ಕಥೆ

ವಶವಾಗದ ವಂಶಿ – 13

ವಶವಾಗದ ವಂಶಿ – 12

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ)

(ಮುಂದುವರಿದ ಭಾಗ..)

ಏನು? ನಾವು ಅಪಹರಿಸಬೇಕೆ! ಅಯ್ಯಾ ಏತಕ್ಕಾಗಿ?

ಹೌದು ನಾವೇ ಅದನ್ನು ಅಪಹರಿಸಬೇಕು. ಬೇರೆ ವಿಧಿಯಿಲ್ಲ ಅನಂತೂ.. ಅದು ಈ ಯುಗ ಪರ್ಯಂತ ಅಲ್ಲೇ ಇರಬೇಕು. ಯತಿಗಳಿಂದ ಪೂಜಿಸಲ್ಪಡುತ್ತಿರುವ ವಿಗ್ರಹವದು. ಅಷ್ಟೇ ಅಲ್ಲ ಅವರ ಮೂಲ ಯತಿಗಳಿಂದ ಸ್ಥಾಪಿಸಲ್ಪಟ್ಟ ವಿಗ್ರಹವದು. ಅದಕ್ಕೊಂದು ಉದ್ದೇಶವಿರುತ್ತದೆ. ಇಲ್ಲದಿದ್ದರೆ ಶಿವಳ್ಳಿಯಲ್ಲೇ ಏಕೆ ಅವರು ಸ್ಥಾಪಿಸಬೇಕಿತ್ತು. ಈ ಭೂಮಿಯ ಮೇಲೆ ಬೇರೆ ಜಾಗವಿರಲಿಲ್ಲವೇ? ಸ್ಥಳ ಮಹಾತ್ಮೆ ಎನ್ನುವುದು ಅದಕ್ಕಾಗಿಯೇ.. ಹಾಗಾಗಿ ಅದು ಅಲ್ಲಿಂದ ಬೇರೆಲ್ಲಿಯೂ ಹೋಗುವಂತಿಲ್ಲ.

ಅಯ್ಯಾ ಮತ್ತೆ ನಾವು ಅಪಹರಿಸಬೇಕು ಎಂದಿರಲ್ಲಾ.. ಅಪಹರಿಸಿಕೊಂಡು ಬಂದು ಏನು ಮಾಡುವುದು. ನಾವು ಅಪಹರಿಸಿದರೆ ದೋಷ ಬರುವುದಿಲ್ಲವೇ. ಮುಂದೆ ಆಗುವ ಪರಿಣಾಮವನ್ನು ನೆನೆಸಿಕೊಂಡರೇ ಭಯವಾಗುತ್ತಿದೆ.

ತಡೀ ಅನಂತೂ.. ನನ್ನ ಮಾತು ಪೂರ್ತಿಯಾಗಿ ಕೇಳು.. ಸಮಾಧಾನದಿಂದಿರು. “ಬಹುಜನ ಹಿತಾಯಚ” ಎಂದು ಆ ಭಗವಂತನೇ ಹೇಳಿದಂತೆ ಎಲ್ಲರ ಹಿತಕ್ಕಾಗಿ ಮಾಡುವ ಕೆಲಸದಿಂದ ದೋಷ ಬರುವುದಿಲ್ಲ. ಅಷ್ಟಕ್ಕೂ ನಾವು ಆ ಪರಮಪವಿತ್ರವಾದ ಮೂರ್ತಿಯನ್ನು ನಮ್ಮ ಸ್ವಾರ್ಥಕ್ಕಾಗಿ ಅಪಹರಿಸುತ್ತಿಲ್ಲವಲ್ಲವೇ. ಅದನ್ನು ರಕ್ಷಿಸಲೆಂದೇ ತಾತ್ಕಾಲಿಕವಾಗಿ ಸ್ಥಳಾಂತರಿಸುವುದು. ಕೆಲ ಸಮಯದ ನಂತರ ಪುನಃ ಹಿಂದಿರುಗಿಸುವುದು. ಇದರಲ್ಲಿ ನಮ್ಮ ಸ್ವಾರ್ಥವೇನಿರುತ್ತದೆ.? ಹಾಗಾಗಿ ಇದು ತಪ್ಪಾಗಲಾರದು.

ಆದರೆ ಅಯ್ಯಾ.. ಇಂತಹದೊಂದು ದುಃಸ್ಸಾಹಸವನ್ನು ನಾವು ಮಾಡಲಾದೀತೆ? ಇವೆಲ್ಲಾ ಸಾಧ್ಯವೇ?

ನಮ್ಮ ದೇವಾಲಯವನ್ನು ರಕ್ಷಿಸಬೇಕು ಎಂದರೆ ಮಾಡಲೇಬೇಕು.

ಆದರೆ ಹೇಗೆ ಅಯ್ಯಾ..?

ಅನಂತೂ.. ಅದರ ಜವಾಬ್ದಾರಿ ನನ್ನದು. ನಿನ್ನ ಸಹಕಾರವಿದ್ದರೆ ನಾವು ಈ ಕಾರ್ಯದಲ್ಲಿ ಯಶಸ್ವಿಯಾಗಬಹುದು.

ಶಿವಳ್ಳಿಗೆ ಬರಲಿರುವ ದುರ್ಗತಿಯನ್ನು ತಪ್ಪಸುವುದಕ್ಕೆ ಎಂತಹ ಕೆಲಸವನ್ನಾದರೂ ಮಾಡಬಲ್ಲೆ ಅಯ್ಯಾ ಹೇಳಿ..

ಅನಂತೂ.. ನಮ್ಮ ಸರಹದ್ದಿನಲ್ಲೇ ತುಂಗಾತಟದಲ್ಲಿ ಇರುವ “ಆನೇಗುಂದ” ಎಂಬ ಗ್ರಾಮದಲ್ಲಿ ದೇವಾಲಯವೊಂದನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಪ್ರತಿಷ್ಠಾಪಿಸಲು ಮೂರ್ತಿಯೊಂದು ತಯಾರಾಗಿದೆ. ಆದರೆ ಅದನ್ನು ಪ್ರತಿಷ್ಠಾಪಿಸಲು ಇನ್ನೂ ಬಹಳ ಸಮಯವಿದೆ. ಶಿವಳ್ಳಿಯ ವೇಣುಗೋಪಾಲನ ವಿಗ್ರಹದಷ್ಟೇ ಗಾತ್ರದ ಮೂರ್ತಿಯದು. ಅದನ್ನು ನಿರ್ಮಿಸಿರುವ ಶಿಲ್ಪಿಯೂ ನನ್ನ ಪರಮಾಪ್ತನು ಹಾಗು ಅವನೂ ಶಿವಳ್ಳಿಯ ಪರಮಭಕ್ತನು. ಹಾಗಾಗಿ ಈ ವಿಷಯವನ್ನು ಅವನಿಗೆ ತಿಳಿಸಿ ಅವನು ನಿರ್ಮಿಸಿದ ಮೂರ್ತಿಯನ್ನು ಪಡೆದು, ಶಿವಳ್ಳಿಯ ಮೂರ್ತಿಯನ್ನು ತಾತ್ಕಾಲಿಕವಾಗಿ ಅದಲು-ಬದಲು  ಮಾಡಿದರೆ ನಾವು ಯಶಸ್ವಿಯಾಗುತ್ತೇವೆ.

ಹೇಗಿದ್ದರೂ ಶಿವಳ್ಳಿಯ ವೇಣುಗೋಪಾಲ ಯತಿಗಳ ಖಾಸಗೀ ಪೂಜೆಗೆಂದು ಅವರು ಮಾಡಿಕೊಂಡಿರುವ ದೇವಾಲಯ. ಹಾಗೆಂದು ಸಾರ್ವಜನಿಕ ದರ್ಶನಕ್ಕೆ ಬಿಡುವುದೇ ಇಲ್ಲವೆಂದಲ್ಲ. ಆದರೂ ಯತಿಗಳ ಹೊರತಾಗಿ ಅದನ್ನು ಸೂಕ್ಷ್ಮವಾಗಿ ಗಮನಿಸಿದವರು ಯಾರೂ ಇರಲಾರರು. ಇದೇ ನಮಗೆ ಇರುವ ದೊಡ್ಡ ಅನುಕೂಲ. ಮೂರ್ತಿಯನ್ನು ಬದಲಾಯಿಸಿದರೆ ಯತಿಗಳ ಹೊರತಾಗಿ ಸಾರ್ವಜನಿಕರಿಗೆ ಯಾರಿಗೂ ತಿಳಯುವುದಿಲ್ಲ.

ಯತಿಗಳಿಗೆ ಹೇಗಿದ್ದರೂ ತಿಳಿಯುವುದು. ಬದಲಾಯಿಸಿದ ನಂತರವಷ್ಟೇ ಅವರ ಪಾದಗಳಿಗೆರಗಿ ವಿಷಯವೆಲ್ಲವನ್ನೂ ತಿಳಿಸೋಣ. ಸಮಚಿತ್ತರಾದ ಅವರು ವಿಷಯವನ್ನು ಅರಿತುಕೊಳ್ಳದೇ ಇರುವರೇ?

ದಯಾಮಯರಾದ ಅವರು ವಿಗ್ರಹವನ್ನು ರಕ್ಷಿಸುವ ಸಲುವಾಗಿ ನಾವು ಮಾಡಿದ ಕೃತ್ಯದಿಂದ ಅಪಚಾರಗಳಾದರೆ ಕ್ಷಮಿಸದೇ ಇರುವರೇ?

ಹೇಗಿದ್ದರೂ ಅದು ಆಗಮಶಾಸ್ತ್ರದಲ್ಲಿ ಉಕ್ತವಾದಂತೆ ವಾಸ್ತು ಪ್ರಕಾರವಾಗಿ ನಿರ್ಮಿತವಾದ ದೇವಾಲಯವಲ್ಲಂತೆ. ಕೇವಲ ತಮ್ಮ ಖಾಸಗೀ ಪೂಜೆಗಾಗಿ ಪ್ರತಿಷ್ಠಾಪಿಸಿದ ಮೂರ್ತಿಯಂತೆ, ಅದಕ್ಕೊಂದು ಭದ್ರತೆ ಬೇಕಲ್ಲವೇ‌? ಆದ್ದರಿಂದ ಪುಟ್ಟ ದೇವಾಲಯವನ್ನು ನಿರ್ಮಿಸಿರುವುದಂತೆ, ಪಂಡಿತೋತ್ತಮರೇ ಇದನ್ನು ಹೇಳಿದ್ದಾರೆ. ಹಾಗಾಗಿ ಅಲ್ಲಿ ಮೂರ್ತಿಯಷ್ಟೇ ಪ್ರಧಾನ. ಅದಕ್ಕೆ ಪೂಜೆಯಾಗುವುದಷ್ಟೇ ಮುಖ್ಯ.

ಆದ್ದರಿಂದ ಅದನ್ನು ತಾತ್ಕಾಲಿಕವಾಗಿ ನಮ್ಮಲ್ಲಿಗೆ ವರ್ಗಾಯಿಸಿ, ನಮ್ಮ ಮೇಲೆ ಗೌರವಾದರಗಳನ್ನು ಇರಿಸಿಕೊಂಡ ಬ್ರಾಹ್ಮಣರೊಬ್ಬರಿದ್ದಾರೆ. ಅವರ ಮೂಲಕ  ಪ್ರತಿನಿತ್ಯವೂ ಶ್ರದ್ಧೆಯಿಂದ ಪೂಜೆಗೈದರಾಯಿತು.

ಹೇಗಿದ್ದರೂ ಶಿವಳ್ಳಿಯ ವಿಗ್ರಹವನ್ನು ದರೋಡೆ ಮಾಡಲು ಬರುವರು. ಬರಲಿ.. ನಾವು ಅದಲುಬದಲು ಮಾಡಿದ ವಿಗ್ರಹವನ್ನು ಅವರು ಅಪಹರಿಸಿಕೊಂಡು ಹೋಗಲಿ. ತದನಂತರ ಪುನಃ ಈ ವಿಗ್ರಹವನ್ನು ಮರುಪ್ರತಿಷ್ಠಾಪನೆ ಮಾಡಿದರಾಯಿತು. ಪೂಜ್ಯ ಯತಿವರೇಣ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ವಿಗ್ರಹವೂ ತನ್ನದೇ ಸ್ಥಾನದಲ್ಲಿ ಉಳಿದಂತಾಗುವುದು. ಜೊತೆಗೆ ಆಳುಪರರ ಮೇಲೆ ಅವರ ಸಾರ್ವಭೌಮರಿಂದ ಬರಬಹುದಾದ ವಿರೋಧವೂ ತಪ್ಪಿ ಅವರ ಸಂಬಂಧವು ಗಟ್ಟಿಯಾಗೇ ಇರುವುದು.

ಅಯ್ಯಾ.. ಆದರೆ ಬಹಳ ಸಮಯವಿಲ್ಲದಿರುವುದರಿಂದ ಕ್ಷಿಪ್ರಗತಿಯಲ್ಲಿ ಮಾಡಲು ಸಾಧ್ಯವೇ..?

ಖಂಡಿತ ಸಾಧ್ಯ ಅನಂತೂ.. ವಿಗ್ರಹ ವರ್ಗಾವಣೆ ಮಾಡಲು ನಿನ್ನ ಸಹಾಯ ದೊರೆತರೆ ಇನ್ನುಳಿದುದೆಲ್ಲವೂ ಸಾಂಗವಾಗಿ ನೆರವೇರುವಂತೆ ಮಾಡುವೆ. ವಿಗ್ರಹ ವರ್ಗಾಯಿಸಲು ಸೈನಿಕರು ಬಳಸುವ ಕುದುರೇ ಗಾಡಿಯ ಅವಷ್ಯಕತೆ ಇದೆ. ಇದರಿಂದ ಯಾರೂ ಅಡ್ಡಗಟ್ಟಿ ವಿಚಾರಣೆ ಮಾಡುವುದಿಲ್ಲ. ಜೊತೆಗೆ ಮಳೆಗಾಲ ಆರಂಭವಾಗಿರುವುದರಿಂದ ಜನರು ತಮ್ತಮ್ಮ ವ್ಯವಸಾಯದ ಚಟುವಟಿಕೆಗಳಲ್ಲಿ ಮುಳುಗಿರುತ್ತಾರೆ. ಇದೇ ಸುಸಮಯ. ಅಲ್ಲಿಂದ ನೇರವಾಗಿ ಸೀತಾನದಿಯನ್ನು ದಾಟಿ, ಆಗುಂಬೆಯ ಬಳಿ ಘಟ್ಟ ಏರಿ ನಮ್ಮಲ್ಲಿಗೇ ಬರಲಿ. ಸೀತಾನದಿಯವರೆಗೆ ಒಂದು ಗಾಡಿಯ ವ್ಯವಸ್ಥೆಯಾಗಲಿ. ಸೀತಾನದಿಯಿಂದ ಈಚೆಗೆ ಸೈನಿಕರು ಬಳಸುವ ಗಾಡಿಯಿರಲಿ.

ಆಗಲಿ ಅಯ್ಯಾ.. ತಾವು ಹೇಳಿದಂತೆ ಎಲ್ಲ ವ್ಯವಸ್ಥೆ ಮಾಡುವೆ.

ಹಾಂ.. ಸಮಯೋಚಿತವಾಗಿ ನೆನಪಾಯಿತು. ಮೊನ್ನೆ ನಮ್ಮ ಪುರೋಹಿತರ ಬಳಿ ಮಾತನಾಡುತ್ತಿದ್ದಾಗ ಹೇಳಿದರು. ಇನ್ನೆರಡು ಮಾಸದ ನಂತರ ಬರುವ ಹುಣ್ಣಿಮೆಯ ದಿನ ಚಂದ್ರಗ್ರಹಣವಿದೆಯಂತೆ. ಅದೇ ಸೂಕ್ತವಾದ ದಿನ‌ ಅನಂತೂ..

ಅಯ್ಯಾ.. ಹುಣ್ಣುಮೆ ದಿನವಾ? ಇದೇನಯ್ಯಾ ಕಳ್ಳತನ ಮಾಡುವವರು ಅಮಾವಾಸ್ಯೆಯನ್ನು ಆಯ್ಕೆ ಮಾಡಿಕೊಂಡರೆ ನೀವು ಹುಣ್ಣುಮೆ ಎನ್ನುತ್ತಿದ್ದೀರ. ಬೆಳದಿಂಗಳಲ್ಲಿ ಎಂತಹ ಕುರುಡರಿಗಾದರೂ ಎಲ್ಲವೂ ಕಾಣುವುದು. ಹೀಗಿರುವಾಗ ಹುಣ್ಣುಮೆ ಎನ್ನುತ್ತಿದ್ದೀರ.

ಅನಂತೂ ಅಂದು ಖಗ್ರಾಸ ಚಂದ್ರಗ್ರಹಣವಿದೆ. ಗ್ರಹಣದ ಸಮಯವೇ ಇದಕ್ಕೆ ಸೂಕ್ತ. ಏಕೆಂದರೆ ಗ್ರಹಣದ ಸಮಯದಲ್ಲಿ ಯಾರೂ ಮನೆಯಿಂದ ಹೊರ ಬರುವುದಿಲ್ಲ. ಹಾಗು ಗ್ರಹಣದ ಸಮಯದಲ್ಲಿ ದೇವಸ್ಥಾನವಂತೂ ತೆರೆಯುವುದೇ ಇಲ್ಲ. ಹಾಗಾಗಿ ದೇವಾಲಯದ ಸನಿಹ ಯಾರೂ ಬರಲಾರರು. ಇದೇ ಉತ್ತಮ ಸಮಯ ನಮ್ಮ ಕಾರ್ಯಸಾಧನೆಗೆ.

ಅವರು ಕಳವು ಮಾಡಲು ಬರುವ ಅಮಾವಾಸ್ಯೆಯ ಸನಿಹದ ಪೂರ್ವದಲ್ಲಿ ಬರುವ ಹುಣ್ಣಿಮೆಯ ದಿನ. ಅಂದಿನಿಂದ ಅವರಿಗೆ 15 ದಿನಗಳಿರುತ್ತವೆ. ಆ ಹದಿನೈದು ದಿನಗಳಲ್ಲಿ ಎಂದಾದರೂ ಅಪಹರಿಸಲಿ. ನಾವು ಪೂರ್ಣಿಮೆಯಂದೇ ಬದಲಿಸಿಬಿಡೋಣ.

ಆ ನಂತರದಲ್ಲಿ ನಡೆದ ಎಲ್ಲ ವಿಷಯವನ್ನು‌  ಆಳುಪರರಿಗೆ ತಿಳಿಸಿ ಮತ್ತೊಮ್ಮೆ ಮೂರ್ತಿಯನ್ನು ಪ್ರತಿಷ್ಠಾಪಿಸೋಣ. ನಮ್ಮ ಪರಮಪೂಜ್ಯ ಮೂರ್ತಿಯೂ ಅಲ್ಲೇ ಉಳಿಯುವುದು. ಆಳುಪರರಿಗೂ ತಾವು ಎಷ್ಟು ನಿರ್ಲಕ್ಷಿಸಿದೆವು ಎಂದೂ ಅರಿವಾಗುವುದು. ಅವರ ಸಾರ್ವಭೌಮರಿಗೂ ತಾವು ಬಯಸಿದ ಮೂರ್ತಿ ಸಿಕ್ಕುವುದರಿಂದ ಅವರ ಕೆಂಗಣ್ಣಿಗೆ ಗುರಿಯಾಗುವುದೂ ತಪ್ಪುವುದು.

ಹೌದು ಅಯ್ಯಾ.. ಇದೇ ಸರಿ.. ಹಾಗೆಯೇ ಮಾಡೋಣ. ಪೂರ್ಣಿಮೆಯ ದಿನ ಕಾಯುತ್ತಿರುತ್ತೇನೆ.. ಉಳಿದ ಮಾಹಿತಿ ನಿಮ್ಮ ಬಂಟರಿಂದ ತಿಳಿಸಿ.. ಬರುವೆ..

(ಮುಂದುವರೆಯುವುದು..)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!