ಕಥೆ

 ವಿಪರ್ಯಾಸ

ಕೈಯೊಂದು ಭುಜದ ಮೇಲೆ ಬಡಿದಂತಾಗಲು ರಪ್ಪನೆ ಹಿಂದಿರುಗಿ ನೋಡಿದಾಗ ,”ಏನ್ರೀ ನಾಗರತ್ನಮ್ಮ,ನಾನ್ ಕಣ್ರೀ ಇದು! ಇಷ್ಟೊಂದು ಬೆಚ್ಚಿ ಬೀಳ್ತಿದೀರಲ್ಲಾ?”, ದೊಡ್ಡ ಕುಂಕುಮ ಬೊಟ್ಟಿನ ಮಹಿಳಾಮಣಿ ಲಕ್ಷ್ಮೀ ಕೇಳಿದರು. “ಹೌದು, ನಾನೂ ಬೆಳಗಿನಿಂದ ನೋಡ್ತಾ ಇದೀನಿ. ಫಂಕ್ಷನ್ ಅಲ್ಲಿ ಇನ್ವೋಲ್ವ್ ಆಗಿಲ್ಲ ನೀವು, ಏನಾದ್ರೂ ಸಮಸ್ಯೆಯೇ?” ಲತಾಂಗಿ ಉಲಿದಳು. ಹೌದು,ನಾಗರತ್ನಮ್ಮನ ಮನಸ್ಸು ಬೇರೆಲ್ಲೋ ಇತ್ತು. ಅದು ಹತ್ತು ವರ್ಷಗಳ ಬಳಿಕ ತಾಯ್ನಾಡಿಗೆ ಮರಳುತ್ತಿರುವ ಮಗನ ಮುಖವನ್ನು ನೋಡಲು ತುಡಿಯುತ್ತಿತ್ತು. ವಿದೇಶದ ಹವೆ ಹತ್ತದೆ ಹತ್ತು ವರ್ಷಗಳಲ್ಲಿ ಮತ್ತೆಷ್ಟು ಸಣ್ಣಗಾಗಿರುವನೋ ಎಂಬ ಆತಂಕ ಅದಕ್ಕಿತ್ತು. ಮಹಿಳಾ ಸಂಘದ ಕಾರ್ಯದರ್ಶಿಯಾಗಿರುವುದರಿಂದ ಸಂಘದ ಸಮಾರಂಭಗಳಿಗೆ ಭೇಟಿ ಕೊಡದೆ ವಿಧಿಯಿಲ್ಲ. ಆದರೆ ದೇಹ ಇಲ್ಲಿದ್ದರೂ ಮನಸ್ಸು ಮಾತ್ರ ಅಲ್ಲಿ ನೆಟ್ಟಿರುವುದು ಸುಳ್ಳಲ್ಲ. ಯಾರಿಗೂ ಉತ್ತರಿಸುವ ಮನಸ್ಸಾಗದೆ “ಹಾಗೇನಿಲ್ಲ” ಎಂದಷ್ಟೇ ನಕ್ಕರು ನಾಗರತ್ನಮ್ಮ.

ಆತುರಾತುರವಾಗಿ ಊಟ ಮುಗಿಸಿ ಲಕ್ಷ್ಮೀಗೆ ಕಾಣಿಸದಂತೆ ಹಾಲ್ ನಿಂದ ಹೊರಬಂದರು ನಾಗರತ್ನಮ್ಮ. ಮಗನಿಗೆ ಕೋಡುಬಳೆ ಪಂಚಪ್ರಾಣವೆಂದು ನೆನಪಾಗುತ್ತಿದ್ದಂತೆಯೇ ಕಾಲುಗಳು ಮಾರ್ಕೆಟ್ ಕಡೆ ನಡೆದವು. ಅವಲಕ್ಕಿಗೆ ಮೊಸರು ಹಾಕಿಕೊಂಡು ಅವನು ಚಪ್ಪರಿಸುತ್ತಿದ್ದುದು ನೆನಪಾಗಿ ಹೊಟ್ಟೆ ಸಂಕಟದಿಂದ ತೊಳಸಿದಂತಾಯಿತು. ಅದೇಕೆ ತಾಯಿ ಹೃದಯವನ್ನು ಧಿಕ್ಕರಿಸಿ ಹತ್ತು ವರ್ಷ ಅಲ್ಲಿದ್ದನೋ! ’ಇರಲಿ,ಕೊನೆಗೂ ಬಂದನಲ್ಲ! ಇನ್ನೇನು ಒಂದೇ ದಿನ,ಅವನ ಮುಖ ನೋಡಲು’, ನಾಗರತ್ನಮ್ಮ ಮನಸ್ಸನ್ನು ತಹಬದಿಗೆ ತಂದುಕೊಂಡರು.

ಕೋಡುಬಳೆ ಎಣ್ಣೆಯಲ್ಲಿ ಕಾಯುತ್ತಿದ್ದಂತೆಯೇ ಕಾಲಿಂಗ್ ಬೆಲ್ ಹೊಡೆದದ್ದು ಕೇಳಿಸಿತು. ಬಾಗಿಲು ತೆರೆಯಲು ಕಾಣಿಸಿದ್ದು ಭಿಕ್ಷುಕರ ಹುಡುಗಿ. ’ಥೂ,ದರಿದ್ರದ್ದು’ ಮನಸ್ಸಿನಲ್ಲೇ ಬೈದುಕೊಂಡರು ನಾಗರತ್ನಮ್ಮ.”ಅಮ್ಮಾ,ಎರಡ್ ದಿನದಿಂದ ಊಟ ಮಾಡಿಲ್ಲಮ್ಮಾ,ಏನಾದ್ರೂ ಹಾಕೀಮ್ಮಾ” ಎಂದು ಅವಳನ್ನುತ್ತಿದ್ದಂತೆಯೇ ಕರಿದ ತಿಂಡಿಯ ಘಮಲು ಅವಳನ್ನೆಲ್ಲಿ ತಲುಪಿಬಿಡುವುದೋ ಎಂದು “ಏನೂ ಇಲ್ಲ ಇಲ್ಲಿ ಹೋಗಮ್ಮಾ” ಎಂದು ಜೋರಾಗೇ ಹೇಳಿ ಬಾಗಿಲು ಕುಕ್ಕಿದರು. ಮಗನ ಬಗೆಗಿನ ಆಲೋಚನೆಗಳಿಗೆ ಕಡಿವಾಣ ಹಾಕಿದ ಅವಳ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಮನದಲ್ಲೇ ಶಪಿಸುತ್ತಾ ಒಳ ಬರುತ್ತಿದ್ದಂತೆ ಮಗನದ್ದೇ ಫೋನು. “ಅಮ್ಮಾ,ಇವತ್ತು ನನಗೆ ಹೊರಡಲು ಆಗಲ್ಲ.ಆಫೀಸಿನಲ್ಲಿ ಅರ್ಜೆಂಟ್ ಕೆಲಸವೇನೋ ಬಂದಿದೆ. ಮುಂದಿನ ತಿಂಗಳು ನೋಡೋಣ”. ನಾಗರತ್ನಮ್ಮ ಫೋನಿಟ್ಟುಬಿಟ್ಟರು. ಸೀದಾ ಅಡುಗೆಮನೆಗೆ ನುಗ್ಗಿ ಒಂದು ಮುಷ್ಠಿ ಕೋಡುಬಳೆ ಹಿಡಿದುಕೊಂಡು ಬಾಗಿಲು ತೆರೆದಾಗ ಅವಳು ಅಲ್ಲಿರಲಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Deepthi Delampady

Currently studying Information Science and Engineering (6th semester) at SJCE, Mysore.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!