ಕಲ್ಲು ಕಡಿಯುವ ಯಂತ್ರವು ಮಹಾವೇಗದಲ್ಲಿ ತಿರುಗಿಸುವ ತನ್ನ ಸುದರ್ಶನ ಚಕ್ರದ ಹರಿತ ಅಲಗುಗಳಿಗೆ ಸಿಕ್ಕು ಮೈಯುದ್ದಕ್ಕೂ ಸರಿಸುಮಾರು ಒಂದು ಫ಼ೂಟ್ ಅಂತರದಲ್ಲಿ ಆಳದ ಬರೆಯನ್ನೆಳೆಸಿಕೊಂಡ ಕಲ್ಲುಹಾಸು, ಬೇಡದ ಧೂಳಿನ ಕಣಗಳನ್ನು ಭರ್ರೆಂದು ಉಗುಳಿ ಆಗಸಕ್ಕೆಬ್ಬಿಸಿತು. ಹೀಗೆ ಎದ್ದ ಧೂಳೆಲ್ಲವೂ ಯಂತ್ರದ ಕೆಳಬದಿಯಿಂದ ಸಾಗಿ, ಮಾತು ಕೇಳದ ಬ್ರೇಕು-ಗೇರುಗಳೊಂದಿಗೆ ಸಂಧಾನ ಕ್ರಿಯೆಯಲ್ಲಿ ತೊಡಗಿದ್ದ ಚಾಲಕ ಸ್ವಾಂಪನ ಕಾಚಾ ಇಲ್ಲದ ಕಪ್ಪು ದೊಗಳೆ ಚಡ್ಡಿಯೊಳಗೆ ನುಗ್ಗಿ, ಅದ್ಯಾವುದೋ ಮಾಯಕದ ದಾರಿಯಿಂದ ಹೊರಬಿದ್ದು, ಆತನ ಸಮಸ್ತ ದೇಹಾಂಗವನ್ನೆಲ್ಲಾ ಮುತ್ತಿ ಮುದ್ದಿಸಿ ಚಿಕ್ಕ ಚಿಕ್ಕ ಮೋಡದೋಪಾದಿಯಲ್ಲಿ ಮೇಲೇರಿತು. ಕಲ್ಲು ಕಡಿಯುವ ಕೆಲಸದಲ್ಲಿದ್ದ ಸ್ವಾಂಪ, ಕಾಲುಂಗುಷ್ಟದಿಂದ ಶಿರಶಿಖರದವರೆಗೂ ಏಕ ಪ್ರಕಾರದಲ್ಲಿ ದಪ್ಪ ಮಣ್ಣಿನ ಹೊದಿಕೆಯನ್ನು ಹೊದ್ದು, ಕೆಂಪು ಬಣ್ಣದವನಾಗಿ ಶೋಭಿಸುತ್ತಾ, ಎರಡೂ ಕೈಗಳ ಸಹಾಯವಿಲ್ಲದೇ ತುಟಿಯ ಮಧ್ಯೆ ಸಿಕ್ಕಿಸಿದ್ದ ಬೀಡಿಯ ಹೊಗೆಯನ್ನು ಧೂಳಿನೊಂದಿಗೆ ಸೇರಿಸುತ್ತಿದ್ದ. ಆತನ ಗತ್ತು, ದೌಲತ್ತುಗಳನ್ನು ಮೇಲಿನಿಂದಲೇ ನೋಡುತ್ತಿದ್ದ ವ್ಯಕ್ತಿ, ತನಗ್ಯಾವತ್ತು ಈ ಕೆಲಸ ದೊರೆಯುತ್ತದೆಯೋ ಎಂಬಂತೆ ನಿಡಿದಾಗಿ ನಿಟ್ಟುಸಿರು ಬಿಟ್ಟಿತು. ಹತ್ತಡಿಯಾಳಾದ ಆ ಕಲ್ಲುಹೊಂಡದಿಂದ ಹೊರಬಿದ್ದು ಇಡೀ ಊರನ್ನೇ ವ್ಯಾಪಿಸಿ ಕೆಂಪು ಬಣ್ಣದ ಪದರವೊಂದನ್ನು ಹೊಡೆದುಬಿಟ್ಟಿದ್ದ ಧೂಳಿನ ಮಧ್ಯೆ ಕೆಲಸ ಮಾಡುತ್ತಾ, ಸ್ವತಃ ಮಣ್ಣುಗಟ್ಟಿಯಂತೆ ಕಾಣುತ್ತಿದ್ದ ಹದಿನೈದಿಪ್ಪತ್ತು ಮನುಷ್ಯರ ನಡುವೆ ಈ ಯಕಃಶ್ಚಿತ್ ವ್ಯಕ್ತಿಯ ಯಕಃಶ್ಚಿತ್ ಯೋಚನೆಗ್ಯಾವ ಬೆಲೆಯಿದ್ದೀತು? ಆದರೂ ಕೂಡಾ ಮನುಷ್ಯನ ಮನಸ್ಸು ರಾಜಕುಮಾರಿಯೊಬ್ಬಳನ್ನು ಕಲ್ಪಿಸಿಕೊಂಡು ತಾನೇ ಏಳು ಸಮುದ್ರ ದಾಟಿ ಹೋಗುವ ರಾಜಕುಮಾರನೆಂದುಕೊಂಡರೆ ಯಾರಿಗೆ ಲಾಭ, ಯಾರಿಗೆ ನಷ್ಟ? ಎಷ್ಟೆಂದರೂ ಯೋಚನೆ ಯೋಚನೆಯೇ. ಹೀಗೆ ಯೋಚನಾಧೀನನಾದ ವ್ಯಕ್ತಿಯೇ ಆತನ ಅಜ್ಜನ ಹೆಸರನ್ನು ಹೊತ್ತು ಹುಟ್ಟಿದ್ದ ಸುಕ್ರಗೊಂಡ. ಕೆಲಸದ ನಡುವೆ ಮಧ್ಯಾಹ್ನದ ಬಿಡುವಿನಲ್ಲಿ ಊಟಕ್ಕೆ ಕಾಯುತ್ತಾ ಕುಳಿತಿದ್ದವ, ಹೊಂಡ ನೋಡುತ್ತಾ, ಕಲ್ಲು ಹೊರುವುದರಿಂದ ಬಿಡುಗಡೆ ಪಡೆದು ಕಲ್ಲು ಕಡಿಯುವ ಕೆಲಸಕ್ಕಾಗಿ ಕನಸು ಕಾಣುತ್ತಿದ್ದ.
ತನ್ನ ಫಲವತ್ತಾದ ಗದ್ದೆಗಳ ನಡುವೆ ಕೆಂಪು ಕದಗಲ್ಲು ಸಿಕ್ಕಿದಾಗ ಸ್ವರ್ಗಕ್ಕೇ ಸಿಹಿ ಹಂಚುವಷ್ಟು ಸಂತೋಷಪಟ್ಟಿದ್ದ ಮಂಜುನಾಯ್ಕ. ಇದ್ದ ಎರಡೆಕರೆ ಗದ್ದೆಯಲ್ಲಿ ಮುವ್ವತ್ತು ಗುಂಟೆ ಕಬ್ಬನ್ನೂ. ಐವತ್ತು ಗುಂಟೆ ಭತ್ತವನ್ನೂ ಬೆಳೆಯುತ್ತಿದ್ದವ, ಕೆಂಪುಕಲ್ಲು ಸಿಗುತ್ತದೆಂದು ಗೊತ್ತಾದಾಕ್ಷಣ ಹಿಂದೆಮುಂದೆ ನೋಡದೇ ಕಡಿಯಲು ಒಪ್ಪಿಬಿಟ್ಟಿದ್ದ. ಕಲ್ಲಿನ ಪದರ ಹರಡಿದ್ದ ಇಪ್ಪತ್ತು ಗುಂಟೆ ಜಾಗದಲ್ಲಿ ಅಗೆಯಲು ತೊಡಗಿದವರಿಗೆ ನಿಧಿಯೇ ಕಾದಿತ್ತು. ಭೂಮಿಯನ್ನು ಬಗೆದಂತೆ ಮತ್ತೆ ಮತ್ತೆ ವಿಸ್ತಾರಗೊಳ್ಳುತ್ತಾ ಆಳಕ್ಕೆ ವ್ಯಾಪಿಸಿದ್ದ ಕೆಂಪುಕಲ್ಲು, ತನ್ನನ್ನು ತಾನು ಕಡಿದುಕೊಳ್ಳಲ್ಪಟ್ಟು ಮಾರಾಟಕ್ಕೆ ತೊಡಗಿದ್ದ ಸಾಹುಕಾರನಿಗೂ, ಕೊಟ್ಟಿದ್ದ ಮಂಜುನಾಯ್ಕನಿಗೂ ಹಣದ ಹೊಳೆಯನ್ನೇ ಹರಿಸಿತ್ತು. ಸುತ್ತಮುತ್ತಲಿನ ಊರಿನವರೆಲ್ಲಾ ಕಲ್ಲಿನ ಉತ್ಕೃಷ್ಟತೆಯನ್ನು ತಿಳಿದು, ಓಡಿ ಬಂದು ಲಾರಿ ಲೋಡುಗಳನ್ನು ಹೇಳಿದ ರೇಟಿನ ಮೇಲೊಂದಿಷ್ಟು ಚೌಕಾಶಿ ಮಾಡಿ ಒಯ್ದು, ಮನೆಯನ್ನೋ ಕೊಟ್ಟಿಗೆಯನ್ನೋ ಕಟ್ಟಿಕೊಳ್ಳತೊಡಗಿದ್ದರು. ಮಂಜು ನಾಯ್ಕನ ಕಲ್ಲುಕ್ವಾರೆಯ ವಿಷಯ ಸುತ್ತ ಹತ್ತು ಹಳ್ಳಿಗಳಿಗೆ ಯಾವುದೇ ಪ್ರಚಾರ ಕಾರ್ಯದ ಅಗತ್ಯವಿಲ್ಲದೇ ಕೇವಲ ಗಾಳಿ ಮಾತಿನಿಂದ ಹುಲುಸಾಗಿ ಹಬ್ಬಿ ಹಲವಾರು ಗಿರಾಕಿಗಳನ್ನು ಹೊತ್ತು ತಂದಿತ್ತು. ಆತ ಕೂಡಾ ತುಂಡುಗಲ್ಲುಗಳಿಂದ ತನ್ನ ಜಮೀನಿನ ಗಡಿಗೆಲ್ಲಾ ಗಟ್ಟಿಯ ಕಂಪೌಡನ್ನೆಬ್ಬಿಸಿ, ಕಳ್ಳದನಗಳ ಕಾಟದಿಂದ ಪಾರಾದೆನೆಂದು ನಿಟ್ಟುಸಿರು ಬಿಟ್ಟಿದ್ದನಲ್ಲದೇ ಹೊಳೆಕೊರೆತವನ್ನು ತಪ್ಪಿಸಲೆಂದು ಕಂಟವನ್ನೂ ಕಟ್ಟಿಬಿಟ್ಟಿದ್ದ. ಆತನದ್ದೇ ಜಾಗದ್ದಾದ್ದರಿಂದ ತುಂಡುಗಲ್ಲುಗಳನ್ನು ಬಿಟ್ಟಿಯಾಗಿ ಕೊಟ್ಟಿದ್ದನಾದರೂ ತನಗೆ ಸಿಗುತ್ತಿದ್ದ ಲಾಭದಿಂದ ಸಾಹುಕಾರ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ. ಇತ್ತ ಮಂಜುನಾಯ್ಕನೂ ಕೂಡ ಇಪ್ಪತ್ತು ಗುಂಟೆ ಜಾಗದಲ್ಲಿ ಹತ್ತು ಫ಼ೂಟಿನವರೆಗೆ ತೋಡಿದರೂ ಕೂಡ ಮತ್ತೂ ಸಿಗುತ್ತಿದ್ದ ಕೆಂಪು ಕಡಗಲ್ಲು ತನ್ನ ಬೆಳೆಸಾಲ ಗೃಹಸಾಲಗಳನ್ನೆಲ್ಲಾ ತೀರಿಸುದುದಲ್ಲದೇ ಸೊಸೈಟಿಯ ಖಾತೆಯಲ್ಲೊಂದಿಷ್ಟು ಇಡುಗಂಟನ್ನು ಜಮಾ ಮಾಡಿದುದನ್ನು ನೋಡಿ, ಇನ್ನಷ್ಟು ಖುಷಿಯಾಗಿ ಕಂಡವರ ನಡುವೆ ಹೆಮ್ಮೆಯಿಂದ ತಲೆಯೆತ್ತಿ, ಲುಂಗಿಕಟ್ಟಿ ನಡೆಯಲು ಶುರುಹತ್ತಿದ್ದ. ಊರಲ್ಲಿ, ಕೇವಲ ತಿಂಗಳೆರಡು ತಿಂಗಳ ಸಮಯದಲ್ಲಿ ಮಂಜುನಾಯ್ಕನ ಸ್ಥಾನಮಾನ ’ಕ್ವಾರೆಗದ್ದೆ ಮಂಜುನಾಯ್ಕರು’ ಎಂದು ಬದಲಾಗಿ, ಆತನಪ್ಪನ ಕಾಲದ ’ಹೇಲ್ಗದ್ದೆ ಮಂಜುನಾಯ್ಕ’ ಎಂಬುದು ಧೂಳಿನೊಂದಿಗೇ ಸೇರಿ ಹಾರಿಹೋಗಿತ್ತು.
ಇಪ್ಪತ್ತು ಗುಂಟೆಯೆಂಬ ಲೆಕ್ಕದಲ್ಲಿ ಮಾತಾಗಿದ್ದರೂ ಕ್ವಾರೆಯಿಂದ ತೆಗೆದ ಮಣ್ಣಿನ ರಾಶಿಯೇ ಇನ್ನಿಪ್ಪತ್ತು ಗುಂಟೆಯ ಜಾಗವನ್ನಾಕ್ರಮಿಸಿ ಕೂತಿತ್ತು. ಮೇಲ್ಪದರದ ಫಲವತ್ತಾದ ಮಣ್ಣನ್ನಿಷ್ಟು ಅಡಿಕೆ ತೋಟಕ್ಕೆ ಸಪ್ಪು ಮಣ್ಣು ಮಾಡಿದರೂ, ದಿನದಿನಕ್ಕೆ ರಾಶಿಯಾಗಿ ಕೂರುವ ಪುಡಿಗಲ್ಲುಗಳನ್ನೂ ಅರ್ಧ ಲೋಡು ಧೂಳನ್ನೂ ವಿಲೇವಾರಿ ಮಾಡಲು ಜಾಗವಿಲ್ಲದೇ ಪಕ್ಕದ ಕುಯ್ಲಾದ ಭತ್ತದ ಗದ್ದೆಯಲ್ಲಿ ರಾಶಿಹಾಕಿ ಪೇರಿಸಿದಾಗ ಗಲಾಟೆ-ತಕರಾರು ಮಾಡಿದ ಮಂಜುನಾಯ್ಕನ ಬಾಯಿಗೊಂದಿಷ್ಟು ನೋಟಿನ ಕಟ್ಟುಗಳನ್ನು ತುರುಕಿ ಶಾಶ್ವತವಾಗಿ ಮುಚ್ಚಿಸಿಬಿಟ್ಟಿದ್ದ ಕ್ವಾರೆ ಸಾಹುಕಾರ. ಹೀಗೆ ರಾಶಿ ಹಾಕಿದ ಮಣ್ಣು ದಿಬ್ಬ ಎರಡು ಬೆಳೆಯ ನೀರಾವರಿ ಗದ್ದೆಯನ್ನು ಸಂಪೂರ್ಣವಾಗಿ ನುಂಗಿ ನೀರು ಕುಡಿದು ಮುಗುಮ್ಮನೆ ಕುಳಿತು, ತನ್ನಷ್ಟಕ್ಕೆ ತಾನೇ ವಿಂಧ್ಯ ಪರ್ವತದೋಪಾದಿಯಲ್ಲಿ ದಿನದಿನಕ್ಕೆ ಬೆಳೆಯುತ್ತಿತ್ತು. ಬಿತ್ತಿದ್ದ ನಲವತ್ತು ಹಾನಿ ಗದ್ದೆಯ ಎಳೆಸಸಿಗಳು ಧೂಳು ಬಡಿದುಕೊಂಡು ಬೆಂಕಿರೋಗಕ್ಕೆ ತುತ್ತಾಗಿ ಇಡೀ ಗದ್ದೆಗೆ ಗದ್ದೆಯೇ ಸಾಫು ಕೆಂಪಾಗಿ ಮಲಗಿತ್ತು. ರಸ್ತೆಯ ಪಕ್ಕದಲ್ಲೇ ಕ್ವಾರಿ ಹೊಂಡವಿದ್ದುದರಿಂದ ಡಾಂಬರಿನ ಮೇಲೆಲ್ಲಾ ಅರ್ಧ ಫೀಟಿನಷ್ಟು ದಪ್ಪಗೆ ಕೂತ ಧೂಳು ಹೋಗಿಬರುವ ವಾಹನಗಳಿಂದ ಭುರ್ರನೆದ್ದು ಸುಕ್ರಗೊಂಡನ ಗಂಡಸತ್ತ ಅಬ್ಬೆ ಹಾಕಿಕೊಂಡ ತೆಂಗಿನ ತಟ್ಟಿಯ ಗೂಡಂಗಡಿಯ ಮಾಡಿನ ಮೇಲೂ, ಒಳಗಿದ್ದ ಅಡಿಕೆ ದಬ್ಬೆಯ ಬೆಂಚಿನ ಮೇಲೂ ಸ್ಥಾಪಿತಗೊಂಡು ಆ ಮೂಲಕವಾಗಿ ಅಂಡೂರುವವರ ಕುಂಡೆಗಳನ್ನು ಕೆಂಪಾಗಿಸಿದುದಲ್ಲದೇ, ತಂಪು ಕಳೆದುಕೊಂಡ ಕೋಕಾಕೋಲಾ ಬಾಟ್ಲಿಗಳನ್ನು ಕೂಡ ಆಕೆಯ ಸೀರೆಯ ಬಣ್ಣಕ್ಕೆ ತಿರುಗಿಸಿತ್ತು. ಗ್ರಾಮ ಪಂಚಾಯತ್ ಲೆಕ್ಕದ ಪ್ರಕಾರ ಇಪ್ಪತ್ಮೂರು ಮನೆಗಳನ್ನು ಹೊಂದಿ, ಎಪ್ಪತ್ತಾರೆಕರೆ ವಿಸ್ತೀರ್ಣದಲ್ಲಿ ಅರೆಮಲೆನಾಡಿನ ಬೆಟ್ಟದ ಸೆರಗಲ್ಲಿ ಹರಡಿದ್ದ ಕುಂಟ್ವಾಣಿ ಊರಿಗೆ ಈ ಯಮಕಂಟಕ ಕಲ್ಲುಕ್ವಾರೆ ಬಂದಿದ್ದೇ ಬಂದಿದ್ದು, ತನ್ನ ಗರ್ಭದಾಳದಿಂದ ಕ್ಯಾಕರಿಸಿ ಕಕ್ಕಿದ ಧೂಳನ್ನು ಲಾವಾರಸದೋಪಾದಿಯಲ್ಲಿ ಸುತ್ತೆಲ್ಲ ಕಡೆ ಹರಡಿಸಿ, ಜಮೀನು-ಮನೆ-ಗದ್ದೆಗಳೊಂದಿಗೆ ಹಚ್ಚಹಸುರಿನ ಕಾಡನ್ನು ಕೂಡಾ ಕೆಂಪಾಗಿಸಿತ್ತು.
ಇಂತಿಪ್ಪ ಕುಂಟ್ವಾಣಿ ಊರಿನ ದಿವಾಳಿಯೆದ್ದ ಕೃಷಿಭೂಮಿಯ ನಡುವಿದ್ದ ಕಲ್ಲುಕ್ವಾರೆಯು, ದಿನಾಲು ತಾನು ಬಹಿಷ್ಠೆ ಮಾಡಿ ರಾಶಿ ಹಾಕಿದ ಮಣ್ಣುಗುಡ್ಡೆಯ ಮೇಲೇ ಕುಳಿತು ಭವಿಷ್ಯದ ಯೋಚನೆಯಲ್ಲಿ ಮುಳುಗೇಳುತ್ತಿದ್ದ ಸುಕ್ರಗೊಂಡ. ಊಟಕ್ಕೆಂದು ಸಾಹುಕಾರ ಬಿಡುವ ಒಂದು ಗಂಟೆಯ ಸಮಯದಲ್ಲಾಗಲೇ ಅರ್ಧ ಗಂಟೆ ಕಳೆದು ತನ್ನ ಹೊಟ್ಟೆ ಕೂಡಾ ತಕಧಿಮಿ ತಕಧಿಮಿಯೆಂದು ನೃತ್ಯಿಸತೊಡಗಿದುದರಿಂದ ಅಸಹನೆಯ ಮೂಟೆಯಂತಾದವ ಕುತ್ತಿಗೆಯನ್ನೆತ್ತರಿಸಿ ಕಾರೆಮರದ ಸಂದಿಯಿಂದ ನೋಡಿದ. ಆ ಸಮಯಕ್ಕೆ ಸರಿಯಾಗಿ ಕಿಣಿಕಿಣಿಯೆಂದು ಶಬ್ದ ಹೊರಡಿಸುವ ಸ್ಟೀಲಿನ ಡಬ್ಬಿಯನ್ನು ಹಿಡಿದು ಮೊಣಕಾಲಿನವರೆಗೂ ಸೀರೆಯನ್ನು ಎತ್ತಿಕಟ್ಟಿ ಏದುಸಿರು ಬಿಡುತ್ತಾ ಬರುತ್ತಿದ್ದ ಸುಬ್ಬಿ ಕಂಡಳವನಿಗೆ. ಸುಕ್ರ-ಸುಬ್ಬಿಯರಿಬ್ಬರೂ ವರ್ಷವೆರಡರ ಹಿಂದೆ ಗುರು ಹಿರಿಯರಿಂದ ನಿಶ್ಚಯಿಸಲ್ಪಟ್ಟು ಶುಭಲಗ್ನದಲ್ಲಿ ಮದುವೆಯಾಗಿದ್ದರು. ಆಕೆಗೆ ಹೆಸರಾದರೂ ವೈನಾಗಿರಲೆಂದು ಲಕ್ಷಣವಾಗಿ ಸುಭದ್ರೆ ಎಂದು ಲಗ್ನಪತ್ರಿಕೆಯಲ್ಲಿ ಭಟ್ಟರು ನಮೂದಿಸಿದ್ದರೂ, ಅಪ್ಪನ ಮನೆಯಲ್ಲಿ ಕರೆಯುವ ಸುಬ್ಬಿ ಎಂಬ ಹೆಸರೇ ಗಂಡನಮನೆಯಲ್ಲೂ ಬಿದ್ದು, ಊರವರ ಬಾಯಲ್ಲೂ ನಲಿಯುತ್ತಿತ್ತು. ತನ್ನ ಓರಗೆಯವರೆಲ್ಲರದ್ದೂ ಐತು, ಮಾದಿ, ಕುಷ್ಣಿ ಎಂಬ ಹೆಸರುಗಳೇ ಇದ್ದುದರಿಂದ ಆಕೆಗೇನೂ ಬೇಸರವಾಗಿರಲಿಲ್ಲ.
ಕ್ವಾರಿಯು ಸಮೀಪಿಸಿದಾಕ್ಷಣ ಸೀರೆಯನ್ನು ಕೆಳಗಿಳಿಬಿಟ್ಟ ಸುಬ್ಬಿ, ನಡೆದು ಬಂದು ಊಟದ ಡಬ್ಬಿಯನ್ನು ಗಂಡನಿಗೆ ಕೊಟ್ಟಳು. ಮೊದಲೇ ಸಿಟ್ಟಾಗಿದ್ದಾತ ಹೆಂಡತಿಯನ್ನು ನೋಡಿದಾಕ್ಷಣ ಇನ್ನಷ್ಟು ಉರಿದುಕೊಂಡ.
“ಬೇಗೆ ತರೂಕಾಗೂದಿಲ್ಯಾ? ನಾಳಿಯಿಂದೆ ಬೈಗಾದ್ ಮ್ಯಾಲೆ ಬಾ. ಹೊಟ್ಟೀಗಿಲ್ದೆ ನನ್ ಹೆಣಾ ಬೀಳ್ಲಿ”
“ಬೇಯ್ಸಿ ತರ್ಬೇಕಲೆ. ಹತ್ ನಿಮೀಟು ತಡು ಆಯ್ತಪ”
ಡಬ್ಬಿಯ ಬಾಯ್ದೆರೆದ ಸಿಕ್ರನ ನಾಲಿಗೆಯಲ್ಲಿ ನೀರು ಬಂದು ಜೊರ್ರನೆ ಕೆಳಗಿಳಿಯುವುದೊಂದು ಬಾಕಿ; ಕೂಡಲೇ ನುಂಗಿಕೊಂಡ. ಘಮ್ಮೆಂದು ತನ್ನದೇ ಆದ ಪರಿಮಳವನ್ನು ಹೊರಸೂಸುತ್ತಿತ್ತು ಕೊಚ್ಚಕ್ಕಿ ಅನ್ನ ಮತ್ತು ಏಡಿ ಸಾರು. ಬೆಳಿಗ್ಗೆ ವಿಸರ್ಜನೆಗೆಂದು ಹೊಳೆಕಡೆ ಹೋಗಿದ್ದವ ಪೊಟರೆಯೊಳಗಿದ್ದ ಏಡಿಯೊಂದನ್ನು ಹಿಡಿದು, ಕೋಡು ಮುರಿದು ತಂದು ಹಿತ್ತಿಲು ಮಾಡಿಗೆ ನೇತು ಬಿಟ್ಟಿದ್ದ. ಗಡದ್ದಾಗಿ ಸಾಂಬಾರು ಅರೆದು ಪದಾರ್ಥ ಮಾಡಿದ್ದಳು ಸುಬ್ಬಿ. ತಳದಲ್ಲೊಂದು ಅಗುಳೂ ಬಿಡದೇ ನುಂಗಿದವ ನಂಜಲು ತಂದಿದ್ದ ರಾಮ ಭಟ್ಟರ ಮನೆಯ ಅಪ್ಪೆಮಿಡಿಯ ಉಪ್ಪಿನಕಾಯಿಯ ದೊಡ್ಡ ಹೋಳೊಂದನ್ನು ಬಾಯಿಗೆ ಹಾಕಿ ಚಪ್ಪರಿಸಿ, ಗೊಟಗೊಟನೆ ಕೊಡದಿಂದ ಚೊಂಬಿಗೆ ಬಗ್ಗಿಸಿ ನೀರು ಕುಡಿದು ಡರ್ರೆಂದು ತೇಗಿದ. ಕೈತೊಳೆದು, ಡಬ್ಬಿಯನ್ನು ಹೆಂಡತಿಗೆ ಕೊಟ್ಟು, ಎದ್ದು ನಿಂತು ಚಡ್ಡಿಯ ಮೇಲೆ ಸುತ್ತಿದ್ದ ಟವೆಲ್ಲನ್ನು ಬಿಚ್ಚಿ ಬಿಗಿಯಾಗಿ ಕಟ್ಟಿದ. ಕರ್ಕಶ ಶಬ್ದದೊಂದಿಗೆ ಶುರುವಾದ ಯಂತ್ರ, ಕಲ್ಲು ಹೊರುವ ಕೆಲಸಗಾರರನ್ನು ಕೂಗಿ ಕರೆದಿತ್ತು. ಮೈಬಗ್ಗಿಸಿ ನೋವುಮಾಡಿಕೊಂಡು ಕಲ್ಲು ಹೊರುತ್ತಿದ್ದ ತನ್ನ ಗಂಡನನ್ನರೆಕ್ಷಣ ನೋಡಿದ ಸುಬ್ಬಿ, ನಿಟ್ಟುಸಿರುಬಿಟ್ಟು ಏಳುತಿಂಗಳ ಮಗುವಿದ್ದ ಡುಮ್ಮನೆಯ ಹೊಟ್ಟೆಯನ್ನು ಹೊತ್ತು ನಿಧಾನಕ್ಕೆ ಬಿಡಾರದೆಡೆಗೆ ಧಾವಿಸಿದಳು.
ಆಕೆ ’ಬಿಡಾರಕ್ಕೆ ಹೋದಳು’- ಎನ್ನುವುದಕ್ಕೂ ಕಾರಣವೊಂದಿದೆ. ಮನೆಯೆಂದರೆ ಪಿತ್ರಾರ್ಜಿತ ಆಸ್ತಿಯ ಕೂಡುಕುಟುಂಬದ ವಾಸಸ್ಥಳವಾಗಿದ್ದು, ಬಿಡಾರವೆಂದರೆ ಮನೆಯಿಂದ ಬೇರ್ಪಟ್ಟು ಒಂದೇ ಸಂಸಾರ ಹೊಸದಾಗಿ ಕಟ್ಟಿಕೊಂಡ ಗೂಡು. ಮದುವೆಯಾದ ಹೊಸತರಲ್ಲಿ ತಾಯಿ-ಮಗಳಂತೆ ಚಂದದಿಂದಿದ್ದ ಅತ್ತೆ-ಸೊಸೆಯರು ನಂತರ ಎಲ್ಲರ ಮನೆಯ ದೋಸೆಯಂತೆ ತಮ್ಮದನ್ನೂ ತೂತುಹೊಡೆದುಕೊಂಡಿದ್ದರು. ಈ ಪರಸ್ಪರ ತೂತು ಹೊಡೆದುಕೊಂಡು ಜಗಳಾಡುವ ಕಾರ್ಯದಲ್ಲಿ ಹೊಸದಾಗಿ ಮನೆತುಂಬಿದ ಸೊಸೆಯ ಪಾತ್ರ ಕಡಿಮೆಯೇ ಇತ್ತೆನ್ನಬಹುದು. ಅತ್ತೆಯ ಸರ್ವಾಧಿಕಾರದೊಂದಿಗೆ ಊಳಿಟ್ಟು ಗೌಜಿಯೆಬ್ಬಿಸುವ ಬಾಯಿಯೂ ಸೇರಿಕೊಂಡು ಗಂಡ-ಹೆಂಡತಿಯರಿಬ್ಬರಿಗೂ ರೇಜಿಗೆ ಹುಟ್ಟಿಸಿದ್ದವು. ಒಮ್ಮೊಮ್ಮೆಯಂತೂ ವಿನಾಕಾರಣ ಜಗಳಕ್ಕೆ ಕಾದು, ಹಾರಿ ಬರುವಂತಿತ್ತು ಅತ್ತೆಯ ವರಸೆ. ಆಕೆ ಸುಬ್ಬಿಯೊಂದಿಗೆ ಜಟಾಪಟಿಗಿಳಿದಾಗಲೆಲ್ಲಾ ಗಂಡನಾದವ ಅಂದರೆ ಸುಬ್ಬಿಯ ಮಾವ ಗದ್ದೆಗೋ, ತೋಟಕ್ಕೋ ಪೇರಿಕೀಳುತ್ತಿದ್ದ. ಆತನೊಂದು ಕೊಂಬಿಲ್ಲದ ಹಸುವೆಂದು ಊರಲ್ಲೆಲ್ಲಾ ಪ್ರಸಿದ್ಧಿಪಡೆದವ. ಆವತ್ತೊಂದಿನ ಊಟದ ನಂತರ ಶುರುವಾದ ಜಗಳ ತಾರಕಕ್ಕೇರಿತ್ತು.
“ಬೋಸೂಡಿ ಗುಲಾಮಿ ಹೊಟ್ಟಿ ವಡೂಕೆ. ಉಂಡ್ಕಂಡ್ ಬಿದ್ದಿರೂದ್ ಕಾಣು; ಗಂಡ ಬರ್ಬೇಕು, ಉಂಬೂಕ್ ಹಾಕ್ಬೇಕು ಯಂಥದೂ ಇಲ್ಲೆ. ಈ ದೆಯ್ಯ ಯತ್ಲಾಗ್ ಬಂದ್ ವಕ್ಕರ್ಸಿಕಂತೇನೋ ನಮ್ಮನೀಗೆ.” ಅತ್ತೆ ಗುರ್ರೆಂದು ಕೂಗಿ ನಿಟ್ಟುಸಿರುಬಿಟ್ಟಳು.
“ನನ್ ಹೊಟ್ಟಿ ನಾ ಉಂತೆ. ನೀವೂ ಉಂಬ್ರಲೆ; ಚರ್ಗೀಲಿ ಅನ್ನು ಅದೆ. ಉಂಡ್ಕಂಡ್ ಬಿದ್ಗಣಿ.”
“ನಂಗ್ ಉಂಬೂಕ್ ನೀ ಹೇಳ್ಬೇಕಾ ರಂಡಿ ಮಗುವೆ. ನಿಮ್ಗೆಲ್ಲಾ ಸೊಂಟ ಮುರ್ದಿ ಕೂರ್ಸ್ಬೇಕು ಮುಲ್ಲೀಗೆ”
“ಯಂಥ ಮಾತ್ ಮಾತಿಗೂ ರಂಡಿ, ಮುಂಡಿ, ಬೇವರ್ಸಿ ಅಂತ್ರಿ? ಒಂದಿನಾನಾರೂ ಸಮಾ ಮಾತಾಡೂಕ್ ಆಗೂದಿಲ್ಯಾ”
“ನಂಗ್ ಮಾತಾಡೂದ್ ಹೇಳ್ಕೊಡ್ತ್ಯಾ! ನಿನ್ನಜ್ಜಿ ಹೆಣಾ ಬೀಳೂಕೆ, ನಿನ್ನಬ್ಬಿ ಮಖಾ ಮುಚ್ಚ, ನಿನ್ ಕಣ್ ಸೀದೋಗ, ನಿನ್ ಮಂಡಿ ಬೋಳಾಗ್ ಮುಂಡೆ ಆಗೋಗ, ನಿನ್ನಪ್ಪ……”
ಧಡ್, ಧಡ್, ರಪ್…… ರಪ್…….ರಪ್…….ರಪಾಲ್. ಸೊಸೆಯ ಕೈಯಿಂದ ಬಿದ್ದ ಗುದ್ದೇಟುಗಳು ಅತ್ತೆಯ ಬೆನ್ನ ಮೇಲೆ ಅಚ್ಚು ಮೂಡಿಸಿದ್ದವು. ಆ ಘಾಟಿ ಮುದುಕಿ ಸುಮ್ಮನಿರುತ್ತಾಳೆಯೇ? ಎದ್ದವಳೇ ಸುಬ್ಬಿಯ ಜುಟ್ಟ ಹಿಡಿದು ಗರಗರನೆ ತಿರುಗಿಸಿ, ತಿಂಗಳ ಹಿಂದೆ ಸಿಮೆಂಟು ಗಿಲಾಯಿ ಮಾಡಿದ್ದ ಗೋಡೆಗೆ ಜಪ್ಪಿ ಜರಿದ ಪರಿಣಾಮವಾಗಿ ಹಣೆಯ ಇಕ್ಕೆಲಗಳಲ್ಲಿಯೂ ಕೋಳಿ ಮೊಟ್ಟೆಯ ಗಾತ್ರದಲ್ಲಿ ಊದಿಕೊಂಡು ಬಿರಿದು ರಕ್ತ ಸೋರತೊಡಗಿತ್ತು. ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಉಂಡ ನೆಲದ ಮೇಲೆ ಬಿದ್ದು ಕೂಗುತ್ತಾ ಹೊರಳಾಡಿ ರಂಪ ಮಾಡುತ್ತಿದ್ದವಳ ಮೇಲೆ ಬಿಸಿ ಕೊಚ್ಚಕ್ಕಿ ಅನ್ನ ಮತ್ತು ಭಟ್ಕಳ ಪೇಟೆಯ ಮೀನುಸಾರನ್ನು ಚೆಲ್ಲಿ, ಕಿಬ್ಬೊಟ್ಟೆಗೆ ಧಬಧಬನೆ ಒದ್ದಿದ್ದಳು. ಸುತ್ತ ನಾಲ್ಕು ಜನ ಸೇರುವುದರೊಳಗೆ ಸುಬ್ಬಿಯ ಹಣೆಯಿಂದ ಸ್ರವಿಸಿದ ರಕ್ತ ನೆಲದ ಉದ್ದಗಲಕ್ಕೂ ಚೆಲ್ಲಿ, ಆಕೆಯ ರೋಷವನ್ನೂ, ಅದನ್ನು ಹೊರಹಾಕುವ ಏಕವಾಹಿನಿಯಾದ ಅಳುವನ್ನೂ ಹೆಚ್ಚಿಸಿ ಅಡಿಗೆಮನೆಯ ವಾತಾವರಣವನ್ನು ರಾಮಾರೂಢಿಮಾಡಿತ್ತು. ವಿಷಯ ತಿಳಿದು ತೆಂಗಿನಕಾಯಿ ಕೊಯ್ಯುತ್ತಿದ್ದವ ಓಡಿಬಂದ ಸುಕ್ರ, ಹೆಂಡತಿಯ ಪಕ್ಷ ವಹಿಸಬೇಕೋ, ತಾಯಿಯೆಡೆಗಿರಬೇಕೋ ತಿಳಿಯದೇ ಗೊಂದಲದಲ್ಲಿ ನಿಂತುಬಿಟ್ಟ. ಹೆಂಡತಿಯ ತಲೆಸವರಿ ಸಮಾಧಾನ ಹೇಳುವ ಬುದ್ಧಿಯೂ ಇಲ್ಲದವನನ್ನು ನೋಡಿದ ಸುಬ್ಬಿಯ ರೋಷ-ದುಃಖ ಇನ್ನಷ್ಟು ಹೆಚ್ಚಿ ಅದು ಸುಕ್ರನೆಡೆಗೂ ತಿರುಗಿತ್ತು.
“ನಿಮ್ ಮಖಕ್ಕೆ ಮಸಿ ಬಡ್ಯ. ಆ ಹಲ್ಕಟ್ ಮಿಂಡ್ರಿಗುಟ್ಟಿದ್ದು ಇಷ್ಟೆಲ್ಲಾ ಮಾಡೂದ್ ನೋಡ್ಕಂಡೂ ಸುಮ್ಕೆ ನಿಂತಿರೂದ್ ಕಾಣಿ. ಮಾಲ-ಮರ್ವಾದಿ ಒಂದೂ ಇಲ್ಲೆ ನಿಮ್ಗೆ. ಈ ಹೇಲ್ ತುಂಬ್ಕಂಡ್ ಮನಿಗೆ ಸೊಸಿಯಾಗು ಅಂತ಼್ಹೇಳಿ ಮಡ್ಲಗೆ ಅಕ್ಕಿ ತುಂಬಿ ಕಳ್ಸ್ರಲ, ಅವ್ರಿಗ್ ಹೇಳ್ಬೇಕು” ರಕ್ತ ಸೋರುತ್ತಿದ್ದ ಹಣೆಯನ್ನು ಬಲಗೈ ಅಂಗೈಯಿಂದ ಬಡಿದುಕೊಂಡಳು. ಅಷ್ಟರಲ್ಲಾಗಲೇ ಮಾತಿನ ಚಾಟಿ ಏಟನ್ನು ತಿಂದಿದ್ದ ಸುಕ್ರ ಎದ್ದುಬಂದು ಕೈಹಿಡಿದೆಬ್ಬಿಸಿ, ಬಲವಂತದಿಂದ ಎಳೆತಂದು ಕೆಳಜಗುಲಿಯ ಮೇಲೆ ಕೂರಿಸಿದವ ಒಳಹೋಗಿ ಚೊಂಬು ತುಂಬಿ ನೀರು ತಂದು ಆಕೆಯ ಹಣೆಗೊಂದಿಷ್ಟು ತಟ್ಟಿ, ಕುಡಿಯಲು ಕೊಟ್ಟ. ಇತ್ತ ಜಗಳ ಶುರುವಾದಾಗ ಹೊರಹೋಗಿದ್ದ ಸುಕ್ರನ ಅಪ್ಪನೆನಿಸಿಕೊಂಡವ ಮನೆಯೆದುರು ನೆರೆದಿದ್ದ ಜನರ ಹಿಂಡಿನ ಹಿಂದಿನಿಂದ ಕತ್ತೆಬ್ಬಿಸಿ ಇಣುಕಿ ನೋಡಿ ಮುಸುಮುಸನೆ ನಗುತ್ತಿದ್ದ.
ಮುಂದುವರಿಯುವುದು