ಸಿನಿಮಾ - ಕ್ರೀಡೆ

ಬಹಳ ಇಷ್ಟವಾಗುವ ‘ಕೆಂಡಸಂಪಿಗೆ’ಯ ಪರಿಮಳ

****/5

ಕನ್ನಡ ಚಿತ್ರಗಳು ಸರಿಯಿಲ್ಲ ಎಂದು ದೂರುವವರಿಗೆ ಉತ್ತರ ನೀಡಲು ಮತ್ತೊಂದು ಉತ್ತಮ ಕನ್ನಡ ಸಿನಿಮಾ ಬಂದಿದೆ.

ಹೌದು ರಂಗಿತರಂಗ ಮತ್ತು ಉಪ್ಪಿ 2 ಚಿತ್ರಗಳ ನಂತರ ಮತ್ತೊಂದು ಉತ್ತಮ ಚಿತ್ರ ಬಂದಿದೆ ಅದೇ ‘ಕೆಂಡಸಂಪಿಗೆ’.. ಸಾಕಷ್ಟು ಸೋಲುಗಳಿಂದ ಸೊರಗಿದ್ದ ಸೂರಿ ಈ ಚಿತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

ಒಬ್ಬ ಕೆಟ್ಟ ಪೋಲಿಸ್ ಹೇಗೆ ಸಮಾಜವನ್ನು ಹಾಳು ಮಾಡಬಲ್ಲ ಹಾಗೆಯೇ ಒಳ್ಳೆಯ ಪೋಲಿಸ್ ಒಬ್ಬ ನಿರಪರಾಧಿಯನ್ನು ರಕ್ಷಿಸಬಲ್ಲ ಎಂಬುದನ್ನು ತೋರಿಸುತ್ತದೆ ಈ ಸಿನಿಮಾ.

ಈ ಚಿತ್ರದ ಕತೆ ತುಂಬಾ ಸರಳ. ಚಿತ್ರದ ನಾಯಕ ರವೀಂದ್ರ (ವಿಕ್ಕಿ) ಕಡು ಬಡವ. ನಾಯಕಿ ಗೌರಿ (ಮಾನ್ವಿತಾ) ಆಗರ್ಭ ಶ್ರೀಮಂತ ಮಹಿಳೆ ಶಕೀಲಾ ಶೆಟ್ಟಿಯ (ಚಂದ್ರಿಕಾ) ಮಗಳು. ಈ ಆಸ್ತಿ ಅಂತಸ್ತು ಮೀರಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಸಹಜವಾಗಿ ಇದನ್ನು ಸಹಿಸದ ಗೌರಿಯ ತಾಯಿ ರವೀಂದ್ರನ್ನು ಗೌರಿಯಿಂದ ದೂರ ಮಾಡುವ ಕೆಲಸವನ್ನು  ಪೋಲಿಸ್ ಅಧಿಕಾರಿ ಸೂರ್ಯಕಾಂತ್ (ಪ್ರಕಾಶ್ ಬೆಳವಾಡಿ) ಗೆ ವಹಿಸುತ್ತಾಳೆ. ಭ್ರಷ್ಟ ಅಧಿಕಾರಿ ಸೂರ್ಯಕಾಂತ್ ರವೀಂದ್ರ ನ ಮೇಲೆ ಸುಳ್ಳು ಕೇಸ್ ಗಳನ್ನು ದಾಖಲಿಸುತ್ತಾನೆ. ರವೀಂದ್ರ ಪೋಲಿಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಳ್ಳಲು ಗೌರಿಯ ಸಹಾಯ ಕೇಳುತ್ತಾನೆ. ಗೌರಿ ಮತ್ತು ರವೀಂದ್ರ ಪ್ರೀತಿಯನ್ನು ಪಡೆಯಲು ಪರಾರಿಯಾಗುತ್ತಾರೆ. ಪೋಲಿಸರು ಇವರನ್ನು ಹಿಂಬಾಲಿಸುತ್ತಾರೆ. ಕೊನೆಗೆ ಏನಾಗುತ್ತದೆ, ರವೀಂದ್ರ ಮತ್ತು ಗೌರಿಯ ಪ್ರೀತಿ ಗೆಲವು ಸಾಧಿಸುತ್ತದೆಯಾ? ಎಂಬುದನ್ನು ಪರದೆಯ ಮೇಲೆ ನೋಡಿದರೆ ಚೆನ್ನ.

ಬಿಗಿ ನಿರೂಪಣೆ ಚಿತ್ರದ ಪ್ಲಸ್ ಪಾಯಿಂಟ್ ಕೊನೆ ಕ್ಷಣದವರೆಗೂ ಕುತೂಹಲ ಕಾಯ್ಡುಕೊಂಡು ಹೋಗುತ್ತದೆ. ಸತ್ಯ ಹೆಗಡೆಯವರ ಛಾಯಾಗ್ರಹಣ ಅದ್ಭುತವಾಗಿದೆ. ಎಲ್ಲಾ ಹಾಡುಗಳು ಕೇಳಲು ಇಂಪಾಗಿವೆ. ನೆನಪೆ ನಿತ್ಯ ಮಲ್ಲಿಗೆ, ಮರೆಯದೇ ಕ್ಷಮಿಸು ಹಾಡುಗಳು ಚಿತ್ರ ಮುಗಿದ ನಂತರವೂ ನಮ್ಮ ಮನದಲ್ಲಿ ಉಳಿಯುತ್ತವೆ. ಸರಳ ಸಂಭಾಷಣೆ ಚಿತ್ರದಲ್ಲಿದೆ. ಹರಿಕೃಷ್ಣರ ಸಂಗೀತ ಸಂಯೋಜನೆ, ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವಾಗ ಹಾಡುಗಳು ಚೆಂದವಿಲ್ಲದೇ ಇರುವುದು ಅತಿ ವಿರಳ.

ಹೊಸ ಹಕ್ಕಿಗಳಾದ ವಿಕ್ಕಿ ಮತ್ತು ಮಾನ್ವಿತಾ ಬಹಳ ಇಷ್ಟವಾಗುತ್ತಾರೆ. ಇವರದ್ದು ಅತ್ಯುತ್ತಮ ನಟನೆ. ಈ ಇಬ್ಬರಿಗೂ ಸಾಕಷ್ಟು ಭವಿಷ್ಯವಿದೆ ಎಂಬುದನ್ನು ತಮ್ಮ ನಟನೆಯಿಂದ ನಿರೂಪಿಸಿದ್ದಾರೆ. ನಟ ರಾಜೇಶ್ ನಟರಂಗ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ನಟನೆ ಬಹಳ ಇಷ್ಟವಾಗುತ್ತದೆ. ಪ್ರಕಾಶ್ ಬೆಳವಾಡಿ, ಚಂದ್ರಿಕಾ ಮತ್ತು ಶೀತಲ್ ಶೆಟ್ಟಿಯವರ ನಟನೆಯೂ ಚೆನ್ನಾಗಿದೆ.

ಹೊಸಬಗೆಯ ಕತೆಯಿಟ್ಟುಕೊಂಡು ಹೊಸಬರಿಗೆ ಅವಕಾಶಕೊಟ್ಟು ಸೂರಿ ಈ ಚಿತ್ರದಲ್ಲಿ ಗೆದ್ದಿದ್ದಾರೆ. ಈ ಚಿತ್ರದ ಮುಂದಿನ ಭಾಗವನ್ನು ನೋಡುವ ಕೌತುಕ ಚಿತ್ರ ನೋಡಿದ ಪ್ರತಿಯೊಬ್ಬರಲ್ಲೂ ಮೂಡುತ್ತದೆ.
ಒಳ್ಳೆಯ ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ಆ ಸಾಲಿಗೆ ಕೆಂಡಸಂಪಿಗೆ ಸೇರುತ್ತದೆ. ಮರೆಯದೆ ಕೆಂಡಸಂಪಿಗೆ ಚಿತ್ರವನ್ನು ಕಣ್ತುಂಬಿಕೊಳ್ಳಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!