ಯಶಸ್ ಒಬ್ಬ ಬರಹಗಾರ. ಮನಸಿಗನಿಸಿದ್ದನ್ನೆಲ್ಲ ಶಾಯಿಯ ಮಳೆಯಾಗಿ ಹಾಳೆಯೆಂಬ ಇಳೆಗೆ ಹನಿಸುವುದು ಅವನ ಹವ್ಯಾಸ. ಹಾಗೆಯೇ ಅಂದು ಕೂಡ ಬರೆಯುತ್ತಿದ್ದ. ಅದೊಂದು ಪ್ರೇಮಕಥೆ. ಕಥೆಗೊಂದು ಚೌಕಟ್ಟನ್ನು ಹಾಕಿಕೊಂಡ ನಂತರ ಅಲ್ಲಿನ ಒಂದು ಸನ್ನಿವೇಶವನ್ನು ಚಿತ್ರಿಸುವ ಅವಸರದಲ್ಲಿದ್ದ. ಆಧುನಿಕ ಯುಗದ ಪ್ರೇಮಕಥೆ ಅಂದಮೇಲೆ ಅಲ್ಲಿ ಮೊಬೈಲ್ ಸಂದೇಶಗಳಿರದೆ ಇರಲು ಸಾಧ್ಯವೇ? ಖಂಡಿತ ಇಲ್ಲ. ಕಥಾನಾಯಕನಿಗೆ ಕಥಾನಾಯಕಿಯ ಸಂದೇಶ ಬರುವ ಸಮಯವನ್ನು ವರ್ಣಿಸಿ ಬರೆಯುತ್ತಿದ್ದ ನಮ್ಮ ಯಶಸ್. ಅದೇ ಸಮಯಕ್ಕೆ ಅವನ ಮೊಬೈಲ್ ಗೆ ಸಹ ಒಂದು ಸಂದೇಶದ ಆಗಮನವಾಗುತ್ತದೆ. ಅದು ಅವನ ಅತಿ ಪ್ರಿಯ ಗೆಳತಿ ಆದ್ಯತಾಳದ್ದು. ಮೊಬೈಲನ್ನು ಅಲಂಕರಿಸಿದ ಅವಳ ಹೆಸರನ್ನು ಕಾಣುತ್ತಲೇ ನಗುವೊಂದು ಯಶಸ್ ನ ಮೊಗವನ್ನು ಅಲಂಕರಿಸಿತು. ಅರಿಯದೇ ಅರಳುವ ನಗು ಎಂದಿಗೂ ಸಂಬಂಧಗಳ ಆತ್ಮೀಯತೆಯ ಪರಿಚಯ ಮಾಡುತ್ತದೆ. ಯಶಸ್ ಸಂದೇಶವನ್ನು ತೆರೆದು ಓದತೊಡಗಿದ. ಅವನಿಗೆ ಆಶ್ಚರ್ಯವೊಂದು ಕಾದಿತ್ತು. ಆತ ಕನಸಿನಲ್ಲಿ ಕೂಡ ಎಣಿಸಿರದ ಭಾವಗಳು ಅಕ್ಷರಗಳ ರೂಪದಲ್ಲಿ ಆ ಸಂದೇಶದಲ್ಲಿ ಅರಳಿದ್ದವು. ಮನಸು ಗೊಂದಲದ ಗೂಡಾಗತೊಡಗಿತು.
ಸಂದೇಶದ ಸಾಲುಗಳು ಹೀಗಿತ್ತು : “ಹಾಯ್ ಯಶಸ್, ನನ್ನ ನಿನ್ನ ಸ್ನೇಹ ಎಂತಹದ್ದು ಅಂತ ನಮ್ಮಿಬ್ಬರಿಗೂ ಗೊತ್ತು. ನಮ್ಮಷ್ಟು ಒಳ್ಳೆ ಸ್ನೇಹಿತರು ಬಹುಷಃ ಈ ಜಗತ್ತಲ್ಲಿ ಯಾರೂ ಇರಲಿಕ್ಕಿಲ್ಲ ಎಂಬ ದೊಡ್ಡ ದೊಡ್ಡ ಸಾಲುಗಳನ್ನು ನಾನು ಹೇಳುವುದಿಲ್ಲ. ಮಾತಿನಲ್ಲಿ ವಿವರಿಸುವಂಥದ್ದಲ್ಲ ನಮ್ಮ ಸ್ನೇಹ. ಈ ಸ್ನೇಹದ ಪಯಣದಲ್ಲಿ ನನ್ನ ಜೊತೆ ನನ್ನ ವೇಗಕ್ಕೆ ಸರಿಯಾಗಿ ನಡೆದಿದ್ದಿಯಾ, ಎಲ್ಲೂ ನಮ್ಮಿಬ್ಬರ ಹೆಜ್ಜೆಗಳು ಮಿಸ್ ಆಗದ ಹಾಗೆ ನೋಡ್ಕೊಂಡಿದಿಯ. ಇವೆಲ್ಲದಕ್ಕೂ ನಾನು ಧನ್ಯವಾದ ಅಂತೂ ಖಂಡಿತ ಹೇಳಲ್ಲ ಯಾಕಂದ್ರೆ ‘the so called formalities’ ಗಳನ್ನ ಮೀರಿದ್ದು ನಮ್ಮಿಬ್ಬರ ಸ್ನೇಹ ಹಾಗೂ ಸಲಿಗೆ. ಹಾಗಾಗಿ ನನ್ನ ಮನಸಿನ ಒಂದು ಇಚ್ಛೆಯನ್ನ ನಿನ್ನೊಂದಿಗಿನ ಸಲಿಗೆಯಿಂದ ನೇರವಾಗಿ ಹೇಳ್ತೀನಿ. ಈ ಮಾತಿನ ನಂತರ ನನ್ನ ಬಗ್ಗೆ ನಿನ್ನ ಅಭಿಪ್ರಾಯ ಯಾವ ರೀತಿ ಬದಲಾಗುತ್ತದೋ ನಂಗೂ ಗೊತ್ತಿಲ್ಲ. ಆದರೆ ನಾನು ಎಲ್ಲ ಸಂದರ್ಭಗಳಿಗೂ ತಯಾರಾಗಿದ್ದೇನೆ. ಯಶಸ್, ನಿನ್ನ ಜೊತೆ ಸ್ನೇಹಿತೆಯಾಗಿ ಒಡನಾಡುತ್ತಾ ನನಗೇ ಅರಿಯದೆ ಮನಸು ನಿನ್ನ ಶಾಶ್ವತ ಸನಿಹವನ್ನು ಬಯಸೋಕೆ ಆರಂಭಿಸಿದೆ. ಏಕೋ ನಿನ್ನ ಬಿಟ್ಟು ಬೇರೆ ಯಾರ ಹೃದಯ ಬಡಿತದ ತಾಳಕ್ಕೂ ನನ್ನ ಕಾಲ್ಗೆಜ್ಜೆಗಳು ನರ್ತಿಸಲಾರವು ಅನಿಸುತ್ತಿದೆ. ನನ್ನ ಕಿರುಬೆರಳನ್ನು ನಿನ್ನ ಕಿರುಬೆರಳುಗಷ್ಟು ಕಾಳಜಿಯಿಂದ ಇನ್ಯಾರ ಬೆರಳುಗಳು ಸಹ ನೋಡಿಕೊಳ್ಳಲಾರವು ಅನಿಸುತ್ತಿದೆ. ಒಟ್ಟಾರೆ ಹೇಳುವುದಾದರೆ ಆದ್ಯತಾ ಎಂಬ ಹೆಸರಿನ ಈ ಹುಡುಗಿ ಯಶಸ್ ಎಂಬ ಹುಡುಗನನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ. ಇವಳೇನು ದೊಡ್ಡ ಕವಿಯಂತೆ ಬರೆದಿದ್ದಾಳೆ ಅನಿಸಬಹುದು ನಿನಗೆ. ಅದು ಕೂಡ ನಿನ್ನದೇ ಪ್ರಭಾವ. ನಿನ್ನ ಕಥೆ-ಕವನಗಳನ್ನು ಓದಿಯೇ ನಾನು ಕೂಡ ಈ ರೀತಿ ಹಾಳಾಗಿರುವುದು. ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ನೀನು ಇನ್ಯಾವ ಹುಡುಗಿಯನ್ನೂ ಇಷ್ಟಪಡುತ್ತಿಲ್ಲ ಎಂಬುದು ಖಾತರಿ ಇದ್ದುದರಿಂದ ನನ್ನ ಈ ಭಿನ್ನಹಕ್ಕೆ ಸ್ವಲ್ಪ ಸುಲಭವೇ ಆಯಿತು ಎನ್ನಬಹುದು. ನನಗೆ ನನ್ನದೇ ಆದ ಇತಿಮಿತಿಗಳಿವೆ. ಅದು ನನಗೆ ಗೊತ್ತು; ನಿನಗೂ ಅದು ತಿಳಿದಿದೆ. ನಾನು ಕೂಡ ನಿನ್ನ ಮೇಲೆ ಖಂಡಿತ ಒತ್ತಡವನ್ನಂತೂ ಹಾಕಲಾರೆ. ಈ ವಿಚಾರವನ್ನು ನಿನಗೆ ಹೇಳದೆ ನನ್ನಲ್ಲೇ ಹುದುಗಿಸಿಕೊಳ್ಳುವ ಪ್ರಯತ್ನವನ್ನು ಸಾಕಷ್ಟು ಮಾಡಿದೆ. ಆದರೆ ಆ ಶಕ್ತಿ ನನಗಿಲ್ಲದೇ ಹೋಗಿದೆ. ಆದ್ದರಿಂದ ಎಲ್ಲವನ್ನು ಇಲ್ಲಿ ಭಿನ್ನವಿಸಿಕೊಂಡಿದ್ದೇನೆ. ಯೋಚಿಸಿ ನಿರ್ಧರಿಸು. ನಿನ್ನ ಯಾವುದೇ ನಿರ್ಧಾರಕ್ಕೆ ನಾನು ಬದ್ಧ. ನಿರ್ಧಾರ ನನ್ನ ಪಾಲಿಗೆ ನಕಾರಾತ್ಮಕವಾಗಿದ್ದರೂ ಆ ಕಾರಣಕ್ಕೆ ನಿನ್ನ ಮೇಲಿನ ಗೌರವ ಖಂಡಿತ ಕಡಿಮೆಯಾಗಲಾರದು.”
ಯಶಸ್ ಗೆ ಆದ್ಯತಾಳ ಈ ಸಂದೇಶ ಎಲ್ಲಿಲ್ಲದ ಆಶ್ಚರ್ಯ ಮೂಡಿಸಿತು. ಆದ್ಯತಾಳಲ್ಲಿ ಇಂತಹ ಒಂದು ಭಾವನೆ ಬರಬಹುದೆಂದು ಆತ ಎಣಿಸಿಯೂ ಇರಲಿಲ್ಲ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಯಶಸ್ ಬರೆಯುತ್ತಿದ್ದ ಕಥೆ ಕೂಡ ಇಂತಹುದೇ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಈ ಮೊದಲು ಕಥಾನಾಯಕನಿಗೆ ಬಂದ ಕಥಾನಾಯಕನ ಸಂದೇಶದಲ್ಲೂ ಸ್ನೇಹ ಪ್ರೀತಿಯತ್ತ ಹೊರಳುವ, ಸ್ನೇಹ -ಪ್ರೀತಿಗಳ ನಡುವಿನ ನೂಲೆಳೆಯಂತಹ ವ್ಯತ್ಯಾಸವನ್ನ ಬಿಂಬಿಸುವುದರಲ್ಲಿತ್ತು. ಆದರೂ ಆ ಚಿತ್ರಣದಲ್ಲಿ ಕೂಡ ಯಾವೊಂದು ಸಂದರ್ಭದಲ್ಲೂ ಯಶಸ್ ಗೆ ತನ್ನ ಹಾಗೂ ಆದ್ಯತಾಳ ನೆನಪಾಗಿರಲಿಲ್ಲ. ಆದರೆ ಕಾಕತಾಳೀಯವೋ ಎಂಬಂತೆ ಅದು ಈಗ ಯಶಸ್ ನ ಜೀವನದಲ್ಲೇ ಸಂಭವಿಸುವುದರಲ್ಲಿತ್ತು. ಅವನ ಕಲ್ಪನೆಗಳು ಅವನದೇ ಜೀವನದಲ್ಲಿ ವಾಸ್ತವವಾಗಿ ಎದುರಾಗಿದ್ದವು. ಈಗ ವಾಸ್ತವಿಕ ಕಥೆಯನ್ನು ಮುಂದುವರಿಸುವ ಜವಾಬ್ದಾರಿ ಯಶಸ್ ಎಂಬ ಕಥೆಗಾರನ ಹೆಗಲೇರಿತು.
ಮನದ ತುಮುಲಗಳ ನಡುವಿನ ಕಾದಾಟ ಯಶಸ್ ನಲ್ಲಿ ಆರಂಭವಾಗಿತ್ತು. ಸ್ನೇಹ-ಪ್ರೀತಿಗಳ ನಡುವಿನ ವ್ಯತ್ಯಾಸದ ಎಳೆಯ ಮೇಲೆ ಅವನ ಬದುಕು ನಿಂತಿತ್ತು. ದಿಕ್ಕು ತೋಚದೆ ಕುಳಿತ. ಆದರೆ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಬೇರೆ ಯಾರಲ್ಲಿಯೂ ಚರ್ಚಿಸುವ ಪರಿಸ್ಥಿತಿಯಲ್ಲೂ ಆತ ಇರಲಿಲ್ಲ. ಯೋಚನೆಗಳ ಹಾವಳಿಗೆ ಸಿಲುಕಿದ. ಅವನಿಗಿರುವ ಆಯ್ಕೆಗಳ ಗೊಂದಲದಲ್ಲಿ ಕಳೆದುಹೋದ. ಕೊನೆಯಲ್ಲಿ ಒಂದು ಪರಿಹಾರವನ್ನು ಕಂಡುಕೊಂಡ. ಅದೇನೆಂದರೆ ಒಬ್ಬ ಕಥೆಗಾರನಾಗಿ ತನ್ನ ಕಥೆಯನ್ನು ಮುಂದುವರಿಸಿ ಆ ಕಥೆಗೆ ತಾನು ಕೊಡಬೇಕೆಂದುಕೊಂಡಿದ್ದ ನ್ಯಾಯಯುತ ಅಂತ್ಯವನ್ನೇ ತಾನು ಕೂಡ ಅನುಸರಿಸುವುದಾಗಿ ನಿರ್ಧರಿಸಿದ.
ಅವನ ಕಾಲ್ಪನಿಕ ಕಥೆಯಲ್ಲಿ ಕಥಾನಾಯಕ ತನ್ನ ಮನದ ತುಮುಲಗಳನ್ನು ಮೀರಿ ಆಲೋಚಿಸುತ್ತಾ ಬಾಳಸಂಗಾತಿ ಅಂದರೆ ಯಾರು ಎಂಬುದರ ವ್ಯಾಖ್ಯಾನದ ಹುಡುಕಾಟಕ್ಕೆ ತೊಡಗುತ್ತಾನೆ. ಆಕೆಯೂ ಒಬ್ಬ ಸ್ನೇಹಿತೆಯಲ್ಲವೇ? ಜೀವನದ ಗೆಳತಿ ಎನ್ನಬಹುದಲ್ಲವೇ ಅವಳನ್ನು? ಎಲ್ಲರೂ ಬಯಸುವುದು ಸಮಾನ ವಯಸ್ಕ ಹಾಗೂ ಸಮಾನ ಮನಸ್ಕ ವ್ಯಕ್ತಿ ತಮ್ಮ ಬಾಳ ಸಂಗಾತಿಯಾಗಲಿ ಎಂದು. ಒಬ್ಬ ಅಪರಿಚಿತನ/ಳನ್ನು ಮದುವೆಯಾದರೂ ಕೂಡ ಅವಳ/ನಲ್ಲಿ ಮೊದಲು ಬಯಸುವುದು ಸ್ನೇಹ, ಇಬ್ಬರೂ ಒಳ್ಳೆಯ ಸ್ನೇಹಿತರಾದಾಗ ಮಾತ್ರ ಆತ್ಮೀಯತೆಗೆ ಅವಕಾಶ. ಅಂದಮೇಲೆ ಈಗಾಗಲೇ ಸ್ನೇಹದ ದೋಣಿಯ ಪಯಣಿಗರಾಗಿ ಸಾಕಷ್ಟು ದೂರ ಪಯಣಿಸಿರುವ ಎರಡು ಮನಸುಗಳು ಅದೇ ದೋಣಿಯಲ್ಲಿ ತಮ್ಮ ಜೀವನ ಪಯಣವನ್ನು ಮುಂದುವರಿಸುವುದರಲ್ಲಿ ತಪ್ಪೇನು ಇಲ್ಲ ಅನಿಸುತ್ತದೆ ಆ ಕಥಾನಾಯಕನಿಗೆ. ಅಲ್ಲದೇ ಆ ಅವಕಾಶ ಜಗತ್ತಿನ ಕೆಲವೇ ಕೆಲವು ವ್ಯಕ್ತಿಗಳಿಗೆ ಸಿಗುತ್ತದೆ. ಅಂತಹವರಲ್ಲಿ ನಾನೊಬ್ಬನಾಗಿರುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಚಾರ ಸಹ ಅಲ್ಲವೇ ಎಂದು ಹಿಗ್ಗಿತು ಅವನ ಮನಸ್ಸು. ಅದೂ ಅಲ್ಲದೇ ಒಂದು ವೇಳೆ ಈ ಪ್ರೀತಿಯನ್ನು ತಿರಸ್ಕರಿಸಿದರೆ, ಇಬ್ಬರ ನಡುವಿನ ಸ್ನೇಹದಲ್ಲಿ ಕೂಡ ಮತ್ತೆ ಮೊದಲಿನ ಸಲಿಗೆ ಇರಲಾರದು ಎಂಬ ಸತ್ಯದ ಅರಿವು ಕಥಾನಾಯಕನಲ್ಲಿ ಮೂಡಿತ್ತು. ಒಂದು ನಕಾರಾತ್ಮಕ ನಿರ್ಧಾರ,ಇರುವ ಸ್ನೇಹ ಹಾಗೂ ಅರಸಿ ಬಂದಿರುವ ಪ್ರೀತಿ ಎರಡನ್ನೂ ಉಳಿಸಲು ಅಶಕ್ತವಾಗುತ್ತದೆ ಎಂದಾದರೆ ಅಂತಹ ನಿರ್ಧಾರ ಅರ್ಥವಿಲ್ಲದ್ದು ಎನಿಸಿತು. ಆದ್ದರಿಂದ ಸ್ನೇಹಿತೆಯ ಪ್ರೇಮನಿವೆದನೆಗೆ ಕಥಾನಾಯಕ ತಲೆಬಾಗುತ್ತಾನೆ.
ಹೀಗೆ ಕಥಾನಾಯಕ ಹಾಗೂ ಅವನ ಸ್ನೇಹಿತೆಯ ಪ್ರೇಮಕಥೆಗೆ ಸುಖಾಂತ್ಯ ನೀಡಿದ್ದ ಯಶಸ್ ಈಗ ಇಲ್ಲಿಯೂ ಅದನ್ನೇ ಅಳವಡಿಸಲು ನಿರ್ಧರಿಸುತ್ತಾನೆ. ಸ್ನೇಹಿತೆಯ ಪ್ರೀತಿಯ ನಿವೇದನೆಯ ಸಂದೇಶಕ್ಕೆ ಪ್ರತ್ಯುತ್ತರ ಬರೆಯಲಾರಂಭಿಸಿದ. “ಗೆಳತಿ, ನಿನ್ನ ಪ್ರೇಮನಿವೇದನೆಯ ಸಂದೇಶವನ್ನು ನಾನು ಓದಿದೆ. ಒಂದು ಕ್ಷಣ ಆ ಸಂದೇಶ ನನ್ನನ್ನು ದಂಗುಬಡಿಸಿದ್ದು ನಿಜ. ನಿನಗೇಕೆ ನನ್ನ ಕುರಿತು ಈ ಭಾವನೆ ಮೂಡಿತೋ ನಾನರಿಯೆ. ಬಹುಷಃ ನನ್ನ ನಡವಳಿಕೆಗಳೇ ಕಾರಣವೋ ಏನೋ. ಆದರೆ ನಿನಗೆ ಉತ್ತರಿಸುವ ಮೊದಲು ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು. ನಮ್ಮ ಸ್ನೇಹ ಆರಂಭವಾದಾಗಿನಿಂದ ನಿನ್ನ ಈ ಸಂದೇಶ ಬರುವ ಕ್ಷಣದವರೆಗೂ ನನ್ನ ಮನಸಿನಲ್ಲಿ ನಿನ್ನ ಕುರಿತಾಗಿ ಗೆಳೆತನದ ಪ್ರೀತಿಯಿತ್ತೇ ಹೊರತು ಸಂಗಾತಿಗೆ ತೋರುವ ಪ್ರೀತಿ ಇರಲಿಲ್ಲ. ಆದರೆ ಆನಂತರ ಅದರ ಕುರಿತಾಗಿ ನಾನು ಬಹಳ ಯೋಚಿಸಬೇಕಾಯಿತು. ಕಾರಣ ಇದು ‘ಕಥೆ ಅಲ್ಲ ಜೀವನ’. ಬದುಕು ಎಂದಾಕ್ಷಣ ಬಹುಷಃ ಎಲ್ಲರದೂ ಇದೇ ಕಥೆ. ಕೊನೆಗೂ ಎಲ್ಲ ತುಮುಲಗಳಿಂದ ಹೊರಬಂದು ನಿರ್ಧಾರ ಕೈಗೊಂಡಿದ್ದೇನೆ. ಈ ನಿರ್ಧಾರದಲ್ಲಿ ನನಗೆ ಯಾವುದೇ ಗೊಂದಲಗಳಿಲ್ಲ ಆ ನಿರ್ಧಾರ ಏನೆಂದರೆ, ನಾವಿಬ್ಬರೂ ಪಯಣಿಸುತ್ತಿರುವ ಈ ಸ್ನೇಹದ ದೋಣಿಯನ್ನು ನಮ್ಮದೇ ಆದ ಪುಟ್ಟ ಪ್ರೇಮಲೋಕವಾಗಿಸಲು ನನ್ನ ಒಪ್ಪಿಗೆ ಇದೆ ಗೆಳತಿ. ನಮ್ಮಿಬ್ಬರ ಸ್ನೇಹಪಯಣದ ಆತ್ಮೀಯತೆಯ ದೃಷ್ಟಿಯಿಂದ ನೋಡುವಾಗ ನಿನಗಿಂತ ಒಳ್ಳೆಯ ಬಾಳಸಂಗಾತಿ ನನಗೆ ಬೇರೊಬ್ಬಳು ಸಿಗಲಾರಳು.
“ನನ್ನಯ ಬದುಕಿನ ಹಾಡಿಗೆ ನವಪಲ್ಲವಿಯ ನೀ ರಚಿಸು…
ನನ್ನ ಪ್ರೀತಿ ಕರೆಯ ನಿನೋಮ್ಮೆ ಅಲಿಸಿಲ್ಲಿ; ಅಷ್ಟೇ ಸಾಕು,
ಮೌನದಲೂ ಮೋಹಿಸು…”
ಎನ್ನುತ್ತಾ ನಿನಗಾಗಿಯೇ ಬರೆದ ನನ್ನದೇ ಸಾಲುಗಳ ಮೂಲಕ ನನ್ನ ಪ್ರೇಮ ನಿವೇದನೆಗೈಯ್ಯುತ್ತಿದ್ದೇನೆ ಗೆಳತಿ.”
ಯಶಸ್ ನ ಈ ಸಂದೇಶ ಆದ್ಯತಾಳ ಪಾಲಿಗೆ ಅತ್ಯಂತ ಸಂತೋಷ ತಂದಿತು. “ಯಶಸ್, ಇಂದು ನನಗಾಗುತ್ತಿರುವ ಸಂತೋಷಕ್ಕೆ ಪಾರವಿರಲು ಸಾಧ್ಯವೇ ಇಲ್ಲ. ನನಗಾಗೇ ಬರೆದ ಸಾಲುಗಳಿಂದ ನಿನ್ನ ಪ್ರೇಮನಿವೇದನೆ ಮಾಡುತ್ತಿದ್ದೇನೆ ಅಂದೆ ನೀನು. ಆ ಸಾಲುಗಳನ್ನು ನನಗಾಗೇ ಬರೆದದ್ದು ಎಂದು ನೀನು ಹೇಳುವ ಅಗತ್ಯವೇ ಇಲ್ಲ. ಆ ಸಾಲಿನ ಪ್ರತಿಯೊಂದು ಪದವೂ ಅದನ್ನು ಪ್ರತಿಬಿಂಬಿಸುತ್ತದೆ. “ನನ್ನ ಪ್ರೀತಿ ಕರೆಯ ನಿನೋಮ್ಮೆ ಅಲಿಸಿಲ್ಲಿ; ಅಷ್ಟೇ ಸಾಕು”; ನಾನು ನಿನಗೆ ಅರ್ಹಳೇ ಎಂಬ ಗೊಂದಲ ನನ್ನಲ್ಲಿ ಇನ್ನೂ ಇದೆ ಎಂಬುದನ್ನು ಅರಿತು ಬರೆದಿದ್ದೀಯಾ ಅಲ್ಲವೇ? ನಿಜ. ನನಗೆ ನಿನ್ನ ಪ್ರೀತಿ ಕರೆಯನ್ನು ಆಲಿಸಲು ಮಾತ್ರ ಸಾಧ್ಯ, ಅದಕ್ಕೆ ಪ್ರತಿಯಾಗಿ ಓಗೊಡುವ ಭಾಗ್ಯ ನನಗಿಲ್ಲ. ಹಾಗಾಗಿ ಆ ಸಾಲಿನ “ಅಷ್ಟೇ ಸಾಕು” ಎಂಬ ಎರಡು ಪದಗಳು ನನ್ನನ್ನು ಬಹಳವಾಗಿ ಸಂತೈಸಿದವು. ಯಶಸ್… ಇದೇ ಕಾರಣಕ್ಕೆ ನಾನು ನಿನ್ನನ್ನು ಬಯಸಿದ್ದು. ನಿನ್ನ ಭಾವ ಶ್ರೀಮಂತಿಕೆಗೆ ನಾನು ಎಂದಿಗೂ ಋಣಿ. ನೀನೇ ಹೇಳಿದಂತೆ ನಿನ್ನ ಬದುಕಿಗೆ ಪಲ್ಲವಿಯಾಗುವ ಪ್ರಯತ್ನ ಪಡುತ್ತೇನೆ. ಈ ಬದುಕು ನನಗೆ ನೀಡಿರುವ ಶಾಶ್ವತ ಮೌನದಲ್ಲಿ ನಿನ್ನನ್ನು ಮೋಹಿಸಿ ಆ ಮೌನರಾಗಕ್ಕೆ ನೀನು ಪೋಣಿಸುವ ಶಬ್ದಗಳಲ್ಲಿ ನಾನು ಅರಳುವಂತಾದರೆ ಅದು ನನ್ನ ಸಾರ್ಥಕ್ಯ ಎಂದುಕೊಳ್ಳುತ್ತೇನೆ.” ಎಂದು ಪ್ರೀತಿಯ ಮರುತ್ತರ ಕಳುಹಿಸಿದಳು.