ಕಥೆ

ವಶವಾಗದ ವಂಶಿ – 1

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ.)

ಭಟರು: “ಯಾರು ನೀನು?”

“ನಾನು ಕರಾವಳಿ ಸೀಮೆಯ ಗುಪ್ತಚರರ ಗುಂಪಿನ ನಾಯಕ ಅನಂತ. ತುರ್ತಾಗಿ ಒಡೆಯರನ್ನು ಕಾಣಬೇಕು.”

ಭಟರು: “ಸರಿ ಇಲ್ಲೇ ಇರಿ. ಒಪ್ಪಿಗೆ ಪಡೆದು ಒಳಬಿಡುತ್ತೇವೆ.”

ಭಟರು: “ಅಯ್ಯಾ ಯಾರೋ ಅನಂತ ಎಂಬುವ ಕರಾವಳಿಯ ಗುಪ್ತಚರರ ನಾಯಕ ಬಂದಿದ್ದಾರೆ. ತಮ್ಮನ್ನು ತುರ್ತಾಗಿ ಕಾಣಬೇಕಂತೆ..”

“ಸರಿ ಅವನನ್ನು ಒಳಗೆ ಬಿಡಿ.”

ಭಟರು: “ನೀವಿನ್ನು ಒಳಗೆ ಹೋಗಬಹುದು.”

“ನಮಸ್ಕಾರ ಅಯ್ಯಾ..”

“ಏನು ಅನಂತು? ಏನು ತುರ್ತು ಬಂದಿದ್ದು?”

“ಅಯ್ಯಾ.. ಇದೆ ಅಯ್ಯಾ..” (ಸುತ್ತಮುತ್ತಲಿರುವವರನ್ನು ನೋಡಿದನು.)

“ಹೂಂ.. ಎಲ್ಲರೂ ನಾ ಕರೆಯುವವರೆಗೆ ಹೊರಗಿರಿ..”

(ಎಲ್ಲರೂ ಹೋದಮೇಲೆ)

“ಅಯ್ಯಾ ಖಚಿತವಾದ ಮಾಹಿತಿಯೊಂದು ದೊರಕಿದೆ.”

“ಏನದು?”

“ಅಯ್ಯಾ ದೇವಸ್ಥಾನದ ಮೂರ್ತಿಯೊಂದನ್ನು ದರೋಡೆ ಮಾಡುವ ಸಂಚು ಹೂಡಲಾಗಿರುವ ಮಾಹಿತಿ.”

“ನಿನ್ನ ಮಾಹಿತಿ ಅಂದರೆ ಅದು ಕರಾವಳಿಯ ಭಾಗದ್ದೇ ಆಗಿರುತ್ತದೆ. ಯಾವುದದು?”

“ಹೌದು ಅಯ್ಯಾ. ನನ್ನ ಗಡಿಯ ಒಳಗಿನ ದೇವಸ್ಥಾನಕ್ಕೆ ಸಂಬಂಧಿಸಿದ್ದೇ.”

“ಯಾವ ದೇವಾಲಯ ಅದು? ಏನು ಅಷ್ಟು ಗಂಭೀರ ವಿಷಯವೇ?”

“ಹೌದು ಅಯ್ಯಾ.. ಯಾವುದೋ ಸುತ್ತಮುತ್ತಲಿನ ನಾಲ್ಕು ಜನಕ್ಕಷ್ಟೇ ತಿಳಿದಿರುವ ಗುಡಿಯ ವಿಷಯವಾಗಿದ್ದರೆ ಕರಾವಳಿಯ ಗಡಿಪಡೆಯ ದಂಡನಾಯಕರಿಗೆ ತಿಳಿಸಿ ಸರಿಮಾಡುತ್ತಿದ್ದೆವು. ಆದರೆ ಇದು ನಿಮ್ಮ ಗಮನಕ್ಕೆ ಬರಲೇಬೇಕಾದದ್ದು. ಅದಕ್ಕಿಂತ ಹೆಚ್ಚಾಗಿ ವಿಷಯ ಇನ್ನೂ  ಗಂಭೀರವಾಗಿದೆ.”

“ಸರಿ. ಯಾವ ದೇವಸ್ಥಾನದ ವಿಷಯ ಹೇಳು.”

“ಅಯ್ಯಾ ಅದು…. ಅದು.. ವೇಣುಗೋಪಾಲ ದೇವಸ್ಥಾನ..”

“ಏನು??”

“ವೇಣುಗೋಪಾಲ ದೇವಸ್ಥಾನವೇ? ಯಾವ ವೇಣುಗೋಪಾಲ ದೇವಸ್ಥಾನ? ಸರಿಯಾಗಿ ಹೇಳು.”

“ಅಯ್ಯಾ.. ಹೌದು.. ನೀವು ದಿಗ್ಭ್ರಮೆಗೊಳ್ಳಲು ಕಾರಣವಾದ ನಿಮ್ಮ ಮನಸ್ಸಲಿ ಬಂದಿರುವ ವೇಣುಗೋಪಾಲ ದೇವಸ್ಥಾನವೇ ಅಯ್ಯಾ..”

“ಸರಿಯಾಗಿ ಹೇಳು ಅನಂತ.. ಬೆಸ್ತರು ಸಮುದ್ರಕ್ಕೆ ಇಳಿಯುವ ಜಾಗವಿದೆಯಲ್ಲಾ.. ಮೀನು ಮಾರಾಟ ಮಾಡುತ್ತಾರಲ್ಲಾ.. ಅದರ ಸಮೀಪದ ವೇಣುಗೋಪಾಲನ ದೇವಾಲಯವೇ??”

“ಹೌದು ಒಡೆಯಾ ಹೌದು.. ಅದೇ ದೇವಾಲಯ.. ಇನ್ನೂ ಸರಿಯಾಗಿ ಹೇಳಬೇಕೆಂದರೆ ಪಿತೃಗಳಿಗೆ ಸದ್ಗತಿ ದೊರೆಯಲು ಸಮುದ್ರ ತಟಕ್ಕೆ ಬಂದು ಕಾರ್ಯಗಳನ್ನು ಮಾಡುತ್ತಾರಲ್ಲಾ. ಆ ತಟದ ಸಮೀಪವಿರುವ ದೇವಸ್ಥಾನವೇ.”

ಓ ದೇವಾ..!

ಏನು ವಿಷಯ.??

ಯಾರ ಸಂಚು???

***

ಹೌದು. ಅರಮನೆಯ ಜ್ಯೋತಿಷಿಗಳೇ ಹೇಳಿದ್ದು ಇದನ್ನು. ಸಮಸ್ಯೆಯ ಮೇಲೆ ಸಮಸ್ಯೆಗಳು. ಮುಗಿದು ತೀರುತ್ತಿಲ್ಲ. ಸಾಮ್ರಾಜ್ಯದ ಮೇಲೆ ಕತ್ತಿಮಸಿಯುತ್ತಾ  ಕಾಯುತ್ತಿರುವವರು ಒಂದು ಕಡೆ. ಮದುವೆಯಾಗಿ ಇಷ್ಟು ವರ್ಷಗಳಾದರೂ ಮಗುವಾಗುತ್ತಿಲ್ಲ. ಆಸ್ಥಾನ ಜ್ಯೋತಿಷಿಗಳು ಹೇಳಿದ್ದನ್ನೆಲ್ಲಾ ಸಕಾಲಕ್ಕೆ ಮಾಡುತ್ತಿದ್ದೇವೆ. ಅವರು ಅಂದು ಗೌಪ್ಯವಾಗಿ ಹೇಳಿದ್ದರು. ಈ ಎಲ್ಲ ಕ್ರಿಯೆಗಳಾದ ಬಳಿಕ ಮತ್ತೊಂದು ಬಹಳ ಮುಖ್ಯವಾದ ಕಾರ್ಯವೊಂದನ್ನು ಮಾಡಬೇಕು. ಅದನ್ನು ಮಾಡಿದ್ದೇ ಆದರೆ ಸೂರ್ಯಚಂದ್ರರಿರುವ ತನಕ ನಮ್ಮ ಸಾಮ್ರಾಜ್ಯ ಚಿರಸ್ಥಾಯಿಯಾಗುತ್ತದೆ. ಜೊತೆಗೆ ಬಹುಪುತ್ರರ ಯೋಗ ಬರುವುದು ಎಂದು.

ಹಾಗಿದ್ದರೆ ಅದನ್ನೇ ಮೊದಲು ಮಾಡೋಣವೆಂದಿದ್ದೆ. ಇಲ್ಲ ಅದಕ್ಕೆ ಕಾಲ ಕೂಡಿಬರಬೇಕು. ಅಲ್ಲಿಯವರೆಗೆ ಆ ಆಲೋಚನೆ ಬೇಡ ಎಂದಿದ್ದರು ಜ್ಯೋತಿಷಿಗಳು. ಅವರು ಹೇಳಿ ಬಹುಷಹ ವರ್ಷಕ್ಕೂ ಹೆಚ್ಚಾಗಿತ್ತು. ಮತ್ತೊಮ್ಮೆ ಜ್ಞಾಪಿಸಿದೆ.

ಹೌದು ಯುವರಾಜ. ಸಮಯವೇನೋ ಸಮೀಪಿಸುತ್ತಿದೆ. ಆದರೆ ಅದು ಅಷ್ಟು ಸುಲಭದ್ದಲ್ಲ ಎಂದರು.

ಖಜಾಂಚಿಯವರಿಗೆ ಆದೇಶಿಸಿರುತ್ತೇನೆ. ಎಷ್ಟು ಖರ್ಚಾದರೂ ಆಗಲಿ. ಕಾರ್ಯ ಸಾಂಗವಾಗಿ ನೆರವೇರಲಿ ಎಂದೆ.

ಹಣದ ವಿಷಯವಲ್ಲ ಯುವರಾಜ. ಹತ್ತುಬಾರಿ ಯೋಚಿಸಬೇಕಾದ ವಿಷಯವಾದ್ದರಿಂದ ಇಷ್ಟೊಂದು ಮುಂದೂಡಿದ್ದು, ಇನ್ನೂ ಚಿಂತಿಸುತ್ತಿರುವುದು ಎಂದರು.

ಇನ್ನೂ ಸ್ಪಷ್ಟವಾಗಿದೆ ಆ ಸನ್ನಿವೇಶ ನನ್ನೊಳಗೆ….

ಅಷ್ಟೊಂದು ಗಹನವಾದ ವಿಷಯವೇ ಜೋಯಿಸರೆ? ಏನದು?

ರಾಜ ಹೇಳುವೆ. ಆದರೆ……

ಹೇಳಿ.. ಯಾಕೇ ಯೋಚನೆ??

ರಾಜಾ ಇದು ಬಹಿರಂಗಪಡಿಸಲಾಗದ ವಿಷಯ.. ಆದ್ದರಿಂದ..

ಸರಿ. ವಿಷಯ ನನ್ನಲ್ಲೇ ಇರುವುದು. ಆ ಚಿಂತೆ ಬೇಡ ನಿಮಗೆ. ಅದೇನು ಎಂದು ಹೇಳಿ.

ರಾಜಾ.. ಕೇವಲ ಮಾತಿನಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ವಿಷಯವಾಗಿದ್ದರೆ ತಮ್ಮ ಬಳಿ ವಿಷಯ ಪ್ರಸ್ತಾಪಿಸಿ ನಂತರದಲ್ಲಿ ವಿಷಯ ನಮ್ಮಲ್ಲೇ ಇರಲಿ ಇನ್ನುತ್ತಿರಲಿಲ್ಲವೇ?

ಓಹೋ.. ಹಾಗಿದ್ದರೆ ಕಾರ್ಯವೂ ಗೌಪ್ಯವಾಗಿ ಮಾಡಬೇಕಾದದ್ದು ಎಂದಾಯಿತು. ಅದೇನು ಹೇಳಿ.

ರಾಜಾ ಇದರಲ್ಲಿ ನನ್ನ ಯಾವ ಸ್ವಾರ್ಥವೂ ಇಲ್ಲ. ರಾಜ್ಯದ ಹಿತಕ್ಕಾಗಿ, ರಾಜಮನೆತನದ ಹಿತಕ್ಕಾಗಿ, ನಿಮ್ಮ ವಂಶ ಮುಂದುವರೆಯುವ ಉದ್ದೇಶದಿಂದ ನಾನು ಕಲಿತ ವಿದ್ಯೆಯ ಬಲದಿಂದ ಎಲ್ಲ ವಿಧದಲ್ಲೂ ಆಲೋಚಿಸಿ, ಎಲ್ಲದಕ್ಕೂ ಸಮರ್ಥವಾದ ಪರಿಹಾರವೊಂದನ್ನು ಕಂಡುಹಿಡಿದಿದ್ದೇನೆ.

ನಾ ಉಪಾಸಿಸುವ ದೇವತೆ ಎಂದಿಗೂ ಸತ್ಯವನ್ನೇ ದರ್ಶಿಸಿದ್ದಾಳೆ ನನಗೆ, ನಾ ವಿದ್ಯೆ ಕಲಿತ ಗುರುಗಳು ಸರಿಯಾದ ಲೆಕ್ಕಾಚಾರವನ್ನು ಮಾಡುವುದನ್ನು ಕಲಿಸಿದ್ದಾರೆ. ತಮ್ಮಲ್ಲಿರುವ ವಿದ್ಯೆಯನ್ನು ಪೂರ್ಣವಾಗಿ ಧಾರೆ ಎರೆದಿದ್ದಾರೆ. ನಾ ಅಭ್ಯಸಿಸಿರುವ ಗ್ರಂಥಗಳು ಎಂದಿಗೂ ಸತ್ಯವಾದದ್ದನ್ನೇ ಹೇಳುತ್ತವೆ. ಇಲ್ಲವೆಂದಿದ್ದರೆ ಸಹಸ್ರಾರು ವರ್ಷಗಳ ವರೆಗೆ ಅವು ಉಳಿದು ಬರುತ್ತಿರಲಿಲ್ಲ.

ಇದೆಲ್ಲದರ ಜೊತೆ ಎಷ್ಟೋ ವರ್ಷಗಳಿಂದ ಕಲಿತ ವಿದ್ಯೆಯನ್ನು ಪ್ರಯೋಗಿಸಿ, ಫಲ ವಿಚಾರಣೆ ಮಾಡಿ ಅನುಭವದ ಮೂಲಕ ವಿದ್ಯೆಯನ್ನು ಸಂಪೂರ್ಣಗೊಳಿಸಿದ್ದೇನೆ. ಆ ಬಲದ ಮೇಲೆಯೇ ಈ ಪರಿಹಾರ ಕಂಡುಬಂದದ್ದು ನನಗೆ. ಹಾಗಾಗಿ ವೃಣವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವ ಹಾಗೆ, ತಮ್ಮೆಲ್ಲಾ ತೊಡಕುಗಳು ಹೋಗುವ, ಚಿರ ಯಶಸ್ಸು ಪಡೆಯುವ ಸಲುವಾಗಿ ಈ ಕಾರ್ಯವಾಗಬೇಕು ಎಂದು ಕಂಡುಕೊಂಡಿರುವೆ. ಆದರೆ ವೃಣ ತೆಗೆಯುವಾಗ ನೋವಾಗುವ ಹಾಗೆ ದೇಹಕ್ಕೆ ಘಾಸಿಯಾಗುವ ಹಾಗೆ ಇದೂ ಹಲವರಿಗೆ ನೋವಾಗುವ ಕಾರ್ಯ. ಆದ್ದರಿಂದ ಇಷ್ಟು ಆಲೋಚನೆ ಮಾಡುತ್ತಿದ್ದೇನೆ ರಾಜಾ.

ಜೋಯಿಸರೆ ನಿಮ್ಮ ಜ್ಯೋತಿರ್ಜ್ಞಾನದ ಶಕ್ತಿ ನಮಗೇನು ಹೊಸತೇ? ನಿಮ್ಮ ಮಾರ್ಗದರ್ಶನದಲ್ಲಿಯೇ ತಾನೆ ನಮ್ಮ ವಂಶ ನಡೆಯುತ್ತಿರುವುದು. ನಿಮ್ಮ ಸಲಹೆಯಂತೆ ಮಾಡಿಕೊಂಡು ಬರುತ್ತಿರುವುದುದರಿಂದಲೇ ತಾನೆ ಇಷ್ಟು ಒಳಿತನ್ನು ಕಾಣುತ್ತಿರುವುದು. ನಿಮ್ಮಂತಹ ಜ್ಯೋತಿರ್ವಿಜ್ಞಾನಿಗಳು ನಮ್ಮ ರಾಜ್ಯದಲ್ಲಿ ಏಕೆ ಇತರ ರಾಜ್ಯದಲ್ಲೆಲ್ಲಾದರೂ ಇದ್ದಾರೆಯೇ.? ಇಷ್ಟೊಂದು ದೀರ್ಘವಾಗಿ ಹೇಳುವ ಪ್ರಮೇಯವುಂಟೇ? ಹೇಳಿ ಅದ್ಯಾವ ಕಾರ್ಯವಾಗಬೇಕು?

ರಾಜ ಹೇಳುತ್ತೇನೆ. ಆದರೆ ನನ್ನ ಬಗ್ಗೆ ತಪ್ಪುಕಲ್ಪನೆ ಮಾಡಬಾರದು ಎನ್ನುವ ಶರತ್ತಿನಂತಹ ಭಿನ್ನಹವಷ್ಟೇ ತಮ್ಮಲ್ಲಿ.

ಜೋಯಿಸರೇ ತಮ್ಮ ಗುಣದ ಬಗ್ಗೆ ನಮಗೆ ತಿಳಿಯದ ವಿಷಯವೇನಿದೆ.? ನಿಸ್ಸಂಕೋಚವಾಗಿ ಹೇಳಿ.

ರಾಜ.. ಎಲ್ಲದಕ್ಕೂ ನಾ ನನ್ನ ವಿದ್ಯೆಯ ಬಲದಿಂದ ಕಂಡುಹಿಡಿದ ಪರಿಹಾರವೆಂದರೆ..

ದೇವಾಲಯದ ಪೂಜಾಮೂರ್ತಿಯೊಂದರ ಸ್ಥಾನ ಪಲ್ಲಟ.

(ಮುಂದುವರೆಯುವುದು.)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!