ಕಥೆ

‘ಜಂಗಮ’… – ೧

….ಮನ್ವಂತರದ ನವ ಪೂರ್ಣಿಮಾ…

ಅವಳು ನಡೆಯುತ್ತಿದಾಳೆ; ಬರಿಗಾಲಿನಲ್ಲಿ, ಬರಿದಾದ ಮನಸ್ಸಿನಲ್ಲಿ… ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು, ಬದುಕು ನಡೆಸಬೇಕೆಂದು ಬಯಸಿದ್ದಳು. ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು. ಬೇಲಿಯೂ ಕೂಡ ಕಾಣದಾಗಿತ್ತು. ಖಾಲಿ ಖಾಲಿ…ಭಾವಗಳ ಸಂಘರ್ಷವಿರುತ್ತಿದ್ದ, ಕನಸುಗಳ ಕನವರಿಕೆ, ಚಡಪಡಿಕೆಯಿರುತ್ತಿದ್ದ ಮನಸ್ಸಿಂದು ಏನೂ ಇಲ್ಲದೇ ಬಿಕೋ ಎನ್ನುತ್ತಿತ್ತು… ಮನಸಿನ ಅಂಗಳದಲ್ಲಿ ಮುತ್ತಿದ್ದ ನೆನಪಿನ ಹೆಜ್ಜೆ ಗುರುತುಗಳನ್ನು ಅಳಿಸುವ ಎಲ್ಲ ಪ್ರಯತ್ನಗಳೂ ನಡೆದಿದ್ದವು. ಬಹುಪಾಲು ನೆಲವು ಹೆಜ್ಜೆ ಗುರುತುಗಳಿಂದ ಮುಕ್ತವಾಗಿತ್ತು. ಮರೆಯಬೇಕೆಂದುಕೊಂಡಿರುವ ಅವಳ ಬದುಕಿನಂತೆಯೇ, ಅವಳ ಮನದ ಅಂಗಳದಲ್ಲಿ ನಡೆದಾಡಿದ ಹೆಜ್ಜೆಯ ದನಿಗಳೂ ಕೂಡ ಮರೆತುಹೋಗಿದ್ದವು. ನಶೆಯೇರಿದ್ದ ಮನಸ್ಸು ಕಸಿವಿಸಿಗೊಳಗಾಗಿ ಕೃಶವಾಗಿತ್ತು. ಉಸಿರಿನೊಂದಿಗೆ ಹೊಸೆದುಕೊಂಡ ಹೆಸರುಗಳನ್ನೆಲ್ಲಾ ಹರಿದುಹಾಕುವ, ತರಿದುಹಾಕುವ ಅವಳ ಪ್ರಯತ್ನ ಫಲಿಸತೊಡಗಿತ್ತು. ತನ್ನಂತರಂಗವನ್ನು ಬಹಿರಂಗವಾಗಿಸಿಕೊಂಡು ನೋಡಿದಾಗ, ಅವಳಿಗೆ ಕಂಡದ್ದು ತನ್ನೊಳಗಿನ ಕಲ್ಮಶಗಳು, ಹೊಲಸುಗಳು… ತನ್ನೊಳಗಿನ ಕ್ರೌರ್ಯ, ಹಸಿದ ಯೌವನದ ಬಿಸಿಗೆ ತಣಿದಿದ್ದು ಎಲ್ಲವೂ ಅವಳಿಗೆ ಈಗ ಅಸಹ್ಯವಾಗಿದ್ದವು. ಅದಕ್ಕೆಂದೇ ನಡೆಯುತ್ತಿದ್ದಾಳೆ; ಸಾವೆಂಬ ಬೀಜವನ್ನು ಮನದಲ್ಲಿ ನೆಟ್ಟು, ಇಷ್ಟು ದಿನ ನೀರೆರೆಯುತ್ತಿದ್ದವಳು… ಈಗ ಒಂದೇ ಸಮನೆ ಟಿಸಿಲೊಡೆಯಬೇಕೆಂಬ ಹಂಬಲ.. ಕ್ಷಣದ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಆತ್ಮಹತ್ಯೆ ಒಂದೇ ಅಲ್ಲವೇ? ನಿಜ, ಅವಳು ತಾನಂದುಕೊಂಡಂತೆಯೇ ವೈವಿಧ್ಯತೆಯಲ್ಲಿ ಜೀವಿಸಿದ್ದಾಳೆ. ಎಲ್ಲೆ ಮೀರಿ ಎಲ್ಲವುಗಳಿಗೆ ಬಲಿಯಾಗಿದ್ದು ಅವಳಿಗೆ ಈಗ ತನ್ನ ಜೀವನದ ಇನ್ನೊಂದು ಮುಖವನ್ನು ಪರಿಚಯಿಸಿದೆ. ಯಾವ ಕ್ಷಣದಲ್ಲೋ ಅವಳ ಯೋಚನೆಯ ಲಹರಿ ಬದಲಾಗಿಬಿಟ್ಟಿತ್ತು. ಅವಳಿಗೆ ಈಗ ಎಲ್ಲವುಗಳಿಂದ ಮುಕ್ತವಾಗಬೇಕಿದೆ. ಪ್ರಶಾಂತ ಮೌನದೊಳಗೆ ಬೆರೆಯಬೇಕಾಗಿದೆ. ನೀರವತೆಯೊಳಗೆ ನೀರಾಗಬೇಕಿದೆ. ಎಲ್ಲ ಕುತೂಹಲಗಳ ತಾಣವಾದ, ಅಭೇದ್ಯ ರಹಸ್ಯವಾದ ಸಾವಿನ ಮನೆಯೊಳಗೆ ಅಡಿಯಿಟ್ಟು ಮಲಗಬೇಕಿದೆ…!

ಅವಳು ಈಗ ಅಳುತ್ತಿಲ್ಲ. ಅದು ಈಗ ಅವಳಿಗೆ ಬೇಕಿಲ್ಲ ಕೂಡಾ! ಗಾಮಿನಿಯೇ ಬತ್ತಿರುವಾಗ ನೀರಧಿಗೆಲ್ಲಿಯ ಜಲವು, ಒಲವು? ಇಲ್ಲ, ಅವಳಿಗೆ ಈಗ ಯಾವುದೂ ಬೇಕಾಗಿಲ್ಲ. ಎಲ್ಲವನ್ನು ತೊರೆದು, ಚಿಂತೆಯಿರದ ಚಿತೆಯೇರುವ ಬಯಕೆಯೊಂದು ಉಳಿದುಕೊಂಡಿತ್ತು, ಬೆಳೆದುಕೊಂಡಿತ್ತು.. ಒಂದು ಗೂಟದಿಂದ ಬೇಲಿ ಆಗುವುದಿಲ್ಲ ಅಲ್ಲವೇ? ಸಾವೇ ಅವಳಲ್ಲಿನ ಒ೦ಟಿ ಬಯಕೆ! ನಡೆಯುತ್ತಾ ನಡೆಯುತ್ತಾ ಈಗ ಅವಳು ಆಳವಾದ ಕಣಿವೆಯ ಎದುರು ಬಂದು ನಿಂತಿದ್ದಾಳೆ. ಒಂದೇ ಸಮನೆ ಕೆಳಗೆ ಜಾರಿಬಿಡಬೇಕೆಂಬ ತೀವ್ರತೆ.. ಇಷ್ಟು ದಿನದ ಈ ಎಲ್ಲ ಗದ್ದಲಗಳಿಗೆ, ಮುಗಿದ ಅಧ್ಯಾಯಗಳಿಗೆ ಬೆನ್ನುಡಿ ದೊರೆವ ಕ್ಷಣ ಹತ್ತಿರವಾಯಿತೆಂಬ ಆನಂದ… ಜೀವಂತ ಪಾತ್ರಗಳ ತೆರೆಮರೆಯ ನಾಟಕಕ್ಕೆ ಇಂದು ಪರದೆ ಬೀಳುವುದೆಂಬ ತುಡಿತ… ನಿಧಾನವಾಗಿ ಕತ್ತಲಾಗತೊಡಗಿತ್ತು.. ಅವಳಲ್ಲೇ ತಮಸ್ಸು ತುಂಬಿರುವಾಗ, ಅದಕ್ಕೇ ಹೆದರದವಳು, ಈಗ ಈ ಬಾಹ್ಯ ಕತ್ತಲೆಗೆ ಹೆದರುತ್ತಾಳೆಯೇ? ಕತ್ತಲಾಗುತ್ತೆ ಅಂದುಕೊಂಡವಳಿಗೆ, ಆ ಗಗನದಿ ಚಂದಮಾಮ ಉದಯಿಸುತ್ತಿರುವುದು ಕಂಡಿತು. ಹಾರಿಬಿಡಬೇಕು ಎಂದು ಹೆಜ್ಜೆ ಮುಂದಿಟ್ಟವಳಿಗೆ ಆಶ್ಚರ್ಯ!.. “ನಿಲ್ಲು ಮಿಹಿಕಾ, ಆತುರಪಡಬೇಡ” ಎಂಬ ಕಾಳಜಿಯ ಕೂಗು!… ಅರೇ! ಏನಿದು ಅಚ್ಚರಿ.. ನನ್ನ ಭ್ರಮೆಯಿರಬೇಕು; ದ್ವಂದ್ವವೇಕೆ?.. ಸಾಯಲು ಹಾತೊರೆಯುತ್ತಿರುವ ತನುವನ್ನು, ಮನಸ್ಸು ಕರೆಯುತ್ತಿರಬಹುದೇ? ಇರಬಹುದು, ನನ್ನ ಈ ಹೆಸರು ಈ ಊರಲ್ಲಿ ಯಾರಿಗೆ ತಿಳಿದಿದೆ? ಬಾಲ್ಯದಲ್ಲಿ ತಂದೆ ತಾಯಿ ಇಟ್ಟ ಹೆಸರು‘ಮಿಹಿಕಾ’! ನಾನೀಗ ನನ್ನ ಹೆಸರನ್ನು‘ಚಂದ್ರಿಕಾ’ಎಂದು ಬದಲಿಸಿಕೊಂಡಿದ್ದೇನೆ. ಹೊತ್ತು ಗೊತ್ತಿಲ್ಲದ ಈ ಸಂಜೆಯಲ್ಲಿ ಮನಸ್ಸಿಗೇಕೆ ಇಂತಹ ಹುಚ್ಚು? ಮತ್ತೆ ಹೆಜ್ಜೆ ಎತ್ತುವಷ್ಟರಲ್ಲಿ ಮತ್ತದೇ ಕೂಗು! ಉಸಿರ ಕೊಲ್ಲುವ ಈ ಹೊಸತು ವೇಳೆಯಲ್ಲಿ, ಹೆಸರ ಕರೆವ ಮನುಜನಾರು? ನಾನು ಕನಸುಗಳನ್ನೆಲ್ಲಾ ಎಂದೋ ಕಳೆದುಕೊಂಡುಬಿಟ್ಟಿದ್ದೇನೆ. ಇದ್ದ ಬಿದ್ದ ಹರಕು ಗುಡಿಸಲುಗಳಲ್ಲಿ ಮಲಗಿದ್ದ, ಬಣ್ಣವಿಲ್ಲದ ಜೀವಗಳು ನನ್ನೊಳಗಿನ ತಾಪಕ್ಕೆ ಬೆಂದು, ಕಮಟಿಹೋಗಿವೆ. ಅದರ ಸುಳಿವಿನ ಹೊಗೆಯೂ ಈಗ ನನ್ನೊಳಗಿಲ್ಲ. ಛೇ! ಮದದ ಘರ್ಷಣೆಗೆ ಸಿಕ್ಕಿರುವುದು ಸಾಕೆಂದು, ದುಗುಡಗಳ ದಂಗೆಯಿರದ, ಮಧುರತೆಯ ಹಂಗಿರದ, ಜಂಗಮತೆಯ ಗುಂಗಿರದ ಸಾವಿನರಮನೆಗೆ ತೆರಳಬೇಕೆಂದುಕೊಂಡರೆ, ಪದೇ ಪದೇ ಮನಸ್ಸಿನ ತಕರಾರು!.. ಎಂದುಕೊಳ್ಳುತ್ತಾ, ಮತ್ತದೇ ಭ್ರಮೆ ಎಂದು ಉಸುರಿದಳು… ಆಗ,‘ಇದು ಕಲ್ಪನೆಯ ನರ್ತನವಲ್ಲ; ವಾಸ್ತವದ ಸಂಭ್ರಮ, ಮಿಹಿಕಾ’ಎನ್ನುವ ನುಡಿಗಳು.. ಏನೋ ನೆನಪಾದಂತೆ ತಟ್ಟನೆ ತಿರುಗಿದಳು.

ಯಾರೋ ನಗುತ್ತ ನಿಂತಿದ್ದಾರೆ. ಅದೆಂಥ ಸಮ್ಮೋಹಕ, ಪ್ರಶಾಂತ ನಗು! ಮುಗುಳ್ನಗು ಎನ್ನಬೇಕೋ, ಚಂದದ ಸಿಹಿಸ್ವಪ್ನ ನಗೆಯೆನ್ನಬೇಕೋ ತಿಳಿಯುತ್ತಿಲ್ಲ ಅವಳಿಗೆ.. ಕಣ್ಣುಗಳಲ್ಲಿನ ಕಾಂತಿ ಬೆಳಕು ಕೊಡುವಂತೆ ತೋರುತ್ತಿದೆ. ತೇಜಸ್ಸು ಉಕ್ಕಿ ಹರಿಯುತ್ತಿದೆ. ಅವನು ಕರೆದ ಆ ಧ್ವನಿಯಲ್ಲಿ ಔನ್ನತ್ಯವಿದೆ, ಕಾಳಜಿಯ ಸಾಂಗತ್ಯವಿದೆ, ಗಾಂಭೀರ್ಯದ ಮಾಧುರ್ಯವಿದೆ… ನಗುತ್ತ ನಿಂತಿದ್ದಾನೆ. ಯಾರೀತ? ಸ್ಮೃತಿಯೊಳಗೆ ಅಸ್ಪಷ್ಟ ಚಿತ್ರಣ.. ಎಂದೋ ನೋಡಿದಂತೆ, ಮಾತಾಡಿದಂತೆ ಭಾಸ! ಮುಖದಲ್ಲಿ ಸೌಂದರ್ಯ ಮನೆ ಮಾಡಿದೆ. ಅಗಲವಾದ ಹಣೆ.. ಎದೆಯ ಮೇಲೆ ಹದವಾಗಿ ಮಲಗಿರುವ ಗಡ್ಡ.. ಮತ್ತೆ ಮತ್ತೆ ಆ ಕಣ್ಣುಗಳು ಕಾಡುತ್ತಿವೆ; ಎಂದೂ ಮಾಸದ ಆ ನಗುವಿನಂತೆ…. ಅರೇ!.. ಅರೇ!.. ಇವನು.. ಇವನು.. ತನ್ನಲ್ಲಿಯೇ ತಡವರಿಸುತ್ತಿದ್ದಾಳೆ. ಏನು ಹೇಳಿದ ಆತ? ‘ಇದು ಸಂಭ್ರಮ’ ಎಂದಲ್ಲವೇ? ನಿಜ, ಆತ ಹೇಳಿದ್ದು ನಿಜ..! ಜಗದೆಲ್ಲ ಬಂಧನಗಳಿಂದ ಮುಕ್ತಳಾಗುತ್ತಿರುವ ನನಗೆ ಇದು ಸಂಭ್ರಮವೇ! ನನ್ನ ಬದುಕಿನ ಪುಸ್ತಕದಲ್ಲಿನ ಹಲವು ಹಾಳೆಗಳನ್ನು ಖಾಲಿಬಿಡುವ ಒಂಥರಾ ಸಂಭ್ರಮ! ಪುಟಗಳು ಮುಗಿಯುವ ಮೊದಲೇ ಅಕ್ಷರಗಳ ಸಂಗಮ ಮುಗಿಯುವ ಸಂಭ್ರಮ! ಇನ್ನೊಂದೆಡೆ, ಈತನನ್ನು ನೋಡುತ್ತಿರುವ ಸಂಭ್ರಮ!.. ಇವನು, ಅವನೇ ಅಲ್ಲವೇ?..

ನಾನು ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ನನ್ನ ಸಹಪಾಠಿಯಾಗಿದ್ದವನು. ಓದಿನಲ್ಲೂ ಮುಂದು, ಆಟಗಳಲ್ಲೂ ಕೂಡ ಇವನದು ಮೊದಲ ಸ್ಥಾನವೇ! ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿ. ಹುಡುಗಿಯರ ಕನಸಿನ ರಾಜಕುಮಾರ, ಹೃದಯ ಗೆಲ್ಲುವ ಚೋರ ಇವನೇ ಆಗಿದ್ದನಲ್ಲವೇ? ನಾನು ಅವನಲ್ಲಿ ಅನುರಕ್ತಳಾದೆನಲ್ಲವೇ? ಅವನಲ್ಲಿ ನನ್ನ ಪ್ರೇಮವನ್ನು ನಿವೇದಿಸಿಕೊಂಡಾಗ, ಆತ ಹೇಳಿದ್ದು, “ಮಿಹಿಕಾ! ಪಯಣದ ಯಾವುದೋ ಒಂದು ಬಿಂದುವಿನಲ್ಲಿ ಸಂಬಂಧಗಳು ಬೆಸೆಯುತ್ತವೆ.. ಇನ್ನೊಂದು ಬಿಂದುವಿನಲ್ಲಿ ಮಾಗುತ್ತವೆ.. ಹೀಗೇ ಸಾಗುತ್ತವೆ… ಇನ್ನ್ಯಾವುದೋ ಬಿಂದುವಿನಲ್ಲಿ ಮರೆಯಾಗಲೂಬಹುದು.. ಮತ್ತೆ ಮತ್ತೆ ಕಾಣಲೂಬಹುದು, ಕಾಡಲೂಬಹುದು… ಆ ಸಂಬಂಧ ಯಾವುದೇ ಆಗಿರಬಹುದು. ಮಾತೃತ್ವ, ಭ್ರಾತೃತ್ವ, ಗೆಳೆತನ ಹೀಗೇ.. ಮತ್ತ್ಯಾವುದೋ ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸಬಹುದು.. ಗೆಳತಿ.. ಈಗ ನೀನು ನನ್ನನ್ನು ಪ್ರೇಮಿಸುತ್ತಿರಬಹುದು. ಆದರೆ, ನನ್ನ ಬದುಕಿನ ಗಮ್ಯವೇ ಬೇರೆ. ನಾನು ಪ್ರೀತಿಸಬೇಕೆಂದಿರುವುದು ಈ ಜಗತ್ತನ್ನು.. ಪ್ರೇಮ ಎಂಬ ಆಕರ್ಷಣೆಯ ಸುಳಿಗೆ ಸಿಲುಕಲು ನನಗೆ ಹುಮ್ಮಸ್ಸಿಲ್ಲ, ಜೊತೆಗೆ ಮನಸ್ಸೂ ಇಲ್ಲ.. ಕಾಮ, ಮೋಹದಿಂದಾದ ಪ್ರೇಮವನ್ನು ನಾನು ಬಯಸುವುದಿಲ್ಲ. ನನಗೆ ಪರಿಶುದ್ಧವಾದ ಪ್ರೀತಿ ಬೇಕು. ಆಡಂಬರದ ದೊಂಬರಾಟದಲ್ಲಿ ಒಂದು ಪಾತ್ರವಾಗಲು ನಾನು ಇಚ್ಛಿಸುವುದಿಲ್ಲ. ಜಗದ ಎಲ್ಲ ಕಟ್ಟಳೆಗಳನ್ನು ಮೀರಿರುವ ಪ್ರೀತಿ ನನಗೆ ಬೇಕಾಗಿದೆ. ಪ್ರೀತಿಯೆಂಬ ಆ ಆನಂದದ ಸೆಲೆಯ ಹುಡುಕಾಟದಲ್ಲಿ ನಾನಿದ್ದೇನೆ. ವಾತ್ಸಲ್ಯಭರಿತ, ನಿಷ್ಕಲ್ಮಶ, ನಿರಾಡಂಬರ, ನಿರಾಕಾರ, ನಿರ್ಗುಣ ಪರಮಚೈತನ್ಯವಾದ ಪ್ರೀತಿಯ ಚೇತನಕ್ಕಾಗಿ ತಡಕಾಡುತ್ತಿದೇನೆ. ನಾನೊಬ್ಬ ಜಂಗಮ; ನನ್ನಂತರಗಂಗೆಯ ಹುಡುಕಾಟದಲ್ಲಿ ತೊಡಗಿರುವ ಸಂತ ನಾನು.. ಈ ಬಣ್ಣದ ಬಾಹ್ಯ ಸಂತೆಯ ಮಾರಾಟದ ಆಟಿಕೆಯಾಗಲು ನಾನು ಬಯಸುವುದಿಲ್ಲ. ನಾನು ಆ ನಕ್ಷತ್ರವಾಗಲು ಬಯಸುತ್ತೇನೆ ಎಂದು, ಸೂರ್ಯನೆಡೆಗೆ ಕೈತೋರಿದವನಲ್ಲವೇ ಇವನು?

ಆಗ ನಾನು, ಏಕೆ, ನಾನು ಸೌಂದರ್ಯವತಿಯಲ್ಲವೇ? ನನ್ನ ಪ್ರೇಮಕ್ಕೆ ಕಣ್ಣೀರ ಹನಿಗಳು ನಿನ್ನ ಕಾಣಿಕೆಯೇ? ಎಂದು ಮರುಪ್ರಶ್ನಿಸಿದ್ದೆ. ಅದಕ್ಕವನು, ಇಲ್ಲ ಗೆಳತಿ…ಮಲ್ಲಿಗೆಯಂತೆ ನೀನು… ಯಾವ ಸಮಯದಲ್ಲಿ ಯಾರ ಹೃದಯವನ್ನಾದರೂ ಅಪಹರಿಸುವ ಸೌಂದರ್ಯ ನಿನ್ನದು, ನಿಜ…ನನ್ನ ಬದುಕಿನ ಬೆಳಕು ಪ್ರೇಮವೇ ಆಗಿದ್ದಲ್ಲಿ, ನಾನು ಯಾವಾಗಲೋ ನಿನ್ನವನಾಗಿಬಿಡುತ್ತಿದ್ದೆ.ಆದರೆ, ಪ್ರೇಮವೆಂಬ ಕತ್ತಲೆಯೊಳಗೆ ಬೀಳಲು ನನಗಿಷ್ಟವಿಲ್ಲ.. ನಿನಗೆ ಪ್ರೀತಿಯನ್ನು ಕೊಡಬಲ್ಲೆ, ಆದರೆ ಪ್ರೇಮಿಯಾಗಲಾರೆ.. ನಾನು ಕೊಡುವ ಪ್ರೀತಿಯಲ್ಲಿ ಕಾಳಜಿಯಿರುತ್ತದೆ, ಆದರೆ ಕಾಮಾಂಧತೆಯಿರುವುದಿಲ್ಲ. ಪ್ರೇಮಿಯ ಪ್ರೇಮಕ್ಕಿಂತ ಮಿಗಿಲಾದ ಪ್ರೀತಿಯನ್ನು ಕೊಡುತ್ತೇನೆ ಎಂದು ಹೇಳಿ, ತನ್ನ ಕರವಸ್ತ್ರವನ್ನು ಹರಿದು, ನನ್ನಲ್ಲಿ ತನ್ನ ಕೈಗೆ ಕಟ್ಟು ಎಂದಿದ್ದ.. ನಾನು ಕಟ್ಟಿದ್ದೆ. ವಿಪರ್ಯಾಸ; ಅಂದು ರಕ್ಷಾಬಂಧನದ ದಿನವೇ ಆಗಿತ್ತು. ನಂತರ ಆತ ಹೇಳಿದ್ದ.. *ಮಿಹಿಕಾ!.. ಎಂಥ ಸುಂದರ ಹೆಸರು.. ‘ಮಿಹಿಕಾ’ ಎಂದರೆ ಇಬ್ಬನಿಯಂತೆ… ಗೆಳತಿ… ಇಬ್ಬನಿ, ಕ್ಷಿತಿಗೆ ಪೀತಿಯ ವರ್ಷವೆನಿಸೋ, ಬಾನ ಕಂಬನಿ… ಎಲೆಗಳಿಗೆ ಕಚಗುಳಿಯಿಡುವ ಪ್ರೀತಿ ಚುಂಬನದ ಸಂಜೀವಿನಿ! ನಿನ್ನ ಒಂದು ಸ್ಪರ್ಶಕ್ಕಾಗಿ ಎಲೆಗಳು ಕಾಯುತ್ತಿರುತ್ತವೆ.. ನಿನ್ನ ಪ್ರೀತಿಯ ಆಲಿಂಗನಕ್ಕಾಗಿ ನೆಲದ ಹುಲ್ಲುಗಳು ಕನವರಿಸುತ್ತಿರುತ್ತವೆ.. ಜೀವಕ್ಕೆ ತಂಪೆರೆವ ಜೀವನದಾಯಿನಿ, ಮಾತೃರೂಪಿಣಿ ನೀನು..‘ವರ್ಷ’ದ ಸೋದರಿ ನೀನು…ವರ್ಷವಾಗುತ್ತೇನೆ ನಾನು! ನೀನೊಂದು ಕಡೆ ಪ್ರೀತಿಯೆರೆದರೆ, ನಾನೊಂದು ಕಡೆ ಪ್ರೀತಿಯ ಹನಿಯಾಗುತ್ತೇನೆ, ಆಗಬಹುದಾ? ಎಂದಿದ್ದವನಲ್ಲವೇ ಈತ?

ಅಂದು ನಾನು ಆತನನ್ನು ತಬ್ಬಿ ಅತ್ತುಬಿಟ್ಟಿದ್ದೆ. ಆಗ ಆತ, ಅಳಬೇಡ..ತಂಗಿ ಅಳುವುದನ್ನು ಅಣ್ಣ ಹೇಗೆ ತಾನೇ ಸಹಿಸಬಲ್ಲ? ಕಣ್ಣೀರೊರೆಸಿಕೋ ಎಂದು, ತಾನೇ ನನ್ನ ಕಣ್ಣುಗಳನ್ನು ಒರೆಸಿದ್ದ.. ನಾನು ಆಗ, ನಾನು ಅಳುತ್ತಿಲ್ಲ.. ಇಂತಹ ಅಣ್ಣನನ್ನು ಕೊಟ್ಟಿದ್ದಕ್ಕಾಗಿ ಆ ಕಾಣದ ದೇವರಿಗೆ ಕೃತಜ್ಞತೆ ಸಲ್ಲಿಸ್ದೆ ಕಣೋ, ಆಗ ಆ ಧನ್ಯತೆಯಿಂದ ಬಂದ ಆನಂದಭಾಷ್ಪವಿದು..ಎಂದಾಗ, ನನ್ನ ಹಣೆಗೆ ಹೂಮುತ್ತೊಂದನ್ನಿಟ್ಟಿದ್ದ. ನಾನೂ ಕೂಡಾ ಅಂದೇ ಅಣ್ಣನ ಪ್ರೀತಿಯ ಮಳೆಯಲ್ಲಿ ಮಿಂದು ತಂಪಾಗಿದ್ದೆ, ಮತ್ತಷ್ಟು ಪವಿತ್ರವಾಗಿದ್ದೆ.. ಕೆಲವು ದಿನಗಳ ನಂತರ ಆತ, ಹೋಗಿಬರುತ್ತೇನೆ ತಂಗೀ…ಎಂದಿದ್ದ. ಎಲ್ಲಿಗೆ ಎಂದು ಕೇಳಿದಾಗ, ನನ್ನೆದೆಯೊಳಗಿನ ತುಮುಲಗಳನ್ನು ಮಲಗಿಸಿ, ಅಲ್ಲೊಂದು ಪ್ರೀತಿಯ ನದಿಯ ಹರಿಸಬೇಕಿದೆ. ಮುಂದೊಂದು ದಿನ ನಾನು ನಿನ್ನ ಬದುಕಿನಲ್ಲಿ ಬರುತ್ತೇನೆ, ಕಾಯುತ್ತಿರು… ಎಂದವನೇ ಅಲ್ಲವೇ ಇವನು? ಈಗ ಬಂದಿದ್ದಾನೆ ಅಲ್ಲವೇ?…

*ಮಿಹಿಕಾ-ನೇಮಿಚಂದ್ರರ ಕಥೆಯಿಂದ ಪ್ರೇರಿತ ಹೆಸರು.

                                                                             ಮುಂದುವರಿಯುವುದು…

Shridhar Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!