ಸಿನಿಮಾ - ಕ್ರೀಡೆ

Film review “ಓಂ”: ಮತ್ತೆ ಮತ್ತೆ ಝೇಂಕರಿಸುತ್ತಿರುವ ಓಂಕಾರ, ಗಲ್ಲಾಪೆಟ್ಟಿಗೆಯಲ್ಲಿ ಜೋರಾದ ಚಮತ್ಕಾರ

[yasr_overall_rating size=”large”]  4.3 stars

25 ವರ್ಷದ ಹಿಂದೆ ತೆರೆಕಂಡ ಚಿತ್ರ ಈಗಲೂ ಮತ್ತೆ ಮತ್ತೆ ಬಿಡುಗಡೆಗೊಳ್ಳುತ್ತಿದೆಯೆಂದರೆ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರಬೇಕಾದರೆ, ಕನ್ನಡದಲ್ಲಿ ಬಿಡುಗಡೆಯಾದ ಹೊಸ ಚಿತ್ರಗಳೆಲ್ಲ ಅದರ ಮುಂದೆ ಬೆಕ್ಕಸ ಬೆರಗಾಗಿ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಮಬ್ಬುಮಬ್ಬಾದ  ಬೆಳಕು, ಎದೆ ಝಲ್ಲೆನಿಸುವ background music, ನಿಜವಾದ ಭೂಗತ ಲೋಕದ ಝಲಕ್ ನಮಗೆ ನೀಡುವಷ್ಟರ ಮಟ್ಟಿಗೆ  ಓಂ ಚಿತ್ರದ ಆರಂಭಿಕ  ದೃಶ್ಯಗಳೇ ಯಶಸ್ವಿಯಾಗುತ್ತದೆ.

ವಿಶೇಷ ಕಥಾಹಂದರ ಹೊಂದಿದ ಭೂತದ ಬೊಂಬೆಯ ಸುತ್ತ ನಿಗೂಢ ವೃತ್ತ  ಸೃಷ್ಟಿಸುವ “ಶ್”, ಬುದ್ಧಿವಂತರಿಗೆ ಮಾತ್ರ ಎನ್ನುವ ತಲೆಬರಹದೊಂದಿಗೆ ಬಂದ “A” , ನಾನು ಎನ್ನುವ concept ಇಟ್ಟುಕೊಂಡು ತೆಗೆದ  “ಉಪೇಂದ್ರ”ದಂತಹ ಕಲಾತ್ಮಕ  ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ ಉಪೇಂದ್ರ ಅವರ ಜಾಣ್ಮೆ ತಿಳಿದಿದ್ದರಿಂದಲೇ ನಾನು, ಮನೆಮಂದಿಯೆಲ್ಲ ಕುಳಿತು ನೋಡುವ ಸಾಂಸಾರಿಕ ಚಿತ್ರವಲ್ಲವೆಂದು ತಿಳಿದಿದ್ದರೂ ಅದನ್ನು ನೋಡುವ ಮನಸ್ಸು ಮಾಡಿ ಹೊರಟು ನಿಂತದ್ದು. ಒಂದು ಚಿತ್ರದಿಂದ ಹೇಗೆ ಪ್ರೇಕ್ಷಕನನ್ನು ಯದ್ವಾತದ್ವಾ “confuse” ಮಾಡಿ ಕೊನೆಯವರೆಗೂ ಕುತೂಹಲ ಕೆರಳಿಸಿ, ತಲೆ ಕೆರೆದ್ಕೊಳ್ಳುವಂತೆ ಮಾಡಿಸುವ ಕಲೆ ಉಪೇಂದ್ರ ಅವರಿಗೆ ಕರಗತವಾಗಿದೆ ಎಂಬುದು ಈ ಚಿತ್ರದಲ್ಲಿ ನಿಮಗೆ ಮನದಟ್ಟಾಗುತ್ತದೆ. ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ಜೇಡ್ರಳ್ಳಿ  ಕೃಷ್ಣಪ್ಪ, ತನ್ವೀರಂತಹ ಭೂಗತ ಪಾತಕಿಗಳನ್ನು ಕ್ಯಾಮೆರಾ ಕಣ್ಣ ಮುಂದೆ ತಂದು ನಿಲ್ಲಿಸಿ, ಅವರಿಂದಲೇ ಪಾತ್ರಗಳಿಗೆ ಜೀವ ತುಂಬಿ ವಾಸ್ತವಕ್ಕೆ ತೀರ ತರುವ ಪ್ರಯತ್ನ ಅಲ್ಲಿಯವರೆಗೂ ಯಾವ ನಿರ್ದೇಶಕನೂ ಮಾಡಿರಲಿಕ್ಕಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಸಂದರ್ಭದ ಕೈಗೆ ಸಿಕ್ಕು ಹೇಗೆ ಪಾತಕಿಗಳಾತ್ತಾರೆ, ಅವರ ಮನಸ್ಸಿನಲ್ಲೂ ಪ್ರೀತಿ ಹುಟ್ಟಬಹುದೆ ಎನ್ನುವ ವಿಭಿನ್ನ ಹಾಗೂ ಅದ್ಭುತ ಆಲೋಚನೆ ಆ ಮೊದಲು ಯಾರು ಕಲ್ಪಿಸಿಕೊಂಡಿರಲಿಲ್ಲ. ಒಂದು ವೇಳೆ ಯೋಚಿಸಿದ್ದರೂ ಅದನ್ನು ಚಲನಚಿತ್ರದ ಮೂಲಕ ಜನಗಳ ಕಣ್ಣಿಗೆ ಕಟ್ಟುವಂತೆ, ಮನಮುಟ್ಟುವಂತೆ  ತೋರಿಸಲು ಯಾರು ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಚಿತ್ರದ ಮೊದಲಲ್ಲಿ ನಾಯಕಿಯ (ಪ್ರೇಮ)  ಮೇಲೆ ಅನುಕಂಪ, ನಾಯಕ (ಶಿವಣ್ಣ) ಯಾಕಾದರೂ ಅವಳನ್ನು ಕಾಡಿಸುತ್ತಾನೆ ಎನ್ನುವ ಮುನಿಸು ನಿಮ್ಮಲ್ಲಿ ಮೂಡಿದರೆ ಅದು ಸಹಜ. ಕಥೆ ಸಾಗುತ್ತ ಆ ಕೋಪ ನಾಯಕಿಯ ಮೇಲೆ ತಿರುಗಿ, ನಾಯಕನ ತಪ್ಪೇನಿಲ್ಲ ಎನ್ನುವ ನಿರ್ಧಾರಕ್ಕೆ ಇನ್ನೇನು ಬರಬೇಕೆನ್ನುವಷ್ಟರಲ್ಲಿ ಮತ್ತದೇ ಸರಿ-ತಪ್ಪುಗಳ ಜಂಜಾಟ  ತಿಕ್ಕಾಟಗಳು ಮರುಕಳಿಸಿ  ಒಮ್ಮೆ ನಾಯಕಿಯ ಪರವಾಗಿಯೂ ಇನ್ನೊಮ್ಮೆ ನಾಯಕನ ಪರವಾಗಿಯೂ ಹೊರಳಿ ಕೊನೆಗೆ ಸಂದರ್ಭದ ಆಟಕ್ಕೆ ಎಲ್ಲರೂ ದಾಳಗಳೇ ಹೊರತು ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದು ಸರಿಯೇ ಎಂದು ಅಂದುಕೊಳ್ಳುವ ಹಂತಕ್ಕೆ ತಂದು ನಿಲ್ಲಿಸುತ್ತದೆ ನಿರ್ದೇಶಕರ ಜಾಣ್ಮೆ. ಅಷ್ಟರ ಮಟ್ಟಿಗೆ ಸಾಗುತ್ತದೆ ಉಪೇಂದ್ರರವರ ಕಥೆ ಹೇಳುವ ಕಲೆಗಾರಿಕೆ.

ಅಲ್ಲಲ್ಲಿ ಕೊಲೆ, ರಕ್ತಪಾತಗಳು ತುಸು ಹೆಚ್ಚೇ ಎನಿಸಿದರೂ, ಅದು ಚಿತ್ರಕ್ಕೆ ಪೂರಕವಾಗಿಯೇ ಇರುವುದಲ್ಲದೆ, ಕೆಸರಿನಲ್ಲರಳಿದ ಕಮಲದಂತಿರುವ ನಾಯಕ – ನಾಯಕಿಯ ನಡುವಿನ ಸದ್ದಿಲ್ಲದ ನಿಸ್ವಾರ್ಥ ಪ್ರೇಮ ಮತ್ತು ಕರ್ಣಾನಂದ ಉಂಟುಮಾಡುವ ಹಂಸಲೇಖ ಸಂಗೀತ  ಅದನ್ನು ಮುಚ್ಚಿಹಾಕುತ್ತದೆ. ಅಂಡರ್ ವರ್ಲ್ಡಿನಲ್ಲಾಗುವ ನಿಜವಾದ ಆಗುಹೋಗುಗಳನ್ನೇ ಕಟ್ಟಿಕೊಟ್ಟಿದ್ದರಿಂದ  ಈ ಚಿತ್ರದಲ್ಲಿ ಬರುವ ಮಚ್ಚಿಂದ ಕೊಚ್ಚುವ ಕರಾಳ ದೃಶ್ಯಗಳು ಅತಿರೇಖವೆಂದೆನಿಸುವುದಿಲ್ಲ. ಕ್ಲೈಮಾಕ್ಸ್ ಕೊಂಚ ನಾಟಕೀಯವೆನಿಸಿದರು, ಸಮಾಜಕ್ಕೆ ಉತ್ತಮ ಸಂದೆಶದ “ಓಂ”ಕಾರ ನಾದವನ್ನು ರವಾನಿಸಲು ಈ ರೀತಿ ದಿಢೀರ್ “ಮಾರ್ಪಾಡು“ ತಂದಿರುವುದು ಸಹಜ. ಇಷ್ಟೆಲ್ಲ ಉತ್ತಮ ಅಂಶ ಹೊಂದಿರುವ ಓಂ ಚಿತ್ರದಲ್ಲಿ ಅಲ್ಲಲ್ಲಿ ಬರುವ ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳಿಗೆ ಯಾವುದೇ ರೀತಿಯ ಎಚ್ಚರಿಕೆಯ ಸಂದೇಶ ಬಿತ್ತರಿಸದೆ SENSOR ಮಂಡಳಿ ನಿಯಮ ಮೀರಿರುವುದು ಬೇಸರ ತರಿಸುತ್ತದೆ.

ಕಿವಿಮಾತು: ಓಂ ಚಿತ್ರದ ನಂತರ ಎಷ್ಟೋ ಹೀರೋಗಳು ಅಷ್ಟೇಕೆ ನಿರ್ದೇಶಕ, ನಿರ್ಮಾಪಕರೂ ಸಹ ತಮ್ಮ ತಮ್ಮ “ಸ್ಥಾನಪಲ್ಲಟ” ಮಾಡಿಕೊಂಡು ಯಾವುದೇ ಬೇಧ-ಭಾವವಿಲ್ಲದೆ ಕೈಯಲ್ಲಿ ಲಾಂಗು ಮಚ್ಚು ಹಿಡಿದು, mass dialougeಗಳನ್ನು ಉದುರಿಸಲು ನಾಮುಂದು-ತಾಮುಂದು ಎಂದು ಹಟಕ್ಕೆ ಬಿದ್ದವರಂತೆ, ರಕ್ತದ ಓಕುಳಿ ಹರಿಸುವ ಸಾಲು ಸಾಲು ಕನ್ನಡ ಚಿತ್ರಗಳನ್ನು ಹೊರತಂದು ವಾಕರಿಕೆ ಹುಟ್ಟಿಸಿರುವುದಂತು ಸತ್ಯ. ಸಾಲದೆಂಬಂತೆ ಓಂ ಚಿತ್ರದಲ್ಲಿ ಪಟಪಟ ಮಾತನಾಡುತ್ತಾ ಒಮ್ಮೆ ಮುಗ್ಧನಂತೆ , ಮತ್ತೊಮ್ಮೆ angry young man ತರ ಮಿಂಚಿ active ಆಗಿ ಅಭಿನಯಿಸಿದ ಶಿವಣ್ಣ, ಮುಂದೆ ಅಂತಹುದೇ ಹಲವು ಚಿತ್ರಗಳಿಗೆ ಮೊರೆಹೊಗಿ “ಜೋಗಿ”ಯಂತಹ ಆಗೊಂದು ಈಗೊಂದು ಹಿಟ್ ಬಿಟ್ಟರೆ, ತಮ್ಮ  ನೈಜ ಅಭಿನಯವನ್ನೇ ಮರೆತಿದ್ದಾರೇನೋ ಎನಿಸುವಷ್ಟು ಸೊರಗಿ ಹೋಗಿರುವುದೇ ವಿಪರ್ಯಾಸ. ಇದರ ಮಧ್ಯೆ ಉಪೇಂದ್ರರಂತಹ ಪ್ರತಿಭಾನ್ವಿತ ನಿರ್ದೆಶಕ, ನಿರ್ದೆಶನವನ್ನೇ ಮರೆತು ನಟನೆಯತ್ತ ಗಮನ ಹರಿಸಿರುವುದು ಕನ್ನಡಾಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅದೇನೇ ಇರಲಿ, ಪ್ರಸ್ತುತ ಮನಸ್ಥಿತಿಯಲ್ಲೇ ಚಿತ್ರ ವೀಕ್ಷಿಸಿದರೆ ಓಂ ಕೂಡ  ಅಂತಹುದೆ “ರಕ್ತದ ಕೋಡಿ”ಯಲ್ಲಿ  ಒಂದಾಗಿ ಹರಿದುಬಿಡುತ್ತದೆ. ಅದರ ಬದಲು 1995ಕ್ಕೆ ಹೋಗಿ ಇಂಥದ್ದೊಂದು ಪ್ರಯತ್ನ ಮೊತ್ತಮೊದಲ ಬಾರಿಗೆ ನಡೆಯುತ್ತಿರುವುದು ಎಂದು ಮನಗಂಡು ನೊಡಿದರೆ ಅದರ ಆನಂದ ಸವಿಯಯಬಹುದೇನೊ.

ಕಿಡಿಗೇಡಿತನ:   ನಾಯಕನ ಎಂಟ್ರಿಯನ್ನುಈಗಲೂ ಶಿಳ್ಳೆ- ಚಪ್ಪಾಳೆಗಳ ಮೂಲಕ ಬರಮಾಡಿಕೊಳ್ಳುವುದು ಸಾಮಾನ್ಯ ಹಾಗೂ ಸಂತಸದ ವಿಚಾರವೇ ಆದರೂ,  ನಾಯಕಿ ನಾಯಕನ ಪ್ರೀತಿ ಒಪ್ಪದಿದ್ದಾಗ, ಅವಳ ಮುಖಕ್ಕೆ acid ಎರಚಿ ವಿರೂಪಗೊಳಿಸಿಯಾದರೂ ಬೇರೊಬ್ಬರಿಗೆ ಬಿಟ್ಟುಕೊಡದೆ ತಾನೆ ದಕ್ಕಿಸಿಕೊಳ್ಳುವೆ ಎನ್ನುವ ಆಗಿನ ಕಾಲದ ಶುದ್ಧ filmy dialougeಗೆ ಈಗಲೂ theatreನಲ್ಲಿ ಕುಳಿತು ಚಪ್ಪಾಳೆ ತಟ್ಟಿ ಹೆಣ್ಣು-ಮಕ್ಕಳ ಭಾವನೆಗೆ ಘಾಸಿ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಅಲ್ಲವೆ?

ಕೀಟಲೆ: ಪಾರ್ವತಮ್ಮನವರು ಯಾವಾಗೆಲ್ಲ ಹಣದ ಅಭಾವ ಅನುಭವಿಸುತ್ತಾರೋ, ಆಗೆಲ್ಲ ಓಂ ಚಿತ್ರದ ಹಕ್ಕು ವಿತರಿಸಿ, ಚಿತ್ರ ಮರು-ಬಿಡುಗಡೆಗೊಳಿಸಿ ತಮ್ಮ ಬೊಕ್ಕಸ ತುಂಬಿಕೊಳ್ಳೂತ್ತರೆಂದು, ಆದ್ದರಿಂದಲೇ ಚಿತ್ರದ ಹಕ್ಕನ್ನು TV ಮಾಧ್ಯಮಕ್ಕೆ ಮಾರದೆ ಇನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆಂಬುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ “Joಕು”

 

Pramod Baliga

[yasr_visitor_votes size=”medium”]

Facebook ಕಾಮೆಂಟ್ಸ್

ಲೇಖಕರ ಕುರಿತು

Pramod Baliga

Engineer at Sankalp semiconductors.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!