ಕಥೆ

ರಕ್ತಪ್ರವಾಹ

“ಈ ಮನ್ಯಾಗೆ ಯಾರಿಗೂ ನನ್ ಚಿಂತೀ ಅರ್ಥಾನೇ ಆಗಲ್ಲ. ನಾಳೆ ಮನ್ಯಾಗೆ ಪೂಜಾ ಇದೆ. ಅಯ್ಯನೋರು ಪೂಜೆಗೆ ಒಂದು ಕೊಡ ಹೊಳೀ ನೀರು ಬೇಕಂತ ಹೇಳಿದಾರೆ. ಆ ಹಾಳು ರಂಗಂಗೆ ಹೇಳಿಒಂದು ಕೊಡ ನೀರು ತರಿಸಬಾರ್‍ದೇನು?” ಎಂದು ಗೌಡತಿ ಅರಚುವುದನ್ನು ಕೇಳಿದ ಸಿದ್ದೇಗೌಡರು, ಹೆಂಡತಿಯ ಬೊಂಬಾಯಿಯಂಥ ಬಾಯಿಗೆ ಅಂಜಿ, ಮನದಲ್ಲೇ ಅವಳನ್ನು ಶಪಿಸುತ್ತಾ ಆಳುರಂಗನನ್ನು ಅರಸುತ್ತಾ ಹೊರಟರು.

ಕೊರೆಯುವ ಚಳಿಯಲ್ಲಿ ಹರಕು ಬಟ್ಟೆಯನ್ನುಟ್ಟು ದನದ ಕೊಟ್ಟಿಗೆಯ ಒಂದು ಮೂಲೆಯಲ್ಲಿ ಮುದುಡಿಕೊಂಡು ಮಲಗಿ, ಮುಕ್ತಲೋಕದಲ್ಲಿ ತಾನು ಬಣ್ಣಬಣ್ಣದ ಬಟ್ಟೆಯನ್ನುಟ್ಟು ಸಿನೆಮಾಹೀರೋನಂತೆ ಮೆರೆಯುವ, ಸ್ವತಂತ್ರ ಬಾಳು ಬದುಕುವ ಅತಿಸಹಜವಾದ ಮುಗ್ದ ಕನಸುಗಳನ್ನು ಕಾಣುತ್ತಿದ್ದ ರಂಗ. ಅಲ್ಲಿ ಯಾವುದೇ ಬಂಧನದ ಬೇಲಿಯಿರಲಿಲ್ಲ. ಇನ್ನೊಬ್ಬರ ದಾಸ್ಯದಲ್ಲಿ ಬದುಕಬೇಕಿರಲಿಲ್ಲ. ಅಲ್ಲಿ ಕೇವಲ ಸಂತೋಷದ ಬೆಳಕು, ನಿರ್ಬಂಧನದ ರಂಗು. ಚಿತ್ತೋಲ್ಲಾಸಕ ಲೋಕವದು.ನಾಗಾಲೋಟದಿಂದ ಓಡುತ್ತಿದ್ದ ರಂಗನ ಕನಸಿನ ಕುದುರೆ ಗೌಡರು ಅವನ ಪುಟ್ಟ ಬಡಕಲುಹೊಟ್ಟೆಗೆ ಝಾಡಿಸಿ ಒದ್ದಾಗ ಅಲ್ಲಿಗೇ ನಿಂತು, ಅವನು ತಟಕ್ಕನೇ ಎದ್ದು ಕುಳಿತ. ” ಲೇ ರಂಗ, ಇದೇನ್ ನಿಮ್ಮಪ್ಪನ್ ಮನೀ ಅಂತಾ ತಿಳ್ದೀಯೇನು, ಅರಸನಂಗೆ ಬಿದ್ದು ಕನಸು ಕಾಣಾಕೆ. ಹಿಡಿಯಷ್ಟುಕೆಲಸಾ ಮಾಡಂಗಿಲ್ಲ, ಹೊಟ್ಟೀ ಬಿರಿಯೋ ಹಾಂಗ ತಿಂತೀಯಾ. ಕತ್ತೇಗಿಂತಾ ಕಡೆಯಾದ್ಯೇನು!  ಮಗನಾ, ಸೂರ್ಯ ಪಡುವಣದ್ ದಿಣ್ಣೆ ದಾಟೋ  ಹೊತ್ತಾತು.ತಿನ್ನಾಕ್ ಗತೀಯಿಲ್ದಿದ್ರೂ ಕನಸುಕಾಣೋದ್ರಾಗೇನ್ ಕಮ್ಮೀ ಇಲ್ಲ ನೀ.  ಏಳು, ಹೊಳಿಗೋಗಿ ಒಂದು ಕೊಡ ನೀರು ತಾ, ನಡಿಯಲೇ” ಎಂದು ಮತ್ತೊಮ್ಮೆ ಅವನಿಗೆ ಝಾಡಿಸಿ ಒದ್ದು ನಿಂತ ಗೌಡರ ಯಮಸ್ವರೂಪವನ್ನು ಕಂಡು ಹನ್ನೆರಡುವರುಷದ ಮುಗ್ಧಬಾಲ  ರಂಗ ಬಹು ಅಳುಕಿದ.ರೌದ್ರತೆಯ ಜ್ವಾಲೆ ಹೃದಯವನ್ನಾವರಿಸಿ, ಕನಸಿನ ಮೊಗ್ಗು ಅರಳುವ ಮುನ್ನವೇ ಭಸ್ಮವಾಗಿ, ಬದುಕು ಸ್ಮಶಾನ ಸದೃಶವಾಯಿತು.  ಗೌಡರು ತನ್ನತ್ತದೂಡಿದ ಹಿತ್ತಾಳೆ ಕೊಡಪಾನದ ಭಾರವನ್ನು ಹೊರಲಾರದೇ ಹೊತ್ತು, ಅಲ್ಲಲ್ಲಿ ಬರೆಹಾಕಿ ಕೆಂಪಾಗಿ ಊದಿದ್ದ ತನ್ನ ಕಾಲನ್ನು ಎಳೆದು ಎಳೆದು ಹಾಕುತ್ತಾ ಹೊಳೆಯತ್ತ ಹೊರಟ. ಹೊರಗೆಧೋ…..ಉಧೋ…..ಧೋ ಎಂದು ಬಿರುಸಾಗಿ ಮಳೆ ಸುರಿಯುತ್ತಿತ್ತು. ಸುಮಾರು ಒಂದು ವಾರದಿಂದಲೂ ಒಂದೇ ಸಮನೇ ಸುರಿಯುತ್ತಿದ್ದ ಮಳೆಯಿಂದ ಕೊಚ್ಚೆ ಗುಂಡಿಯಂತಾಗಿದ್ದ ಹಳ್ಳಿಯ ಮಣ್ಣಿನರಸ್ತೆಯಲ್ಲಿ, ತನ್ನ ಚಡ್ಡಿಯನ್ನು ಮೇಲೆಳೆದುಕೊಳ್ಳುತ್ತಾ, ಮಳೆಯ ಬಿರುಸು ಜಲಧಾರೆಯೆದುರು ಅಗೋಚರವಾಗಿದ್ದ ಕಣ್ಣೀರನ್ನೊರೆಸಿಕೊಳ್ಳುತ್ತಾ ರೆಕ್ಕೆ ಕಿತ್ತ ಹಕ್ಕಿಯಂತೆ ನಡೆದ ರಂಗ. ಟಾರು ಕಿತ್ತು ಹೋದರಸ್ತೆಯಲ್ಲಿ  ದಡಬಡನೇ ನಿಧಾನವಾಗಿ ಸಾಗುವ ಎತ್ತಿನ ಬಂಡಿಯಂತೆ, ಮೆಲ್ಲನೆ ಆವರಿಸುತ್ತಿದ್ದ ಕತ್ತಲಿಗಿಂತ, ರಂಗನ ಕಣ್ಣೊಳಗಿನ ಅಂಜನವೇ ಹೆಚ್ಚಾಗಿ, ಅದರ ಭೂತಾನುಭವಕ್ಕೆ ಬೆಚ್ಚಿಬಿದ್ದುಕಣ್ಣುಜ್ಜಿಕೊಳ್ಳುತ್ತಾ ನಡೆದ ರಂಗ.

ಸುಮಾರು ಐದು ವರ್ಷಗಳ ಹಿಂದೆ ಊರಲ್ಲಿ ಹೆಮ್ಮಾರಿಯಾಗಿ ಬಂದ ರೋಗಕ್ಕೆ ರಂಗನ ವಿಧವೆ ತಾಯಿಯೂ ಬಲಿಯಾಗಿ, ಅವಳ ಸಂಸ್ಕಾರಕ್ಕೂ ಕಾಸಿಲ್ಲದೇಹೋ…….ಎಂದಳುತ್ತಿದ್ದ ರಂಗನನ್ನು ಕಂಡು, “ನಿಮ್ಮವ್ವ ಎಷ್ಟೋ ವರ್ಷದಿಂದ ನಮ್ಮ ಹೊಲ್ದಾಗೇ ಕೆಲಸ ಮಾಡ್ಕಂಡಿದ್ಳು. ಈಗ ಆಕೀ ಸಂಸ್ಕಾರಕ್ಕ ಕಾಸು ಕೊಡ್ತೀನಿ. ಆಕೀ ಮಾಡಿದ ಸಾಲಾನೂ ಈಹಣಾನೂ ನಮ್ಮನ್ಯಾಗೇ ಚಾಕರಿ ಮಾಡಿ ತೀರಿಸುವಂತೆ. ಆತೇನು” ಎಂದು ಕೇಳಿದ್ದ ಗೌಡರ ಪ್ರಶ್ನೆಗೆ ತನ್ನ ಅಸಹಾಯಕ ಪರಿಸ್ಥಿತಿಯಲ್ಲಿ ಇನ್ನೇನೂ ಮಾಡಲಾರದೇ ಸುಮ್ಮನೇ ತಲೆಯಾಡಿಸಿದ್ದ ರಂಗ.ಅಂದಿನಿಂದ ಹೊಲಕ್ಕೆ ಹೋಗಿ ದುಡಿದು, ಮನೆಕೆಲಸ ಮಾಡಿ, ದನ ಮೇಯಿಸಿ ಗೌಡ್ರು ಹೇಳಿದ ಕೆಲಸಗಳನ್ನೆಲ್ಲಾ ಮರುಮಾತಾಡದೇ ಮಾಡಿ ಮುಗಿಸುವ ರಂಗ, ಗಾಡಿ ಎತ್ತಿನಂತೆ ಓಡುತ್ತಾ ಬದುಕುಸವೆಸುತ್ತಿದ್ದ. ಅಷ್ಟೆಲ್ಲಾ ಕೆಲಸ ಮಾಡಿದರೂ ಅವನಿಗೆ ಸಿಗುತ್ತಿದ್ದದ್ದು ಮಾತ್ರ ಎರಡ್ಹೊತ್ತಿನ ಒಣಕಲು ರೊಟ್ಟಿ, ಮೆಣಸಿನ ಪುಡಿ ಮತ್ತು ಒಂದು ತಂಬಿಗೆ ನೀರು. ದನಗಳ ಕೊಟ್ಟಿಗೆಯ ಗೋದಲಿಯ ಒಂದುಮೂಲೆಯಲ್ಲಿ ಅವನ ವಾಸ. ಕೆಂಡದ ಮೇಲೆ ತೂರಿದ ಮೃದುಲ ಕುಸುಮ ಬಾಡಿ ಭಸ್ಮವಾಗುವಂತೆ, ಬಾಲನ ಉಜ್ವಲ ಬದುಕು ಕ್ರಮೇಣ ಕರಗುತ್ತಾ ಬರುತ್ತಿತ್ತು.

ತನ್ನ ಊದಿದ ಕಾಲನ್ನು ಎಳೆದೆಳೆದು ಹಾಕುತ್ತಾ, ಕೆಸರಿನ ಭರಾಟೆಯಲ್ಲಿ ಮೈಯೆಲ್ಲಾ ಕೆಂಪಾಗಿ, ಪುನಃ ಮಳೆನೀರಲ್ಲಿ ತೊಯ್ದು ಬಿಳುಪಾಗುತ್ತಾ ಸಾಗುತ್ತಿದ್ದ ರಂಗನ ದೇಹಕೊರೆಯುತ್ತಿದ್ದ ಚಳಿಯಲ್ಲಿ ಬಿಳುಚಿಕೊಂಡಿತ್ತು. ಹೊಳೆ ಸತತ ಸುರಿಯುತ್ತಿದ್ದ ಮಳೆಯಿಂದ ಉಕ್ಕಿ ಹರಿಯುತ್ತಿತ್ತು. ಅದರ ಭೋರ್ಗರೆತಕ್ಕೆ, ಘನರವಕ್ಕೆ ಅಂಜಿದ ರಂಗನ ಹೃದಯಕ್ಕೆ ಆ ಹೊಳೆ, ‘ಶೋಣಿತದರಣಧುನಿ’ ಯಾಗಿ ಕಂಡಿತು! ಅಳುಕುತ್ತಳುಕುತ್ತಾ ನಿಧಾನವಾಗಿ ಹೊಳೆಯನ್ನು ಸಮೀಪಿಸಿ, ಉಕ್ಕೇರಿ ಧುಮುಕುತ್ತಿದ್ದ ಉದಕದ ಉದರವನ್ನು ತಂಬಿಗೆಯಿಂದ ಬಗೆಯಲೆತ್ನಿಸಿದ ರಂಗ. ಪಾಚಿಗಟ್ಟಿಜಾರುತ್ತಿದ್ದ ಬಂಡೆಗಳು, ನೆಲ ಯಾವುದು, ನೀರ್‍’ಯಾವುದು ಎಂದು ತಿಳಿಯಲಾರದಂತೆ ಆವರಿಸಿದ್ದ ಕಗ್ಗತ್ತಲನ್ನು ಕಂಡು ಹೃದಯ ಬಾಯಿಗೆ ಬಂದಂತಾಗಿ ಒಂದೇ ಒಂದು ಹೆಜ್ಜೆ ಮುಂದಿಟ್ಟ ರಂಗ. ಅಷ್ಟೇ,ಕೊಡಪಾನ ಕೈ ಜಾರಿ ಹೋಯಿತು, ರಂಗನ ಕಣ್ಣಿಗೆ ಕತ್ತಲು ಕಟ್ಟಿದಂತಾಯ್ತು!

                                                *             *             *             *

” ಹೊಲಸು ಭಿಕಾರಿ, ಎತ್ತ ಹೊಂಟೋದ್ನೋ. ನೀರು ತಾ ಅಂದ್ರ ಅಲ್ಲೇ ಕುಣೀತಾ ಕುಂತವ್ನೇನೋ. ಕತ್ತಲಾದ್ರೂ ಸುಳಿವಿಲ್ಲ. ನಾನೇ ವಸಿ ನೋಡ್ಕಂಡು ಬರ್‍ತೀನಿ”  ಎಂದು ಅತ್ತಿತ್ತ ಯಾವ ಆಳೂಕಾಣದ್ದರಿಂದ, ತಾವೇ ಪಂಚೆ ಕಟ್ಟಿಕೊಂಡು, ಒಂದು ಕೈಯಲ್ಲಿ ಕೊಡೆಯನ್ನೂ ಮತ್ತೊಂದು ಕೈಯಲ್ಲಿ ಲಾಟೀನನ್ನೂ ಹಿಡಿದು ತಮ್ಮೂರಿನ ಶಾನುಭೋಗರೊಡನೆ ರಂಗನನ್ನರೆಸುತ್ತಾ ಹೊಳೆಯತ್ತಹೊರಟರು ಗೌಡರು. ” ಅಲ್ಲಾ ಗೌಡ್ರೇ, ವಾರದಿಂದ ಈ ಹಾಳ್ ಮಳೀ ಬಿಟ್ಟೂ ಬಿಡದ್ ಹಾಂಗ್ ಸುರ್‍ಯಾಕ್ ಹತ್ತೀತಿ. ಈ ಹೊತ್ನಾಗ ಪೂಜಾ ಇಟ್ಗೊಂಡು ಒಳ್ಳೇ ಫಜೀತಿಗ್ ಬಂತಪ್ಪ. ಹೌದೋಅಲ್ಲೋ? ಕತ್ತಲಾಗಾಕ್ ಹತ್ತೀತಿ. ಹೊಳೀ ಆ ಕಾಳೀ ತೆರನಾಗ ಉಬ್ಬಿರ್‍ತಾಳಾ. ಆ ಕೂಸ್ನ ಕಳಿಸೋ ಬದ್ಲು ದ್ಯಾಮಂಗಾದ್ರೂ ಹೇಳಿದ್ರ ತರ್‍ತಿದ್ದ ಅಲ್ವಾ” ಶಾನುಭೋಗರು ತಮ್ಮ ಮಗುಟದ ಅಂಚಿನಿಂದಒದ್ದೆಯಾದ ಕೈಯನ್ನೊರೆಸಿಕೊಳ್ಳುತ್ತಾ ಹೇಳಿದರು. ” ಅಯ್ಯೋ, ನಿಮಗ್ ತಿಳೀದದ್ದು ಏನ್ ಇದೆ ಹೇಳಿ ಶಾನುಭೋಗರೇ. ನಮ್ಮನೆ ಕಾಳೀಗ ಬಾಯ್ ಕೊಟ್ಟ್ ನಿಲ್ಲಾಕಾಗುತ್ತೇನು? ಅದ್ ಹೀಂಗಆಗ್ಬೇಕಂದ್ರ ಹಾಂಗಾಗ್ಬೇಕು. ಅಷ್ಟೇ. ಸುಮ್ಮನೇ ಮುಳ್ಳುಬೇಲಿ ಮೈಮ್ಯಾಲ್ ಎಳ್ಕೊಳೋದ್ ಯಾಕ್ ಹೇಳಿ” ಗೌಡರು ವೀಳ್ಯ ಹಾಕಿ ಕೆಂಪಾದ ಅರೆಹುಳುಕು ಹಲ್ಲುಗಳೆಲ್ಲವನ್ನೂ ಕಿಸಿದು ಹೇಳಿದರು.

ಉಕ್ಕಿ ಹರಿಯುತ್ತಿದ್ದ ಹೊಳೆಯ ಬಳಿ ಬಂದಾಗ ಅಲ್ಲೆಲ್ಲೂ ರಂಗನನ್ನು ಕಾಣದೇ, ಗೌಡರು ಶಾನುಭೋಗರಿಗೆ, “ಇಲ್ಲೇ ಹೊಳೆಯ ಯಾವ್ದೋ ಬಂಡೆ ಮ್ಯಾಲೆ ಉರುಳಾಡ್ತಿರತ್ತೆ,ಕತ್ತೆ ನನ್ ಮಗಂದು. ಕಣ್ ಮಂಜಾಗದೆ. ವಸಿ ನೋಡ್ರಿ ಶಾನುಭೋಗ್ರೇ” ಎಂದು ತಮ್ಮ ಕೈಲಿದ್ದ ಲಾಟೀನನ್ನು ಶಾನುಭೋಗರಿಗೆ ವರ್ಗಾಯಿಸಿದರು. ನೊರೆಭರಿತ ಹಾಲಿನಂತೆ ಉಕ್ಕಿ ಉಕ್ಕಿ ಹರಿಯುತ್ತಿದ್ದಹೊಳೆಯ ರೌದ್ರನೋಟ ಎಂಥಾ ಎಂಟೆದೆಯವನನ್ನೂ ಅಲುಗಾಡಿಸುವಂತಿತ್ತು. ದಟ್ಟ ಕಗ್ಗತ್ತಲ ಹಿನ್ನೆಲೆಯಲ್ಲಿ ಮಿಣುಕು ಹುಳದಂತೆ ಮಂದವಾದ ಲಾಟೀನನ್ನು ಹಿಡಿದು ಹೆಜ್ಜೆ ಹೆಜ್ಜೆ ಇಡುವಾಗಲೂ ಸತ್ತುಸತ್ತು ಬದುಕುತ್ತಿದ್ದ ಶಾನುಭೋಗರ ಎದೆಬಡಿತ ಹೊಳೆಯ ಘನರವಕ್ಕೇ ಸೆಡ್ಡು ಹೊಡೆಯುವಂತಿತ್ತು. ತಮ್ಮ ಕಂಗಳನ್ನು ಸಾಧ್ಯವಾದಷ್ಟೂ ಕಿರಿದಾಗಿಸಿ, ತೀವ್ರದೃಷ್ಠಿ ಬೀರಿದ ಶಾನುಭೋಗರಿಗೆ ಆ ಕತ್ತಲಲ್ಲಿಅದ್ಯಾವುದೋ ಬಂಡೆಯ ನಡುವೆ ಬೆಳ್ಳಬೆಳ್ಳಂಗೆ ಎಂತದ್ದೋ ಕಂಡಂತಾಯಿತು. ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡು, ಹುಷಾರಾಗಿ ಅದನ್ನು ಸಮೀಪಿಸತೊಡಗಿದರು. ಯಾವುದನ್ನೂ ಲೆಕ್ಕಿಸದೇಸುರಿಯುತ್ತಿದ್ದ ಮಳೆಗೆ ರಕ್ಷೆಯಾಗಿ ಹೆಗಲ ಮೇಲಿನ ಮಗುಟವನ್ನು ತಲೆಗೆ ಪೇಟದಂತೆ ಕಟ್ಟಿಕೊಂಡರು. ನಿಧಾನವಾಗಿ ಅದನ್ನು ಸಮೀಪಿಸಿದ ಶಾನುಭೋಗರಿಗೆ ಕಂಡದ್ದು, ಹರಕು ಬಿಳಿಅಂಗಿಯನ್ನುಟ್ಟುಬಂಡೆಯನ್ನು ತಬ್ಬಿಕೊಂಡು ಮಲಗಿದ್ದ ರಂಗನ ದೇಹ!! ಶಾನುಭೋಗರಿಗೆ ಪಿಚ್ಚೆನಿಸಿತು. ನಿರಾಶಾಭರಿತರಾಗಿ ತಲೆಯಾಡಿಸುತ್ತಾ ಅದನ್ನು ಪರಿಶೀಲಿಸಿ, ” ಜೀವ ಹೊಂಟೋಗದೆ. ಏನ್ ಮಾಡದುಗೌಡ್ರೇ” ಎಂದು ಕೇಳಿದರು. ಗೌಡರು ಭಾವಶೂನ್ಯರಾಗಿ, ” ಹೊಲಸು ಕೂಸು. ತಡವಾದಾಗ್ಲೇ ಅಂದ್ಕಂಡೆ, ಇಂಗೇ ಎಂತದೋ ಆಗಿದೆ ಅಂತ. ಥೂ…ತರ್‍ರೀಕೆ…..ನಾಳೆ ಪೂಜೆ ಇಂಟ್ಕಂಡಿರೋಸಮಯದಾಗ ಇದ್ರದ್ದೊಂದು ಸೂತಕ. ಈ ಸುದ್ದಿ ಊರ್‍ನಾಗೆಲ್ಲಾ ಹರಡೋ ಮುನ್ನ ಇಷ್ಟಕ್ಕೇ ಮುಚ್ಚಿ ಹಾಕ್ಬೇಕು. ದ್ಯಾಮಂಗ್ಹೇಳಿ ಮುಂಜಾವಲ್ಲಿ ಜನಾ ತಿಳಿಯೋದ್ರೊಳಗಾ ಇದ್ರ ಹೆಣ ಮಣ್ಣು ಸೇರಬೇಕು.ಬಿಡಿ ಅತ್ಲಾಗೆ, ಪೀಡೆ ತೊಲಗ್ತು ಅಂದ್ಕೋತೀನಿ. ಈ ಹಾಳು ರಂಗನಿಂದ ಸುಖಾ ಇಲ್ಲ” ಎಂದು ದೂರದಲ್ಲೆಲ್ಲೋ ಅಭೇದ್ಯ ಸುಳಿಯ ಬಳಿ ತೇಲುತ್ತಿದ್ದ ಕೊಡವನ್ನು ಕಂಡು, ಮೂಗು ಮುರಿದು ಹೊರಟರು.ಶಾನುಭೋಗರ ಮನಸ್ಸು ಆರ್ದ್ರವಾಯಿತು. ಬರುಬರುತ್ತಾ ಮಾನವ ಕರುಣೆ, ಕನಿಕರವನ್ನೆಲ್ಲಾ ಮೃಗ ಸಮುದಾಯಕ್ಕೆ ಬಿಟ್ಟು ಕೊಡುತ್ತಿದ್ದಾನೇನು!!

ಮನೆಗೆ ಹೋಗಿ ಕೂಡಲೇ ಪಿಕಾಸಿಯೊಂದಿಗೆ ಆಳು ದ್ಯಾಮನನ್ನು ಕಳುಹಿಸಲಾಯಿತು. ಗೌಡತಿಗೆ ವಿಷಯ ತಿಳಿಸಿದಾಗ,” ಹಾಳಾದ ಕೂಸಿನ ರೂಪದ ಪಿಶಾಚಿ. ನನ್ ತವರು ಮನೀಯವರು ಕೊಟ್ಟಚಿನ್ನದಂಥಾ ತಂಬಿಗೇನ ನುಂಗಿ ಹಾಕ್ಬಿಟ್ಟ” ಎಂದು ಎದೆ ಬಡಿದುಕೊಂಡು ಅತ್ತರು ಗೌಡತಿ. ಹೊರಗೆ ಸುರಿಯುತ್ತಿರುವ ಮಳೆಯಲ್ಲಿ ಪಸರಿಸಿಕೊಂಡಿದ್ದ ಧೂಮದಂಥ ಕತ್ತಲು ದಿಗಿಲು ಹುಟ್ಟಿಸುವಂತಿತ್ತು!ರಂಗನ ಹೆಣ ಬಂಡೆಯನ್ನಪ್ಪಿ ಸುಖನಿದ್ರೆ ಮಾಡುತ್ತಿತ್ತು, ಬಾಳಲ್ಲಿ ಮೊದಲನೇ ಬಾರಿ! ಗೌಡತಿ ತವರಿನ ಕೊಡ ನೆನೆದು, ನೆಟ್ಟಿಗೆ ಮುರಿಯುತ್ತಾ ಸತ್ತ ರಂಗನ ಆತ್ಮನನ್ನು ಶಪಿಸುತ್ತಿದ್ದರು. ಇತ್ತ ಕಳೆದ ಐದುವರ್ಷಗಳಲ್ಲಿ ರಂಗನ ತಾಯಿಯ ಸಾಲ ತೀರಿ, ತಮಗಾಗಿದ್ದ ರಂಗನ ಚಾಕರಿಯ ಲಾಭವನ್ನು ನೆನೆದು, ಲೆಕ್ಕ ಹಾಕುತ್ತಾ ಗೌಡರು ಮೀಸೆಯೊಳಗೇ ನಗುತ್ತಿದ್ದರು! ಪಿಟಿಪಿಟಿ ಸುರಿಯುತ್ತಿದ್ದ ಮಳೆಯಮರಾಯನ ಕರೆಯಂತೆ ಕೇಳಿಸುತ್ತುತ್ತು. ಶ್ಯಾಮಲ ಮುಗಿಲಿನ ಆಂತರ್ಯದಲ್ಲಿ ಅಡಗಿ ಕುಳಿತಿದ್ದ ಬಿದಿಗೆ ಚಂದಿರ, ಇದೆಲ್ಲವನ್ನೂ ಕಂಡು ಮೆಲ್ಲನೇ ವಕ್ರವಾಗಿ ನಕ್ಕ!

ರಂಗ ಏನೋ ಸತ್ತ, ಆದರೆ ಗುಲಾಮಗಿರಿ ಸಾಯಲಿಲ್ಲ!!!

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!