23! ಸಾಯುವ ವಯಸ್ಸಾ?? ಚಿಗುರು ಮೀಸೆ ಆಗಷ್ಟೆ ಬಲಿತು, ಹರೆಯ ತನ್ನ ಇರುಹನ್ನು ಅರುಹಿ, ಮೈ ಕೈ ಸದೃಢಗೊಂಡು, ಕಣ್ಣಲ್ಲಿ ಸಹಸ್ರ ಕನಸುಗಳು, ಮನಸ್ಸಿನಲ್ಲಿ ಮುದಗೊಳ್ಳುವ ಪ್ರಣಯದ ಪರಿಚಿತ್ರಗಳು, ಹದಗೊಳ್ಳುವ ಭಾವಗಳು ಇದಲ್ಲವೇ 23 ?? ಬುದ್ಧಿ ಬೆಳೆಯಲು, ಭಾವಗಳು ಸಿದ್ಧಿಸಲು ಕೆಲವೊಬ್ಬರಿಗೆ ಈ ವಯಸ್ಸು ಕಡಿಮೆಯೇ. 23 ಸಾಯುವ ವಯಸ್ಸಾ ? ಮತ್ತೊಮ್ಮೆ ಅದೇ ಪ್ರಶ್ನೆ ನನ್ನನ್ನು ಕಾಡಿದರೆ, ಆ ಜಾಗದಲ್ಲಿ ನನ್ನ ನಾ ಕಲ್ಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಸ್ವಾರ್ಥ, “ದೇಶದ ಚಿಂತೆ ನಿನಗೇಕೆ?” ಎಂದು ಬಿಡುತ್ತದೆಯೆನೋ?.
ಇಂತಹ 23 ರ ಹರೆಯದಲ್ಲಿ ಸುರದ್ರೂಪಿ ಭಗತ್ ಸಿಂಗ್ ನೇಣುಗಂಬ ಏರಿ ಪ್ರಾಣತ್ಯಾಗ ಮಾಡಿದನಲ್ಲಾ. ಅಬ್ಬಾ! ಅದೆಂತಹ ಸಂವೇದನೆ ದೇಶಕ್ಕಾಗಿ, ಸ್ವಾತಂತ್ರಕ್ಕಾಗಿ. ತಾಯಿ ಭಾರತೀಯ ಹಂಬಲ, ತುಡಿತ, ನೋವು ಅದೆಷ್ಟು ಆಳಕ್ಕೆ ಇಳಿದಿರಬೇಕು ಆತನ ಮನದಲ್ಲಿ. ಅದೆಂತ ಕ್ರೂರ ಬೆಳಗು. ತಾಯಿ ಭಾರತಿ ಕೂಡ ಸೂರ್ಯ ಹುಟ್ಟಿ ಬರದಿರಲಿ ಎಂದು ಬೇಡಿರಬಹುದಾ? ರಾಜಗುರು, ಸುಖದೇವ್, ಭಗತ್ ಸಿಂಗ್ ಈ ಮೂವರು ವಂದೇ ಮಾತರಂ ಘೋಷಣೆ ಕೂಗುತ್ತ ಒಂದೊಂದೆ ಮೆಟ್ಟಿಲು ಸಾವಿಗೆ ಹತ್ತಿರವಾದ ಕ್ಷಣವಿತ್ತಲ್ಲಾ..
ದೇಶವನ್ನು ಇಷ್ಟು ಪ್ರೀತಿಸುವ ನಿಮ್ಮ ಉಸಿರನ್ನು ಮತ್ಯಾವ ಮುರುಳಿಯ ರಾಗ ಕರೆಯಿತು, ಕಂಗಳ ಕನಸಾಗಿದ್ದ ದೇಶಸೇವೆಯೆಂಬ ಹೊಳಪು ಅದ್ಯಾವ ಸುಂದರ ಬೃಂದಾವನದ ಕಡೆ ಸೆಳೆಯಿತು ಎಂದು ಕಂಬನಿಯಿಕ್ಕಿದಳು ನಮ್ಮೆಲ್ಲರ ಮಾತೆ. ಇಂದಿನ ವಾಸ್ತವತೆಯೇ ನಾಳಿನ ಕಥೆಗಳಲ್ಲವಾ!? ಭೂತದ ಘಟನೆಗಳೇ ಭವಿಷ್ಯದ ಬುನಾದಿಯ ರಂಗಮಂಟಪವಲ್ಲವಾ!? ಸುಂದರ ಇತಿಹಾಸಕ್ಕೆ, ನಮ್ಮ ಬುನಾದಿಗೆ, ನಾವು ಕೊಡಲಿ ಏಟು ಹಾಕಿ, ರಕ್ತದ ಹನಿಯಿಂದ ತೋಯಿಸಿ ಮುಂದಿನ ಪೀಳಿಗೆಗೆ ಇಡುವಂಥ ನಮ್ಮ ಕಥೆ ಏನಿರಬಹುದು? ದಿನವೂ ಭಯೋತ್ಪಾದನೆಯ ದಾಳಿ, ಅದಕ್ಕೆ ನೀರೆರೆಯುವ ಇದೇ ಮಣ್ಣಿನ ಮಕ್ಕಳು. ಭಗತ್ ಸಿಂಗ್’ನಂತ ಹುತಾತ್ಮರಿಗೆ ನೀಡುತ್ತಿರುವ salute. ವಿಪರ್ಯಸವಾದರು ಸತ್ಯ. ನಾವುಗಳು ಕಥೆಯ ಪಾತ್ರದಾರರೆ. ಅದರಲ್ಲಿ ಯಾವ ಪಾತ್ರವಾಗುತ್ತೇವೆ? ಯಾವ ಮುಗುಳುನಗೆಗೆ ನೀರೆರೆಯುತ್ತೇವೆ? ಅಥವಾ ಯಾರ ಅಳುವಿಗೆ ನೆಲೆ ನಿಲ್ಲುತ್ತೇವೆ ಎಂಬುದು ನಮಗೆ ಬಿಟ್ಟಿದ್ದು.
ತೀರಗಳು ದೂರ ಇದ್ದಾಗಲೇ ತಾನೇ ಮಧ್ಯದಲ್ಲಿ ಜಲರಾಶಿ ಮೈ ತುಂಬಿ ಹರಿಯುವುದು. ಹಾಗೆ ಜಲರಾಶಿ ಮೈ ತುಂಬಿ, ಸ್ವಚ್ಛವಾಗಿ, ಸಿಹಿಯಾಗಿ ಹರಿದಾಗ ತಾನೇ ಬೃಂದಾವನವೊಂದು ಚೇತೋಹಾರಿಯಾಗಿ ಅದರ ದಡದಲ್ಲಿ ಮೈ ತುಂಬಿ ಹಸಿರು ಚೆಲ್ಲಿ ನಿಲ್ಲುವುದು. ಆ ಕಡೆಯ ತೀರದ ಬೃಂದಾವನದ ಹೂವಿಗೂ, ಈ ಕಡೆಯ ಜೇನು ಹುಟ್ಟಿನ ಸಾವಿರ ಜೇನುಗಳಿಗೂ ಮಧ್ಯ ಇರುವ ದೂರವೊಂದು ಸಮಸ್ಯೆಯಾಗಿ ಉಳಿದುಬಿಡುತ್ತಾ??
ಅರ್ಥ ಮಾಡಿಕೊಂಡಷ್ಟೇ ಬದುಕು.. ಅರ್ಥ ಮಾಡಿಕೊಳ್ಳದೇ ನಮ್ಮ ನಿಲುವಿಗೆ ನಿಲುಕದ್ದು ಕಥೆ.
-40c .. ಚಳಿಯಲ್ಲ, ಸಾವದು! ಯೋಚನೆಗೆ ನಿಲುಕದ್ದು ಎಂಬುದಿರುತ್ತದಲ್ಲ ಅದು.. ಹಿತವಾಗಿ AC ಎದುರಲ್ಲಿ ಕುಳಿತು, ಮೂವತ್ತಿಂಚಿನ TV ಯಲ್ಲಿ ವಾರದ ನಂತರ ಅಂಥ ಸಾವನ್ನು ಗೆದ್ದು ಬಂದ ಹನುಮಂತಪ್ಪ ಎಂಬ ವಾರ್ತೆಯನ್ನು ನೋಡಿದರೆ ಹನುಮಂತಪ್ಪನ ಸ್ಥಿತಿ, ದಿಟ್ಟ ಎದೆಯ ಸೈನಿಕರ ಕ್ಷಾತ್ರ, ಇಂಚಿಂಚಾಗಿ ಅವರನ್ನು ಸುಡುವ ಹಿಮಾಲಯದ ಸುಂದರ ಕ್ರೂರತೆ.. ನಮ್ಮ ಯೋಚನೆಗೆ ನಿಲುಕುವುದಲ್ಲ.
ದೂರದಿಂದ ನೋಡುವವರಿಗೆ ಹಿಮಾಲಯವೆಂಬುದು ಒಂದು ಸುಂದರ ಆಹ್ಲಾದತೆ ಅಷ್ಟೇ. ಹಿಮಾಚ್ಛಾದಿತ ಪರ್ವತಗಳು ಮುಗಿಲಿನತ್ತ ಮೈ ಚಾಚಿ, ಮಂಜು ಕವಿದು, ಬಿಳುಪನ್ನು ಹೊರಸೂಸುವ ಮಂದ್ರ ಶಿಖರಗಳು. ಹಿಮಾಲಯವೆಂದರೆ ಹಾಗೆ.. ಸಹಸ್ರ ಶಿಖರಗಳು.. ಸಹಸ್ರ ಶಿಖರಗಳ ಮಡುವಿನಿಂದ ವಯ್ಯಾರವಾಗಿ ಹರಿಯುವ ಸಹಸ್ರ ನದಿಗಳು. ಪ್ರತಿಯೊಂದೂ ಶಿಖರವನ್ನು ಬಳಸಿ ಹರಿಯುವಾಗ ಗಂಗೆಯ ಮೆರಗು, ಯಮುನೆಯ ಮಿನುಗು, ಮೂಲ ಹುಡುಕಿ ಹೊರಟರೆ ಯಾವ ದಾರಿ, ಯಾವ ತಿರುವು. ಶರದ್ ಕಳೆದು ಹೇಮಂತ ಬಂತೆಂದರೆ ಆಗಸದಿಂದ ಬಿಳುಪಿನ ಮಲ್ಲಿಗೆಯ ಸರವೇ ಮಂಜಾಗಿ ಹಸಿರಿಲ್ಲದೆ ಬೋಳಾಗಿ ನಿಂತ ಕಣಿವೆಗಳನ್ನು, ಗಿರಿಗಳನ್ನೂ ಮುತ್ತಿಕ್ಕುವ ದೃಶ್ಯವಿದೆಯಲ್ಲ ಅದೆಂತಹ ಸಮ್ಮೋಹಿನಿ. ಸ್ವಪ್ನ ತಾವರೆಯೊಂದು ಅರಳಿ, ಹೇಮಂತದ ಚಳಿಯನು ತಾಳದೆ ಸ್ವಲ್ಪ ನಲುಗಿ, ತನ್ನ ಮನಸ್ಸಿನ ಬೆಚ್ಚನೆಯ ಭಾವವನ್ನು ಹಂಚಿಕೊಳ್ಳಲು ಸಂಗಾತಿಯನ್ನು ಅರಸುತ್ತಿದ್ದಾಗ…
ಕಾಮನಬಿಲ್ಲೆಂಬ ಏಳು ಬಣ್ಣಗಳ ಚಿತ್ತಾರವೊಂದು ಮೂಡಿ ಮಳೆಯ ಚಳಿಗೂ, ಸೂರ್ಯ ಕಿರಣ ಬಿಸಿಗೂ ನಾ ಬೆಸುಗೆ ಎಂದು ಉತ್ತರಿಸಿದಾಗ… ಸ್ವಪ್ನ ತಾವರೆಯೂ, ಕಾಮನಬಿಲ್ಲಿನ ಏಳು ಬಣ್ಣಗಳು ಸೇರಿದಾಗ ಮೂಡುವ ಒಂದು ಅದ್ಭುತ ಕಲಾಕೃತಿಯಿದೆಯಲ್ಲ ಅದುವೇ ಹಿಮಾಲಯ.
ಆದರೆ ಇದೆ ಹಿಮಾಲಯದ ಸುಂದರತೆಯ ಹಿಂದಿರುವ ಇನ್ನೊಂದು ಮುಖವಿದೆಯಲ್ಲಾ.. ಅದೊಂದು ರಾತ್ರಿ ಕಳೆದಿದ್ದು ನೆನಪಿದೆ ನನಗೆ. ರಾತ್ರಿಯಲ್ಲ ಅದು, ಸಾವಿನ ನೆರಳು. ರಾತ್ರಿಯ ಎಂಟು ತಾಸೆಂಬುದು ಅಷ್ಟು ದೀರ್ಘವಾಗಿರುತ್ತದೆ ಎಂಬ ಸತ್ಯ ತಿಳಿದಿದ್ದು ಆ ಹಿಮಾಲಯದ ನೆತ್ತಿಯ ಮೇಲೆ. ಆ ಹೊತ್ತಿನ ಚಳಿ ಇದ್ದಿದ್ದಾದರೂ ಎಷ್ಟು ? ಕೇವಲ -16C. ಮೈ ಮೇಲೆ ಹಾಕಿಕೊಂಡ ದಪ್ಪನೆಯ ಜಾಕೆಟ್, ಹಿಮ ತೋಡಿ ಸರಿ ಜಾಗ ಮಾಡಿಕೊಂಡು ಹಾಕಿಕೊಂಡಿದ್ದ ಟೆಂಟ್, ಕೈಗೆ ಗ್ಲೌಸ್, ಕಿವಿಯನ್ನೂ ಮುಚ್ಚುವ ಬೆಚ್ಚನೆಯ ಟೋಪಿ, ಮೈಗೆ ಸುತ್ತಿದ ಉಣ್ಣೆಯ ಶಾಲು ಸಾಲದೆಂಬಂತೆ ಒಳಸೇರಿ ಮಲಗಲು ಸ್ಲೀಪಿಂಗ್ ಬ್ಯಾಗ್. ಇಷ್ಟು ಸಿದ್ದತೆ ಇದ್ದರೂ ಆ ರಾತ್ರಿ ನನ್ನನ್ನು ಎಷ್ಟು ಬಳಲಿಸಿತು. ಈಗಲೂ ಕೂಡ ಆ ಯೋಚನೆಯಿಂದಲೇ ಬೆನ್ನಲ್ಲಿ ನಡುಕ ಹುಟ್ಟುತ್ತದೆ.
ಹನ್ನೊಂದಾಗುವ ಹೊತ್ತಿಗೆ ಜೋರಾಗುವ ಗಾಳಿ, ಸ್ಲೀಪಿಂಗ್ ಬ್ಯಾಗಿನ ಅಡಿಯಿಂದಲೇ ನುಸುಳುವ ಚಳಿ. ಕಣ್ಣು ಮುಚ್ಚಿದರೆ ಮತ್ತೆ ತೆರೆಯುತ್ತೇನೋ, ಇಲ್ಲವೋ ಎಂಬ ಭಯ. ಉಸಿರು ಭಾರವಾಗಿ ಮೂಗಿನಿಂದ ನೀರು ಇಳಿಯುವಾಗ, ರಾತ್ರಿ ತನಗಿದ್ಯಾವುದು ಸಂಭಂದವೇ ಇಲ್ಲ ಎಂಬಂತೆ ನಿಂತೇ ಇತ್ತು. ಕೇವಲ ಹದಿನಾಲ್ಕು ಸಾವಿರ ಫೂಟ್ ಎತ್ತರದಲ್ಲಿತ್ತು ನನ್ನ ಟೆಂಟ್.
ಇಪ್ಪತ್ತು ಸಾವಿರ ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ -40c ಚಳಿಯಲ್ಲಿ,ಹಿಮದ ಅಡಿಯಲ್ಲಿ ಸಿಲುಕಿದ ಹನುಮಂತಪ್ಪ ಲ್ಯಾನ್ಸ್ ನಾಯಕ್ ಏನೆಂದು ಯೋಚಿಸಿರಬಹುದು? ಪ್ರಜ್ಞೆ ಹೋಗುವ ಕೊನೆಯ ಕ್ಷಣಗಳ ಮೊದಲು ಆತನಿಗೆ ತಾನು ತನ್ನ ಹೆಂಡತಿಯೊಡನೆ ಹಸೆಮಣೆಯೇರಿದ್ದು, ಆಕೆಯನ್ನು ತನ್ನ ಬಾಹು ಬಂಧನದಲ್ಲಿ ಬಂಧಿಸಿ, ಪಡೆದ ಬೆಚ್ಚನೆಯ ಚುಂಬನದ ನೆನಪು. ಅವಳಲ್ಲಿ ತಾನು ಮೂಡಿಸಿಬಂದ ಬೆಚ್ಚನೆ ಬಾವಗಳು, ಆತನ ಕಂದಮ್ಮನ ನಗು, ತಾಯಿಗೆ ಮಾಡಿ ಬಂದ ಕೊನೆಯ ನಮಸ್ಕಾರ ಇದೆಲ್ಲ ರೀಲಿನಂತೆ ಸುರಳಿ ಬಿಚ್ಚಿರಬಹುದೇ ?
ಇಂತಹ ಎಷ್ಟೋ ಯೋಧರು ಹಿಮದಲ್ಲಿ ಕರಗಿ ಹೋಗುವಾಗ, ಬರುತ್ತಿರುವ ಗುಂಡಿಗೆ ಎದೆಯೊಡ್ಡಿ, ರಕ್ತ ಚೆಲ್ಲಿ, ರಕ್ತದ ಕೊನೆಯ ಹನಿ ಮಣ್ಣಲಿ ಸೇರುವ ಮುನ್ನ “ವಂದೇ ಮಾತರಂ, ಭಾರತ ಮಾತೆಯೇ ನಿನಗಿದೋ ಎನ್ನ ಪ್ರಾಣ” ಎಂದು ಉಸಿರು ತೊರೆದಾಗ. ಹೆಂಡತಿಯಲ್ಲ, ಹೆತ್ತವರಲ್ಲ, ಊರವರೊಂದೆ ಅಲ್ಲ ಭಾರತ ಮಾತೆಯು ಅಳುತ್ತಿದ್ದಾಳೆ.ಮನುಷ್ಯನೇ ಸೃಷ್ಟಿಸಿಕೊಂಡ ಸ್ವಾರ್ಥದ ಗಡಿಯೆಂಬ ಬೇಲಿಯ ಒಳಗೆ ಪ್ರತೀ ಕ್ಷಣವೂ ಗುಂಡಿನ ರಿಂಗಣ ಕಿವಿಯನ್ನಪ್ಪಳಿಸಿ ಕರ್ಣ ಪಟಲ ಹರಿಯುತ್ತಿದ್ದರೆ, ಪ್ರತಿ ರಿಂಗಣದ ಕೊನೆಯಲ್ಲಿ ತನ್ನ ಪ್ರೀತಿಸುವ ಮಗನ ಎದೆ ಬಿರಿಯುತ್ತಿದೆಯೆಂದು ಕೊರಗುತ್ತಿದ್ದಾಳೆ.
20 ಲಕ್ಷ!! ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಸಾಯುವುದು, ಕೋಟಿಗೂ ಹೆಚ್ಚು ಜನ ನಿರಾಶ್ರಿತರಾಗುವುದು, ಭಾರತ! ಭರತ ಹುಟ್ಟಿದ ನಾಡು!! ಇದಕ್ಕೂ ಸಾಕ್ಷಿಯಾಗಿ ಹೋಯಿತಲ್ಲಾ. ಮನುಕುಲದ ಇತಿಹಾಸದಲ್ಲೇ ಅತಿ ದೊಡ್ಡ ದೊಂಬಿ ಮತ್ತು ಗುಳೆ ಹೋದ ಚಿತ್ರಣ ನಮ್ಮ ಸ್ವಾತಂತ್ರ್ಯಕ್ಕೊಂದು ಕಪ್ಪು ಚುಕ್ಕೆಯನ್ನು ನೀಡಿದ್ದು ಸುಳ್ಳಲ್ಲ. ಹಿಂದೂ ಮುಸ್ಲಿಂ ಭಾಯಿ-ಭಾಯಿ ಆಗಿ ಒಗ್ಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇನ್ನೇನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕು ಎಂಬ ಹೊಸ್ತಿಲಲ್ಲಿ…
ಕೇವಲ ಅಧಿಕಾರದ ಆಸೆಗಾಗಿ, ಆಡಳಿತದ ಚುಕ್ಕಾಣಿಗಾಗಿ ಅಖಂಡವಾದ ಭಾರತವನ್ನು ಬೇಲಿಯಿಂದ ಬೇರೆ ಬೇರೆ ಚೂರಾಗಿಸಿ ಪಾಕಿಸ್ತಾನ, ಹಿಂದೂಸ್ಥಾನ ಎಂದು ಹೆಸರಿಟ್ಟು ರಾತ್ರೋ ರಾತ್ರಿ ರಕ್ತದ ಕೋಡಿ ಹರಿದ ದಿನ.. ತನ್ನ ಮಡಿಲಲ್ಲಿ ಒಟ್ಟಾಗಿಯೇ ಆಡಿದ ಮಕ್ಕಳು ದಾಯಾದಿ ಕಲಹವಾಗಿ, ಮಾಂಸದ ಮುದ್ದೆಗಳಾಗಿ ಮಲಗಿದ್ದನ್ನು ಕಂಡು ಭಾರತ ಮಾತೆ “ಇರುವುದನ್ನೆಲ್ಲವನ್ನ ಬಿಟ್ಟು ಇಲ್ಲದಿರುವುದರ ಕಡೆಗೆ ತುಡಿಯುವುದೇ ಜೀವನ” ಎಂದು ಅಳುತ್ತಲೇ ಸ್ವಗತ ಹಾಡಿಕೊಂಡಿದ್ದು ನಿಜವೇ.
ಸ್ವಾತಂತ್ರ್ಯವಿಲ್ಲದಾಗ ಸ್ವಾತಂತ್ರ್ಯಕ್ಕೆ ಹೋರಾಡಿದ ಜನ ನಂತರ ದೇಶ, ಭಾಷೆ, ಮತ ಎಂದು ಹೋರಾಡಿದರು. ಅದು ಸಿಕ್ಕೊಡನೆ ಮತ್ತೊಂದು. ಇಲ್ಲದ ಬೇಲಿಯನ್ನು, ಮುಗಿಯದ ಬಯಕೆಗಳನ್ನು ಬೆನ್ನಟ್ಟತೊಡಗಿದ ಮನುಷ್ಯ. ಭೂಮಿಯೆಂಬ ಈ ಪುಟ್ಟ ಪ್ರಪಂಚದಲ್ಲಿ ಅದೆಷ್ಟು ಬೇಲಿಗಳು. ಎಲ್ಲ ದೇಶಗಳಲ್ಲಿ, ಜನರ ಮನಸಲ್ಲಿ ಇಂಥದೇ ಬೇಲಿಗಳು. ಇಲ್ಲದುದರೆಡೆಗೆ ಓಟ.
ಸಪ್ತ ಸಾಗರಗಳಲ್ಲೂ ಸುಪ್ತವಾಗಿ ತುಂಬಿಕೊಂಡಿರುವ ಭೂ ತಾಯಿ ಇದೆಲ್ಲವನ್ನು ನೋಡಿ ದುಃಖಪಡುತ್ತಿದ್ದಾಳೆ. ಅದೆಷ್ಟೋ ಭಗತ್ ಸಿಂಗ್, ಲ್ಯಾನ್ಸ್ ನಾಯಕ್ ಸತ್ಯದೆಡೆಗೆ ತುಡಿಯುವ, ನ್ಯಾಯದೆಡೆಗೆ ನಡೆಯುವ ಪ್ರತಿಯೊಬ್ಬರ ಮೂಕ ರೋದನವೂ ಅವಳ ಮನಸ್ಸನ್ನು ಮುಟ್ಟುತ್ತಿದೆ; ಎದೆಯ ಬಾಗಿಲನ್ನು ತಟ್ಟುತ್ತಿದೆ. ತನ್ನ ಚೇತನಗಳು ವಿವಶವಾಗುತ್ತಿರುವುದರ ನೋವು ಸಹಿಸಲಾಗದೆ ಸೊರಗುತ್ತಿದ್ದಾಳೆ ಭೂ ತಾಯಿ. ಕೊನೆಯಲ್ಲಿ ಭಾರತ ಮಾತೆಯು ಕೂಡ ಈ ಭುವಿಯ ಮಗಳೇ ಅಲ್ಲವೇ.
ನಮ್ಮಲ್ಲಿ ನಾವೇ ಯೋಚಿಸಿಕೊಂಡರೆ ನಾವು ಕೂಡ ಈ ಕಥೆಯಲ್ಲಿ ಪಾತ್ರಗಳೇ.