Featured ಅಂಕಣ ಪ್ರಚಲಿತ

ಜನಸಾಮಾನ್ಯರಿಗೂ ಉಡ್ಡಾಣಯೋಗ!

ಒಬ್ಬಾತ ವಿಮಾನಪ್ರಯಾಣ ಮಾಡುತ್ತಾನೆಂದರೆ ಭಾರೀ ಸ್ಥಿತಿವಂತನಿರಬೇಕು ಎಂದೇ ಲೆಕ್ಕ. ಇನ್ನು ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು, ರಾಜಕಾರಣಿಗಳು, ಸಿನೆಮಾ ನಟರಷ್ಟೆ ವಿಮಾನಪ್ರಯಾಣಕ್ಕೆ ಅರ್ಹರು ಎಂದು ಭಾವಿಸುತ್ತಿದ್ದ ಕಾಲವೊಂದಿತ್ತು.

ಭಾರತ ಬದಲಾಗುತ್ತಿದೆ; ಹಾಗೆ ವಿಮಾನಯಾನವೂ ಸಹ. ಹವಾಯಿಚಪ್ಪಲಿ ಧರಿಸುವ ಸಾಮಾನ್ಯ ವ್ಯಕ್ತಿಯೂ ವಿಮಾನಪ್ರಯಾಣ ಮಾಡುವಂತಾಗಬೇಕು ಎಂದು ಕನಸು ಕಾಣುತ್ತಿರುವ ಪ್ರಧಾನಿ ಇದೀಗ ನಮ್ಮ ಜೊತೆಗಿದ್ದಾರೆ; ಅದಕ್ಕೆ ತಕ್ಕಂತೆ ನಾಗರಿಕ ವಿಮಾನಯಾನ ಖಾತೆಯೂ ಶ್ರಮಿಸುತ್ತಿದೆ. ನಷ್ಟದಲ್ಲೇ ತೆವಳುತ್ತಿದ್ದ ವಿಮಾನಯಾನ ಕ್ಷೇತ್ರ ಇದೀಗ ಲಾಭದತ್ತ ಹೊರಳುವಂತಾಗಿ, ಬದಲಾವಣೆಯ ಚಿತ್ರಣ ಒದಗಿಸುತ್ತದೆ.

ಬದಲಾದದ್ದೇನು?

ಸಿರಿವಂತರಿಗೆ ಮಾತ್ರ ಎಂದಿದ್ದ ವಿಮಾನಯಾನ ಇದೀಗ ಜನಸಾಮಾನ್ಯರಿಗೂ ಕೈಗೆಟಕುವಂತಾಗಿದ್ದು ಗಮನಾರ್ಹ ಬೆಳವಣಿಗೆ. ಎನ್‌ಡಿಎ ಸರ್ಕಾರದ ಮಹತ್ತ್ವಾಕಾಂಕ್ಷಿ ‘ಉಡಾನ್’ ಯೋಜನೆಯು ಆಕಾಶಯಾನದ ಮೂಲಕ ಇಡೀ ಭಾರತವನ್ನೇ ಜೋಡಿಸುತ್ತಿದೆ. ವಿಮಾನಸಾರಿಗೆ ಕ್ಷೇತ್ರವು ಗಮನಾರ್ಹವಾಗಿ ವೃದ್ಧಿಹೊಂದುವ ಎಲ್ಲ ಅವಕಾಶಗಳೂ ಇದ್ದು, ಭವಿಷ್ಯದಲ್ಲಿ ಆರ್ಥಿಕ ಕ್ಷೇತ್ರಕ್ಕೆ ಬಹುದೊಡ್ಡ ಕಾಣಿಕೆಯನ್ನು ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಬದಲಾವಣೆಗೆ ಸಾಕ್ಷಿಯೆಂಬಂತೆ ವಾಯುಸಂಚಾರವು ೨೦೧೩ರಲ್ಲಿ ೧೦೦ ದಶಲಕ್ಷ ಪ್ರಯಾಣಿಕರ ಸಾಗಾಣಿಕೆ ಇದ್ದದ್ದು ದ್ವಿಗುಣಗೊಂಡು ೨೦೧೭ರ ಹೊತ್ತಿಗೆ ೨೦೦ ದಶಲಕ್ಷ ಪ್ರಯಾಣಿಕರ ಸಾಗಾಣಿಕೆಗೆ ತಲಪಿದೆ. ಟರ್ಬೈನ್ ಇಂಧನಕ್ಕೆ ಅತಿಹೆಚ್ಚಿನ ತೆರಿಗೆ ಇದ್ದರೂ, ವಿಶ್ವದಲ್ಲೇ ಅತಿ ಕಡಮೆ ದರದಲ್ಲಿ ವಿಮಾನಯಾನ ಮಾಡಬಹುದಾದ ದೇಶ ನಮ್ಮದು.

ರೈಲ್ವೇಸಾರಿಗೆ ಹೇಗೆ ಆರ್ಥಿಕವೃದ್ಧಿಗೆ ದ್ವಿಗುಣತೆಯನ್ನು ಒದಗಿಸಬಲ್ಲದೋ ವಿಮಾನಯಾನಕ್ಷೇತ್ರವೂ ಸಹ ಇಂದು ಅದೇ ಹಾದಿಗೆ ಹೊರಳಿಕೊಂಡಿದೆ. ಪ್ರಸ್ತುತ ೧.೨ ದಶಲಕ್ಷದಷ್ಟು ಜನರು ನಾಗರಿಕ ವಿಮಾನಯಾನಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಮಾನಯಾನಕ್ಕೆ ವಿಪುಲ ಬೇಡಿಕೆ ಇದ್ದು, ಸಮೀಕ್ಷೆಗಳು ಹೇಳುವ ಪ್ರಕಾರ ಈಗಿರುವ ವರ್ಷಕ್ಕೆ ೨೦೦ ದಶಲಕ್ಷ ಪ್ರಯಾಣಿಕರ ಸಂಖ್ಯೆ ಮುಂಬರುವ ದಿನಗಳಲ್ಲಿ ದಶಕೋಟಿಯನ್ನೂ ಮೀರುವ ಸಾಧ್ಯತೆಗಳು ನಿಚ್ಚಳವಾಗಿವೆ. ಹಾಗೆಯೇ ಮುಂದಿನ ೧೫-೨೦ ವರ್ಷಗಳಲ್ಲಿ ವಿಮಾನಯಾನವು ದ್ವಿಗುಣಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇವೆಲ್ಲಕ್ಕೂ ಕಾರಣವಾದದ್ದು ಸರ್ಕಾರದ ನೀತಿ; ವಿಮಾನಯಾನ ವ್ಯವಸ್ಥೆಯಲ್ಲಿ ನಿಯಂತ್ರಣಗಳನ್ನು ಸಡಿಲಗೊಳಿಸಿ, ಅದನ್ನು ಸರಳೀಕರಿಸಿದ ಕಾರಣ ಈ ಅಭಿವೃದ್ಧಿ ಸಾಧ್ಯವಾಗಿ ಭವಿಷ್ಯವು ಆಶಾದಾಯಕವಾಗಿದೆ.

‘ಉಡಾನ್’ ಯೋಜನೆ

ಸರ್ಕಾರದ ಕನಸಿನ ‘ಉಡಾನ್’ ಯೋಜನೆ ವಿದೇಶದಲ್ಲಿರುವಂತೆ, ಪ್ರಯಾಣದ ವೇಳೆಯನ್ನು ಕಡಿತಗೊಳಿಸಲು, ಸ್ಥಳೀಯಮಟ್ಟದಲ್ಲೂ ಜನರು ವಿಮಾನದಲ್ಲಿ ಓಡಾಡುವಂತಾಗಬೇಕು ಎಂಬ ಆಶಯವನ್ನು ಹೊಂದಿದೆ. ೨೦೧೪ಕ್ಕೆ ಮೊದಲು ದೇಶದಲ್ಲಿ ೭೨ ಸ್ಥಳೀಯ ವಿಮಾನನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದವು. ಜುಲೈ ೨೦೧೮ರ ವೇಳೆಗೆ ಕಾರ್ಯಾರಂಭಮಾಡಲಿದ್ದ ಸಿಕ್ಕಿಂನ ಪಾಕ್ಯಾಂಗ್ ವಿಮಾನನಿಲ್ದಾಣವೂ ಸೇರಿ ಸದ್ಯಃ ೧೦೦ ಸ್ಥಳೀಯ ವಿಮಾನನಿಲ್ದಾಣಗಳಿವೆ; ಇದು ನಾಲ್ಕು ವರ್ಷಗಳಲ್ಲಾದ ಬದಲಾವಣೆ. ಕಳೆದ ೭೨ ವರ್ಷಗಳಲ್ಲಿ ಸರ್ಕಾರ ವರುಷಕ್ಕೊಂದು ವಿಮಾನನಿಲ್ದಾಣವನ್ನು ದೇಶಕ್ಕೆ ಸಮರ್ಪಿಸುತ್ತಿದ್ದರೆ, ೨೦೧೪ರ ನಂತರದ ಎನ್‌ಡಿಎ ಸರ್ಕಾರ ’ಉಡಾನ್ ಸ್ಥಳೀಯ ಸಂಪರ್ಕ ಯೋಜನೆ’ಯಡಿ ಎರಡು ವರ್ಷಗಳಲ್ಲಿ ೨೫ ವಿಮಾನನಿಲ್ದಾಣಗಳನ್ನು ದೇಶಕ್ಕೆ ಸಮರ್ಪಿಸಿದೆ.

ಆರಂಭದಿಂದಲೂ ಅವಗಣನೆಗೆ ಈಡಾಗಿದ್ದ ಈಶಾನ್ಯಭಾರತ ಈ ‘ಉಡಾನ್’ ಯೋಜನೆಯ ಸಂಪೂರ್ಣಫಲವನ್ನು ತನ್ನದಾಗಿಸಿಕೊಂಡಿದೆ. ಸದ್ಯವೇ ಗುವಾಹಟಿ ಮತ್ತು ಅಗರ್ತಲಾಕ್ಕೆ ಸುಂದರವಾದ ಹೊಸ ಟರ್ಮಿನಲ್ ಸೇವೆ ಒದಗಲಿದ್ದು, ಇದರ ವಿನ್ಯಾಸವು ಸ್ಥಳೀಯ ಕಲೆ ಮತ್ತು ಸಂಸ್ಕೃತಿಗೆ ಪೂರಕವಾಗಿದೆ. ಕಲಾತ್ಮಕವಾಗಿಯೂ ಸಹ ಈ ಟರ್ಮಿನಲ್‌ಗಳು ಭವಿಷ್ಯದಲ್ಲಿ ವಿಶ್ವದರ್ಜೆಗೆ ಸೇರುವಂತಿವೆ. ಅಲ್ಲದೆ ಗುವಾಹಟಿಯನ್ನು ಆಸಿಯಾನ್ ದೇಶಗಳನ್ನು ಸಂಪರ್ಕಿಸುವ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರಸರ್ಕಾರವು ಪ್ರಯತ್ನ ನಡೆಸುತ್ತಿದೆ. ‘ಉಡಾನ್’ ಯೋಜನೆಯು  ಹೆಲಿಕಾಪ್ಟರ್ ಹಾರಾಟಕ್ಕೂ ಉತ್ತೇಜನ ನೀಡುತ್ತಿದ್ದು, ಹೆಲಿಪ್ಯಾಡ್‌ಗಳು ನಿರ್ಮಾಣಗೊಂಡಿವೆ.

‘ಡಿಜಿ-ಯಾತ್ರಾ’ ಯೋಜನೆ

ವಿಮಾನಯಾನವೆಂದರೆ ಇನ್ನಿತರ ಪ್ರಯಾಣದಂತಲ್ಲ; ಪ್ರಯಾಣಿಕರು ಉತ್ಕೃಷ್ಟ ಸೇವೆ ನಿರೀಕ್ಷಿಸುತ್ತಾರೆ. ಅದು ಪ್ರಯಾಣಿಕರ ಹಕ್ಕು ಕೂಡ. ‘ಡಿಜಿ-ಯಾತ್ರಾ’ ಯೋಜನೆಯು ಪ್ರಯಾಣಿಕರ ವಿಮಾನಯಾನ ಅನುಭವದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತದೆ. ಟಿಕೆಟ್ ರದ್ದತಿ, ವಿಮಾನದ ವಿಳಂಬ ಇವೇ ಮೊದಲಾದ ಸಮಸ್ಯೆಯ ಕಡೆಗೆ ಗಮನಹರಿಸಲಾಗಿದ್ದು, ಪ್ರಯಾಣಿಕರ ಹಕ್ಕುಗಳನ್ನು ರಕ್ಷಿಸುವ ಎಲ್ಲ ಪ್ರಯತ್ನಗಳನ್ನೂ ಈ ಮೂಲಕ ಕೈಗೊಳ್ಳಲಾಗಿದೆ. ವಿಮಾನಯಾನ ಸಚಿವಾಲಯವು ಕಲಹರಹಿತ ಪ್ರಯಾಣಕ್ಕಾಗಿ ‘ಏರ್ ಸೇವಾ’ ಆರಂಭಿಸಿದ್ದು, ಇಲ್ಲಿ ಪ್ರಯಾಣಿಕರ ತೊಂದರೆಗಳಿಗೆ ಒಂದೇ ಹಂತದಲ್ಲಿ ಪರಿಹಾರ ದೊರಕುತ್ತದೆ. ‘ಏರ್ ಸೇವಾ’ ಆಪ್ ಎಲ್ಲ ಫಲಾನುಭವಿಗಳನ್ನೂ ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ; ಗ್ರಾಹಕರ ತೊಂದರೆಗಳ ಪರಿಹಾರಕ್ಕೆ ಶ್ರಮಿಸುತ್ತದೆ ಹಾಗೂ ಪ್ರಯಾಣಿಕರೊಡನೆ ನಿರಂತರ ಸಂಪರ್ಕಸಾಧಿಸಲು, ಆ ಮೂಲಕ ಪ್ರಯಾಣಿಕರು ತಮ್ಮ ತೊಂದರೆಗಳನ್ನು ನಿವೇದಿಸಿಕೊಳ್ಳಲಿಕ್ಕೆ ಸಾಮಾಜಿಕಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ.

ಚಲನಶೀಲ ದರವ್ಯವಸ್ಥೆ

ವಿಶ್ವಮಟ್ಟದಲ್ಲಿ ಡೈನಾಮಿಕ್ ದರ-ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ; ನಮ್ಮಲ್ಲಿಯೂ ಅದನ್ನೇ ಅನುಸರಿಸುವುದು ಉತ್ತಮ ಎನ್ನುವ ಅಭಿಪ್ರಾಯ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರದು. ಅಂದರೆ ದರ ಕನಿಷ್ಠವಾಗಿರಬೇಕು. ಸೌಕರ್ಯಕ್ಕೆ ಪ್ರತ್ಯೇಕ ದರ ಇರಬೇಕು. ಮಧ್ಯದ ಸೀಟು, ಪ್ರಯಾಣದ ಮಧ್ಯೆ ಆಹಾರ ಪಾನೀಯ ವ್ಯವಸ್ಥೆ ಇಲ್ಲದಿರುವುದು, ಕನಿಷ್ಠ ಲಗ್ಗೇಜ್ ಮಾತ್ರ ಹೊಂದಿರುವುದಕ್ಕೆ ಕನಿಷ್ಠ ದರ. ಯಾವುದೇ ಹೆಚ್ಚಿನ ಸೌಕರ್ಯ ಬೇಕಿದ್ದರೆ ಪ್ರತ್ಯೇಕ ದರ. ಒಬ್ಬ ಪ್ರಯಾಣಿಕ ಸೀಟು ಕಾಯ್ದಿರಿಸುವಾಗ ಅವನ ಮೇಲೆ ಪ್ರಯಾಣದರವು ಪರಿಣಾಮಬೀರುವುದು. ‘ಕನಿಷ್ಠದರದ ವ್ಯಾಪ್ತಿಯೊಳಗೆ ಹೆಚ್ಚು ಪ್ರಯಾಣಿಕರನ್ನು ತರುವುದು, ಅನಿರ್ಬಂಧಿತ ಡೈನಾಮಿಕ್ ದರ ಇಂದಿನ ಅಗತ್ಯ’ ಎನ್ನುತ್ತಾರೆ ಸಚಿವ ಜಯಂತ್ ಸಿನ್ಹಾ. ‘ದರ-ವ್ಯವಸ್ಥೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಲಪಬೇಕು. ‘ಕಾಂಪಿಟಿಶನ್ ಕಮಿಷನ್ ಆಫ್ ಇಂಡಿಯಾ’ಏರ್‌ಲೈನ್ಸ್‌ನಲ್ಲಿ ಅಳವಡಿಕೆಯಾಗುವಂತಹ ಆರೋಗ್ಯಕರ ಪೈಪೋಟಿಗಳ ಮೇಲುಸ್ತುವಾರಿ ಮಾಡುತ್ತದೆ. ಒಂದು ಉತ್ತಮ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಶಸ್ವಿ ಉದ್ಯಮ ನಡೆಸಲು ಇದೊಂದೇ ಸರಿಯಾದ ಮಾರ್ಗ’ಎನ್ನುವುದು ಸಚಿವರ ಅಭಿಪ್ರಾಯ.

ಬಂಡವಾಳ ಹಿಂತೆಗೆದ ಸುತ್ತಮುತ್ತ

‘ಏರ್‌ಇಂಡಿಯಾದಲ್ಲಿ ಸರ್ಕಾರ ತನ್ನ ಪಾಲುದಾರಿಕೆಯು ಕಡಮೆಯಾಗಿ ಖಾಸಗಿಪಾಲುದಾರಿಕೆ ಹೆಚ್ಚಾಗಬೇಕು’ ಎನ್ನುವ ಬಂಡವಾಳಹಿಂತೆಗೆತದ ಪ್ರಸ್ತಾವ ಇಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎನ್ನುವುದೇ ಎಲ್ಲರ ಆತಂಕ. ನಾಗರಿಕ ವಿಮಾನಯಾನ ಸಚಿವರು ಈ ಬಗ್ಗೆ ಆತಂಕ ಬೇಡ ಎನ್ನುವ ಸಂದೇಶವನ್ನು ರವಾನಿಸುತ್ತಾರೆ. ಈ ನಿರ್ಧಾರದ ಹಿಂದೆ ಸಾಕಷ್ಟು ಪ್ರಯೋಜನವೂ ಇದೆ. ಸಚಿವ ಜಯಂತ್ ಸಿನ್ಹಾ ಇದಕ್ಕೆ ಮೂರು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದಾಗಿ ಏರ್‌ಇಂಡಿಯಾವನ್ನು ಗ್ಲೋಬಲ್ ಏರ್‌ಲೈನ್ಸ್ ಮಾಡುವ ಆಶಯ ಸರ್ಕಾರದ್ದು. ಇದರಿಂದ ಸ್ಪರ್ಧೆ ಹೆಚ್ಚಾಗುತ್ತದೆ; ಉತ್ತಮ ಗುಣಮಟ್ಟದ ಸೇವೆಯನ್ನು ಜನರಿಗೆ ಒದಗಿಸಲು ಸಾಧ್ಯವಾಗುತ್ತದೆ. ಸರ್ಕಾರದ ಮಿತಿಯೊಳಗೆ ಈ ಗುರಿಯನ್ನು ತಲಪುವುದು ಅಸಾಧ್ಯ. ಎರಡನೆಯದಾಗಿ, ಜನರು ಬಯಸುವಂತಹ ಹೆಚ್ಚು ವಿಮಾನಸಂಪರ್ಕ ಮತ್ತು ಹೆಚ್ಚಿನ ದಕ್ಷತೆ ಇವುಗಳನ್ನು ಖಾಸಗಿಕ್ಷೇತ್ರವು ಒದಗಿಸುತ್ತಿದ್ದು, ವಿಮಾನಯಾನ ಕ್ಷೇತ್ರ ಶೇ. ೮೬ರಷ್ಟು ಖಾಸಗಿಸೇವೆಯಿಂದಲೇ ನಡೆಯುತ್ತಿದೆ. ಈ ಕ್ಷೇತ್ರವು ಉಳಿದ ಕ್ಷೇತ್ರಗಳಂತಲ್ಲ; ಪ್ರೌಢ ಹಿನ್ನೆಲೆಯ, ಸ್ಪರ್ಧಾತ್ಮಕತೆ ಹೆಚ್ಚಿರುವ, ಉತ್ತಮವಾಗಿ ನಿಯಂತ್ರಿಸಲ್ಪಡುವ ಕ್ಷೇತ್ರವಾಗಿದ್ದು ಸರ್ಕಾರ ಹೆಚ್ಚಿನ ಕಾರ್ಯತಂತ್ರ ರೂಪಿಸುವ ಅಗತ್ಯ ಇಲ್ಲಿಲ್ಲ. ಮೂರನೆಯದಾಗಿ, ಏರ್‌ಇಂಡಿಯಾ ದೀರ್ಘಕಾಲದಿಂದ ನಷ್ಟವನ್ನೇ ಅನುಭವಿಸುತ್ತಿದ್ದು, ಏರ್‌ಇಂಡಿಯಾ ರಕ್ಷಣೆ ಮಾಡಲಿಕ್ಕೆ ಸರ್ಕಾರವು ಎಲ್ಲಿಂದ ಹಣ ತರಬೇಕು ಎನ್ನುವುದು ಪ್ರಶ್ನೆ. ಶಾಲಾಮಕ್ಕಳ ಮಧ್ಯಾಹ್ನದ ಊಟಕ್ಕಿಟ್ಟ ಹಣವನ್ನೋ, ರಕ್ಷಣೆ, ಆರೋಗ್ಯ ಮೊದಲಾದವಕ್ಕೆ ಇಟ್ಟ ಹಣವನ್ನೋ, ಇನ್ಯಾವುದೋ ಸಾರ್ವಜನಿಕಕ್ಷೇತ್ರದ ಬಳಕೆಗೆ ಇಟ್ಟ ಹಣವನ್ನೋ ತರಬೇಕು.

ಸದ್ಯದ ಕೇಂದ್ರಸರ್ಕಾರವು ಏರ್‌ಇಂಡಿಯಾವನ್ನು ನಷ್ಟದಿಂದ ಈಚೆಗೆ ತರಲು ಸಾಕಷ್ಟು ಪ್ರಯತ್ನ ಪಟ್ಟಿದೆ. ಹೀನಾಯಸ್ಥಿತಿಯಲ್ಲಿದ್ದ ಏರ್‌ಇಂಡಿಯಾವನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ ಇದರ ಸ್ಪರ್ಧಾತ್ಮಕತೆ ಹೆಚ್ಚಲು, ಗ್ಲೋಬಲ್ ಮಟ್ಟಕ್ಕೆ ಬೆಳೆಯಲು ಇದರಲ್ಲಿ ಖಾಸಗಿಯವರ ಪಾಲೂ ಬೇಕು ಎನ್ನುವುದು ಸಚಿವರ ಅಭಿಪ್ರಾಯ. ರಾಷ್ಟ್ರಮಟ್ಟದಲ್ಲಿ ಯಾವುದೇ ಸನ್ನಿವೇಶದಲ್ಲೂ, ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ, ಜನರನ್ನು ಸ್ಥಳಾಂತರಿಸಲು, ತುರ್ತುಸನ್ನಿವೇಶದಲ್ಲಿ ಸರ್ಕಾರವು ಆ ಸಂದರ್ಭದ ನಿರ್ವಹಣೆಗೆ ಯಾವುದೇ ವಿಮಾನಯಾನಸಂಸ್ಥೆಯನ್ನು ನೆರವಿಗೆ ಕೇಳಲು ಕಾನೂನಿನಲ್ಲಿ ಅವಕಾಶವಿದೆ; ಖಾಸಗಿಯವರೂ ಇಂತಹ ಸನ್ನಿವೇಶದಲ್ಲಿ ನೆರವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಸರ್ಕಾರದ್ದೇ ವಿಮಾನಯಾನಸಂಸ್ಥೆ ಬೇಕೇಬೇಕೆಂದೇನಿಲ್ಲ. ಇದು ಖಾಸಗೀಕರಣದ ಬಗ್ಗೆ ಸಂಶಯವ್ಯಕ್ತಪಡಿಸುವವರಿಗೆ ಸಚಿವ ಜಯಂತ್ ಸಿನ್ಹಾ ಅವರ ಸ್ಪಷ್ಟೀಕರಣ.

ಭವಿಷ್ಯದ ಕಾರ್ಯಯೋಜನೆಗಳು

   ಇಷ್ಟೆಲ್ಲ ಕನಸಿನ ಸಾಕಾರವು ಸಾಧ್ಯವೆ? – ಎಂಬ ಪ್ರಶ್ನೆಯೂ ಏತನ್ಮಧ್ಯೆ ಕಾಡುತ್ತದೆ. ಜೊತೆಗೆ ’ಡ್ರೋನ್ ಪಾಲಿಸಿ’ ಅಂತಿಮ ಹಂತದಲ್ಲಿದ್ದು ಸದ್ಯದಲ್ಲೇ ಅದನ್ನು ಜಾರಿಗೊಳಿಸುವುದು, ಇದರೊಂದಿಗೆ ವಿಮಾನಯಾನವನ್ನು ಸರಳಗೊಳಿಸುವ ’ಡಿಜಿ- ಯಾತ್ರಾ’ ಯೋಜನೆಯನ್ನು ಆರಂಭಿಸುವುದು ತಮ್ಮ ಮುಂದಿರುವ ಯೋಜನೆ ಎನ್ನುತ್ತಾರೆ ಜಯಂತ್ ಸಿನ್ಹಾ. ಇದಲ್ಲದೆ ಏರ್‌ಇಂಡಿಯಾದ ಬಂಡವಾಳಹಿಂತೆಗೆತ ಕಾರ್ಯವನ್ನು ಪೂರ್ಣಗೊಳಿಸಬೇಕು. ಸರ್ಕಾರವು ವಿಮಾನನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸುವ ’ನೆಕ್ಸ್ಟ್-ಜೆನ್ ಏರ್‌ಪೋರ್ಟ್ ಫಾರ್ ಭಾರತ್ ನಿರ್ಮಾಣ್’ (NABH)  ಯೋಜನೆಯ ಕಾರ್ಯ ಕೈಗೆತ್ತಿಕೊಂಡಿದೆ. CISF ಜೊತೆಗೆ ’ಯುನಿಫೈಡ್ ಸೆಕ್ಯೂರಿಟಿ ಕಮಾಂಡ್’ ವ್ಯವಸ್ಥೆಗೆ ಅಂತಿಮರೂಪ ನೀಡಬೇಕಾಗಿದೆ.

ಸಾರಿಗೆಯ ರಾಜ ವಿಮಾನಯಾನವು ಸುಧಾರಣೆಗೊಂಡರೆ ಪ್ರವಾಸೋದ್ಯಮದಂತಹ ಅನೇಕ ಉದ್ಯಮಗಳು ಯಶಸ್ಸಿನ ಹಾದಿಗೆ ಹೊರಳುತ್ತವೆ; ದೇಶದ ಆರ್ಥಿಕತೆಗೆ ಬಲವೊದಗಿಸುತ್ತವೆ. ಆ ದಿಕ್ಕಿನಲ್ಲಿ ಕೇಂದ್ರಸರ್ಕಾರದ ಪ್ರಯತ್ನಗಳು ಇನ್ನಷ್ಟು ಮುಂದುವರಿಯುವಂತಾಗಲಿ.

 

‘ಉತ್ಥಾನ’ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!