ಹುಟ್ಟೂರು ಬಿಟ್ಟು ಪರ ಊರಿಗೆ ಬಂದಾಗ ಒಂದೆರಡು ದಿನ ಏನೋ ದಿನಚರಿಯಲ್ಲಿ ಇರುಸು ಮುರಸಾದರೂ ಕೆಲವು ದಿನಗಳಲ್ಲಿ ಅದೇ ಊರು ಹೊಂದಿಕೆಯಾಗುತ್ತದೆ. ಉಡುಪಿಯಿಂದ ಬೆಂಗಳೂರಿಗೆ, ಬೆಂಗಳೂರು ಬಿಟ್ಟು ಲಾಸ್ ಏಂಜಲೀಸ್ ಗೆ, ಲಾಸ್ ಎಂಜಲೀಸ್ ಬಿಟ್ಟು ವುಡ್ ಲ್ಯಾಂಡ್ ಹಿಲ್ಲ್ಸ್ ಗೆ- ಎಲ್ಲಾ ಕಡೆ ಮನೆ ಪರಿಸರಕ್ಕೆ ಸಲೀಸಾಗಿ ಹೊಂದಿಕೊಂಡೆ. ಮನೆಯ ದಿನಚರಿಯಲ್ಲಿ ಎಲ್ಲಿಯೂ ಬದಲಾವಣೆ ಇಲ್ಲವಲ್ಲ, ಹಾಗಾಗಿ.
ಹೋದ ಪ್ರತಿಯೊಂದು ಕಡೆ ಸಾಯಂಕಾಲ ಕಾಲಾಡಿಸಲು ಜಾಗ ಸಿಕ್ಕಿದ ಕಾರಣ ನನ್ನ ‘ವಾಕಿಂಗ್’ ಅಬಾಧಿತ. ಆದರೂ ‘ಏನೋ ಕೊರತೆ’ ಅನ್ನುತ್ತಾರಲ್ಲ ಆ ಭಾವನೆ ಮನಸ್ಸಿನಲ್ಲೇ. ಮನೆಯಲ್ಲಿ ನಾವೇ ಎಷ್ಟು ಮಾತಾಡಿಕೊಂಡರೂ, ಹರಟಿಕೊಂಡರೂ, ಮನೆಯ ಹೊರಗೆ ಕಾಣುವ ವ್ಯಕ್ತಿಗಳೊಂದಿಗೆ ಲೋಕಾಭಿರಾಮ ಮಾತಾಡುವ ಕುಶಿ ಪರ ಊರಲ್ಲಿ ಹೇಗೆ ಸಿಗಬೇಕು? ಅದೂ ಪರದೇಶದಲ್ಲಿ. ನಾನಿರುವ ಅಮೇರಿಕೆಯ ಒಂದು ಮೂಲೆಯಲ್ಲಿ ಮನುಷ್ಯರು ಕಾಣಸಿಗುವುದೇ ದುರ್ಲಭ. ಅವರ ಕೆಲಸ ಅವರಿಗೆ ಎನ್ನುವಲ್ಲಿ ಹೇಗೆ ಸಾಧ್ಯ?
ವಾಕಿಂಗ್ ಹೊರಡುವ ಎಂದು ನನ್ನ ಜೊತೆ ಹೊರಟ ಸೊಸೆ, ಕವಿಯುವ ಮೋಡ ಕಂತುವ ಸೂರ್ಯನನ್ನು ಕಂಡು ‘ಇನ್ನು ಹೊತ್ತಾಯಿತು. ನೀವು ಮಾತ್ರ ಹೋಗಿ ಬನ್ನಿ ಮಾವ.’ ಎಂದು ಬೆಚ್ಚಗಿನ ಅಂಗಿಯನ್ನು ನನ್ನ ಹೆಗಲಿಗೇರಿಸಿ ತಾನು ಮನೆಯೊಳಗೆ ಹೋದಾಗ ಬೀದಿಯಲ್ಲಿ ನಾನೊಬ್ಬನೆ. ವಾಕಿಂಗಿಗೇನು, ಒಬ್ಬನಾದರೂ ಅಷ್ಟೆ ಇಬ್ಬರಾದರೂ ಅಷ್ಟೆ. ನಡೆದೆ, ವಾರ್ನರ್ ಪಾರ್ಕಿನ ಬಳಿ ಬಂದೆ. ಕೆಲವು ಮಂದಿ ವ್ಯಾಯಾಮ ಮಾಡುತ್ತಿದ್ದರು. ಇನ್ನು ಕೆಲವರು ನನ್ನಂತೆಯೇ ನಡೆಯುತ್ತಿದ್ದರು. ಅವರ ಕೈಯಲ್ಲಿ ಏನೋ ಮೀಟರ್ – ಎಷ್ಟು ಹೆಜ್ಜೆ ನಡೆದಿದ್ದೇನೆಂದು ಲೆಕ್ಕ ಹಾಕಲಿರಬಹುದು! ನಾನು ಯಾವ ಲೆಕ್ಕವಿಲ್ಲದೆ ನಡೆಯುತಿದ್ದಾಗಲೇ ವಯಸ್ಕ ವ್ಯಕ್ತಿಯೊಬ್ಬರು ಮೊಮ್ಮಗಳ ಕೈಹಿಡಕೊಂಡು ಎದುರೇ ಬರುತ್ತಿದ್ದರು.
ಇಷ್ಟೆಲ್ಲಾ ದಿನಗಳ ವಾಕಿಂಗ್ ನಲ್ಲಿ ಎದುರಾದ ಯಾವ ವ್ಯಕ್ತಿಯಲ್ಲೂ ಮಾತುಕತೆ ಬೆಳೆಸುವ ಅವಕಾಶವೇಇರಲಿಲ್ಲ. ಕಾರಣ- ನನಗೆ ಅಪರಿಚಿತರು ಮುಗುಳ್ನಕ್ಕು ‘ಹಾಯ್’ ಎಂದು ನಕ್ಕು ಮುಂದುವರಿದಾಗ ಮಾತು ಬೇಡ ಎಂಬುದೇ ಸೂಚನೆ. ಆದರೂ ಇವತ್ತು ಎದುರು ಸಿಕ್ಕಿದ ಎತ್ತರದ, ನನ್ನ ಬಣ್ಣದ ವಯಸ್ಕರನ್ನು ಕಂಡಾಗ ವಿಶೇಷ ಆಕರ್ಷಣೆ. ದಾರಿಯಲ್ಲೇ ನಿತ್ತೆ, ಮುಗುಳ್ನಕ್ಕೆ. ‘ನೀವು ಭಾರತೀಯರೇ ‘ ಎಂದು ಇಂಗ್ಲಿಷ್ ನಲ್ಲೇ ಪ್ರಶ್ನಿಸಿದೆ. ವಯಸ್ಕರೂ ನಿತ್ತರು, ನಕ್ಕರು. ‘ಹೌದು, ಕೇರಳದವ. ಈಗ ಕೊಯಮುತ್ತೂರಿನಲ್ಲಿ ಇದ್ದೇನೆ’ ಎಂದುತ್ತರಿಸಿದರು. ಮತ್ತೆ ನಮ್ಮ ಸಂಭಾಷಣೆ ಇಂಗ್ಲಿಷ್ ನಲ್ಲೇ ಆದರೂ, ಸ್ವದೇಶಿಯರ ಪಟ್ಟಾಂಗ. ಅಜ್ಜನ ಕೈಹಿಡಿದ ಹೆಣ್ಣು ಮಗುವನ್ನು ನೋಡಿ ನಕ್ಕು ‘ಹೆಸರೇನು’ ಎಂದು ಕೇಳಿದಾಗ ‘ನಿಯಾ’ ಎಂದು ಶುಭ್ರವಾಗಿ ನಕ್ಕಳು.
‘ಭಾರತೀ ವಿಶ್ವವಿದ್ಯಾಲಯದಲ್ಲಿ ಡೆಪ್ಯುಟೀ ರಿಜಿಸ್ತ್ರಾರರ್ ಆಗಿ ನಿವೃತ್ತನಾದೆ. ಹಲ ಕೆಲವು ಕಡೆ ನಿವೃತ್ತಿ ಪೂರ್ವ ನೌಕರಿಗಳಿಗೆ ಆಮಂತ್ರಣ ಬಂದರೂ ಹೋಗಿಲ್ಲ. ನಿವೃತ್ತಿಯಲ್ಲಿ ಒಂದು ಸ್ಥಾನದಲ್ಲಿದ್ದವ ಯಾವುದೇ ಆವಶ್ಯಕತೆ, ಅಗತ್ಯತೆ ಇಲ್ಲದಿದ್ದಾಗ ಕೇವಲ ದುರಾಸೆಯಿಂದ ತನ್ನನ್ನೇ ಕುಗ್ಗಿಸಿಕೊಂಡು ಚಾಕರಿ ಮಾಡುವುದು ನನಗಿಷ್ಟವಿಲ್ಲ. ಈರೀತಿ ಮಾಡಿದರೆ ‘ಕನಫ್ಲಿಕ್ಟ್ ಓಫ್ ಇಂಟ್ರಸ್ಟ್’ ಆಗಿಯೇ ಆಗುತ್ತದೆ, ಆ ಮಾಧವನಿಗೆ (ಇಸ್ರೋದ ಮಾಜೀ ಮುಖ್ಯಸ್ಥ) ಆದಂತೆ. ನನ್ನ ಸೊಸೆಯದು ಎರಡನೆಯ ಬಾಣಂತನ. ನನ್ನ ಈ ವಯಸ್ಸಿನಲ್ಲಿ ಮಕ್ಕಳಿಗೆ ಅನುಕೂಲ ಮಾಡಲು ಸಾಧ್ಯವಿದ್ದಾಗ ಮಾಡದೆ ಹಣವೆಂದೇ ಹಪ ಹಪಿಸುತ್ತಿದ್ದರೆ ಎಲ್ಲಿಗೆ ಅಂತ್ಯ. ಲಂಚ, ಹಗರಣಗಳಿಗೆ ಒಳ್ಳೆ ದಾರಿ ಮಾಡಿಕೊಟ್ಟಹಾಗೇ ಅಲ್ಲವೆ?. . . . . .’
ರಾಧಾಕೃಷ್ಣನರ ಮಾತು ಸಾಗಿತು. ನಾನೂ ಆಗಾಗ ದನಿ ಕೂಡಿಸಿದೆ, ಸಾಧಾರಣ ಅರ್ಧ ಗಂಟೆ. ಎರಡು ವರ್ಷದ ನಿಯಾ ನಗುತ್ತಲೇ ಇದ್ದಳು. ಅಮೇರಿಕೆಗೆ ಬಂದು ಒಂದೂ ಮಗುವಿನ ಮೈಮುಟ್ಟದ ನಾನು ಮಮತೆಯಿಂದ ಆಕೆಯ ತಲೆಸವರಿದೆ. ‘ಸ್ಟಾರ್ ಬಕ್ ಕಾಫಿ ಬಹಳ ರುಚಿ ಇರುತ್ತದೆ. ಒಮ್ಮೊಮ್ಮೆ ಆಕಡೆ ವಾಕಿಂಗ್ ಹೋದಾಗ ಕುಡಿಯುತ್ತೇನೆ. ಹೀಗೆ ಒಮ್ಮೊಮ್ಮೆ ಗಮ್ಮತ್ತು ಮಾಡುವುದಷ್ಟೆ. ಇದಕ್ಕೆ ನನ್ನ ಪಿಂಚಣ ಸಾಲದೆ?’ ಎಂದು ಮಗುವನ್ನೆತ್ತಿ ‘ಹೇಗೂ ವಾಕಿಂಗ್ ಬರುತ್ತೀರಲ್ಲ ಸಿಗೋಣ’ ಎಂದು ಮುಂದುವರಿದರು. ನಾನೂ ಮನೆ ಕಡೆ ನಡೆದೆ. ಜೇಬಿನಲ್ಲಿದ್ದ ಮೊಬೈಲ್ ರಿಂಗಣ ಸಿತು. ಕಿವಿಗಿಟ್ಟಾಗ ಸೊಸೆಯ ಮಾತು ‘ ಮಾವ ಎಲ್ಲಿದ್ದೀರಿ, ಎಷ್ಟು ಹೊತ್ತಾಯಿತು . .. .. .. ‘
‘ಬರುತ್ತಾ ಇದ್ದೇನೆ.’ ಎಂದು ಮುಂದುವರಿದೆ ಕುಶಿ ಯಿಂದ.
ವಾಕಿಂಗಿನ ಮೂಕತನ ಇಂದು ಮುರಿದಿತ್ತು.