ಕಥೆ

ಕಥೆ ಕೊಳ್ಳುವ ಕಾಯಕ

ವಾಲ್ಮೀಕಿ ಇತ್ತೀಚೆಗೆ ಬಹಳಷ್ಟು ಕಥೆಗಳನ್ನು ಬರೆಯಹತ್ತಿದ್ದಾನೆ. ಅವನು ಬರೆಯುವ ಕಥೆಗಳು ತುಂಬಾ ಅರ್ಥಪೂರ್ಣವೂ, ಸತ್ಯಕ್ಕೆ ಅತೀ ಹತ್ತಿರವಾದವೂ, ಒಮ್ಮೊಮ್ಮೆ ಅಮಾನುಷವೂ ಆಗಿರುತ್ತವೆ. ಕಥೆಯ ಪಾತ್ರಗಳ ಸೃಷ್ಟಿ ಅದ್ಭುತವಾಗಿರುತ್ತದೆ. ಶ್ರೀರಾಂಪುರದ ಹಜಾಮ, ಗಾಂಧೀ ನಗರದ ವೇಶ್ಯೆ, ರಾಣೆಬೆನ್ನೂರಿನ ಭಿಕ್ಷುಕ, ಉಡುಪಿ ಹೊಟೆಲ್ ಮಾಣಿ ಹೀಗೆ ಕಥೆಯ ಪಾತ್ರಗಳು, ಪಾತ್ರಗಳನ್ನೊಳಗೊಳ್ಳುವ ಸನ್ನಿವೇಶಗಳು ಯಾವುದೊ ನೈಜ ಚಿತ್ರವನ್ನು ಮುಂದಿಟ್ಟಂತಿರುತ್ತವೆ. ನೈಜತೆಯೇ ಅವನು ಬರೆಯುವ ಕಥೆಗಳನ್ನು ಜನಪ್ರಿಯಗೊಳಿಸುತ್ತಿರುವುದು.

ವಾಲ್ಮೀಕಿಯ ಬರಹಗಳನ್ನು ಓದಲು ಪ್ರಾಂಭಿಸಿದ ಮೇಲೆ ಅವನನ್ನು ಭೇಟಿಯಾಗುವ ಬಯಕೆಯಾಗತೊಡಗಿತು. ಅವನು ನನಗೆ ಅಪರಿಚಿತನೇನಲ್ಲ. ವಾಲ್ಮೀಕಿಯ ತಂದೆಯವರ ಕಚೇರಿಯಲ್ಲಿ ನಮ್ಮಪ್ಪ ಗುಮಾಸ್ತನಾಗಿದ್ದ. ಅವನ ಮನೆಯಲ್ಲಿ ಎಷ್ಟೇ ಶ್ರೀಮಂತಿಕೆ ಇದ್ದರೂ  ನನ್ನನ್ನು ಮನೆಯ ಮಗಳಂತೆ ಕಂಡವರು ಅವರು. ಅವನೋದುವ ಶಾಲೆಯಲ್ಲೇ ನನಗೂ ಓದಲು ಅನುಕೂಲ ಮಾಡಿಕೊಟ್ಟಿದ್ದರು. ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದ ನಮ್ಮಲ್ಲಿ ಅದೇನು ಪ್ರೀತಿಯಿತ್ತೋ, ಸ್ನೇಹವಿತ್ತೋ ಅಥವಾ ಅದಕ್ಕೂ ಮೀರಿದ ಬಾಂಧವ್ಯವಿತ್ತೋ ನಮಗೂ ಗೊತ್ತಿರಲಿಲ್ಲ.

ವಾಲ್ಮೀಕಿ ಸ್ನಾತಕೋತ್ತರ ಪದವಿಯ ಸಲುವಾಗಿ ಯುರೋಪಿಗೆ ಹೋದ. ನಾನು ನಮ್ಮದೇ ಪಟ್ಟಣದಲ್ಲೊಂದು ಪುಟ್ಟ ಕೆಲಸಕ್ಕೆ ಸೇರಿಕೊಂಡೆ. ಮನೆಯಲ್ಲಿ ನನ್ನ ಮದುವೆಯ ವಿಷಯ ಬಂದಾಗ, ವಾಲ್ಮೀಕಿಯನ್ನು ಬಿಟ್ಟು ಇನ್ನ್ಯಾರನ್ನೂ ಮದುವೆಯಾಗಲು ಮನಸ್ಸು ಒಪ್ಪಲಿಲ್ಲ. ಹಾಗೆಂದು ಅವನಲ್ಲಿ ವಿಷಯ ಹೇಳಲು ನನಗಾಗಲೀ, ಅಪ್ಪನಿಗಾಗಲೀ ಧೈರ್ಯ ಸಾಕಾಗಲಿಲ್ಲ. ಮದುವೆಯಾಗುತ್ತೀಯಾ ಎಂದು ಕೇಳದೆಯೂ ಅವನ್ನು ಮಾಡುವೆ ಮಾಡಿಕೊಂಡುಬಿಡುವಷ್ಟು ಸಲಿಗೆ ಇದ್ದರೂ, ಗೆಳೆತನವೂ ಮುರಿದು ಹೋದೀತೆಂಬ ಭಯ; ಜೊತೆಗೆ ಜಾತಿಅಂತಸ್ತುಗಳ ಅಂತರ ನಾನು ಕೈಕಟ್ಟಿ ಕೂರುವಂತೆ ಮಾಡಿತು. ನನಗೆಲ್ಲರೂ ಬುದ್ದಿ ಹೇಳಿದರು; ಬೇರೆ ಹುಡುಗನನ್ನು ಮದುವೆಯಾಗಲು ಒತ್ತಾಯಿಸಿದರು. ನಾನು ದೃಢವಾಗಿದ್ದೆ. ಒತ್ತಡವನ್ನು ತಾಳಲಾರದೆ ಒಂದು ದಿನ ಬೆಂಗಳೂರಿಗೆ ಬಂದುಬಿಟ್ಟೆ. ನಿಧಾನವಾಗಿ ಇಲ್ಲೇ ತಳವೂರಿದೆ. ಇಲ್ಲಿನ ಜೀವನ ಎಲ್ಲವನ್ನೂ ಮರೆಸಿತ್ತು. ಈಗ ಮತ್ತೆ ಅವನ ನೆನಪಾಗುತ್ತಿದೆ. ಹೇಗಾದರೂ ಭೇಟಿಯಾಗಬೇಕು. ಆಗಿನಂತಲ್ಲ, ಈಗೆಲ್ಲ ಮೊಬೈಲ್ ಕಾಲ; ಅವನನ್ನು ಸಂಪರ್ಕಿಸುವುದು ಕಷ್ಟವೇನಲ್ಲ.

ಬಾಲ್ಕನಿಯಿಂದ ನೋಡಿದೆ. ಅವನ ಕಾರು ಗೇಟಿನೆದುರು ನಿಂತಿತ್ತು. ಕಾರಿನೆದುರು ನಿಂತು ನನಗೆ ಕರೆಮಾಡಲೆಂದೇ ಮೊಬೈಲ್ ತೆಗೆದದ್ದಿರಬೇಕು. ನಾನೇ ಕೂಗಿ ಕರೆದೆ. ಇಳಿದು ಹೋಗಿಹೊರಡೋಣವೇಎಂದು ಕೇಳಿದೆ. “ಬಸ್ ಸ್ಟಾಪ್ ಎಲ್ಲಿದೆ?” ಎಂಬ ಅವನ ಪ್ರಶ್ನೆಗೆ ದಂಗಾದೆ.

ಅಂದು ಫೋನಿನಲ್ಲಿ ಮಾತನಾಡಿ, ತಮಾಷೆಗಾಗಿನಿನಗೆ ಕಥೆಗಳೆಲ್ಲಿ ಸಿಗುತ್ತವೆ?” ಎಂದು ಕೇಳಿದ್ದೆ. ಅದಕ್ಕವನುನಾಡಿದ್ದು ಕಥೆಯ ಜಾಡನ್ನು ಹುಡುಕಲು ನಿನ್ನನ್ನೂ ಕರೆದೊಯ್ಯುತ್ತೇನೆಎಂದಿದ್ದ. ಮಾತಿಗೆ ತಪ್ಪದೆ ಇಂದು ಬಂದಿದ್ದ. ಆದರಿವನು ಬಸ್ ಸ್ಟಾಪ್ ಹುಡುಕುತ್ತಿರುವುದೇಕೆ, ಅದೂ ಕಾರಿನಲ್ಲಿ ಬಂದವನು ಎಂದು ನಾನು ಮುಖವನ್ನೇ ಪ್ರಶ್ನಾರ್ಥಕ ಚಿನ್ಹೆ ಮಾಡಿದೆ..

ಬಸ್ ಸ್ಟಾಂಡ್ ಕಡೆಗೆ ಕಾಲು ಹಾಕುತ್ತ ಉತ್ತರಿಸಿದ – “ಕಥೆಗಳಿರುವುದೇ ಜನರ ನಡುವೆ; ವ್ಯಕ್ತಿವ್ಯಕ್ತಿಗಳ ನಡುವೆ. ಹೊಸ ಹೊಸ ವೈಕ್ತಿ ಪರಿಚಯಗಳ ನಡುವೆ. ಕಾರಲ್ಲಿ ಹೋದರೆ ನಾವು ರಸ್ತೆಯನ್ನು ನೋಡುತ್ತಾ ಹೋಗಬೇಕು. ಬಸ್ಸಿನಲ್ಲಾದರೆ ಜನರನ್ನು ನೋಡುತ್ತಾ ಕಥೆಯನ್ನೇ ಕಟ್ಟಿಬಿಡಬಹುದು. ಸಂತೆಯಲ್ಲೇ ಇವೆ ನೂರಾರು ಕಥೆಗಳು. ಈಗ ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವ ಬಸ್ ಹತ್ತೋಣ, ನಡಿ. “

ಕೆ.ಆರ್. ಮಾರ್ಕೆಟ್ ಬಸ್ ಸ್ಟಾಂಡ್ ಎದುರಿನ ಸುಹಾನಿ ಹಾರ್ಡ್ವೆರ್ ಶಾಪಿನ ಮುಂದೆ ಮರದ ನೆರಳಿತ್ತು. ಅಲ್ಲೇ ನಿಲ್ಲೋಣವೆಂದ ವಾಲ್ಮೀಕಿ. ಹಾರ್ಡ್ವೇರ್ ಶಾಪಿನ ಶಟರನ್ನು ಎಳೆದಿದ್ದರು, ಬೀಗ ಹಾಕಿರಲಿಲ್ಲ; ಶುಕ್ರವಾರದ ಮಧ್ಯಾಹ್ನವಾಗಿದ್ದರಿಂದ ಅಂಗಡಿಯವರು ನಮಾಜಿಗೆ ಹೋಗಿರಬಹುದೆಂದು ಊಹಿಸಿದೆ. ಸೆಲ್ಫಿ ಸ್ಟಿಕ್ ಮಾರುವವನೊಬ್ಬ ನಮ್ಮ ಪಕ್ಕ ಬಂದು ನಿಂತ; ಅವನೂ ನೆರಳನ್ನರಸಿ ಬಂದದ್ದಿರಬೇಕು. ಅವನನ್ನು ನೋಡಿದ್ದೇ ವಾಲ್ಮೀಕಿಯ ಕಣ್ಣಲ್ಲಿ ಮಿಂಚೊಂದು ಮಿಂಚಿತು! ಅವನು ಸೆಲ್ಫಿ ಸ್ಟಿಕ್ ಮಾರುವವನೊಡನೆ ಮಾತಿಗಿಳಿದ. ಐನೂರರ ಎರಡು ನೋಟುಗಳನ್ನು ತೋರಿಸುತ್ತ, “ನಿನ್ನ ಜೀವನದ ಕಥೆಯನ್ನು ಸವಿಸ್ತಾರವಾಗಿ ನನಗೆ ಹೇಳಿದರೆ ಎರಡು ನೋಟುಗಳೂ ನಿನ್ನವೇಎಂದ. ಬಡವನ ಕಣ್ಣುಗಳು ಅರಳಿದವು.

ವಾಲ್ಮೀಕಿ, ಇದೇನಿದು ನಿನ್ನ ಆಟ!! ಇದೇನೋ ನಿನ್ನ ಕಥೆಗಳ ಗುಟ್ಟು? ಬಡವರ ಕಥೆಗಳನ್ನು ಕೊಳ್ಳುವಷ್ಟು ನೀಚನಾದೆಯಾ?” ನಾನು ಗುಡುಗಿದೆ. ನನಗೆ ಅವನ ಕೃತ್ಯವನ್ನು ನೋಡಿ ಸಹಿಸಲಾಗಲಿಲ್ಲ.

ನೋಡು ನಾನು ಮಾಡುತ್ತಿರುವುದರಲ್ಲಿ ತಪ್ಪೇನೂ ಕಾಣಿಸುತ್ತಿಲ್ಲ ನನಗೆ. ಬಡವನಿಗೆ ಹಣ ಬೇಕು; ನನಗೆ ಕಥೆ, ಪ್ರಸಿದ್ಧಿ  ಬೇಕು, ಅಷ್ಟೇ. ಇಂಥ ಬಡವರ ಕಥೆಗಳನ್ನೇ ಜನರು ಇಷ್ಟಪಡುತ್ತಾರೆ. ಬಡತನ, ನೋವು, ದುಃಖಗಳೇ ಮನೋರಂಜನೆಯ ವಸ್ತುಗಳಾಗಿರುವುದು ನಿನಗೆ ಗೊತ್ತಿಲ್ಲವೇ? ನನ್ನ ಎಷ್ಟೊಂದು ಕಥೆಗಳನ್ನು ನೀನೇ ಮೆಚ್ಚಿಕೊಂಡಿದ್ದೀಯಾ!” ಎಂದ ವಾಲ್ಮೀಕಿ.

ಮುಂದೊಂದು ದಿನ ನನಗೂ ದುಡ್ಡು ಕೊಟ್ಟು, ನನ್ನ ಜೀವನದ ಕಥೆಯನ್ನು ಕೊಳ್ಳಲೂ ಹೇಸುವವನಲ್ಲ ನೀನು!” ಎಲ್ಲೋ ನೋಡುತ್ತ, ಅವನ ಮೇಲಿನ ತಿರಸ್ಕಾರದಿಂದ ಹೇಳಿದೆ.

ಅವನದಕ್ಕೆ ಉತ್ತರವೆಂಬಂತೆ ಹೇಳಿದನಿನ್ನ ಜೀವನದ ಕಥೆ ನನಗೇ ಗೊತ್ತು. ಏನು ಏರುಪೇರುಗಳಿಲ್ಲದ ಪೇಲವ ಕಥೆಯನ್ನು ಯಾರು ಓದಲು ಇಷ್ಟಪಟ್ಟಾರು?”

ನನ್ನ ಕಣ್ಣುಗಳು ಒದ್ದೆಯಾದವು. ಬಿಕ್ಕಿ ಅಳಹತ್ತಿದೆ. ಸೆಲ್ಫಿ ಸ್ಟಿಕ್ ಮಾರುವವನು ನಡೆದುಕೊಂಡು ದೂರ ಹೋಗುತ್ತಿರುವುದು ಮಂಜಾಗಿ ಕಾಣಿಸಿತು.

ನಾನು ಅಳುತ್ತಲೇ ಹೇಳಿದೆ, “ನಾನು ನಿನ್ನ ಬಿಟ್ಟು ಇನ್ಯಾರನ್ನೂ ಮದುವೆಯಾಗದೇ, ನೀನು ನನ್ನ ಮದುವೆಯಾಗೆಂದೂ ಕೇಳಲಾಗದೆಎಷ್ಟೊಂದು ವರ್ಷಗಳಿಂದ ತೊಳಲುತ್ತಿರುವುದು ನಿನಗೆ ಹುರುಳಿಲ್ಲದ ಜೇವನವಾಗಿ ಕಾಣಿಸುತ್ತಿದೆಯೇ? ಜೀವನದ ಜಟಿಲತೆಗೆ, ಸಮಾಜದ ಸಿಕ್ಕುಗಳಿಗೆ ಸಿಕ್ಕಿ ಕಂಗಾಲಾಗಿಯೂ, ಬದುಕನ್ನು ಮೊಟಕುಗೊಳಿಸದೇ ಎದುರಿಸುತ್ತಿರುವುದೇ ಒಂದು ಸಾಧನೆಯಲ್ಲವೇ?” ಮುಂದೆ ನನಗೆ ಮಾತನಾಡಲಾಗಲಿಲ್ಲ; ಉಸಿರುಗಟ್ಟಿದಂತಾಯ್ತು.

ವಾಲ್ಮೀಕಿ ತನ್ನ ಉಂಗುರವನ್ನು ತೆಗೆದ; ತನ್ನ ಪರ್ಸಿನಿಂದ ಒಂದು ಸ್ಟ್ಯಾಂಪ್ ಸೈಜ್ ಫೋಟೋ ಹೊರತೆಗೆದು, ನನ್ನ ಕೈಗಿತ್ತ. ಅದು ನನ್ನದೇ ಫೋಟೋ ಆಗಿತ್ತು, ಕಾಲೇಜಿನ ದಿನಗಳಲ್ಲಿ ತೆಗೆಸಿದ್ದು.

ಹಸಿರು ಹರಳಿನ ಉಂಗುರವನ್ನು ನೋಡುತ್ತ, ನನ್ನ ವಯಸ್ಸನ್ನು ಲೆಕ್ಕಹಾಕತೊಡಗಿದೆ. ಮೂವತ್ತೇಳೋ? ಮೂವತ್ತೆಂಟೋ ? ಎಷ್ಟು ಸಲ ಎಣಿಸಿದರೂ ಸರಿಯಾದ ವಯಸ್ಸು ಗೊತ್ತಾಗಲಿಲ್ಲ. ಅವನು ನನ್ನ ಎಣಿಸುವ ಕೈಗಳನ್ನೇ ನೋಡುತ್ತಾ ನಿಂತ. ಹಾರ್ಡವೇರ್ ಶಾಪಿನೆದುರಿನ ನೆರಳು ನಿಧಾನವಾಗಿ ಸರಿಯುತ್ತಿರುವುದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ.

-ಶ್ರೀಕಲಾ ಹೆಗಡೆ ಕಂಬ್ಳಿಸರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!