“Hello!” ಫೇಸ್ಬುಕ್ಕಿನಲ್ಲಿ ಅಪರಿಚಿತ ಪ್ರೊಫೈಲ್ ನಿಂದ ಮೆಸೇಜ್ ಬಂತು. ಸಾಮಾನ್ಯವಾಗಿ ನಾನು ಅಪರಿಚಿತ ವ್ಯಕ್ತಿಗಳಿಗೆ ಉತ್ತರಿಸುವುದಿಲ್ಲವಾದ್ದರಿಂದ ಪ್ರತಿಕ್ರಿಯಿಸಲು ಹೋಗಲಿಲ್ಲ. ಎರಡುನಿಮಿಷಗಳ ಬಳಿಕ “ಇವತ್ತು ನಿನ್ನನ್ನು ಬಸ್ ಸ್ಟಾಂಡ್ ನಲ್ಲಿ ನೋಡಿದೆ ” ಎಂಬ ಮೆಸೇಜ್. ಒಮ್ಮೆ ಗಾಬರಿಯಾದರೂ ಸಾವರಿಸಿಕೊಂಡು “ಯಾರು ನೀವು?” ಎಂದೆ. “ನಾನು ನೀಲಾ ಕಣೇ,ಶಾರದಾಹೈಸ್ಕೂಲ್ “,ಉತ್ತರ ಬಂತು. ನಿರುಮ್ಮಳವೆನಿಸಿದರೂ ಸಂದೇಹ ಬಂದು, “ಇದೇನು ಯಾರದ್ದೋ ಪ್ರೊಫೈಲ್ ಪಿಕ್ಚರ್ ಇದೆ,ಹೆಸರು M N Reddy ಅಂತ ಇದೆಯಲ್ಲಾ? ” ,ಕೇಳಿದೆ. “ಓಹ್, ಇದು ನನ್ನಗಂಡನ ಪ್ರೊಫೈಲ್ ಕಣೇ” ಎಂಬ ಉತ್ತರ ಬಂತು.ಮುಂದೆ ಐದು ನಿಮಿಷ ಚಾಟ್ ಮಾಡಿದ ಮೇಲೆ ಇದು ಹೈಸ್ಕೂಲ್ ಫ್ರೆಂಡ್ ನೀಲಾಳೇ ಎಂದು ಖಾತ್ರಿಯಾಯಿತು.ನೀಲಾ ಹಾಗೂ ನಾನು ಒಂದೇಬೆಂಚಿನಲ್ಲಿ ಕೂರುತ್ತಿದ್ದವರು.ವರ್ಷವೆಷ್ಟಾಯಿತು,
ಮೆಸೇಜ್ ಪಾಪ್ ಅಪ್ ಸೌಂಡಿಗೆ ವಾಸ್ತವಕ್ಕಿಳಿದೆ. “ನಿನಗೆ ಇನ್ನೂ ಮದುವೆಯಾಗಿಲ್ಲವೇ?” ಎಂಬ ಪ್ರಶ್ನೆಯಿತ್ತು. “ಅಂಥ ಬಂಧನದಲ್ಲಿ ನನಗೆ ನಂಬಿಕೆಯಿಲ್ಲ.” ಎಂದು ನಿರ್ಲಿಪ್ತ ಭಾವದಿಂದಲೇಉತ್ತರಿಸಿದೆ. “ಯಾಕೋ ನೀನದನ್ನು ಗೃಹಬಂಧನಕ್ಕೆ ಹೋಲಿಸಿರುವಂತೆ ಕಾಣುತ್ತಿದೆಯಲ್ಲಾ?” ನೀಲಾ ನಕ್ಕಳು. “ಇಲ್ಲಪ್ಪಾ,ಹಾಗಲ್ಲ. ಮದುವೆ ಮಾಡಿಕೊಳ್ಳಲೇಬೇಕೆಂಬ ಆಸೆಯೂ ಅನಿವಾರ್ಯತೆಯೂನನಗಿರಲಿಲ್ಲ.” ಎಂದೆ. “ಹುಚ್ಚಿ,ಜೀವನದಲ್ಲಿ ಎಂಥ ಒಳ್ಳೆಯ ‘element ‘ ಅನ್ನು ನೀನು ಕಳೆದುಕೊಳ್ಳುತ್ತಿದ್ದೀ ನಿನಗೆ ಗೊತ್ತಿದೆಯೇ?” ನೀಲಾ ಎಂದಾಗ, “ಓಹೋ,ರಾಣಿಯವ್ರು ಫುಲ್ ಜ಼ೂಮ್’ನಲ್ಲಿ ಇದ್ದಂತೆ ಕಾಣುತ್ತಿದೆಯಲ್ಲಾ?” ಎಂದು ಛೇಡಿಸಿದೆ. “ಹಹ್ಹಹ್ಹಾ, ಹೇಳಿಕೊಂಡರೆ ಎಲ್ಲಿ ದೃಷ್ಟಿಯಾದೀತೇನೋ ಎಂಬ ಭಯ.” ಎಂದಳು. “ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.ಅವರಪ್ರೋತ್ಸಾಹವೇ ನನಗೆ ಎಲ್ಲದಕ್ಕೂ ಶ್ರೀರಕ್ಷೆ. ಇವತ್ತು ಮಹಿಳಾ ಮಂಡಲ,ಸಾಹಿತ್ಯ ವಲಯಗಳಲ್ಲಿ ನಾನು ಸಕ್ರಿಯವಾಗಿರುವುದಕ್ಕೆ ಅವರೇ ಕಾರಣ ” ಎಂದಾಗ ಮನದ ಮೂಲೆಯಲ್ಲಿ ಸಣ್ಣದಾಗಿಅಸೂಯೆಯ ಕಿಡಿ ಹೊತ್ತಿದಂತಾಯಿತು. “ಯಾಕೆ,ಗಂಡನ ಪ್ರೊಫೈಲ್ ನಿಂದ ಚಾಟ್ ಮಾಡುತ್ತಿರುವುದಕ್ಕೆ ಇಷ್ಟೆಲ್ಲಾ ಹೊಗಳಿಕೆಯೇ?” ಛೇಡಿಸುತ್ತಾ ಕೇಳಿದೆ. ಅವಳದಕ್ಕೆ, ” ಇಲ್ಲಪ್ಪಾ ಅವರು ಫೇಸ್ಬುಕ್use ಮಾಡುವುದೇ ಇಲ್ಲ.ಅವರ ಪ್ರೊಫೈಲ್ ನಿಂದ ನಾನೇ ಮಾಡ್ತೀನಿ ” ಅಂದಳು. “ಸೂಪರ್ ಕಣೇ,ಹೀಗೇ ಖುಷಿಯಾಗಿರು.ಮಕ್ಕಳು? ” ಎಂದು ಕೇಳಿದೆ.”ಇಲ್ಲ ” ಅಂದಷ್ಟೇ ರಿಪ್ಲೈ ಬಂದಾಗಪಿಚ್ಚೆನಿಸಿತು. ಮತ್ತೆ ಸ್ವಲ್ಪ ಹೊತ್ತು ಮಾತನಾಡಿ ಲಾಗೌಟ್ ಆದೆ.
ಸಂಬಂಧಿಕರೊಬ್ಬರ ಮದುವೆಯಲ್ಲಿ ಮಾಳವಿಕಾ ಸಿಕ್ಕಾಗ ಆಶ್ಚರ್ಯ ಖುಷಿ ಎರಡೂ ಒಟ್ಟೊಟ್ಟಿಗೇ ಆದವು.ಮಾಳವಿಕಾ ಕೂಡಾ ನೀಲಾಳಂತೆ ಹೈಸ್ಕೂಲ್ ಸಹಪಾಠಿ. ಅವಳಿಗೆ ನೀಲಾ ಫೇಸ್ಬುಕ್ಕಿನಲ್ಲಿಸಿಕ್ಕಿದುದನ್ನು ಹೇಳಿದೆ.”ಪಾಪ,ಅವಳ ಲೈಫ್ ಟ್ರ್ಯಾಜಿಡಿ ಕಣೇ” ಎಂದಳು. ನನಗೊಮ್ಮೆ ಬೆಚ್ಚಿಬೀಳುವಂತಾಯಿತು. “ಅವಳ ಗಂಡ ಪಾಪ,ಮದುವೆಯಾಗಿ ಒಂದೇ ತಿಂಗಳಿಗೆ ತೀರಿಕೊಂಡನಂತೆ,ಒಬ್ಬಂಟಿಜೀವನ ಅವಳದು” ಎಂದಾಗ ನನಗೆ ಏನುತ್ತರಿಸಲೂ ತೋಚದೆ, “ನಾನಿನ್ನು ಬರ್ತೀನಿ.ಫೇಸ್ಬುಕ್ಕಿನಲ್ಲಿ ಮಾತಾಡೋಣ.” ಎಂದೆ.