ದವು. ಈಗೀಗ ಸ್ವಾಭಿಮಾನ, ಹಠಗಳೂ ಸುಧಿಯ ಮನದಲ್ಲಿ ಸತ್ತು ಸಮಾಧಿಯಾಗಿದ್ದವು. ಚುಕ್ಕಿಯನ್ನ ಕ್ಷಮೆ ಕೇಳಿ ಅವಳ ಮನದಲ್ಲಿ ಜಾಗ ಕೇಳಲು ಮುಂಬೈಯಿಂದ ಮಾವನ ಮನೆಗೆ ಬಂದಿಳಿದಿದ್ದ. “ಅವಳೇನಾದರೂ ಮತ್ತೆ ಮದುವೆಯಾಗಿದ್ದರೆ? “ಎಂಬ ಪ್ರಶ್ನೆ ಸುಧಿಗೆ ಕಾಡದೇ ಇರಲಿಲ್ಲ.

ಅಳಿಯನನ್ನ ಕಂಡ ಚುಕ್ಕಿಯ ತಂದೆಗೆ ಒಂದು ಕಡೆ ಸಂತೋಷ, ಇನ್ನೊಂದು ಕಡೆ ಕೋಪ. ಅವನು ಇಷ್ಟು ವರ್ಷಗಳ ಮೇಲೆ ಮಗಳನ್ನ ನೋಡಲು ಬಂದಿದ್ದಕ್ಕೆ ಸಂತೋಷ, ಮಗಳು ತಲೆ ಎತ್ತದಂತೆ ಮಾಡಿದ್ದಕ್ಕೆ ಕೋಪ. ಒಳಗೆ ಕರೆದು ಚಹ ಮಾಡಿದ್ದರು ಅತ್ತೆ. ಅಷ್ಟೊತ್ತಾದರೂ ಚುಕ್ಕಿಯ ಸುಳಿವಿಲ್ಲ. ಅವಳು ಮದುವೆಯಾಗಿಬಿಟ್ಟಳಾ? ಇಲ್ಲ……….. ಹಾಗಾಗಬಾರದು……….ಎಂದು ಚೀರಿತ್ತು ಸುಧಿಯ ಮನಸು. ಎಲ್ಲ ತಿಳಿದ ಮೇಲೆ ಮನಸಿಗೆ ನೆಮ್ಮದಿಯಾಗಿತ್ತು ಅವನಿಗೆ. ಚುಕ್ಕಿಯ ವಿಳಾಸ ತಿಳಿದು ಅವನು ಅವಳ ಮನೆಗೆ ಕಾಲಿರಿಸಿದವನಿಗೆ ಕಂಡಿದ್ದು ತನ್ನದೇ ಫೋಟೋ. ಎಷ್ಟೋ ವರ್ಷಗಳ ನಂತರ ಮನೆಗೆ ಬಂದ ಗಂಡನನ್ನ ನೋಡಿ ಆಶ್ಚರ್ಯದ ಜೊತೆಗೆ ಆನಂದವಾಗಿತ್ತವಳಿಗೆ. ಆದರೇಕೋ ಮನಸು ಕಲ್ಲಾಗಿತ್ತು. ತನ್ನ ಕಥೆಯನ್ನ ವಿವರಿಸಿದ್ದ ಸುಧಿ ಹೆಂಡತಿಯ ಮುಂದೆ ಚಿಕ್ಕ ಮಗುವಿನಂತೆ ಬಿಕ್ಕಳಿಸಿದ್ದ. ತನ್ನನ್ನು ಕ್ಷಮೆ ಕೇಳಿದ ಗಂಡನಿಗೆ ತಾಯಿಯಂತೆ ಸಂತೈಸಿದ್ದಳು ಚುಕ್ಕಿ. “ಇಂಥವಳನ್ನ ಬಿಟ್ಟು ಹೋಗಬಾರದಿತ್ತು” ಎಂದೆನಿಸಿತ್ತು ಸುಧಿಗೆ. ಚುಕ್ಕಿಗೆ ಧಿಡೀರನೇ ಬಂದ ಸಂಧರ್ಭ ದಿಕ್ಕು ತೋಚದಂತೆ ಮಾಡಿತ್ತು. “ನನ್ನ ಮನಸು ಸರಿಯಿಲ್ಲ ಈಗ ದಯವಿಟ್ಟು ಇಲ್ಲಿಂದ ಹೋಗಿ.”ಎಂದು ಬಿಕ್ಕಿದ್ದಳು.

ಅವರು ನನ್ನಿಂದ ಹೋದ ಮೇಲೆ ನಾನು ” ಮತ್ತೆ ಸುಧಿ ಬಂದೇ ಬರುತ್ತಾರೆ ಎಂದು ಕಾಯ್ದಿದ್ದೆ. ಆದರೆ ಅವರು ಮಾಡಿದ್ದೇನು? ಅವಳು (ಚೈತ್ರ)ಇವರನ್ನ ಮೋಸಗೊಳಿಸಿ ಹೋದದ್ದಕ್ಕಾಗಿ ಮತ್ತೆ ನಾನು ನೆನಪಾಗಿದ್ದೇನೆ. ಅವಳು ಇವರೊಂದಿಗೆ ಚೆನ್ನಾಗಿದ್ದಿದ್ದರೆ ಹೆಂಡತಿ, ಮಕ್ಕಳೊಂದಿಗೆ ಖುಷಿಯಿಂದ ಬದುಕುತ್ತಿದ್ದರು. ನನ್ನ ನೆನಪುಗಳು ಸತ್ತು ಹೋಗಿರುತ್ತಿದ್ದವು. ಮತ್ತೆ ನಾನು ಬೇಕೆಂದು ಬಂದಿದ್ದಾರೆ. ಅವಳು ಬಿಟ್ಟು ಇವಳು, ಇವಳು ಬಿಟ್ಟು ಅವಳು,ಎನ್ನಲು ಸಂಸಾರ ಎನ್ನುವುದು ಚಿಕ್ಕ ಮಕ್ಕಳ ಕಣ್ಣು ಮುಚ್ಚಾಲೆ ಆಟವಲ್ಲ ಅಲ್ಲವೇ?…. ನಾನು ಇವರಿಗೋಸ್ಕರನಾ ಇಷ್ಟುದಿನ ಕಾಯ್ದಿದ್ದು?” ಎಂದುಕೊಂಡವಳ ಮನಸ್ಸಿನ ನೋವು ಕಣ್ಣೀರಾಗಿ ಹೊರಬಿದ್ದಿತ್ತು.

ಅದೇ ಪಟ್ಟಣದಲ್ಲಿ ಇದ್ದ ತನ್ನ ಗೆಳೆಯನ ಮನೆಯಲ್ಲಿ ಉಳಿದಿದ್ದ ಸುಧಿ ಫೋನ್ ಕರೆ ಮಾಡಿ ಅವಳ ಮನವೊಲಿಸಲು ಪ್ರಾರಂಭಿಸಿದ್ದ. ಮನು ಕೂಡಾ ಇದೇ ಪ್ರಯತ್ನದಲ್ಲೇ ಇದ್ದ. ಇವರಿಬ್ಬರ ಪ್ರಯತ್ನ ಕೊನೆಗೊಳಿಸುವ ನಿರ್ಧಾರ ತಳೆದಿದ್ದಳು ಚುಕ್ಕಿ. ಇಬ್ಬರಿಗೂ ಕರೆ ಮಾಡಿ ಆ ಸುಂದರ ಪಾರ್ಕ್ ಗೆ ಬರಲು ಹೇಳಿದ್ದಳು. ಇಬ್ಬರೂ ಖುಷಿಯಿಂದಲೇ ಬಂದಿದ್ದರು. ಒಬ್ಬರನ್ನೊಬ್ಬರು ನೋಡಿದ ಸುಧಿ ಮತ್ತು ಮನುವಿಗೆ ಕರೆಂಟ್ ಶಾಕ್ ಕೊಟ್ಟಂತಾಗಿತ್ತು. ಚುಕ್ಕಿ ನನ್ನವಳು, ಇಲ್ಲ………ಚುಕ್ಕಿ ನನ್ನವಳು ಎಂದು ಇಬ್ಬರ ಮನಸುಗಳಾಗಲೇ ಜಗಳವಾಡಲಾರಂಭಿಸಿದ್ದವು. ಚುಕ್ಕಿ ಅರ್ಧ ಗಂಟೆಯಾದರೂ ಕಣ್ಮುಚ್ಚಿಯೇ ಕುಳಿತಿದ್ದಳು. ಹಳೆಯ ನೆನಪುಗಳನ್ನ ಕೆದಕಿದ್ದ ಅವಳ ಕಣ್ಣುಗಳಲ್ಲಿ ನೀರಿನ ಪದರ ಕಂಡಿತ್ತು.

ಕಣ್ಣು ಬಿಟ್ಟವಳಿಗೆ, ಒಂದು ಹಿಡಿ ಪ್ರೀತಿಗಾಗಿ ಕಾದಿದ್ದ ಅವರಿಬ್ಬರೂ ಮಳೆ ಹನಿಗಾಗಿ ಕಾಯುವ ಜಾತಕಪಕ್ಷಿಗಳಂತೆ ಕಂಡಿದ್ದರು. ಅವರಿಬ್ಬರೂ ಅವಳ ಮಾತಿಗಾಗಿ ಕಾಯ್ದಿದ್ದರು. “ನಾನು ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ ” ಎಂದು ಹೇಳಿದವಳು ಸುಧಿಯತ್ತ ತಿರುಗಿ “ನೀವು ಮತ್ತೆ ನನ್ನನ್ನು ನೆನಪಿಸಿಕೊಂಡಿದ್ದಕ್ಕಾಗಿ ನನ್ನಲ್ಲಿ ಸಂತೋಷವಿದೆ. ಆದರೆ ….. ನೀವು ಇನ್ನೊಬ್ಬಳಿಂದ ಮೋಸ ಹೋದ ಮೇಲೆ ನನ್ನ ನೆನಪಿಸಿಕೊಂಡಿದ್ದಕ್ಕೆ ನಿಮ್ಮ ಬಗ್ಗೆ ನನ್ನದೊಂದು ಅಸಹ್ಯದ ಭಾವನೆಯಿದೆ. ಅವಳೇನಾದರೂ ನಿಮ್ಮ ಜೊತೆ ಚೆನ್ನಾಗಿದ್ದರೆ ನೀವು ಮತ್ತೆ ಬರುತ್ತಿರಲಿಲ್ಲ. ನಾನು ಮದುವೆಯಾದ ಮೇಲೆ ಮನುವನ್ನ ಮನದಲ್ಲೂ ನೆನೆದಿರಲಿಲ್ಲ. ಆದರೂ ನಾನು ನಿಮಗೆ ಬೇಡವಾಗಿದ್ದೆ. ನಿಮ್ಮ ಜೊತೆ ನಾನಿಲ್ಲದಿದ್ದಾಗ ಅವಳಿದ್ದಳು. ಈಗ ಅವಳಿಲ್ಲ ನಾನು ಬೇಕಾಗಿದ್ದೇನೆ. ಹೆಂಡತಿ ಎಂದರೆ ಬದಲಾಯಿಸುವ ಬಟ್ಟೆ ಯಲ್ಲ. ನಾನು ಮನುವನ್ನ ಪ್ರೀತಿಸಿದ್ದು ನಿಜ , ಆದರೆ ಬಟ್ಟೆ ಯಂತೆ ಗಂಡನನ್ನ ಬದಲಿಸಿಲ್ಲ. ನೀವು ನನ್ನ ಪ್ರೀತಿಗೆ ಅರ್ಹರಲ್ಲ.”ಎಂದಾಗ ಮನುವಿನ ಮುಖ ಮೊರದಷ್ಟಾಗಿತ್ತು. ಮನುವಿನತ್ತ ತಿರುಗಿ “ಮನು ನಾನು ನಿನ್ನ ಪ್ರೀತಿಸಿದ್ದು ನಿಜ. ಆದರೆ ನಾನು ಪರಿಸ್ಥಿತಿಯ ಕೈಗೊಂಬೆಯಾಗಿದ್ದೆ. ನೀನಾದರೂ ನಿಜವಾಗಿ ನನ್ನ ಪ್ರೀತಿಸಿದ್ದರೆ ಖಂಡಿತವಾಗಿಯೂ ನೀನು ಈ ರೀತಿ ಮಾಡುತ್ತಿರಲಿಲ್ಲ. ನನ್ನ ಮೇಲಿನ ಪ್ರೀತಿಗೆ ನೀನು ಹಾಗೆ ಮಾಡಿದೆ. ನಿನ್ನ ಪ್ರೀತಿಗಾದ ಮೋಸಕ್ಕೆ ನನ್ನಲ್ಲಿ ಪಶ್ಚಾತ್ತಾಪವಿದೆ. ಹಾಗೆ ನೀನು ಮಾಡಿದ ಒಂದು ತಪ್ಪಿನಿಂದ ನನ್ನ ಒಂದು ಇಡೀ ಜೀವನ ಕಣ್ಣೀರಲ್ಲಿ ಕೊಚ್ಚಿ ಹೋಯಿತು ಎನ್ನುವ ಕೋಪವಿದೆ. ನಿನ್ನದು ನಿಜವಾದ ಪ್ರೀತಿಯೇ.ಆದರೆ …… ನಾನು ಎಂಜಲು ಎಲೆ. ನೀನು ನನ್ನ ಮರೆತು ಬೇರೆ ಹುಡುಗಿಯನ್ನ ಮದುವೆಯಾಗಿ ಇದೇ ಪ್ರೀತಿ ಕೊಡು.ನಾನು ನಿನ್ನ ಪ್ರೀತಿಗೆ ಅರ್ಹಳಲ್ಲ. ದಯವಿಟ್ಟು ಕ್ಷಮಿಸು.”ಎಂದು ದೀರ್ಘವಾದ ಉಸಿರೆಳೆದಳು.”ನನ್ನ ಪ್ರೀತಿಗೆ ಸುಧಿ ಅರ್ಹರಲ್ಲ. ಮನುವಿನ ಪ್ರೀತಿಗೆ ನಾನು ಅರ್ಹಳಲ್ಲ. ನಾನೊಂದು ಅನಾಥ ಹೆಣ್ಣು ಮಗುವಿಗೆ ನನ್ನ ಜೀವನ ಮೀಸಲಿಡುವ ನಿರ್ಧಾರ ಮಾಡಿದ್ದೇನೆ. ಈ ಊರನ್ನ ಬಿಟ್ಟು ದೂರ ಹೋಗುತ್ತಿದ್ದೇನೆ. ಮತ್ತೆ ನನ್ನ ಬಾಳಿನಲ್ಲಿ ಬರಲು ಪ್ರಯತ್ನಿಸಬೇಡಿ. ಹೋಗುತ್ತೇನೆ……………”ಎಂದು ಅವರಿಗೆ ಮಾತನಾಡಲು ಅವಕಾಶ ಕೊಡದೇ ಮುನ್ನಡೆದಿದ್ದಳು. ಚುಕ್ಕಿಯಕಣ್ಣುಗಳಲ್ಲಿ ನೀರಿತ್ತು. ಅವಳು ಕಣ್ಮರೆಯಾಗುದನ್ನ ನೋಡುತ್ತಿದ್ದ ಅವರಿಬ್ಬರ ಕಣ್ಣಲ್ಲಿ ಪಶ್ಚಾತ್ತಾಪವಿತ್ತು. ಅವಳು ದೂರ ನಡೆದು ಕಣ್ಮರೆಯಾದಳು.ಬಾನಿನಲ್ಲಿ ಆಗ ತಾನೇ ಮೂಡಿದ ಚುಕ್ಕಿ ನಗುತ್ತಿತ್ತು.

 

-Mamata Channappa

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!