ವರ್ಷಿಯ ಆವಿಷ್ಕಾರ ಆಗಸವ ಸೇರಿ ಮೂರು ದಿನಗಳು ಮುಗಿಯುತ್ತ ಬಂದಿತ್ತು. ಹಗಲು ಬೆಳಕೇ; ರಾತ್ರಿ ಕತ್ತಲೆಯೇ. ಯಾವುದೇ ವ್ಯತ್ಯಾಸಗಳು ಕಂಡುಬರಲಿಲ್ಲ.
ಎರಡು ದಿನ ಸಹನೆಯಿಂದ ಕಾಯ್ದ ವರ್ಷಿ. ಸಣ್ಣ ಅನುಮಾನದ ಛಾಯೆ ಮೂರನೆಯ ದಿನದ ಮುಸ್ಸಂಜೆಗೂ ಮುನ್ನ ಪ್ರಾರಂಭವಾಗಿತ್ತು. ಆತ್ಮ ಸ್ವಲ್ಪವೂ ನೆನಪಿರದೆ ಆ ಘಟನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದ. ಸಂವೇದನಾ ಆತನ ಪ್ರಯೋಗಾಲಯದಲ್ಲಿ ತನ್ನದೇ ಮನೆಯೆಂಬ ಭಾವದಿಂದ ವರ್ತಿಸುತ್ತಿದ್ದಳು.
ಹೆಣ್ಣು ಮನಸು;
ಹೆತ್ತ ಮನೆ.
ಆಗೀಗ ಒಮ್ಮೊಮ್ಮೆ ಅಪರೂಪವೆಂಬಂತೆ ಹೊರಗಡೆ ಓಡಾಡುತ್ತ ಅವಳ ಭಾವಕ್ಕೆ ತಕ್ಕಂತೆ ಬದುಕುತ್ತಿದ್ದಳು. ಭೂಮಿ ಎಂದಿನಂತೆಯೇ ಇತ್ತು ಬದಲಾವಣೆಯ ನೆರಳೇ ಇಲ್ಲದಂತೆ; ಬೀಸುವ ಗಾಳಿಯೂ, ಹರಿಯುವ ನೀರೂ ಯಾರದೋ ಕೈವಶವಾದಂತೆ. ಒಂದು ರೀತಿಯಲ್ಲಿ ಯೋಚಿಸಿದರೆ ಇದು ಚೆನ್ನಾಗಿಯೇ ಇದೆ ಎಂದುಕೊಳ್ಳುತ್ತಿದ್ದ ಆತ್ಮ. ಮನುಷ್ಯ ಭಾವನೆಗಳಿಗೆ ಅತೀತನಾಗಿ ಸಂಬಂಧಗಳೆಂಬ ಬಂಧನಗಳಿಂದ ಸ್ವತಂತ್ರನಾಗಿ ಬದುಕುವ ದಿನದಿಂದಲೇ ಪ್ರೀತಿ ಸ್ವಾರ್ಥಗಳು ಉಸಿರುಕಟ್ಟಿದ್ದವು. ಬಂಧನಗಳಿಲ್ಲದ ಬದುಕಿನಲ್ಲಿ ಸ್ವಾರ್ಥವಿರದ ಪ್ರೀತಿಯಲ್ಲಿ ಜಗಳ ಯುದ್ಧಗಳು ಅವಶ್ಯಕವೆನಿಸಿಲ್ಲ. ಮನುಷ್ಯನಿಗೆ ಮೊದಲು ಇಂಥವುಗಳಿರಲಿಲ್ಲ. ಯುದ್ಧ ಜಗಳಗಳು ನಿತ್ಯಕರ್ಮದ ರೀತಿ.
ಮನುಷ್ಯ ಬಳಸಿಬಿಟ್ತ ವಸ್ತುಗಳು ಪೂರ್ತಿ ಭೂಮಿಯನ್ನೇ ಕಸದ ತೊಟ್ಟಿಯೆಂಬಂತೆ ಚಿತ್ರಿಸಿಬಿಟ್ಟಿತ್ತು. ಎಲ್ಲಿ ನೋಡಿದರಲ್ಲಿ ಕೊಳಚೆ, ಕಣ್ಣಿಗೆ ಕಾಣುವಲ್ಲಿ ಹೊಲಸು ಇವೇ ಹೆಚ್ಚಾಗಿತ್ತು. ಅಂಥ ಹೊಲಸುಗಳಲ್ಲಿಯೂ ಏನೂ ಆಗದೇ ಬದುಕುವವರು ಇದ್ದರು. Slum ಗಳಲ್ಲಿ ಬಾಳುವವರ ಬದುಕು ಅಸಹ್ಯ ಎಂದು ದುಡ್ಡಿನ ಐಶಾರಾಮಿಯಲ್ಲಿ ತೇಲುವ ಜನರು ಯೋಚಿಸುತ್ತಿದ್ದರೆ ತಮ್ಮ ಪರಿಸ್ಥಿತಿಯ ಬಗ್ಗೆ ಯೋಚನೆಗಳನ್ನೇ ಮಾಡದೆ ಬಹಳ ಖುಷಿಯಿಂದ ಬದುಕುತ್ತಿದ್ದರು ಅವರು.
ಮನುಷ್ಯನ ಜೀವನದಲ್ಲಿ ವಿಶ್ವಾತ್ಮ ಎರಡು ರೀತಿಯ ಖುಷಿಯನ್ನು ನೀಡುತ್ತಿದ್ದ ಅಥವಾ ಮನುಷ್ಯ ಹಾಗೆ ಭಾವಿಸಿದ್ದ. ಕೆಲವರು ತಮ್ಮನ್ನು ಸ್ಪರ್ಧಾತ್ಮಕವಾಗಿ ಭಾವಿಸಿಕೊಳ್ಳುತ್ತಿದ್ದರು. ಎಂದಿಗೂ ತಮಗಿಂತ ಮುಂದಿರುವವರನ್ನು ಸೋಲಿಸುವುದರಲ್ಲಿ ಖುಷಿ ಹುಡುಕುತ್ತಿದ್ದರು. ಜೀವನದ ಗೆಲುವು ಎಂದರೆ ಎದುರಾಳಿಯ ಸೋಲು ಎಂದು ತಿಳಿದವರು. ಅದು ನಿಜವೇ. ಆದರೂ ಕೆಲವು ಬಾರಿ ನಮ್ಮ ಗೆಲುವಿಗಿಂತ ಎದುರಾಳಿಯ ಸೋಲಿಗೆ ಹೆಚ್ಚಿನ ಸಾಮರ್ಥ್ಯ.
ಉಳಿದಷ್ಟು ತಲೆಗಳು ತಮಗಿಂತ ಕೆಳಸ್ಥರದಲ್ಲಿ ಬದುಕುವವರನ್ನು ನೋಡಿ ಸಮಾಧಾನಗೊಳ್ಳುವರು. ಅವರಿಗಿಂತ ನಾವಿರುವ ಸ್ಥಿತಿಯೇ ಸರಿ. ನನಗಿಂತ ಕೆಳಗಿನ ಮೆಟ್ಟಿಲುಗಳು ಖಾಲಿಯಿಲ್ಲದ ಮೇಲೆ ನಾನಿಂತಿರುವ್ಮೆಟ್ತಿಲೇ ಎತ್ತರದ್ದು ಎಂಬ ಭಾವ. ಇದೂ ಸತ್ಯಕ್ಕೆ ಹೊರತಾಗಿಲ್ಲ.
ದುಡ್ಡು ಕೊಟ್ಟರೆ ಭೂಮಿಯಲ್ಲಿ ಏನು ಬೇಕಾದರೂ ಗಳಿಸಬಹುದಿತ್ತು, ಉಳಿಸಿಕೊಳ್ಳಬಹುದಾಗಿತ್ತು. ಉಸಿರಿನಿಂದ ಹೆಸರಿನವರೆಗೆ ಎಲ್ಲವನ್ನು, ಎಲ್ಲರನ್ನು. ಇದನ್ನೂ ಮೀರಿದ ಅಸ್ತಿತ್ವವಿಲ್ಲದ ವಸ್ತು ವಿಶ್ವಾತ್ಮನ ಸ್ವಂತದ್ದದು “ಹಿಗ್ಗು”.
ಆನಂದವನ್ನು ಎಲ್ಲಿಂದಲೂ ಹೊತ್ತು ತರಲು ಸಾಧ್ಯವಿಲ್ಲ. ಮನಸ್ಸಿನಾಳದಲ್ಲಿ ಜಿನುಗಬೇಕು ಸಂತೋಷ, ಕಂಗಳ ಹೊಳಪಲ್ಲಿ ಮಿನುಗಬೇಕು ಆನಂದ.
ಮನಸ್ಸು ಮಾಡಿದರೆ ದುಡ್ಡಿಲ್ಲದವನೂ ಖುಷಿಯಾಗಿರಬಹುದು. ಇದನ್ನು ಬಹುತೇಕರು ಬಹುಶಃ ಒಬ್ಬನೂ ಅರಿಯಲೇ ಇಲ್ಲ. ಇದೇ ಕಾರಣಕ್ಕೆ ದುಡ್ಡು ಎಂಬ ವಸ್ತು ಪ್ರಬಲವಾಗುತ್ತ ಹೋಯಿತು. ಏನೇ ಮಾಡಿದರೂ ದುಡ್ಡಿನ ದೃಷ್ಟಿಯಿಂದ ಮಾಡುವಂತಾಯಿತು. ನೋಡಿದ ಕಡೆಗಳಲ್ಲೆಲ್ಲ ದುಡ್ಡು ಮಾತ್ರವೇ ಅಚ್ಚಾಗಿ ಕಂಡುಬಂತು. ದುಡ್ಡಿಲ್ಲದವನ ಬದುಕು ದರಿದ್ರವಾಯಿತು. ಬದುಕಿನ ಮಾನದಂಡ, ಮೂಲಮಾಪನ ದುಡ್ಡು. ಬದುಕನ್ನೇ ಅಳೆದು ತೂಗಿ ನಿಯಂತ್ರಿಸಿತು ದುಡ್ಡು.
ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಈಗ ಸೃಷ್ಟಿಯಾಗುವವರಿಗೆ ದುಡ್ಡು ಎಂಬುದರ ಅರ್ಥವೇ ತಿಳಿದಿಲ್ಲ. ಯಾವುದೋ ಶಬ್ಧಕೋಶದ ಸಾವಿರ ಶಬ್ಧಗಳಲ್ಲಿ ಕಳೆದುಹೋದಷ್ಟು ದೂರ. ದುಡ್ಡು ತನ್ನ ಇರುವನ್ನೇ ಮರೆಸಿಬಿಟ್ಟಿದೆ ಮನುಷ್ಯನಿಗೆ. ಅವಶ್ಯಕತೆಗಳು ಅನಿವಾರ್ಯವೆನಿಸಿದಾಗ ದುಡ್ಡು ಅಗತ್ಯವಾಗಿತ್ತು.
ಯಾರಿಗೂ ಅವಶ್ಯಕತೆಯಿಲ್ಲ;
ಅನಿವಾರ್ಯತೆಯ ಅಗತ್ಯವಿಲ್ಲ.
ದುಡ್ಡಿನ ಕೊಟ್ಟು ತೆಗೆದುಕೊಳ್ಳುವಿಕೆಯು ನಿಂತುಹೋಗಿದೆ.
ಮನುಷ್ಯನು ಭಾವನೆಗಳಿಗೆ ಅತೀತನಾಗಿ ಸುಂದರ ಸಂಬಂಧಗಳ ಪ್ರಪಂಚವನ್ನೇ ಬದಲಾಯಿಸಿದ. ಆರೋಗ್ಯವಂತ ಸಮಾಜದ ದೃಷ್ಟಿಕೋನ ರೋಗಪೀಡಿತವಾಯಿತು. ಈ ನಿಸ್ತೇಜತೆ ಎಂದು ಬದಲಾಗುತ್ತದೆ? ಆತ್ಮ ತನಗೆ ತಿಳಿಯದಂತೆ ಎಲ್ಲವುಗಳ ಆದಿ ಹುಡುಕಿ ಹೊರಟಿದ್ದ. ಅದೇ ಕ್ಷಣ ಭೂಮಿಯ ಅಂತ್ಯ ಆರಂಭವಾಗಿತ್ತು.
ಅವನ ಯೋಚನೆಗಳಿಗೆ ಉತ್ತರವೆಂಬಂತೆ ಭೂಮಿಯಿಂದ ಹಲವು ಜ್ಯೋತಿರ್ವರ್ಷಗಳ ದೂರದಲ್ಲಿ ವರ್ಷಿಯ ಎರಡನೇ ಸೂರ್ಯ ಮೊದಲ ಬಾರಿಗೆ ಒಂದಕ್ಕೆ ಎರಡಾಗಿ ಒಡೆದುಕೊಂಡು ತನ್ನ ವಿರುದ್ಧ ದಿಕ್ಕಿನಲ್ಲಿರುವ ಸೂರ್ಯನಿಂದ ಬೆಳಕನ್ನು ಪಡೆದು ಒಮ್ಮೆಲೇ ಹೊಳೆಯಿತು. ಅದು ಇನ್ನೂ ಕಣ್ಣಿಗೆ ಕಾಣದಷ್ಟು ಅತಿ ಚಿಕ್ಕ ಕಣ. ವರ್ಷಿಯ ಲೆಕ್ಕಾಚಾರಗಳು ತಲೆಕೆಳಗಾಗಲು ಸಾಧ್ಯವೇ ಇಲ್ಲ; ಸೂತ್ರಗಳು ತಾಳೆಯಾಗದಿರಲು ಅಶಕ್ಯ.
ವರ್ಷಿಯ ಪ್ರಕಾರ ಎರಡನೇ ಸೂರ್ಯ ಇರುವ ಜಾಗದಲ್ಲಿ ಸೂರ್ಯನ ಕೇಂದ್ರದ ಗುರುತ್ವ ಪ್ರದೇಶವಿರುತ್ತದೆ. ಸೂರ್ಯನ ಗುರುತ್ವಕ್ಕೆ ಸಮನಾಗಿ ಭೂಮಿಯನ್ನು ಸೇರಿ ಉಳಿದ ಎಂಟು ಗ್ರಹಗಳು ಹೇಗೆ ಸೂರ್ಯನನ್ನು ಸುತ್ತುತ್ತವೆಯೋ ಅಂತೆಯೇ ಅದೇ ಗುರುತ್ವವನ್ನು ಬಳಸಿ ಎರಡನೇ ಸೂರ್ಯ, ಸೂರ್ಯನ ಜೊತೆಯೇ ನಿಲ್ಲುತ್ತಾನೆ. ಸೂರ್ಯನ ಫಲಿತದ ಬೆಳಕನ್ನು ಪ್ರತಿಫಲಿಸುತ್ತಾನೆ. ಒಂದು ಕಡೆ ಸತ್ಯ ಸೂರ್ಯ ಬೆಳಕಾಗುತ್ತಿದ್ದರೆ, ಇನ್ನೊಂದೆಡೆ ಪ್ರತಿಫಲನದ ಸೂರ್ಯ ಬೆಳಗುತ್ತಿರುತ್ತಾನೆ.
ಅಲ್ಲಿಗೆ… ಬರಿ ಭೂಮಿ ಮಾತ್ರವಲ್ಲ, ಎಲ್ಲ ಗ್ರಹಗಳ ಆಸುಪಾಸಿನ ಎಲ್ಲ ಕಡೆಗಳಲ್ಲೂ ಬೆಳಕು ಸದಾಕಾಲ ಇರುವಂತಾಯಿತು. ವರ್ಷಿಯ ಎರಡನೇ ಸೂರ್ಯ ನೂರು, ಸಾವಿರ ಕೋಟಿಗಳಾಗಿ ಒಡೆದುಕೊಂಡು ಬೆಳೆಯುತ್ತಲೇ ಹೋಯಿತು. ಒಂದು ಪೂರ್ತಿಯಾದ ನಕ್ಷತ್ರವಾಗುವವರೆಗೂ ಅದು ಒಡೆದುಕೊಳ್ಳುತ್ತಲೇ ಇತ್ತು. ಅಲ್ಲಿ ಯಾವುದೇ ವಸ್ತುಗಳಿರಲಿಲ್ಲ; ಯಾವ ಅಸ್ತಿತ್ವದ ಕುರುಹು ಇರಲಿಲ್ಲ. ಅಲ್ಲಿರುವುದು ಕೇವಲ ಒಂದು ಎಲಿಮೆಂಟ್ ನ ನೆರಳು. ಆ ನೆರಳು ಸೂರ್ಯನ ಬೆಳಕನ್ನು ಹಿಡಿದು ನಿಲ್ಲಿಸಿ ಪ್ರತಿಬಿಂಬವಾಗಿ ನಿಂತಿತು. ಭೂಮಿಯ ಒಂದು ಕಡೆಯಲ್ಲಿ ಕತ್ತಲೆ ತನ್ನ ಸಾಮ್ರಾಜ್ಯವನ್ನು ಆಳುತ್ತಿತ್ತು.
ಅಧಿಕಾರ ಕ್ಷಣಿಕ;
ಆಸೆ ಕೊನೆತನಕ.
ಮಲಗಿದವರು ಮಲಗಿಯೇ ಇದ್ದರು. ನಿದ್ರೆ ಮರೆತು ಓಡಾಡುವವರಿಗೆ ಕುಳಿತುಕೊಳ್ಳಲು ಸಮಯವಿರಲಿಲ್ಲ. ಪ್ರಾಣಿ-ಪಕ್ಷಿಗಳು ಬೆಚ್ಚನೆಯ ಹಂದರದಲ್ಲಿ. ರಾತ್ರಿಯ ಮೂರು ಘಂಟೆ; ರಾತ್ರಿಯಲ್ಲ ಬೆಳಗಿನ ಜಾವ.
ಆಗಸದಲ್ಲಿ ಹುಣ್ಣಿಮೆಯ ಚಂದ್ರ ಬೆಳದಿಂಗಳ ಹರಡಿದ್ದ. ಕೆಲವೇ ಕ್ಷಣಗಳಲ್ಲಿ ಬೆಳದಿಂಗಳು ಮತ್ತೂ ಪ್ರಕಾಶಮಾನವಾಯಿತು. ಆಕಾಶದ ವಿಷಯದಲ್ಲಿ ಆಸಕ್ತಿಯಿರುವ ಒಂದಿಬ್ಬರು ದೂರದರ್ಶಕದಲ್ಲಿ ಆಗುಹೋಗುಗಳನ್ನು ವೀಕ್ಷಿಸತೊಡಗಿದರು. ಅವರಲ್ಲೊಬ್ಬ ಗ್ರಹಿಸಿದ ಬಲುಬೇಗ. ಮೊದಲ ಬಾರಿ ಆಗಸದಲ್ಲಿ ಹೊಸದೊಂದು ಪುಟ್ಟ ನಕ್ಷತ್ರ ಕಂಡಂತಾಯಿತು. ಕಂಡುಹಿಡಿದ ಹೊಸ ನಕ್ಷತ್ರಕ್ಕೊಂದು ಹೆಸರನ್ನಿಟ್ಟು ಸುದ್ದಿ ಹರಡಬೇಕೆಂದುಕೊಳ್ಳುವಷ್ಟರಲ್ಲಿ ಅದರ ಗಾತ್ರ ದೊಡ್ಡದಾಗತೊಡಗಿತು. ಆ ನಕ್ಷತ್ರ ಭೂಮಿಗೆ ಹತ್ತಿರವಾಗುತ್ತಿದೆಯೆನೋ ಎಂದುಕೊಂಡ. ಕಣ್ಣು ಮುಚ್ಚಿ ಬಿಡುವ ಕ್ಷಣಗಳಲ್ಲಿ ಅದರ ಗಾತ್ರ ಇನ್ನೂ ದೊಡ್ಡದಾಗತೊಡಗಿತು. ಚೆಲ್ಲಿದ ಬೆಳದಿಂಗಳು ಹೊಸ ನಕ್ಷತ್ರದ ಬೆಳಕಿನೆದುರು ಮಬ್ಬೆನಿಸತೊಡಗಿತು. ಚಂದ್ರ ತನ್ನಿರುವನ್ನೇ ಕಳೆದುಕೊಳ್ಳುವಷ್ಟು ಕ್ಷಣಿಕವಾದ. ಇದೊಂದು ಅದ್ಭುತದಂತೆ ಕಂಡಿತು ಅವನಿಗೆ. ಮಲಗಿದ್ದ ಪ್ರಾಣಿ-ಪಕ್ಷಿಗಳೂ ಮೈಮುರಿದು ಏಳತೊಡಗಿದವು.
ಬೆಳಕಾದರೆ ಆಹಾರದ ಹುಡುಕಾಟ;
ಕತ್ತಲಲಿ ಆಸೆಗಳದ್ದು, ಅತಿಯಾಸೆಗಳದ್ದು.
ನಿಶಾಚರಿ ಜೀವಿಗಳು ಸೂರ್ಯನ ಬೆಳಕೆಂದೇ ಭ್ರಮಿಸಿ ಆಹಾರಕ್ಕೆ ಅಲೆಯುವುದನ್ನು ನಿಲ್ಲಿಸಿ ತೂಗತೊಡಗಿದವು ಕತ್ತಲೆಯ ನೆರಳಲ್ಲಿ. ಮನುಷ್ಯರು ಕೂಡ ಪ್ರಕೃತಿಯದ್ದು ವಿಚಿತ್ರ ವರ್ತನೆ ಎಂದು ಸುಖ ನಿದ್ದೆ ತ್ಯಜಿಸಿ ಹೊರಬಂದರು. ಕೇವಲ ಒಂದು ಘಂಟೆಯಲ್ಲಿ ಪೂರ್ತಿಯಾಗಿ ಬೆಳಕಾಯಿತು; ಬೆಳಗಾಯಿತು. ಸೂರ್ಯನಿಗೂ ಎರಡನೇ ಸೂರ್ಯನಿಗೂ ವ್ಯತ್ಯಾಸವೇ ಇಲ್ಲ.
ಎಲ್ಲರಲ್ಲೂ ಭಯಮಿಶ್ರಿತ ಕುತೂಹಲ. ಸಾವಿನ ಭಯದಿಂದಲೇ ದೂರ ನಿಂತಿದ್ದ ಎಲ್ಲರಿಗೂ ಸಾವಿನ ನೆರಳಲ್ಲೇ ನಿಂತ ಭಾವ. ಯಾವುದೋ ನಕ್ಷತ್ರ ಭೂಮಿಗೆ ಹತ್ತಿರವಾಗುತ್ತಿದೆ, ಬಹಳವೇ ಸಮೀಪ. ಅದು ಒಂದು ಬಾರಿ ಭೂಮಿಯನ್ನು ಸ್ಪರ್ಶಿಸಿದರೆ ಸಾಕು ಎಲ್ಲರಿಗೂ ಸಾವು ಖಚಿತ. ಎಲ್ಲದಕ್ಕೂ ಕೊನೆ ಎಂದುಕೊಂಡರು.
ಬೆಳಗಿನ ಜಾವ ನಾಲ್ಕು ಘಂಟೆ;
ಮಧ್ಯಾನ್ನ ಎರಡರ ರಣಬಿಸಿಲು ಭೂಮಿಯ ಮೇಲೆ.
ಎಲ್ಲರೂ ಮುಂದೇನಾಗುವುದೋ ಎಂದು ಕಾಯತೊಡಗಿದರು.
ಖಗೋಳಶಾಸ್ತ್ರಜ್ಞರು ತಮ್ಮ ತಮ್ಮಲ್ಲೇ ವಾದ ವಿವಾದ ನಡೆಸತೊಡಗಿದರು. ಅಕ್ಕಪಕ್ಕದಲ್ಲೇ ವಾಸಿಸುವವರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಮೂಲಭೂತವಾಗಿ ಸಸ್ಯಗಳು ಆಹಾರ ತಯಾರಿಸುವ ಕ್ರಿಯೆಗೆ ರಾತ್ರಿ ಮಾಡುತ್ತಿದ ಕ್ರಿಯೆ ನಿಲ್ಲಿಸಿದವು. ಭೂಮಿಯ ಮೇಲೆ ತಲ್ಲಣದ ವಾತಾವರಣ. ಪ್ರತಿ ನಿಮಿಶವೂ ಯುಗಗಳಂತೆ ಭಾಸವಾದವು.
ಸಂತಸದ ಕ್ಷಣಗಳು ಎಣಿಸುವ ಮುನ್ನವೇ ಮುಗಿಯುತ್ತವೆ;
ಸಂದಿಗ್ಧತೆಯ ಕಾಲ ಕಳೆಯುವುದೇ ಇಲ್ಲ.
ಇದು ಇಲ್ಲಿಗೇ ನಿಲ್ಲುವ ಸೂಚನೆಯಿಲ್ಲ. ಮುಂದೆ ಏನೋ ಅನಾಹುತವಾಗಿಬಿಡಬಹುದೆಂದು ಎಲ್ಲರೂ ಭಯಭೀತರಾಗಿ ನಿರೀಕ್ಷಿಸುತ್ತಿದ್ದರು. ಆದರೆ ಅಂಥಹವೆನೂ ನಡೆಯಲಿಲ್ಲ. ಮಾನವ ನಿರ್ಮಿತ ಸೆಟಲೈಟ್ ಗಳು ಎರಡನೇ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದವು. ಕ್ಲಿಕ್ಕಿಸಿದ ಫೋಟೋಗಳು, ಸಂಗ್ರಹಿಸಿದ ಮಾಹಿತಿಗಳು ಅಂತರ್ಜಾಲದಲ್ಲಿ ಹರಿದಾಡತೊಡಗಿದವು. ಭೂಮಿಯ ಮೇಲೆ ಇನ್ನು ಕತ್ತಲೆಯೇ ಇಲ್ಲ. ಪೂರ್ತಿ ಬೆಳಕು, ಬೆಳಕು ಮಾತ್ರ. ಎಷ್ಟು ದಿನ ಹೀಗೆ? ಏನಾಗಬಹುದು ಇದರಿಂದ? ಕುತೂಹಲಗಳು ಆಗಸದೆತ್ತರಕ್ಕೆ ಬೆಳೆಯುತ್ತಲೇ ಹೋದವು.
ವರ್ಷಿಯ Virtual Computer ಎಲ್ಲವನ್ನು ತೋರಿಸುತ್ತಿತ್ತು. ತನ್ನ ಆವಿಷ್ಕಾರ ಇಷ್ಟು ಫಲಕಾರಿಯಾಗಿದ್ದನ್ನು ಕುಳಿತಲ್ಲೇ ಕಣ್ತುಂಬಿಕೊಂಡ. ಭೂಮಿಯ ಎರಡೂ ಕಡೆ ಬೆಳಕು.
ಕತ್ತಲೆಂಬುದು ಸತ್ತು ಹೋಗಿತ್ತು;
ಬೆಳಕಿನದು ರೌದ್ರನರ್ತನ.
ಪೂರ್ತಿ ಭೂಮಿಯ ಮೇಲೆ ಎಲ್ಲ ಕಡೆ ಒಂದೇ ರೀತಿಯ ಉಷ್ಣತೆ, ಸಮನಾದ ಬೆಳಕು. ವಿಶ್ವಾತ್ಮ ಕೂಡ ಒಮ್ಮೆ ಇದಾವುದೂ ಬೇಡವಾಗಿತ್ತು ಎಂಬ ಭಾವ ತಳೆದ. ಬೆಳಕಿನ ಪ್ರಖರತೆ ತಾಳಲಾರದೆ ನಿಶಾಚರಿ ಪಕ್ಷಿಯೊಂದು ವಿಕೃತವಾಗಿ ಕೂಗುತ್ತ ನೆಲವ ಸೇರಿತು ಇನ್ನು ಭೂಮಿಯ ಮೇಲೆ ಬದುಕಲಾರೆ ಎಂಬ ಭಾವದಿಂದ.
ಮರಗಿಡಗಳು ತಾವು ಕೂಡ ಈ ವಿಪರೀತ ಬದಲಾವಣೆಯನ್ನು ಸಹಿಸಲಾರೆವು ಎಂದು ಜೋರಾಗಿಯೇ ಕೂಗತೊಡಗಿದವು. ಯಾರಿಗೂ ಕೇಳದ ಮೂಕರೋದನವಾಯಿತು.
ಅಸ್ತವ್ಯಸ್ತತೆಯ ಮೊದಲ ಅಧ್ಯಾಯ.
ಮತ್ತೆ ಸಂಜೆಯ ಆರು ಘಂಟೆ. ಭೂಮಿಯ ಮೇಲಿನ ಬೆಳಕು ಒಂದೇ ತೆರನಾಗಿತ್ತು. ಆತ್ಮನ ಮನದಲ್ಲಿ ಸಂಶಯ ಹೆಚ್ಚಾಗಿ ಹೊರಗಡೆ ಬಂದು ನೋಡಿದ. ವರ್ಷಿಯ ಕ್ರೂರ ನಗು ಅವನ ಕಿವಿಗೆ ಬಡಿದಂತಾಯಿತು. ಹಿಂದೆಯೆ ಸನಾಳ ನಗು.
“ಇವೆಲ್ಲ ಬೇಕು ನಿಮಗೆ” ಎನ್ನುವಂತೆ ವಿಷಾದಗೊಂಡ ಆತ್ಮ.
ಸಂವೇದನಾ ಮೂಕಳಾದಳು. ಭೂಮಿಯ ಮೇಲಿನ ಯಾವ ಜೀವಿಗೂ ಈ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಇದು ಭೂಮಿಯ ಅಂತ್ಯದ ಪ್ರಾರಂಭ ಎಂದುಕೊಂಡಳು. ಮನುಷ್ಯ ಕುತೂಹಲದ ಕಣಿವೆಯಲ್ಲಿ ಅತ್ತಿಂದಿತ್ತ ಓಡಾಡತೊಡಗಿದ, ಒದ್ದಾಡತೊಡಗಿದ.
ಹೊಸ ಸೂರ್ಯನ ಬಗ್ಗೆ ವಿಷಯಗಳ, ಮಾಹಿತಿಗಳ ಸಂಗ್ರಹ ನಡೆಯುತ್ತಲೇ ಇತ್ತು ಓತಪ್ರೋತವಾಗಿ.
ಇವೆಲ್ಲವನ್ನೂ ನೋಡುತ್ತಿದ್ದ ವರ್ಷಿ ಮಾತ್ರ ಏನೂ ಆಗಿಲ್ಲವೆಂಬಂತೆ ನಿರ್ಲಿಪ್ತವಾಗಿದ್ದ. ಕ್ರೂರ ಖುಷಿ ಮನಸ್ಸಿನಲ್ಲಿ.
ರಾತ್ರಿಯಿಲ್ಲದ ಹಗಲು ಪ್ರಾರಂಭವಾಯಿತು ಭೂಮಿಯ ಮೇಲೆ… ನಿಶಾಚರಿಗಳ ಸಾವಿನ ಮೊದಲ್ಗೊಳ್ಳುವಿಕೆಯಿಂದ.. ಸಸ್ಯಗಳ ಕ್ರಿಯಾಹೀನ ನಿರ್ವೀರ್ಯತೆಯಿಂದ.