ಕಥೆ

ಜೀವನ್ಮುಕ್ತಿ

ಸಿಂಧೂ ಎಂದಿನಂತೆ ತರಕಾರಿಗಳನ್ನು ತರಲು ಪೇಟೆಗೆ ಹೋಗಿದ್ದಳು. ತಿರುಗಿ ಬರುವಾಗ ಇದ್ದಕ್ಕಿದ್ದಂತೆ ಮಳೆ ಸುರಿಯತೊಡಗಿತು. ಕೊಡೆಯನ್ನು ಬಿಡಿಸುವ ಮುನ್ನವೇ, ಒಂದಿಷ್ಟು ಮಳೆಹನಿಗಳು ಅವಳನ್ನು ಸ್ಪರ್ಶಿಸಿದ್ದವು. ಅದೇಕೋ ಸಿಂಧುವಿಗೆ ಆ ಸ್ಪರ್ಶ ಹಿತ ನೀಡಿರಬೇಕು. ಅವಳು ಹಾಗೆಯೇ ನೆನೆಯುತ್ತಾ ನಿಂತುಬಿಟ್ಟಳು. ಅವಳ ಒಡಲ ಧಗೆ ಅಷ್ಟರ ಮಟ್ಟಿಗಿತ್ತು. ಬರೀ ನೋವುಗಳ ಉರಿಯಲ್ಲಿ ಬೇಯುತ್ತಿದ್ದ ಸಿಂಧು, ಬೇಸಿಗೆಯಲ್ಲಿ ನೀರಿಗಾಗಿ ಹಾತೊರೆಯುವ ಪಕ್ಷಿಯಂತಾಗಿದ್ದಳು. ಹಾಗಾಗಿ ತನ್ನನ್ನೇ ತಾನು ಮರೆತು ನೆನೆದಳು. ಎಲ್ಲಿ ನಿಂತಿದ್ದೇನೆ ಎಂಬ ಪರಿವಿರದೆ ನೆನೆದಳು. ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ ನಗುನಗುತ ಬದುಕಿದ ಹುಡುಗಿ ಆಕೆ. ಆದರೆ ಈಗ ಕಣ್ಣೀರು ಕಾಣಿಸದೆಂಬ ಧೈರ್ಯದಿಂದಲೋ ಏನೋ, ಜೋರಾಗಿ ಅತ್ತಳು. ಅವಳ ಕಣ್ಣೀರನ್ನು ಇಷ್ಟು ದಿನ ಕಾಣದ ಹೊರಜಗತ್ತು ಇಂದು ಕೂಡ ಮಳೆಹನಿಗಳೊಂದಿಗೆ ಬೆರೆತ ಅದನ್ನು ಕಾಣುವಲ್ಲಿ ವಿಫಲವಾಯಿತು. ಅಲ್ಲೇ ಇದ್ದ ಮರಕ್ಕೆ ದೇಹವನ್ನಾನಿಸಿ ಕಣ್ಮುಚ್ಚಿ ನಿಂತಳು. ಅವಳ ಜೀವನದ ಧಾರಾವಾಹಿಯ ಒಂದೊಂದೇ ಕಂತುಗಳು ಕಣ್ಮುಂದೆ ಪ್ರಸಾರವಾಗತೊಡಗಿದವು.

ಸಿಂಧು ಚಿಕ್ಕಂದಿನಿಂದಲೂ ತುಂಬಾ ಚೂಟಿ. ಓದಿನಲ್ಲಿ ಸಾಧಾರಣ ಆಗಿದ್ದರೂ ಮನೆಯ ಇತರ ಕೆಲಸಗಳಲ್ಲಿ ಚುರುಕಿನ ಹುಡುಗಿ. ಅಮ್ಮನಿಗೆ ಅವಳದ್ದೆ ಸಹಾಯ ಯಾವಾಗಲೂ. ಸಿಂಧುವಿಗೆ ಒಬ್ಬಳು ಅಕ್ಕ. ಅವಳೋ, ಯಾವಾಗಲೂ ಅಲಂಕಾರ, ಮೊಬೈಲು, ಹರಟೆ ಇವುಗಳಿಗೇ ಸಮಯ ಸಾಲುತ್ತಿರಲಿಲ್ಲ. ಅವುಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಸಿಂಧುವಿನ ಕುರಿತು ಕೊಂಕು ಮಾತುಗಳನ್ನಾಡಲು ಮರೆಯುತ್ತಿರಲಿಲ್ಲ. ತಂದೆ ಕೂಡ ಅವಳದ್ದೆ ಪರ. ಹಾಗಾಗಿ ತುಸು ಹೆಚ್ಚು ಕೊಬ್ಬು. ಸಿಂಧುವಿಗೆ ಅವಳ ಮಾತಿನಿಂದ ನೋವಾಗುತ್ತಿದ್ದರೂ ಆಕೆ ತಿರುಗಿ ಮಾತನಾಡುವವಳಲ್ಲ. ಅಮ್ಮನ ಭುಜಕ್ಕೊರಗಿ ಅಳುವುದೊಂದೆ ಅವಳಿಗೆ ತಿಳಿದಿರುವುದು. ಅಮ್ಮ ತನ್ನ ಹಿರಿ ಮಗಳಾದ ಇಂದುವಿಗೆ ಸಾಕಷ್ಟು ಬುದ್ಧಿ ಹೇಳುತ್ತಿದ್ದಳು, ಬೈಯುತ್ತಿದ್ದಳು ಕೂಡ. ಹಾಗೆಂದು ಅದರಿಂದ ಸಂತೋಷ ಪಡುವ ಮನೋಭಾವ ಸಿಂಧುವಿನದಲ್ಲ. ಎಷ್ಟೇ ಬೇಸರವಾದರೂ ಅಮ್ಮನ ಮಡಿಲಲ್ಲಿ ಹತ್ತು ನಿಮಿಷ ಮಲಗಿದರೆ ಎಲ್ಲವನ್ನೂ ಮರೆತುಬಿಡುತ್ತಿದ್ದಳು. ಅಂತಹ ಮಗುವಿನ ಮನಸ್ಸು ಅವಳದ್ದು.

ಹೀಗೆ ದಿನಗಳುರುಳಿದವು. ಸಿಂಧುವಿನ ಪಿ.ಯು.ಸಿ. ಮುಗಿಯಿತು. ಅವಳ ಅಕ್ಕನದ್ದು ಬಿ.ಸಿ.ಎ. ಮುಗಿದಿತ್ತು. ಅವಳಿಗೆ ಎಮ್.ಸಿ.ಎ. ಮಾಡುವುದು ಮುಂದಿನ ಗುರಿ. ತಂದೆಯ ಹಣಕಾಸಿನ ಪರಿಸ್ಥಿತಿಯ ಅಷ್ಟು ಚೆನ್ನಾಗಿರದ ಕಾರಣ, ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣಳಾದ ಇಂದುವಿಗೆ ಮುಂದಿನ ವಿದ್ಯಾಭ್ಯಾಸದ ಅವಕಾಶ ದೊರೆಯಿತು. ಸಿಂಧು ಎಂದಿನಂತೆ ಇಲ್ಲೂ ಸಹನಾಮೂರ್ತಿಯಾಗಿ ವಿದ್ಯಾಭ್ಯಾಸವನ್ನ ನಿಲ್ಲಿಸಲು ನಿರ್ಧರಿಸುತ್ತಾಳೆ. ಅಮ್ಮನಿಗಂತೂ ಈಗ ಇನ್ನೂ ಸಹಾಯ ಸಿಂಧುವಿನಿಂದ. ತನ್ನ ಪಾಲಿಗೆ ಬಂದದ್ದನ್ನು ಖುಷಿಯಿಂದಲೇ ಅನುಭವಿಸತೊಡಗಿದಳು ಸಿಂಧು. ಆದರೆ ಅವಳ ಪಾಲಿನ ನರಕ ಶುರುವಾದದ್ದು ಇದಾದ ಆರು ತಿಂಗಳ ನಂತರ. ಇದ್ದಕ್ಕಿದ್ದಂತೆ ಒಂದು ದಿನ ಸಿಂಧುವಿನ ತಾಯಿಗೆ ಹೃದಯಾಘಾತವಾಗುತ್ತದೆ. ಸಿಂಧುವಿನ ಸರ್ವಸ್ವವೇ ಆಗಿದ್ದ ತಾಯಿ ಜಗದ ಜಂಜಾಟಗಳಿಂದ ಮುಕ್ತಿ ಪಡೆದಿದ್ದಳು. ಸಿಂಧು ಇನ್ನಿಲ್ಲದಂತೆ ಕಂಗಾಲಾದಳು. ಸಿಂಧುವಿನ ಕಣ್ಣೀರು ನೆಲವನ್ನ ಸ್ಪರ್ಷಿಸುವ ಮುನ್ನವೇ ತನ್ನ ಬೊಗಸೆಯಲ್ಲಿ ಹಿಡಿದು ಸಂತೈಸುತ್ತಿದ್ದ ಆ ಕೈಗಳನ್ನು ಕಾಣದೇ ತಬ್ಬಲಿಯಾಗಿದ್ದಳು ಸಿಂಧು. ಮನ ನೊಂದಾಗೆಲ್ಲ ಮಗುವಿನಂತೆ ಅಪ್ಪಿ ಮಲಗಲು ಆ ತಾಯಿ ಮಡಿಲು ಇಂದಿಲ್ಲವಾಗಿತ್ತು ಅವಳಿಗೆ. ಅವಳು ಮೊದಮೊದಲು ಮಾಡಿದ ಹೊಸರುಚಿಯನ್ನ ತಿಂದು, ಖುಷಿಯಿಂದ ಮುತ್ತಿಡುತ್ತಿದ್ದ ಆ ಮಮತಾಮಯಿ, ಸಿಂಧುವಿಗೆ ಒಂದು ಮಾತನ್ನೂ ಹೇಳದೆ ದೂರ ಹೊರಟಿದ್ದಳು. “ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು…ನಿದ್ದೆ ಬರುವಳು ಹೊದ್ದು ಮಲಗು ಮಗುವೇ” ಎಂದು ಲಾಲಿಸುತ್ತಿದ್ದ ಅಮ್ಮ ಇಂದು ಲಾಲಿ ಹೇಳುವುದಕ್ಕೂ ಮೊದಲೇ ಗಾಢನಿದ್ರೆಗೆ ಜಾರಿದ್ದಳು. ಬಹುಷಃ ಆ ಕಾಲನ ಕರೆಯೇ ಹಾಗೆ. ಅವನ ಪಾಶದ ಮೋಹಕ್ಕೆ ಸಿಲುಕಿದವರಿಗೆ ಯಾವುದು ಕೂಡ ಲೆಕ್ಕಕ್ಕಿರುವುದಿಲ್ಲ.

ಈ ಘಟನೆಯ ನಂತರ ಸಿಂಧು ಮನೆಯ ಕೆಲಸದವಳಂತೆ ಆಗಿ ಹೋದಳು. ಕೆಲಸದವಳು ಅನ್ನುವುದಕ್ಕಿಂತ ಕೆಲಸ ಮಾಡುವ ಯಂತ್ರ ಎನ್ನಬಹುದೇನೋ, ಏಕೆಂದರೆ ಕೆಲಸದವಳಾದರೆ ಸಂಬಳವಾದರೂ ಸಿಗುತ್ತದೆ. ಸಿಂಧುವಿಗೆ ಅದೂ ಇರಲಿಲ್ಲ. ಆಕೆಯೂ ಕೂಡ ಒಂದು ಹೆಣ್ಣು, ಅವಳಿಗೂ ಭಾವನೆಗಳಿರುತ್ತವೆ ಎಂಬುದನ್ನೆ ಅವಳ ತಂದೆ ಹಾಗೂ ಅಕ್ಕ ಮರೆತಂತಿತ್ತು. ಅವಳದಲ್ಲದ ಹಲವು ಕೆಲಸಗಳು ಅವಳಿಗೆ ವಹಿಸಲ್ಪಡುತ್ತಿದ್ದವು. ಅದರಲ್ಲಿಯೂ ತಪ್ಪುಗಳನ್ನು ಹುಡುಕುವ ಸಣ್ಣತನ ಬೇರೆ. ಸಿಂಧುವಿಗೆ ಎಲ್ಲವನ್ನೂ ಸಹಿಸಿ ಸುಮ್ಮನಿರಬೇಕೆಂದಿರಲಿಲ್ಲ. ಆದರೆ “ಅವರಂತೆ ತಾನೂ ನಡೆದುಕೊಂಡರೆ ಅವರಿಗೂ ತನಗೂ ಏನು ವ್ಯತ್ಯಾಸ ಅಲ್ಲವೇ?” ಎಂಬುದು ಸಿಂಧುವಿನ ಸಾತ್ವಿಕ ಅಭಿಪ್ರಾಯ. ಅಲ್ಲೆ ಅವಳ ವ್ಯಕ್ತಿತ್ವದ ಘನತೆ ಅಡಗಿರುವುದು. ಇಂದುವಿಗೆ ಕೆಲಸ ಮಾಡಲು ಬರದೇ ಹೋದರೂ ಬೇರೆಯವರ, ಅದೂ ತಂಗಿ ಸಿಂಧುವಿನ ಕೆಲಸದಲ್ಲಿ ತಪ್ಪು ಹುಡುಕುವಲ್ಲಿ ಎತ್ತಿದ ಕೈ ಅವಳದ್ದು. ತಪ್ಪೇ ಇರದಿದ್ದರೂ ಒಂದು ತಪ್ಪನ್ನು ತಾನೇ ಸೃಷ್ಟಿಸಿ ಕೂಗಾಡುವ ಅತಿ ಕ್ರಿಯಾಶೀಲ ವ್ಯಕ್ತಿತ್ವ ಇಂದುವಿನದು. ಇವೆಲ್ಲವನ್ನು ಸಹಿಸಿಯೂ ಶಾಂತಮೂರ್ತಿಯಂತೆ ಬದುಕುತ್ತಿದ್ದವಳು ಸಿಂಧು. ಅದೂ ಅಲ್ಲದೆ ಅವಳು ಕೂಡ ಎಲ್ಲರಂತೆ ರೌದ್ರಾವತಾರ ತಾಳಿದರೆ ಮನೆಯ ನೆಮ್ಮದಿ ಹಾಳಾಗುತ್ತಿತ್ತೇ ಹೊರತು ಅವಳಿಗಂತೂ ಏನೂ ಉಪಯೋಗ ಇರಲಿಲ್ಲ. ಕಾರಣ ಮೂರ್ಖರ ಜೊತೆಗಿನ ಗುದ್ದಾಟ ಎಂದಿಗೂ ಕೆಸರಿನ ಜೊತೆ ಗುದ್ದಾಡಿದಂತೆ ಅದನ್ನು ಚೆನ್ನಾಗಿ ಅರಿತಿದ್ದವಳು ಸಿಂಧು. ಹಾಗಾಗಿ ತನ್ನ ಸುತ್ತಲಿನ ಎಲ್ಲ ಆಗು-ಹೋಗುಗಳಿಗು ಅವಳು ಮೌನಿಯಾಗಿರುತ್ತಿದ್ದಳು. ಆದರೇನು? ಆಂತರ್ಯದಲ್ಲಿ ಮಾತ್ರ ನೋವಿನ ಜ್ವಾಲಾಮುಖಿಯನ್ನೆ ಅಡಗಿಸಿಕೊಂಡಿದ್ದಳು. ಅಂತರ್ಮುಖಿಯಾಗಿ ನರಳುತ್ತಿದ್ದಳು.

ಬಹುಶಃ ಈ ಕ್ಷಣ ಅವಳನ್ನ ನೆನೆಸಿದ ಮಳೆ ಅವಳು ತನ್ನೊಡಲಲ್ಲಿ ತಡೆಹಿಡಿದಿದ್ದ ನೋವುಗಳ ಜ್ವಾಲಾಮುಖಿಯನ್ನ ಕಣ್ಣೀರಿನ ರೂಪದಲ್ಲಿ ಹೊರಹಾಕಲು ಪ್ರೇರೆಪಿಸಿತು. ಅತ್ತು-ಅತ್ತು ಸುಸ್ತಾಗಿ ಕುಸಿದಳು. ಸ್ವಲ್ಪ ಸಮಯದ ನಂತರ ಎದ್ದು ಮನೆಗೆ ಮರಳಿದಳು. ಮಳೆಯಲ್ಲಿ ನೆನೆದು ಬಂದ ಅವಳಿಗೆ ಅಕ್ಕ ಇಂದುವಿನಿಂದ ಬೈಗುಳದ ಸ್ವಾಗತ ದೊರಕಿತು. ಮತ್ತೆ ಅದೇ ಮೌನದ ಮರುತ್ತರ ಸಿಂಧುವಿನಿಂದ. ಒಳಗೆ ಹೋಗಿ ಬಟ್ಟೆ ಬದಲಾಯಿಸಿ, ಕುರ್ಚಿಯಲ್ಲಿ ಕೂತಳು. ಅತ್ತ ಅಕ್ಕ ಇಂದು ಇನ್ನೂ ಅಡುಗೆ ಆಗಿಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದಳು. ಸಿಂಧುವಿಗೆ ಏಕೋ ದೇಹ-ಮನಸ್ಸುಗಳೆರಡೂ ಜರ್ಜರಿತವಾದಂತೆ ಅನಿಸತೊಡಗಿತ್ತು. ಇವತ್ತು ಅಡುಗೆ ಮಾಡಲಾರೆ ಅನಿಸುತ್ತಿತ್ತು. “ಅಮ್ಮಾ…ನನ್ನನ್ನೇಕೆ ಒಂಟಿಯಾಗಿಸಿ ಹೋದೆ?” ಎಂದು ಅಳುತ್ತಾ ಮೆಲ್ಲಗೆ ಕಣ್ಮುಚ್ಚಿದಳು. ಮಳೆಯಲ್ಲಿ ಅತಿಯಾಗಿ ನೆನೆದಿದ್ದರಿಂದ ಅವಳಿಗೆ ತೀವ್ರವಾದ ಜ್ವರ ತಲೆಗೇರಿತು. ದುಡಿದು ನಿತ್ರಾಣವಾಗಿದ್ದ ಆಕೆ ಆ ಜ್ವರದ ತಾಪಕ್ಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಎರಡು ದಿನವಾದರೂ ಪ್ರಜ್ಞೆ ಬರಲಿಲ್ಲ. ಆಕೆಗೂ ಮತ್ತೆ ಕಣ್ಬಿಡುವ ಆಸೆ ಇಲ್ಲದೆ ಹೋಯಿತೇನೋ. ಆಕೆ ಹಾಗೆಯೇ ಚಿರನಿದ್ರೆಗೆ ಜಾರಿದ್ದಳು.

“ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ” ಅಲ್ಲವೆ? ಈ ಜಗತ್ತಿನಲ್ಲಿ ಸಿಂಧುವಿಗೆ ಅವಳ ಬದುಕು ಒದಗಿಸಿದ ಸಂಬಂಧಗಳ ಆವರಣವೇ ಆಕೆಗೆ ಸೆರೆಮನೆಯಾಯಿತು. ಆತ್ಮದ ನೋವುಗಳಿಗೆ ಮುಕ್ತಿ ಸಿಗುವ ಸಾಧ್ಯತೆಗಳಿರದ ಅವಳ ಬದುಕಿನ ಆವರಣದಿಂದ ಆ ಸಾತ್ವಿಕ ಆತ್ಮ ಹೊರನಡೆದಿತ್ತು. ದೇಹವೆಂಬ ಬಟ್ಟೆಯ ಬಿಚ್ಚಿಟ್ಟು ನಡೆದ ಸಿಂಧುವಿನ ಆತ್ಮಕ್ಕೆ ಸಿಗಬಹುದೇ ‘ಜೀವನ್ಮುಕ್ತಿ’?

Anup Gunaga

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!