ಆತ್ಮ ಸಂವೇದನಾ ಮತ್ತೆ ವರ್ಷಿಯ ಪ್ರಯೋಗಾಲಯದಲ್ಲಿದ್ದರು. ವರ್ಷಿಯದು ಮುಗಿದು ಹೋದ ಅಧ್ಯಾಯ. ಆತ್ಮ ಹೊಸದನ್ನು ಪ್ರಾರಂಭಿಸಬೇಕು.
ಇತಿಹಾಸ ಎಲ್ಲವನ್ನೂ ನೆನಪಿಸುತ್ತದೆ;
ಕಾಲ ಎಲ್ಲವನ್ನೂ ಮರೆಸುತ್ತದೆ.
ಆತ್ಮನ ಮೊದಲ ಗುರಿ ಎರಡನೇ ಸೂರ್ಯನನ್ನು ಸ್ಥಾನಭ್ರಂಶಗೊಳಿಸುವುದು. ಅದಕ್ಕೆ ಅವಕಾಶವಾದರೆ ಕಪ್ಪು ಜೀವಿಗಳ ಮನವೊಲಿಸಬಹುದು ಎಂದುಕೊಂಡಿದ್ದ. ಮಿಂಚಿನ ತರ್ಕಗಳು ತಲೆಯಲ್ಲಿ.
ಯುದ್ಧಕ್ಕೆ ಸಿದ್ಧ ಎಂದರೂ ಆತನಿಗೆ ತಿಳಿದಿದೆ, ಕಪ್ಪು ಜೀವಿಗಳೆದುರು ನಿಂತು ಹೋರಾಡುವುದು ಸುಲಭದ ಸಂಗತಿಯಲ್ಲ ಎಂಬುದು. ಅವುಗಳ ವಿಜ್ಞಾನ, ಸಾಮರ್ಥ್ಯ ಎಲ್ಲವನ್ನೂ ನೋಡಿದ್ದಾನೆ ಆತ್ಮ. ಇದರಿಂದಲೇ ಎರಡನೇ ಸೂರ್ಯನನ್ನು ತೆಗೆದು ಶಾಂತ ರೀತಿಯಲ್ಲಿ ಇದನ್ನು ಮುಗಿಸಿಬಿಡಬೇಕೆಂದು ಅವನ ಅಭಿಪ್ರಾಯ.
ಇಬ್ಬರೂ ವರ್ಷಿಯ Virtual Element ಪ್ರಯೋಗದ ಎದುರು ನಿಂತಿದ್ದರು. ಅಲ್ಲಿ ಹೊಸತೇನು ವಸ್ತುಗಳಿರಲಿಲ್ಲ. ಒಂದು ಗಾಜಿನ ಪರದೆಯಲ್ಲಿ ಚಿಕ್ಕ ಬೆಳಕೊಂದು ಆಚೆಗೂ, ಈಚೆಗೂ ಚಲಿಸುತ್ತಿತ್ತು. ಇದನ್ನೇನು ಮಾಡುವುದು? ಇದಕ್ಕೂ, ಎರಡನೇ ಸೂರ್ಯನಿಗೂ ಸಂಬಂಧವಿದೆಯಾ? ಅನುಮಾನ ಮೂಡಿತು ಆತ್ಮನಿಗೆ. ವರ್ಷಿ ಆ ಪ್ರಯೋಗ ಮಾಡುವಾಗ ಆತ್ಮ ಸಂವೇದನಾ ಅಲ್ಲಿಯೇ ಇದ್ದರೂ ಏನು ಮಾಡಿದ್ದ ಎಂದು ನೋಡಿರಲಿಲ್ಲ, ಗ್ರಹಿಸಿರಲಿಲ್ಲ ಅಷ್ಟೆ.
ಸ್ವತಃ ವರ್ಷಿಗೆ ಆ ಪ್ರಯೋಗದ ಮೇಲೆ ನಂಬಿಕೆ ಇರಲಿಲ್ಲವೇನೋ ಎಂದುಕೊಂಡಿದ್ದ ಆತ್ಮ. ಆದರೆ ವರ್ಷಿ ಗೆದ್ದಿದ್ದ ಆಗಸದಲ್ಲಿ ಎರಡನೇ ಸೂರ್ಯನನ್ನೇ ಸೃಷ್ಟಿ ಮಾಡಿ.
ವಿಶ್ವಾತ್ಮ ತನ್ನ ಬೆನ್ನಿಗಿರುವನು ಎಂದು ಪದೇ ಪದೇ ಹೇಳುತ್ತಿದ್ದ ವರ್ಷಿ, ವರ್ಷಿಯೇ ವಿಶ್ವಾತ್ಮನಿರಬಹುದು ಎಂದುಕೊಂಡಿದ್ದ ಆತ್ಮ. ಎರಡನೇ ಸೂರ್ಯನ ಸೃಷ್ಟಿಯನ್ನು ನೋಡಿ, ಅದೆಷ್ಟು ಸಾಮರ್ಥ್ಯ? ಹೇಗೆ ಇವೆಲ್ಲ ಸಾಧ್ಯವಾಯಿತು ವರ್ಷಿಗೆ? ವರ್ಷಿಯು ಸೃಷ್ಟಿಕರ್ತನೇ ಆಗಿಬಿಟ್ಟಿದ್ದಾನೆ, ನಿಜವಾಗಿಯೂ ವಿಶ್ವಾತ್ಮ ಆತನ ಜೊತೆಯಿರಬಹುದು, ಹಾಗಾದರೆ ನಾನೂ ಅವನನ್ನು ನೋಡಬೇಕು ಎಂದುಕೊಂಡ. ಆತ್ಮನ ಮನಸ್ಸು ನಿಜವಾಗಿಯೂ ವಿಶ್ವಾತ್ಮನನ್ನು ನೋಡಲು ಬಯಸುತ್ತಿತ್ತು. ಮನಸ್ಸಿಟ್ಟು ನೋಡಿದರೆ ವಿಶ್ವಾತ್ಮ ಎಲ್ಲರಿಗೂ ಕಾಣುತ್ತಾನೆ ಎನ್ನುತ್ತಿದ್ದ ವರ್ಷಿ.
ಯಾವುದು ಸತ್ಯ??
ಯಾವುದು ಕಥೆ??
ಯೋಚನೆಗಳು ಸಾಗುತ್ತಲೇ ಇದ್ದವು. ಸನಾ ಗಾಜಿನ ಪೆಟ್ಟಿಗೆಯೆದುರು ನಿಂತು ಏನು ಮಾಡಬಹುದೆಂದು ಯೋಚಿಸುತ್ತಿದ್ದಳು. ಪೆಟ್ಟಿಗೆಯನ್ನು ಧ್ವಂಸ ಮಾಡಿದರೆ ಎರಡನೇ ಸೂರ್ಯ ಹೊರಹೋಗಿಬಿಡುವನೇನೋ? ಇದನ್ನೇ ನಾಶ ಮಾಡೋಣ ಎಂದುಕೊಂಡ ಆತ್ಮ. ಅಷ್ಟರಲ್ಲಿ ವರ್ಷಿಯ Virtual Computer ನೆನಪಾಯಿತು ಸನಾಳಿಗೆ. ಅದರಲ್ಲಿ ಏನಾದರು ಮಾಹಿತಿಗಳು ಸಿಗಬಹುದೇನೋ ಎಂದು ಅತ್ತ ಕಡೆ ಹೊರಟಳು.
ಆತ್ಮ ಕೂಡ ಕಂಪ್ಯೂಟರ್ ನೆಡೆಗೆ ಸಾಗಿದ. ಕಂಪ್ಯೂಟರ್ ಅದರಷ್ಟಕ್ಕೆ ಹತ್ತಿಕೊಂಡಿತು.ಎದುರಿನವರ ಮೆದುಳಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಂಡು ಉತ್ತರಿಸುವ ಸಾಮರ್ಥ್ಯವಿರುವ ಗಣಕ ಪರದೆ ಅದು.
ಆತ್ಮನ ಮೆದುಳಿನಲ್ಲಿ ಸಾವಿರ ಯೋಚನೆಗಳು ಓಡುತ್ತಿದ್ದವು. ಕಂಪ್ಯೂಟರ್ ಏನು ತೋರಿಸಬೇಕೆಂದು ತಿಳಿಯದೆ ಬಣ್ಣದ ಪರದೆಯಾಯಿತು. ಸೆಕೆಂಡಿನ ಬಳಿಕ ‘ನಿಮ್ಮ Input ಅವಶ್ಯಕತೆಯಿದೆ’ ಎಂದಿತು. ‘ವರ್ಷಿಯ ಎರಡನೇ ಸೂರ್ಯನ ಬಗ್ಗೆ ಮಾಹಿತಿ’ ಎಂದ ಆತ್ಮ ಕುತೂಹಲದಿಂದ.
ಪರದೆಯ ಮೇಲೆ ವಿವಿಧ ರೀತಿಯ ಚಿತ್ರಗಳು, ಮಾಹಿತಿಗಳು ಮೂಡಿ ಬಂದವು. ವರ್ಷಿ ಅದನ್ನು ಹೇಗೆ ಮಾಡಿದ? ಅದರ ಹಿಂದಿನ ಉದ್ಧೇಶಗಳು, ಮುಂದಿನ ಪರಿಣಾಮಗಳು ಎಲ್ಲವೂ ಇದ್ದವು. ಕಪ್ಪು ಜೀವಿಗಳಿಗಾದ ತೊಂದರೆಯಿಂದ ಅವುಗಳು ಯುದ್ಧಕ್ಕೆ ಬಂದಿರುವವರೆಗಿನ ಎಲ್ಲ ಮಾಹಿತಿಗಳು, ವರ್ಷಿಯ ಸಾವಿನ ಕ್ರೂರತೆಯೂ ಕನಸಿನಂತೆ ಕಣ್ಣೆದುರು ತೆರೆದುಕೊಳ್ಳುತ್ತಾ ಹೋಯಿತು.
ಎರಡನೇ ಸೂರ್ಯನನ್ನು ಹೇಗೆ ಮೇಲಕ್ಕೆ ಕಳುಹಿಸಿದ್ದು ಎಂಬುದರ ರೆಕಾರ್ಡ್ ಇತ್ತು ಬಿಟ್ಟರೆ ಅದನ್ನು ತೆಗೆಯುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಿರಲಿಲ್ಲ. ವರ್ಷಿಗೆ ಆ ಯೋಚನೆಗಳಿದ್ದರೆ ತಾನೇ?
ಎರಡನೇ ಸೂರ್ಯನನ್ನು ತೆಗೆಯುವುದು ಹೇಗೆ?? ಸಂವೇದನಾ ಪ್ರಶ್ನೆಯಾದಳು.
ಕಂಪ್ಯೂಟರ್ ಪರದೆಯ ಮೇಲೆ ಹುಡುಕುತ್ತಿರುವ ಗುರುತು ಮೂಡಿತು. ಇದೇ ಮೊದಲ ಬಾರಿಗೆ Virtual Computer ಕೂಡ ಮಾಹಿತಿ ಉಳಿಸಿಕೊಂಡಿಲ್ಲ. ಕ್ಷಣಗಳು ವೇಗವಾಗಿ ಉರುಳತೊಡಗಿದವು. ವರ್ಶಿಯನ್ನು ಕಳೆದುಕೊಂಡ ಪ್ರಯೋಗಾಲಯ ಅಸ್ತವ್ಯಸ್ಥವಾಗಿತ್ತು. ಗೋಡೆಯ ಮೇಲಿನ ದೊಡ್ಡ ಗಡಿಯಾರ ನಿಂತು ಹೋಗಿತ್ತು.
ಆದರೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ.
ಅವುಗಳ ಜೊತೆಯಲ್ಲಿ ವರ್ಷಿ ಹೊಂದಿದ ಸಂಬಂಧವೇ ಅಂಥದ್ದು. ನೀನಿರದ ಕಡೆ ನಾವೇಕೆ ನಿಲ್ಲುವುದು ಎಂದು ಅವನ ಜೊತೆಯೇ ನಡೆದುಹೋದಂತೆ. ಮನುಷ್ಯ ನಿರ್ಜೀವ ಎಂದರೂ ವಿಶ್ವಕ್ಕೆ ಎಲ್ಲವೂ ಸಜೀವ ಆತ್ಮಗಳೇ ಎಂದುಕೊಂಡ ಆತ್ಮ.
ಐದು ನಿಮಿಷಗಳ ನಂತರ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಎಂದಿತು ಕಂಪ್ಯೂಟರ್. ಇಬ್ಬರೂ ಮುಖ ಮುಖ ನೋಡಿಕೊಂಡು ಆ ಗಾಜಿನ ಪೆಟ್ಟಿಗೆಯ ಬಳಿ ಬಂದು ನಿಂತರು. ಈ ಪೆಟ್ಟಿಗೆಯನ್ನೇ ಒಡೆದು ಬಿಡೋಣ ಎಂದ ಆತ್ಮ. ಸನಾಳಿಗೆ ಇಷ್ಟವಿರಲಿಲ್ಲ. ವಿಜ್ಞಾನವೆಂದ ಮೇಲೆ ಅದಕ್ಕೆ ನಿರ್ದಿಷ್ಟ ಸೂತ್ರಗಳು, ತಾಳೆಯಾಗುವ ಲೆಕ್ಕಾಚಾರಗಳು ಇದ್ದೇ ಇರುತ್ತವೆ. ಅದನ್ನು ಮರೆತು ಹೋದರೆ ಪ್ರತಿಕ್ರಿಯೆಗಳು ಇಲ್ಲ, ಕ್ರಿಯೆಗಳು ಅರ್ಧಕ್ಕೆ ನಿಂತು ಹೋಗುತ್ತವೆ ಎಂದು ಸನಾ ಯೋಚಿಸುತ್ತಿದ್ದಳು. ಆದರೂ ಏನು ಮಾಡಬೇಕೆಂದು ತಿಳಿಯುತ್ತಿಲ್ಲ, ಮಾಡಬಾರದ್ದು ಯಾವುದೆಂದು ಗೊತ್ತವಳಿಗೆ.
ಸಣ್ಣ ಬೆಳಕಿನ ಕಿರಣವೊಂದು ಅದರೊಳಗೆ ಚಲಿಸುತ್ತಿದೆ. ಸುತ್ತಲೂ ಕತ್ತಲು ಹರಡಿದೆ. ಏನಿದರ ಸೂಚನೆ?? ಕ್ರಿಯೆಗಳಾದರೆ ಅಲ್ಲಿ ಪ್ರತಿಕ್ರಿಯೆ. ಏನಾದರೂ ಸರಿಯೇ ಬೆಳಕಿನ ಕಿರಣಗಳನ್ನು ಅಲ್ಲಿಂದ ಜಾರಿಸಬೇಕು ಎಂದುಕೊಂಡ ಆತ್ಮ. ಪೆಟ್ಟಿಗೆಯ ಕೆಳಭಾಗದಲ್ಲಿ ಚಿಕ್ಕದೊಂದು ಬಾಗಿಲಿತ್ತು, ಮುಚ್ಚಿದ ಬಾಗಿಲು. ಕತ್ತಲ ಪರದೆ, ಅದನ್ನು ಸರಿಸಿ ಕೈ ಒಳಗೆ ತೂರಿಸಿ ಬೆಳಕಿನ ಕಿರಣವನ್ನು ಬೊಗಸೆಯಲ್ಲಿ ಹಿಡಿದ. ಹೊರತರಲು ಸಾಧ್ಯವೇ??
ಅದು ಸಾಧ್ಯವಿಲ್ಲವೆಂದು ಅರಿವಾಯಿತು. ಆದರೆ ಆ ಬೆಳಕಿನ ಕಿರಣ ಎಲ್ಲಿಂದ ಬರುತ್ತಿದೆ? ಯಾವುದೇ ಉಪಕರಣಗಳಿಲ್ಲದೇ, ಏನೂ ಸಲಕರಣೆಗಳ ಉಪಯೋಗಿಸದೇ ಆತ ಬೆಳಕನ್ನು ಹೇಗೆ ಸೃಷ್ಟಿಸಿದ??
ವರ್ಷಿ ವಿಜ್ಞಾನಕ್ಕೆ ತಂದೆ. ಮಹಾತಂತ್ರಜ್ಞಾನಿ ಎಂದು ತಂದೆಯ ಬಗ್ಗೆ ಗರ್ವಗೊಂಡ ಆತ್ಮ.
ಕೊನೆಯಲ್ಲಿ ಉಳಿದಿರುವುದು ಒಂದೇ, ಒಡೆಯಬೇಕು ಎಂದು ಇಬ್ಬರೂ ನಿರ್ಧರಿಸಿದರು.
ತಪ್ಪು ಮಾಡುತ್ತಿರುವಿರೆಂದು ಹೇಳುವುದು ಯಾರು? ಅಲ್ಲೇ ಪಕ್ಕದಲ್ಲಿ ಬಿದ್ದ ಕಬ್ಬಿಣದ ಸರಳೊಂದನ್ನು ಎತ್ತಿಕೊಂಡು ಬಂದ ಆತ್ಮ. ಮುಂದೇನಾಗಬಹುದು ಎಂಬ ಕೌತುಕ ಸಂವೇದನಾಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ದೇವರನ್ನು ನೆನೆದಳು ಒಮ್ಮೆ.
“ದೇವರು!!??” ದೇವರು ಎಂದರೆ ಯಾರು? ದೇವರು ಎಂದರೆ ಏನು? ಅದು ಕೂಡ ಒಂದು ವರ್ಚುವಲ್ ಸ್ಥಿತಿ. ದೇವರು ಎಲ್ಲರಿಗಿಂತ ದೊಡ್ಡವನಲ್ಲ, ಎಲ್ಲವನ್ನೂ ಸೃಷ್ಟಿಸಿದವನೂ ದೇವರಲ್ಲ.
ಯಾಕೆಂದರೆ ದೇವರಲ್ಲೂ ಭೇದವಿತ್ತು. ದೇವರೂ ಜಾತಿಗಳನ್ನು ಸೃಷ್ಟಿಸಿದ. ಕಪ್ಪು ಬಿಳುಪೆಂದು ವರ್ಣ ಭೇದ ಮಾಡಿದ. ದೇವರಲ್ಲ ಮನುಷ್ಯ ಇಷ್ಟು ಮಾಡಿದ್ದು. ಸಾವಿರ ವರ್ಷಗಳ ಹಿಂದೆ ಧರ್ಮದ ಹೆಸರಿನಲ್ಲಿ ದೇವರನ್ನು ಕೂಡ ಒಡೆದು ಆಳುತ್ತಿದ್ದರು. ಜಾತಿಯ ಹೆಸರಿನಲ್ಲಿ ಜಗತ್ತು ವಿಚ್ಛಿದ್ರವಾಗಿತ್ತು.
ಮನುಷ್ಯನೇ ಇದನೆಲ್ಲವನ್ನು ಸೃಷ್ಟಿಸಿಕೊಂಡ. ದೇವರನ್ನು ಸೃಷ್ಟಿಸಿದ್ದು ಮನುಷ್ಯನೇ…!! ಹಾಗಾದರೆ ದೇವರು ಎಂಬುದು ಇಲ್ಲವಾ? ನಿಜವಾದ ದೇವರು ಯಾರು??
ವಿಶ್ವಾತ್ಮ ಜೊತೆಯಿದ್ದರೆ ಹೇಳಿಬಿಡುತ್ತಿದ್ದ.
ಯಾವ ಜೀವಿ ತನ್ನೊಂದಿಗೆ ಇತರ ಜೀವಿಗಳಿಗೂ ಬದುಕಲು ಸಹಕರಿಸುತ್ತದೆಯೋ ಅದು ದೇವರು. ಪಂಚಭೂತಗಳೆಲ್ಲವೂ ದೇವರುಗಳೇ.
ಆತ್ಮ ಮನಸ್ಸು ಕಲ್ಲು ಮಾಡಿ ಸಂವೇದನಾಳ ಮುಖ ನೋಡಿದ. ಅವಳೂ ಆತ್ಮ ಸೃಷ್ಟಿಯೇ. ಹೊಸದೇನು ಹೇಳಬಲ್ಲಳು? ಸಮ್ಮತಿಯ ಹೊರತಾಗಿ ಅವಳಲ್ಲೂ ಯಾವ ದಾರಿಯೂ ಉಳಿದಿರಲಿಲ್ಲ. ಆತ್ಮ ಸಲಾಕೆಯನ್ನು ಎತ್ತಿ ಗಾಜಿನ ಪೆಟ್ಟಿಗೆಯ ಮೇಲೆ ರಭಸವಾಗಿ ಬೀಸಿದ. ಒಂದೆರಡು ಕಡೆಗಳಲ್ಲಿ ಸಣ್ಣದಾಗಿ ಬಿರುಕು ಮೂಡಿದವು. ಗಾಜಿನಂತ ಗಾಜಲ್ಲ, ಕಲ್ಲಿನಂಥದ್ದು.
ಇನ್ನೊಂದು ಏಟಿಗೆ ಬಿರುಕು ತುಂಡಾಗಿ ಬೀಳಬಹುದೆಂದು ಸಲಾಕೆ ಎತ್ತಿದ ಆತ್ಮ. “ನಿಲ್ಲು” ಎಂದಿತು ಧ್ವನಿ. ಆತ್ಮ ಸಂವೇದನಾ ಇಬ್ಬರೂ ತಿರುಗಿ ನೋಡಿದರು. ಎರಡು ಕಪ್ಪು ಜೀವಿಗಳು ಅಲ್ಲಿ ನಿಂತಿದ್ದವು.
ಆತ್ಮನಿಗೆ ಆಶ್ಚರ್ಯ, ಕೋಪಗಳೆರಡು ಒಟ್ಟಾಗಿ ಬಂದವು. ಸನಾಳದೂ ಅದೇ ಪರಿಸ್ಥಿತಿ.
“ನಾನು ಮೂರು ದಿನದ ಅವಕಾಶ ಕೇಳಿರುವೆ. ಮತ್ತೇಕೆ ಬಂದೆ?” ಗದರಿದ ಆತ್ಮ.
ಕಪ್ಪು ಜೀವಿ ನಕ್ಕಿತು. “ನಾನು ಬಂದಿರುವುದು ನಿನ್ನ ಜೊತೆ ಹೋರಾಡಲು ಅಲ್ಲ. ನಾನವರ ಜೊತೆ ಬಂದವನಲ್ಲ” ಎಲ್ಲವನ್ನೂ ಹೇಳಿತು ಆ ಜೀವಿ.
“ಅವೆಲ್ಲವೂ ಬದುಕುವ ನೀತಿ ಕಳೆದುಕೊಂಡ ಜೀವಿಗಳು. ಎರಡನೇ ಸೂರ್ಯನಿಂದ ಆದ ಅವಾಂತರ ಅದು. ಕೇವಲ ಆರು ಜೀವಿಗಳು ಮಾತ್ರ ಅದರ ಪರಿಣಾಮದಿಂದ ದೂರ ಉಳಿದಿದ್ದೇವೆ. ಭೂಮಿಯ ಸರ್ವನಾಶವಾಗಬಾರದು ಎಂಬುದು ನಮ್ಮ ಗುರಿ” ಎಂದಿತು ಆ ಕಪ್ಪು ಜೀವಿ.
“ನಿಮ್ಮ ಮೇಲೆ ಎರಡನೆ ಸೂರ್ಯ ಪ್ರಭಾವ ಬೀರಲಿಲ್ಲವೇ?” ಕೇಳಿದಳು ಸನಾ.
” ಇಲ್ಲ”.
ಕುತೂಹಲ ಸನಾಗೆ. ಏಕೆ? ಮತ್ತೆ ಪ್ರಶ್ನಿಸಿದಳು.
“ಮನಸ್ಸನ್ನು ನಿಗ್ರಹ ಮಾಡಿದ್ದಕ್ಕೆ.”
ಚತುರೆ ಸಂವೇದನಾ. “ನಿಮಗೆ ಮನುಷ್ಯರ ಭಾಷೆ ಹೇಗೆ ಗೊತ್ತು? ನಮ್ಮಂತೆ ಹೇಗೆ ಮಾತನಾಡಬಲ್ಲಿರಿ?”
ಮತ್ತೆ ನಕ್ಕಿತು ಆ ಜೀವಿ “ನಾವು ವಿಶ್ವದ ಯಾವುದೇ ಭಾಷೆಯನ್ನು ಬೇಕಾದರೂ ಭಾಷಾಂತರಿಸಬಲ್ಲೆವು. ಈಗ ಕಾಡು ಹರಟೆಗಳಿಗೆ ಸಮಯವಿಲ್ಲ. ಆತ್ಮ, ನಿನ್ನ ಬಳಿ ಉಳಿದಿರುವುದು ಕೇವಲ ಎರಡು ದಿನ ಮಾತ್ರ.” ಮೌನವಾಯಿತು.
ಆ ಜೀವಿಗಳ ಮಾತು ಸತ್ಯವೋ? ಸುಳ್ಳೋ? ಸಂದಿಗ್ಧದಲಿ ಸಿಲುಕಿದ ಆತ್ಮ. ಅವುಗಳದೇ ಹೊಸ ತಂತ್ರವಿರಬಹುದು ಎಂದಿತು ಮನಸ್ಸು.
ಹಾಗಿದ್ದರೂ ಏನು ಮಾಡಲು ಸಾಧ್ಯ? ಏನಾದರೂ ಸರಿ, ಇವರ ಜೊತೆಯಾಗಿಬಿಡೋಣ ಎಂದುಕೊಂಡ ಆತ್ಮ.
“ನಿಮ್ಮ ಹೆಸರೇನು?” ಪ್ರಶ್ನಿಸಿದ ಆತ್ಮ. ಧೈರ್ಯ ತುಂಬಿತ್ತು, ಕಪ್ಪು ಜೀವಿಗಳೆದುರು ಗೆದ್ದು ನಿಲ್ಲುವ ಹಂಬಲ. ನಗುತ್ತಲೇ ಮಾತನಾಡುತ್ತಿದೆ ಕಪ್ಪು ಜೀವಿ.
“ನಮಗ್ಯಾರಿಗೂ ಹೆಸರಿಡುವಂತಿಲ್ಲ. ನಮಗೆ ಹೆಸರುಗಳೇ ಇಲ್ಲ. ಹೆಸರೆಂಬುದೇ ಬಂಧನ. ಇಂಥವೇ ಎಂದು ಆಕೃತಿಗಳೂ ಇಲ್ಲ. ಅವೂ ಬಂಧನಗಳೇ. ಈಗ ನಮ್ಮ ಎದುರಿರುವ ಸವಾಲು ಈ ಎರಡನೇ ಸೂರ್ಯ. ಅದನ್ನು ಪರಿಹರಿಸಿಕೊಳ್ಳಬೇಕು. ಮುಂದೆ ನಮ್ಮ ಸಂತತಿ ನಿಶ್ಚಿಂತೆಯಾಗಿ ಬದುಕಲು ಅದು ಅವಶ್ಯಕ, ಮನುಷ್ಯನಿಗೂ ಅನಿವಾರ್ಯವೇ.”
ಸಂವೇದನಾ ಸ್ವಲ್ಪ ಮುಂದೆ ಬಂದು ಆ ಜೀವಿಯನ್ನು ಸ್ಪರ್ಶಿಸಿದಳು. ತಂಪಾಗಿತ್ತು ಆಕಾರ. ಅವುಗಳಲ್ಲಿ ಉಸಿರಾಟ ಕ್ರಿಯೆಯು ಇಲ್ಲ. ಹಾಗಾದರೆ ಅವುಗಳಲ್ಲಿ ಬದುಕುವ ಚೈತನ್ಯ ಎಲ್ಲಿಂದ ಬರುತ್ತದೆ!?
ಮನುಷ್ಯನಂತೆ ಒಂದು ಆಕಾರ ಹೊಂದಿದ್ದರೆ ವಿನಃ ಮಣ್ಣಿನಂತಹ ಕಣಗಳಿಂದ ರೂಪುಗೊಂಡ ದೇಹ ಅವುಗಳದ್ದು. ಕಬ್ಬಿಣ ಮತ್ತು ಅಯಸ್ಕಾಂತವು ಒಂದನ್ನೊಂದು ಆಕರ್ಷಿಸಿದಂತೆ ಮಣ್ಣಿನ ಕಣಗಳು ಒಂದಕ್ಕೊಂದು ಅಂಟಿಕೊಂಡಿರಲು ಹೇಗೆ ಸಾಧ್ಯ!? ಏನೋ ಇದೆ ಎಂದುಕೊಂಡಳು ಸನಾ. ಯಾರ ತರ್ಕಕ್ಕೂ ನಿಲುಕದ ವಿಷಯ.
“ನೀವು ಎಲ್ಲರೂ ಒಂದೇ ರೀತಿಯಲ್ಲಿ ಕಾಣಿಸುತ್ತೀರಿ, ಒಬ್ಬರಿಂದ ಇನ್ನೊಬ್ಬರನ್ನು ಬೇರ್ಪಡಿಸಿ ನೋಡುವುದು ಹೇಗೆ??” ಆ ಜೀವಿಗಳ ಮುಖದಲ್ಲಿ ಅದೇ ಮಂದಹಾಸ. “ನಾವೆಲ್ಲರೂ ಒಂದೇ. ನಮ್ಮ ಬದುಕಿನಲ್ಲಿ ಭೇದವೇ ಇಲ್ಲ. ಎಲ್ಲರೂ ಸಮಾನರು. ಆದ್ದರಿಂದ ಬೇರ್ಪಡಿಸುವ ಮಾತೇ ಇಲ್ಲ” ಎಂದು ನಕ್ಕವು. ಹೆಮ್ಮೆ ಅವುಗಳಿಗೆ.
ಮನುಷ್ಯನಿಗೆ ಒಂದೆಂಬುದು ತಿಳಿದೇ ಇಲ್ಲ.
“ಈಗ ನಮಗೋಸ್ಕರವಾದರೂ ಹೆಸರು, ಗುರುತುಗಳು ಬೇಕಲ್ಲವೇ? ಅಷ್ಟೊಂದು ಜೀವಿಗಳಲ್ಲಿ ನಿಮ್ಮನ್ನು ಗುರುತಿಸುವುದು ಹೇಗೆ? ನಿಮಗಿಬ್ಬರಿಗೂ ಹೆಸರಿಡುತ್ತೇನೆ” ಎಂದಳು ಸನಾ.
ಮನಸ್ಸಿನಲ್ಲಿ ಅದೇನೋ ಹಿಗ್ಗು;
ಹೆಣ್ಣಿಗೆ ಗೆಳೆತನವೂ ಆನಂದವೇ.
ಅವಳ ಉತ್ಸಾಹ ಮೇರೆ ಮೀರಿತ್ತು. ಅನ್ಯ ಜೀವಿಗಳ ಜೊತೆಗಿನ ಸಲುಗೆ, ಪ್ರೀತಿಯ ಮಾತುಕತೆ, ಅವುಗಳನ್ನು ಸ್ಪರ್ಶಿಸಿದ್ದು ಅವಳ ಮನಸ್ಸನ್ನು ಪುಳಕಗೊಳಿಸಿತ್ತು.
“ನಿಮಗೇನಾದರೂ ತಿಳಿದಿದೆಯೇ ಈ ಎರಡನೇ ಸೂರ್ಯನನ್ನು ತೆಗೆಯುವುದು?” ಅದೇನೋ ಯೋಚಿಸುತ್ತಿದ್ದವ ಒಮ್ಮೆಲೇ ಕೇಳಿದ ಆತ್ಮ.
ಹುಸಿಕೋಪ ತೋರಿದಳು ಸನಾ “ನಾನಿವರಿಗೆ ಹೆಸರಿಡಬೇಕು.”
“ಇದು ತಮಾಷೆಯ ಸಂದರ್ಭವಲ್ಲ ಸನಾ” ಸ್ವಲ್ಪ ಗದರಿದ ಆತ್ಮ.
ಬೇಸರದಿಂದ ಮನಸ್ಸು ಮುದ್ದೆಯಾಯಿತು.
ಆ ಜೀವಿ ತನ್ನ ಕೈಗಳನೆತ್ತಿ ಸಂವೇದನಾಳ ತಲೆಯ ಮೇಲೆ ಆಡಿಸಿತು. ತಂದೆ ಮಗಳ ತಲೆ ನೇವರಿಸಿದ ರೀತಿ. “ನೀನು ಏನು ಬೇಕಾದರೂ ಕರೆಯಬಹುದು, ನೀವು ನಮ್ಮನ್ನು ಗುರುತಿಸದಿದ್ದರೂ ನಾವು ನಿಮ್ಮನ್ನು ಗುರುತಿಸುತ್ತೇವೆ, ಹೆಸರಿಡಿದು ಕರೆಯುತ್ತೇವೆ. ನಿಮ್ಮ ಜೊತೆಯಲ್ಲಿಯೇ ಇರುತ್ತೇವೆ”.
ಖುಷಿಯಿಂದ ನಕ್ಕಳು ಸನಾ.
“ಆತ್ಮ ನೀನು ಈ ಪೆಟ್ಟಿಗೆ ಒಡೆದುಬಿಟ್ಟಿದ್ದರೆ ದೊಡ್ಡ ಅನಾಹುತವೇ ಆಗಿಬಿಡುತ್ತಿತ್ತು, ಅನರ್ಥಕ್ಕೆ ದಾರಿಯಾಗುತ್ತಿತ್ತು.”
“ಏಕೆ?” ಕೇಳಿದ ಆತ್ಮ. ಏನೂ ಅರ್ಥವಾಗಲಿಲ್ಲ ಅವನಿಗೆ.
“ಆ ಗಾಜಿನ ಪೆಟ್ಟಿಗೆ, ಅದರೊಳಗಿನ ಬೆಳಕು ಮತ್ತು ಸುತ್ತಲಿನ ಕತ್ತಲು ಎರಡನೇ ಸೂರ್ಯನನ್ನು ಪ್ರತಿನಿಧಿಸುತ್ತದೆ. ಅದು ಎರಡನೇ ಸೂರ್ಯನ ಪರಿಧಿಯಿದ್ದಂತೆ. ಅದು ಒಮ್ಮೆ ಒಡೆದರೆ ಎರಡನೇ ಸೂರ್ಯನ ಪರಿಧಿ ವಿಸ್ತಾರವಾಗುತ್ತಲೇ ಹೋಗುತ್ತದೆ. ಪರಿಧಿಯೇ ಇರದ ವೃತ್ತ, ಎರಡನೇ ಸೂರ್ಯ ಬೆಳೆಯುತ್ತಲೇ ಹೋಗುತ್ತಾನೆ.
ಕೇವಲ ವರ್ಷಿಯ ಮನಸ್ಸಿನ ಆಧಾರದ ಮೇಲೆ ಎರಡನೇ ಸೂರ್ಯ ಬೆಳಕಾಗಿರುವನೇ ಹೊರತಾಗಿ ಯಾವ ತಂತ್ರಜಾನಗಳೂ ಇಲ್ಲ. ತಾಂತ್ರಿಕತೆಯಿಂದ ಅಂಥವೆಲ್ಲ ಸಾಧ್ಯವೂ ಇಲ್ಲ. ವರ್ಷಿ ಗುರುತ್ವವನ್ನು ಮೀರುವ ಶಕ್ತಿಯನ್ನು ಪಡೆದ. ಕೇವಲ ಅವನ ಮನಸ್ಸನ್ನು ನಿಗ್ರಹಿಸಿಕೊಂಡ. ಈ ಪೆಟ್ಟಿಗೆಯೊಳಗೆ ಕಾಣಿಸುತ್ತಿರುವುದು ಅವನ ಮನಸ್ಸಿನ ಕೇಂದ್ರವಷ್ಟೆ. ಅದರ ಸುತ್ತಲೂ ಇರುವ ಮಹಾಕತ್ತಲು ಪ್ರತಿಯೊಬ್ಬರ ಮನಸ್ಸನ್ನು ಆವರಿಸಿರುವ ಗೊಂದಲಗಳು. ಈ ಪೆಟ್ಟಿಗೆ ಪ್ರತಿಯೊಬ್ಬನಿಗೂ ಇರುವ ಪರಿಧಿಯನ್ನು ಪ್ರತಿನಿಧಿಸುತ್ತದೆ ಆತ್ಮ.
ನಾವು ಎರಡನೇ ಸೂರ್ಯನನ್ನು ಭೇದಿಸಲು ಅಲ್ಲಿಯೇ ಹೋಗಿದ್ದೆವು. ಆದರೆ ಅಲ್ಲೇನು ಇಲ್ಲ, ಭೇದಿಸಲು ಎರಡನೇ ಸೂರ್ಯನ ಅಸ್ತಿತ್ವವೇ ಇಲ್ಲ. ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯಲ್ಲ. ಅದೆಲ್ಲ ಕೇವಲ ವರ್ಷಿಯ ಮನಸ್ಸಿನ ಬಲವಷ್ಟೆ. ಮನಸ್ಸನ್ನು ನಿಗ್ರಹಿಸಿ ಏನನ್ನೇ ಸಾಧಿಸಲು ಶುರುವಿಟ್ಟರು ವಿಶ್ವವೇ ನಿನಗೆ ಸಹಕರಿಸುತ್ತದೆ. ಇಲ್ಲವಾದರೆ ನೀನೂ ನಿನ್ನನ್ನು ನಂಬಲಾರೆ. ವರ್ಷಿಯು ಗುರುತ್ವವನ್ನು ಮೀರುವ ಮನಸ್ಸು ಮಾಡಿದ. ವಿಶ್ವವು ಅದಕ್ಕೆ ಸಹಕರಿಸಿತು. ಎಲ್ಲರಿಗೂ ಅದು ಸಾಧ್ಯವಿಲ್ಲ; ಯಾರಿಂದಲೂ ಅಸಾಧ್ಯವೂ ಅಲ್ಲ.
ಮನಸ್ಸಿನ ಮೇಲೆ ನಿಗ್ರಹವೇ ಇಲ್ಲದವರು ಭೂಮಿಯ ಮನಸ್ಸಿನ ವಿರುದ್ಧವಾಗಿ ಹೋರಾಡಲು ಹೇಗೆ ಸಾಧ್ಯ?
ನೀನು ಈ ಗಾಜಿನ ಪೆಟ್ಟಿಗೆಯಲ್ಲಿರುವ ಬೆಳಕನ್ನು ಹಿಡಿಯುವುದು ಕಷ್ಟ. ಅದರಂತೆಯೇ ವರ್ಷಿಯ ಮನಸ್ಸನ್ನು ಕೂಡಾ. ಬೆಳಕಿಗೂ, ಮನಸಿಗೂ ಬಹಳ ಸಾಮ್ಯ, ಹತ್ತಿರದ ಸಂಬಂಧ. ಬೆಳಕನ್ನು ಬೊಗಸೆಯಲ್ಲಿ ತುಂಬುವುದು ಸಾಧ್ಯವಿಲ್ಲ, ಕೈ ಚಾಚಿದರೂ ಮನಸ್ಸು ಕೈ ಸೇರುವುದಿಲ್ಲ. ಈಗ ನೀನು ಈ ಪೆಟ್ಟಿಗೆಯನ್ನು ಒಡೆದರೆ ಅದಕ್ಕೆ ಪರಿಧಿಯೇ ಇಲ್ಲದಂತೆ ಆಗುತ್ತದೆ.” ಒಂದೇ ಉಸಿರಿಗೆ ಮುಗಿಸಿತ್ತು ಮಾತನ್ನು, ಉಸಿರಾಟ ಕ್ರಿಯೆಯೇ ಇಲ್ಲದ ಜೀವಿ.
ಆತ್ಮ ದಿಗ್ಬ್ರಾಂತನಾದ. ಈ ಜೀವಿ ಹೇಳುತ್ತಿರುವುದು ನಿಜವೇ ಆದರೆ ವರ್ಷಿಗೆ ವರ್ಷಿಯೇ ಸಾಟಿ ಎಂದುಕೊಂಡ.
ಸನಾ ವರ್ಷಿಯನ್ನು ಕಳೆದುಕೊಂಡು ನಾವೆಂಥ ವಿಜ್ಞಾನಿಯನ್ನು ಕಳೆದುಕೊಂಡೆವು, ವಿಜ್ಞಾನವು ಅವನ ಹಿಂದೆ ನೆರಳಾಯಿತು ಎಂದು ನೊಂದುಕೊಂಡಳು.
“ವರ್ಷಿ ಸತ್ತುಹೋಗಿರುವನು, ಆತನ ಮನಸ್ಸು ಬದುಕಿರಲು ಹೇಗೆ ಸಾಧ್ಯ? ಎರಡನೇ ಸೂರ್ಯ ಕೂಡ ವರ್ಷಿಯ ಜೊತೆ ಇತಿಹಾಸವಾಗಬೇಕಿತ್ತಲ್ಲವೇ?” ಆತ್ಮನ ತಲೆಯಲ್ಲಿ ತಟ್ಟನೆ ಮೂಡಿತು ಪ್ರಶ್ನೆ.
ಎರಡೂ ಕಪ್ಪು ಜೀವಿಗಳೂ ಮುಖ ನೋಡಿಕೊಂಡು ನಕ್ಕವು. ಈ ಮನುಷ್ಯ ಬುದ್ಧಿವಂತನೆಂದುಕೊಂಡು ಅದೆಷ್ಟು ಮೂರ್ಖನಾಗಿರುತ್ತಾನೆ ಎಂಬ ಭಾವ ಅವರ ಮುಖದಲ್ಲಿ.
ಹಿಂದೆ ನಿಂತಿರುವ ಜೀವಿ ಮಾತನಾಡಿತು. ಸಂವೇದನಾ ಗಮನಿಸಿದ್ದಳು. ಇಬ್ಬರ ಧ್ವನಿ ಕೂಡ ಒಂದೇ ತೆರನಾಗಿದೆ, ಇದಲ್ಲವೇ ಸಮಾನತೆ.
ಕಪ್ಪು ಜೀವಿ ಮುಂದುವರೆಸಿತು “ಭೌತಿಕ ಮತ್ತು ಭೌತಿಕವಲ್ಲದ್ದಕ್ಕೆ ಇರುವ ವ್ಯತ್ಯಾಸ ಇದೇ. ಭೌತಿಕಕ್ಕೆ ಯಾವಾಗಲೂ ಪರಿಧಿಯಿರುತ್ತದೆ. ಅದರ ಅಂತ್ಯದೊಂದಿಗೆ ಪರಿಧಿಯೂ ಅಸ್ತಿತ್ವ ಹೀನವಾಗುತ್ತದೆ. ದೇಹವೆಂಬುದೇ ಒಂದು ಪರಿಧಿ. ಅದಕ್ಕೆ ಸಾವಿದೆ. ಅಲ್ಲಿಗೆ ಪರಿಧಿಯೂ ಅಂತ್ಯವಾಗುತ್ತದೆ. ಆದರೆ ಅಭೌತಿಕ ಹಾಗಿರಲು ಸಾಧ್ಯವೇ ಇಲ್ಲ. ಅದು ಕಣ್ಣಿಗೆ ಕಾಣಿಸುವುದಿಲ್ಲ. ಅದರ ಸಾಮರ್ಥ್ಯವು ಹೆಚ್ಚು. ಅದಕ್ಕೆ ಸಾವಿಲ್ಲ. ದೇಹ ನಾಶವಾದ ನಂತರವೂ ಮನಸ್ಸು ಬದುಕಿಯೇ ಇರುತ್ತದೆ, ಆತ್ಮ ಸಂಚರಿಸುತ್ತಲೇ ಇರುತ್ತದೆ. ಬದುಕಿರುವಾಗಿನ ಕರ್ಮಗಳು, ಮಾಡಿದ ಮರ್ಮಗಳು ದೇಹ ಅಂತ್ಯವಾದ ಮೇಲೆಯೂ ಉಳಿದಿರುತ್ತದೆ. ಕೆಟ್ಟ ಕೆಲಸವಾದರೂ, ಒಳ್ಳೆಯ ಕೆಲಸವಾದರೂ ಅದಕ್ಕೆಲ್ಲ ಮೂಲ ಮನಸ್ಸು… ಮನಸ್ಸು ಮಾತ್ರ. ಕರ್ಮಗಳು, ಕ್ರಿಯೆಗಳೆಲ್ಲ ಮನಸ್ಸಿನ ಮೇಲೆ ಆಧಾರಿತ. ಅದರಿಂದಲೇ ನಿರ್ಬಂಧಿತವೂ ಹೌದು. ಸಾವು ಎಂಬುದು ದೇಹಕ್ಕೆ ಮಾತ್ರ. ಅದಕ್ಕೇ ಸಾವು ದುಃಖ ಪಡುವಂಥದ್ದಲ್ಲ.
ಇದೇ ಕಾರಣಕ್ಕೆ ನಾವು ನಿಮ್ಮ ಜೊತೆಯಾಗಲು ಬಂದೆವು. ತಿಳಿದೋ, ಅರಿಯದೆಯೋ ತಪ್ಪುಗಳಾಗಿವೆ. ಕಪ್ಪು ಜೀವಿಗಳ ಅವಸಾನ ಖಂಡಿತ, ಆದರೆ ಮತ್ತೆ ಹುಟ್ಟುತ್ತವೆ.” ಎಂದು ಮೌನಿಯಾಯಿತು.
ತಪ್ಪುಗಳು ಸಹಜ;
ಆದರೆ ತಪ್ಪುಗಳೇ ಗುರಿ ಮುಟ್ಟಿಸುವುದಿಲ್ಲ.
“ಹಾಗಿದ್ದಲ್ಲಿ ಮನುಷ್ಯ ಸತ್ತು ಮತ್ತೆ ಹುಟ್ಟಲಿ.ಭೂಮಿಯೂ ನಾಶವಾಗಲಿ. ಹೊಸ ಆರಂಭ” ಎಂದಳು ಸನಾ.
“ಸಾವಿಗೂ ಒಂದು ರೀತಿಯಿದೆ. ಬದುಕುವ ನೀತಿಗೆ ಹೊರತಾದ ಯಾವುದೇ ರೀತಿಯನ್ನು ವಿಶ್ವ ಬಯಸುವುದಿಲ್ಲ. ಮಾನವನ ತಪ್ಪುಗಳು ಎಷ್ಟೊಂದು ಅನಾಹುತವೆಸಗಿದೆ. ಒಂದು ಜೀವಸಂಕುಲವನ್ನೇ ಒಮ್ಮೆ ಪೂರ್ತಿಯಾಗಿ ನಾಶಮಾಡಿದೆ.
ಪ್ರತಿಯೊಂದು ಪ್ರಚೋದನೆಯೂ ಇನ್ನೊಂದರ ಪ್ರತಿಕ್ರಿಯೆ. ಜೀವಸಂಕುಲವೊಂದು ಸಂಪೂರ್ಣವಾಗಿ ನಾಶವಾದರೆ ಮುಂದಿನ ಪ್ರಚೋದನೆ ಬರುವುದಾದರೂ ಹೇಗೆ? ಪ್ರತಿಕ್ರಿಯೆಗಳಿಗೆ ಅವಕಾಶವೆಲ್ಲಿ??
ನಿಮ್ಮ ಕ್ರಿಯೆಗಳಿಗೆ ಪ್ರತಿಕ್ರಿಯೆ ಎಷ್ಟು ಭೀಕರವಿದೆ. ಹಾಗೆಯೇ ನಾವು ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರೆ ಪ್ರಪಂಚವೇ ನಾಶವಾಗಿಬಿಡುತ್ತದೆ. ಆದರೆ ವಿಶ್ವವು ಅದನ್ನು ಕ್ಷಮಿಸುವುದಿಲ್ಲ.
ಅದು ಬದುಕುವ ನೀತಿಗೆ ವಿರುದ್ಧವಾದ ರೀತಿ. ವಿಶ್ವವು ಎಲ್ಲವನ್ನೂ ನೋಡುತ್ತಿರುತ್ತದೆ. ಪ್ರತಿ ಪ್ರಚೋದನೆಯೂ, ಪ್ರತಿಯೊಂದು ಪ್ರತಿಕ್ರಿಯೆಗಳೂ ವಿಶ್ವದ ಅಂತರಾಳವನ್ನು ಸೇರುತ್ತದೆ. ವಿಶ್ವವು ಒಳ್ಳೆಯದನ್ನೇ ಬಯಸುತ್ತದೆ.”
ಅದೊಂದು ಅದ್ಭುತ ವಾಕ್ ಪ್ರವಾಹ, ವಿದ್ಯುತ್ ಸಂಚಾರ. ಪ್ರತೀ ಮಾತೂ ಮನಸ್ಸಿಗೆ ತಾಗುತ್ತಿತ್ತು.
ನಿರಂತರ ಸತ್ಯದೆಡೆಗಿನ ಮಹಾಯಾನ.
ಒಂದು ಕ್ರಿಯೆ ಅಥವಾ ಪ್ರಚೋದನೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಪ್ರತಿಕ್ರಿಯೆಯೂ ಅದರಷ್ಟೆ ವ್ಯತಿರಿಕ್ತವಾಗಿದ್ದರೆ ಬಂಧಗಳ ಸರಪಳಿಯ ಕೊನೆಯಲ್ಲಿ ಉಳಿಯುವುದು ಯುದ್ಧಗಳ ಇತಿಹಾಸ, ದುರಂತ ಅಧ್ಯಾಯದ ಭಾಗಗಳು ಎಂಬುದು ಅವುಗಳಿಗೆ ತಿಳಿದಿತ್ತು.
ಹಾಗಾದರೆ ಇದನ್ನು ಪರಿಹರಿಸುವುದು ಹೇಗೆ? ಆತ್ಮ ಮತ್ತೆ ಗೊಂದಲಕ್ಕೀಡಾದ.
“ಒಂದೇ ಒಂದು ಸಾಧ್ಯತೆ, ಅಸಾಧ್ಯಗಳ ನಡುವಿನ ಸಾಧ್ಯತೆ.
ವರ್ಷಿಯ ಮನಸ್ಸನ್ನು ಮೀರುವ ಒಬ್ಬ ವ್ಯಕ್ತಿ ಬೇಕು. ಒಂದು ಮನಸ್ಸು ಬೇಕು ಗುರುತ್ವದಾಚೆ ಸೇರಲು. ಆತ ಮಾತ್ರ ಎರಡನೇ ಸೂರ್ಯನನ್ನು ಚಲಿಸಬಲ್ಲ. ವಿಚಲಿತನಾಗುವಂತೆ ಮಾಡುವವನು ಅವನು ಮಾತ್ರ.”
“ಮನಸ್ಸಿನ ನಿಗ್ರಹ ನಿಮ್ಮಲ್ಲೇ ಇದೆಯೆಂದಮೇಲೆ ನೀವೇ ಪರಿಹರಿಸಬಹುದಲ್ಲವೇ?” ಸನಾ ಸುಲಭದ ದಾರಿ ಎಂದುಕೊಂಡಳು.
“ಅದು ಆಗುವಂತಿದ್ದರೆ ಅಂದಿಗೇ ತೊಂದರೆಗಳು ಮುಗಿದುಹೋಗುತ್ತಿದ್ದವು. ವರ್ಷಿಯ ಮನೋಬಲದ ಎದುರು ನಾವು ಸೋತೆವು.
ನಾವು ಬೆಳಕಿನೆದುರು ಬಯಲಾದ್ದರಿಂದ ನಮ್ಮ ಮನಸ್ಸಿನ ಹಿಡಿತ ಕೂಡ ತಪ್ಪುತ್ತಿದೆ. ಬಹುಬೇಗ ಎಲ್ಲವನ್ನೂ ಮುಗಿಸಬೇಕು. ಇಲ್ಲವಾದಲ್ಲಿ ನಾವು ಕೂಡಾ ಬದಲಾಗಿಬಿಡುತ್ತೇವೆ. ಬದುಕುವ ನೀತಿ ಮರೆತು ಬೆತ್ತಲಾಗಿಬಿಡುತ್ತೇವೆ” ಎಂದಿತು ಕತ್ತಲ ಏಲಿಯನ್.
ಆತ್ಮ ಗೋಜಲುಗಳಲ್ಲಿ ಸಿಲುಕಿದ. ಯಾರಿಂದ ಸಾಧ್ಯ ಇವೆಲ್ಲ?? ವರ್ಷಿಯನ್ನು ಮೀರಬೇಕು. ನಾನು ಆತನ ಮನಸ್ಸಿಗೆ ಸವಾಲಾಗಬಲ್ಲೇನಾ?? ಕಂಡೂ ಕಾಣದ ಭಾವ; ಭೂಮಿಯನ್ನು ಉಳಿಸಿಕೊಳ್ಳಲು ಹೊಸ ಉತ್ಸಾಹದ ಜೀವ.
“ಕೊನೆಯಲ್ಲಿ ಒಂದು ಪ್ರಶ್ನೆ, ವಿಶ್ವಾತ್ಮ ಎಂಬುದು ಇರುತ್ತದೆಯಾ? ಎಲ್ಲರನ್ನೂ ನೋಡಿಕೊಳ್ಳುವ ಒಂದು ಜೀವವಿದೆಯಾ? ಅದರ ಬಗ್ಗೆ ನಿಮಗೇನು ತಿಳಿದಿದೆ? ನೀವು ವಿಶ್ವಾತ್ಮನನ್ನು ನೋಡಿರುವಿರಾ?” ಕುತೂಹಲ ಮಿಶ್ರಿತ ಧ್ವನಿ ಆತ್ಮನದು.
ಆ ಜೀವಿಗಳ ಮುಖದಲ್ಲಿ ನಗು ಮೂಡಿತು. ಪ್ರತಿಯೊಂದು ಜೀವಿಗೂ ಆತ್ಮವಿರುತ್ತದೆ. ವಿಶ್ವನೂ ಜೀವಿಯೇ. ಆದಕ್ಕೂ ಆತ್ಮವಿದೆ. ಒಗಟಾಗಿ ಉತ್ತರಿಸಿತು ಏಲಿಯನ್. ಆದರೆ ಇದುವರೆಗೂ ಯಾರೂ ವಿಶ್ವಾತ್ಮನನ್ನು ನೋಡಿಲ್ಲ ಎಂದು ಮಾತು ಮುಗಿಸಿತು.
“ವಿಶ್ವಾತ್ಮನನ್ನು ವರ್ಷಿ ನೋಡಿದ್ದಾನೆ.. ಹಾಗೆಂದು ಸ್ವತಃ ವರ್ಷಿಯೇ ಹೇಳಿದ್ದಾನೆ.” ಎಂದ ಆತ್ಮ.
“ಹೌದು, ವರ್ಷಿ ಹೇಳುತ್ತಿರುವುದು ಸತ್ಯವೇ. ಆದರೆ ವರ್ಷಿಗೂ ತಿಳಿಯದಿರುವ ಒಂದು ನಿಜ ಅಂಶವಿದೆ. ಆತ ಮಾತನಾಡಿದ್ದ, ಆತನ ಜೊತೆ ನಿಂತಿದ್ದು ವಿಶ್ವಾತ್ಮನಲ್ಲ. ಕೇವಲ ಈ ಸೌರದ ಆತ್ಮದ ಜೊತೆ. ವಿಶ್ವಾತ್ಮ ಬೇರೆ. ವರ್ಷಿ ಮಾತನಾಡಿದ್ದು ಕೇವಲ ಒಂದು ಮಾಮೂಲು ಆತ್ಮದ ಜೊತೆ. ವಿಶ್ವಾತ್ಮ ಎಲ್ಲ ಆತ್ಮಗಳ ಸ್ನೇಹಿತ… ವಿಶ್ವಾತ್ಮ ಇವೆಲ್ಲ ಆತ್ಮಗಳ ಮನೋರಂಜಿಸುವ ಮಹಾಸಿಂಧು. ಪ್ರತಿಯೊಂದೂ ಆತ್ಮಗಳ ನಿಯಂತ್ರಿಸುವ ಮಹಾಕೇಂದ್ರ.”
ಕಪ್ಪು ಜೀವಿಗಳ ಮಾತಿನಿಂದ ಎಲ್ಲವೂ ಮತ್ತೆ ಸಮಸ್ಯೆಗಳಾಗಿಯೇ ಉಳಿದವು. ಆತ್ಮನಿಗೆ ಉಳಿದಿರುವ ಸಮಸ್ಯೆಯೆಂದರೆ ಎರಡನೇ ಸೂರ್ಯನನ್ನು ತೆಗೆದರೆ ಯುದ್ಧ ನಿಲ್ಲುತ್ತದೆಯೇ? ಯುದ್ಧ ನಡೆದರೆ ನಾವು ಈ ಕಪ್ಪುಜೀವಿಗಳನ್ನು ಎದುರಿಸಿ ನಿಲ್ಲಲು ಸಾಧ್ಯವೇ?
“ಇಲ್ಲ, ಅದು ಸಾಧ್ಯವಾಗದ ಕೆಲಸ” ಎರಡೂ ಜೀವಿಗಳು ಒಟ್ಟಿಗೆ ಉತ್ತರಿಸಿದವು.
ಮಾನವನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ. ಆತ್ಮ ಸಂವೇದನಾರ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿತು.