ಕಥೆ

ನಕ್ಷತ್ರ

ಅವಳು ನಕ್ಷತ್ರ. ………

ಮನೆಯವರಿಗೆ ಪ್ರೀತಿಯ ಚುಕ್ಕಿ…….

ಹೆಸರೇನೋ ಚೆನ್ನಾಗಿತ್ತು.ಯಾರು ಈ ಹೆಸರಿಡಲು ಹೇಳಿದರೋ ಅವಳ ತಂದೆ ತಾಯಿಗೆ ಗೊತ್ತಿಲ್ಲ, ಅವಳಂತೂ ಅವಳ ಬಾಳಲ್ಲಿ ಬೆಳಕು ಕಾಣಲಿಲ್ಲ.ಈಗಲೂ ಅವಳ ಮನದಲ್ಲಿ ಪ್ರಶ್ನೆಗಳು ಕಾಡುತ್ತಿವೆ. “ನಿಜವಾಗಲೂ ನಾನು ಯಾರ ಬಾಳಿಗೂ ಬೆಳಕು ನೀಡದಿರುವ ಹೆಣ್ಣಾ? ಅಥವಾ ಅದು ಕೇವಲ ನನ್ನ ಕಲ್ಪನೆಯಾ? ನಾನು ಅವರಿಬ್ಬರ ಬಾಳಿಗೆ ಕಪ್ಪು ಚುಕ್ಕೆಯಾ? ” ಉತ್ತರವಿನ್ನು ಸಿಕ್ಕಿಲ್ಲ. ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಳೆ ಚುಕ್ಕಿ….

ಆ ಪಾರ್ಕ್ ಸುಂದರ ದೇವಲೋಕದಂತಿದೆ. ಅವಳು ಒಂದು ಬೆಂಚ್ ನ ಮೇಲೆ ಕುಳಿತಿದ್ದಾಳೆ. ಅವಳೆದುರಿನ ಬೆಂಚ್ ನಲ್ಲಿ ಅವಳ ಬಾಳಲ್ಲಿ ಬಂದು ಹೋದ ಅವರಿಬ್ಬರಿದ್ದಾರೆ. ಒಬ್ಬ ಸುಧಿ ಅಲಿಯಾಸ್ ಸುಧೀಂದ್ರ ,ಅವಳಿಂದ ದೂರ ಹೋಗಿ ಆರು ವರ್ಷ ಎಲ್ಲೋ ಇದ್ದ ಪತಿ. ಅವನ ಕಣ್ಣುಗಳಲ್ಲಿ ಅದೇನೋ ಪಶ್ಚಾತಾಪವಿದೆ. ಇನ್ನೊಬ್ಬ ಮನು ಅಲಿಯಾಸ್ ಮನೋಜ್, ಅವಳ ಮದುವೆಗೆ ಮೊದಲಿನ ಪ್ರಿಯತಮ. ಅವನ ಕಣ್ಣುಗಳಲ್ಲಿ ಇನ್ನು ಈ ನಕ್ಷತ್ರ ನನ್ನ ಬಾಳ ಆಗಸಕ್ಕೆ ಬಂದೇ ಬರುತ್ತದೆನ್ನುವ ವಿಶ್ವಾಸದ ಮಿಂಚು ಕಾಣುತ್ತಿದೆ. ಇನ್ನು ಇವಳ ಕಣ್ಣುಗಳು “ಯಾರು ಹಿತವರು ಎನಗೆ ?” ಎಂದು ಅವರಿಬ್ಬರ ಕಣ್ಣುಗಳನ್ನ ಪ್ರಶ್ನಿಸುತ್ತಿವೆ……….

ಈಗವಳಿಗೆ ಮೂವತ್ತು ವರ್ಷ. ಅವರಿಬ್ಬರಿಗೂ ಅಷ್ಟೇ. ಹನ್ನೊಂದು ವರ್ಷಗಳ ಹಿಂದೋಡಿತ್ತು ಅವಳ ಮನಸ್ಸು. ಆಗ ತಾನೇ ಹತ್ತೊಂಬತ್ತು ತುಂಬಿತ್ತವಳಿಗೆ. “ಹರೆಯದ ವಯಸು, ಎಲ್ಲೆಲ್ಲೂ ಸೊಗಸು, ಕಣ್ತುಂಬ ನೂರಾರು ಕನಸು” ಎನ್ನುವಂತೆ ಅವಳ ಹುಡುಗನ ಬಗ್ಗೆ ನೂರಾರು ಕನಸುಗಳನ್ನ ಕಣ್ತುಂಬಿಕೊಂಡಿದ್ದಳು. ಕನಸಿನ ಹುಡುಗ ಕಣ್ಮುಂದೆ ನಿಂತಿದ್ದ. ಅವನೇ ಮನು. ಯಾವಾಗಲೂ ಒಂಟಿಯಾಗಿ ಇರುವ, ಯಾರ ಮನಸ್ಸಿಗೂ ನೋವು ನೀಡದ ಮುಗ್ಧ ಹುಡುಗ. ಅವಳ ಮನೆ ಬೀದಿಯಲ್ಲಿಯೇ ಇದ್ದ ಆ ಹುಡುಗನನ್ನ ಇವಳು ಗಮನಿಸಿದ್ದಳು.ಯಾವ ಹುಡುಗಿಯನ್ನೂ ಕಣ್ಣೆತ್ತಿಯೂ ನೋಡದ ಮನು ಅವಳ ಮನ ತುಂಬಿದ್ದ. ಆದರೆ ಅವನಿಗೆ ಅವಳು ಬಾಯ್ಬಿಟ್ಟು ಹೇಳಿರಲಿಲ್ಲ. ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡದ ಮನು ಅದೊಂದು ದಿನ ಇವಳನ್ನ ನೋಡಿದ್ದ. ನಕ್ಷತ್ರಳನ್ನ ನೋಡಿದ ಅವನ ಕಣ್ಣಲ್ಲಿ ಸಾವಿರ ನಕ್ಷತ್ರಗಳ ಬೆಳಕು ಕಂಡಿತ್ತು. ಕಣ್ಣೋಟದಲ್ಲೇ ಸ್ವಲ್ಪ ದಿನಗಳು ಕಳೆದಿದ್ದವು. ಅದೊಂದು ದಿನ ಮನು ಅವಳ ಬಳಿ ಬಂದು “ನಾನು ನಿನ್ನನ್ನ ಪ್ರೀತಿಸುತ್ತೇನೆ.ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ ನಾಳೆ ಬಂದು ತಿಳಿಸು. ಇಲ್ಲದಿದ್ದರೂ ಅದನ್ನೂ ನಾಳೆ ಹೇಳಿ ಬಿಡು. ಮತ್ತೆ ಪ್ರೀತಿಸಿ ಮೋಸ ಮಾಡಬೇಡ. ನಾನು ಎಲ್ಲ ಹುಡುಗರಂತಲ್ಲ. ಈ ಮನುವಿನ ಮನಸು ತುಂಬ ಸೂಕ್ಷ್ನ ” ಎಂದಿದ್ದ ಅವನ ನೇರ ನುಡಿ ಅವಳಿಗಿಷ್ಟವಾಗಿತ್ತು. ಮರುದಿನ ಅವಳು ಒಪ್ಪಿಗೆ ಸೂಚಿಸಿದ್ದಳು. ಮೂರು ವರ್ಷ ಸಾಗಿತ್ತು ಅವಳ ಮತ್ತು ಮನುವಿನ ಪ್ರೀತಿ. ಎಲ್ಲೋ ತಪ್ಪಿ ಅವಳೇ ಅವನನ್ನ ನೋಯಿಸಿದ್ದರೂ ಅವನೆಂದೂ ಅವಳ ಮನ ನೋಯಿಸಿರಲಿಲ್ಲ.

ಅವಳ ಅಪ್ಪನಿಗೆ ಹೇಗೋ ವಿಷಯ ಗೊತ್ತಾಗಿತ್ತು. ನಕ್ಷತ್ರಳಿಗೆ ಇಂಜಿನಿಯರ್ ಹುಡುಗನನ್ನ ನೋಡಿದ್ದರು. ಅವಳಿಗೂ ತಿಳಿಸಿದ್ದರು. ಆಗವಳು ಮನುವಿನ ವಿಷಯ ಬಾಯ್ಬಿಟ್ಟಿದ್ದಳು. ಅವಳ ತಂದೆ ಅದಾಗಲೇ ಅವನ ಬಗ್ಗೆ ವಿಚಾರಿಸಿದ್ದರು. ಬೇರೆ ಜಾತಿಯ, ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ತಾಯಿಯೊಂದಿಗೆ ಜೀವನ ನಡೆಸುತ್ತಿದ್ದವನಿಗೆ ಮಗಳನ್ನ ಹೇಗೆ ತಾನೇ ಕೊಟ್ಟಾರು? ಆ ದಿನ ಅವಳ ತಂದೆ “ನೋಡು ಚುಕ್ಕಿ ಅವನು ಬೇರೆ ಜಾತಿಯವನು. ಅದೂ ಅಲ್ಲದೆ ಯಾವ ಆಸ್ತಿಯು ಇಲ್ಲ. ಒಂದು ಸರಿಯಾದ ನೌಕರಿ ಇಲ್ಲ. ನಾನು ನೋಡಿರುವ ಹುಡುಗ ಇಂಜಿನಿಯರ್, ಅವನನ್ನ ಮದುವೆಯಾದರೆ ನೀನು ದೊಡ್ಡ ಬಂಗಲೆಯಲ್ಲಿ ಇರಬಹುದು, ಕಾರಲ್ಲಿ ಓಡಾಡಬಹುದು. ಇರುವುದೊಂದು ಜೀವನ, ಬರೀ ಕಷ್ಟದಲ್ಲೇ ಯಾಕೆ ಕಳೆಯಬೇಕು? ಮನುವಿನಿಂದ ನೀನು ಶ್ರೀಮಂತ ಜೀವನ ಪಡೆಯಲು ಸಾಧ್ಯವಿಲ್ಲ. ನೀನೇನಾದರೂ ಅವನೊಂದಿಗೆ ಇನ್ನೊಮ್ಮೆ ಕಾಣಿಸಿದರೆ ನಿಮ್ಮಿಬ್ಬರನ್ನ ಕೊಂದು ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆಮೇಲೆ ನಿನ್ನ ತಾಯಿ ,ತಂಗಿ ಇನ್ನೇನು ಮಾಡುತ್ತಾರೆ? ಮಾನ ಹೋದ ಮೇಲೆ ಅವರೂ ವಿಷ ಕುಡಿಯುತ್ತಾರೆ. ಯೋಚನೆ ಮಾಡು. ಎಲ್ಲ ನಿನ್ನ ಕೈಯಲ್ಲಿದೆ.ನಿನಗೆ ನಿನ್ನ ಪ್ರೀತಿ ಮುಖ್ಯ, ನನಗೆ ನನ್ನ ಮಗಳು, ಅವಳ ನೆಮ್ಮದಿಯ ಜೀವನ ಮುಖ್ಯ. ಮನುವಿನಿಂದ ನಿನಗೆ ಹೇಳಿಕೊಳ್ಳುವಂತಹ ಜೀವನ ಸಿಗುವುದಿಲ್ಲ. ಅದು ನಿನಗೂ ಗೊತ್ತು. ಯಾವ ತಂದೆಯೂ ಮಗಳ ಜೀವನ ಹಾಳು ಮಾಡಲಾರ. ಭಾವನೆಗಳು ಏನನ್ನೂ ನೀಡುವುದಿಲ್ಲ. ವಾಸ್ತವಕ್ಕೆ ಬಾ “ಎಂದು ಹೊರ ನಡೆದಿದ್ದರು.

ಈಗವಳ ಮನಸ್ಸು ನಿಜಕ್ಕೂ ಚಂಚಲವಾಗಿತ್ತು. ಯಾರನ್ನು ಆಯ್ದಕೊಳ್ಳುವುದು? ಶ್ರೀಮಂತಿಕೆಯ ಆಸೆಯಿಂದ, ಮತ್ತೆ ಅಪ್ಪನ ಒತ್ತಾಯಕ್ಕೆ, ಮನುವನ್ನ ಕೈಬಿಟ್ಟರೆ ಮೋಸ ಮಾಡಿದಂತಾಗುವುದಿಲ್ಲವೇ? ಅಥವಾ ನನ್ನ ಪ್ರೀತಿಯೇ ಮುಖ್ಯವೆಂದು ಮನುವಿನ ಹಿಂದೆ ಹೋದರೆ ಅಪ್ಪ ಹೇಳಿದಂತೆಯೇ ಮಾಡುತ್ತಾರೆ. ಆಗ ಐದು ಜನರ ಪ್ರಾಣಕ್ಕೆ ನಾನು ಹೊಣೆಯಾಗುತ್ತೇನೆ. ಅದೂ ಅಲ್ಲದೇ ಇರುವ ಒಂದು ಜೀವನವನ್ನ ಶ್ರೀಮಂತಿಕೆಯಲ್ಲಿ ಕಳೆದರೆ ತಪ್ಪೇನಿಲ್ಲ ಅಲ್ವಾ ?……. ಛೀ ! ಪ್ರೀತಿಯನ್ನ ಶ್ರೀಮಂತಿಕೆಯಿಂದ ಅಳೆಯುವುದೇ, ಇಲ್ಲ…….. ನಾನು ಹಾಗೆ ಮಾಡಲಾರೆ……ಇಲ್ಲ…..ನನಗೆ ನನ್ನ ತಂದೆ ಮುಖ್ಯ, ಪ್ರ್ಯಾಕ್ಟಿಕಲ್ ಆಗಿ ಯೋಚಿಸಿದರೆ ಅಪ್ಪ ಹೇಳುವುದು ಸರಿ. ಹೀಗೆ ರಾತ್ರಿಯೆಲ್ಲ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದಳು. ಆ ನಿರ್ಧಾರ ಅವಳ ಬದುಕಿನ ದಾರಿಯನ್ನ ನೋವಿನತ್ತ ಕೊಂಡೊಯ್ದಿತ್ತು.

ಮರುದಿನ ನೇರವಾಗಿ ಮನುವಿನ ಮನೆಗೆ ಬಂದವಳೇ “ನನ್ನನ್ನ ಕ್ಷಮಿಸು ಮನು ನನ್ನ ಅಪ್ಪನ ವಿರುದ್ಧ ನಡೆಯಲಾರೆ. ನೀನು ನನ್ನ ಮರೆತು ಬೇರೆಯವಳನ್ನ ಮದುವೆಯಾಗಿ ಚೆನ್ನಾಗಿರು” ಎಂದಿದ್ದಳು. ಮನು ಅವಳು ತಮಾಷೆ ಮಾಡುತ್ತಿದ್ದಾಳೆಂದು ತಿಳಿದು “ಆಯ್ತು ನಿನ್ನಂಥಹ ಒಂದು ಹುಡುಗಿ ಹುಡುಕು” ಎಂದ. “ನಾನು ತಮಾಷೆ ಮಾಡುತ್ತಿಲ್ಲ ಮನು”ಎಂದು ಚುಕ್ಕಿ ಬಿಕ್ಕಲು ಪ್ರಾರಂಭಿಸಿದಾಗ ಮನು ನಿಂತಲ್ಲಿಯೇ ನಡುಗಿದ್ದ. “ನಿನ್ನ ಬಿಟ್ಟು ಬದುಕಲಾರೆ ಚುಕ್ಕಿ. ಮೋಸ ಮಾಡಬೇಡ.ಈ ಮನು ತುಂಬಾ ಸೂಕ್ಷ್ಮ ಅಂತಾ ಮೊದಲೇ ಹೇಳಿದ್ದೆ…..ನಿನಗೆ ನಾನು ಬೇಡವಾದರೆ…..ಇರು ಬಂದೆ….. ” ಎಂದವನೇ ಒಂದು ಹಗ್ಗ ತಂದು ಮನೆಯ ಫ್ಯಾನ್ ಗೆ ಹಾಕಿ ಸ್ಟೂಲ್ ಮೇಲೆ ನಿಂತ ಮನು, “ಈ ಸ್ಟೂಲ್ ಒದ್ದು ಹೋಗಿ ನೆಮ್ಮದಿಯಿಂದ ಬದುಕು” ಅಂದ. ಅವಳಿಗೆ ಏನೂ ತಿಳಿಯದೇ ನಿಂತಿದ್ದಳು. ಅಂಗಡಿಯಿಂದ ಬಂದ ಅವನ ತಾಯಿ ಈ ದೃಶ್ಯ ನೋಡಿ ಮಗನ ಹತ್ತಿರ ಬಂದು “ಇನ್ನೊಂದು ಹಗ್ಗ ತಗೊ ಮನು….ನಾನೂ ನಿನ್ನ ಜೊತೆ ಬರುತ್ತೇನೆ. ನಿನ್ನಪ್ಪ ಹೋದ ಮೇಲೆ ನಿನಗಾಗಿ ತಾನೇ ಬದುಕಿದ್ದು , ನೀನೇ ಇಲ್ಲದ ಮೇಲೆ ನಾನು ಬದುಕಿ ಏನು ಸಾಧಿಸಲಿ?” ಎಂದಾಗ ಮನು ಕೆಳಗಿಳಿದು ತಾಯಿಯನ್ನ ತಬ್ಬಿ ಬಿಕ್ಕಳಿಸಿದ್ದ. ಚುಕ್ಕಿ ಏನೂ ಹೇಳದೇ ಅಳುತ್ತ ಹೊರಗೋಡಿದ್ದಳು. ಅಂದಿನಿಂದ ಮನುವಿನ ಕಣ್ಣಿಗೆ ಅವಳು ಬಿದ್ದಿರಲಿಲ್ಲ. ಆದರೆ ಅವಳು ಮತ್ತೆ ಬರುತ್ತಾಳೆ ಎಂದು ಕಾಯ್ದಿದ್ದ ಮನುವಿಗೆ ಸಿಕ್ಕದ್ದು ಅವಳ ಮದುವೆಯ ಕರೆಯೋಲೆ.

ಮನು ಹುಚ್ಚನಂತಾಗಿದ್ದ.ಬದುಕಲು ಮನುವಿಗೆ ಮನಸ್ಸಿಲ್ಲ. ಸಾಯಲು ತಾಯಿ ಬಿಡುತ್ತಿಲ್ಲ. ಚುಕ್ಕಿಯನ್ನ ಇರಿದು ಕೊಲ್ಲುವಷ್ಟು ಕೋಪ. ಆದರೆ ಹಾಗೆ ಮಾಡಿದರೆ ತನಗೇ ತಾನೇ ನೋವು? ತಾಯಿಯ ಮಡಿಲಲ್ಲಿ ಮಲಗಿ ಜೋರಾಗಿ ಅತ್ತಿದ್ದ. ಅಂತೂ ಚುಕ್ಕಿ ಯ ಮದುವೆ ಸುಧಿಯೊಂದಿಗೆ ನಡೆದೇ ಹೋಗಿತ್ತು.

ಇತ್ತ ಮನು ಸೈಕೊ ಆಗಿದ್ದ.ಅವಳ ಗಂಡನಿಂದ ಅವಳನ್ನು ದೂರ ಮಾಡಿ ಅವಳನ್ನು ಪಡೆದೇ ತೀರಬೇಕು ಎಂದು ಹಠ ತೊಟ್ಟಿದ್ದ. ಚುಕ್ಕಿ ಹರಸಾಹಸ ಮಾಡ ಮನುವನ್ನ ಮರೆಯುತ್ತ ಸುಧಿಯ ಮುದ್ದಿನ ಮಡದಿಯಾಗಿದ್ದಳು. ಅದಾಗಲೇ ಮನುವಿನ ಮನಸಲ್ಲಿ ಕೆಟ್ಟ ಯೋಚನೆ ಬಂದಿತ್ತು. ಫೇಸ್ ಬುಕ್ ಅಕೌಂಟ್ ಓಪನ್ ಮಾಡಿ ಅವಳ ತನ್ನ ಜೊತೆಗಿರುವ ಫೋಟೋವನ್ನ ಸುಧಿಗೆ ಕಳುಹಿಸಿದ್ದ. ಸುಧಿ ಏನೂ ಮಾತಡದೇ ನೇರವಾಗ ಮೊಬೈಲ್ ತಂದು ಮುದ್ದಿನ ಮಡದಿಯ ಮುಂದಿಟ್ಟಿದ್ದ. ಮನು ಹಾಗೆ ಮಾಡಿದ್ದಾನೆಂದು ಅವಳಿಗೆ ನಂಬಲಾಗಲಿಲ್ಲ. ಆದರೆ ಸತ್ಯ ಕಣ್ಮುಂದೆಯೇ ಇತ್ತು. ನಡುಗುತ್ತಿದ್ದವಳನ್ನ ಸುಧಿ ತಬ್ಬಿ “ನಿನ್ನ ಹಳೆಯ ಕಥೆ ಏನೇ ಇರಲಿ ನಾನು ಕೇಳುವುದಿಲ್ಲ. ಇನ್ಮುಂದೆ ನನಗೆ ಒಳ್ಳೆಯ ಹೆಂಡತಿಯಾದರೆ ಸಾಕು” ಎಂದಿದ್ದ. ನಂಬಲಾಗಲಿಲ್ಲ ಅವಳ ಕಿವಿಗಳಿಗೆ. “ನಾನು ಅವನನ್ನ ಪ್ರೀತಿಸಿದ್ದು ನಿಜ.ಆದರೆ ಮದುವೆಯಾದ ಮೇಲೆ ನಿಮಗೆ ದ್ರೋಹ ಮಾಡಿಲ್ಲ. ದಯವಿಟ್ಟು ಕ್ಷಮಿಸಿ.ಮದುವೆಗೆ ಮೊದಲು ಈ ವಿಷಯ ನಿಮಗೆ ಹೇಳಲು ಪ್ರಯತ್ನಿಸಿದೆ. ಆದರೆ ಅಪ್ಪ ನನ್ನ ಬಾಯಿ ಮುಚ್ಚಿಸಿದರು.” ಎಂದು ಸುಧಿಯ ಕಾಲು ಹಿಡಿದಿದ್ದಳು. ಸುಧಿಯೇ ಪೋಲಿಸರ ಮೂಲಕ ಮನುವಿನ ಬಾಯ್ಮುಚ್ಚಿಸಿದ್ದ. ಆದರೂ ಸುಧಿ ಏನೋ ಬದಲಾಗಿದ್ದ. ದಿನಕ್ಕೊಮ್ಮೆ ಯಾದರೂ ಅವಳ ಮೊಬೈಲ್ ಚೆಕ್ ಮಾಡುತ್ತಿದ್ದ. ತರಕಾರಿ ತರಲು ಕೂಡಾ ಒಬ್ಬಳೇ ಹೋಗುವಂತಿರಲಿಲ್ಲ. ಈ ವಿಷಯ ಸುಧಿಯ ತಾಯಿಗೆ ಗೊತ್ತಾಗಿತ್ತು. ಪದೇ ಪದೇ “ನೀತಿಗೆಟ್ಟವಳು … ನನ್ನ ಮನೆಗೇ ಬರ್ಬೇಕಿತ್ತಾ ? ಎಲ್ಲಾದ್ರೂ ಹಾಳಾಗಿ ಹೋಗಿ ಸಾಯೇ……..ನನ್ ಮಗನಿಗೆ ಯಾರಾದ್ರೂ ಒಳ್ಳೆ ಹುಡುಗಿ ನೋಡಿ ಮದುವೆ ಮಾಡ್ತೀನಿ ” ಎಂದು ಸುಧಿಯ ಎದುರೇ ಚುಚ್ಚಿ ಮಾತಾಡುತ್ತಿದ್ದರೂ ಸುಧಿ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿರುತ್ತಿದ್ದ. ರಾತ್ರಿ ಏಕಾಂತದಲ್ಲಿ ಈ ಬಗ್ಗೆ ಚುಕ್ಕಿ ವಿಚಾರಿಸಿದರೆ “ನೋಡು ನನ್ನ ತಾಯಿಗೆ ಎದುರಾಡಲಾರೆ. ಈಗಲೂ ನಿನಗೆ ನನ್ನ ಹೆಂಡತಿಯ ಸ್ಥಾನ ಕೊಟ್ಟಿದ್ದೇ ಹೆಚ್ಚು. ಎಲ್ಲ ಸಹಿಸಿಕೊಂಡು ಇರುವುದಾದರೆ ಇರು. ಇಲ್ಲದಿದ್ದರೆ ಹೊರಟು ಹೋಗು….. ಚುಕ್ಕಿ ನೀನು ಒಳ್ಳೆಯವಳೇ. ಆದರೆ ನನ್ನ ಜೀವನಕ್ಕೆ ಕಪ್ಪು ಚುಕ್ಕೆಯಾಗಿಬಿಟ್ಟೆ.” ಎಂದು ಅತ್ತ ಹೊರಳಿ ಮಲಗಿದ್ದ. ಚುಕ್ಕಿ ಎಷ್ಟೋ ಹೊತ್ತು ಮೌನವಾಗಿ ಕಣ್ಣೀರು ಸುರಿಸಿದ್ದಳು.

ಮನು ನಿಜವಾಗಿಯೂ ನನ್ನ ಪ್ರೀತಿಸಿದ್ದರೆ ಖಂಡಿತ ಹೀಗೆ ಮಾಡುತ್ತಿರಲಿಲ್ಲ ಅಲ್ವಾ? ಎಂದು ತನ್ನನ್ನೇ ಪ್ರಶ್ನಿಸಿಕೊಂಡವಳಿಗೆ ತಾನು ಮನುವಿಗೆ ಮಾಡಿದ್ದೇನು? ಎಂದು ತನ್ನನ್ನು ಪ್ರಶ್ನಿಸಿಕೊಳ್ಳದೇ ವಿಧಿ ಇರಲಿಲ್ಲ. ದಿನದಿಂದ ದಿನಕ್ಕೆ ಚುಚ್ಚು ಮಾತುಗಳು ಹೆಚ್ಚಾಗಿದ್ದವು. ಅದೊಂದು ದಿನ ಅತ್ತೆಯ ಚುಚ್ಚು ಮಾತುಗಳಿಂದ ನೊಂದಿದ್ದ ಚುಕ್ಕಿ ಎದುರಾಡಿದ್ದಳು. ಸುಧಿ ಮನ ಬಂದಂತೆ ಚುಕ್ಕಿಯನ್ನ ಥಳಿಸಿದ್ದ. ಅವಳ ಅತ್ತೆಯ ನೋಟ “ಅವನು ನನ್ನ ಮಗ ಕಣೆ” ಎಂದಂತೆ ಭಾಸವಾಗಿತ್ತು ಚುಕ್ಕಿಗೆ.

ಅದೊಂದು ದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದ ಚುಕ್ಕಿಗೆ ಆಶ್ಚರ್ಯದ ಜೊತೆ ಆಘಾತ ಕಾದಿತ್ತು. ಅವಳ ಪಕ್ಕದಲ್ಲಿ ಸುಧಿಯ ಪತ್ರವಿತ್ತು.

ಚುಕ್ಕಿ…..

ಪ್ರೀತಿಯ ಚುಕ್ಕಿ …..ಎಂದು ಬರೆಯಲು ನೀನು ಅರ್ಹಳಲ್ಲ. ನಿನ್ನಿಂದಾಗಿ ನಾನು,ಅಮ್ಮ, ಸ್ನೇಹಿತರು ಮತ್ತು ಸಂಬಂಧಿಕರ ಮುಂದೆ ತಲೆ ಎತ್ತದಂತಾಗಿದೆ. ಎಲ್ಲರಿಗೂ ನಿನ್ನ ನಡತೆಯ ಸರ್ಟಿಫಿಕೇಟ್ ಕೊಟ್ಟು ಕೊಟ್ಟು ಸಾಕಾಗಿದೆ. ನಾನು ಮತ್ತು ಅಮ್ಮ ಮನೆ ಬಿಟ್ಟು ಹೋಗುತ್ತಿದ್ದೇವೆ. ನೀನು ನನ್ನ ಮನೆ, ಮನಸಿಗೆ ಕಪ್ಪು ಚುಕ್ಕೆಯಾಗಿಬಿಟ್ಟೆ. ಮತ್ತೆ ನನ್ನ ಬದುಕಿಗೆ ಬರಲು ಪ್ರಯತ್ನಿಸಬೇಡ.

ಇಂತಿ ……
ಸುಧಿ

ಪತ್ರ ಓದಿದವಳ ತಲೆ ತಿರುಗಿದಂತಾಗಿತ್ತು. ಏನು ಮಾಡಬೇಕೋ, ಎಲ್ಲಿಗೆ ಹೋಗಬೇಕೋ ತಿಳಿಯಲಿಲ್ಲ. ಮುಂದೆ ಅವಳು ಹೋಗಿದ್ದು ತವರು ಮನೆಗಾ? ಮನುವಿನ ಮನೆಗಾ? ಅಥವಾ ಸುಧಿಯನ್ನ ಅರಸುತ್ತಾ?…..

ಯಾರಲ್ಲಿಗೆ ಹೋದಳು? ಅಲ್ಲಿಂದ ಅವಳ ಬದುಕು ಪಡೆದುಕೊಂಡ ತಿರುವೇನು?

ಮುಂದಿನ ಭಾಗದಲ್ಲಿ ……………

-Mamata Channappa

mamatachannappa980@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!