ಕಥೆ

 ಹೆಸರಿಲ್ಲದ ನ್ಯಾನೋ ಕಥೆಗಳು-1

  ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು ದೂರ ಹೋಗುವಷ್ಟರಲ್ಲಿ ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದು ಇಹಲೋಕ ತ್ಯಜಿಸಿದ. ಸಪ್ತಪದಿ ಇಡುವ ಸಮಯದಲ್ಲಿ ಹೇಳಿದಂತೆ ಧರ್ಮ,ಅರ್ಥ,ಕಾಮಗಳಲ್ಲಿ ಜೊತೆಯಾದವನಿಗೆ ಪತ್ನಿಯೊಂದಿಗೆ ಮೋಕ್ಷದೊಂದಿಗೆ ಜೊತೆಯಾಗಲು ಇಷ್ಟವಿರಲಿಲ್ಲವೋ ಏನೋ..


 ೪ ವರ್ಷದ ೩-೪ ಮಕ್ಕಳು ಹಣಕೊಟ್ಟು ಶಿಕ್ಷಣ ಪಡೆಯುವ LKG ಗೆ ಮಣಭಾರದ ಚೀಲ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದರು.ಪಕ್ಕದಲ್ಲಿದ್ದ ರಸ್ತೆಗೆ ಡಾಂಬರು ಹಾಕುವವನ ಮಗುವೊಂದು ತನಗಿರುವ ಸ್ವಾತಂತ್ರ್ಯವನ್ನು ನೋಡಿ ಖುಷಿಯಿಂದ ನಗುತ್ತಾ ಮಣ್ಣಿನಲ್ಲಿ ಆಡುತ್ತಿತ್ತು.


ನಿನಗೆ ತಮ್ಮ ಬೇಕೋ ತಂಗಿ ಬೇಕೋ ಎಂದು ಪ್ರತಿ ಸಲವೂ ೩ ವರ್ಷದ ಹೆಣ್ಣು ಮಗುವಿನ ಬಳಿ ಆಸ್ಪತ್ರೆಯ ಹೊರಗೆ ನಿಂತುಕೊಂಡು ಅಪ್ಪ ಕೇಳಿದಾಗಲೂ ಮಗು ತಂಗಿ ಬೇಕು ಎಂದೇ ಹೇಳುತ್ತಿತ್ತು.ಅಪ್ಪ ಪ್ರತಿ ಸಲವೂ ತಮ್ಮ ಬೇಕೆಂದೇ ಹೇಳಬೇಕೆಂದು ಮಗುವಿಗೆ ಗದರುತ್ತಿದ್ದ.ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಲಗಿರುವ ತಾಯಿಯ ಚೀರಾಟ ಜೋರಾಗುತ್ತಿದ್ದಂತೆ ಅಪ್ಪ ಮಗುವಿಗೆ ಗದರುವುದನ್ನೂ ಜೋರು ಮಾಡಿದ್ದ.ಮಕ್ಕಳ ಕೋರಿಕೆಯನ್ನು ದೇವರು ಬೇಗ ಪೂರೈಸುತ್ತಾನೋ ಏನೋ ಕೊನೆಗೂ ಮಗುವಿಗೆ ತಂಗಿಯೇ ಹುಟ್ಟಿತು.ಮಗು ಖುಷಿಯಿಂದ ನಲಿದಾಡಿತು.ಅಪ್ಪ ಮಾತ್ರ ವಂಶೋದ್ಧಾರಕನಿಗಾಗಿ ತಾನು ಇನ್ನೆಷ್ಟು ಸಲ ಪ್ರಯತ್ನಿಸಬೇಕೋ ಎಂದು ಚಿಂತಿಸತೊಡಗಿದ.


“ಲೂಸಿಯಾ” ಸಿನಿಮಾ ನೋಡಿಕೊಂಡು ಬಂದ ಹದಿಹರೆಯದ ಹುಡುಗನೊಬ್ಬ ತನ್ನ ಕನಸಿನ ಹುಡುಗಿಯ ಜೊತೆ ಕನಸಿನಲ್ಲಿಯೇ ವಿಹರಿಸುತ್ತೇನೆಂದು ನಿದ್ರೆ ಮಾತ್ರೆ ತೆಗೆದುಕೊಂಡು ಮಲಗಿದವನು ಮೇಲೇಳಲೇ ಇಲ್ಲ.ಆತನ ಸುಂದರ ಭವಿತವ್ಯದ ಕನಸು ಕಂಡ ತಂದೆತಾಯಿಗಳಿಗೆ ಆತ ಕನಸೇ ಆಗಿ ಹೋದ..


ಅವಳು ಮಹಿಳಾ ಆಯೋಗವೊಂದರ ಅಧ್ಯಕ್ಷೆ.ಅವತ್ತು ಸಂಜೆ ನಡೆದ ಸಭೆಯಲ್ಲಿ ಅತ್ಯಾಚಾರವನ್ನು ತಡೆಗಟ್ಟಲು ಮಹಿಳೆಯರು ಏನು ಮಾಡಬೇಕು, ಯಾವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು,ಅಪಾಯಕ್ಕೆ ಸಿಕ್ಕಿಕೊಂಡಾಗ ಇತರರ ಸಹಾಯ ಯಾಚಿಸುವುದು ಹೇಗೆ ಎಂದೆಲ್ಲಾ ಒಂದು ಘಂಟೆ ಉಪನ್ಯಾಸ ನೀಡಿದಳು.ಸಭೆ ಮುಗಿದಾಗ ರಾತ್ರಿಯಾಗಿತ್ತು.ಒಂದು ಆಟೋ ಹಿಡಿದು ಮನೆಗೆ ಹೊರಟಳು.ಮರುದಿನ ನಿರ್ಜನ ಪ್ರದೇಶವೊಂದರಲ್ಲಿ ನಗ್ನವಾಗಿ ಬಿದ್ದಿದ್ದ ಅವಳ ಶವ ಸಿಕ್ಕಿತು..

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!