ಕಥೆ

ವಶವಾಗದ ವಂಶಿ – 3

ವಶವಾಗದ ವಂಶಿ – 2

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.)

ಏನು? ವೇಣುಗೋಪಾಲನ ವಿಗ್ರಹವೇ?

ಅರ್ಥಾತ್ ನೀವು ಹೇಳುತ್ತಿರುವುದೂ……

ಹೌದು ರಾಜಾ.. ಅದೇ ವೇಣುಗೋಪಾಲನ ವಿಗ್ರಹ. ಶಿವಳ್ಳಿಯ ಯತಿಗಳು ಪೂಜಿಸುವ ವೇಣುಗೋಪಾಲ.. ಅವರ ಆರಾಧ್ಯ ಮೂರ್ತಿ. ಅದಕ್ಕೇ ನಾನು ಹೇಳಲು ಇಷ್ಟೊಂದು ಚಡಪಡಿಸುತ್ತಿದ್ದದ್ದು ರಾಜಾ..

ಒಂದುವೇಳೆ ನಾವು ಅಥವಾ ಆಳುಪರರು ಅವರ ಬಳಿ ತೆರಳಿ ನಮ್ಮ ಕೋರಿಕೆ ಹೇಳಿದರೆ ಒಪ್ಪುತ್ತಾರೋ? ಏನನ್ನಿಸುತ್ತದೆ ನಿಮಗೆ ಜೋಯಿಸರೇ?

ಖಂಡಿತವಾಗಿಯೂ ಇಲ್ಲ ರಾಜಾ..

ಅವರು ಪ್ರತಿನಿತ್ಯ ಆರಾಧಿಸುವ ಮೂರ್ತಿ ಅದು. ಅಷ್ಟೇ ಆಗಿದ್ದರೆ ನಮ್ಮ ಅಂತಃಪುರದ ಸುತ್ತಮುತ್ತಲೆಲ್ಲಾದರೂ ಒಂದು ಪ್ರಶಾಂತವಾದ, ಅವರ ಉಪಾಸನೆಗೆ ಯೋಗ್ಯವಾದ ಜಾಗವೊಂದನ್ನು ಗೊತ್ತುಮಾಡಿ ಮೂರ್ತಿಯ ಜೊತೆ ಅವರನ್ನೂ ಇಲ್ಲೇ ಬಂದು ನೆಲೆಸುವಂತೆ ಪ್ರಾರ್ಥಿಸಬಹುದಿತ್ತು.

ಆದರೆ ಅದು ಅವರ ಮೂಲ ಯತಿಗಳಿಂದ ಸ್ಥಾಪಿಸಲ್ಪಟ್ಟ ಮೂರ್ತಿ. ಅಲ್ಲೊಂದು ಯತಿಗಳ ಪರಂಪರೆಯೇ ಇದೆ.

“ಆ ಮೂರ್ತಿ ಅವರ ಮೂಲಯತಿಗಳಿಗೆ ಸಮುದ್ರದಲ್ಲಿ ಸಿಕ್ಕಂತಹ ಮೂರ್ತಿಯಂತೆ..”

ಅದನ್ನು ತಂದು ಅಲ್ಲಿ  ಪೂಜಿಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಒಮ್ಮಿಂದೊಮ್ಮೆಲೇ ಮೂರ್ತಿಯನ್ನು ಸ್ಥಳಾಂತರಿಸಬೇಕಾಗಿ ಕೋರಿದರೆ ಖಂಡಿತವಾಗಿಯೂ ಒಪ್ಪಲಾರರು.

ಹೌದು ಅದನ್ನು ನಾವೂ ಊಹಿಸಬಲ್ಲೆವು.

ಜೋಯಿಸರೇ ಮತ್ತೊಂದು ಪ್ರಶ್ನೆ ಉದ್ಭವಿಸುತ್ತಿದೆ ನನ್ನೊಳಗೆ.

ಎಂತಹ ಯತಿಗಳಿಗಾದರೂ ಧರ್ಮ ಪ್ರಚಾರಕ್ಕಾಗಿ ರಾಜಾಶ್ರಯ ಬೇಕಾಗಿರುವುದು ಸಂಗತವೇ. ಹೀಗಿರುವಾಗ ಅವರ ಧರ್ಮಪ್ರಚಾರಕ್ಕಾಗಿ ಹೇರಳವಾದ ರಾಜಧನವನ್ನೂ, ಭೂಮಿಯನ್ನೂ, ಅವರ ಧರ್ಮಪ್ರಚಾರದ ತಿರುಗಾಟಕ್ಕಾಗಿ ಅವಶ್ಯಕವಾದ ಸೌಕರ್ಯಗಳನ್ನು ಮಾಡಿಕೊಟ್ಟು ಮೂರ್ತಿಯನ್ನು ಸ್ಥಳಾಂತರಿಸಲು ಕೋರಿಕೆಯಿಟ್ಟರೆ ಇಲ್ಲವೆನ್ನುತ್ತಾರೆಯೇ?

ನಾವು ತಿಳಿದಂತೆ ಲೌಕಿಕವಾದ ವಿಷಯಗಳಲ್ಲಿ ಅವರು ನಿರ್ಲಿಪ್ತರು. ಪರಮಾತ್ಮನ ಆರಾಧನೆಯಲ್ಲಿ ಅವರು ತಲ್ಲೀನರಾಗಿರುತ್ತಾರೆಯೇ ಹೊರತು ಒಂದು ವಸ್ತುವಾದ ಮೂರ್ತಿಗೆ ಹೆಚ್ಚು ಮನ್ನಣೆ ಕೊಡಲಾರರು.

ಅಲೌಕಿಕವಾದ ಪರಮಪದವೇ ಅವರ ಬಯಕೆಯಾಗಿರುತ್ತದೆಯೇ ಹೊರತು ಲೌಕಿಕವಾದ ಮೂರ್ತಿಯಲ್ಲ ಎನ್ನುವುದು ನಮ್ಮ ಅಭಿಪ್ರಾಯ.

ಲೌಕಿಕ ವಿಷಯಾಸಕ್ತರಾದರೆ ಸನ್ಯಾಸ ಧರ್ಮ ಪಾಲಿಸಿದಂತಾಗುವುದಾದರೂ ಹೇಗೆ??

ರಾಜಾ.. ನೀವು ಹೇಳುವುದು ಸತ್ಯವೇ..

ಆದರೆ ಪೂರ್ಣವಲ್ಲ. ಧರ್ಮಪ್ರಚಾರಕ್ಕಾಗಿ ಆರ್ಥಿಕ ಅವಷ್ಯಕತೆ ಉಂಟು, ಅದಕ್ಕಾಗಿ ರಾಜಾಶ್ರಯವೂ ಬೇಕಾದದ್ದೇ. ಆದರೆ ಅದನ್ನೇ ನೆಚ್ಚಿಕೊಳ್ಳುವುದಿಲ್ಲ ಎಲ್ಲರೂ. ಯತಿಗಳು ಪರಮಪದದಲ್ಲೇ ಮಗ್ನರಾಗಿದ್ದರೂ ಲೌಕಿಕವಾಗಿ ಕನಿಷ್ಠ ಸಮಯ ಕೊಡಲೇಬೇಕು. ಲೌಕಿಕ ವಿಷಯಾಸಕ್ತರಲ್ಲದೇ ಇದ್ದರೂ, ಈ ಲೋಕದ ನಡುವೆ ಇರುವುದರಿಂದ ಪ್ರಾಪಂಚಿಕ ವಸ್ತುಗಳ ಮೇಲೆ ಆಸೆಗಳಿಲ್ಲದಿದ್ದರೂ ತಾನು ಆರಾಧಿಸುವ ದೈವದ ಕುರಿತಾಗಿ ಅಚಲ ಭಾವುಕರಾಗಿರುತ್ತಾರೆ. ತಮ್ಮ ಗುರುಗಳಿಂದ ದತ್ತವಾದ ಒಂದು ನಿರ್ದಿಷ್ಟ ಸ್ಥಳದಲ್ಲಿನ ದೇವರ ಆರಾಧನೆಯ ಅವಕಾಶದ ಮೇಲೆ ಅತ್ಯಂತ ಶ್ರದ್ಧೆ ಇರುತ್ತದೆ. ಲೌಕಿಕ ವಸ್ತುಗಳ ಮೇಲೆ ನಿರ್ಲಿಪ್ತರಾಗಿದ್ದರೂ ಸಹ‌ ತಮ್ಮ ಗುರುಗಳ ಮೇಲಿನ ಗೌರವ ಮತ್ತು ಶ್ರದ್ಧೆಯ ಕಾರಣದಿಂದ, ಅವರಿಂದ ನೀಡಲ್ಪಟ್ಟ ದೇವತಾ ಮೂರ್ತಿಯಮೇಲೆ ಶ್ರದ್ಧೆ ದುಪ್ಪಟ್ಟಾಗುವುದು ರಾಜಾ..

ಹಾಗಾಗಿ ಆ ಮೂರ್ತಿಯು ಅವರ ಶ್ರದ್ಧಾಕೇಂದ್ರವಾಗಿರುತ್ತದೆ. ಆದ್ದರಿಂದ ಅವರು ಅದನ್ನು ಕೊಡಲಾರರು.

ಆ ಮೂರ್ತಿಯ ಹಾಗೆ ಅದೇ ರೂಪ, ಅದೇ ಆಕಾರವಿರುವಂತೆ ಯಾಥಾವತ್ ಪ್ರತಿ ಮಾಡಿ ಮೂರ್ತಿಯೊಂದನ್ನು ಸ್ಥಾಪಿಸಿದರೆ ಸಮಸ್ಯೆಗೆ ಪರಿಹಾರವಾಗುವುದಿಲ್ಲವೇ?

ಅಥವಾ

ನಮ್ಮ ಆ ಮೂರ್ತಿಯ ಕೋರಿಕೆಯನ್ನು ಯತಿಗಳ ಮುಂದಿಟ್ಟು, ಅದಕ್ಕೆ ಪ್ರತಿಯಾಗಿ ಅದನ್ನೇ ಹೋಲುವ ಈ ಪ್ರತಿಮೂರ್ತಿಯನ್ನು ನೀಡುತ್ತೇವೆ ಎಂದರೆ ಅವರು ಒಪ್ಪಬಹುದೇ?

ರಾಜಾ.. ಖಂಡಿತಾ ಆಗದು..

ರಾಜಾ..ಪ್ರತಿಮೂರ್ತಿಯನ್ನು ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಾಗಿದ್ದರೆ ಆಚಾರಿಗಳಿಗೆ ಹೇಳಿ ಮೂರ್ತಿಯೊಂದನ್ನು ಮಾಡಿಸಬಹುದಾಗಿತ್ತಲ್ಲವೇ..?

“ಮಹಾತ್ಮರು ಸ್ಪರ್ಶಿಸಿದ ಕಲ್ಲೂ ಸಹ ದೇವತಾ ಸಾನಿಧ್ಯವನ್ನು ಹೊಂದುವುದು” ಎನ್ನುವ ಹಾಗೆ ಅದು ಅವರ ಹಾಗು ಅವರ ಪೂರ್ವ ಯತಿಗಳ ಸಂಸ್ಪರ್ಶದಿಂದ ಸಾಕ್ಷಾತ್ ದೈವ ಸ್ವರೂಪವನ್ನು ಪಡೆದಿದ್ದಾಗಿರುತ್ತದೆ. ಆದ್ದರಿಂದಲೇ ಅದಕ್ಕೆ ಅಷ್ಟೊಂದು ಮಹತ್ವ. ಇಲ್ಲದಿದ್ದರೆ ಕೇವಲ ಕಲ್ಲಿನಿಂದ ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ. ಅದರಲ್ಲಿ ದೇವತಾ ಸಾನಿಧ್ಯವಿರಬೇಕಲ್ಲಾ. ತಮ್ಮ ಉಪಾಸನೆಯಿಂದ ಅದರಲ್ಲಿ ದೇವತಾ ಸಾನಿಧ್ಯವನ್ನು ಗಟ್ಟಿಗೊಳಿಸಿರುತ್ತಾರೆ. ದೈವ ಪ್ರಭಾವವು, ಶಕ್ತಿಯು ಅದರಲ್ಲಿ ಉದ್ದೀಪನಗೊಂಡಿರುತ್ತದೆ. ಆದ್ದರಿಂದಲೇ ಅದು ನಮಗೆ ಬೇಕಾಗಿರುವುದು. ಅಂತಹ ಮೂರ್ತಿಯನ್ನು ಯಾರೂ ಯಾವ ಕಾರಣದಿಂದಲೂ ಕೊಡಲೊಪ್ಪರು.

ರಾಜಾ.. ನಾ ತಿಳಿದಂತೆ ಸಮಸ್ಯೆಗೆಲ್ಲಾ ಪರಿಹಾರ ಅದೊಂದೇ. ಮುಂದಿನ ಆಲೋಚನೆ ನಿಮಗೆ ಬಿಟ್ಟಿದ್ದು.

(ಮುಂದುವರೆಯುವುದು.‌.)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!