ಕಥೆ

ಜಾತ್ಯಾತೀತೆಯ ಜಾತಿ

ಆತ ಮತ್ತು ಆಕೆ, ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಸದಿದ್ದರೂ, ಹತ್ತು-ಮತ್ತೆರಡು ಭೇಟಿ, ಯುಗಳ ಗೀತೆಗಳ ತರುವಾಯ ರಿಜಿಸ್ಟರ್ ಮದುವೆಯಾಗುವ ಆಲೋಚನೆ ಮಾಡಿದ್ದರು. ಇಬ್ಬರಿಗೂ ಸಾಕಷ್ಟು ಶಿಕ್ಷಣ ದೊರಕಿತ್ತು; ಇಪ್ಪತ್ತೊಂದನೇ ಶತಮಾನದಲ್ಲಿ ನಿರಂತರವಾಗಿ ಬದಲಾಗುತ್ತಿರುವ ತಮ್ಮ ಸುತ್ತಣ ಜಗತ್ತಿನ ಆಗು-ಹೋಗುಗಳ ಅನುಭವ ಧಾರಾಳವಾಗಿತ್ತು. ಮೊದಮೊದಲೇನೋ ’ಸಹಜೀವನ’ ಸಿದ್ಧಾಂತವನ್ನೇ ಇಷ್ಟಪಟ್ಟು ತಾವೂ ಹಾಗೆಯೇ ಇರಬೇಕೆಂದು ಯೋಚಿಸಿದ್ದರೂ ಕೂಡ, ಮನದ ಮೂಲೆಯಲ್ಲಿ ಮದುವೆಯ ಪವಿತ್ರತೆಯ ಭಾವನೆ ಸುಪ್ತವಾಗಿತ್ತು. ಎಲ್ಲ ಪ್ರೇಮವಿವಾಹಗಳಂತೇ ಇಲ್ಲೂ ಜಾತಿಯ ಅಡ್ಡಿಯಿತ್ತು. ಮೇಲ್ಜಾತಿ-ಕೀಳ್ಜಾತಿಗಳ ನಡುವಿನ ಅಂತರ ಬಹಳವಿದ್ದುದರಿಂದ, ಸಹಜವಾಗಿಯೇ ಒಪ್ಪಿಗೆ ಸಿಗುವ ಸಾಧ್ಯತೆ ಇರಲಿಲ್ಲ; ಹಾಗಂತ ಆತ ಮತ್ತು ಆಕೆ ಯೋಚಿಸಿದ್ದರು. ಚಿಕ್ಕ ವಯಸ್ಸಿಗೇ ಉನ್ನತ ಹುದ್ದೆಯನ್ನಲಂಕರಿಸಿ, ಸಾಹಿತ್ಯದ ಹೆದ್ದಾರಿಯಲ್ಲಿ ಕೈ-ಕೈಹಿಡಿದು ನಡೆಯುತ್ತಿದ್ದ ಈ ಯುವಜೋಡಿಗಳಿಗೆ ವಿವಿಧ ಕಲಾರಂಗದ ವ್ಯಕ್ತಿವರೇಣ್ಯರುಗಳ ಪರಿಚಯವಿತ್ತು. ಎಲ್ಲರ ಸಂಪೂರ್ಣ ಸಹಕಾರ, ಅನುಮೋದನೆ ಕೂಡಾ ಮದುವೆಗೆ ಪುಷ್ಟಿಯನ್ನೀಯುತ್ತಿತ್ತು. “ಜಾತಿ-ಜಾತಿಗಳ ನಡುವಿನ ಕಂದರವನ್ನು ಇಲ್ಲವಾಗಿಸಬೇಕು. ನಮ್ಮ ಯುವಜೋಡಿಗಳು ಆ ಕೆಲಸ ಮಾಡುತ್ತಿದ್ದಾರೆ. ಆದ ಕಾರಣ ಎಲ್ಲ ಯುವಕರೂ ಈ ನಿಟ್ಟಿನಲ್ಲಿ ಕಾರ್ಯಗತರಾಗಿ ನಿಮ್ಮ ನಿಮ್ಮ ಜಾತಿಯ ಹೊರತಾದವರನ್ನು ವಿವಾಹವಾಗಿ”- ಹೆಸರುವಾಸಿ ಸಾಹಿತಿಯೊಬ್ಬರ ಭಾಷಣ ಎಲ್ಲ ಕಡೆ ವರದಿಯಾಗಿ, ಪ್ರತಿಭಟನೆಯ ಕೂಗು ಮತ್ತು ಪ್ರತಿಕೃತಿ ದಹನದ ಹೊಗೆಯ ವಾಸನೆಯೊಂದಿಗೆ ಮಾರ್ದನಿಸಿತ್ತು. “ನೀವಿಬ್ಬರೂ ಆಧುನಿಕ ನವಯುಗದ ಕ್ರಾಂತಿಯ ಕೂಸುಗಳು”- ಕ್ರಾಂತಿಯ ಸಾಗರದಲ್ಲಿ ತೇಲಾಡಿ ಹಲವು ವರ್ಷಗಳ ಹಿಂದೆಯೇ ಸಾಹಿತ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವನೆಂಬ ಬಿರುದು ಹೊತ್ತ ಸಾಹಿತಿಯ ಮಾತು. ಅಸಲಿಗೆ ಆತನ ಸಾಹಿತ್ಯ ಕೃತಿಗಳ ಹಂದರವಾದರೂ ಏನು? ಸೊಂಟದ ಕೆಳಗಿನ ವಿಷಯಗಳನ್ನೇ ಬಿಚ್ಚಿ-ಹರಡಿ ವಿಸ್ತಾರವಾಗಿ ಬರೆದದ್ದು. ಬುದ್ಧಿಜೀವಿಗಳೆಂದುಕೊಳ್ಳುವವರಿಗೆ ಅದುವೇ ಕ್ರಾಂತಿಯ ವಿಷಯವಾಗಿ ಕಂಡಿತ್ತು. ಚಪ್ಪರಿಸಿ ಓದಿದ್ದವರು, ಆತನನ್ನು ಬದಲಾವಣೆಯ ಹರಿಕಾರನ ಪಟ್ಟಕ್ಕೇರಿಸಿದ್ದರು. ಒಂದಿಷ್ಟು ಪ್ರಶಸ್ತಿಗಳ ತರುವಾಯ ಸಾಹಿತ್ಯ-ರಾಜಕೀಯದಲ್ಲಿ ಸಕ್ರಿಯನಾಗಿದ್ದನಾತ. ಇಷ್ಟಲ್ಲದೇ ಘನತೆವೆತ್ತ ಸ್ತ್ರೀಪರ ಸಂಘಟನೆಗಳ ಸಹಕಾರವೂ ಧಾರಾಳವಾಗಿ ಹರಿದುಬಂದಿತ್ತು. “ಪ್ರೀತಿಸಿ ಮದುವೆಯಾದರೆ ಸ್ತ್ರೀ ಸ್ವಾತಂತ್ರ್ಯವಿರುತ್ತದೆ. ಅದರಲ್ಲೂ ವಿಜಾತಿ ಮದುವೆಯ ಕುಟುಂಬಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಸ್ವಲ್ಪ ಹೆಚ್ಚಿಗೆಯೇ. ಆದ ಕಾರಣ ಇದು ಒಂದು ರೀತಿಯಲ್ಲಿ ಸಮಾಜಮುಖೀ ಮದುವೆ”- ಮೊನ್ನೆ ತಾನೇ ಮೂರನೇ ಗಂಡನನ್ನು ಬಿಟ್ಟುಬಂದಿದ್ದ ಮುವತ್ತರ ಮಹಿಳಾಮಣಿಯ ಅನುಭವಸಿದ್ಧ ಆಲೋಚನೆಯದು. ಚರ್ಚೆ-ಪ್ರತಿಚರ್ಚೆಗಳಿಗೆ ಕಾವೇರುತ್ತಿದ್ದಂತೆ ಮಾಧ್ಯಮಗಳಲ್ಲಿ ಸುದ್ದಿಯಾದ ಆತ ಮತ್ತು ಆಕೆಯ ಮದುವೆ, ಹಲವು ಮಹಾನುಭಾವರೆನಿಸಿಕೊಂಡವರ ಸಮ್ಮುಖದಲ್ಲಿ ನಡೆದುಹೋಯಿತು. ಅಂತೂ ಇಂತೂ ಜಾತಿಯ ಜಾಲವ್ಯವಸ್ಥೆಯಿಂದ ಹೊರಬಂದು, ನೂರೆಂಟು ಸುಂದರ ಕನಸುಗಳನ್ನು ಜತನದಿಂದ ಕಾಪಾಡಿಕೊಂಡು, ಅಮೃತಮಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಹಲವು ತಿಂಗಳ ನಂತರ ಬಿಡುಗಡೆಯಾದ ಅವರ, ’A LOVE THAT KILLED JATI’ ಎಂಬ ತಲೆಬರಹದ ಪುಸ್ತಕ, ದಾಖಲೆ ಮಾರಾಟ ಕಂಡಿತ್ತು.
* * * * *
ಎರಡು ವರ್ಷಗಳ ತರುವಾಯ ಆಕೆಯೊಂದು ಕುಡಿಜೀವವನ್ನು ಹೊರಲಾರಂಭಿಸಿದ್ದಳು. ಅಷ್ಟರಲ್ಲಾಗಲೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧಿ ಹೊಂದಿದ್ದರಿಂದ ಅವರ ಪ್ರತೀ ನಿರ್ಧಾರವೂ ಬುದ್ಧಿಜೀವಿ ವಲಯದಲ್ಲಿ ಸುದ್ದಿಮಾಡಲಾರಂಭಿಸಿತ್ತು. ಮದುವೆಯಿಂದ ಆರಂಭವಾದ ‘MARRY TO ERADICATE JATI’ ಚಳುವಳಿ ಕೂಡ ವ್ಯಾಪಕವಾಗಿ ಹರಡತೊಡಗಿತ್ತು.
“ನಮ್ಮ ಮಗುವಿಗೊಂದು ಚಂದದ ಹೆಸರಿಡಬೇಕು”- ಆತನೊಂದು ದಿನ ಆಕೆಯನ್ನಪ್ಪಿ ಹೇಳಿದ.
“ಹೌದ್ಹೌದು, ಯಾರೂ ಬಳಸಿರದ ಹೆಸರಾಗಿರಬೇಕು”- ಅವಳ ಪ್ರತ್ಯುತ್ತರ.
“ಮಗನಾದರೆ ಅಜಾತಶತ್ರು, ಮಗಳಾದರೆ ಅಮಲ. ಹೇಗಿದೆ?”
“ಅವೆರಡೂ ಹೆಸರುಗಳನ್ನು ಹಲವಾರು ಸಾರಿ ಕೇಳಿದ್ದೇನೆ, ಅಷ್ಟೇನೂ ವಿಶೇಷವಿಲ್ಲ”
“ಮತ್ತೆ? ನೀನೇನು ಯೋಚಿಸಿದ್ದೀಯಾ ಹೇಳು”- ಆತ ಕುತೂಹಲಿಯಾದ.
“’ಮನಪ್ರೇಮಿ’, ಚೆನ್ನಾಗಿದೆಯಲ್ಲವೇ?”
“ಆಂ….., ಸಾಧಾರಣ ಹೆಸರು.”
“ಇನ್ಯಾವ ಹೆಸರಿದೆ?”
“ಹೆಸರಿಗೇನು ಬರಗಾಲವೇ? ಹುಡುಕಿದಷ್ಟೂ ಸಿಗುತ್ತದೆ ಬಿಡು”
“ನಾವು ಜಾತಿವಿರೋಧಿ ಚಳುವಳಿಯ ಹಿನ್ನೆಲೆಯವರು. ಅದಕ್ಕೆ ಹೊಂದುವ ಹೆಸರಿಡಬೇಕು; ನಮ್ಮ ಪಾಪು ಯಾವುದೇ ಜಾತಿಯ ಸಂಕೇತವಾಗಬಾರದು”- ಆಕೆ ನಿರ್ಧರಿಸಿಬಿಟ್ಟಳು.
“ಹೌದ್ಹೌದು, ನೀನು ಹೇಳುವುದೂ ಸರಿಯೇ. ಮಗಳಾದರೆ ’ಜಾತ್ಯಾತೀತೆ’ ಎಂದಿದೋಣ”
“ಅದೆಂಥ ಹೆಸರು! ವಿಚಿತ್ರವಾಗಿದೆ. ಚಿಕ್ಕದಾಗಿ ಚೊಕ್ಕದಾಗಿ ’ಜಾತೀತೆ’ ಎಂದರೆ ಸಾಕು”
“ಹೆಸರು ವಿಚಿತ್ರವಾಗಿದ್ದರೇ ಜನರ ಮನಸ್ಸಿನಲ್ಲಿ ಅಚ್ಚಾಗುಳಿಯುತ್ತದೆ. ಅವೇ ಮುಂದೆ ಬೇಗನೆ ಪ್ರಸಿದ್ಧಿ ಹೊಂದುತ್ತವೆ. ಹೀಗೆ ಮಾಡೋಣ- ಮಗಳಾದರೆ ’ಜಾತ್ಯಾತೀತೆ’, ಮಗನಾದರೆ ’ಜಾತೀತ’. ಒಪ್ಪಿಗೆಯೇ ನಿನಗೆ?”- ಆತನ ಕೊನೆಯ ನಿರ್ಧಾರಕ್ಕೆ ಆಕೆಯೂ ಒಪ್ಪಿ ತಲೆಯಲ್ಲಾಡಿಸಿದಳು.
ಒಂದಾರು ತಿಂಗಳ ತರುವಾಯ ಹೆಣ್ಣುಮಗು ಭೂಮಿಗೆ ಬಂತು. ಅವರ ನಿರ್ಧಾರದಂತೆ ’ಜಾತ್ಯಾತೀತೆ’ಯೆಂದೇ ಕರೆಯಲಾಯಿತು. ಪ್ರಸಿದ್ಧ ಛಾನೆಲ್‍ ಮತ್ತು ಪತ್ರಿಕೆಗಳ ತುಂಬಾ ಹೊಸ ಕುಡಿಯ ಹೆಸರಿನ ಔಚಿತ್ಯತೆಯ ಕುರಿತಾಗಿ ಪ್ರಶಂಸೆಗಳ ಸಾಲುಸಾಲೇ ಹರಿದುಬಂತು. ದಿನ ಕಳೆಯುವುದರೊಳಗೆ ನಾಡಿನಾದ್ಯಂತ ಹತ್ತಾರು ಜಾತಿಸ್ಥ ಕೂಸುಗಳಿಗೂ ಸಹ ’ಜಾತ್ಯಾತೀತೆ’ಯೆಂದೇ ನಾಮಕರಣವಾಯಿತು.
* * * * *
ಚುನಾವಣೆಯ ದಿನಗಳವು. ಆತ ಮತ್ತು ಆಕೆಯಿಬ್ಬರೂ ತಮ್ಮ ತಮ್ಮ ಮತ ಚಲಾಯಿಸಿ ಆಗತಾನೇ ಹಿಂದಿರುಗಿದ್ದರು.
“ಯಾರಿಗೆ ಹಾಕಿದೆ ಓಟನ್ನ?”- ಆಕೆಯ ಕುತೂಹಲದ ಪ್ರಶ್ನೆ.
“ದೊಡ್ಕಳ್ಳಪ್ಪಂಗೆ; ನೀನು?”
“ನೋಡು, ಜಾತಿ ಬಿಟ್ಟು ಬಂದರೂ ಸ್ವಜಾತಿಯವರ ಮೇಲೇ ಅಭಿಮಾನ ನಿಂಗೆ. ನಾನಂತೂ ರೇಪಣ್ಣಂಗೆ ಹಾಕಿದೆನಪ್ಪ”- ಅವಳು ಸುಮ್ಮನೆ ಛೇಡಿಸಿದಳು.
“ನೀನೇನು ಕಡಿಮೆಯೇ! ಆ ರೇಪಣ್ಣ ನಿಮ್ಮ ಜಾತಿಯೇ. ನಿನಗೇನೂ ಜಾತ್ಯಾಭಿಮಾನ ಕಡಿಮೆಯಿಲ್ಲ”- ಆತನೂ ಮುಗುಳ್ನಗುತ್ತಲೇ ಹೇಳಿದ.
“ನಾ ಮತ ಚಲಾಯಿಸಿದ್ದು ಗುಣ ನೋಡಿ, ಜಾತಿಯನ್ನಲ್ಲ; ದೊಡ್ಕಳ್ಳಪ್ಪ ಅದೆಷ್ಟು ಲಂಚ ತೆಗೆದುಕೊಂಡಿಲ್ಲ. ಮಾಡಿದ ಕೊಲೆಗಳಿಗೇನು ಲೆಕ್ಕವುಂಟೇ! ನೂರಾರು ಕೋಟಿ ಆಸ್ತಿ ಮಾಡಿಟ್ಟಿದ್ದಾನೆ. ಅಂಥವ ಬೇಕಾ ನಮ್ಮ ಸಮಾಜಕ್ಕೆ?”- ಅವಳ ಮಾತು ಕಠಿಣವಾಗಿರದಿದ್ದರೂ ಮೃದುವಾಗಿಯಂತೂ ಇರಲಿಲ್ಲ.
“ಹೌದ್ಹೌದು, ರೇಪಣ್ಣನೇನು ಸಂಭಾವಿತನೇ? ದಿನಕ್ಕೆರಡು ಹೊಸ ಹುಡುಗಿ ಬೇಕವನಿಗೆ. ಅದೆಷ್ಟು ಹೆಣ್ಣುಮಕ್ಕಳ ಸಮಾಧಿ ಕಟ್ಟಿಲ್ಲ ಅಂವ! ಅಂಥ ಕಚ್ಚೆಹರುಕನೇನಾದರೂ ಮಂತ್ರಿಯಾದರೆ ಅಷ್ಟೇ, ಮುಗಿದುಹೋಯಿತು; ನಮ್ಮ ಅಕ್ಕ-ತಂಗಿಯರಿಗೆ ಉಳಿಗಾಲವಿಲ್ಲ.”
“ಹಾಗಂತ, ದರೋಡೆಕೋರನಾದರೆ ಮಂತ್ರಿಯಾಗಲು ಲಾಯಖ್ಖೇ? ಎಷ್ಟೆಂದರೂ ಸಿಕ್ಕಿದ್ದನ್ನು ತಿನ್ನುವ ಜಾತಿ. ಕೊಲೆ,ಸುಲಿಗೆ,ಲಂಚವೆಂದರೆ ಮಹಾಪಾಪವೇನೂ ಅಲ್ಲ ಬಿಡು”- ಈಗ ಕಠಿಣವಾಗತೊಡಗಿದ್ದಳು.
“ಅನಾದಿ ಕಾಲದಿಂದ ದಬ್ಬಾಳಿಕೆ ನಡೆಸಿಕೊಂಡು ಬಂದ ಜಾತಿ ನಿನ್ನದು. ಅದಕ್ಕೇ ಹೆಣ್ಣಿನ ಮಾನಾಪಹರಣವೇನೂ ದೊಡ್ಡ ವಿಷಯವಾಗಿ ಕಾಣುವುದಿಲ್ಲ ನಿನಗೆ. ಎಷ್ಟೆಂದರೂ ಒಬ್ಬ ಹೆಣ್ಣಾಗಿ ಈ ರೀತಿಯಲ್ಲಿ ಯೋಚಿಸಬಾರದಾಗಿತ್ತು”- ಆತನೂ ಸಿಡಿದೆದ್ದ.
“ನನ್ನ ಜಾತಿಯ ಬಗ್ಗೆ ಮಾತಾಡಬೇಡ ನೀನು”- ಆಕೆ ಕೈಬೆರಳು ತೋರಿಸಿ ಎಚ್ಚರಿಸಿದಳು.
“ಮತ್ತೆ, ನೀನ್ಯಾಕೆ ನನ್ನ ಜಾತಿ ಕೆದಕುತ್ತಾ ಬಂದಿದ್ದು?’
“ಜಾತಿಯಂತೆ ಜಾತಿ; ಏನೂ ಇಲ್ಲದವನಿಗೂ ಜಾತಿಯ ದುರಭಿಮಾನ”
’ಹೌದ್ಹೌದು, ನಾ ಏನೂ ಇಲ್ಲದವನೇ. ನಿಮ್ಮಂಥ ದೊಡ್ಡ ಜಾತಿಯವರ ತುಳಿತದಿಂದಲೇ ನಾವು ಏನೂ ಇಲ್ಲದವರಾಗಿದ್ದು”
“ನೋಡು, ಇದೇ ಥರ ಜಗಳವಾಗುತ್ತಿದ್ದಲ್ಲಿ ನಮ್ಮಿಬ್ಬರ ಸಂಬಂಧ ಕೋರ್ಟು ಮೆಟ್ಟಿಲು ಹತ್ತಬಹುದು. ನನಗಂತೂ ತಡೆಯಲಾಗುತ್ತಿಲ್ಲ, ಮಹಿಳಾ ರಕ್ಷಣೆ ವೇದಿಕೆಗೆ ದೂರು ಕೊಡುತ್ತೇನೆ”
“ಹ್ಹೋ ಹ್ಹೋ….., ಒಬ್ಬ ಅತ್ಯಾಚಾರಿಯನ್ನೇ ಬೆಂಬಲಿಸಿದವಳು ಮಹಿಳಾ ರಕ್ಷಣೆ ವೇದಿಕೆಗೆ ಹೋಗುತ್ತಾಳಂತೆ. ನೋಡಿದ್ದೇನೆ ನಿನ್ನಂಥವರನ್ನು. ನನಗೂ ಜಾತಿಬಂಧುಗಳಿದ್ದಾರೆ. ಜಾತಿಯ ಹೆಸರಲ್ಲಿ ಕೀಳೆಂದು ಶೋಷಣೆ ಮಾಡುತ್ತಿದ್ದುದು ನೀನೇ. ಕೋರ್ಟಿನಲ್ಲಿ ವಾದಿಸಲು ಚೆನ್ನಾಗಿಯೇ ಗೊತ್ತು”
ಅಲ್ಲಿಗವರ ಸಂಭಾಷಣೆ ಮುಗಿಯಿತು; ಸಂಬಂಧವೂ ಕೂಡ. ಸ್ತ್ರೀವಾದಿಗಳು ಮುಂದೆ ಬಂದರು. ಮದುವೆಯನ್ನು ಬೆಂಬಲಿಸಿದ್ದ ಮೂರನೇ ಗಂಡನನ್ನು ಬಿಟ್ಟ ಮುವತ್ತರವಳು, (ಕ್ಷಮಿಸಿ, ಈಗಾಕೆ ಐದನೇಯವನ ಪ್ರೀತಿಯ ಪತ್ನಿ. ನಾಲ್ಕು ಗಂಡನ್ನು ಬಿಟ್ಟವಳೆಂದರೆ ಸಂಘಟನೆಗಳು ನನ್ನ ಮೇಲೆಯೇ ಕೇಸು ಹಾಕಬಹುದು) ಎಲ್ಲ ಜಾತಿಗಳಲ್ಲೂ ಸ್ತ್ರೀಶೋಷಣೆ ನಡೆಯುತ್ತಿದೆಯೆಂದು ಕೂಗಾಡಿದಳು. ಆತನ ಪರವಾಗಿ ಸ್ವಜಾತಿ ಮುಖಂಡರು ಧರಣಿ ನೆಡೆಸಿದರು. ಸ್ವತಃ ಪತ್ನಿಯೇ ಕೀಳಾಗಿ ಕಂಡು ಹೀಗಳೆದಳೆಂದು ಬೀದಿಬೀದಿಗಳಲ್ಲಿ ಅರಚಿದರು. ಆಕೆಯ ಮೇಲೆ ಮಾನನಷ್ಟ ಮೊಕದ್ದಮೆಯೂ, ಆತನ ಮೇಲೆ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧವೂ ದಾಖಲಾಯಿತು. ಬಿಟ್ಟೆನೆಂದರೂ ಬಿಡದ ಜಾತಿ, ಅವರಿಬ್ಬರನ್ನೂ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿತು.
* * * * *
ಈ ಮೊಕದ್ದಮೆಯ ವಿಚಾರಣೆ ಹಲವಾರು ವರ್ಷಗಳಿಂದ ನಡೆದು ಬರುತ್ತಿದೆ. ಅವರ ಕ್ರಾಂತಿಯ ಆಂದೋಲನವೀಗ ತಣ್ಣಗಾಗಿದೆ. ಮಹಿಳಾ ಸಂಘಟನೆಗಳು, ಹೊಸ ಹೊಸ ಶೋಷಣೆಯ ಘಟನೆಗಳನ್ನು ಬೆನ್ನತ್ತಿ ಹೊರಟಿವೆ. ಯಾವ ಬುದ್ಧಿಜೀವಿಯೂ ಇವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಮಾಧ್ಯಮಗಳು ಹಳಸಲಾದ ಸುದ್ದಿಯನ್ನು ಕೈಬಿಟ್ಟಿವೆ. ಆತನ ಜಾತಿಬಂಧುಗಳೂ, ಆಕೆಯ ಸ್ವಜಾತಿಯವರೂ ಅವರನ್ನು ಮರೆತುಬಿಟ್ಟಿದ್ದಾರೆ. ಜಾತಿ ನಿರ್ಮೂಲನೆಯೆಂಬ ಕ್ರಾಂತಿಯ ಪಂಜನ್ನು ಸ್ವತಃ ಜಾತಿಯೆಂಬ ಪೆಡಂಭೂತ ಉಚ್ಚೆಹೊಯ್ದು ಆರಿಸಿ, ತಣ್ಣಗೆ ಸಮಾಜದುದ್ದಕ್ಕೂ ಮೈಚಾಚಿ ಮಲಗಿದೆ. ಒಂದೊಂದು ಜಾತಿಗಳಿಗೂ ಒಬ್ಬಿಬ್ಬ ನಾಯಕರು ಹುಟ್ಟಿದ್ದಾರೆ. ಜಾತ್ಯಾತೀತರೆನಿಸಿಕೊಂಡವರು ಜಾತಿಯ ಕೋಟೆಯನ್ನು ಹಲವಾರು ತರಹದ ಮುಳ್ಳು ಬೇಲಿಗಳಿಂದ ಅಭೇದ್ಯಗೊಳಿಸುತ್ತಿದ್ದಾರೆ. ಆದರೆ ಪಾಪ….., ಕೋರ್ಟಿನ ನ್ಯಾಯಾಧೀಶರಿಗಿನ್ನೂ ಒಂದು ವಿಷಯದ ನಿರ್ಣಯ ಬಗೆಹರಿದಿಲ್ಲ.
’ಜಾತ್ಯಾತೀತೆ’ಯನ್ನು ಯಾವ ಜಾತಿಗೆ ಸೇರಿಸುವುದು?
ಅಲ್ಲೂ ಸಲ್ಲದ, ಇಲ್ಲೂ ಸಲ್ಲದ ಅವಳು ಸಮಾಜದ ಎಲ್ಲ ಪ್ರೀತಿ, ಸೌಲಭ್ಯಗಳಿಂದ ಮುಕ್ತಳು. ಅಥವಾ ನೀವವಳನ್ನು ವಂಚಿತಳು ಎಂದೂ ಕರೆಯಬಹುದು.
ಹಾ….., ಹೌದು ನೋಡಿ, ಆಕೆ ’ವಂಚಿತರ’ ಜಾತಿ. ನ್ಯಾಯಾಧೀಶರ ತಲೆಯ ಮಿದುಳಿನಲ್ಲಿ ಫಕ್ಕನೆ ಹೊಸ ಜಾತಿಯ ಉಗಮವಾಯಿತು. ಕಾಲಕಳೆದಂತೆ ’ವಂಚಿತರ’ ಜಾತಿಗೂ ಕೂಡ ಸಬ್ಸಿಡಿ, ಸಾಲ ಮನ್ನಾ, ರಿಸರ್ವೇಶನ್ನುಗಳು ಬಂದವು.

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!