ಕಥೆ

ಮನದಾಳದಲ್ಲೊಂದು ಪ್ರೇಮಮೌನ…

ಚಿನ್ಮಯ್ ಅಂದು ಶಾಲಿನಿಯನ್ನು ಮಾತನಾಡಿಸುವ ಸಲುವಾಗಿಯೇ ಅವಳ ಖಾಯಂ ಬಸ್ ನಿಲ್ದಾಣದ ಬಳಿ ಕಾದಿದ್ದ. ಅವಳು ಬರಲು ಇನ್ನೂ ಅರ್ಧಘಂಟೆ ಇತ್ತು. ಯಾವುದೇ ಕಾರಣಕ್ಕೂ ಮಿಸ್ ಆಗಬಾರದು ಅಂತ ಬೇಗನೆ ಬಂದಿದ್ದ ಚಿನ್ಮಯ್. ಬಸ್ ನಿಲ್ದಾಣದ ಕೆಂಪು ಬಣ್ಣದ ಸಿಮೆಂಟ್ ಸೀಟ್ ಮೇಲೆ ಹೋಗಿ ಕುಳಿತ. ಆತ ಕೂರುವ ಮುನ್ನ “ಉಫ್…” ಎಂದು ಊದಿದ ಗಾಳಿಯಿಂದ ಸೀಟ್ ಮೇಲಿನ ಧೂಳಿನ ಕಣಗಳು ಅವನಿಗಾಗಿ ಜಾಗ ಬಿಟ್ಟುಕೊಟ್ಟವು.

ಗೋಡೆಗೆ ಆನಿಸಿ ಕೂತ ಚಿನ್ಮಯ್ ತನ್ನ ಹೊಸದಾಗಿ ಕೊಂಡ ಸ್ಮಾರ್ಟ್ ಫೋನ್ ಅನ್ನು ಕಿಸೆಯಿಂದ ಹೊರತೆಗೆದ. WhatsAppನ “13 messages from 3 conversations” ನೋಟಿಫಿಕೇಶನ್ ಸ್ಕ್ರೀನ್ ಅನ್ನು ಅಲಂಕರಿಸಿದ್ದವು. ಯಾವುದರಲ್ಲೂ ಆಸಕ್ತಿಯಿಲ್ಲದವನಂತೆ ಅವುಗಳನ್ನೆಲ್ಲ ಕ್ಲಿಯರ್ ಮಾಡಿ ಸ್ಕ್ರೀನ್ ಲಾಕ್ ಮಾಡಿ ಎರಡೂ ಅಂಗೈಗಳ ಮಧ್ಯದಲ್ಲಿಟ್ಟು ಕೂತ. ಹಾಗೆ ಒಂದು ಕ್ಷಣ ಕಣ್ಮುಚ್ಚಿದ. ಶಾಲಿನಿಯ ಒಂದೂ ಸಂದೇಶವಿರದ WhatsApp, Hike, Telegram, ಇತ್ಯಾದಿ ಇತ್ಯಾದಿಗಳೆಲ್ಲವೂ ತನ್ನ ಹೊಸ ಮೊಬೈಲ್’ನ ಸೌಕರ್ಯಗಳನ್ನು ಢಂಗುರ ಸಾರುವ ಒಂದೇ ಕಾರಣಕ್ಕೆ ಇವೆಯೇನೋ ಅನಿಸುತ್ತಿತ್ತು. ಅವು ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ. ಅದೇ ಕ್ಷಣ ಆತನ ಹಳೆಯ ಮೊಬೈಲ್’ನ ಮೆಸೇಜ್ ಸ್ಕ್ರೀನ್ ನೆನಪಿಗೆ ಬಂತು. ಅವನ ಮೊಬೈಲ್ ಕೂಡ ಶಾಲಿನಿಯ ಹೆಸರನ್ನೇ ಕನವರಿಸುತ್ತಿದೆಯೇನೋ ಎನ್ನುವಂತೆ ಆ ಸಂದೇಶಗಳ ಪಟ್ಟಿಯ ತುಂಬಾ ಅವಳದ್ದೇ ಹೆಸರಿರುತ್ತಿತ್ತು. ಆಗ ಲಭ್ಯವಿರುತ್ತಿದ್ದ ದಿನಕ್ಕೆ ನೂರು ಉಚಿತ ಸಂದೇಶಗಳ ಖೋಟಾ ಖಾಲಿಯಾಗಿ, ಪ್ರತಿ ಸಂದೇಶಕ್ಕೆ ೧.ರೂ. ನಂತೆ ವ್ಯಯಿಸಿ ಮಾತನಾಡುವ ಸಂದರ್ಭಗಳೂ ಇದ್ದವು. ಅದೇಕೋ ಏನೋ ಈ ಮೂರು ತಿಂಗಳಿಂದ ಅವರಿಬ್ಬರ ಮಧ್ಯ ಹಳೆಯ ಸಂದೇಶಗಳ ಶಬ್ಧಗಳಲ್ಲಿರುವ ಮೌನ ಮಾತ್ರ ಉಳಿದಿತ್ತು. ಆ ಮೌನದ ಕಾರಣ ತಿಳಿಯದ ಚಿನ್ಮಯ್’ಗೆ ಅರಿಯದೇ ಕಂಗಳಿಂದ ಧುಮ್ಮಿಕ್ಕುವ ಕಣ್ಣೀರನ್ನು ಮರೆಮಾಚುವ ಕಾಯಕವೇ ಖಾಯಂ ಆಗಿತ್ತು.

ಚಿನ್ಮಯ್ ಮತ್ತು ಶಾಲಿನಿ ಮೊದಲು ಭೇಟಿಯಾದದ್ದು ಕೂಡ ಬಸ್ ಸ್ಟಾಪ್’ನಲ್ಲೇ. ಅವನು ಆಗ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಅವಳು ಮೊದಲನೇ ವರ್ಷದ ಎಮ್.ಸಿ.ಎ. ಒಮ್ಮೆ ಶಾಲಿನಿ ಕ್ಲಾಸ್ ಮುಗಿಸಿ ಮನೆಗೆ ಹೊರಟು ಬಸ್ ಗಾಗಿ ಕಾಯುತ್ತಿದ್ದಳು. ಆಗ ಏದುಸಿರು ಬಿಡುತ್ತಾ ಚಿನ್ಮಯ್ ಬಸ್ ನಿಲ್ದಾಣವನ್ನು ತಲುಪುತ್ತಾನೆ. ಇದಕ್ಕೂ ಮೊದಲು ಒಮ್ಮೆ ತಾನು ಹೋಗುವ ಬಸ್ ನಲ್ಲಿ ಶಾಲಿನಿಯನ್ನು ನೋಡಿದ ನೆನಪಿಂದ ಅವಳ ಬಳಿ ಬಂದು “ಬಸ್ ಹೋಯ್ತಾ?” ಎಂದ. ಅವಳು “ಇನ್ನೂ ಇಲ್ಲ, ಈಗ ಬರಬಹುದು…ಅಲ್ನೋಡಿ ಬಸ್ ಬಂತು” ಎನ್ನುತ್ತಾ ಬಸ್’ನತ್ತ ಧಾವಿಸಿದಳು. ಚಿನ್ಮಯ್ ಕೂಡ ಹಿಂಬಾಲಿಸಿದ.

ಅದಾದ ಎರಡು ದಿನಗಳ ನಂತರ ಹಿಸ್ಟರಿ ರೀಪೀಟ್ಸ್ ಎನ್ನುವಂತೆ ಮತ್ತೆ ಅದೇ ಬಸ್ ಅಲ್ಲಿ ಅವರ ಭೇಟಿಯಾಯಿತು. ಪಕ್ಕ-ಪಕ್ಕದಲ್ಲೇ ಸೀಟ್ ಕೂಡ ಸಿಕ್ಕಿತು. ಆ ತಿಳಿನೀಲಿ ಬಣ್ಣದ, ಯಾರೋ ಚೂರಿಯಿಂದ ತಿವಿದಂತೆ ಅರ್ಧ ಬಾಯ್ತೆರೆದ ಸೀಟು, ಚಿನ್ಮಯ್ ಹಾಗೂ ಶಾಲಿನಿಯ ನಡುವೆ ಸುದೀರ್ಘ ಮಾತುಕತೆಗೆ ಮುನ್ನುಡಿ ಬರೆದಿತ್ತು. ಇಬ್ಬರ ಕಾಲೇಜ್, ಅಲ್ಲಿನ ವಿಚಿತ್ರ ನಿಯಮಗಳು, ಕೆಲವು ಸ್ಪೆಸಿಮನ್ ಲೆಕ್ಚರರ್ಸ್’ಗಳ ಕುರಿತಾಗಿ ಆರಂಭವಾದ ಮಾತುಕತೆ ಮುಂದುವರಿದು ಇಬ್ಬರ ಅಭಿರುಚಿಗಳ ವಿನಿಮಯದವರೆಗೂ ಸಾಗುತ್ತದೆ. ಅಂತೂ ಬಸ್ ಇಳಿಯುವಾಗ “ಮತ್ತೆ ಸಿಗೋಣ” ಎಂಬ ಮಾತು ಇಬ್ಬರ ಬಾಯಲ್ಲೂ ಹೊರಬಂತು.

ಇದಾದ ನಂತರ ಇಬ್ಬರೂ ಒಬ್ಬರಿಗೊಬ್ಬರು ದಿನಚರಿ ಬರೆಯುವ ಡೈರಿಗಳಾದರು. ಅವನು ತನ್ನ ಪ್ರತಿ ಚಟುವಟಿಕೆಗಳನ್ನು, ದಿನದ ಅನುಭವಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದ. ಅವಳೂ ಅಷ್ಟೇ; ಮುಂಜಾನೆ ಹೊರಡುವಾಗ ಅವಳ ಬಿಂದಿಯೊಳಗಿನ ಪುಟ್ಟ ಮಣಿಯ ಹೊಳಪಿನಿಂದ ಹಿಡಿದು, ಅವಳ ಕಾಲ್ಬೆರಳಿಗೆ ಬಳಿದ ನೈಲ್ ಪಾಲಿಶ್ ವರೆಗೂ ವರದಿ ಒಪ್ಪಿಸುತ್ತಿದ್ದಳು. ಅವಳ ನೈಲ್ ಪಾಲಿಶ್’ಗೆ ಕೂಡ ಅವನ ಇಷ್ಟದ ಬಣ್ಣಗಳೇ ಬರತೊಡಗಿದವು. ಅವನಿಗೋ ಯಾವಾಗ ಕಾಲೇಜು ತಲುಪುವೆನೋ ಎಂಬ ಆತುರ. ಅವಳು ಮನೆಯಿಂದ ಹೊರಟ ನಂತರ ಕಾಲೇಜು ತಲುಪುವವರೆಗೂ “ಎಲ್ಲಿದ್ದೀಯಾ…?” ಎಂಬ ಸಂದೇಶಗಳ ಹಾವಳಿಯೇ ಆಗುತ್ತಿತ್ತು. ಅವಳು ಉತ್ತರವಾಗಿ “ನಿನ್ನ ಹೃದಯದಲ್ಲಿ” ಅಂತ ಕಳಿಸಿ ಚಿನ್ಮಯ್’ನನ್ನು ಕಾಡುವುದುಂಟು. ಕಾಲೇಜ್ ಅಲ್ಲಿ ಕ್ಲಾಸುಗಳಿರದ ವೇಳೆಯಲ್ಲೂ ಚಿನ್ಮಯ್ ಮತ್ತು ಶಾಲಿನಿ ಬ್ಯುಸಿ ಆಗತೊಡಗಿದರು.

ಇದಾದ ಕೆಲವು ಸಮಯದ ನಂತರ ಚಿನ್ಮಯ್ ಗೆ ಪುಣೆಯ ಒಂದು ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ದೊರೆಯಿತು. ಅವನು ಪುಣೆಗೆ ಹೊರಡುವ ಮುನ್ನಾದಿನ ಇಬ್ಬರೂ ಭೇಟಿಯಾದರು. ಅಂದು ಕೂಡ ಎಂದಿನಂತೆ ಬರೀ ಮಾತು ಮಾತು ಮಾತು. “ನಿಂಗೇನು, ಇನ್ನು ಆಫೀಸ್ ಅಲ್ಲಿ ಚಂದ-ಚಂದದ ಹುಡ್ಗೀರು ಸಿಗ್ತಾರೆ” ಅಂತ ರೇಗಿಸಿದಳು. ಮರುಕ್ಷಣವೇ “ನಿನ್ನ ನೋಡದೇ ಹೇಗೋ ಇರಲಿ?” ಅಂತ ಪುಟ್ಟ ಮಗುವಿನಂತೆ ಅತ್ತಳು. ಚಿನ್ಮಯ್ ಇವೆಲ್ಲದಕ್ಕೂ ಮೌನವಾಗೇ ಇದ್ದ. ಅವನ ಬಳಿಯೂ ಉತ್ತರವಿರಲಿಲ್ಲ. ಹೋಗಲೇಬೇಕಾದದ್ದು ಅನಿವಾರ್ಯತೆ ಆಗಿತ್ತು. ಕೊನೆಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಸಮಾಧಾನಿಸಿಕೊಂಡು ಭೇಟಿಯ ಕೊನೆಯ ಹಂತಕ್ಕೆ ತಲುಪಿ ಇಬ್ಬರೂ ಬೀಳ್ಕೊಡುತ್ತಾರೆ.

ನಂತರದ ದಿನಗಳಲ್ಲಿ ಚಿನ್ಮಯ್’ನ ಹೊಸ ಬದುಕು ಆರಂಭವಾಗುತ್ತದೆ. ಶಾಲಿನಿಯ ಸಂದೇಶಗಳು ಈ ಹೊಸ ಬದುಕಿನಲ್ಲೂ ಮುಂದುವರಿಯುತ್ತವೆ. ಆದರೆ ಕೇವಲ ಮೂರು ತಿಂಗಳುಗಳವರೆಗೆ. ಅದೇಕೋ ಒಂದು ದಿನ ಇದ್ದಕ್ಕಿದ್ದಂತೆ “ನಾನು ಇನ್ಮುಂದೆ ನಿನಗೆ ಮೆಸೇಜ್ ಮಾಡಲ್ಲ, ಮಾತು ಕೂಡ ಆಡಲ್ಲ, ರೀಸನ್ ಕೇಳ್ಬೇಡ” ಎಂಬ ಸಂದೇಶ ಶಾಲಿನಿಯಿಂದ ಬರುತ್ತದೆ. ತಕ್ಷಣ ಅವಳಿಗೆ ಫೋನ್ ಮಾಡಬೇಕೆಂದೆಣಿಸಿದರೂ ಕೆಲಸದ ಒತ್ತಡ ಅವನನ್ನು ಕಟ್ಟಿ ಹಾಕುತ್ತದೆ. ಸಂಜೆ ಆಫೀಸ್ ಮುಗಿದ ಬಳಿಕ ರೂಮ್’ಗೆ ತೆರಳಿ ಶಾಲಿನಿಗೆ ಫೋನ್ ಮಾಡಿದ. “ನೀವು ಕರೆ ಮಾಡಿರುವ ಸಂಖ್ಯೆ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ” ಎಂದು ಕಸ್ಟಮರ್ ಕೇರ್’ನ ಸುಂದರ ಕಂಠವೊಂದು ಉಲಿಯಿತು. ಆ ಸಂಖ್ಯೆ ಸದ್ಯಕ್ಕೆ ಮಾತ್ರ ಅಲ್ಲ, ಶಾಶ್ವತವಾಗಿ ಸ್ವಿಚ್ ಆಫ್ ಆಗಿದೆ ಎಂಬ ಅರಿವು ಚಿನ್ಮಯ್’ಗೆ ಆಗತೊಡಗಿತ್ತು. ತಾನೇನಾದರೂ ಅವಳನ್ನು ನೋಯಿಸಿದೆನೇ ಎಂದು ಅವರಿಬ್ಬರ ಸಂದೇಶಗಳ ಹಿಸ್ಟರಿ ತೆಗೆದು ಪುನಃ ಪುನಃ ಓದಿದ, ಅವನಿಗೆ ಏನೂ ಹೊಳೆಯಲಿಲ್ಲ. ಹೋಗಿ ಕೇಳೋಣವೆಂದರೆ ಅವನಿಗೆ ಆರು ತಿಂಗಳುಗಳವರೆಗೆ ರಜೆ ಸಿಗುವುದು ಕಷ್ಟವಿತ್ತು. ಸ್ನೇಹಿತೆಯಷ್ಟೇ ಅವನ ಬದುಕು ಕೂಡ ಅವನಿಗೆ ಮುಖ್ಯವಾಗಿತ್ತು. ಹಾಗಾಗಿ ಉಳಿದ ಮೂರು ತಿಂಗಳುಗಳನ್ನು ಹಾಗೇ ಕಳೇಯಬೇಕಾಯಿತು.

ಶಾಲಿನಿಯ ಕೊನೆಯ ಸಂದೇಶ ಬಂದ ದಿನದಿಂದ ಇಂದಿನವರೆಗೂ ಅವಳೊಂದಿಗಿನ ಕ್ಷಣಗಳ ಸವಿನೆನಪುಗಳೇ ಮನಸಿನ ನೋವಿಗೆ ಮದ್ದಾದವು. ಕೆಲವೊಮ್ಮೆ ಆ ಮದ್ದೇ ನೋವನ್ನು ಉಲ್ಬಣಿಸುವಂತೆ ಮಾಡುವುದೂ ಉಂಟು. ಅಂತೂ-ಇಂತೂ ಆ ಮೂರು ತಿಂಗಳ ಅಜ್ಞಾತವಾಸದ ಬಳಿಕ ರಜೆ ಹಾಕಿ ಅವಳನ್ನು ಕಾಣಲೇಬೇಕೆಂಬ ಹಂಬಲದಲ್ಲಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾನೆ. ಇನ್ನೇನು ಐದು ನಿಮಿಷಗಳು ಬಾಕಿ ಇವೆ. ಚಿನ್ಮಯ್ ಎವೆಯಿಕ್ಕದೆ ರಸ್ತೆಯೆಡೆ ನೋಡುತ್ತಿದ್ದಾನೆ.

“ಎಸ್…ಅವಳೇ…” ಬಸ್ ನಿಲ್ದಾಣದತ್ತ ಬರುತ್ತಿದ್ದ ಶಾಲಿನಿಯನ್ನು ಕಂಡ ಚಿನ್ಮಯ್ ಮನಸ್ಸು ಪಿಸುಗುಟ್ಟಿತು. ಪುಟ್ಟ ಮಗು ಗರಿಬಿಚ್ಚಿ ನರ್ತಿಸುವ ನವಿಲನ್ನು ಬೆರಗಿನಿಂದ ನೋಡುವಂತೆ ಅವಳನ್ನೇ ನೋಡುತ್ತಿದ್ದ ಚಿನ್ಮಯ್. ಹೌದು; ಅಂದು ಜನಜಂಗುಳಿಯಲ್ಲೂ ಅವನನ್ನೇ ಹುಡುಕಾಡುತ್ತಿದ್ದ ಕಣ್ಣುಗಳು ಅವೇ ಆಗಿದ್ದವು. ಜೊತೆ ನಡೆಯುವಾಗೆಲ್ಲ, ಚಿನ್ಮಯ್’ನ ಅಂಗೈಯ ಅಪ್ಪುಗೆ ಬಯಸುತ್ತಿದ್ದ ಅವಳ ಪುಟ್ಟ ಅಂಗೈಗಳು ಇಂದು ಮೊಬೈಲ್ ಫೋನ್ ಬಳಸಿದ್ದವು. ಅವಳು ಅವನ ಭುಜಕ್ಕೊರಗಿದಾಗೆಲ್ಲ, ಮತ್ತೆ ಅವರನ್ನು ದೂರಮಾಡಬಾರದೆಂದು ಹಟತೊಟ್ಟು ಅವನ ಶರ್ಟಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ ಅವಳ ಕಿವಿಯ ಓಲೆಗಳು ಇಂದು ನಿರುದ್ಯೋಗಿಯಾಗಿದ್ದವು.

ಇತ್ತ ಚಿನ್ಮಯ್ ಎದೆಬಡಿತ ಏರುತ್ತಿರುವಂತೆ ಅತ್ತ ಶಾಲಿನಿ ಚಿನ್ಮಯ್ ಗೆ ಎದುರಾಗಿ ಇದ್ದ ಕೆಂಪು ಬಣ್ಣದ ಸೀಟಿನಲ್ಲಿ ಬಂದು ಕುಳಿತಳು. ಇತ್ತೀಚೆಗೆ ಅವಳ ಕಂಗಳಿಗೆ ಚಿನ್ಮಯ್’ನನ್ನು ಹುಡುಕುವ ಕಾಯಕ ಮರೆತದ್ದರಿಂದಲೋ ಏನೋ ಅವಳು ಇನ್ನೂ ಅವನನ್ನು ಗಮನಿಸಿರಲಿಲ್ಲ. ಹಾಗಾಗಿ ಚಿನ್ಮಯ್ ತಾನೇ ಅವಳನ್ನು ಸಮೀಪಿಸಿದ. ಆರು ತಿಂಗಳುಗಳ ನಂತರ ಆಗಿರುವ ಆಕಸ್ಮಿಕ ಭೇಟಿಯಿಂದ ಅವಳು ಚಕಿತಳಾಗಿದ್ದಳು. ಅವಳು ಆ ಕ್ಷಣ ನೀಡಿದ ಸ್ಪಂದನೆಯ ಭಾವವನ್ನು ತಕ್ಷಣ ಅರಿಯುವಲ್ಲಿ ಚಿನ್ಮಯ್ ವಿಫಲನಾದ. ಆ ವಿಫಲತೆ “ಹಾಯ್ ಶಾಲಿನಿ…” ಎಂಬ ಮಾತುಗಳಿಗೆ ಮುನ್ನುಡಿ ಬರೆಯಿತು. ಅವಳು ಕೂಡ “ಹಾಯ್..” ಎಂದಳು. ಆ “ಹಾಯ್…”ನಲ್ಲಿ ಹೇಳಲೋ ಬೇಡವೋ ಎಂಬ ಗೊಂದಲವಿತ್ತು.
“ಹೇಗಿದ್ದೀಯಾ…?” ಅಂದ ಚಿನ್ಮಯ್.
“ನಾ ಚೆನ್ನಾಗಿದ್ದೇನೆ, ನೀನು?” ಎಂದಳು.
“ನಾನು ಚೆನ್ನಾಗಿದ್ದೇನಾ ಇಲ್ವಾ ಅಂತ ನನಗೇ ಗೊತ್ತಾಗ್ತಿಲ್ಲ…” ಎಂದ. ನಗುವುದಕ್ಕೂ ಅನುಮಾನ ಪಟ್ಟವಳಂತೆ ನಕ್ಕಳು ಶಾಲಿನಿ.
“ನಾನು ನಿನ್ನ ಜೊತೆ ಸ್ವಲ್ಪ ಮಾತಾಡಬೇಕು…” ಎಂದು ಚಿನ್ಮಯ್ ಭಿನ್ನವಿಸಿದ. ಅವಳಿಂದ “ಇಲ್ಲ” ಎಂಬ ಉತ್ತರವನ್ನೇ ನಿರೀಕ್ಷಿಸುತ್ತಿದ್ದ.ಆದರೆ ಹೊಸತೇನೋ ನಡೆಯುತ್ತಿದೆಯೇನೋ ಎಂಬಂತೆ ” ಸರಿ, ಬಾ ದೇವಸ್ಥಾನಕ್ಕೆ ಹೋಗೋಣ” ಎಂದು ಎದ್ದಳು ಶಾಲಿನಿ. ಚಿನ್ಮಯ್ ಕೂಡಲೇ ತನ್ನ ಬ್ಯಾಗ್ ಎತ್ತಿಕೊಂಡು ಹೊರಟ.

ಇಬ್ಬರೂ ದೇವಸ್ಥಾನವನ್ನು ಹೊಕ್ಕರು. ಇಬ್ಬರ ನಡುವಿನ ಮೌನವನ್ನು ಮುರಿಯಲೋ ಎಂಬಂತೆ ಘಂಟೆಯೊಂದು ಮೊಳಗಿ ಶಬ್ದದಲೆಗಳನ್ನು ಮನದ ದಡಕ್ಕೆ ಬಡಿಯುವಂತೆ ಮಾಡಿತು. ದೇವರಿಗೆ ಒಂದು ಪ್ರದಕ್ಷಿಣೆ ಹಾಕಿದ ಚಿನ್ಮಯ್ ಹಾಗೂ ಶಾಲಿನಿ ಅಲ್ಲೇ ಇದ್ದ ಚಾವಡಿಯ ಮೇಲೆ ಕುಳಿತರು. ಇಬ್ಬರೂ ಇನ್ನೂ ಮೌನವಾಗೇ ಇದ್ದರು. ಇಬ್ಬರ ತುಟಿಯ ದ್ವಾರದ ಕೀಲಿಕೈಗಳು ಮನದ ಯಾವುದೋ ಮೂಲೆಯಲ್ಲಿ ಕಳೆದುಹೋಗಿತ್ತು. ಹಾಗಾಗಿ ಮಾತುಗಳಿಗೆ ಹೊರಬರುವ ಇಷ್ಟವಿದ್ದರೂ ಹೊರಬರಲಾಗದೇ ನರಳುತ್ತಿದ್ದವು. ಅವನೇ ಅವಳನ್ನು ಬರಹೇಳಿ ಈಗ ಸುಮ್ಮನೆ ಕುಳಿತಿದ್ದರೂ ಸಹ ಆಕೆ ಕಾರಣವನ್ನು ಕೇಳಲಿಲ್ಲ. ಬಹುಷಃ ಅವಳಿಗೂ ಆ ಮೌನದ ಸಲಿಗೆ ಹಿಡಿಸಿತ್ತು ಅನಿಸುತ್ತದೆ. ಹೀಗೆ ಸ್ವಲ್ಪ ಹೊತ್ತಿನ ನಂತರ ಶಾಲಿನಿ ಇದ್ದಕ್ಕಿದ್ದಂತೆ “ಐ ಲವ್ ಯೂ ಚಿನ್ಮಯ್” ಎಂದು ಅವನ ಭುಜಕ್ಕೊರಗಿದಳು. ಬೆಳದಿಂಗಳನ್ನು ಹುಡುಕುತ್ತಾ ಬಂದ ಚಿನ್ಮಯ್ ಗೆ ಶಶಿಯೇ ಸಿಕ್ಕಂತಾಯಿತು. “ಐ ಲವ್ ಯೂ ಟೂ ಶಾಲಿನಿ” ಎಂಬ ಮಾತುಗಳಲ್ಲದೇ ಬೇರೇನೂ ಅವನ ಬಾಯಿಂದ ಹೊರಬರಲಿಲ್ಲ. ಶಾಲಿನಿಯ ಆ ಮುಗ್ಧ ಕಣ್ಣುಗಳಲ್ಲಿ ಮತ್ತದೇ ಪ್ರೀತಿಯ ಹನಿಗಳು ಜನ್ಮ ತಾಳಿದ್ದವು. ಅವಳ ಸನಿಹದ ಸಲಿಗೆಯಲ್ಲಿ ಈ ಮೂರು ತಿಂಗಳುಗಳಲ್ಲಾದ ಯಾವುದೇ ಬದಲಾವಣೆಗಳು ಅವನಿಗೆ ಕಾಣಿಸಲಿಲ್ಲ. ಚಿನ್ಮಯ್ ಕೇಳಲೇಬೇಕೆಂದು ಎಣಿಸಿದ ನೂರು ಪ್ರಶ್ನೆಗಳ ಮೋಡಗಳು ಶಾಲಿನಿಯ ಉಸಿರಿನ ಗಾಳಿಗೆ ಎಲ್ಲೋ ಹಾರಿ ಹೋದಂತಿತ್ತು. ಅವಳ ಝುಮುಕಿಗೆ ಮತ್ತೆ ಉದ್ಯೋಗ ದೊರಕಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!