ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನಾವು ಯುವಕರು

‘ವಾಕಿಂಗ್’ ಮುಗಿಸಿ ಮನೆಗೆ ಮರಳಿದೆ. ಬಾಗಿಲು ತೆಗೆಯೋಣವೆಂದು ಚಿಲಕಕ್ಕೆ ಕೈಹಾಕಿದಾಗ ಪತ್ರವೊಂದನ್ನು ಯಾರೋ ಸಿಕ್ಕಿಸಿದ್ದರು. ಆಗಾಗ ಹೀಗೇ ಬ್ರೆಡ್ ಮಾರುವವರು, ಪಿಜ್ಜಾ ಮಾರುವವರು ಚಿಲಕಕ್ಕೆ ಅವರವರ ಬಣ್ಣದ ಚೀಟಿ ಹಚ್ಚುತ್ತಾರೆ. ಆದರೆ ಈ ಪತ್ರ ಯಾವುದೇ ಪ್ರಚಾರಕ್ಕಲ್ಲ, ಮನೆ ಮಾಲಕರ ಎಚ್ಚರಿಕೆ, ವಿನಂತಿ. ’14 ನೇ ತಾರೀಕಿಗೆ ಮನೆ ಎದುರಿರುವ ಕೊಳ, ಹಾಗು ಕೊಳದ ಪ್ರದೇಶವನ್ನು ‘ನಾವು ಯುವಕರು’ ಟಿ ವಿ ಧಾರಾವಾಹಿ ತಂಡಕ್ಕೆ ಚಿತ್ರೀಕರಣಕ್ಕೆ ಬಿಟ್ಟುಕೊಡುತ್ತೇವೆ. ಮುಂಜಾನೆ ಏಳರಿಂದ ಸಂಜೆ ಏಳರ ತನಕ ಚಿತ್ರಿಕರಣ ತಂಡವಿದ್ದು ಸಾಧ್ಯವಾದಷ್ಟು ಕನಿಷ್ಟ ಸದ್ದು ಗದ್ದಲದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ನಿಮಗಾಗುವ ತೊಂದರೆಗಳಿಗೆ ವಿಷಾಧಿಸುತ್ತೇವೆ.’ ಮನೆ ಕಂಪೆನಿಯದ್ದು, ನಾವು ಬಾಡಿಗೆಗೆ. ಕಾಲು ಕೆರೆದು ಮನೆ ಮಾಲಿಕನಲ್ಲಿ ಕಿತ್ತಾಡೋಣ ಎಂದರೆ – ಅದೊಂದು ಸೌಜನ್ಯದ ವಿನಂತಿ. ಮತ್ತೆ ಮಾಲಿಕನ ಮುಖವೆಲ್ಲಿ? ಹೋಗಲಿ ಒಂದು ದಿನವಲ್ಲವೆ, ಊರಲ್ಲಿ ಪ್ರತಿ ದಿನವೆಂಬಂತೆ ಭೂತಕೋಲ, ಜಾತ್ರೆ, ನಾಟಕ, ವಾರ್ಷಿಕೋತ್ಸವ, ಮದುವೆ ಎಂದು ಗದ್ದಲ ಅನುಭವಿಸುವವರಿಗೆ ಒಂದು ದಿನವೇನು ಮಹಾ, ಹೇಗೂ ಹಗಲು ಹೊತ್ತಲ್ಲಾ ರಾತ್ರಿಯಲ್ಲವಲ್ಲ ಎಂದು ಮಗ ಸೊಸೆಯರಲ್ಲಿ ಸಮಾಧಾನ ಮಾಡಿಕೊಂಡೆ.

ಎಪ್ಪತ್ತರ ದಶಕದಲ್ಲಿ ಚಿತ್ರದುರ್ಗದ ಬೆಟ್ಟದಲ್ಲಿ ಆರತಿ ವಿಷ್ಣುವರ್ಧನರು ನಾಗರ ಹಾವು ಚಿತ್ರಕ್ಕೆ ನಟಿಸುವುದು ನೋಡಿದ್ದೆ. ಬಿಸಿಲು, ಕಾದ ಬೆಟ್ಟ, ಜನರ ಗದ್ದಲ ದಿಂದ ಸುಸ್ತಾಗಿ ಸಿನೆಮಾ ಮಂದಿರದಲ್ಲೇ ಪೂರ್ಣ ಚಿತ್ರ ನೋಡೋಣ ಎಂದು ವಾಪಾಸು ಬಂದಿದ್ದೆ. ಇದೀಗ ಮನೆ ಎದುರೇ ಕೆಳಗೆ ಚಿತ್ರೀಕರಣ! ‘ಗ್ಯಾಲರಿಯಲ್ಲಿ ಕುಳಿತು ಸರ್ಕಸ್ ನೋಡಿದ ಹಾಗೆ ಇಲ್ಲಿ ಬಾಲ್ಕನಿಯಲ್ಲಿ ಕುಳಿತು ಚಿತ್ರೀಕರಣದ ಚಟುವಟಿಕೆ ನೋಡುವುದು’ ಎಂದುಕೊಂಡರೂ, ‘ಅದು ಇಲ್ಲಿಯ ಕ್ರಮವಲ್ಲ’ ಎಂದು ಮಗನೆಂದಾಗ ಆಗೊಮ್ಮೆ ಈಗೊಮ್ಮೆ ಕಿಟಿಕಿಯಿಂದ ಇಣುಕದರಾಯಿತು ಎಂದುಕೊಂಡೆ.

ಹದಿನಾಲ್ಕರಂದು ಬೆಳಗ್ಗೇನೆ ಕಿಟಕಿಯಿಂದ ಇಣುಕಿದೆ. ಇಬ್ಬರು ಮೂವರು ‘ಸಿಬ್ಬಂದಿ’ ಎಂದು ಬರೆದ ಟೀ ಶರ್ಟ್ ಧಾರಿಗಳು ಕೊಳದ ಆಕಡೆ ಈಕಡೆ ಓಡಾಡುವುದು ಕಂಡಿತು. ಅವರು ಮಾಯವಾದ ಬೆನ್ನಲ್ಲೇ ಒಬ್ಬೊಬ್ಬರೇ ನೂಕುಗಾಡಿಗಳನ್ನು ತಳ್ಳುತ್ತಾ ಬಂದರು. ಕೆಲವು ಗಾಡಿಗಳಲ್ಲಿ ಕ್ಯಾಮರಾ, ಕೆಲವದರಲ್ಲಿ ಧ್ವನಿಮುದ್ರಕಗಳು, ಇನ್ನು ಕೆಲವಲ್ಲಿ ಬೆಳಕಿನ ವ್ಯವಸ್ಥೆಯ ಸಾಮಾಗ್ರಿಗಳು, ಗುಡಾರ, ಆಹಾರ ಇತ್ಯಾದಿ ಹತ್ತು ಹಲವು. ಇವರ ಹಿಂದೆಯೇ ಚೌಕುಳಿ ಅಂಗಿ, ಚಡ್ಡಿ, ಟೊಪ್ಪಿ ಧರಿಸಿದವ, ಕಪ್ಪು ಅಂಗಿ ಚಡ್ಡಿ ಧರಿಸಿದವರು, ಸಾಮಾನ್ಯ ದಿರಸು ಧರಿಸಿದ ಗಂಡಸರು ಹೆಂಗಸರು. ಹೀಗೆ ಮುವತ್ತೈದು ನಲವತ್ತು ಮಂದಿ. ಆಗಲೇ ಐವತ್ತು ಅರುವತ್ತು ಮಂದಿಯ ಕೂಟ. ಬಂದವರೆಲ್ಲ ಇರುವೆಗಳ ಹಾಗೆ ತಮ್ಮ ತಮ್ಮ ಕೆಲಸ ಹಚ್ಚಿಕೊಂಡರು, ಪರಸ್ಪರ ನಗುತ್ತ, ಓಡಾಡುತ್ತ . ಏನೂ ಗದ್ದಲವಿಲ್ಲ, ಇವರನ್ನು ಸ್ವಾಗತಿಸಲು ಕುತೂಹಲಿ ಜನಗಳೂ ಇಲ್ಲ.

ಚಿತ್ರೀಕರಣ ತಂಡದ ಸಾಮಾನು ಸರಂಜಾಮು ಅಗಾಧ. ಅವರ ಉಪಕರಣಗಳನ್ನು ಜೋಡಿಸುವಾಗ, ಗುಡಾರ ಹೂಡುವಾಗ ಎಳೆದಾಡುವಾಗ ಗದ್ದಲವೇನೂ ಇಲ್ಲ. ಚೌಕುಳಿ ಅಂಗಿಯವನು ಮಾತ್ರ ಆಗಾಗ ಸೂಚನೆ ಕೊಡುತ್ತ, ಒದರುತ್ತ ಓಡಾಡುತ್ತಿದ್ದ. ಅಷ್ಟು ಮಂದಿಯಲ್ಲಿ ‘ಹೀರೋ, ಹಿರೋಯಿನ್’ ಯಾರೆಂದು ಗೊತ್ತಾಗಲಿಲ್ಲ. ಆದರೆ ಗಂಡಸರೆಲ್ಲ ಧಡಿಯರಾಗಿದ್ದ ಕಾರಣ ಕೊಳದಲ್ಲಿ ಒಳ್ಳೆ ಹೊಡೆದಾಟ ಬಡಿದಾಟದ ದೃಶ್ಯದ ಚಿತ್ರೀಕರಣವೇ ಇರಬೇಕೆಂದುಕೊಂಡೆ. ನೋಡ ನೋಡುತ್ತಿದ್ದಂತೆ ಏಣ ಯ ಮೇಲೊಂದು ಕ್ಯಾಮರ, ಕೆಳಗೆ ಗಾಡಿಯಲ್ಲೊಂದು ಕ್ಯಾಮರ, ಮತ್ತೊಬ್ಬನ ಹೆಗಲ ಮೇಲೊಂದು ಕ್ಯಾಮರ, ನೆರಳು ಬೆಳಕಿಗೆ ತಕ್ಕುದಾಗಿ ಪರದೆಗಳು ಫಲಕಗಳು, ದ್ವನಿಗ್ರಹಣಕ್ಕೆ ಉದ್ದದ ಕೊಕ್ಕೆಯ ತುದಿಯಲ್ಲಿ ಸೂಕ್ಷ್ಮಗ್ರಾಹೀ ಮೈಕ್ರೊಫೋನು, ಇವೆಲ್ಲಗಳನ್ನು ಸಂಯೋಜಿಸಲು ಕಂಪ್ಯೂಟರುಗಳು ಎಲ್ಲಾ ಸಿದ್ದ. ‘ಎಲ್ಲಾ ತಯಾರ?’ ಎಂದು ಚೌಕುಳಿ ಅಂಗಿಯವ ಕೂಗುತ್ತಿದ್ದ.

ಕೊಳದ ಪಕ್ಕದ ಗುಡಾರಗಳಿಂದ ನಾಲ್ವರು ಯುವತಿಯರು, ಹಾಗೂ ನಾಲ್ವರು ಯುವಕರು ಹೊರಬಂದರು. ಯುವತಿಯರು ಬಿಕಿನಿಯಲ್ಲೂ ಯುವಕರು ಪಟಾಪಟಿ ಚಡ್ಡಿಯಲ್ಲೂ ಹೊರ ಬರುತ್ತಿದ್ದಂತೆ ಸೆಂಟು ಬಾಟಲಿಗಳ ಚೀಲ ದಂತಿದ್ದ ಚೀಲಗಳನ್ನು ಹೆಗಲಿಗೆ ತಗಲಿಸಿಕೊಂಡಿದ್ದ ಮಹಿಳೆಯೊಬ್ಬಳು ಹಾಗು ಮಹಾನೀಯನೊಬ್ಬ ಅವರ ಬಳಿ ಓಡಿ ಬಂದರು. ಚೀಲದ ಮುಚ್ಚಲ ತೆಗೆದು ಬ್ರಶ್ಶೋ ಬಾಚಣ ಗೆಯೋ ಹಿಡಕೊಂಡು ಅವರ ತಲೆ ಬಾಚಿಯೋ, ಬಣ್ಣಮೆತ್ತಿಯೋ ‘ಫೈನಲ್ ಟಚ್’ ಕೊಡುತ್ತಿದ್ದಂತೆ ಚೌಕುಳಿ ಅಂಗಿಯವ ‘ಬೇಗ ತಯಾರ್,ತಯಾರ್’ ಎಂದ. ಎಲ್ಲಾ ಯಂತ್ರಗಳು ತಯಾರು. ಯುವಕರು ಬಂದು ಕೊಳದ ಪಕ್ಕ ನೀರಿಗೆ ಕಾಲಿಳಿಸಿ ಕುಳಿತರು. ಹಿಂದೆ ಇಬ್ಬರು ಯುವತಿಯರು ಬಣ್ಣದ ಬಟ್ಟೆ ಹಾಸಿ ಬೋರಲಾಗಿ ಮಲಗಿಕೊಂಡರು. ಧಡೂತಿ ಹೆಂಗಸೊಬ್ಬಳು ಏನನ್ನೋ ಬರೆದ ಹಾಳೆಗಳನ್ನು ನಾಲ್ವರೂ ಯುವಕರಿಗೆ ಓದಕೊಟ್ಟು ಮತ್ತೆ ಇಸಕೊಂಡಳು. ಚೌಕುಳಿ ಅಂಗಿಯವ ಸ್ಲೇಟಿನಂತಿರುವುದೇನನ್ನೊ ಯುವಕರ ಮುಖಕ್ಕಿಡಿದು ಚಕ್ಕಂತ ಮುಚ್ಚಿದಾಗ ಕ್ಯಾಮರಾ ಚಾಲು, ಮತ್ತಿಬ್ಬರು ಹುಡಿಗಿಯರು ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ ತೊನೆದಾಡುತ್ತ ನಡೆಯತೊಡಗಿದರು. ಧ್ವನಿಗ್ರಹಣ ಸುರು ವಾಯಿತು, ಯುವಕರು ಒಟ್ಟಿಗೆ ನಗುತ್ತ ಏನೋ ಅಂದರು. ಚೌಕುಳಿ ಅಂಗಿಯವ ‘ಕಟ್’ ಎಂದ. ಇದೇ ದೃಶ್ಯ ಹತ್ತಾರು ಬಾರಿಯೋ ಇನ್ನೆಷ್ಟು ಬಾರಿಯೋ ನಡೆಯಿತು. ಮಧ್ಯೆ ಮಧ್ಯೆ ಕೋಕಾ ಕೋಲವನ್ನೋ, ಪೆಪ್ಸಿಯನ್ನೊ ಕುಡಿದು ಕೊಳ್ಳುತಿದ್ದರು. ಕೊಳ ಅಲ್ಲೋಲ ಕಲ್ಲೋಲವಾಗುವುದನ್ನು ನಿರೀಕ್ಷಿಸಿದ್ದ ನಾನು ಬೇಸತ್ತು ಕಿಟಕಿ ಮುಚ್ಚಿಕೊಂಡೆ, ಒಂದಷ್ಟು ಹೊತ್ತು ಕಣ್ಣು ಮುಚ್ಚಿ ಮಲಗಿಕೊಂಡೆ. ಕೆಳಗೆ ಅಷ್ಟು ಮಂದಿ ಇದ್ದರೂ ಏನೂ ಗದ್ದಲವಿಲ್ಲ, ಕೇವಲ ತರಗೆಲೆ ಗಾಳಿಗೆ ಹರಿದಾಡಿದ ಶಬ್ದ ಅಷ್ಟೆ. ಹಾಗೇ ಜೊಂಪು ಬಂತು.

ಎದ್ದ ಮೇಲೆ ಮತ್ತೆ ಕಿಟಕಿಯಿಂದ ಇಣುಕಲೇ ಇಲ್ಲ. ಏನೋ ಓದುತ್ತ ಇದ್ದೆ. ನನ್ನಾಕೆ ಅಂದಳು’ ಕೆಳಗಿನ ಮನೆಯವರಿಗೆ ಇವತ್ತು ಬಂದವರಿಗೆ ‘ರೆಸ್ಟ್ ರೂಂ’ ಸೌಲಭ್ಯ ಒದಗಿಸಿಯೇ ಸಾಕಾಗ ಬಹುದು’ ಎಂದು. ‘ಏನೋಪ್ಪ’ ಎಂದು ಕಿಟಕಿಯಿಂದ ಇಣುಕಿದೆ. ಯುವಕರು ನೀರಿಗೆ ಇಳಿದೇ ಇದ್ದರು, ಯುವತಿಯರು ಹಿಂದೆಯೇ ಅದೇ ಸ್ಥಿತಿಯಲ್ಲಿ. ಬರೇ ‘ಬೋರು’ ಎಣ ಸಿ ಚಹಾ ಕುಡಿದು ಮನೆ ಪಕ್ಕದ ರಸ್ತೆಗೆ ಹೋದರೆ ಸಾಲಾ ಸಾಲಗಿ ಚಿತ್ರೀಕರಣ ತಂಡದ ಭಾರೀ ಭಾರೀ ವಾಹನಗಳು. ಒಂದರಲ್ಲಿ ಅಡುಗೆ ಮನೆ ಆದರೆ ಮತ್ತೊಂದರಲ್ಲಿ ಸ್ನಾನ, ದೇಹ ಬಾಧೆ ಎಲ್ಲ ತೀರಿಸಲು! ಇವರ ಯಂತ್ರಗಳೆಂದರೆ ವಿದ್ಯುತ್ ಸರಬರಾಜೂ ಅವರದೇ ಯಂತ್ರಗಳಿಂದ.
ಮರಳಿ ಬಂದಾಗಲು ಚಿತ್ರೀಕರಣ ಬೆಳಗಿನಂತೆಯೇ. ಏನೇ ಅನ್ನಿ, ಟಿ ವಿ ಧಾರಾವಾಹಿ ಹೇಗಾದರು ನೋಡಬಹುದು. ಆದರೆ ಈ ಚಿತ್ರೀಕರಣ ಬರೇ ನೀರಸ. ಸಾಯಂಕಾಲದ ವರೆಗೂ ನಡೆದು,ತಿನ್ನುತ್ತ, ತಿರುಗುತ್ತ ನಡೆದ ಈ ಚಿತ್ರೀಕರಣ ಮುಗಿದಾಗ ಎಷ್ಟು ಹಟತ್ತಾಗಿ ಬಂದಿದ್ದರೋ ಅಷ್ಟೇ ಹಟತ್ತಾಗಿ ಎಲ್ಲರೂ ಮಾಯ. ಕಡೆಗಿಬ್ಬರು ಮಹಿಳೆಯರು ಎಲ್ಲೆಲ್ಲಾ ಸುತ್ತಿ ಉಳಿದು ಹೋದ ಕಾಗದ ಲೋಟ, ತಟ್ಟೆಗಳನ್ನು ಹುಡುಕಿ ಹುಡುಕಿ ಎತ್ತಿ ಕಸದ ಬುಟ್ಟಿಗೆ ಹಾಕಿ ಮೂಟೆ ಕಟ್ಟಿ ಸಾಗಿಸಿದರು. ಅದಾಗಲೇ ಸಾಗಿಸಿದ ಕಸದ ಮೂಟೆ ಮೂರನೆಯದು!

5ಸಾಯಂಕಾಲ ಏಳು ಗಂಟೆಗೆ ಕೊಳದ ಸುತ್ತಲ ದೀಪ ಬೆಳಗಿದಾಗ ಬೆಳಗ್ಗೆ ಹೇಗೆ ಇತ್ತೊ ಹಾಗೇ. ಅಷ್ಟು ಮಂದಿ ಬಂದು ಹೋದ ಕುರುಹೂ ಇಲ್ಲ! ಒಟ್ಟು ನಿರಾಸೆ. ನಾನು ಕುತೂಹಲದಿಂದ ನಿರೀಕ್ಷಿಸಿದ ದೃಶ್ಯದ ಚಿತ್ರೀಕರಣವಿಲ್ಲ, ಗಲಭೆ ಗದ್ದಲವಿಲ್ಲ, ಕಸ ಪ್ಲಾಸ್ಟಿಕ್ ಚೆಲ್ಲಿ ಕುರುಕ್ಷೇತ್ರದ ಸ್ಥಿತಿಯಲ್ಲಿ ಅಕ್ಕ ಪಕ್ಕದ ಮನೆಯವರ ಶಾಪ ತಾಪವಿಲ್ಲ, ಸಿಳ್ಳು ಕೇಕೆ ಹಾಕಲು ಜನವೇ ಇಲ್ಲ, ಒಂದೆರಡು ಬಾರಿ ಲಾಥೀ ಬೀಸಾಟವೂ ಇಲ್ಲ, ಪೋಲೀಸರೂ ಇಲ್ಲ. ಹೋಗಲಿ ಹೀರೋ ಹಿರೋಯಿನ್ ಗಳು ಕಣ ್ಣಗೇ ಬೀಳಲಿಲ್ಲ. ಬರೀ ನೀರಸ.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!