ಸಿನಿಮಾ - ಕ್ರೀಡೆ

ಅಗಸ್ತ್ಯನ ನಿರೀಕ್ಷೆಯ ಮಹಾರಥ!

ಕಳೆದ ವಾರ ತೆರೆಕಂಡಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ಶ್ರೀ ಮುರಳಿ ಅಭಿನಯದ ‘ರಥಾವರ’. ಈ ಹಿಂದಿನ’ಉಗ್ರಂ’ ಅಲೆಯಲ್ಲಿ ತೇಲುತ್ತಿರುವ ನಟ ಶ್ರೀ ಮುರಳಿ ‘ರಥಾವರ’ಎಂಬ ಪಕ್ಕಾ ಮಾಸ್ಸ್ ಚಿತ್ರದ ಮೂಲಕ ತಮ್ಮ ಹಿಂದಿನ ‘ಅಗಸ್ತ್ಯ’ ನನ್ನೇ ಹೋಲುವ ‘ರಥ’ ಎಂಬ ಕಥಾಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.

ರಚಿತಾ ರಾಮ್, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ, ಚರಣ್ ರಾಜ್ ರ ತಾರಾಂಗಣ ಹೊಂದಿರುವ ಚಿತ್ರಕ್ಕೆ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿದ್ದಾರೆ. ಡಿಫರೆಂಟ್ ಡ್ಯಾನಿಯವರ ಸಾಹಸದಲ್ಲಿ ಚಿತ್ರದ ಫೈಟಿಂಗ್ ದೃಶ್ಯಗಳು ಸಕತ್ತಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಧರ್ಮ ವಿಷ್ ಅವರು ಸಂಗೀತ ಸಂಯೋಜಿಸಿದ್ದಾರೆ, ಇರುವ ಕೆಲವೇ ಕೆಲವು ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗುವ ಮಟ್ಟಿಗೆ ಧರ್ಮ ವಿಷ್ ತಮ್ಮ ಕೈಚಳಕ ತೋರಿದ್ದಾರೆ. ನಾಯಕ ನಟ ಶ್ರೀ ಮುರಳಿ ತಮ್ಮ ಉಗ್ರಂ ಯಶಸ್ಸಿನ ನಂತರ ಅಭಿನಯಿಸಿದ ಮೊಟ್ಟ ಮೊದಲ ಚಿತ್ರ ಇದಾಗಿದೆ. ಇಲ್ಲೂ ಕೂಡ ತಮ್ಮ ಹಿಂದಿನ ಹೊಡಿ-ಬಡಿ ಕಥಾಪಾತ್ರಕ್ಕೆ ಜೋತು ಬಿದ್ದಂತೆ ‘ರಥ’ ಎಂಬ ರಫ್-ಟಫ್ ಪಾತ್ರವನ್ನು ಶ್ರೀ ಮುರಳಿ ನಿರ್ವಹಿಸಿದ್ದಾರೆ.

ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನ ಸಾರಥ್ಯವಿರುವಂತೆ’ರಥಾವರ’ದಲ್ಲಿ ರಾಜಕಾರಣಿ ಮಣಿಕಂಠ(ರವಿಶಂಕರ್)ಗೆ ರಥ ಸಾರಥಿಯಗುತ್ತಾನೆ. ಮಣಿಕಂಠನ ಎಲ್ಲ ರಾಜಕೀಯ ಬೆಳವಣಿಗೆಗಳಿಗೆ ರಥ ನಿರ್ಣಾಯಕನಾಗುತ್ತಾನೆ. ಮಣಿಕಂಠ ಚಿತ್ರದುದ್ದಕ್ಕೂ ಹೆಳುವಂತೆ ‘ರಥ’ ನ ಸಾಮರ್ಥ್ಯ ಅಪಾರ, ಆತ ನೂರಾನೆಗಳಿಗೆ ಸಮ ಎಂಬ ರೀತಿಯಲ್ಲಿ ಶ್ರೀ ಮುರಳಿಗೆ ಮಾಸ್ಸ್ ಟೈಟಲ್ ಅನ್ನು ನೀಡಿ ನಿರ್ದೇಶಕರು ರಥಾವರವನ್ನು ‘ಉಗ್ರಂ’ ನ ಹಾದಿಯಲ್ಲಿ ಮುಂದುವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದಲ್ಲಿ ರಥ ಮಣಿಕಂಠನ ಆಜ್ಞೆಯನ್ನು ಆಚರಣೆಗೆ ತರುವುದರಲ್ಲೆ ಸಂತೃಪ್ತಿಯನ್ನು ಪಡಿಯುತ್ತಾನೆ.

CM ಪದವಿಯಾಕಾಂಕ್ಷಿಯಾದ ಮಣಿಕಂಠನಿಗೆ ಸತ್ತ ಮಂಗಳಮುಖಿಯ ಹೆಣದ ದರ್ಶನವಾದರೆ CM ಪದವಿ ಒದಗಿಬರುತ್ತದೆ ಎಂಬ ಮಾತು ಗುರುಮುಖೇನ ತಿಳಿದುಕೊಳ್ಳುತ್ತಾನೆ. ಆದರೆ ಮಂಗಳಮುಖಿಯರ ಸಂಪ್ರದಾಯದ ಪ್ರಕಾರ ಸತ್ತವರ ಹೆಣವನ್ನು ಗುಪ್ತವಾಗಿ, ಹೆಣದ ಮುಖವನ್ನು ಯಾರಿಗೂ ತೋರಿಸದೆ ಸಂಸ್ಕಾರ ಮಾಡುವುದು ವಾಡಿಕೆ. ಹೀಗಿರುವಾಗ ಇಂತಹ ಕಷ್ಟಸಾಧ್ಯವಾದ ಕೆಲಸವನ್ನು ರಥನ ಹೆಗಲಿಗೇರಿಸುತ್ತಾನೆ ಈ ಮಣಿಕಂಠ. ರಥ, ಮಣಿಕಂಠನ ಒಡನಾಟದ ಅನುಭವಗಳನ್ನು ಧಾರೆಯೆರೆದು ಮಂಗಳಮುಖಿಯ ಶವದ ಹುಡುಕಾಟ ನಡೆಸುವುದರ ಸುತ್ತ ಹೆಣೆದ ಕಥೆಯಾಗಿದೆ ‘ರಥಾವರ’.

ಈ ಮಧ್ಯೆ  ನಾಯಕಿ ರಚಿತಾ ರಾಮ್ ಪ್ರವೇಶ!. ಚಿತ್ರದ ಕಥಾವಸ್ತುವಿಗೆ ಸಂಬಂಧವಿಲ್ಲದ ನಾಯಕಿ, ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪಬೇಕುನ್ನುವ ನಿರ್ದೇಶಕರ ಮನಸ್ಥಿತಿಯನ್ನು ಇಲ್ಲಿ ನಾವು ಕಾಣಬಹುದು. ಪ್ರೀತಿ-ಪ್ರೇಮ-ಹಾಸ್ಯವು ಕನ್ನಡ ಚಿತ್ರಗಳಲ್ಲಿ ಅನಿವಾರ್ಯ ಎನ್ನುವ ಮಟ್ಟಿಗೆ ರಚಿತಾ ರಾಮ್ ಹಾಗು ಸಾಧು ಕೋಕಿಲ ಅವರ ಕಥಾಪಾತ್ರವನ್ನು ಚಿತ್ರದಲ್ಲಿ ಜೋಡಿಸಲಾಗಿದೆ. ನಿರ್ದೇಶಕರಲ್ಲಿನ ಆತ್ಮವಿಶ್ವಾಸದ ಕೊರತೆಯೋ, ಪ್ರೇಕ್ಷಕರಲ್ಲಿ ಸ್ವೀಕಾರಭಾವದ ಕೊರತೆಯೋ ಎಂಬಂತೆ ತಕ್ಕ ಮಟ್ಟಿಗೆ ಪ್ರೀತಿ-ಹಾಸ್ಯವನ್ನು ಚಿತ್ರದಲ್ಲಿ ಸೇರಿಸುವ ಪ್ರಯತ್ನದಲ್ಲಿ ನಿರ್ದೇಶಕರ ಅಷ್ಟಾಗಿ ಯಶ ಕಂಡಂತೆ ಕಾಣುತ್ತಿಲ್ಲ. ಬರುವ ಕೆಲವೇ ಹಾಡುಗಳಲ್ಲಿ ಚಿತ್ರತಂಡ ತಮ್ಮ ನೈಪುಣ್ಯತೆಯನ್ನು ಒರೆಗೆ ಹಚ್ಚಿರುವುದನ್ನು ಕಾಣಬಹುದು.

ಹಿಡಿದ ಕಾರ್ಯದಲ್ಲಿ ಒಬ್ಬಾಕೆ ಮಂಗಳಮುಖಿಯಿಂದಾಗಿ ಸೋಲನ್ನನುಭವಿಸಿದ ರಥ, ಮಂಗಳಮುಖಿಯ ಶಾಪಕ್ಕೀಡಾಗಿ ಅಂತರ್ಮುಖಿಯಾಗುತ್ತಾನೆ. ತಾನು ಬದುಕಿದ ರೀತಿಯ ಕುರಿತು ಪಶ್ಚಾತ್ತಾಪ ಪಡುತ್ತಾನೆ, ಮಂಗಳಮುಖಿಯರ ಕುರಿತು ಇದ್ದ ತಾತ್ಸಾರ ಭಾವ ಗೌರವವಾಗಿ ಮಾರ್ಪಾಡಾಗುತ್ತದೆ. ಇದೇ ಕಾರಣಕ್ಕಾಗಿ ತನ್ನ ಯಜಮಾನ ಮಣಿಕಂಠನ ವೈರತ್ವವನ್ನು ಸಂಪಾದಿಸುತ್ತಾನೆ. ಮಂಗಳಮುಖಿಯ ಶಾಪದಿಂದಾಗಿ ನಾಯಕ ಮಾನಸಿಕ ತೊಳಲಾಟಕ್ಕೀಡಾಗುವ ದೃಶ್ಯಗಳು ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿವೆ.

ಚಿತ್ರದಲ್ಲಿನ ಮತ್ತೊಂದು ವಿಶೇಷ ಏನೆಂದರೆ ಗೆಳೆತನವನ್ನು ಚಿತ್ರಿಸಿರುವ ರೀತಿ. ಎಲ್ಲಾ ಚಿತ್ರಗಳಿಂದ ವಿಭಿನ್ನವಾದ ಸ್ನೇಹವನ್ನು ತೋರಿಸೋ ಪ್ರಯತ್ನದಲ್ಲಿ ನಿರ್ದೇಶಕರು ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಈ ಸೀಸನಿನ ಬಹುನಿರೀಕ್ಷಿತ ಚಿತ್ರವಾದ ರಥಾವರ ತಕ್ಕಮಟ್ಟಿಗೆ ಪ್ರೇಕ್ಷಕನನ್ನು ಪ್ರಸನ್ನನಾಗಿಸುವುದು ಖಂಡಿತ. ನಾಯಕ ನಟ ಶ್ರೀ ಮುರಳಿ, ರವಿಶಂಕರ್ ಅವರು ತಮ್ಮ ಎಂದಿನ ಶೈಲಿಯಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಒಟ್ಟಾರೆಯಾಗಿ ‘ರಥಾವರ’ ಉಗ್ರಂ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡದು. ಚಿತ್ರದುದ್ದಕ್ಕೂ ಎಲ್ಲೂ ಬೆಸರಮೂಡಿಸದೆ ಇರುವುದು ಚಿತ್ರದ ಪ್ಲಸ್ ಪಾಯಿಂಟ್.

Abhishek  Delampady

abhidlmp@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!