ಕಥೆ

ವಶವಾಗದ ವಂಶಿ – 12

ವಶವಾಗದ ವಂಶಿ – 11

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ)

(ಮುಂದುವರಿದ ಭಾಗ..)

ಇಲ್ಲ ಅಯ್ಯಾ.. ಅವರ ಮೇಲೆ ಇರುವ ನಂಬಿಕೆ, ಗೌರವದಿಂದಲೋ ಏನೋ ಕಾಣೆ ನನ್ನ ಮಾತಿಗೆ ಪ್ರಾಶಸ್ತ್ಯ ನೀಡಲಿಲ್ಲ.

“ಸಾಮಂತರ ರಾಜ್ಯದಲ್ಲಿ ಗುಪ್ತವಾಗಿ ಮಾಹಿತಿ ಸಂಗ್ರಹಿಸುವುದು ಎಲ್ಲ ರಾಜರೂ ಮಾಡುವ ಕಾರ್ಯವೇ. ಕೇವಲ ದೇವಸ್ಥಾನ ಮಾತ್ರವಲ್ಲ ಪ್ರತಿಯೊಂದು ವಿಷಯದ ಮೇಲೂ ಗುಪ್ತ ಮಾಹಿತಿ ಸಂಗ್ರಹಿಸುತ್ತಿರುತ್ತಾರೆ. ಆದರೆ ದೇವಾಲಯದ ವಿಷಯ ಮಾತ್ರ ನಿಮ್ಮ ಗಮನಕ್ಕೆ ಬಂದಿದೆಯಷ್ಟೇ. ಅದು ರಾಜತಾಂತ್ರಿಕ ವಿಷಯ” ಎಂದರು.

“ನಾವು ಹೇಗಿದ್ದರೂ ಸಾಮಂತರು ಅದಕ್ಕಿಂತ ಹೆಚ್ಚಾಗಿ ಅತ್ಯಂತ ನಿಷ್ಠರು. ನಮ್ಮನ್ನು ಎಂದಿಗೂ ಅವರು ಸಾಮಂತರ ರೀತಿಯಲ್ಲಿ ನೋಡಿಲ್ಲ. ಒಬ್ಬ ಸಸ್ನೇಹಿಯಂತೆ ಬಾಂಧವ್ಯ ಹೊಂದಿದ್ದಾರೆ. ರಾಜತಾಂತ್ರಿಕವಾಗಿ ಎಲ್ಲಾ ಸಹಾಯಗಳನ್ನೂ ಮಾಡುತ್ತಿದ್ದಾರಲ್ಲದೆ ಅವರ ಕಠಿಣ ನೀತಿಗಳನ್ನು ಎಂದಿಗೂ ನಮ್ಮ ಮೇಲೆ ಹೇರಿಲ್ಲ. ಅಂತಹವರು ನಮ್ಮ ವಸ್ತುವೊಂದನ್ನು ದೋಚುವರೇನು?” ಎಂದು ಪ್ರಶ್ನಿಸಿದರು.

“ಬಯಸಿದರೆ ನಮ್ಮ ಮೇಲೆ ಯುದ್ಧ ಸಾರಿ ನಮ್ಮನ್ನು ಸೋಲಿಸಿ ನಮ್ಮ ಅಸ್ತಿತ್ವವನ್ನೇ ನಿರ್ನಾಮ ಮಾಡಿ ಇಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡುವ ಶಕ್ತಿ ಮತ್ತು ಯೋಗ್ಯತೆ ಅವರಿಗಿದೆ. ಅಂತಹವರು ನೀಚವಾದ ಚೋರತನಕ್ಕೆ ಮುಂದಾಗುವರೇ? ಯೋಚಿಸಿ” ಎಂದರು.

“ಈ ಆರೋಪವನ್ನು ಇನ್ನೆಂದೂ ಮಾಡಬೇಡಿ. ನಿಮಗೆ ದೊರಕಿದ ಮಾಹಿತಿಯಿಂದ ಅವರ ಮೇಲೆ ಅನುಮಾನ ಮೂಡಿರಬಹುದು ನಿಜ ಆದರೆ ಇಂತಹ ಕ್ಷುಲ್ಲಕ ಆರೋಪಗಳಿಂದ ಅವರ ಘನತೆಗೆ ಲೋಪ ಮಾಡಿದಂತಾಗುವುದು. ಇನ್ನೊಮ್ಮೆ ಹೀಗೆ ಆರೋಪಿಸಬೇಡಿ” ಎಂದು ಹೇಳಿ ಕಳುಹಿಸಿದರು ಅಯ್ಯಾ..

ಹಾಗಾಗಿ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರೂ ಅದನ್ನು ರಾಜರಿಗೆ ಹೇಳಲಿಲ್ಲ.  ಇನ್ನು ನಿಮಗೆ ವಿಷಯ ಮುಟ್ಟಿಸೋಣವೆಂದರೆ ಇದರ ಜೊತೆಗೆ ರಾಜ್ಯದ ಗುಪ್ತಚಾರಿಕೆಯ ಪೂರ್ತಿ ಜವಾಬ್ದಾರಿ ನನ್ನ ಮೇಲಿದ್ದರಿಂದ ಸಮಯದ ಅನುಕೂಲವಾಗಲಿಲ್ಲ. ಆದರೆ ಈಗ ಸಮಯ ಕೈಮೀರಿ ಹೋಗಿದೆ. ಇನ್ನೆರಡು ಮಾಸದಲ್ಲಿ ಅವರು ಅದನ್ನು ಅಪಹರಿಸುವ ಸೂಚನೆ ಸಿಕ್ಕಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ತಯಾರಾಗಿದೆ.

ಎರಡು ಮಾಸಗಳಲ್ಲಿಯೇ? ಖಚಿತವೇ? ಹೇಗೆ ತಿಳಿಯಿತು ಅನಂತೂ?

ಹೌದು ಅಯ್ಯಾ.. ಆ ಸಿದ್ದ ಪುನಃ  ಡಕಾಯಿತರೊಂದಿಗೆ ಈ ಕಾರ್ಯ ಅಂತಿಮಗೊಳಿಸಲು ಅವರು ಹೇಳಿದಂತೆ ಹಣ ತೆಗೆದುಕೊಂಡು ಸೌರಾಷ್ಟ್ರಕ್ಕೆ ಹೋದನು. ಅಲ್ಲಿ ನಮ್ಮವರನ್ನು ನಿಯೋಜಿಸಿದ್ದೆನಲ್ಲಾ ಅವರಿಂದ ಈ ಮಾಹಿತಿ ದೊರೆಯಿತು. ಖಚಿತವಾಗಿ ಯಾವ ದಿನವೆಂದು ತಿಳಿಯದಿದ್ದರೂ, ಎರಡು ಮಾಸ ಕಳೆದು ಬರುವ ಅಮಾವಾಸ್ಯೆಯ ಸನಿಹದಲ್ಲಿ ಅಪಹರಿಸುವ ಸೂಚನೆ ಇದೆ ಎಂದು ತಿಳಿದುಬಂದಿದೆ.

ಅಯ್ಯಾ ನೀವು ನನಗೆ ಆಳುಪರರ ಸೇನೆಯಲ್ಲೊಂದು ಹುದ್ದೆ ಕೊಡಿಸಿದವರು. ಅಂದು ನೀವು ಕೊಡಿಸದಿದ್ದರೆ ಇಂದು ನಾನು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಶಿವಳ್ಳಿಯ ಈಶ್ವರನಾಗಲೀ, ವೇಣುಗೋಪಾಲನಾಗಲೀ ನಮ್ಮ ಶ್ರದ್ಧಾಕೇಂದ್ರ. ಇನ್ನು ಯತಿಗಳಂತೂ ನಮಗೆ ಪ್ರಾತಃ ಸ್ಮರಣೀಯರಾದ ಪೂಜ್ಯರು. ಇವೆಲ್ಲದಕ್ಕೂ ಧಕ್ಕೆ ತರುವ ಯಾವುದೇ ವಿಷಯವನ್ನು ನಾವು ಸಹಿಸಲಾರೆವು.

ಅವರಿಗೆ ಹೇಳಿ ಪ್ರಯೋಜನವಿಲ್ಲವೆಂದು ತಿಳಿದೇ ನಿಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿರುವುದು. ನೀವೇ ಇದರ ರಕ್ಷಣೆಗೆ ಮನಸ್ಸು ಮಾಡಬೇಕು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಬೇಕು.

ಅನಂತೂ.. ನಮಗೂ ಶಿವಳ್ಳಿ ಒಂದು ಶ್ರದ್ಧಾಕೇಂದ್ರವೇ. ಘಟ್ಟದಿಂದ ಕೆಳಗಿಳಿದರೆ ಶಿವಳ್ಳಿಗೆ ಭೇಟಿನೀಡದೆ ಹೋಗಿದ್ದುಂಟೇನು. ಯತಿಗಳ ಬಗೆಗೂ ಪೂಜ್ಯ ಭಾವನೆ ಇದೆ. ಇಂತಹ ಹುನ್ನಾರವನ್ನು ಹೇಗಾದರೂ ಮಾಡಿ ತಡೆಯಬೇಕು ಸರಿ.. ಆದರೆ ನಾನು ಆಳುಪರರ ರಾಜ್ಯದಲ್ಲಿರುವ ಒಬ್ಬ ಯಕಶ್ಚಿತ್ ಪಾಳೆಯಗಾರ. ನಮಗೆ ಆಳುಪರರೇ ಸಾರ್ವಭೌಮರು. ನಮ್ಮ ರಾಜರೇ ಅವರಿಗೆ ಸಾಮಂತರಾಗಿರುವಾಗ ನಾವು ಏನು ತಾನೇ ಮಾಡಬಲ್ಲೆವು.? ಅವರೊಂದಿಗೆ ಕಾಳಗ ಮಾಡಲು ಆದೀತೆ.? ಇಲ್ಲ ತಾನೆ.

ಇನ್ನು ಆಳುಪರರೊಂದಿಗೆ ಈ ಕುರಿತಾಗಿ ಮಾತನಾಡೋಣವೆಂದರೆ ರಾಜ್ಯದ ಗುಪ್ತಚಾರಿಕೆಯ ಅಧಿಕಾರಿಯಾದ ನಿನ್ನ ಮಾತನ್ನೇ ಆಲಕ್ಷಿಸಿದವರು ನಮ್ಮ ಮಾತಿನ ಕಡೆ ಲಕ್ಷಿಸುವರೇ?

ಈ ವಿಷಯ ಪ್ರಸ್ತಾಪಿಸಲು ಮುಂದಾದರೆ ನಮಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸುತ್ತಾರೆ. ಆಗ ನಿನ್ನ ಮೂಲಕ ತಿಳಿಯಿತೆಂದರೆ ನಿನಗೆ ಹೇಳಿದ ಮಾತನ್ನೇ ನನಗೂ ಪುನರಾವರ್ತಿಸುತ್ತಾರೆ. ಅವರ ವಿಷಯದಲ್ಲಿ ಆಳುಪರರು ಯಾರ ಮಾತಿಗೂ ಕಿವಿಗೊಡಲಾರರು. ಜೊತೆಗೆ ಗುಪ್ತಚಾರಿಕೆಯ ಅಧಿಕಾರಿಯಾಗಿ ಮಂತ್ರಿಗಳಿಗೆ, ರಾಜರಿಗೆ ತಿಳಿಸಬೇಕಷ್ಟೇ ಹೊರತು ನನ್ನಂತಹ ಸಣ್ಣ ಪಾಳೇಗಾರರಿಗೆ ತಿಳಿಸಿದೆ ಎಂದರೆ ಗುಪ್ತಚಾರಿಕೆ ನಿನಗೆ ಯೋಗ್ಯವಲ್ಲ ಎಂದು ನಿನ್ನನ್ನು ಉಚ್ಛಾಟಿಸಬಹುದು.

ಮತ್ತೇನು ಮಾಡಲು ಸಾಧ್ಯ ಅಯ್ಯಾ.. ಹೀಗೆ ಕೈಚೆಲ್ಲಿ ಕುಳಿತರೆ ವಿಗ್ರಹ ಅಪಹರಣವಾಗಿ ಹೋಗುವುದು. ಹೇಗಾದರೂ ಆಗಲಿ ಇದನ್ನು ತಪ್ಪಿಸಲೇಬೇಕು.

ಮಂತ್ರಿಗಳಿಗೆ ಹೇಳಿ ಅಪಹರಣಕ್ಕೆ ಬರುವ ದಿನ ಅಲ್ಲೊಂದಿಷ್ಟು ಸೈನಿಕರನ್ನು ಜಮಾವಣೆ ಮಾಡಲಾಗುವುದಿಲ್ಲ. ಮಂತ್ರಿಗಳಿಗೆ ಮತ್ತೆ ಈ ವಿಷಯ ಹೇಳಿದರೆ ನಿನ್ನಮೇಲೆ ಅಸಮಾಧಾನವಾಗುತ್ತಾರೆ. ಕಳವು ಮಾಡಲು ಬರುವವರು ಎಲ್ಲ ತಯಾರಿಗಳನ್ನು ಮಾಡಿಕೊಂಡೇ ಬಂದಿರುತ್ತಾರೆ. ಮಂತ್ರಿಗಳನ್ನು ಹೇಗಾದರೂ ಮಾಡಿ ಒಪ್ಪಿಸಿ ಗುಪ್ತವಾಗಿ ಸೈನ್ಯ ಜಮಾವಣೆ ಮಾಡಿದರೆ ಅದರ ಒಂದು ಸಣ್ಣ ಸುಳಿವು ದೊರೆತರೂ ಕಳವು ಮಾಡಲು ಬರುವವರು ಹಿನ್ನೆಡೆಯುತ್ತಾರೆ. ಅಷ್ಟೇ ಅಲ್ಲದೆ ಮುಂದೆ ತಮ್ಮ ಕಾರ್ಯರೂಪವನ್ನೇ ಬದಲಾಯಿಸುತ್ತಾರೆ.

ಇದರಿಂದ ಅವರ ಮೇಲೆ ಮತ್ತೊಮ್ಮೆ ನೀನು ವೃಥಾ ಅಪವಾದ ಹೊರಿಸಿದಂತಾಗುತ್ತದೆ. ಮುಂದೆ ನಿನ್ನ ಮಾತಿನಮೇಲೆ ವಿಶ್ವಾಸ ಮೂಡುವುದಿಲ್ಲ. ನಿನಗೆ ನೀಡಿರುವ ಗುಪ್ತಚಾರಿಕೆಯ ಜವಾಬ್ದಾರಿಯಮೇಲೂ ಇದು ಪರಿಣಾಮ ಬೀರುತ್ತದೆ.

ಅಷ್ಟೇ ಅಲ್ಲ ಅನಂತೂ.. ಅಪಹರಿಸಲು ಮುಂದಾದವರು ತಡೆಯೊಡ್ಡಿದರೆ ನಾಳೆಯ ದಿನ ಬಲವಂತವಾಗಿ ಕಸಿದುಕೊಳ್ಳದೇ ಇರುವರೇನು? ಇದರಿಂದ ನಮ್ಮ ರಾಜರ ಜೊತೆ ಇರುವ ವಿಶ್ವಾಸ ಕಡಿದುಹೋಗುವುದಿಲ್ಲವೇ. ಇದರಿಂದ ನಮ್ಮ ರಾಜ್ಯಕ್ಕೆ ಉಳಿಗಾಲವಿದೆಯೇ?

ಹಾಗಾದರೆ ಅಯ್ಯಾ.. ಪೂಜ್ಯ ಯತಿಗಳಿಗೇ ವಿಷಯ ತಿಳಿಸಿದರೆ?

ಬಹುಶಃ ಉಪಯೋಗವಾಗದು ಅನಂತೂ.. ಅವರು ರಾಜರ ಮೊರೆ ಹೋಗುವರು. ಯತಿಗಳು ಹೇಳಿದ್ದಾರೆಂದು ತಾತ್ಕಾಲಿಕವಾಗಿ ರಕ್ಷಣೆ ನೀಡಬಹುದು ಆದರೆ ನಾಳೆಯ ದಿನ ಆಳುಪರರಿಗೆ ನಮ್ಮ ಸಂಚು ತಿಳಿದು ಅದನ್ನು ತಡೆಯಲು ರಕ್ಷಣೆ ನೀಡಿದ್ದಾರೆಂದು ತಿಳಿದರೆ ಅವರು ಸುಮ್ಮನಿರುವರೇ. ಒಂದಲ್ಲಾ ಒಂದು ದಿನ ಬಲವಂತವಾಗಿ ವಶಪಡಿಸಿಕೊಳ್ಳುವರು.  ಅಥವಾ ಯತಿಗಳೇ ವಿಗ್ರಹದ ಜೊತೆ ಬೇರೆ ರಾಜರ ಆಶ್ರಯ ಕೋರಿ ಇತರ ರಾಜ್ಯಗಳಿಗೆ ಹೊರಟುಹೋಗಬಹುದು. ಇದೆಲ್ಲಾ ಆಗಕೂಡದು. ಯತಿಗಳಿಗೆ ನೋವುಂಟುಮಾಡುವುದು ಯಾರಿಗೂ ಶೋಭೆಯಲ್ಲ. ನಮ್ಮ ರಾಜ್ಯಕ್ಕೆ ಇದೊಂದು ಶಾಪವೇ ಆಗುವುದು. ಹಾಗಾಗಿ ಯತಿಗಳಿಗೂ ತಿಳಿಸುವುದು ಸೂಕ್ತವಲ್ಲ.

ಹಾಗಾದರೆ ಅಯ್ಯಾ ನಾವು ಮೂಕ ಪ್ರೇಕ್ಷಕರಂತೆ ಎಲ್ಲವನ್ನೂ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದೇ? ಇದೆಂತಹ ದುರ್ದೈವ..

ಇಲ್ಲ ಕೈಕಟ್ಟಿ ಕುಳಿತುಕೊಳ್ಳುವುದಲ್ಲ.

ಹಾಗಾದರೆ ಮತ್ತೇನು ಮಾಡುವುದು ಅಯ್ಯಾ??

ನನ್ನ ಮನಸ್ಸಿನಲ್ಲಿ ಮತ್ತೊಂದು ಆಲೋಚನೆ ಬಂದಿದೆ.

ಏನದು ಅಯ್ಯಾ.. ಹೇಳಿ..

“ಅವರ ಬದಲಾಗಿ ನಾವೇ ಮೂರ್ತಿಯನ್ನು ಅಪಹರಿಸುವುದು..”

(ಮುಂದುವರೆಯುವುದು..)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!