ಕಥೆ

ಅಭಿನಯ

“ಒಂದು ಕೆ.ಜಿ. ಟೊಮ್ಯಾಟೊ ಕೊಡಪ್ಪಾ” ಆತ ತರಕಾರಿಯವನಿಗೆ ಹೇಳುತ್ತಿದ್ದಂತೆ ಯಾರೋ ಹಿಂದಿನಿಂದ “ಹೋಯ್” ಅಂದದ್ದು ಕೇಳಿಸಿತು. ಒಬ್ಬ ಸಾಧಾರಣ ಮೈಕಟ್ಟಿನ ವ್ಯಕ್ತಿ ದಪ್ಪ ಗಾಜುಗಳ ಹಿಂದಿನಿಂದ ತೀಕ್ಷ್ಣವಾಗಿ ನೋಡುತ್ತಾ ಹತ್ತಿರ ಬರುತ್ತಿದ್ದುದು ಕಾಣಿಸಿತು. “ನೀನೇ ಅಲ್ಲವಾ ಅದು,ಹೆಂಡತಿಗೆ ದಿನಾ ಹೊಡ್ಯೋನು? ಹೆಣ್ ಮಕ್ಳ ಕಣ್ಣಲ್ಲಿ ನೀರ್ ತರಿಸ್ತೀಯಾ, ನರಕಕ್ಕೆ ಹೋಗ್ತೀಯಾ ಬೋ ಮಗನೆ” ಹೆಚ್ಚೂ ಕಮ್ಮಿ ಚೀರಿದಂತೆ ಮಾತನಾಡುತ್ತಿದ್ದ. ಆತನಿಗೆ ಪರಿಸ್ಥಿತಿಯ ಅರಿವಾಗುತ್ತಿದ್ದಂತೆ ಕೆನ್ನೆಗೊಂದು ಬಲವಾದ ಏಟು ಬಿದ್ದೂ ಆಗಿತ್ತು. ಆದರೂ ಆತ ಕೆನ್ನೆ ಸವರಿಕೊಳ್ಳುತ್ತಾ ನಕ್ಕ. ಒಬ್ಬ ಕಲಾವಿದನಿಗೆ ನಟನೆಗೆ ಸಿಗುವ ಅತ್ಯುನ್ನತ ಪ್ರಶಸ್ತಿ ಇಂದವನಿಗೆ ಸಿಕ್ಕಿತ್ತು.

ಸಂಜಯ್ ಐದು ವರ್ಷಗಳ ಹಿಂದೆ ಕಿರುತೆರೆಗೆ ಕಾಲಿಟ್ಟಿದ್ದು ಅನಿರೀಕ್ಷಿತವಾಗಿ. ಗೆಳೆಯನೊಬ್ಬನ ಮದುವೆಯಲ್ಲಿ ಧಾರಾವಾಹಿ ನಿರ್ದೇಶಕರೊಬ್ಬರು ಸಿಕ್ಕು ಅವರ ಧಾರಾವಾಹಿಯ ಮುಖ್ಯ ಪಾತ್ರವನ್ನು ಸಂಜಯನಿಗೆ ವಹಿಸಿದ್ದು ಅಲ್ಲಿಯವರೆಗೆ ನಿರುದ್ಯೋಗಿಯಾಗಿ ಓಡಾಡುತ್ತಿದ್ದ ಸಂಜಯನ ದಿಕ್ಕು ಬದಲಾಯಿಸಿತೆನ್ನಬಹುದು. ಮೊದಮೊದಲು ನಾಯಕನ ಪಾತ್ರ ವಹಿಸಿಕೊಳ್ಳುತ್ತಿದ್ದ ಸಂಜಯ್’ಗೆ ದಿನಗಳೆದಂತೆ ಖಳನಾಯಕನ ಪಾತ್ರಕ್ಕೆ ಆಫ಼ರ್’ಗಳು ಬರತೊಡಗಿದವು. ಅವನ ಗಟ್ಟಿಮುಟ್ಟಾದ ಮೈಕಟ್ಟು ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದುದೂ ಹೌದು. ಸಂಜಯನೂ ಅಂಥ ಪಾತ್ರಪೋಷಣೆಗೆ ಸೈ ಅಂದುಬಿಟ್ಟ. ನಾಯಕನ ಪಾತ್ರಕ್ಕಿಂತಲೂ ಖಳನಾಯಕನ ಪಾತ್ರ ಹೆಚ್ಚು ರೋಮಾಂಚನಕಾರಿಯೆಂದು ಮನಗಂಡ ಸಂಜಯ್ ಬರಬರುತ್ತಾ ಕೇವಲ ಖಳನಾಯಕ ಪಾತ್ರಗಳನ್ನು ಒಪ್ಪಿಕೊಳ್ಳತೊಡಗಿದ. ರಶ್ಮಿಯ ಪರಿಚಯವಾಗಿದ್ದು ಇಂಥದ್ದೇ ಧಾರಾವಾಹಿಯೊಂದರಲ್ಲಿ. ಸಂಜಯ್ ವಿಲನ್ ಆಗಿದ್ದ ’ಅನುಪಲ್ಲವಿ’ ಧಾರಾವಾಹಿಯಲ್ಲಿ ಅಳುಮುಂಜಿ ಅನುವಿನ ಪಾತ್ರ ರಶ್ಮಿಯದ್ದು. ಸಂಪ್ರದಾಯಸ್ಥ ಕುಟುಂಬದ ಅನುವನ್ನು ಕಾಲೇಜು ದಾರಿಯಲ್ಲಿ ತಡೆದು ಗೋಳು ಹೊಯ್ದುಕೊಳ್ಳುವ ಖಳನಾಯಕನಾಗಿ ಸಂಜಯ್ ಮಿಂಚುತ್ತಿದ್ದ. ಆದರೂ ರಶ್ಮಿಯ ಅಭಿನಯ ಅದೆಷ್ಟು ಅದ್ಭುತವಾಗಿತ್ತೆಂದರೆ ಕೆಲವೊಮ್ಮೆ ಅದು ಕೇವಲ ಅಭಿನಯವೆಂಬುದನ್ನೂ ಮರೆತು,ಅವಳ ಬಗ್ಗೆ ಮರುಕವುಂಟಾಗಿ ದೀನನಾಗಿಬಿಡುತ್ತಿದ್ದ. ಅವಳ ಕಣ್ಣೀರೊರೆಸಿ ಸಮಾಧಾನಿಸುವ ಮನಸ್ಸಾಗುತ್ತಿತ್ತವನಿಗೆ. ಅಭಿನಯದಿಂದಲೇ ರಶ್ಮಿ ಅವನ ಮನಸ್ಸನ್ನು ಕದ್ದುಬಿಟ್ಟಿದ್ದಳು. ಧಾರಾವಾಹಿಯ ಅನು ಅವನಿಗೆ ಸಿಗಲಿಲ್ಲ,ರಶ್ಮಿ ಸಿಕ್ಕಿದ್ದಳು.

ಸಂತೆಯಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುತ್ತಾ ಮೆಲುನಗುತ್ತಾ ಬರುತ್ತಿದ್ದ ಸಂಜಯನನ್ನು ಬಾಗಿಲಿನಲ್ಲೇ ಎದುರುಗೊಂಡಳು ರಶ್ಮಿ. “ಮುದುಕಿ ಕಾಲ್ ಮಾಡಿತ್ತು ಇವತ್ತು. ಭಾನುವಾರ ವೃದ್ಧಾಶ್ರಮದಲ್ಲೇನೋ ಕಾರ್ಯಕ್ರಮವಿದೆಯಂತೆ ,ಬರಬೇಕಂತೆ. ನೀವು ಒಮ್ಮೆ ಹೋಗಿ ಬನ್ನಿ. ಒಳ್ಳೆ ಕಾಟ ಆಯ್ತು ಮುದ್ಕೀದು” ರಶ್ಮಿ ಮುಖ ಗಂಟಿಕ್ಕಿಕೊಂಡು ಹೇಳುತ್ತಿದ್ದಂತೆ ಸಂಜಯ್ ತನ್ನಮ್ಮನನ್ನು ನೆನೆದು ಮನದಲ್ಲೇ ರೋಧಿಸತೊಡಗಿದ.

Facebook ಕಾಮೆಂಟ್ಸ್

ಲೇಖಕರ ಕುರಿತು

Deepthi Delampady

Currently studying Information Science and Engineering (6th semester) at SJCE, Mysore.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!