ಕಥೆ

ಮಜಲುಗಳು

ದಿನದ ಟಾರ್ಗೆಟ್ ಮುಗಿಸದೇ ಲಾಗ್ ಔಟ್ ಆಗುವಂತಿಲ್ಲವೆಂದ ಟೀಂ ಲೀಡರ್ ಗಂಭೀರವಾದ ಮಾತನ್ನು ತುಸುವೂ ಗಂಭೀರವಾಗಿ ಪರಿಗಣಿಸದ ಎಂಪ್ಲೊಯೀಗಳು, 6 ಗಂಟೆಯ ಕ್ಯಾಬ್ ತಪ್ಪಿಸಿಕೊಂಡರೆ 8 ಗಂಟೆಯವರೆಗೆ ಮಾಡುವುದೇನೆಂದು, ಬೆಸ್ಮೆಂಟ್ ಏರಿಯಾಗೆ ಹೋಗುವ ಲಿಫ್ಟ್ ಒಳಗೆ ಓಡಿ ಬಂದು ಸೇರಿಕೊಂಡರು. ಕಳೆದ ಮೂರು ದಿನಗಳಿಂದಲೂ ಇದೇ ನಡೆದಿತ್ತು. ಇತ್ತೀಚೆಗಷ್ಟೇ ದಿನದ ಟಾರ್ಗೆಟ್ ನ್ನು ಏರಿಸಿದ್ದು, ಫ್ರನ್ಟ್ ಲೈನ್ ಎಂಪ್ಲೊಯೀಗಳ ಎದೆ ಬಡಿತವನ್ನೂ ಏರಿಸಿ, ಎಲ್ಲರಲ್ಲೂ ನಡುಕ ಹುಟ್ಟಿಸಿತ್ತು. ಶ್ರೀಮಂತರ ದೇಶದಿಂದ ಬಂದ ಬಿಸ್ನೆಸ್ ಹೆಡ್ ತಮ್ಮ ಟೀಂ ಗೆಯಂಗ್ ಟೀಂಎಂಬ ಪಟ್ಟ ನೀಡಿ ತಮ್ಮನ್ನೆಲ್ಲ ಉಬ್ಬಿಸಿದ್ದು ಯಾಕೆಂದು ಟೀಂ ಎಲ್ಲರಿಗೂ ಬಹಳ ತಡವಾಗಿ ಗೊತ್ತಾದರೂ, ಯಾರೂ ಏನೂ ಮಾಡುವಂತಿರಲಿಲ್ಲ.

ಬಿಸ್ನೆಸ್ ಹೆಡ್ ಬಿಗಿದ ಭಾಷಣ ಕೇಳಲಷ್ಟೆ ಚೆನ್ನಾಗಿತ್ತೆಂಬುದು ಹಲವರ ಅನಿಸಿಕೆಯಾಗಿತ್ತು. ಯುವಕರು(ಯುವತಿಯರು) ಕಷ್ಟಪಟ್ಟರೆ, ಈಗ ತಾನಿರುವ ಸ್ಥಾನಕ್ಕೆ ಬರಲು ಎದೆಷ್ಟೂ ಸಮಯ ಹಿಡಿಯದೆಂದೂ; ಇಷ್ಟು ಯಂಗ್ ಟೀಂ ತಮ್ಮ ಕಂಪನಿಯಲ್ಲಿ ಬೇರೆಲ್ಲೂ ಇಲ್ಲವೆಂದೂ; ಇಷ್ಟೊಂದು ಎನರ್ಜಟಿಕ್ ಎಂಪ್ಲಾಯಿಗಳನ್ನು ತಾನೆಲ್ಲೂ ನೋಡಿಯೇ ಇಲ್ಲವೆನ್ನುವ ಅತಿರೇಕದ ಸುಳ್ಳುಗಳನ್ನು ಆಡಿ, ಮಾತಿನ ಶೈಲಿಯಿಂದಲೇ ಎಲ್ಲರಿಗೂ ಕ್ಷಣಿಕ ರೋಮಾಂಚನ ನೀಡಿ, ಗಟ್ಟಿ ಚಪ್ಪಾಳೆ ಗಿಟ್ಟಿಸಿಕೊಂಡ ಬಿಸ್ನೆಸ್ ಹೆಡ್ ವಯಸ್ಸಿನ ಬಗೆಗೂ ಯಂಗ್ ಟೀಂ ನವರು ಚರ್ಚೆ ನಡೆಸಿದರು. ಇನ್ನೆನೇನೋ ಚರ್ಚೆಗಳಾದವು. ಟಾರ್ಗೆಟ್ ಏರಿಸಿದ ಮೇಲಂತೂ, ಇದು ಬಿಸ್ನೆಸ್ ಹೆಡ್ ನದೇ ಕುತಂತ್ರವೇನೋ ಎನ್ನುವಷ್ಟರ ಮಟ್ಟಿಗೆ ಎಲ್ಲರೂ ಗುಸುಗುಸು ಬಿಸಿಬಿಸಿ ಚರ್ಚಿಸಿದ್ದೇ ಚರ್ಚಿಸಿದ್ದು. ಎಲ್ಲ ಚರ್ಚೆಗಳಿಂದ ಬಂದ ಒಂದು ಇಂಪ್ರೆಷನ್ ನಿಂದ ನಿರ್ಲಿಪ್ತನಾಗಿ ಉಳಿದವನು ಗೋಪಾಲ.

ಉತ್ತರ ಭಾರತೀಯರಿಗೆ ಗೋಪಾಲ್ ಆಗಿ, ದಕ್ಷಿಣದವರಿಗೆ ಗೋಪಾಲಾ.. ಆಗಿ, ಮಾತು ಮಾತಿಗೂ ಮೈ ಮೇಲೇ ಬೀಳುವ ಅವನದೇ ಟೀಂ ಹುಡುಗಿಯೂಬ್ಬಳ ಬಾಯಲ್ಲಿ ಗೋಪೂ ಆಗಿರುವ, ಗೋವಿನಂಥ ಗುಣದ ಬಡಪಾಯಿಗೆ ಮಾತ್ರ ಟೀಂ ಲೀಡರ್ ಮಾತು ಮೀರಿ 6 ಗಂಟೆಗೇ ಲಾಗ್ ಔಟ್ ಆಗಿ ಮನೆಗೆ ಹೊರಡಲು boss ಭಯವೆನ್ನುವುದಕ್ಕಿಂತ, ಅದು ತನ್ನ boss ಗೆ ತಾನು ತೋರಿಸುವ ಗೌರವವೆನ್ನಬಹುದೇನೋ! ಇವನ ನೀಯತ್ತಿನಿಂದಾಗಿ ಇವನ ಸಹೋದ್ಯೋಗಿಗಳು ಬೈಸಿಕೊಳ್ಳುತ್ತಿದ್ದುದು ದಿನಾ ನಡೆದೇ ಇತ್ತು. ಆದರೆ ಇವನು ಮಾತ್ರ ತಾನಾಯಿತು, ತನ್ನ ಕೆಲಸವಾಯಿತೆಂದು ಇದ್ದುಬಿಡುತ್ತಿದ್ದ.

ತನ್ನನ್ನು ಬೇರೆಯವರು ಗುರುತಿಸುವಂಥ ಕೆಲಸಗಳನ್ನು ಮಾಡುವ ಗೋಜಿಗೆ ಹೋಗದ ಗೋಪಾಲ, ಬರೀ ನಿತ್ಯದ ಟಾರ್ಗೆಟ್ ಮುಗಿಸುತ್ತ 4 ವರ್ಷಗಳನ್ನು ಕಳೆದ. ಈಗ ಇವನಿರುವ ಟೀಂಯಂಗ್ ಟೀಂಪಟ್ಟವನ್ನು ಯಾರಿಗೆ ಬಿಟ್ಟುಕೊಟ್ಟಿತ್ತೋ ತಿಳಿಯದು. ಇವನ ಜೊತೆಗೆ ಕೆಲಸಕ್ಕೆ ಸೇರಿದವರೊಬ್ಬರೂ ಈಗ ಟೀಂ ನಲ್ಲಿ ಇರಲಿಲ್ಲ. ಕಾರ್ಪೊರೇಟ್ ಕಲ್ಚರ್ ರೂಢಿಸಿಕೊಂಡವರೆಲ್ಲರೂ 2 ವರ್ಷಕ್ಕೋ, 3 ವರ್ಷಕ್ಕೋ ಕಂಪನಿ ಬದಲಿಸಿದರು. ಇನ್ನು ಕೆಲವರು, ಇರುವ ಕಂಪೆನಿಯಲ್ಲೇ ಬೇರೆ ಬೇರೆ ಟೀಂ ಗಳಿಗೆ ಹಾರಿ ಹೋದರು. ಹೊಸ ಕಂಪನಿ, ಹೊಸ ಟೀಂ, ಹೊಸ ಕೆಲಸಗಳು ಹೆಚ್ಚಿನ ಹಣ, ಸ್ಥಾನ ಮತ್ತು ಆರಾಮವನ್ನು ನೀಡಬಹುದೆಂಬ ಭ್ರಮೆ ಕಾಡದವರು ಯಾರಿದ್ದಾರೆ?! ಅದು ಒಂದೇ ಸಮುದ್ರದ ಬೇರೆ ಬೇರೆ ಬೀಚ್ ಗಳಂತೆಆಳ ಬೇರೆ, ಸೆಳೆತ ಬೇರೆ, ನೀರಿನ ಉಬ್ಬರ ಇಳಿತಗಳು ಬೇರೆ ಬೇರೆ, ಜೀವ ಪ್ರಕಾರ ಬೇರೆ; ಆದರೆ, ಎಲ್ಲಾ ಕಡೆಗೂ ಅದೇ ಉಪ್ಪು ನೀರು.

ಒಂದು ದಿನ ಗೋಪಾಲನನ್ನು ಮೀಟಿಂಗ್ ರೂಂ ಗೆ ಕರೆಯಲಾಯಿತು. ತಮಗೆ ಅಭ್ಯಾಸವಾಗಿಹೋದ ನಗುಮುಖದಲ್ಲೇ ಮ್ಯಾನೇಜರ್ ಹೇಳಿದರು-” ನೀವು ನಾಲ್ಕು ವರ್ಷಗಳಿಂದ ಒಂದೇ ಪೊಸಿಷನ್ ನಲ್ಲಿ ಇರುವುದಕ್ಕೆ ಕಾರಣಗಳನ್ನು ನಾವು ಕಂಪನಿಗೆ ನೀಡಬೇಕಾಗಿ ಬರಬಹುದು. ನೀವು ಅದೇ ದಿನದ ಟಾರ್ಗೆಟ್ ಗೆ ಅಂಟಿಕೊಂಡು ಕೂತರೆ ನಿಮ್ಮ ಸ್ಥಾನ ಮೆಲಕ್ಕೇರದು ಎಂಬುದನ್ನು ನಾವು ಪ್ರತೀ ವರ್ಷವೂ ಹೇಳುತ್ತಲೇ ಬಂದಿದ್ದೇವೆ. ನಿತ್ಯದ ಕೆಲಸದ ಜೊತೆಗೆ ಗುರುತಿಸಿಕೊಳ್ಳುವಂಥ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು  ನಿಮ್ಮ ಟೀಂ ಲೀಡರ್ ನಿಮ್ಮನ್ನು ಪ್ರೊತ್ಸಾಹಿಸುತ್ತಲೇ ಇದ್ದರೂ, ನೀವು ಮಾತ್ರ ಅದೇ ರಾಗಅದೇ ಹಾಡಿಗೆ ಜೋತು ಬಿದ್ದು ಈಗ ಹಿಂದೆ ಉಳಿದಿದ್ದೀರಿ. ನಿಮಗೆ ಕೆಲಸದ ಜ್ಞಾನ ಬೇಕಾದಷ್ಟಿದೆ ಎಂದು ಊಹಿಸಿ, ಮುಂದಿನ ವಾರದಿಂದ ನಿಮ್ಮನ್ನು ಪ್ರಾಸೆಸ್ ಟ್ರೈನರ್ ಆಗಿ ನೇಮಿಸುತ್ತಿದ್ದೇವೆ.ನೀವೇನು ಮಾಡುತ್ತೀರೆಂಬುದು ನಿಮ್ಮ ಕೈಲಿದೆ“.

ತಾನೇನು ಕೆಲಸ ಬಾರದವನಲ್ಲ ಎಂದೂ, ತನ್ನಲ್ಲಿ ಯಾವುದೇ ಸ್ಕಿಲ್ ಇಲ್ಲದವನೂ ತಾನಲ್ಲವೆಂದುತನಗೆ ತಾನೇ ಹೇಳಿಕೊಂಡು, ಏನಾದರೂ ಮಾಡಿಯೇ ತೋರಿಸಿ ಮುಂದಿನ ಮಾತಾಡುತ್ತೇನೆ ಎಂದು ಯೋಚಿಸಿ, ಸುಮ್ಮನೆಓಕೆ, ಥಾಂಕ್ ಯುಎಂದಷ್ಟೇ ನಿರ್ಲಿಪ್ತನಾಗಿ ಹೇಳಿದ.

ಗೋಪಾಲ ಪ್ರಾಸೆಸ್ ಟ್ರೈನರ್ ಆದ ಮೇಲೆ, ತಾನು ಏನಾದರೂ ಮಾಡಿ ತೋರಿಸುತ್ತೇನೆ ಎಂದುಕೊಂಡಿದ್ದನ್ನು ಮರೆತ. ಇಂಕ್ರಿಮೆಂಟ್ ಸುಮಾರು ತೃಪ್ತಿಕರವಾಗೇ ಇತ್ತು(ಇವನ ಲೆಕ್ಕದಲ್ಲಿ). ಇವನೇನು ಗತಿಗೆಟ್ಟು ಕೆಲಸ ಬೇಡಿಕೊಂಡು ಬಂದು ಕಂಪನಿಯಲ್ಲಿ ದುಡಿಯಲು ಸೇರಿಕೊಂಡಿರಲಿಲ್ಲವೋ; ಬೇರೆ ಆದಾಯದ ಮೂಲಗಳೂ ಇವನಿಗಿದ್ದವೋ ಯಾರಿಗೆ ಗೊತ್ತು!

ಮತ್ತೆ ಮೂರುವರ್ಷಗಳು ಹೇಗೋ ಕಳೆದು ಹೋದವು. ಅಷ್ಟೊತ್ತಿಗಾಗಲೇ ಆಟೋಮೆಷನ್ ಎಂಬ ಭೂತ ಇದ್ದ ಬಿದ್ದ ಕೆಲಸಗಳನ್ನೆಲ್ಲ ಬರಗಿ ಬಾಚಿಕೊಂಡು ಮಾಡಿ ಮುಗಿಸಿ, ಅಲಾದ್ದಿನ್ ಜೀನಿಯಂತೆ ಇನ್ನೂ ಬೇಕು ಇನ್ನೂ ಬೇಕು ಎಂದು ಮಾತ್ರ ಹೇಳಲಿಲ್ಲ. ಇದ್ದ ಬಿದ್ದ ಪುಟ್ಟ ಕೆಲಸಗಳನ್ನು, ಆಟೋಮೆಷನ್ ತಪ್ಪು ಒಪ್ಪುಗಳನ್ನು ನೋಡಿಕೊಂಡು ಗೋಪಾಲ ಸುಮ್ಮನಿದ್ದ; ಏಕೆಂದರೆ, ಇವನಿದ್ದ ಪ್ರಾಸೆಸ್ ಆಟೋಮೆಷನ್ ಗೆ ಗುರಿಯಾಗಿ, ಎಂಪ್ಲಾಯಿಗಳ ನೇಮಕಾತಿ ಸ್ಥಗಿತಗೊಂಡಿತ್ತು ಮತ್ತು ಇದ್ದವರಿಗೆಲ್ಲ ಬೇರೆ ಪ್ರಾಸೆಸ್ ಗೋ, ಬೇರೆ ಕಂಪೆನಿಗೋ ದಾರಿ ತೋರಿಸಿಯಾಗಿತ್ತು  . ಮತ್ತೊಂದಿಷ್ಟು ದಿನ ಕಳೆಯುವುದರಲ್ಲಿ ಪ್ರಾಸೆಸ್ ಎಲ್ಲಾ ಕೆಲಸಗಳನ್ನೂ ನಿಶ್ಚಿ0ತರಾಗಿ ಸೊಫೆಸ್ಟಿಕೇಟೆಡ್ ಸಾಫ್ಟ್ವೇರ್ ಗೆ ಒಪ್ಪಿಸಿಯೂ ಆಯ್ತು.

ಗೋಪಾಲನಿಗೆ ಈಗ ಮತ್ತೆ ಬೇರೆ ಕೆಲಸಸಾಫ್ಟ್ವೇರ್ ಮಾಡುವ ಕೆಲಸಗಳ ವಿಶ್ಲೇಷಣೆ ಮಾಡಿ, ವರದಿ ತಯಾರಿಸಿ, ಮ್ಯಾನೇಜ್ಮೆಂಟ್ ಗೆ ವರದಿಯನ್ನು ಒಪ್ಪಿಸುವುದು. ಕೆಲಸವನ್ನೂ ಇವನು ಚೆನ್ನಾಗಿಯೇ ನಿರ್ವಹಿಸಿದ. ಆದರೆ ಕೆಲಸದ ಅವಶ್ಯಕತೆ ಬಹಳ ಕಾಲ ಬೀಳಲಿಲ್ಲ. ಇವನನ್ನು ಬೇರ್ಯಾವುದೋ ಟೀಮ್ ಗೆ, ಇನ್ಯಾವುದೋ ಪ್ರಾಸೆಸ್ ಗೆ ದಬ್ಬಿದರು.

ಇಷ್ಟಾಗಿ ಒಂದು ವರ್ಷ ಕಳೆಯುವುದರೊಳಗಾಗಿ ಇವನ ಮದುವೆಯಾಯಿತು. ಮಹಾನಗರದಲ್ಲಿ ಸಂಸಾರ ಹೂಡುವುದೆಂದರೇನು ಸುಲಭದ ಮಾತೇ! ಇವನು ಬದಲಾಗಲೇ ಬೇಕಾಯಿತು. ಇವನ ಜ್ಞಾನ ಜಾಗೃತವಾಯಿತು; ಇವನೂಳಗಿದ್ದ ಆಂಜನೇಯನ ಶಕ್ತಿ ಎಚ್ಛೆತ್ತು ಇವನು ಬೇರೆಯೇ ಮನುಷ್ಯನಾದ. ಸಂಸಾರವನ್ನು ತೂಗಿಸುವ ಚಿಂತೆಯ ಪ್ರಮಾಣದ ಹತ್ತು ಪಟ್ಟಿನಷ್ಟು ಜವಾಬ್ದಾರಿಯುತ ಬದಲಾವಣೆಗಳನ್ನು ತನ್ನ  ಜೀವನದಲ್ಲಿ ಮಾಡಿಕೊಂಡ.

ಮತ್ತೊಂದು ವರ್ಷದಲ್ಲಿ ಮತ್ತಷ್ಟು ಬದಲಾವಣೆಗಳು. ಆದರೆ ಅದೇನು ಕರ್ಮವೋ ಇವನು ಮೊದಲಿದ್ದ ಟೀಮಿನದು! ಅದೇನು ಕರ್ಮಕಾಂಡವೋ ಆಟೋಮೆಷನ್ ನದು! ಇವರು ಸೇವೆ ಒದಗಿಸುತ್ತಿದ್ದ ದೇಶದಲ್ಲಿ ಆಢಳಿತಾತ್ಮಕ ಬದಲಾವಣೆಗಳಾದವು. ಬದಲಾವಣೆಗೆ ತಕ್ಕಂತೆ ಬದಲಾಗದ ಸೇವೆಗಳ ವ್ಯವಹಾರಕ್ಕೇ ಕುತ್ತು ಬರುವಂತಾಯಿತು. ಈಗ ಗಾಪಾಲನಿಗೆ ಬುಲಾವ್ ಬಂತು ರಿಪೇರಿ ಕೆಲಸಕ್ಕೆ! ಇವನ ನಾಯಕತ್ವದಲ್ಲಿ ಒಂದು ಹೊಸ ಟೀಮ್ ತಯಾರಾಯಿತು. ಯಂಗ್ ಟೀಮ್.

ಅಲ್ಲೇ ಏಳೆಂಟು ವರ್ಷ ಕೆಲಸ ಮಾಡಿದ ಅನುಭವದಿಂದಾಗಿ ಇವನಿಗೆ ಅದೇನೂ ಪೂರ್ತಿ ಹೊಸ ಕೆಲಸ ಎಂದೆನ್ನಿಸದಿದ್ದರೂ, ಮೇಲಿನ ಬಾಸ್ ಗಳು ಇವನ ಕೆಲಸವನ್ನು ಮೆಚ್ಚಿದರು; ಇವನೂ ಶಕ್ತಿಮೀರಿ ದುಡಿದ. ನಂತರದ ಹತ್ತು ವರುಷಗಳಲ್ಲಿ ಇವನು ಏರಿದ ಎತ್ತರದ ವೇಗವನ್ನು ಅಳೆಯುವುದು ಕಷ್ಟಕರ.

ಈಗ ಎಲ್ಲವೂ ಇತಿಹಾಸ. ಈಗ ಇವನೂ ಆಗಾಗ ಹೋಗಿ ಫ್ರನ್ಟ್ ಲೈನ್ ಎಂಪ್ಲೊಯಿಗಳ ಎದುರು ಬುರುಡೆ ಬಿಡುವವನೇ ಆಗಿದ್ದಾನೆ. ಇವನ ಬಗ್ಗೆ ಈಗ ಬೇಕಾದಷ್ಟು ಕಥೆಗಳು ಹರಿದಾಡುತ್ತಿವೆ

*ಯಾರೋ ಇವನ ಕೈ ಹಿಡಿದು ಎತ್ತಿ, ತುಂಬಾ ಮೇಲಕ್ಕೆ ಕೂರಿಸಿಬಿಟ್ಟರೆಂದೂ;

*ಇವನ ಮದುವೆಯೇ ಇವನ ಉನ್ನತಿಗೆ ಕಾರಣವೆಂದೂ

*ಯಾವುದೊ ಪರ್ಸನಾಲಿಟಿ ಡೆವೋಲಾಪಮೆಂಟ್ ಕ್ಲಾಸ್ ಗಳ ನೆರವು ಪಡೆದನೆಂದೂ

*ಇವನು ಮೊದಲಿದ್ದ ಪ್ರಾಸೆಸ್ ನಲ್ಲಿ ಕಂಡುಬಂದ ತೊಂದರೆಯಿಂದ ಇವನಿಗೆ ಅವಕಾಶಗಳು ಸಿಕ್ಕವೆಂದೂ

*ತುಂಬಾ ತಡವಾಗಿ ಮ್ಯಾನೇಜರ್ ಗಳಿಗೆ ಬಕೆಟ್ ಹಿಡಿಯುವುದು ಕಲಿತರೂ, ತುಂಬಾ ಚೆನ್ನಾಗಿಯೇ ಕಲಿತನೆಂದೂ

ಇನ್ನೂ ಅದೆಷ್ಟು ಕಟ್ಟು  ಕಥೆಗಳಿವೆಯೋ ಗೋಪಾಲನ ಬಗೆಗೆ?! ಆದರೆ ಅದೃಷ್ಟದ ಜೊತೆಗೆ ಇವನು ಎಚ್ಛೆತ್ತುಕೊಂಡಿದ್ದು ಮಾತ್ರ ಸುಳ್ಳಲ್ಲ.

ಗೋಪಾಲನೇ ಕಾಲ ಕೂಡಿ ಬರಲೆಂದು ಕಾದು ಕುಳಿತಿದ್ದನೋ ಅಥವಾ ಕಾಲವೇ ಗೋಪಾಲನಿಗಾಗಿ ಕಾದು ಕುಳಿತಿತ್ತೋ ಎನ್ನುವುದು ಕಥೆ ಬರೆದ ನನಗೂ ಗೊತ್ತಾಗಲಿಲ್ಲ.

ಶ್ರೀಕಲಾ ಹೆಗಡೆ ಕಂಬ್ಳಿಸರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!