….. ಮನ್ವಂತರದ ನವ ಪೂರ್ಣಿಮಾ…
ಭಾಗ 1 ಇಲ್ಲಿ ಓದಿ: ‘ಜಂಗಮ’… – ೧
ನೀನು…ನೀನು…ಎಂದು ಮತ್ತೆ ತಡವರಿಸುತ್ತಿದ್ದಾಳೆ…. ನೀನು… ನೀನು… ಜೀವನ್ ಅಲ್ಲವೇ?.. ಕೇಳಿದಳು.
ಸೋದರಿ,ಅದು ನನ್ನ ಪೂರ್ವಾಶ್ರಮದ ಹೆಸರು. ನಾನೀಗ ಆತನಲ್ಲ! ಭವದ ಭೋಗಗಳಲ್ಲಿ ವೈರಾಗ್ಯ ತಾಳಿ, ಸನ್ಯಾಸ ಸ್ವೀಕರಿಸಿ, “ಪೂರ್ಣ ಚಂದ್ರ” ಎಂಬ ನಾಮಾಂಕಿತನಾಗಿದ್ದೇನೆ. ನನ್ನ ಬದುಕನ್ನು ನಾನಂದುಕೊಂಡಂತೆಯೇ ಬದಲಿಸಿಕೊಂಡಿದ್ದೇನೆ. ಸೋದರೀ..ಏನಾಯಿತು? ಶುಭ ಕಾರ್ಯಗಳಿಗೆ ಸಾಕ್ಷಿಯಾಗಬೇಕಿರುವ ಈ ಗೋಧೂಳಿ ಮುಹೂರ್ತದಲ್ಲೇಕೆ ಇಲ್ಲಿ ಬಂದು ನಿಂತಿರುವೆ? ಏಕೆ, ಆ ಕಣಿವೆಯೆಡೆಗೆ ನಿನ್ನ ಕಾಲುಗಳು ಚಲಿಸುತ್ತಿವೆ? ಕಣಿವೆಯ ಆಳ ನೋಡುವ ಹುಚ್ಚು ಸಾಹಸ ಸಲ್ಲದು ಅಲ್ಲವೇ? ಏನಾಯಿತು, ಹೇಳು ಸೋದರಿ… ಅವನೀಗ ಕಾಲದ ಪರದೆಯ ಮಡಿಕೆಯೊಳಗೆ ಹುದುಗಿಹೋಗಿದ್ದ ಆಕೆಯ ಗತಜೀವನದ ನೆನಪುಗಳ ತುಣುಕುಗಳನ್ನು ಪದರ ಪದರವಾಗಿ ಅನಾವರಣಗೊಳಿಸತೊಡಗುತ್ತಾನೆ…..
ಅವಳು ನಿಧಾನವಾಗಿ ತನ್ನ ಯೌವನದ ಆರಂಭದ ದಿನಗಳಿಗೆ ಜಾರುತ್ತಾಳೆ. ಕಾಲ ಹಿಂದೆ ಸರಿಯತೊಡಗುತ್ತದೆ… ತನ್ನ ಜೀವನದ ಎಲ್ಲವುಗಳನ್ನುಈಗ ಆತನೆದುರು ಬಿಚ್ಚಿಡುತ್ತಿದ್ದಾಳೆ… ನೀನು ಬಿಟ್ಟುಹೋದ ಮೇಲೆ ನಾನು, ಅಪ್ಪ ಅಮ್ಮ ಇದ್ದರೂ, ಅನಾಥಳಾದಂತೆ ಅನಿಸತೊಡಗಿತು. ನೀನು ಅಂದು ಹೇಳಿದ ಮಾತುಗಳನ್ನೆಲ್ಲಾ ನಾನು ಮೆಲುಕುಹಾಕುತ್ತಿದ್ದೆ. ಹೀಗೇ ಕೆಲವು ದಿನಗಳು ಕಳೆದವು. ಒಂದು ದಿನ ನನ್ನ ತಂದೆ ತಾಯಿ ಇಹಲೋಕ ಯಾತ್ರೆ ಮುಗಿಸಿದರು. ಅತ್ತೆ,ಎದೆ ಬಿರಿವಂತೆ ಅತ್ತೆ… ಏಕೆಂದರೆ,ನಾನಾಗ ಯಾರೂ ಇಲ್ಲದ ಅನಾಥೆ. ನಿನ್ನ ಸಾಂತ್ವನದ ನುಡಿಗಳಿರಲಿಲ್ಲ. ಒರಗಲು ನಿನ್ನ ಪ್ರೀತಿಯ ಬೆಚ್ಚನೆಯ ಹೆಗಲಿರಲಿಲ್ಲ. ನನ್ನ ನೋವನ್ನು ಕೇಳುವ ಯಾವ ಜೀವಗಳೂ ಇರಲಿಲ್ಲ. ಕಂಬನಿಗಳೇ ನನ್ನ ಗೆಳತಿಯರಾದವು. ನಂತರ ಮತ್ತೆ ಕಾಲನ ಆಟ ಶುರುವಾಯಿತು. ನನ್ನ ಬದುಕಿನ ಮಗ್ಗಲು ಬದಲಾಯಿತು. ನಾನೊಬ್ಬನನ್ನು ಪ್ರೇಮಿಸಿದೆ. ಆತ ನನ್ನನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟ. ನನ್ನನ್ನು ಸಂಪೂರ್ಣವಾಗಿ ಆತನಿಗೆ ಸಮರ್ಪಿಸಿಕೊಂಡೆ. ನನ್ನ ದೇಹದ ಸವಿಯನ್ನು ಇಂಚಿಂಚೂ ಬಿಡದೇ ಸವಿದ. ನನ್ನ ಸೌಂದರ್ಯದ ಸರೋವರದಲ್ಲಿನ ನೀರನ್ನು ಕುಡಿದು ತೇಗಿದ. ನಂತರ, ಎಲ್ಲ ಸವಿದು ಹಿಪ್ಪೆಯಾದ, ಸಿಪ್ಪೆಯಾದ ನನ್ನನ್ನು ತಿರಸ್ಕರಿಸತೊಡಗಿದ. ಅವನಲ್ಲಿ ಬೇಡಿಕೊಂಡಾಗ ಹೇಳಿದ್ದು, “ನಿನ್ನಲ್ಲಿನ ಸೌಂದರ್ಯದ ಸವಿ ಅನುಭವಿಸಾಗಿದೆ, ಮತ್ತೆ ಭೋಗಿಸಲು ಬೇಸರ. ನಿನ್ನಲ್ಲಿ ಹಣವಿಲ್ಲ, ಅದಿದ್ದಿದ್ದರೆ ಇನ್ನೂ ಏನೋ ಒಂಥರಾ ಪುಳಕವಿರುತ್ತಿತ್ತು.”. ಕಾಲು ಹಿಡಿದುಕೊಂಡೆ. ಎದೆಗೆ ಒದ್ದ… ಅಸಹಾಯಕ ಹೆಣ್ಣು ನಾನು, ಏನು ತಾನೇ ಮಾಡಿಯೇನು? ಅವನ ಸಂಗದ ಫಲವೆಂಬಂತೆ, ಹೆಣ್ಣು ಮಗುವೊಂದಕ್ಕೆ ತಾಯಿಯಾದೆ… ಹಣ ಸಂಪಾದಿಸುವುದೇ ನನ್ನ ಗುರಿಯಾಯಿತು. ಅದಕ್ಕೇ.. ಅದಕ್ಕೇ… ನನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡೆ. ಹೆಣ್ತನವನ್ನೇ ಮಾರಾಟ ಮಾಡುವ ಹೀನಕೃತ್ಯದ ದಾಸಿಯಾದಳು ನಿನ್ನ ತಂಗಿ… ಬೇರೆ ದಾರಿಯಿರಲಿಲ್ಲವೇ.. ಎಂದು ನೀನು ಕೇಳಬಹುದು. ಆದರೆ ತುಂಬು ಯೌವನೆಯಾಗಿದ್ದ ನನಗೆ ಕಾಮದ ಹುಚ್ಚು ಹತ್ತಿತ್ತು. ಹಾಸಿಗೆಯ ಮೇಲಿನ ಹೊರಳಾಟ, ನರಳಾಟಗಳೇ ಹಿತವೆನ್ನಿಸುತ್ತಿತ್ತು… ನಾನೊಂದು ಭೋಗದ ಗೊಂಬೆಯಾದೆ! ಚೆನ್ನಾಗಿ ಸಂಪಾದನೆಯಾಗತೊಡಗಿತ್ತು… ದಿನ ದಿನವೂ ಹೊಸ ಹೊಸ ದೇಹಗಳು ನನ್ನ ದೇಹದ ಮೇಲೆ ಹೊರಳಾಡತೊಡಗಿದವು. ದೇಹ ಸುಖದ ಮಂಪರಿನಲ್ಲಿದ್ದ ನನಗೆ, ಇದುವೇ ಸುಖದ ಜೀವನವಾಯಿತು. ಯೌವನದ ಬಿಸಿ ಏರುತ್ತಲೇ ಇತ್ತು. ನನ್ನ ಮಗು ನನ್ನ ಕೃತ್ಯವನ್ನು ,ನನ್ನನ್ನು ನೋಡಿ ಹೇಸತೊಡಗಿದಾಗ, ಯಾವ ತಾಯಿಯೂ ಗೈಯದ ಅಮಾನವೀಯ ಕೃತ್ಯವನ್ನು ಮಾಡಿದೆ… ಎಂದು ಹೇಳಿ ಅಳತೊಡಗುತ್ತಾಳೆ.
ಆತ, ಸೋದರೀ, ಅಳಬೇಡ, ವಿಷಯವನ್ನು ಹೇಳು.. ತಪ್ಪುಗಳು ಸಹಜ. ಹೆಣ್ತನಕ್ಕೆ ತಾಯ್ತನವೇ ಭೂಷಣ, ಅಂತಹ ಅಪರಾಧವನ್ನೇನು ಮಾಡಿದೆ ನೀನು? ಎಂದು ಕೇಳುತ್ತಾನೆ. ಆಕೆ ಹೇಳುವುದನ್ನು ಮುಂದುವರೆಸುತ್ತಾಳೆ… ತಾಯಂದಿರ ಪ್ರಪಂಚಕ್ಕೇ ಘೋರವಾದೆ. ಮನುಷ್ಯತ್ವದ ಲವಲೇಶವೂ ಇಲ್ಲದೇ, ಜನನಿಯಾದ ನಾನೇ ರಾಕ್ಷಸಿಯಾದೆ. ಐದು ವರ್ಷದ ಆ ಹಸುಳೆಯನ್ನು ನನ್ನ ಕೈಯಿಂದಲೇ ಕತ್ತುಹಿಸುಕಿ ಕೊಂದೆ. ಅವಳು ಸಾಯುವಾಗ ಅಮ್ಮಾ ಅಮ್ಮಾ ಎಂದು ಚೀರಿದಾಗಲೂ ನಾನು ಕರಗದೇ, ವಿಷಯ ಸುಖದ ಮತ್ತಿನಲ್ಲಿ ಕಲ್ಲಿನಂತಾದೆ. ಅವಳ ಒದ್ದಾಟಕ್ಕೆ ಕೊನೆ ತೆರೆಯನ್ನೆಳೆದುಬಿಟ್ಟೆ. ಅವಳು ಅಮ್ಮಾ ಅಮ್ಮಾ ಎನ್ನುತ್ತಲೇ ಸತ್ತಳು. ಅತ್ತೂ ಅತ್ತೂ ಅವಳ ಮುಖವೆಲ್ಲಾ ಒದ್ದೆಯಾಗಿತ್ತು. ವಿಸ್ಮಯ ನೋಡು, ಅವಳ ಕಣ್ಣೀರಿನಿಂದಲೇ ನನ್ನ ಕೈ ಒರೆಸಿಕೊಂಡೆ. ಪಶ್ಚಾತ್ತಾಪದ ಲವಲೇಶವೂ ನನ್ನಲ್ಲಿರಲಿಲ್ಲ. ನನಗೆ ಯಾವ ಮುಸುಕಿನ ಮಾಯೆ ಜಾಲ ಬೀಸಿತ್ತೋ, ನನ್ನ ಭೋಗದ ತೀವ್ರತೆ ಮತ್ತೂ ಹೆಚ್ಚಾಗತೊಡಗಿತ್ತು!
ಆದರೆ, ಕೊನೆಗೊಂದು ದಿನ, ಇದ್ದಕ್ಕಿದ್ದಂತೆ ನಿನ್ನ ನೆನಪಾಯಿತು ಅಣ್ಣಾ… ನೀನು ನುಡಿದ ಮಾತುಗಳೆಲ್ಲ ಮತ್ತೆ ನನ್ನೊಳಗೆ ಪ್ರತಿಧ್ವನಿಸತೊಡಗಿದವು.. ಮತ್ತೆ ಮತ್ತೆ ಮಾರ್ದನಿಸಿದವು.. ಯಾವತ್ತೂ ಕರಗದ ಮನಸ್ಸು ಅಂದು ನಿನ್ನ ಮಾತುಗಳನ್ನು ನೆನೆಸಿಕೊಂಡಾಗ, ನನಗರಿವಿಲ್ಲದಂತೆಯೇ ಕಣ್ಣುಗಳಲ್ಲಿ ನೀರ ಹನಿ ಇಣುಕತೊಡಗಿತ್ತು; ಪಶ್ಚಾತ್ತಾಪಕ್ಕೋ, ಪರಿತಾಪಕ್ಕೋ ತಿಳಿದಿಲ್ಲ ನನಗೆ..! ಬಿಕ್ಕಳಿಸತೊಡಗಿದೆ, ಜೋರಾಗಿ ಕಿರುಚಿದೆ, ತಲೆ ಚಚ್ಚಿಕೊಂಡೆ.. ಮತ್ತೆ ಕಲ್ಲಾದೆ.. ಕೊನೆಗೆ.. ಕೊನೆಗೆ, ಒಂದು ನಿರ್ಧಾರಕ್ಕೆ ಬಂದೆ. ನೀನೇ ಹೇಳಿದ್ದೆಯಲ್ಲಾ, ಯಾವುದೋ ಒಂದು ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬದುಕಿನ ಗತಿಯನ್ನೇ ಬದಲಿಸಿಬಿಡುತ್ತವೆಂದು… ನಾನೂ ಕೂಡ ನಿರ್ಧರಿಸಿದೆ; ಇನ್ನು ಬದುಕಬಾರದೆಂದು… ನಿನಗಾಗಿ, ನೀನು ಬರುವ ದಾರಿಗಾಗಿ ಕಾದೆ..! ದಾರಿಯೂ ಕಾಣಲಿಲ್ಲ; ನೀನೂ ಕೂಡ.. ದಿನದಿನಕ್ಕೆ ಸಾಯುವ ಆಸೆ ಹೆಚ್ಚಾಗತೊಡಗಿತು. .ಆದರೆ, ನನ್ನೆಲ್ಲ ನೆನಪುಗಳನ್ನು ಅಳಿಸಿ, ಖಾಲಿಯಾಗಲು ಇಷ್ಟು ದಿನ ಬೇಕಾಯಿತು. ಆದರೆ, ಈಗಲೂ ನನಗೆ ಅರಿವಾಗುತ್ತಲೇ ಇದೆ, “ನೆನಪುಗಳು ಕಾಡುತ್ತವೆಂದು”…! ಎಲ್ಲವೂ ಖಾಲಿ ಖಾಲಿ ಆಗಿದೆ ಎಂಬ ಭ್ರಮೆಯಲ್ಲಿ ನಾನಿದ್ದೇನೆ.. ಅಣ್ಣಾ.. ಕ್ಷಮಿಸಿಬಿಡು, ಈ ನಿನ್ನ ತಂಗಿಯನ್ನು.. ಸಾವಿನ ಬೀಜ ನೆಟ್ಟಾಗಿದೆ, ಅದು ಮೊಳಕೆಯೊಡೆಯುವ ಸಮಯ ಬಂದಿದೆ.. ಸಾಕು, ಈ ಲೋಗದ, ಈ ಭಾಗದ ಬದುಕು; ಈ ಪರಿಯ ಹೊಲಸು… ತಣ್ಣನೆಯ ಮೌನ ಲೋಕಕ್ಕೆ ಮತ್ತೆ ಪಯಣಿಸಬೇಕಿದೆ. ಅಲ್ಲಿನ ಮೌನದೊಳಗೆ ಮತ್ತೆ ಮಗುವಾಗಿ ನಿದ್ರಿಸಬೇಕೆಂದಿದ್ದೇನೆ.. ಅನುವು ಮಾಡಿಕೊಡು… ಆಕೆ ಹೇಳಿ ಮುಗಿಸಿ ಅಳತೊಡಗುತ್ತಾಳೆ. ಈತನ ಪಾದಗಳಲ್ಲಿ ಬೀಳುತ್ತಾಳೆ.
ಈತ ಅವಳ ಭುಜಗಳನ್ನು ಹಿಡಿದು ನಿಲ್ಲಿಸುತ್ತಾನೆ, ತಲೆ ಸವರುತ್ತಾನೆ… ಸೋದರೀ.. ನಿಜ, ತಪ್ಪುಗಳ ಕೂಪದೊಳಗೆ ಬಿದ್ದು ನೀನು ನಲುಗಿದ್ದು ನಿಜ… ಒಪ್ಪಿಕೊಳ್ಳುತ್ತೇನೆ, ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತವೆಂಬುದು ನಡೆಯಲೇಬೇಕು.. ಅದು ಸೃಷ್ಟಿಯ ನಿಯಮ… ಅದನ್ನು ಮೀರುವ ಸಾಮರ್ಥ್ಯ ಯಾರಿಗೂ ಇಲ್ಲ. ಸೃಜಿಪ ಶಕ್ತಿಯ ಮುಂದೆ ತೃಣವಲ್ಲವೇ ಮಾನವ?.. ನಿನ್ನೊಳಗಿನ ಮನಸ್ಸು ಮರುಗಿದೆ.. ಕಲ್ಮಶಗಳೆಲ್ಲ ನಿನ್ನ ಕಣ್ಣೀರ ಪ್ರವಾಹದಲ್ಲಿ ಕೊಚ್ಚಿಹೋಗಿದೆಯಲ್ಲವೇ? ನೀನೇ ಹೇಳಿರುವೆ ನಾನು ಖಾಲಿಯೆಂದು.. ನೆನಪಿನ ಗೆರೆಗಳನ್ನು ಅಳಿಸಿಯಾಗಿದೆ.. ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹುಡುಕಬೇಡ… “ನಹಿ ಭವತಿ ಯನ್ನಭಾವ್ಯಂ,ಭವಿತವ್ಯಮ್ ಭವತ್ಯೇವ” ಎಂಬ ತತ್ವಕ್ಕೆ ವಿಶ್ವವೇ ಬದ್ಧವಾಗಿರುವಾಗ, ನಾವೊಂದು ಅದಕ್ಕೆ ಅಪವಾದವಾಗಲಾದೀತೇ? ಬದುಕಿನ ಪುಟಗಳು ಖಾಲಿಯಿವೆ.. ಮತ್ತೆ ಅಕ್ಷರಗಳ ಹಂಗಾಮ ಆರಂಭವಾಗಲಿ.. ಬದುಕಿನ ಹೊಸ ಮನ್ವಂತರಕ್ಕೆ ಈ ದಿನವೇ ನಾಂದಿಯಾಗಲಿ… ನನಗಂದು ರಕ್ಷೆ ಕಟ್ಟಿದ್ದ ನೀನು, ಇಂದು ಮತ್ತೆ ಬದುಕುವ ದೀಕ್ಷೆಯ ಕಂಕಣ ತೊಡಬೇಕು. ಜೀವನದಲ್ಲಿ ತಪ್ಪುಗಳು ಇರಲೇಬೇಕು.ಬರೀ ಒಪ್ಪುಗಳೇ ಇದ್ದರೆ, ನಾವು ಬದುಕನ್ನು ಒಪ್ಪುವುದಿಲ್ಲ ಅಥವಾ ಬದುಕು ನಮ್ಮನ್ನು ಅಪ್ಪುವುದಿಲ್ಲ! ತಪ್ಪುಗಳ ವೃಂದವೇ ಮುಂದೆ ‘ಅನುಭವ’ ಎಂದೆನಿಸಿಕೊಳ್ಳುತ್ತದೆ. ಕಲ್ಲಾಗಿ ಕುಳಿತ ಅಹಲ್ಯೆ ರಾಮನ ಪಾದ ಸ್ಪರ್ಶ ಮಾತ್ರದಿಂದ ಮತ್ತೆ ಜೀವನ ನಡೆಸಿಲ್ಲವೇ? ಪಂಚ ಪತಿವ್ರತೆಯರಲ್ಲಿ ಒಬ್ಬಳಾಗಲಿಲ್ಲವೇ? ದರೋಡೆಕೋರನಾಗಿದ್ದವನೊಬ್ಬ ಮುಂದೆ ವಾಲ್ಮೀಕಿಯಾಲಿಲ್ಲವೇ? ಜೀವನ ಮೌಲ್ಯಗಳ ಮಹಾಗಣಿಯಾದ ರಾಮಾಯಣ ಮಹಾಕಾವ್ಯದ ಸೃಷ್ಟಿಗೆ ಕಾರಣನಾಗಲಿಲ್ಲವೇ? ಜಗದ ಎಲ್ಲ ಮತಗಳು, ಪಂಥಗಳು ತಪ್ಪುಗಳನ್ನು ತಿದ್ದಿಕೊಂಡು, ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಡೆವವರಿಗೆ ಪಥವನ್ನು ತೋರಿವೆ, ತೋರಿಸುತ್ತಿವೆ, ಮುಂದೆಯೂ ತೋರುತ್ತವೆ… ನಿನ್ನ ಬದುಕಿನ ಖಾಲಿ ಪುಟಗಳಲ್ಲಿ ನೀನು ಏನು ಬೇಕಾದರೂ ಬರೆಯಬಹುದು,ಅಲ್ಲವೇ? ಪಶ್ಚಾತ್ತಾಪದ ಬೇಗುದಿಯಲ್ಲಿ ಸುಟ್ಟು ಪವಿತ್ರವಾಗಿರುವ ನಿನಗೆ ಇನ್ನಾವ ಪ್ರಾಯಶ್ಚಿತ್ತವೂ ಬೇಕಿಲ್ಲ. ನಿನ್ನೊಳಗಣ ವೇದನೆಯೇ ನಿನ್ನನ್ನು ಪವಿತ್ರವಾಗಿಸಿದೆ! ಅದಕ್ಕಾಗಿಯೇ ಮನದೊಳಗೆ ಎಂದೂ ಕದನವೊಂದು ನಡೆಯಲೇಬೇಕು! ನೀನೀಗ ಪರಿಶುದ್ಧಳು..ಮಿಹಿಕಾ! ನೀನು ಮತ್ತೆ ಎಲೆಗಳ ಮೇಲೆ ಕುಳಿತು, ಚಂದ್ರಮನ ಬೆಳಕಲ್ಲಿ ಮುತ್ತಾಗಿ ಮಿನುಗಬೇಕು.. ಹಸಿರು ವಸನಕೆ ಮಣಿಗಳ ಚಿತ್ತಾರವಾಗಬೇಕು.. ಮಬ್ಬನೆಯ ಮಸುಕಲ್ಲಿ ಮುಂಬರುವ ಬೆಳಕಿಗಾಗಿ ಕಾದಿದ್ದು ಸಾಕು.. ಬಂದಿರುವ ಹೊಂಬೆಳಕಿನ ಬದುಕನ್ನು ಸ್ವಾಗತಿಸು.. ಬೆಳಕಿನಲ್ಲೇ ಲೀನಳಾಗು.. ಪ್ರೀತಿಯ ಸೃಜನಕ್ಕೆ ಕಾರಣಳಾಗು… ನಿನಗೆ ಗೊತ್ತಾ ಮಿಹಿಕಾ, ಪ್ರೀತಿಯ ಭಾಷೆಯೇ ಮೌನ.. ನೀನು ಹೇಳುತ್ತಿರುವ ಆ ಮೌನವೇ ನಿನ್ನೊಳಗಿನ ತನನ..! ನಾನೊಂದು ಹೊಸ ಬದುಕು ಕೊಡುತ್ತೇನೆ ಒಪ್ಪಿಕೊಳ್ಳುತ್ತೀಯಾ?..
ಆಕೆ ಮತ್ತೆ ಕಣ್ಣೀರಾಗುತ್ತಾಳೆ. ಅಣ್ಣಾ,ಅದೆಂಥ ಪ್ರೀತಿ ನಿನ್ನದು! ಅನೈತಿಕ ಅಪವಿತ್ರ ಹೆಣ್ಣಾದ ನನ್ನನ್ನು ಈಗಲೂ ಅಷ್ಟೊಂದು ಪ್ರೀತಿಸುತ್ತಿದ್ದೀಯಲ್ಲಾ! ನಿನ್ನ ಕೈಯಲ್ಲಿ ಮಗುವಾಗಿ ಮುದ್ದಿಸಿಕೊಳ್ಳಬಾರದೇ ಎಂದೆನಿಸುತ್ತಿದೆ.. ಅಣ್ಣಾ, ನಿನ್ನ ಮಾತಿಗೆ ಇಲ್ಲವೆಂದ ಕ್ಷಣವಿದೆಯೇ? ಮತ್ತೆ ಬದುಕಬೇಕೆಂದು ಇಚ್ಛೀಸುತ್ತಿದ್ದೀಯಾ? ಹೀಗೆ ಮತ್ತೆ ಬದುಕಿ, ಇನ್ನೆಷ್ಟು ಪಾಪಗಳಿಗೆ ಎಡೆಯಾಗಲಿ? ಬೇಡ ಅಣ್ಣಾ, ಕಳಚಿಕೊಂಡು ಬಿಡುವೆ ಈ ಜಗತ್ತಿನಿಂದ… ಈ ಕೊಳಕು ತನುವು ಮಣ್ಣಿನಲ್ಲಾದರೂ ಕೊಳೆತುಹೋಗಲಿ.. ಈತ ಅವಳ ಕಣ್ಣುಗಳಲ್ಲಿನ ಕಣ್ಣೀರನ್ನು ತನ್ನ ಬೊಗಸೆಯೊಳು ಹಿಡಿದು ಹೇಳುತ್ತಾನೆ,… ಈ ಕಣ್ಣೀರೇ ಹೊಸದೊಂದು ಜೀವ ಸೃಜನಕ್ಕೆ ಕಾರಣವಾಗಲಿ… ಎಲ್ಲ ಬಂಧನಗಳಿಂದ ಮುಕ್ತಳಾಗಿ ಬಾಂಧವ್ಯದ ಬಂಧುವಾಗು, ಪ್ರೀತಿಯ ಬಿಂದುವಾಗು.. ಹೊಳೆವ ಸಿಂಧೂರವಾಗು… ಇಂದು ಪೌರ್ಣಿಮೆ, ಇಂದೇ ನಿನ್ನ ನೂತನ ಬದುಕಿನ ಆರಂಭ.. ನೋಡಲ್ಲಿ,ಚಂದ್ರ ಉದಯಿಸಿದ್ದಾನೆ; ಬೆಳಕು ನೀಡಲು… ಸೂರ್ಯನ ಬೆಳಕನ್ನು ಪ್ರತಿಫಲಿಸುವುದಷ್ಟೇ ಆತನ ಕೆಲಸ ಅಲ್ಲವೇ? ನಮ್ಮ ಕಾರ್ಯವೂ ಅದೇ ತಾನೇ? ಪರಮಚೈತನ್ಯ ದಿವ್ಯವನ್ನು ಪ್ರತಿಫಲಿಸುವ ಕನ್ನಡಿಗಳು ನಾವೆಲ್ಲಾ.. ಅಲ್ಲವೇ? ಎಲ್ಲ ವೇದನೆಗಳಿಂದ ಮುಕ್ತಳಾದ ನೀನು,ಬುದ್ಧಳಾಗಬೇಕಿದೆ..! ಆ ಶಶಿಯ ಬೆಳದಿಂಗಳಂತೆ ನಿರ್ಮಲ ಬೆಳಕಾಗಬೇಕಿದೆ… ಎಷ್ಟೋ ಜೀವಗಳ ದನಿಯಾಗಬೇಕಿದೆ.. ಚಕ್ರವಾಕ ಪಕ್ಷಿಗಳ ಸಮ್ಮಿಲನಕ್ಕೆ ಸಾಕ್ಷಿಪರ್ವವಾಗಬೇಕಿದೆ.. ಅದೆಷ್ಟೋ ಬದುಕುಗಳ ಕಾವ್ಯಕ್ಕೆ ಸ್ಫೂರ್ತಿಯಾಗಬೇಕಿದೆ… ದಿಗ್ದಿಗಂತಗಳಿಂದ ಸ್ಫುರಿಸಿಬರುತ್ತಿರುವ ಬೆಳಕನ್ನು ನಿನ್ನೊಡಲಲ್ಲಿ ತುಂಬಿಕೋ… ಸೆಲೆಯಾಗು, ಬೆಳಕಿನ ನೆಲೆಯಾಗು…! ನೀನೀಗ ಪರಿಶುದ್ಧಳಾಗಿದ್ದೀಯ… ನಿನ್ನ ನಿರ್ಮಲತೆಗೆ ಚಂದಿರ ಕೂಡ ನಾಚುತ್ತಿದ್ದಾನೆ, ನೋಡಲ್ಲಿ…ಎನ್ನುತ್ತಿದ್ದಂತೆಯೇ, ಚಂದ್ರ ಕೂಡ ಮೋಡದೊಳಗೆ ಒಮ್ಮೆ ಮರೆಯಾದ… ಸ್ಫುಟವಾದ ಬೆಳದಿಂಗಳ ಕನ್ಯೆಯಾಗಿ, ನಿರಾಭರಣ ಸುಂದರಿಯಾಗಿ ಇಂದು ನಿನಗೆ ಪುನರ್ಜನ್ಮ.. ಇಂದಿನಿಂದ ನಿನ್ನ ಹೆಸರು “ಪೂರ್ಣಿಮಾ”… ಸನ್ಯಾಸಿನಿಯಾಗಿ ಬದುಕುವೆಯೆಂದಾದರೆ, ನನ್ನ ಜೊತೆಗೆ ಬೆಳಕಿನೆಡೆಗೆ ದಿವ್ಯತೆಗಾಗಿ ಹೆಜ್ಜೆಯಾಗು.. ಇಲ್ಲದಿದ್ದಲ್ಲಿ ಆ ಕತ್ತಲಿನ ಕಣಿವೆಯಲ್ಲಿ ಬಲಿಯಾಗಿ ಮರೆಯಾಗು… ಎಂದು ಹೇಳಿ ಈತ ನಡೆಯತೊಡಗುತ್ತಾನೆ. ಅವಳೂ ಕೂಡ ಆತನ ಹೆಜ್ಜೆಗೆ ಗೆಜ್ಜೆಯಾಗುತ್ತಾಳೆ… ಆತನ ನೆಳಲಾಗುತ್ತಾಳೆ.. ಮತ್ತೆ ಚಂದ್ರಮ ಮೋಡದಿಂದಾಚೆ ಬಂದಿದ್ದಾನೆ. ಮತ್ತಷ್ಟು ಮೆರಗಿನಿಂದ, ಕಾಂತಿಯಿಂದ ಆಹ್ಲಾದಕವಾಗಿ ಕಂಗೊಳಿಸುತ್ತಿದ್ದಾನೆ… ಆ ಸಂತ ಹಿಂದಿರುಗಿ ಒಮ್ಮೆ ನೋಡಿ, ಮತ್ತದೇ ಮಂದಸ್ಮಿತನಾಗಿ, ಮತ್ತೆ ನಡೆಯುತ್ತಿದ್ದಾನೆ; ಪ್ರೀತಿಯ ಜಂಗಮನಾಗಿ,ತಪ್ತ ಜೀವಕ್ಕೆ ‘ಪೂರ್ಣ ಚಂದ್ರ’ಮನಾಗಿ!!… ಆಕೆ ನೆಟ್ಟಿದ್ದ ಸಾವಿನ ಬೀಜ ಈಗ ಬದುಕಾಗಿ ಚಿಗುರಿತ್ತು; ಮರವಾಗಿ,ಸಾಸಿರ ಬಳ್ಳಿಗಳಿಗೆ ಆಶ್ರಯವಾಗಿ, ನೆಳಲು ಕೊಡುವ ಕನಸ ಹೊತ್ತು.. ಭರವಸೆಯ ಹೆತ್ತು!.. ತನ್ನೊಲವಿನ ಅಣ್ಣನೊಂದಿಗೆ ಕತ್ತಲೆಯ ಕಣಿವೆಗೆ ಬೆನ್ನು ಹಾಕಿದ್ದಾಳೆ ಪೂರ್ಣಿಮಾ.. ತನ್ನಂತರಂಗವ ಆತನ ಮುಂದೆ ಬೆತ್ತಲಾಗಿಸಿ… ಮತ್ತೆ ಅವನಿಂದಲೇ ಪಡೆದು ಪ್ರೀತಿಯ ಹೊಸ ಜನುಮ.. ಈಗ ನಭಕೂ ಕ್ಷಿತಿಗೂ ಹಾಲ್ಬೆಳದಿಂಗಳ ಪರ್ವದ ಸಂಭ್ರಮ…..!!….
*ಮಿಹಿಕಾ-ನೇಮಿಚಂದ್ರರ ಕಥೆಯಿಂದ ಪ್ರೇರಿತ ಹೆಸರು.
~‘ಶ್ರೀ’
ತಲಗೇರಿ