ಕಥೆ

ಹಗಲು ವೇಷ – ಕಥೆ

ಇವತ್ತು ನಾನು ೧೦ನೇ ಸಲ ಸಂದರ್ಶನಕ್ಕೆ ಹೋಗುತ್ತಿರುವುದು.ಅಲ್ಲ ನಾನು ಇತಿಹಾಸದಲ್ಲಿ ಎಂ.ಎ. ಮಾಡಿದಕ್ಕೆ ಏನೂ ಬೆಲೆಯೇ ಇಲ್ಲವೇ? ಈ ಹಿಂದೆ ೯ ಕಾಲೇಜುಗಳಿಗೆ ಅರ್ಜಿ ಹಾಕಿ, ಸಂದರ್ಶನಕ್ಕೆ ಆಯ್ಕೆ ಆಗಿ,ಸಂದರ್ಶನದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಚೆನ್ನಾಗಿಯೇ ಉತ್ತರಿಸಿದ್ದೆ. ಅಧ್ಯಾಪಕನ ಹುದ್ದೆಗೆ ಆಯ್ಕೆ ಆಗಿಯೇ ಆಗುತ್ತೇನೆಂಬ ಖುಷಿಯಲ್ಲಿ ಹೊರಬಂದಿದ್ದೆ.ಮನೆಗೆ ಬಂದು ಅಮ್ಮ ಮಾಡಿಟ್ಟಿದ್ದ ಅಡುಗೆ ಉಂಡು,ಮಧ್ಯಾಹ್ನ ಸುಖವಾಗಿ ನಿದ್ರಿಸಿದ್ದೆ.೫ ಸರ್ಕಾರೀ ಕಾಲೇಜುಗಳಿಗೂ ಅರ್ಜಿ ಹಾಕಿ ಸಂದರ್ಶನ ಎದುರಿಸಿದ್ದೆ.ಸರ್ಕಾರೀ ಕಾಲೇಜುಗಳಲ್ಲಿ ನನ್ನಂಥವರಿಗೆ ಕೆಲಸ ಸಿಗಲೂ ಸಾಧ್ಯವಿಲ್ಲ.ಏಕೆಂದರೆ ನಾನು ಬ್ರಾಹ್ಮಣನಲ್ಲವೇ. ದಲಿತರಿಗೆ,ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಕೊಟ್ಟು ಉಳಿದರೆ ಬ್ರಾಹ್ಮಣರಿಗೆ ಕೊಡುತ್ತಾರೆ.ಅದನ್ನು ಪಡೆಯಲೂ ಲಾಬಿ ಮಾಡಬೇಕು,ರಾಜಕಾರಣಿಗಳ,ಮಠಾಧೀಶರ ಕಾಲು ಹಿಡಿದು ಕೆಲಸ ಕೊಡಿಸುವಂತೆ ಗೋಗರೆಯಬೇಕು.ಕೇಳಿದಷ್ಟು ಲಂಚವನ್ನೂ ಕೊಡಬೇಕು. ಹಾಗಾಗಿಯೇ ಈ ಹಿಂದೆ ೯ ಕಡೆಗಳಲ್ಲೂ ಸಂದರ್ಶನ ಎದುರಿಸಿದ್ದರೂ ಕೆಲಸ ಮಾತ್ರ ಸಿಗಲಿಲ್ಲ. ಇನ್ನು ಎಷ್ಟು ದಿನ ಅಂತ ನಾನು ತಂದೆಯ ಹಣದಲ್ಲಿ ಬದುಕಲಿ.ಅವರೂ ಪಾಪ ಎಷ್ಟು ದಿನ ಅಂತ ದುಡಿದಾರು.ಒಂದಲ್ಲಾ ಒಂದು ದಿನ ಅವರೂ ನಿವೃತರಾಗಬೇಕಲ್ಲವೇ,ಆಗ ಅವರ ನಿವೃತಿಯ ಪಿಂಚಣಿ ಹಣದಿಂದಲೂ ನಾನು ಬದುಕಬೇಕೆ,ಅವರ ವೃಧ್ಧಾಪ್ಯದಲ್ಲಿ ಅವರನ್ನು ನಾನು ಸಾಕಬೇಕಲ್ಲವೇ,ಅದು ಮಗನಾದ ನನ್ನ ಕರ್ತವ್ಯವಲ್ಲವೇ,ಆದರೆ ನನಗೆ ದುಡಿಯಲು ಕೆಲಸವಿಲ್ಲದಿರುವಾಗ ನಾನು ಏನು ತಾನೇ ಮಾಡಲು ಸಾಧ್ಯ. ನನಗೊಬ್ಬಳು ತಂಗಿಯಿದ್ದಾಳಲ್ಲ,ಅವಳ ಮದುವೆಯನ್ನು ನಾನು ಮಾಡಬೇಕಾಕಿದೆಯಲ್ಲ,ಅವಳ ಅಗತ್ಯಗಳನ್ನು ಪೂರೈಸಬೇಕಾದ್ದು ಅಣ್ಣನಾದ ನನ್ನ ಕರ್ತವ್ಯವಲ್ಲವೇ, ಅವಳಿಗೂ ಪಾಪ ತನ್ನ ಓರಗೆಯ ಗೆಳತಿಯರ ಹಾಗೆಯೇ ತಾನೂ ಚೆನ್ನಾಗಿ ಬದುಕಬೇಕು ಎಂಬ ಆಸೆ ಇರುವುದಿಲ್ಲವೇ,ಅವಳು ಹಾಗೆ ಆಸೆ ಇಟ್ಟುಕೊಳ್ಳುವುದೂ ತಪ್ಪಲ್ಲವಲ್ಲ. ನನಗೆ ಕೆಲಸವಿಲ್ಲದಿರುವಾಗ ನಾನು ಹಣ ಸಂಪಾದಿಸುವುದೆಂತು,ನನ್ನ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದೆಂತು, ತಂಗಿಯ ಮದುವೆ ಮಾಡುವುದು ಎಲ್ಲಿಂದ ಬಂತು.ಇವೆಲ್ಲವೂ ನನ್ನ ಹತ್ತನೇ ಸಂದರ್ಶನಕ್ಕಾಗಿ ನಾನು ಬಸ್ಸಿನಲ್ಲಿ ಹೋಗುತ್ತಿರುವಾಗ ನನ್ನ ಮನಸ್ಸಿನಲ್ಲಿ ಹಾದು ಹೋದವು.

ಇಂದು ನಾನು ಹೋದ ಕಾಲೇಜಿನಲ್ಲೂ ಯಥಾಪ್ರಕಾರ ಅನೇಕ ಜನ ಉದ್ಯೋಗಾಕಾಂಕ್ಷಿಗಳಾಗಿ ಅಲ್ಲಿಗೆ ಬಂದಿದ್ದರು. ಎಂದಿನಂತೆ “ಅಹಿಂದರು” ಬಹಳ ಸಂಖ್ಯೆಯಲ್ಲಿದ್ದರು.ಆದರೆ ನನಗೆ ಒಂದು ಸಮಾಧಾನ ಇತ್ತು ಅದೇನೆಂದರೆ,ಆ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ಟರೂ ಬ್ರಾಹ್ಮಣರೇ, ಅವರು ಬ್ರಾಹ್ಮಣನಾದ ನನ್ನನ್ನು ಆಯ್ಕೆ ಮಾಡಿಯೇ ಮಾಡುತ್ತಾರೆಂಬ ನಂಬಿಕೆ ನನಗೆ ಇತ್ತು. ಸಂದರ್ಶನದ ಕೊಠಡಿಯೊಳಗೆ ಪ್ರಾಂಶುಪಾಲ ಗಣಪತಿ ಭಟ್ಟರ ಜೊತೆ ಇನ್ನಿಬ್ಬರು ಇತಿಹಾಸದ ಹಿರಿಯ ಅಧ್ಯಾಪಕರುಗಳು ಕುಳಿತಿದ್ದರು. ಗಣಪತಿ ಭಟ್ರು ನನ್ನ ಬಯೋಡೇಟಾ ನೋಡಿದವರು ನಾನು ಬ್ರಾಹ್ಮಣ ಎಂದು ಗೊತ್ತಾದ ಕೂಡಲೇ ಮುಗುಳ್ನಕ್ಕರು. ಇದು ನನ್ನ ಆತ್ಮವಿಶ್ವಾಸವನ್ನು ಮತ್ತೂ ಹೆಚ್ಚಿಸಿತು. ಎಂದಿನಂತೆ ನಾನು ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗೇ ಉತ್ತರಿಸಿದೆ.ಅಲ್ಲದೇ ನಮ್ಮದೇ ಜಾತಿಯ ಒಬ್ಬ ಅಧ್ಯಾಪಕರೇ ಪ್ರಶ್ನೆ ಕೇಳಲು ಕುಳಿತಿದ್ದರಿಂದ ನಿರ್ಭೀತಿಯಿಂದ ಉತ್ತರಿಸಿದ್ದೆ. ಈ ಬಾರಿ ನಾನು ಅಧ್ಯಾಪಕನಾಗುವುದನ್ನು ತಡೆಯಲು “ಅಹಿಂದ”ರಷ್ಟೇ ಅಲ್ಲದೇ ಆ ಬ್ರಹ್ಮನಿಂದಲೂ ಸಾಧ್ಯವಿಲ್ಲವೆಂದು ಮನೆಗೆ ಬಂದು ಖುಶಿಯಿಂದ ಊಟ ಮಾಡಿ ಮಲಗಿ ಪಾಠ ಮಾಡುವ ಕನಸು ಕಾಣಲಾರಂಭಿಸಿದೆ.

ಮೂರು ದಿನಗಳ ನಂತರ ನನಗೊಂದು ಪತ್ರ ಬಂತು.ನಾನು ಹತ್ತನೇ ಸಲ ಸಂದರ್ಶನಕ್ಕೆ ಹೋಗಿದ್ದ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ಟರೇ ಬರೆದಿದ್ದರು. “ನೀವು ಅಂದು ಸಂದರ್ಶನದಲ್ಲಿ ಉತ್ತರಿಸಿದ್ದನ್ನು ನೋಡಿ ಬಹಳ ಸಂತೋಷವಾಯಿತು. ನಿಮ್ಮಂತಹ ನಿಜವಾದ ಇತಿಹಾಸವನ್ನು ತಿಳಿದುಕೊಂಡಂಥವರು ನಿಜವಾದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು.ಹಾಗಾಗಿ ನಿಮ್ಮನ್ನೇ ಆಯ್ಕೆ ಮಾಡುವಂತೆ ನಾನು ಶಿಫಾರಸ್ಸು ಮಾಡಿದ್ದೆ.ಆದರೆ ನಿಮಗೇ ತಿಳಿದಿರುವಂತೆ ನಮ್ಮ ಕಾಲೇಜಿನಲ್ಲಿ ಖಾಲಿ ಇರುವುದೇ ಎರಡು ಹುದ್ದೆಗಳು. ಹಾಗಾಗಿ ಸಂದರ್ಶನದಲ್ಲಿ ಯಾರೂ ಸಹ ನಿಮ್ಮಷ್ಟು ಚೆನ್ನಾಗಿ ಉತ್ತರಿಸದೇ ಇದ್ದರೂ ನೀವು ಬ್ರಾಹ್ಮಣ ಎಂದು ನಿಮ್ಮನ್ನು ತಿರಸ್ಕರಿಸಿ, ಒಬ್ಬ ಅಲ್ಪಸಂಖ್ಯಾತನನ್ನೂ ಒಬ್ಬ ದಲಿತನನ್ನೂ ಆಯ್ಕೆ ಮಾಡಿದರು.ನನಗೆ ಬಹಳ ಬೇಜಾರಾಯಿತು.ಆದರೆ ನಾನೇನೂ ಮಾಡಲು ಸಾಧ್ಯವಿಲ್ಲ.ನೀವು ನಿಮ್ಮ ಪ್ರಯತ್ನ ಮುಂದುವರೆಸಿ,ನೀವು ಖಂಡಿತಾ ಒಬ್ಬ ಒಳ್ಳೆಯ ಇತಿಹಾಸದ ಪ್ರಾಧ್ಯಾಪಕರಾಗುತ್ತೀರಿ, ಶುಭವಾಗಲಿ”ಎಂದು ಬರೆದಿದ್ದರು.ನನಗೆ ದಿಕ್ಕೇ ತೋಚದಂತಾಗಿ ಕುಸಿದು ಕುಳಿತೆ.ಹೌದು,”ಅಹಿಂದರಿಗೇ” ಕೆಲಸ ಕೊಡಬೇಕು ಹಾಗೆ ಮಾಡಿದರಲ್ಲವೇ ರಾಜಕಾರಣಿಗಳ ಓಟ್ ಬ್ಯಾಂಕ್ ಭದ್ರವಾಗುವುದು.ಅವರು ತಮ್ಮ ಓಟ್ ಬ್ಯಾಂಕ್ ಭದ್ರ ಮಾಡಿಕೊಳ್ಳಲು ನಾನಾ ವೇಷಗಳನ್ನು ತೊಡುತ್ತಾರೆ,ಅಹಿಂದರೂ ಅದನ್ನು ಪಡೆಯಲು ನಾನಾ ವೇಷಗಳನ್ನು ತೊಡುತ್ತಾರೆ. ಇಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ವೇಷ ಧರಿಸಿ ಬದುಕುವವರೇ.ಬದುಕಿಗಾಗಿ ಒಂದು ಥರದ ವೇಷ,ಹೊಟ್ಟೆ ಪಾಡೀಗಾಗಿ ಮತ್ತೊಂದು ಥರದ ವೇಷ,ಕೆಲಸ ಪಡೆಯಲೊಂದು ವೇಷ ಇನ್ನೊಬ್ಬನಿಗೆ ಕೆಲಸ ಸಿಗದಂತೆ ಮಾಡಲು ಮತ್ತೊಂದು ಥರದ ವೇಷ. ಆದರೆ ನನಗೆ ಹಾಗೆ ವೇಷ ಧರಿಸಲು ಬರುವುದಿಲ್ಲವಲ್ಲ ಹಾಗಾಗಿ ನಾನು ಏನು ತಾನೇ ಮಾಡಲು ಸಾಧ್ಯ. ಕೆಲಸದ ಅನ್ವೇಷಣೆ ಎಂಬ ಮರುಭೂಮಿಯಲ್ಲಿ ನನ್ನ ಪಾಲಿಗೆ ಇದ್ದ ಓಯಸಿಸ್ ನ ಕೊನೆಯ ಬಿಂದುವೂ ನನಗೆ ಸಿಗದಾಯಿತು.

ಇಡೀ ದಿನವೂ ಮಂಕಾಗಿ ಕುಳಿತಿರುತ್ತಿದ್ದೆ. ನಾನು ಇತಿಹಾಸದ ಅಧ್ಯಾಪಕನಾಗಬೇಕೆಂಬ ಆಸೆ ಹೊರಟು ಹೋಗಿ ಯಾವ ಕೆಲಸವಾದರೂ ಸರಿ ಮಾಡಲು ಸಿಧ್ದನಾಗಿದ್ದೆ.ನಾಳೆಯಿಂದಲೇ ಬೇರೆ ಕೆಲಸ ಹುಡುಕಬೇಕೆಂದುಕೊಂಡೆ. ಅಷ್ಟರಲ್ಲಿಯೇ ಯಾರೋ ಮನೆಯ ಲ್ಯಾಂಡ್ ಫೋನಿಗೆ ಫೋನ್ ಮಾಡಿ ನನಗಾಗಿ ವಿಚಾರಿಸಿದರು.ನಾನು ಫೋನ್ ಎತ್ತಿಕೊಂಡಾಗ ಮಾತನಾಡಿದವನು,ಮೈಸೂರಿನಲ್ಲಿ ಪಶುವೈದ್ಯನಾಗಿ ಸೆಟ್ಲ್ ಆಗಿರುವ ನನ್ನ ಬಾಲ್ಯ ಸ್ನೇಹಿತ. ನಾನು ಹಾಗೂ ಅವನು ಒಟ್ಟಿಗೆ ಆಡಿ ಬೆಳೆದಿದ್ದೇವೆ.ಅವನು ವನ್ಯಜೀವಿ ಪಶುವೈದ್ಯನಾಗಿ ಮೈಸೂರಿನ ಪ್ರಾಣಿಸಂಗ್ರಹಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ.ಅವನು ಮಾತನಾಡುತ್ತಾ “ನೋಡು ನಿನಗೆ ಇನ್ನೂ ಕೆಲಸ ಸಿಕ್ಕಿಲ್ಲ, ಅನೇಕ ಕಡೆಗಳಲ್ಲಿ ಪ್ರಯತ್ನಿಸಿ ಸೋತಿದ್ದೀಯ ಎಂದು ಸ್ನೇಹಿತರ ಮೂಲಕ ತಿಳಿಯಿತು.ನಾನು ನಿನಗೆ ಒಂದು ಕೆಲಸ ಕೊಡಿಸಬಲ್ಲೆ ಅದೂ ನೀನು ಒಪ್ಪುವುದಾದರೆ ಮಾತ್ರ, ಒತ್ತಾಯವೇನೂ ಇಲ್ಲ.ತಿಂಗಳಿಗೆ ೨೦೦೦೦ ರೂಪಾಯಿ ಸಂಬಳ,ಊಟ,ವಸತಿ ಕೊಡುತ್ತೇವೆ.ನೀನು ಆಯಿತು ಎಂದರೆ ಕೆಲಸ ಏನೆಂದು ಹೇಳುತ್ತೇನೆ” ಎಂದ. ಕೆಲಸ ಯಾವುದಾದರೇನು ಒಟ್ಟಿನಲ್ಲಿ ನಾನು ನಿರುದ್ಯೋಗಿಯಾಗಿರಲು ಸಾಧ್ಯವಿಲ್ಲ ಎಂದು ಕೆಲಸವೇನೆಂದು ಕೇಳಿದೆ.ಅವನು “ನೋಡು ನಾನು ಹೇಳುವ ಮಾತುಗಳನ್ನು ಗಮನವಿಟ್ಟು ಕೇಳು,ಬಹಳ ಗೌಪ್ಯವಾಗಿರಬೇಕು ಮತ್ಯಾರಿಗೂ ತಿಳಿಯಬಾರದು.ನಮ್ಮ ಝೂ ನಲ್ಲಿರುವ ಒಂದು ಕರಡಿ ನಿನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ತೀರಿ ಹೋಯಿತು.ಅದೊಂದೇ ಕರಡಿ ಇದ್ದದ್ದು. ಈಗ ಝೂ ಗೆ ಬರುತ್ತಿರುವ ವೀಕ್ಷಕರೆಲ್ಲರೂ ಕರಡಿ ಎಲ್ಲಿ ಅಂತ ಗಲಾಟೆ ಮಾಡುತ್ತಿದ್ದಾರೆ. ಇನ್ನೊಂದು ಕರಡಿ ತರಲು ಕೆಲವು ತಿಂಗಳುಗಳೇ ಬೇಕು.ಅಲ್ಲಿಯವರೆಗೂ ನೀನು ಇಲ್ಲಿಗೆ ಬಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಕರಡಿಯ ವೇಷ ಹಾಕಿ ನಿಲ್ಲಬೇಕು.ಇನ್ನೊಂದು ಕರಡಿ ಬಂದ ಮೇಲೆ ನಾನೇ ನಿನಗೆ ಎಲ್ಲಿಯಾದರೂ ಒಳ್ಳೆಯ ಕೆಲಸ ಕೊಡಿಸುತ್ತೇನೆ.ನೋಡು ಆಲೋಚಿಸು” ಎಂದ. ನಾನು ಸಹ ಸ್ವಲ್ಪ ಆಲೋಚಿಸಿ ಆಯಿತು ಎಂದು ಬಿಟ್ಟೆ.ತಂದೆ ತಾಯಿಯ ಆಶೀರ್ವಾದ ಪಡೆದು ಮೈಸೂರಿಗೆ ಹೊರಟೇ ಬಿಟ್ಟೆ.

ಶುರುವಾಯಿತು ನೋಡಿ ನನ್ನ ಕರಡಿಯ ಕೆಲಸ.ಬೆಳಿಗ್ಗೆಯಿಂದ ಸಂಜೆಯವರೆಗೂ ಕರಡಿಯ ವೇಷ ಧರಿಸಿ ನಿಂತುಕೊಳ್ಳುತ್ತಿದ್ದೆ.ಜನರಿಗೆ ಇದು ನಿಜವಾದ ಕರಡಿ ಅಲ್ಲ ಅಂತ ಗೊತ್ತೇ ಆಗುತ್ತಿರಲಿಲ್ಲ.ಮೊದಲ ತಿಂಗಳ ಸಂಬಳ ೨೦೦೦೦ ರೂಪಾಯಿಗಳನ್ನು ಅಡ್ವಾನ್ಸ್ ಆಗಿ ಮೊದಲೇ ಕೊಟ್ಟಿದ್ದರು. ನನ್ನ ಬೋನಿನೊಳಗೇ ಊಟ,ತಿಂಡಿ, ನೀರು ಸರಬರಾಜು ಮಾಡುತ್ತಿದ್ದರು.ಜನರು ಇಲ್ಲದ ಹೊತ್ತು ನೋಡಿಕೊಂಡು ಊಟ ಮಾಡುತ್ತಿದ್ದೆ.ಸಂಜೆ ವೇಷ ಕಳಚಿಟ್ಟು ರೂಮಿಗೆ ಹೋಗುತ್ತಿದ್ದೆ.ಮೊದಮೊದಲು ತಂದೆ ತಾಯಿ ತಂಗಿಗೆ ಮುಜುಗರವಾದರೂ ನಂತರ ಒಪ್ಪಿಕೊಂಡರು.ನಾನೂ ಖುಷಿಯಿಂದ ಇದ್ದೆ.ನನ್ನ ಅಕ್ಕಪಕ್ಕದ ಬೋನಿನಲ್ಲಿ ಸಿಂಹ ಹುಲಿಗಳು ಇದ್ದವು.ಆದರೆ ಅವು ಬೋನಿನೊಳಗೆ ಬಂಧಿಯಾಗಿದ್ದರಿಂದ ನನಗೇನೂ ಭಯವಿರಲಿಲ್ಲ.ಹೀಗೆಯೇ ಒಂದು ತಿಂಗಳು ಕಳೆಯಿತು.

ಒಂದು ದಿನ ಮಧ್ಯಾಹ್ನ ಊಟ ಮಾಡುತ್ತಿದ್ದೆ.ಜನರು ಕಡಿಮೆ ಇದ್ದರು.ನನ್ನ ಪಕ್ಕದ ಬೋನಿನಲ್ಲಿದ್ದ ಹುಲಿಯೊಂದು ಬೋನು ತೆರೆದುಕೊಂಡು ನನ್ನ ಬೋನಿನೊಳಗೆ ಬರತೊಡಗಿತು.ನನಗೆ ಜೀವವೇ ಕೈಗೆ ಬಂದಂತಾಯಿತು.ಆಯಿತು ಇವತ್ತು ನನ್ನ ಕಥೆ ಮುಗಿಯಿತು.ಬಹುಷಃ ಕರಡಿಯಾಗೇ ಸಾಯಬೇಕು ಎಂದು ದೇವರು ನನ್ನ ಹಣೆಯಲ್ಲಿ ಬರೆದಿದ್ದನೋ ಏನೋ, ಸುಮ್ಮನೇ ನಿರುದ್ಯೋಗಿಯಾಗಿದ್ದೆ.ಇಂದಲ್ಲ ನಾಳೆ ಕೆಲಸ ಸಿಗುತ್ತಿತ್ತು.ನನ್ನ ಪಶುವೈದ್ಯ ಸ್ನೇಹಿತನ ಮಾತು ನಂಬಿಕೊಂಡು ಇಲ್ಲಿಗೆ ಬಂದೆ. ಈಗ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇನೆ. ಅಪ್ಪ ಅಮ್ಮ ತಂಗಿಯನ್ನು ನೆನೆದು ಅಳುವೇ ಬಂತು. ಅವರನ್ನು ನೋಡಿಕೊಳ್ಳುವವರಾರು,ತಂಗಿಗೆ ಮದುವೆ ಮಾಡುವವರಾರು, ಅವರಿಗೆಲ್ಲಾ ಮನದಲ್ಲಿಯೇ ನನ್ನ ಕೊನೆಯ ನಮಸ್ಕಾರ ತಿಳಿಸುವಷ್ಟರಲ್ಲಿ ಹುಲಿ ನನ್ನ ಬೋನಿನೊಳಗೆ ಬಂದಾಗಿತ್ತು. ನಾನು ಜೋರಾಗಿ ಕೂಗಿಕೊಳ್ಳಬೇಕೆನ್ನುವಷ್ಟರಲ್ಲಿ……

“ಕಿರುಚಬೇಡ ಮಾರಾಯ, ನೀನು ಕೊನೆಯದಾಗಿ ಸಂದರ್ಶನಕ್ಕೆ ಬಂದ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ಟನೇ ನಾನು.ಕಾಲೇಜಿನಲ್ಲಿ ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಯಿತು.ನನ್ನದೇನೂ ತಪ್ಪಿಲ್ಲದಿದ್ದರೂ ನನ್ನನ್ನೇ ಕಾರಣ ಮಾಡಿ ನನ್ನನ್ನು ಕೆಲಸದಿಂದ ತೆಗೆದರು ಎನ್ನುವುದಕ್ಕಿಂತ “ಅಹಿಂದರು”ಅವರ ಪ್ರಭಾವವನ್ನು ಬಳಸಿಕೊಂಡು ಬಚಾವಾದರು ಎನ್ನಬಹುದು.ಆಮೇಲೆ ನನಗೆ ಅಧ್ಯಾಪಕನಾಗಿ ೨೦ ವರ್ಷ ಅನುಭವವಿದ್ದರೂ ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಎಲ್ಲೂ ಕೆಲಸ ಸಿಕ್ಕಲಿಲ್ಲ. ಈಗ ಯಾರ ಮೂಲಕವೋ ಇಲ್ಲಿ ಬಂದು ಹುಲಿಯ ವೇಷ ಹಾಕಿದ್ದೇನೆ. ಪಕ್ಕದ ಬೋನಿನಲ್ಲಿ ನೀನು ಕರಡಿಯಾಗಿರುವ ವಿಷಯ ಹೇಗೋ ತಿಳಿಯಿತು.ಮಾತನಾಡಿಸಿಕೊಂಡು ಹೋಗಲು ಬಂದೆ” ಎಂದು ಆ ಹುಲಿ ಹೇಳಿತು.ಭಟ್ಟರು ಪ್ರಾಂಶುಪಾಲರ ಕೆಲಸ ಪಡೆಯಲು ಏನೇನು ವೇಷ ಹಾಕಿದ್ದರೋ ಯಾರಿಗೆ ಗೊತ್ತು.ಈಗ ಆ ವೇಷ ಕಳಚಿ ಮತ್ತೊಂದು ವೇಷ ಹಾಕಿದ್ದಾರಷ್ಟೇ,ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಬದುಕಲು ಎಲ್ಲರೂ ಒಂದಲ್ಲ ಒಂದು ರೀತಿಯ ವೇಷ ಹಾಕಲೇ ಬೇಕು.ಅದು ಹಗಲು ವೇಷವೂ ಆಗಿರಬಹುದು.

ಲಕ್ಷ್ಮೀಶ ಜೆ.ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!