ಅಂಕಣ ಪ್ರಚಲಿತ

ಒಬ್ಬ ಸಂತೋಷ್ ತಮ್ಮಯ್ಯರನ್ನು ಬಂಧಿಸಿದರೆ ಇತಿಹಾಸದ ಸತ್ಯ ಅನಾವರಣಗೊಳಿಸುವ ನೂರು ಸಂತೋಷ್ ತಮ್ಮಯ್ಯರು ಹುಟ್ಟುತ್ತಾರೆ, ನೆನಪಿರಲಿ!

“ಅರಿಮುಕ್ಕೆಲೆ ಪೋಂಡ ತೌಡುಮುಕ್ಕೆಲೆ ಬರುವೆ” ಎಂದು ತುಳುವಿನಲ್ಲಿ ಒಂದು ಗಾದೆ. ಅಕ್ಕಿ ಮುಕ್ಕುವವನು ಹೋದನಲ್ಲಾ ಎಂದು ಸಂತೋಷಪಟ್ಟರೆ, ಆತನ ನಂತರ ಬರುವಾತ ಅಕ್ಕಿಯನ್ನಷ್ಟೇ ಅಲ್ಲ, ಅಕ್ಕಿಯ ತೌಡನ್ನೂ ಮುಕ್ಕುವಾತ ಆಗಿರಬಹುದು ಎಂಬುದು ಅರ್ಥ. ಕರ್ನಾಟಕದ ರಾಜಕೀಯ ರಂಗದಲ್ಲಿ ಈಗ ಹಾಗಾಗಿದೆಯೇ ಎಂದು ಅನುಮಾನ. ಹಿಂದೂವಿರೋಧಿ, ಟಿಪ್ಪುಪ್ರೇಮಿ ಸಿದ್ದರಾಮಯ್ಯ ಅಂತೂ ಇಂತೂ ಮುಖ್ಯಮಂತ್ರಿ ಗದ್ದುಗೆಯಿಂದ ಇಳಿದುಹೋದರು ಎಂದು ಜನ ನಿಟ್ಟುಸಿರುಬಿಡುವಷ್ಟರಲ್ಲಿ, “ಟಿಪ್ಪುಜಯಂತಿ ವಿರುದ್ಧ ಮಾತಾಡಿದರೆ ಹುಷಾರ್!!” ಎಂದು ಹೂಂಕರಿಸುವ, ಟಿಪ್ಪು ಜಯಂತಿ ಬೇಡ ಎಂದು ಹೇಳಿದ ಒಂದೇ ಕಾರಣಕ್ಕೆ ರಾಷ್ಟ್ರವಾದಿ ಪತ್ರಕರ್ತರೊಬ್ಬರನ್ನು ರಾತ್ರೋರಾತ್ರಿ ಬಂಧಿಸುವ ಮುಖ್ಯಮಂತ್ರಿಗಳು ಈಗ ಅಧಿಕಾರವೇರಿದ್ದಾರೆ. ಇದು ಈ ರಾಜ್ಯದ ಕರ್ಮ, ಕನ್ನಡಿಗರ ಕರ್ಮ, ಹಿಂದೂಗಳ ಕರ್ಮ ಎಂದು ಹೇಳೋಣವೇ?

ಸಂತೋಷ್ ತಮ್ಮಯ್ಯ, ನಮಗೆಲ್ಲ ಗೊತ್ತಿರುವಂತೆ, ಹೊಸ ದಿಗಂತ ಪತ್ರಿಕೆಯಲ್ಲಿ ಪ್ರತಿ ಶುಕ್ರವಾರದ “ಉಘೇ ವೀರಭೂಮಿಗೆ” ಅಂಕಣದ ಮೂಲಕ ಪರಿಚಿತರು. ಸಂತೋಷ್‍ರನ್ನು ಬೇರಾವ ವಿಷಯದಲ್ಲಿ ಬೇಕಾದರೂ ಅನುಮಾನಿಸಿ. ಆದರೆ ರಾಷ್ಟ್ರೀಯತೆಯ ಬಗ್ಗೆ, ಅವರ ದೇಶಪ್ರೇಮದ ಬಗ್ಗೆ? ನೋ ಚಾನ್ಸ್! ಹಗಲಿರುಳು ದೇಶದ ಬಗ್ಗೆ, ಸೈನಿಕರ ಬಗ್ಗೆ, ಹಿಂದೂ ಧರ್ಮದ ಬಗ್ಗೆ, ದೇಶದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅವರಂತೆ ಗಾಢವಾಗಿ ಯೋಚಿಸುವ ಪತ್ರಕರ್ತರನ್ನು ನಾನು ಕಂಡಿಲ್ಲ. ಪತ್ರಕರ್ತ ಎಂದರೇನೇ ಅಲ್ಲಿಲ್ಲಿ ಸಿಕ್ಕ ಮಾಹಿತಿಗಳನ್ನು ಒಂದಷ್ಟು ವಿಸ್ತರಿಸಿ ಪತ್ರಿಕೆಯಲ್ಲಿ ಪುಟ ತುಂಬಿಸುವ ಉದ್ಯೋಗಿ ಎಂಬ ಸಾಧಾರಣಾರ್ಥ ಪ್ರಾಪ್ತವಾಗುತ್ತಿರುವ ಇಂದಿನ ದಿನಗಳಲ್ಲಿ, ಪತ್ರಕರ್ತನಲ್ಲೂ ಅಮಿತವಾದ ಅಧ್ಯಯನ ಇರಬಹುದು ಮತ್ತು ಇರಲೇಬೇಕು ಎಂದು ತೋರಿಸಿಕೊಟ್ಟಿರುವ ವ್ಯಕ್ತಿ-ಶಕ್ತಿ ಸಂತೋಷ್. ಕೊಡಗಿನ ವಿಷಯ ಬಂದಾಗೆಲ್ಲ ಸಂತೋಷ್ ಭಾವುಕರಾಗುತ್ತಾರೆ. ಅಲ್ಲಿನ ಮಣ್ಣಿನ ಇತಿಹಾಸವನ್ನು ಅವರಂತೆ ಅಧಿಕೃತವಾಗಿ ತಿಳಿದವರು ಹೆಚ್ಚಿಲ್ಲ. ಕೊಡಗಿನಿಂದ ಆಗಿಹೋದ ಸೈನಿಕರೆಲ್ಲರ ವಿವರಗಳೂ ಸಂತೋಷ್ ಅವರ ನಾಲಗೆ ತುದಿಯಲ್ಲಿ. ಯಾವ ಸೈನಿಕ ಯಾವ ಯುದ್ಧದಲ್ಲಿ ಭಾಗವಹಿಸಿದ, ಎಷ್ಟು ಬುಲೆಟ್‍ಗಳನ್ನು ತಿಂದ ಮತ್ತು ವೈರಿಗಳತ್ತ ಹೊಡೆದ ಎಂಬ ಲೆಕ್ಕಗಳು ಕೂಡ ಕರಾರುವಾಕ್ಕಾಗಿ ಅವರಿಗೆ ಗೊತ್ತು. ಸೈನಿಕರ ಮೇಲೆಯೇ ಒಂದು ಪುಸ್ತಕ ಬರೆದುಕೊಡಿ ಸಂತೋಷ್; ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಓದಿಸಬೇಕಾಗಿದೆ ಎಂದು ಅವರಿಗೆ ನಾನೊಮ್ಮೆ ಹೇಳಿದ್ದೆ. ಅಂಥ ಅಪ್ರತಿಮ ದೇಶಭಕ್ತ, ರಾಷ್ಟ್ರವಾದಿ, ಹಿಂದುತ್ವದ ಪರವಾಗಿರುವ ಅಪ್ಪಟ ಕೊಡವ ಈಗ ಪೊಲೀಸರ ಅತಿಥಿಯಾಗಿದ್ದಾರೆ… ಅದೂ ಟಿಪ್ಪು ಎಂಬ ದೇಶದ್ರೋಹಿಯ ಜಯಂತಿ ಮಾಡಬೇಡಿ ಎಂದು ಹೇಳಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂಬುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಇಂಥ ದರಿದ್ರ ವ್ಯವಸ್ಥೆಯನ್ನು ನಾವು ಹಿಂದೆ ಈ ರಾಜ್ಯದಲ್ಲಿ ಕಂಡಿರಲಿಲ್ಲ.
ಸಂತೋಷ್ ತಮ್ಮಯ್ಯ ಕೊಡಗಿನ ಗೋಣಿಕೊಪ್ಪದಲ್ಲಿ ಭಾಷಣ ಮಾಡಿದರಂತೆ. ಟಿಪ್ಪುವಿನದ್ದು ರಿಲಿಜನ್ ಮನಸ್ಥಿತಿ ಎಂದು ಹೇಳಿದರಂತೆ. ಆತನೊಬ್ಬ ಮತಾಂಧ. ಮತಾಂಧ ಮನಸ್ಥಿತಿಯೇ ಅವನಿಂದ ಕ್ರೂರಕೃತ್ಯಗಳನ್ನು ಮಾಡಿಸಿತು ಎಂದು ಹೇಳಿದರಂತೆ. ಇದರಲ್ಲಿ ತಪ್ಪೇನಿದೆ? ಟಿಪ್ಪು ಮತಾಂಧನಲ್ಲವಾದರೆ ಮತ್ತ್ಯಾರು? ಆತನದ್ದು ಮತಾಂಧ ಮನಸ್ಥಿತಿ ಅಲ್ಲವಾದರೆ ಮತ್ತ್ಯಾವುದು? ಸಂತೋಷ್ ತಮ್ಮಯ್ಯ ಅವರ ಮೇಲೆ ಪ್ರಕರಣ ದಾಖಲಿಸಿರುವ ಸುನ್ನಿಗಳ ಸಂಘವೊಂದು, ಐತಿಹಾಸಿಕ ವಿಷಯಗಳನ್ನು ಹೇಳುವ ಮೂಲಕ ಸಂತೋಷ್ ತಮ್ಮಯ್ಯ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದಿದೆ. ಶಾಂತಿ-ಸೌಹಾರ್ದದ ಉದಾತ್ತ ಸಂದೇಶ ಕೊಡುವ ಮತ ತಮ್ಮದು ಎಂದು ಈ ಸಂಘಟನೆಯ ಸದಸ್ಯರು ಹೇಳಿದ್ದಾರೆ. ತಮ್ಮ ಅಭಿಪ್ರಾಯವನ್ನು ಒಪ್ಪದ ಯಾವುದೇ ಧ್ವನಿಯನ್ನು ಯಾವ ಮುಲಾಜೂ ಇಲ್ಲದೆ ಅಳಿಸುವ ಕೆಲಸವನ್ನು (ಮೊದಲ ಬಲಿ ಹುಸೈನ್ ಇಬ್ನ್ ಅಲಿ) ಮೂಲಭೂತವಾದಿ ರಿಲಿಜನ್ ಮಾಡಿಕೊಂಡೇ ಬಂದಿದೆ ಎಂಬುದನ್ನು ಈ ವ್ಯಕ್ತಿಗಳು ಎಂದಿನವರೆಗೆ ಒಪ್ಪುವುದಿಲ್ಲವೋ ಅಂದಿನವರೆಗೆ ಬಹುಶಃ ಅವರಿಗೆ ಟಿಪ್ಪು ಮಾಡಿದ ಹಿಂಸಾಚಾರಗಳು ಅಕೃತ್ಯಗಳು ಎಂದು ಅನ್ನಿಸುವುದು ಸಾಧ್ಯವಿಲ್ಲ. ದುರಂತ ಏನೆಂದರೆ, ನಮ್ಮಲ್ಲಿ ರಿಲಿಜನ್‍ಗಳು ತಮ್ಮ ಮೂಲಭೂತವಾದದ ಬುಡಕ್ಕೆ ಯಾರಾದರೂ ಕೈ ಹಾಕಿದಾಗ ಥಟ್ಟನೆ ಎಚ್ಚರವಾಗುತ್ತವೆ. ತಮ್ಮ ರಿಲಿಜನ್ ಅನ್ನು ಕಾನೂನಿನ ಮೂಲಕ, ಖಡ್ಗದ ಮೂಲಕ ರಕ್ಷಿಸಿಕೊಳ್ಳಲು ನೋಡುತ್ತವೆ. ಜಗತ್ತಿನ ಯಾವುದೇ ರಿಲಿಜನ್ ಜಗತ್ತನ್ನು ನೋಡುವುದು ತನ್ನ ಪವಿತ್ರಗ್ರಂಥವೆಂಬ ಕನ್ನಡಕದ ಮೂಲಕವೇ. ಹಾಗಾಗಿ ಪವಿತ್ರಗ್ರಂಥ ಯಾವುದನ್ನು ಅಸತ್ಯ ಎನ್ನುತ್ತದೋ ರಿಲಿಜನ್‍ವಾದಿಗಳಿಗೆ ಅದು ಅಸತ್ಯ. ಯಾವುದನ್ನು ಅವರ ಪವಿತ್ರಗ್ರಂಥ ಅಧರ್ಮ ಎನ್ನುತ್ತದೋ ಅದು ಅವರಿಗೆ ಅಧರ್ಮ. ಇಂಥ ಸಂಕುಚಿತ ಮನೋಭಾವದ ವ್ಯಕ್ತಿಗಳಿಗೆ ಟಿಪ್ಪು ಒಬ್ಬ ಮತಾಂಧ, ಕ್ರೂರಿ, ಅಯೋಗ್ಯ, ಅಪ್ರಬುದ್ಧ, ಹಿಂಸಾಚಾರಿ, ಮಾನಸಿಕ ರೋಗಿ ಎಂಬುದು ತಿಳಿಯುವುದು ಸಾಧ್ಯವೆ?

ಸಂತೋಷ್ ತಮ್ಮಯ್ಯ ಧರ್ಮನಿಂದನೆ ಮಾಡಿದ್ದಾರೆ ಎಂದು ಕೂಗುತ್ತಿರುವ ವ್ಯಕ್ತಿಗಳಿಗೆ ಸರಕಾರ, ತಮ್ಮ ರಿಲಿಜನ್‍ನ ಕಟ್ಟಳೆಗಳನ್ನು ಮೀರಿ, ಓರ್ವ ಮುಸ್ಲಿಮನ ಜಯಂತಿ ಮಾಡುತ್ತಿರುವುದು ಧರ್ಮನಿಂದನೆ ಎಂದು ಕಾಣಲಿಲ್ಲವೆ? ಸಂತೋಷ್ ತಮ್ಮಯ್ಯ ನಮ್ಮ ರಿಲಿಜನ್ ಬಗ್ಗೆ ಮಾತಾಡಿದರು; ಹಾಗಾಗಿ ನಾವು ಅವರ ಮೇಲೆ ಪ್ರಕರಣ ದಾಖಲಿಸುತ್ತೇವೆ – ಎಂದು ಹೇಳುವ ವ್ಯಕ್ತಿಗಳಲ್ಲಿ ಒಬ್ಬನಿಗಾದರೂ “ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟಿಪ್ಪು ಜಯಂತಿ ಎಂಬ ಅಪದ್ಧವನ್ನು ನಿಲ್ಲಿಸಲು ಸರಕಾರಕ್ಕೆ ನಾವು ಮನವಿ ಮಾಡಬೇಕು” ಎಂದು ಏಕೆ ಅನ್ನಿಸಲಿಲ್ಲ? ಹಾಗಾದರೆ ನಿಮ್ಮ ಮನಸ್ಥಿತಿ ಯಾವುದು? ನಿಮ್ಮನ್ನು ಮೂಲಭೂತವಾದಿಗಳು ಎಂದರೆ ನಿಮಗೇಕೆ ಸಿಟ್ಟು ಬರಬೇಕು? ನೀವು ಮೂಲಭೂತವಾದಿಗಳಲ್ಲ ಎಂದು ನಿಮ್ಮ ಒಂದಾದರೂ ಕಾರ್ಯದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದ್ದೀರಾ? ಅಸಲಿಗೆ ನಿಮಗೆ ಟಿಪ್ಪು ಜಯಂತಿ ಬೇಕಾಗಿದೆ. ಓರ್ವ ಮತಾಂಧ ಅಹಂಕಾರಿ ಹಿಂಸಾಪ್ರವೃತ್ತ ಹಿಂದೂವಿರೋಧಿ ರಾಜನನ್ನು ಸರಕಾರ ಉತ್ಸವಮೂರ್ತಿಯಾಗಿ ಮೆರೆಸಿದರೆ ನಿಮಗೆ ಒಳಗಿಂದ ಸಂತೋಷವೇ ಆಗುತ್ತದೆ. ಯಾಕೆಂದರೆ ಅಷ್ಟರಮಟ್ಟಿಗೆ ನಿಮ್ಮ ಮೂಲಭೂತವಾದಿತನ ತಣಿಯುತ್ತದೆ. ಇಲ್ಲದೇ ಹೋಗಿದ್ದರೆ ನೀವು ಟಿಪ್ಪು ವಿರುದ್ಧ ಬೀದಿಗಿಳಿಯುತ್ತಿದ್ದರಲ್ಲ? ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಹಿಂದೂಗಳನ್ನು, ಕ್ರೈಸ್ತರನ್ನು, ಕೊಡವರನ್ನು, ಬೇಡರನ್ನು ತರಿದುಹಾಕಿದ ಓರ್ವ ಮೂಲಭೂತವಾದಿ ಭಯೋತ್ಪಾದಕ ನಮ್ಮ ಆದರ್ಶವಾಗಲು ಸಾಧ್ಯವಿಲ್ಲ; ನಮ್ಮ ಪವಿತ್ರಗ್ರಂಥವಾಗಲೀ ನಮ್ಮ ರಿಲಿಜನ್ ಆಗಲೀ ಅಂಥ ಹಿಂಸಾತ್ಮಕ ವ್ಯಕ್ತಿಗಳನ್ನು ಬೆಂಬಲಿಸುವುದಿಲ್ಲ – ಎಂದು ನಿಮ್ಮಲ್ಲಿ ಒಬ್ಬರಾದರೂ ಸರಕಾರಕ್ಕೆ ಹೇಳುತ್ತಿದ್ದಿರಲ್ಲ? ಟಿಪ್ಪುವನ್ನು ಒಳಗಿಂದೊಳಗೆ ಆರಾಧಿಸುವ ನೀವು; ಟಿಪ್ಪುಜಯಂತಿಗೂ ನಮಗೂ ಯಾವ ಸಂಬಂಧವೂ ಇಲ್ಲ ಎಂದು ಬಹಿರಂಗವಾಗಿ ಪೊಲಿಟಿಕಲಿ ಕರೆಕ್ಟ್ ಆಗಿರಲು ಯತ್ನಿಸುತ್ತಿರುವ ನೀವು ಈಗ ರಾಷ್ಟ್ರವಾದಿ ಪತ್ರಕರ್ತನೊಬ್ಬನ ಮೇಲೆ ಪ್ರಕರಣ ದಾಖಲಿಸಿದ್ದೀರಲ್ಲ; ನಾಚಿಕೆಯಾಗಬೇಕು ನಿಮಗೆ!

ಸಿದ್ದರಾಮಯ್ಯನವರು 2015ರಲ್ಲಿ ಟಿಪ್ಪು ಜಯಂತಿಯನ್ನು ಪ್ರಾರಂಭಿಸಿದಾಗ ಅವರ ಮನಸ್ಸಿನಲ್ಲಿ ಇದ್ದದ್ದು ಕೂಡ ಇದೇ. ಮುಸ್ಲಿಮರನ್ನು ಮತ್ತಷ್ಟು ಮೂಲಭೂತವಾದಿಗಳಾಗಿಸಬೇಕು. ಅವರ ಮನಸ್ಸಿನಲ್ಲಿ ಹಿಂಸೆ ಬಿತ್ತಬೇಕು. ಅವರ ಮನಸ್ಸಿನಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭುಗಿಲೇಳುವಂತೆ ಮಾಡಬೇಕು. ಮುಸ್ಲಿಮರು ಯಾವ ಕಾರಣಕ್ಕೂ ಪ್ರಗತಿಯ ದಾರಿಯಲ್ಲಿ ನಡೆಯಬಾರದು. ಯಾಕೆಂದರೆ ಯಾವಾಗ ಮುಸ್ಲಿಮರು (ಅಥವಾ ಯಾವುದೇ ಸಮುದಾಯ) ತಮ್ಮ ಮೂಲಭೂತವಾದಿತನ ಬಿಟ್ಟು ಪ್ರಗತಿ, ಅಭಿವೃದ್ಧಿ ಬೇಕೆನ್ನುತ್ತಾರೋ ಆಗ ಅವರು ಕಾಂಗ್ರೆಸ್‍ನಿಂದ ಕೂಡ ದೂರವಾಗುತ್ತಾರೆ. ಹಾಗಾಗಿ ತನ್ನ ಮತಬ್ಯಾಂಕ್ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯನವರಿಗೆ ಟಿಪ್ಪುವನ್ನು ರಾಜ್ಯದ ಮುಸ್ಲಿಮರ (ಮುಖ್ಯವಾಗಿ ಬಹುಸಂಖ್ಯಾತ ಸುನ್ನಿಗಳ) ಹೊಸ ಐಕಾನ್ ಆಗಿ ಬಿಂಬಿಸುವ ದರ್ದು ಇತ್ತು. 2015ರಲ್ಲಿ ಈ ಟಿಪ್ಪು ಕುಟ್ಟಪ್ಪನವರ ಜೀವ ತೆಗೆದ. ಐದು ಸಾವಿರ ಮೂಲಭೂತವಾದಿ ಮಾಪಿಳ್ಳೆಗಳು ಕಲ್ಲು, ಕುಡುಗೋಲು ಹಿಡಿದು ಕೊಡಗಿನಲ್ಲಿ ಪ್ರತ್ಯಕ್ಷರಾದರು. ಅದಾದ ನಂತರದ ವರ್ಷಗಳಲ್ಲಿ ಪ್ರತಿ ವರ್ಷದ ಟಿಪ್ಪು ಜಯಂತಿಯೂ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಿಂದೂ – ಮುಸ್ಲಿಮ್ ಸಮುದಾಯಗಳ ನಡುವಿನ ಅಂತರ ಬಿಗಡಾಯಿಸಿದೆ. ಮುಸ್ಲಿಮರಿಗೆ ಹಿಂದೂಗಳ ಮೇಲೆ, ಹಿಂದೂಗಳಿಗೆ ಮುಸ್ಲಿಮರ ಮೇಲೆ ನಂಬಿಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬಗೆಯಲ್ಲಿ ಧಾರ್ಮಿಕ ಪ್ರಕ್ಷುಬ್ಧತೆ ತಲೆದೋರಿದೆ. ಸಿದ್ದರಾಮಯ್ಯನವರು ಟಿಪ್ಪುವಿನ ಭೂತದಿಂದ ಈ ರಾಜ್ಯದಲ್ಲಿ ಏನು ಆಗಬೇಕು ಎಂದು ಬಯಸಿದ್ದರೋ ಅದು ಆಗಿಯೇಹೋಗಿದೆ. ಆ ದುರಂತಕ್ಕೆ ತೀರ ಹೊಸ ಉದಾಹರಣೆ ಎಂದರೆ ಸಂತೋಷ್ ತಮ್ಮಯ್ಯ ಅವರ ಮೇಲೆ ಪ್ರಕರಣ, ಬಂಧನ.

ಈಗ ಹೇಗಾಗಿದೆ ಗೊತ್ತೆ? ಟಿಪ್ಪುವನ್ನು ಬೆಂಬಲಿಸುವ, ಅಥವಾ ಬೆಂಬಲಿಸದೆ ಹೋದರೂ ಮೌನವಾಗಿದ್ದು ಆತನ ಜಯಂತಿಯನ್ನು ಸಮ್ಮತಿಸುವ ಮುಸ್ಲಿಂ ಸಮುದಾಯ ಹಿಂದೂಗಳ ಹೃದಯದಿಂದ ಮತ್ತಷ್ಟು ದೂರ ಹೋಗಿದೆ. ಸಂತೋಷ್ ಅವರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡಿದ ಮೇಲಂತೂ ಮುಸ್ಲಿಮರ ಮೇಲೆ ಹಿಂದೂಗಳಿಗೆ ಹೇವರಿಕೆ ಹುಟ್ಟಿರಬಹುದು. ನಾವು ಕಟ್ಟರ್ ಮತೀಯರು; ನಮ್ಮ ಮತದ ಬಗ್ಗೆ ಯಾರೇ ಏನೇ ಹೇಳಿದರೂ ಅದನ್ನು ಕಿವಿಗೊಟ್ಟು ಕೇಳುವ ವ್ಯವಧಾನ ನಮ್ಮಲ್ಲಿಲ್ಲ ಎನ್ನುವುದು ಅಪ್ಪಟ ಮೂಲಭೂತವಾದಿ ಮನಸ್ಥಿತಿ. ಅಂಥ ಮನಸ್ಥಿತಿ ಈ ಹಿಂದೆಯೂ ರಿಲಿಜನ್‍ಗಳಲ್ಲಿ ಇತ್ತು. ಆದರೆ ಈಗ, ಕಳೆದ ನಾಲ್ಕು ವರ್ಷಗಳಲ್ಲಿ, ಅದು ಕರ್ನಾಟಕದ ರಿಲಿಜನ್‍ವಾದಿಗಳಲ್ಲಿ ಹೆಚ್ಚಾಗಿದೆ. ಇದು ನೇರವಾಗಿ ಟಿಪ್ಪುಜಯಂತಿಯ ಎಫೆಕ್ಟ್ ಎನ್ನದೆ ವಿಧಿಯಿಲ್ಲ. ಇವತ್ತು ಮುಸ್ಲಿಮರು ತಾವೇ ಒಂದಾಗಿ ಕೂತು ಯೋಚಿಸಲಿ. ನಮ್ಮ ಐಕಾನ್ ಯಾರು? ಟಿಪ್ಪುವೋ ಅಥವಾ ಸಂತ ಶಿಶುನಾಳ ಷರೀಫ, ಡಾ. ಅಬ್ದುಲ್ ಕಲಾಂ ಅವರುಗಳೋ? ನಾವು ಈ ರಾಜ್ಯದ ಉಳಿದವರ ಕಣ್ಣಲ್ಲಿ ಮೂಲಭೂತವಾದಿಗಳು ಎಂದು ಕರೆಸಿಕೊಳ್ಳಬೇಕೋ ಅಥವಾ ಪ್ರಗತಿಪರರು, ಅಭಿವೃದ್ಧಿಪರರು, ಉದಾರ ಚಿಂತನೆಯವರು ಎಂದು ಗುರುತಿಸಿಕೊಳ್ಳಬೇಕೋ? ಸಂತೋಷ್ ತಮ್ಮಯ್ಯ ಅಥವಾ ಅವರಂಥ ಯಾವುದೇ ರಾಷ್ಟ್ರವಾದಿ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ನಾವು ಸಾಧಿಸುವುದು ಏನನ್ನು? ಟಿಪ್ಪು ನಮ್ಮ ಐಕಾನ್ ಅಲ್ಲ ಎಂಬುದನ್ನು ಗಟ್ಟಿಯಾಗಿ ನೇರವಾಗಿ ಸರಕಾರಕ್ಕೆ ಹೇಳಲು ನಮಗೇಕೆ ಸಾಧ್ಯವಾಗುತ್ತಿಲ್ಲ? ನಾವು ಕಾಲನ ದಾರಿಯಲ್ಲಿ ಮುಂದೆ ಹೋಗಬೇಕಾದವರೋ ಅಥವಾ ಹಿಂದಕ್ಕೆ ನಡೆಯಬೇಕಾದವರೋ? ಯಾರಾದರೂ ನಮ್ಮ ರಿಲಿಜನ್ ಒಳಗಿನ ವೈರುಧ್ಯಗಳನ್ನು ಬೆಟ್ಟುಮಾಡಿ ತೋರಿದೊಡನೆ ನಮಗೇಕೆ ಉರಿ ಹತ್ತುತ್ತದೆ? ನಾವೇಕೆ ಚರ್ಚೆ ಸಂವಾದಗಳಿಗೆ ಸಿದ್ಧರಿಲ್ಲ? ಕನಿಷ್ಠ ಪಕ್ಷ ಮುಸ್ಲಿಮರ ಒಳಗಿನ ಷಿಯಾ ಸಮುದಾಯವಾದರೂ ಈ ಪ್ರಶ್ನೆಗಳನ್ನು ಗಂಭೀರವಾಗಿ ಕೇಳಿಕೊಂಡು, ತಮ್ಮ ಅಸ್ಮಿತೆಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡು, ತಮ್ಮ ಸ್ಥಾನ ಯಾವುದು ಎಂಬುದನ್ನು ಸಮಾಜಕ್ಕೆ ಹೇಳಬೇಕಾಗಿದೆ. ಯಾಕೆಂದರೆ ಕನಿಷ್ಠ ಆ ಸಮುದಾಯಕ್ಕಾದರೂ ಟಿಪ್ಪು ತಮ್ಮ ಐಕಾನ್ ಅಲ್ಲ ಎಂಬ ಸ್ಪಷ್ಟತೆ ಇದೆ ಎಂದು ನಾನು ಭಾವಿಸಿದ್ದೇನೆ.
ಓರ್ವ ಪತ್ರಕರ್ತನ ಮೇಲೆ, ಒಬ್ಬ ಹಿಂದೂ ರಾಷ್ಟ್ರವಾದಿಯ ಮೇಲೆ ಪ್ರಕರಣ ದಾಖಲಿಸಿದೊಡನೆ ಸತ್ಯ ಸಾಯುವುದಿಲ್ಲ ಗೆಳೆಯರೇ. ಅದು ಇನ್ನಷ್ಟು ಮತ್ತಷ್ಟು ಪ್ರಜ್ವಲಿಸುತ್ತದೆ. ಒಬ್ಬ ಸಂತೋಷ್‍ರನ್ನು ಬಂಧಿಸಿ ಸೆರೆಗೆ ಹಾಕಿದೊಡನೆ ಇತಿಹಾಸದ ಕಂಕಾಲಬಾಗಿಲುಗಳನ್ನು ಮುಚ್ಚಿಬಿಟ್ಟೆವು ಎಂದು ಭಾವಿಸಬೇಡಿ. ಟಿಪ್ಪು ಎಲ್ಲಿಯವರೆಗೆ ಈ ರಾಜ್ಯದಲ್ಲಿ ಐಕಾನ್ ಆಗಿ ಮೆರೆಯುತ್ತ ಇರುತ್ತಾನೋ ಅಲ್ಲಿಯವರೆಗೆ ಆತನ ಐತಿಹಾಸಿಕ ಕ್ರೌರ್ಯಗಳನ್ನು ಸಮಾಜದ ಮುಂದಿಡುವ ಕೆಲಸ ನೂರಾರು ಸಂತೋಷ್ ತಮ್ಮಯ್ಯರಿಂದ ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೆ ಸರಕಾರ ಟಿಪ್ಪುವನ್ನು ರಾಜ್ಯದ ಐಕಾನ್ ಆಗಿ ಮೆರೆಸುತ್ತದೋ ಅಲ್ಲಿಯವರೆಗೆ ಒಂದು ಸಮುದಾಯದ ವಿರುದ್ಧ ಸಮಾಜದ ಉಳಿದ ಅಷ್ಟೂ ಧರ್ಮಗಳ ಜನರು ಹೇವರಿಕೆ ಪಡುತ್ತಲೇ ಇರುತ್ತಾರೆ. ನೀವು ಸಮಾಜವನ್ನು ಗೆಲ್ಲಬೇಕಾದ್ದು ಧರ್ಮನಿಂದನೆಯ ಕೇಸು ದಾಖಲಿಸುವ ಮೂಲಕ ಅಲ್ಲ; ಪ್ರೀತಿ-ವಿಶ್ವಾಸದ ಮೂಲಕ. ಸಂತೋಷ್ ತಮ್ಮಯ್ಯನವರ ಬೆಂಬಲಕ್ಕೆ ಇಂದು ಇಡೀ ಹಿಂದೂ ಸಮಾಜ ನಿಲ್ಲುವಂಥ “ಒಳ್ಳೆಯ” ಕೆಲಸ ಮಾಡಿರುವ ನಿಮಗೆ ಇದು ಅರ್ಥವಾದರೆ ಸಾಕು!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!