ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಕೃಷ್ಣ ಸನ್ನಿಧಿ

ಕೇವಲ ಕುತೂಹಲದಿಂದ ಅಂತರ್ಜಾಲ ಜಾಲಾಡುತ್ತಿದ್ದೆ. ಮಲಿಬು ವೆಂಕಟೇಶ್ವರ ದೇವಾಲಯ ಕಂಡು ಬಂದ ನಂತರ ಅಮೇರಿಕೆಯಲ್ಲಿ ಇನ್ನೆಲ್ಲೆಲ್ಲಾ ದೇವಾಲಯಗಳಿವೆ ಎಂದು ನೋಡುವ ಕುತೂಹಲ. ಆಗ ಸಿಕ್ಕಿದ್ದೆ ಶ್ರೀಕೃಷ್ಣ ಬೃಂದಾವನ. ಅಮೇರಿಕೆಯಲ್ಲಿರುವ ನೂರಾರು ದೇವಾಲಯಗಳಲ್ಲಿ ನಮ್ಮ ಮನೆಗೆ ಅತ್ಯಂತ ಹತ್ತಿರವಿರುವ ದೇವಾಲಯ.

ಎಷ್ಟು ಹತ್ತಿರವಿದ್ದರೂ ರಸ್ತೆಗಿಳಿದು ಅಂಬಲ್ಪಾಡಿ ದೇವಸ್ಥಾನಕ್ಕೋ, ಅಥವಾ ಕಾನಂಗಿ ದೇವಸ್ಥಾನಕ್ಕೋ ಹೋದ ಹಾಗೆ ಇಲ್ಲಿ ನಡೆದುಕೊಂಡು ಹೋಗುವುದು ಕಷ್ಟವೇ, ಅದೂ ನನ್ನಂತಹ ಹೊಸಬರಿಗೆ. ಅದಕ್ಕೇ ಮಗನೊಂದಿಗೆ ನಾವೆಲ್ಲ ಹೊರಟುದು. ನಾನೂ ಮಗನೂ ಸಾಮಾನ್ಯ ಪ್ಯಾಂಟ್ ಶರ್ಟಿನಲ್ಲಿದ್ದರೂ ನನ್ನಾಕೆ, ಸೊಸೆ ದೇವಸ್ಥಾನಕ್ಕೆ ಹೋಗಲು ತಕ್ಕುದಾದ ಭಾರತೀಯ ಉಡುಗೆಯನ್ನೇ ಧರಿಸಿದ್ದು. ಕಾರಿನಲ್ಲಿ ಹೊರಟು ಹೋಗುವಾಗ ದಾರಿ ಹುಡುಕಲಿಕ್ಕೆ ಗ್ಲೋಪ್ಪನೇ. ಹೆಚ್ಚೇನೂ ದೂರವೂ ಇರಲಿಲ್ಲ, ದಾರಿಯೂ ಸುರಳಿತ. ಮಗನ ವಾಸ್ತವ್ಯದ ಊಡ್ ಲ್ಯಾಂಡ್ ಹಿಲ್ಸ್ ನ ಫಿಲಿಪ್ರಿಮ್ ಬೀದಿಯಲ್ಲೇ ದೇವಸ್ಥಾನ. ಕಾರಿನಲ್ಲಿ ಹೋದುದಷ್ಟೆ, ಐದೇ ನಿಮಿಷದಲ್ಲಿ ದೇವಾಲಯದ ಎದುರು ನಾವು.

ದೇವಾಲಯದ ಬೀದಿ ಪೂರ್ತಿ ನಿರ್ಜನ ವಸತಿ ಪ್ರದೇಶ. ಹಾಗೇ ನೋಡಿದರೆ ಬೀದಿಯ ಕೊನೆಯ ಮನೆಯೇ ದೇವಾಲಯ – ಶ್ರೀಕೃಷ್ಣ ಬೃಂದಾವನ. ನಮ್ಮ ಕಾರು ನಿತ್ತ ಬೆನ್ನಲ್ಲೇ ಮತ್ತೊಂದು ಕಾರು ಬಂದು ಅದರಿಂದ ಇಳಿದವರೂ ನಮ್ಮಂತೆಯೇ ಬಣ್ಣ ಬಣ್ಣದ ಭಾರತದ ಬಟ್ಟೆ ಉಟ್ಟವರು, ಗುಡಿಗೇ ಬಂದವರು. ಗುಡಿಯ ಬಾಗಿಲಿಗೆ ಬಂದಾಗ ಎದುರೇ ದ್ವಾರದ ಮೇಲ್ಬಾಗದಲ್ಲಿ ‘ಶ್ರೀಕೃಷ್ಣ ಬೃಂದಾವನ’ ಎಂದು ಇಂಗ್ಲಿಷ್ ನಲ್ಲಿ ಬರೆದಿದ್ದರು. ಬಾಗಿಲ ಪಕ್ಕವೇ ಚಪ್ಪಲಿ ಬೂಟುಗಳನ್ನಿಡಲು ಮರದ ಹಲಗೆಯ ಸಂದೂಕಗಳು. ಅದರೆ ನಮ್ಮ ದೇವಸ್ಥಾನವಲ್ಲವೇ, ನಮ್ಮವರದ್ದಲ್ಲವೇ? ಅದಕ್ಕೆ ನಮ್ಮೂರ ಕ್ರಮವಾಗಿ ಸಂದೂಕದಲ್ಲಿ ಚಪ್ಪಲಿ ಇಡದೆ ಪಕ್ಕದಲ್ಲೇ ಒಂದರ ಮೇಲೆ ಒಂದು ಗುಪ್ಪೆಹಾಕಿದ್ದರು. ಸಂದೂಕ ಪೂರ್ತಿ ಖಾಲಿ! ಬಾಗಿಲು ತೆರೆದು ಒಳಗೆ ಹೋದರೆ ಅದೊಂದು ಮನೆಯೆ.

ಸುತ್ತ ಗಮನಿಸಿದರೆ ಮೊದಲನೆಯ ವಿಶಾಲ ಕೋಣೆಯಲ್ಲಿ ಸುಂದರ ಕೃಷ್ಣನ ಮೂರ್ತಿ, ಎತ್ತರದ ಪೀಠದಲ್ಲಿ. ಪಕ್ಕದಲ್ಲೇ ನವಗ್ರಹ ಪೀಠ, ಪೂರ್ತ ಕಂಚಿನದ್ದು. ಈ ಕೋಣೆ ದಾಟಿದರೆ ಆಕಡೆ ಮತ್ತೊಂದು ವಿಶಾಲ ಕೋಣೆ. ಸಾಮೂಹಿಕ ಸತ್ಯನಾರಾಣ ಪೂಜೆ ನಡೆಯುತಿತ್ತು. ಅರ್ಚಕರು ಸ್ಪಷ್ಟವಾಗಿ ಮಂತ್ರೋಚ್ಛಾರ ಮಾಡುತ್ತ ಸತ್ಯನಾರಾಯಣ ಪೂಜೆ ನಡೆಸುತ್ತಿದ್ದರು. ಪೂಜೆ ಮಾಡುವ ದಂಪತಿಗಳಲ್ಲಿ ಗಂಡಸರು ಕೆಲವರು ಶಲ್ಯ ಪಂಚೆಯಲ್ಲಿ, ಮತ್ತೆ ಕೆಲವರು ಪ್ಯಾಂಟು ಟೀ ಶರ್ಟುಗಳಲ್ಲಿ. ಮೊದಲನೇ ಕೋಣೆಯಲ್ಲೇ ಕುಳಿತು ಒಂದೈದು ನಿಮಿಷ ಗಮನಿಸಿದಾಗ ಅಷ್ಟ ಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಚಿತ್ರ ಗೋಡೆಯಲ್ಲಿ ಕಂಡಿತು. ಉಡುಪಿಯಲ್ಲಿದ್ದಾಗ ಸಮುದ್ರ ದಾಟಿರುವದಕ್ಕೆ ಪುತ್ತಿಗೆ ಶ್ರೀಗಳಿಗಾದ ಬಹಿಷ್ಕಾರ, ಮತ್ತಿನ ಬೆಳವಣ ಗೆಗಳೆಲ್ಲ ನೆನಪಾಯಿತು. ಕೃಷ್ಣನ ಪ್ರತಿಮೆಗೆ ತಾಗಿ ಇರುವ ಕೋಣೆಯೇ ಪಾಕ ಶಾಲೆ, ಪ್ರಸಾದ ತಯಾರಿ ಮಡಿಯಲ್ಲೇ ಆಗುತಿತ್ತು.

ಪಾಕಶಾಲೆಯಲ್ಲಿ ಅಪ್ಪಟ ಉಡುಪಿಯವರ ದಿರಸಿಲ್ಲಿದ್ದವರನ್ನು ಕನ್ನಡದಲ್ಲೇ ಮಾತಾಡಿಸಿದೆ. ಅಮೇರಿಕೆಗೆ ಕಾಲಿಟ್ಟಮೇಲೆ ಕಾರ್ಲ್ಸ ಬಾಡ್ ಬಿಟ್ಟ ನಂತರ ಕನ್ನಡ ಮಾತಾಡಿದುದು ಇವರಲ್ಲೇ! ನಿತ್ಯ ಪೂಜೆ, ಪ್ರಸಾದದ ಜೊತೆಗೆ ನಮಗೆ ಬೇಕಾದ ಪೂಜೆ ಪುನಸ್ಕಾರದ ವಿವರ ನೀಡಿದರು. ಅಂತೂ ಪುತ್ತಿಗೆ ಶ್ರೀಯವರು ಸಮುದ್ರ ದಾಟಿ ಬಂದು ದೇವಸ್ಥಾನದ ಹಾಗೆ ಕಾಣದಿದ್ದರೂ ಹಲವು ಭಾರತೀಯರ ಶ್ರದ್ಧಾಕೇಂದ್ರವಾಗಿ ಒಂದು ಪ್ರಾರ್ಥನಾ ಮಂದಿರವನ್ನು ಸ್ಥಾಪಿಸಿದುದು ಮೆಚ್ಚಿಕೊಳ್ಳುವಂತಹುದೇ. ಆ ಪ್ರಾರ್ಥನಾ ಮಂದಿರ ನನ್ನ ಮಗನ ವಾಸ್ತವ್ಯ ಸ್ಥಾನಕ್ಕೆ ಇಷ್ಟು ಸಮೀಪವೆಂದು ಕಲ್ಪನೆಯೇ ಇರಲಿಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!