ಕಥೆ

ಟೈಮ್ ಬ್ಯಾಂಕ್

ಮೀನಾಕ್ಷಿ ಮೀನು ಮಾರುಕಟ್ಟೆಗೆ ಮೀನುಗಳನ್ನು ಖರೀದಿಸಲು ಬಂದವಳು. ಊರಿನಲ್ಲಿರುವ ಟೈಮ್ ಬ್ಯಾಂಕ್ ಹೊತ್ತಿ ಉರಿದು ಭಸ್ಮವಾಗಿಹೋದ ಸುದ್ದಿಯನ್ನು ಯಾರೋ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡವಳಿಗೆ, ಆದ ಸಂಕಟ ಅಷ್ಟಿಷ್ಟಲ್ಲ. ಟೈಮ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ವಿಚಾರದ ಸತ್ಯಾಸತ್ಯತೆಯನ್ನು ಫಿಶ್ ಮಾರ್ಕೆಟ್ ಪಕ್ಕದ ಗಿರಣಿಯಲ್ಲಿ ಕೇಳಿ ತಿಳಿದವಳಿಗೆ, ಟೈಮ್ ಬ್ಯಾಂಕಿನಲ್ಲಿದ್ದ ತನ್ನ ಠೇವಣಿಯನ್ನು ಕಳೆದುಕೊಂಡದ್ದಕ್ಕೆ ಕಣ್ಣಿನಲ್ಲಿ ನೀರಾಡಿತು, ನೀರು ಸುರಿಯಿತು. ತನ್ನ ಮದುವೆಯಾದ ಮೇಲೆ ತನ್ನ ಗಂಡನೊಡನೆ ಕಳೆಯಬೇಕೆಂದು ತಾನು ಕೂಡಿಡುತ್ತ ಬಂದಿದ್ದ ಸಮಯವೆಲ್ಲ ಸುಟ್ಟು ಹೋಗಿದ್ದು ಅವಳನ್ನು ಕುಸಿಯುವಂತೆ ಮಾಡಿತು.

ಫಿಶ್ ಮಾರ್ಕೆಟ್ ಪಕ್ಕದ ಪಾಳುಬಿದ್ದ ಬಸ್ ಸ್ಟಾಪಿನ ಒಳಗೆ ಹೊಕ್ಕಳು.  ಬಸ್ ಸ್ಟಾಪಿನ ಹೆಂಚುಗಳನ್ನೂ, ಕಿಟಕಿಯ ಕಟ್ಟುಗಳನ್ನೂ ಯಾರೋ ಕದ್ದು ಬಹುಕಾಲವಾಗಿತ್ತು. ಛಾವಣಿಯಿರದ ಬಸ್ ಸ್ಟಾಪಿನಲ್ಲಿ ಬಿಸಿಲೂ ಬಂದು ವಾಸವಾಗಿತ್ತು. ನೆಲದ ಮೇಲೆಲ್ಲ ಮರದ ಎಲೆಗಳು ಮೆತ್ತನೆಯ ನೆಲಹಾಸನ್ನೇ ನಿರ್ಮಿಸಿದ್ದವು. ಅವಳಿಗೆ ಅತ್ತು ಹಗುರಾಗಬೇಕೆಂದೆನ್ನಿಸಿ ಒಳಗೆ ಒಂದು ಮೂಲೆಯಲ್ಲಿ ಕುಳಿತಳು. ಕೂಡಿಟ್ಟ ಸಮಯವನ್ನೆಲ್ಲ ಕಳೆದುಕೊಂಡು ಈಗ ತಾನು ಬರಿಗೈ ಆಗಿದ್ದೂ, ಮತ್ತೆ ಸಮಯವನ್ನು ಶೇಖರಿಸಲು ಪಡಬೇಕಾದ ಶ್ರಮವನ್ನೂ ನೆನೆದು, ಕಣ್ಣೀರಲ್ಲೇ  ತೊಯ್ದುಹೋದಳು.

ಬಸ್ ಸ್ಟಾಪಿನ ಹಿಂಭಾಗದಲ್ಲಿ ಕುಳಿತಿದ್ದ ಮುದಿ ಭಿಕ್ಷುಕನಿಗೆ ಅವಳ ಬಿಕ್ಕುವಿಕೆ ಕೇಳಿಸಿತು. ಒಳಗೆ ಬಂದು ನೋಡಿದರೆ, ಅವಳು ತಲೆಯ ಮೇಲೆ ಕೈಹೊತ್ತು ಕಣ್ಣೀರು ಸುರಿಸುತ್ತಿದ್ದಳು. “ಯಾಕವ್ವಾ ಅಳುವುದು?” ಎಂಬ ಅವನ ಗಡುಸು ಸ್ವರಕ್ಕೆ ಅವಳು ಗಾಬರಿಯಾಗಿ, ಎದ್ದು ಓಡಲೆಂಬಂತೆ ನಿಂತಳು. ಎಲ್ಲವನ್ನೂ ಕಳೆದುಕೊಂಡಂತೆ ಮುಖಮಾಡಿ ನಿಂತ ಅವಳಿಗೆ ಮತ್ತದೇ ಪ್ರಶ್ನೆ ಕೇಳಿದ ಮುದಿ ಭಿಕ್ಷುಕ. ಹತ್ತು ಸೆಕೆಂಡಿನಲ್ಲಿ ಹತ್ತು ಸಲ ಹೇಳಲೋ ಬೇಡವೋ, ಹೇಳಲೋ ಬೇಡವೋ ಎಂದು ಯೋಚಿಸಿದಳು. ಅವಳಿಗ್ಯಾಕೊ ಹೇಳಿ ಹಗುರಾಗಬೇಕೆನ್ನಿಸಿತು. ತನ್ನ ಕಥೆಯನ್ನು ಹೇಳಿದಳು. ಭಿಕ್ಷುಕನಿಗೆ ಕನಿಕರವೆನ್ನಿಸಿತು. ‘ಇಂಥ ಮೃದು ಮನಸ್ಸಿನ ಹುಡುಗಿಗೆ ಆಘಾತವನ್ನು ಸಹಿಸುವ ಶಕ್ತಿಯಾದರೂ ಎಲ್ಲಿದ್ದೀತುಎಂದು ಅವನು ಯೋಚಿಸಿದ.

ತನ್ನ ಕೊಳಕು ಜೋಳಿಗೆಯನ್ನು ಅವಳ ಹೆಗಲಿಗೆ ಹಾಕಿ, “ಇದೋ, ನನ್ನ ಜೀವನದಲ್ಲಿ ಇನ್ನೆಷ್ಟು ಸಮಯ ಬಾಕಿ ಉಳಿದಿದೆಯೋ ಅದನ್ನೆಲ್ಲ ನಿನಗೆ ನೀಡುತ್ತಿದ್ದೇನೆಎಂದವನು ಕುಸಿದು ಬಿದ್ದ. ಅವನ ಉಸಿರು ಅಲ್ಲಿಗೇ ನಿಂತಿತು. ಅವನು ಬಿದ್ದಿದ್ದನ್ನು ನೋಡಿ ಅವಳು ಗಾಬರಿಯಾಗಿ, ಮೀನು ಮಾರುಕಟ್ಟೆಯಲ್ಲಿದ್ದ  ಹಲವರನ್ನು ಕೂಗಿ ಕರೆದಳು. ಎಲ್ಲರೂ ಪರೀಕ್ಷಿಸಿ, ಅವನು ಸತ್ತುಹೋಗಿದ್ದಾನೆಂದರು. ಅವನ ಜೋಳಿಗೆಯಲ್ಲಿ ಹಣವೇನೂ ಇಲ್ಲವೆನ್ನುವುದನ್ನು ಒಬ್ಬಿಬ್ಬರು ಪರೀಕ್ಷಿಸಿದರು. ಅವನ ಅಂತ್ಯ ಸಂಸ್ಕಾರವನ್ನು ತನ್ನ ಸ್ನೇಹಿತರ ನೆರವಿನಿಂದ ಅವಳೇ ಮುಗಿಸಿ ಬಂದಳು.

ಬಂದವಳು ವಾರಗಟ್ಟಲೇ ಅಂತರ್ಮುಖಿಯಾಗಿ ಕಳೆದಳು. ಒಂದು ಭಾನುವಾರದ ದಿನ ಭಿಕ್ಷುಕ ನೀಡಿದ ಜೋಳಿಗೆಯನ್ನು ತೆರೆದಳು. ತೆರೆಯುವಾಗ ಅವಳ ಕಣ್ಣಲ್ಲಿ ನೀರು ತುಂಬಿಕೊಂಡು ಜೋಳಿಗೆಯಲ್ಲಿರುವುದೆಲ್ಲವೂ ಮಂಜು ಮಂಜಾಗಿ ಕಾಣಿಸಿತು. ಕಣ್ಣೊರಿಸಿಕೊಂಡವಳಿಗೆ ಹತ್ತಾರು ಬಣ್ಣಗಳ ಒಂದಷ್ಟು ದಾರದ ಉಂಡೆಗಳು ಕಂಡವು. ಎಣಿಸಿ ನೋಡಲಾಗಿ, ಅರವತ್ತು ದಾರದ ಉಂಡೆಗಳಿದ್ದವು. ಭಿಕ್ಷುಕನ್ಯಾಕೆ ಇವುಗಳನ್ನು ಇಟ್ಟುಕೊಂಡಿದ್ದನೆಂದು ತಿಳಿಯದಾಯ್ತು. ದಾರದ ಉಂಡೆಗಳನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ, ಕೊಳಕಾದ ಜೋಳಿಗೆಯನ್ನು ಕಸದ ತೊಟ್ಟಿಗೆಸೆದುಬಂದಳು.

ಸಮಯ ಸರಿಯಿತು. ಮೀನಾಕ್ಷಿಯ ಮದುವೆಯಾಯಿತು. ಮದುವೆಯಾದ ಹೊಸತರಲ್ಲಿ ಅವಳ ಹಿಂದೇ ಓಡಾಡುತ್ತಿದ್ದ ಗಂಡ, ಒಂದೆರಡು ವರ್ಷಗಳಲ್ಲಿ ಆಫೀಸ್ ಕೆಲಸದ ಒತ್ತಡ, ಟಿವಿ, ಮೊಬೈಲ್, ಇಂಟರ್ನೆಟ್, ಫೇಸ್ ಬುಕ್, ವಾಟ್ಸಾಪ್ ಎಂದು ಬಿಝಿಯಾದ. ಅವಳೊಡನೆ ಗುಣಮಟ್ಟದ ಸಮಯವನ್ನು ಕಳೆಯಲು ತನಗೆ ಸಮಯವೇ ಇಲ್ಲವೆಂಬಂತೆ ಆಡತೊಡಗಿದ. ಅವಳು ಒಂಟಿಯಾಗ ತೊಡಗಿದಳು. ಮದುವೆಯಾದಮೇಲೆ ಗಂಡನೊಡನೆ ಕಳೆಯಲೆಂದು ಕೂಡಿಟ್ಟ ಸಮಯವೂ ಟೈಮ್ ಬ್ಯಾಂಕಿನಲ್ಲೇ ಸುಟ್ಟು ಹೋಗಿತ್ತು ಹಾಗೂ ಈಗ ಗಂಡನಿಗೆ  ತನ್ನ ಸಮಯವನ್ನು ವರ್ಗಾಯಿಸಲೂ ಅವನು ಒಪ್ಪದೇ ಹೋಗಿದ್ದು  – ಅವಳನ್ನು ಮತ್ತೂ ಕುಗ್ಗಿಸಿತು.

ಹಲವು ದಿನಗಳು ಕಳೆದವು. ಒಂದು ದಿನ ಅವಳು ಭಿಕ್ಷುಕ ಕೊಟ್ಟಿದ್ದ ದಾರದ ಉಂಡೆಗಳಿದ್ದ ಚೀಲವನ್ನು ತೆರೆದಳು. ಕೆಂಪನೆಯ ದಾರದ ಉಂಡೆಯನ್ನು ತೆಗೆದುಕೊಂಡು, ಬಾಲ್ಕನಿಗೆ ಬಂದು ನಿಂತಳು. ಹತ್ತನೇ ಮಹಡಿಯಲ್ಲಿದ್ದ ಬಾಲ್ಕನಿಯಿಂದದಾರದ ಒಂದು ತುದಿಯನ್ನು ಹಿಡಿದು, ಉಂಡೆಯನ್ನು ಮೇಲಕ್ಕೆ ಜೋರಾಗಿ ಎಸೆದಳು. ಉಂಡೆ ಪೂರ್ತಿ ಬಿಚ್ಚಿಕೊಂಡು, ಗಾಳಿಯಿಂದಾಗಿ ದಾರ ನಿದಾನವಾಗಿ ಕೆಳಗಿಳಿಯುತ್ತಿರುವುದನ್ನು ನೋಡುವುದೇ ಸೊಗಸೆನ್ನಿಸಿತು ಅವಳಿಗೆ. ಮತ್ತೆ ದಾರವನ್ನು ಸುತ್ತಿ ಉಂಡೆಯಂತೆ ಮಾಡಿದಳು. ಮತ್ತೆ ಎಸೆದಳು; ಮತ್ತೆ ಸುತ್ತಿದಳು, ಮತ್ತೆ ಮತ್ತೆ ಅದೇ ಆಟ. ಮೊಬೈಲಿನಲ್ಲಿ ತಲೆ ತೂರಿಸಿ ಕುಳಿತಿದ್ದ ಗಂಡ, ಕುಡಿಯಲು ನೀರು ಬೇಕೆಂದು ಕರೆದರೂ ಅವಳು ಓಗೊಡದಿದ್ದನ್ನು ನೋಡಿ ತಾನಾಗೇ ಕತ್ತೆತ್ತಿ ನೋಡಿದ. ಅವಳು ಬಾಲ್ಕನಿಯಲ್ಲಿರುವುದು ಕಾಣಿಸಿತು. ಏನನ್ನೋ ಎಸೆಯುತ್ತಿರುವುದನ್ನು ನೋಡಿ, ಅದೇನೆಂದು ವಿಚಾರಿಸಲು ಹೋದರೆಅವನಿಗೆ ಗಾಳಿಯಲ್ಲಿ ತೇಲಿ ತೇಲಿ ಇಳಿ ಬೀಳುತ್ತಿರುವ ದಾರ ಕೆಂಪು ಕೋಲ್ಮಿಂಚಿನಂತೆ ಕಾಣಿಸಿತು. ಅವಳು ದಾರ ಪೂರ್ತಿ ಇಳಿಬಿದ್ದ ಮೇಲೆ, ದಾರವನ್ನೆಳೆದು ಸುತ್ತಿ ಉಂಡೆಯಾಗಿಸಿ ಮತ್ತೆ ಜೋರಾಗಿ ಮೇಲಕ್ಕೆಸೆದಳು.ಮತ್ತದೇ ಚಿತ್ತಾರ. ಅವನಿಗೂ ಮೋಜೆನಿಸಿತು. ತಾನೂ ಒಮ್ಮೆ ಎಸೆಯುತ್ತೇನೆಂದ. ಅವಳು ಚೀಲದಿಂದ ಉಂಡೆಯೊಂದನ್ನು ತೆಗೆದು ಅವನ ಕೈಗಿತ್ತಳು. ಅವರಿಬ್ಬರೂ ಬಹಳ ಹೊತ್ತು ಅದೇ ಆಟದಲ್ಲಿ ಹೊತ್ತು ಕಳೆದರು. ಹರಟುತ್ತ, ನಗುತ್ತ ಖುಷಿಯಾಗಿ ಕಳೆಯಿತು ಹೊತ್ತು. ಒಬ್ಬರೊಡನೊಬ್ಬರು ಹೊತ್ತು ಕಳೆದಿದ್ದು ಇಬ್ಬರಲ್ಲೂ ಹೊಸ ಭಾಂದವ್ಯವನ್ನೇ ಹುಟ್ಟಿಸಿದಂತಿತ್ತು. ಒಬ್ಬರಿಗೊಬ್ಬರು ಹೊತ್ತು ಮೀಸಲಿಟ್ಟರೆ ಸಿಗುವ ಸಂತೋಷದ ಬೆಲೆ, ಕಳೆದು ಹೋಗುವ ಸಮಯಕ್ಕಿಂತ ದುಬಾರಿಯಾದದ್ದೆಂದು ಅವನಿಗೆ ಅನಿಸಿತು. ಅವನು ಬದಲಾದ.

ಭಿಕ್ಷುಕ ದಾನಮಾಡಿದ ಅವನ ಜೀವನದ ಉಳಿದ ಸಮಯವನ್ನು ದಾರದ ಉಂಡೆಗಳಲ್ಲಿ ಶೇಖರಿಸಿಟ್ಟಿದ್ದನೇ?!!’ ಎಂಬ ಯೋಚನೆ ಮೀನಾಕ್ಷಿಗೆ ಆಗಾಗ ಬರತೊಡಗಿತು.


ಶ್ರೀಕಲಾ ಹೆಗಡೆ ಕಂಬ್ಳಿಸರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!