ಅಂಕಣ ಕಟ್ ಟು ದ ಕ್ಲೈಮಾಕ್ಸ್

ಆಕಾಶ್ ಶ್ರೀವತ್ಸ – ದ ಸ್ಟೋರಿ ಬಿಹೈಂಡ್ ದ ನೇಮ್

Written by Akash Srivatsa

Episode 02

2006.

ನಾನೊಬ್ಬ ನಟನಾಗಬೇಕೆಂಬ ಆಸೆಯಿತ್ತೆಂದು ನಿಮಗೆ ಹೇಳಿದ್ದೆನಾ? ನನ್ನ ಕಾಲೇಜು ದಿನಗಳಿಂದಲೂ ನನಗೆ ಈ ಸೆಳೆತವಿತ್ತು. ಚಿತ್ರದಲ್ಲಿ ನಟ ನಟಿಯರೇ ತಮ್ಮ ಸಂಭಾಷಣೆ ಬರೆದುಕೊಂಡು, ಸೀನ್ ಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು. ಹಾಗಾಗಿ ಒಂದು ಕಿರುಚಿತ್ರದಲ್ಲಿ ನಟಿಸಬೇಕೆಂದು ಪ್ರಯತ್ನ ಪಡುತ್ತಿದ್ದೆ. ಚಿತ್ರರಂಗದ ಕೆಲವರನ್ನು ಭೇಟಿ ಮಾಡಿ ಅವಕಾಶಕ್ಕಾಗಿ ಕೇಳಿದ್ದೆ. ಎಲ್ಲರೂ ನನ್ನ ಪೋರ್ಟ್ ಫ಼ೋಲಿಯೋ ಕೇಳುತ್ತಿದ್ದರು. ಆಗ ನನ್ನ ಬಳಿ ಇದ್ದ ಪೋರ್ಟ್ ಫ಼ೋಲಿಯೋ ಎಂದರೆ ಕಾಲೇಜು ಫ಼ೆಸ್ಟ್ ಗಳಲ್ಲಿ ತೆಗೆದ ಕೆಲವು ಫೋಟೋಗಳಷ್ಟೆ. ಅವು ಎಷ್ಟೇ ಆದರೂ ಒಬ್ಬ ವೃತ್ತಿನಿರತ ಛಾಯಾಗ್ರಾಹಕ ತೆಗೆದಷ್ಟು ಚೆನ್ನಾಗಿರುವುದಿಲ್ಲ. ನನಗೆ ಇದೂ ತಿಳಿದಿರಲಿಲ್ಲ. ಯಾರೊಬ್ಬರೂ ನನಗೆ ಕರೆ ಮಾಡಲಿಲ್ಲ. ಅವಕಾಶ ನೀಡಲಿಲ್ಲ. ಯಾತಕ್ಕಾಗಿ ನಿರಾಕರಿಸಿದರು ಎಂದೂ ಗೊತ್ತಾಗುತ್ತಿರಲಿಲ್ಲ. ನನ್ನ ಚಿತ್ರಗಳನ್ನು ನೋಡಿ ಅವರೆಲ್ಲರೂ ಎಷ್ಟು ನಕ್ಕರೋ ಏನೋ!

ಕಡೆಗೊಂದು ದಿನ ಶ್ರೀ.ಗಿರೀಶ್ ಕಾಸರವಳ್ಳಿ ಯವರನ್ನು ಭೇಟಿಯಾಗುವ ಸಂದರ್ಭ ಸಿಕ್ಕಿತು. ಅವರ ನಾಯಿ ನೆರಳು ಚಿತ್ರಕ್ಕಾಗಿ ಅವರು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದರು. ನನ್ನ ಕಾಲೇಜಿನ ಪಿ.ಟಿ.ಮಾಸ್ಟರ್ ಮೋಹನ್ ರವರಿಗೆ ಅವರ ಪರಿಚಯ ಇದ್ದುದರಿಂದ, ಬಾ ಭೇಟಿ ಮಾಡಿಸ್ತೀನಿ ಎಂದು ಅವರೇ ಕರೆದುಕೊಂಡು ಹೋದರು. ನನ್ನನ್ನು ನೋಡುತ್ತಿದ್ದಂತೆಯೇ ಕಾಸರವಳ್ಳಿಯವರು, ನನಗೆ ಆ ಪಾತ್ರ ಸರಿ ಹೋಗುವುದಿಲ್ಲ ಎಂದು ನೇರವಾಗಿ ಹೇಳಿಬಿಟ್ಟರು. ನನಗೆ ಸಂತೋಷವೇ ಆಯಿತು. ಕಡೆಗಾದರೂ ಒಂದು ಉತ್ತರವಾದರೂ ಬಂತಲ್ಲ ಎಂದು. ಹೊರಡುವ ಮುನ್ನ ಅವರನ್ನು ನಾನು ಕೇಳಿದೆ. ನನ್ನದೊಂದು ಪೋರ್ಟ್ ಫ಼ೋಲಿಯೋ ಮಾಡಿಸಬೇಕಾ ಎಂದು. ಅವರು ಮುಗುಳ್ನಕ್ಕು ಹೇಳಿದರು, ನಾನು ಪೋರ್ಟ್ ಫ಼ೋಲಿಯೋ ಗೆ ಅಷ್ಟು ಮಹತ್ವ ಕೊಡುವುದಿಲ್ಲ. ನಿನಗೆ ಬೇಕಾದರೆ, ನಿನ್ನ ಗೆಳೆಯರಿಗೆ ಹೇಳಿ ಫೋಟೋ ತೆಗೆಸಿಕೋ, ಅದು ಸಾಕು ಎಂದು.

ಓದಿರಿ: ಮೈ ಫ಼ಸ್ಟ್ ಫಿಲ್ಮ್ ಮೇಕಿಂಗ್ ಅಡ್ವೈಸ್

ನಾನು ನನ್ನ ಗೆಳೆಯ ಇಬ್ಬರೂ ಸೇರಿ ನನ್ನ ರೂಮ್ ಅನ್ನು ಒಂದು ಸ್ಟೂಡಿಯೋ ಮಾಡಿಕೊಂಡು, ಬಿಳಿಯ ಬೆಡ್ ಶೀಟ್ ಒಂದನ್ನು ಹಿಂದಿನ ತೆರೆಯಾಗಿ ಮಾಡಿ, ನನ್ನ ಡಿಜಿಟಲ್ ಕ್ಯಾಮರಾದಲ್ಲಿ ಫೋಟೋ ಗಳನ್ನು ತೆಗೆದೆವು. ನನಗೆ ತಕ್ಕ ಮಟ್ಟಿಗೆ ಫೋಟೋ ಮತ್ತು ವೀಡಿಯೋ ಸಂಕಲನ ಬರುತ್ತಿತ್ತು. ಫೋಟೋಶಾಪ್ ನಲ್ಲಿ ಹಿಂದಿನ ತೆರೆಯನ್ನು ಬದಲಿಸಿ ನಮ್ಮ ಪೋರ್ಟ್ ಫ಼ೋಲಿಯೋಗಳನ್ನು ನಾವೇ ತಯಾರಿಸಿಕೊಂಡೆವು. ಆಗ ವಾಟ್ಸಾಪ್ ಇಲ್ಲದ ಕಾಲ. ನಮ್ಮ ಫೋಟೋ ಗಳನ್ನು ಪ್ರಿಂಟ್ ಮಾಡಲಿಕ್ಕೆಂದು ಒಂದು ಅಂಗಡಿಗೆ ಹೋದೆವು. ಹೆಸರೇನೆಂದು ಅಚ್ಚು ಹಾಕಬೇಕು ಎಂದು ಅಂಗಡಿಯವನು ಕೇಳಿದ. ಮೊದಲಿನಿಂದಲೂ ಜನರು ನನ್ನ ಹೆಸರನ್ನು ಉಚ್ಚರಿಸಲು ಕಷ್ಟಪಡುವುದನ್ನು ನೋಡಿದ್ದೆ. ಅದರಿಂದ ನನಗೆ ತೀವ್ರವಾದ ಸಿಟ್ಟು ಬರುತ್ತಿತ್ತು. ಕೆಲವರು ಶ್ರೀವಾಸ್ತವ ಎಂದರೆ, ಕೆಲವರು ಶ್ರೀನಿವಾಸ್ ಎನ್ನುತ್ತಿದ್ದರು, ಮತ್ತೆ ಕೆಲವರು ಶ್ರೀವಸ್ತ ಎನ್ನುತ್ತಿದ್ದರು! ಈ ಸಮಸ್ಯೆಗೊಂದು ಕೊನೆಗಾಣಿಸಬೇಕೆಂದು, ನನ್ನ ಹೆಸರಿಗೆ ಮೊದಲು ಮತ್ತೊಂದು ಹೆಸರು ಸೇರಿಸಿಬಿಡಬೇಕೆಂದು ಅಲ್ಲೇ ನಿಶ್ಚಯಿಸಿದೆ. ಎದುರಿಗೆ ಪುನೀತ್ ರಾಜ್ ಕುಮಾರ್ ಅವರ ಆಕಾಶ್ ಚಿತ್ರದ ಪೋಸ್ಟರ್ ಕಾಣಿಸಿತು. ಆಕಾಶ್! ಕರೆಯಲೂ ಸುಲಭ. ನೆನಪಿನಲ್ಲಿ ಉಳಿಯುವುದೂ ಸುಲಭ! ಆಕಾಶ್ ಶ್ರೀವತ್ಸ ಅಂತ ಅಚ್ಚು ಹಾಕಪ್ಪಾ ಎಂದು ಅವನಿಗೆ ಹೇಳಿದೆ.

ಅದಾದ ಮೇಲೆ ನನ್ನ ಫೋಟೋಗಳನ್ನು ಮತ್ತಷ್ಟು ಜನಕ್ಕೆ ಹಂಚಿದೆ. ಈ ಬಾರಿ ಪ್ರತಿಕ್ರಿಯೆಯೇನೋ ಬಂತು. ನೋಡಲು ಆ ಹೀರೋ ಹಾಗಿದ್ದೀರಾ, ಈ ಹೀರೋ ಹಾಗಿದ್ದೀರಾ ಎಂದು! ಸಿಟ್ಟು ಬಂತು. ನನ್ನ ಮುಖ ಒರಿಜಿನಲ್ ಅಲ್ವಾ ಎಂಬ ಪ್ರಶ್ನೆ ಬೇರೆ. ಯಾಕೋ ಚಿತ್ರರಂಗದಲ್ಲಿ ಏನೂ ಕೈಗೂಡುವುದಿಲ್ಲ ಎಂಬ ಭಾವನೆ ಕ್ರಮೇಣವಾಗಿ ಮನಸ್ಸನ್ನು ಆಕ್ರಮಿಸುತ್ತಿತ್ತು. ಕಡಗೆಂದು ಪ್ರಯತ್ನ ಮಾಡಿಬಿಡೋಣ ಎಂದು ಆರ್ಕೂಟ್ ನಲ್ಲಿ ನನ್ನ ಫೋಟೋಗಳನ್ನು ಹಾಕಿದೆ. ಒಂದು ತಿಂಗಳ ನಂತರ ಸಂದೇಶವೊಂದು ಬಂತು – ’ನನ್ನ ಕಿರು ಚಿತ್ರದಲ್ಲಿ ನಿಮಗೆ ಅಭಿನಯಿಸಲು ಆಸಕ್ತಿ ಇದೆಯೇ?’

ನನ್ನ ಮುಂದಿನ ಅಂಕಣ: ಕಿರುಚಿತ್ರವೊಂದರಲ್ಲಿ ನಟನಾಗಿ ನನ್ನ ಮೊದಲನೇ ಅನುಭವ – ಬಿರುಕು

ಕಟ್ ಟು ಕ್ಲೈಮಾಕ್ಸ್ : ಆಕಾಶ್ ಶ್ರೀವತ್ಸ ಅವರು ನಟನಾಗಿ ಪರಿಚಯ ಆಗಿದ್ದು 2006 ರಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Akash Srivatsa

ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸುತ್ತಿರುವ ನಿರ್ದೇಶಕ. ಹಿರಿಯ ನಟ ರಮೇಶ್ ಅರವಿಂದ್ ಅವರ ಗರಡಿಯಲ್ಲಿ ಪಳಗಿರುವ ಆಕಾಶ್ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿಯನ್ನಾರಂಭಿಸಿದ್ದರು. ಇವರ “ಸುಳ್ಳೇ ಸತ್ಯ- ದ ರಿಯಲ್ ಲೈ” ಕಿರುಚಿತ್ರವು ಪ್ರತಿಷ್ಟಿತ ‘Cannes film festival’ ನಲ್ಲಿ ಪ್ರದರ್ಷಿತವಾಗುವುದರೊಂದಿಗೆ ಈ ಹಿರಿಮೆಗೆ ಪಾತ್ರವಾದ ಮೊದಲ ಕನ್ನಡ ಕಿರುಚಿತ್ರವಾಗಿದೆ. ಇದೀಗ ಸದ್ಯದಲ್ಲಿ ಬಿಡುಗಡೆಗೊಳ್ಳಲಿರುವ "ಬದ್ಮಾಷ್" ಚಲನಚಿತ್ರದ ನಿರ್ದೇಶಕರಾಗಿದ್ದಾರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!