ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’
ಬೆಳೆಯುತ್ತಿದ್ದಂತೆ ಕುತೂಹಲ ಹೆಚ್ಚಿತ್ತು. ಆದರೆ ಸ್ಪಷ್ಟತೆ ಅತ್ಯಲ್ಪವಾಗಿತ್ತು. ಸಮವಸ್ತ್ರದಲ್ಲಿರುವ ಯೋಧರನ್ನು ನೋಡುತ್ತಿದ್ದೆ; ದೇಶಸೇವೆಗೆ ಇದೊಂದೇ ದಾರಿ ಎಂದುಕೊಂಡಿದ್ದೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಸಾಧು-ಸಂತರೊಂದಿಗೆ ಸಂಭಾಷಣೆಯು ಆಳಕ್ಕಿಳಿಯುತ್ತಿದ್ದಂತೆ, ಈ ಪ್ರಪಂಚವನ್ನು ಅರಿಯುವುದೂ ಮಹತ್ತ್ವದ್ದೇ ಎನ್ನುವುದು ತಿಳಿಯಿತು.
ನಾನು ಆಗ ಯಾವುದೇ ತರಬೇತಿ ಇಲ್ಲದೇ ಅನಿರ್ಧರಿತ, ಅಸ್ಪಷ್ಟ ಸ್ಥಿತಿಯಲ್ಲಿದ್ದೆ. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಮತ್ತು ಇದನ್ನೆಲ್ಲಾ ಏಕೆ ಮಾಡಬೇಕು ಎನ್ನುವುದು ತಿಳಿದಿರಲಿಲ್ಲ. ಏನಾದರೂ ಮಾಡಲೇಬೇಕು ಎನ್ನುವುದಷ್ಟೇ ತಿಳಿದಿತ್ತು. ಆದ್ದರಿಂದ ದೇವರಿಗೆ ಶರಣಾಗಿ ೧೮ ವರ್ಷ ವಯಸ್ಸಿಗೆ ಹಿಮಾಲಯಕ್ಕೆ ಹೋದೆ. ನನ್ನ ಹೆತ್ತವರಿಗೆ ವಿದಾಯ ಹೇಳಿ ಹೊರಟೆ. ನನ್ನ ತಾಯಿ ಸಿಹಿತಿಂಡಿ ನೀಡಿ, ಹಣೆಗೆ ತಿಲಕವಿರಿಸಿ ಪ್ರಯಾಣಕ್ಕೆ ಆಶೀರ್ವದಿಸಿದರು.
ದೇವರು ನನ್ನನ್ನು ಕರೆದೊಯ್ದದೆಡೆಗೆ ನಾನು ಸಾಗಿದೆ. ನನ್ನ ಜೀವನದ ಅನಿರ್ಧರಿತ ಸಮಯವದು. ಆದರೆ ಬಹಳಷ್ಟು ಉತ್ತರಗಳನ್ನು ಈ ಸಮಯದಲ್ಲಿ ಪಡೆದುಕೊಂಡೆ. ವಿಶ್ವವನ್ನು ಅರಿತುಕೊಳ್ಳುವ, ನನ್ನನ್ನು ನಾನು ಅರಿತುಕೊಳ್ಳುವ ಪ್ರಯತ್ನ ಮಾಡಿದೆ. ನನ್ನ ಪ್ರಯಾಣದ ಉದ್ದಗಲದಲ್ಲಿ ರಾಮಕೃಷ್ಣ ಮಿಷನ್ನಿನ ಸಾಧುಸಂತರ ಜೊತೆಗೆ ಒಡನಾಟ ಮಾಡಿದೆ; ಆಂತರ್ಯವನ್ನು ಅರಿಯುವತ್ತ ಸಾಗಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡುತ್ತಾ ಸಾಗಿದೆ; ತಲೆಯ ಮೇಲೆ ಸೂರಿರಲಿಲ್ಲ. ಆದರೆ ಎಂದೂ ಇವೆಲ್ಲಾ ಮನೆಯಿಂದ ಹೊರತಾದದ್ದು ಎಂದು ಎನಿಸಲೇ ಇಲ್ಲ.
ಬೆಳಗ್ಗೆ ೩ – ೩.೪೫ರ ಬ್ರಾಹ್ಮೀ ಮುಹೂರ್ತದಲ್ಲಿ ಏಳುತ್ತಿದ್ದೆ. ಹಿಮಾಲಯದ ಕೊರೆಯುವ ಚಳಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆ; ಆದರೂ ಬೆಚ್ಚನೆಯ ಭಾವವಿರುತ್ತಿತ್ತು. ನೀರಿನ ಝರಿಯ ನಿನಾದದಲ್ಲೂ ಏಕತೆ, ಶಾಂತಿ, ಧ್ಯಾನವನ್ನು ಕಂಡುಕೊಳ್ಳಬಹುದು ಎನ್ನುವುದನ್ನು ಅರಿತುಕೊಂಡೆ. ಜಗತ್ತಿನ ಲಯದೊಂದಿಗೆ ನನ್ನನ್ನು ನಾನು ಸರಿದೂಗಿಸಿಕೊಳ್ಳುವ ವಿಧಾನವನ್ನು ನನಗೆ ಸಾಧು-ಸಂತರು ಕಲಿಸಿದರು.
ಹೀಗೆ ಲಯವನ್ನು ಸರಿದೂಗಿಸಿಕೊಳ್ಳುವ ವಿಧಾನ ಮತ್ತು ಅಂತರ್ಜ್ಞಾನವನ್ನು ಅನುಭವಿಸಿದೆ. ಇಂದು ಅವೆಲ್ಲಾ ನನಗೆ ಸಹಾಯವಾಗುತ್ತಿದೆ. ನಮ್ಮದೇ ಆದ ಯೋಚನಾಲಹರಿ ಮತ್ತು ಸೀಮಿತ ಪರಿಧಿಯೊಳಗೆ ಬಂಧಿಯಾಗಿದ್ದೇವೆ ಎನ್ನುವುದು ನನಗೆ ಅರಿವಾಯಿತು. ಅಗಾಧತೆಯ ಎದುರು ನಿಂತು ಶರಣಾದಾಗ – ಈ ವಿಶಾಲ ಜಗತ್ತಿನಲ್ಲಿ ನಾವು ಬಹಳ ಸಣ್ಣವರು ಎನ್ನುವುದರ ಅರಿವಾಗುತ್ತದೆ. ನಮ್ಮಲ್ಲಿನ ಯಾವುದೇ ಅಹಂ ಸ್ವಲ್ಪವಾದರೂ ಕರಗುತ್ತಿರುವ ಸಣ್ಣ ಗುರುತು ಕಾಣಿಸಿದರೂ ಸಾಕು – ನಿಮ್ಮ ಜೀವನ ಆಗ ನಿಜವಾಗಿಯೂ ಆರಂಭವಾಗುತ್ತದೆ. ಆಗ ಎಲ್ಲವೂ ಬದಲಾಯಿತು. ಎರಡು ವರ್ಷಗಳ ಬಳಿಕ, ಸ್ಪಷ್ಟತೆ ಮತ್ತು ಮಾರ್ಗದರ್ಶೀ ಶಕ್ತಿಯೊಂದಿಗೆ ನಾನು ಮನೆಗೆ ಹಿಂದಿರುಗಿದೆ.
#TheModiStory