ಇತ್ತೀಚಿಗೆ ಕನ್ನಡ ಚಿತ್ರಗಳ ಬಗೆಗೆ ಮಾತಾಡುವ ಹಾಗೆ ಇಲ್ಲ ಅಷ್ಟು ಚೆನ್ನಾಗಿ ಬರುತ್ತಿದೆ. ನೀವು ಇನ್ನೂ ಕೂಡ ಕನ್ನಡದಲ್ಲಿ ಕ್ವಾಲಿಟಿ ಇಲ್ಲ, ಬಜೆಟ್ ಇಲ್ಲ ಅಂತ ಗೊಣಗುತ್ತಿದ್ದರೆ ನಿಲ್ಲಿಸಿ ಬಿಡಿ. ಹೊಸಬರೇ ಒಂದಾಗಿ ಹೊರ ತಂದ ಭಯಂಕರ ಚಿತ್ರ ಲಾಸ್ಟ್ ಬಸ್’ನ್ನು ಒಮ್ಮೆ ನೋಡಿ ಬಿಡಿ. ಹಾಸ್ಯ ಚಕ್ರವರ್ತಿ ನರಸಿಂಹ ರಾಜುರವರ ಫ್ಯಾಮಿಲಿಯಿಂದ ಬಂದ ಚಿತ್ರವಿದು.
ಕ್ಯಾಮರಾ ವರ್ಕ್ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಅಭೂತ ಪೂರ್ವವಾಗಿ ಮೂಡಿ ಬಂದಿದೆ. ಹೇರ್ ಪಿನ್ ತಿರುವುಗಳಲ್ಲಿ ಬಸ್ ತಿರುಗುವಾಗ ಕಾಡಿನ ಮಧ್ಯೆ ಕೊರೆದ ಮಲೆನಾಡಿನ ರಸ್ತೆಗಳಲ್ಲಿ ಜರ್ನಿ ಮಾಡಿದ ಹಾಗೆ ಆಗುತ್ತದೆ. ಸಹಕಾರ ಸಾರಿಗೆಯ ದಿನ ನಿತ್ಯದ ಪಯಣಿಗರಂತೆ ಲಾಸ್ಟ್ ಬಸ್ಸಿನ ಎಲ್ಲಾ ಪಾತ್ರಗಳು ಹತ್ತಿರವಾಗುತ್ತದೆ. ಹಣಸ, ತೀರ್ಥಹಳ್ಳಿ, ಕಮ್ಮರಡಿಯೆಲ್ಲಾ ಸಂಭಾಷಣೆಯಲ್ಲಿ ನುಸುಳಿ ಮೈ ನವಿರೇಳಿಸುತ್ತದೆ.
ಮಾಮೂಲಿ ಸಿನಿಮಾದಂತೆ ಕಥೆ ಹೀರೋ – ಹೀರೋಯಿನ್ ಸುತ್ತವೇ ಗಿರಕಿ ಹೊಡೆಯದೆ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದೆ. ನಾಯಕ, ಕಿರುತೆರೆಯ ಕೆಲವು ಕಲಾವಿದರು , ಹೊಸ ಪರಿಚಯ ಎಲ್ಲರೂ ಕೂಡ ನಿಷ್ಠೆಯಿಂದ ಪಳಗಿದವರಂತೆ ಅಭಿನಯಿಸಿದ್ದಾರೆ. ಮೇಕಪ್ ಕೂಡ ತೀರ ನೈಜವಾಗಿದ್ದು ಹಳ್ಳಿಯ ಮೆರುಗು ನೀಡಿದೆ. ಹಾಡುಗಳಲ್ಲಿ “ದೂರಿ ದೂರಿ” ಕೇಳುಗರ ಮನ ಗೆದ್ದಿದೆ. ಈ ಹಾಡನ್ನು ನೀವು ಚಿತ್ರದಲ್ಲಿ ನೋಡಲೇ ಬೇಕು.
ನಿರ್ದೇಶನ ಮತ್ತು ಸಂಗೀತ ಎರಡೂ ಗೆದ್ದಿದೆ.
ಕೇರ್ ಲೆಸ್ ಯುವಕನ ಪಾತ್ರವನ್ನು ಅವಿನಾಶ್ ಚೆನ್ನಾಗಿ ನಿರ್ವಹಿಸಿದ್ದಾರೆ. ಆದರೆ ಆಶ್ಚರ್ಯಕರ ರೀತಿಯಲಿ ಬಂದಿರುವ ಪಾತ್ರ ಮತ್ತು ನಟನೆ ಅಂದರೆ ಸಮರ್ಥ ಅವರದು. ಹುಡುಗನೊಬ್ಬನ ವ್ಯಕ್ತಿತ್ವವನ್ನು ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಪೂರ್ವಾರ್ಧ – ಕಥೆಯ ಪರಿಚಯ ನೋಡುತ್ತಾ ಹೋದರೆ ಉತ್ತರಾರ್ಧ – ಪಾತ್ರಗಳ ಅಭಿನಯಕ್ಕೆ ಬೆರಗಾಗುತ್ತಾ ಕಳೆದು ಹೋಗುತ್ತದೆ.
ಎಲ್ಲಾ ಹಾರರ್ ಸಿನಿಮಾದಂತಲ್ಲದ ಕೆಲವು ಅಂಶಗಳಿವೆ. ಕಥೆಯಲ್ಲಿ ಊಹಿಸಲಾರದ ತಿರುವಿದೆ. ಆದರೆ ಕಥೆಯ ಇನ್ನೊಂದು ಬಿಂದುವನ್ನು ಇನ್ನು ಸ್ವಲ್ಪ ಬೆಳಸಬಹುದಿತ್ತು. ಗ್ರಾಫಿಕ್ಸ್ ಅತ್ಯುತ್ತಮವಾಗಿ ಬಳಸಿದ್ದಾರೆ ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಕಾಡಿನ ಒಂಟಿ ಮಾಯಿ ಮನೆಯನ್ನು ಚೆನ್ನಾಗಿ , ಬೆಚ್ಚಿ ಬೀಳುವಂತೆ ಚಿತ್ರಿಸಿದ್ದಾರೆ. ಸೈಕಲಾಜಿಕಲ್ ಹಾರರ್ ಎಂದೇ ನಿರ್ದೇಶಕರು ಕರೆದಿರುವುದರಿಂದ ಸಾರಾಂಶ ನೋಡುಗರಿಗೆ ಬಿಟ್ಟಿದ್ದಾರೆ.
ಒಳ್ಳೆಯ ಪ್ಲಾಟ್, ವಿಶೇಷ ಕಥಾಹಂದರ, ಉತ್ತಮ ನಟನೆಯಿಂದ ಚಿತ್ರ ರಂಗು ರಂಗಾಗಿದೆ. ವಿಶೇಷ ಅನುಭವಕ್ಕಾಗಿ ನೋಡಲೇ ಬೇಕಾದ ಚಿತ್ರವಿದು. ನಿಗೂಢ, ವಿಸ್ಮಯ, ಯೋಚನೆಗೆ ಹಚ್ಚುವ ಫಿಲ್ಮ್ ಆದುದರಿಂದ ಕಲಾರಸಿಕರಿಗೆ ಅದ್ದೂರಿ, ಅಪೂರ್ವ ಭೋಜನ.