Featured ಅಂಕಣ ಪ್ರಚಲಿತ

ನಿಂಬೇ ನಿಂಬೆ ಇದಕೇನೆಂಬೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಮತಯಾಚಿಸುತ್ತಿರುವ ಚಿತ್ರವೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮೂಢನಂಬಿಕೆಗಳನ್ನು ವಿರೋಧಿಸುವ ಸಮಾಜವಾದಿ ನಾಯಕರೇ ತಮ್ಮ ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದು ಮೌಢ್ಯವನ್ನು ಆಚರಿಸುತ್ತಿದ್ದಾರೆ ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ.

ಸ್ವತಃ ಮುಖ್ಯಮಂತ್ರಿಗಳೇ ಆ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ,”ಹಳ್ಳಿಗಳಲ್ಲಿ ಇಂದಿಗೂ ನಿಂಬೆ ಹಣ್ಣು ನೀಡಿ ಸ್ವಾಗತಿಸುವ ಪರಿಪಾಠವಿದೆ, ಹಾಗೆ ಸ್ವಾಗತಿಸಲು ನೀಡಿದ ನಿಂಬೆಹಣ್ಣನ್ನು ನಾನು ಕೈಯಲ್ಲಿ ಹಿಡಿದುಕೊಂಡಿದ್ದು ನಿಜ.ಅದರಲ್ಲಿ ಯಾವ ತಪ್ಪೂ ಇಲ್ಲ” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ವಿಪರೀತ ಬಿಸಿಲಿರುವುದರಿಂದ ಜ್ಯೂಸ್ ಮಾಡಲು ನಿಂಬೆಹಣ್ಣನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು ಎಂದು ಮುಖ್ಯಮಂತ್ರಿಗಳ ಪರವಾಗಿ ಸಮರ್ಥಿಸಿಕೊಂಡರೆ; ಮತ್ತೆ ಕೆಲವರು ಚುನಾವಣಾ ಪ್ರಚಾರದ ಪ್ರಯಾಣದ ಸಂದರ್ಭದಲ್ಲಿ ವಾಂತಿ ಬಾರದಂತೆ ನಿಂಬೆ ಹಣ್ಣನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಹೌದು. ಇಂಥದ್ದೊಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಟೀಕಿಸುವುದು, ಪ್ರಶ್ನಿಸುವುದು ಖಂಡಿತಾ ಸರಿಯಲ್ಲ. ಹಾಗಾದರೆ ಕೇವಲ ಒಂದು ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡ ಮಾತ್ರಕ್ಕೇ ಮುಖ್ಯಮಂತ್ರಿಗಳು ಅಷ್ಟೊಂದು ಟೀಕೆಗೆ ತುತ್ತಾಗಲು ಕಾರಣವೇನಿರಬಹುದು? ಬಹುಶಃ ಅಷ್ಟೊಂದು ಕ್ಷುಲ್ಲಕ ಕಾರಣಕ್ಕೆ ಆ ಮಟ್ಟದ ಟೀಕೆಗೆ ತುತ್ತಾಗಲು ಕಾರಣ ಸ್ವತಃ ಅವರೇ ಆಗಿದ್ದಾರೆ. ಹಾಗೆಯೇ ಸರ್ಕಾರೀ ಕೃಪಾಪೋಷಿತ ಬುದ್ಧಿಜೀವಿಗಳು, ಪ್ರಗತಿಪರರು ಹಾಗೂ ಪ್ರಗತಿಪರ ಮಠಾಧೀಶರುಗಳು ಕೂಡಾ ಅಷ್ಟೇ ಕಾರಣ.

ಎಲ್ಲವೂ ಸರಿ. ಮುಖ್ಯಮಂತ್ರಿಗಳು ಮೌಢ್ಯಕ್ಕೊಳಗಾಗಿ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದು ಚುನಾವಣಾ ಪ್ರಚಾರಕ್ಕೆ ತೆರಳಿದ್ದಲ್ಲ ಎಂದೇ ತಿಳಿಯೋಣ. ಆ ವಿಚಾರವಾಗಿ ಅವರನ್ನು ಕೆಲವರು ಟೀಕಿಸಿದ್ದು ತಪ್ಪು ಎಂದೇ ಭಾವಿಸೋಣ. ಹಾಗಾದರೆ ಹಿಂದೂಗಳ, ಅವರ ಬಹುತೇಕ ಆಚರಣೆಗಳ ಬಗ್ಗೆ ಮುಖ್ಯಮಂತ್ರಿಗಳ ಪರ ಗುರುತಿಸಿಕೊಂಡಿರುವ ಹಲವಾರು ಬುದ್ದಿಜೀವಿಗಳು, ಪ್ರಗತಿಪರರು ಹಾಗೂ ಪ್ರಗತಿಪರ ಮಠಾಧೀಶರುಗಳು ಇದುವರೆಗೂ ವ್ಯಂಗ್ಯವಾಡಿದ್ದು ಕೂಡಾ ತಪ್ಪಲ್ಲವೇ?

‘ಪ್ರಶ್ನಿಸದೆ ಏನನ್ನೂ ಒಪ್ಪಬೇಡ’ ಎನ್ನುವುದು ಈ ವಿಚಾರವಾದಿಗಳ, ಬುದ್ಧಿಜೀವಿಗಳ, ಪ್ರಗತಿಪರ ಸಾಹಿತಿಗಳ, ಸ್ವಾಮೀಜಿಗಳ ಧ್ಯೇಯವಾಕ್ಯ. ಹಾಗಾದರೆ ಗ್ರಾಮೀಣ ಪ್ರದೇಶದಲ್ಲಿ ನಿಂಬೆಹಣ್ಣನ್ನು ನೀಡಿ ಅತಿಥಿಗಳನ್ನು ಸ್ವಾಗತಿಸುತ್ತಾರೆ ಎನ್ನುವುದನ್ನು ಒಪ್ಪೋಣ. ಹಾಗೆ ನಿಂಬೆಹಣ್ಣನ್ನು ನೀಡಿ ಅತಿಥಿಗಳನ್ನು ಸ್ವಾಗತಿಸುವುದರ ಹಿಂದಿನ ವೈಚಾರಿಕ ಕಾರಣವೇನು ಎನ್ನುವ ಬಗ್ಗೆ ಪ್ರಶ್ನೆ ಮಾಡಿ ಅವರು ಹೇಳಿದ್ದು ಸತ್ಯ ಎಂದು ಪರೀಕ್ಷಿಸಿ ನಂತರ ಮುಖ್ಯಮಂತ್ರಿಗಳು ಆ ನಿಂಬೆ ಹಣ್ಣನ್ನು ಸ್ವೀಕರಿಸಿದರೇ ಅಥವಾ ಅವರು ನೀಡಿದ ಕೂಡಲೇ ಇವರು ಸ್ವೀಕರಿಸಿಬಿಟ್ಟರೇ? ಪ್ರಗತಿಪರರ ನೆಚ್ಚಿನ ಸಮಾಜವಾದೀ ಮುಖ್ಯಮಂತ್ರಿಗಳು ಯಾರೋ ನೀಡಿದ ನಿಂಬೆ ಹಣ್ಣನ್ನು ಏನೊಂದೂ ಪ್ರಶ್ನಿಸದೆ ತಮ್ಮ ಕೈಯಲ್ಲಿ ಹಿಡಿದುಕೊಂಡು ಪ್ರಚಾರಕ್ಕೆ ತೆರಳಿದ್ದೇ ಆದರೆ ಅದು ಅವರೇ ಹೇಳುವ ವೈಚಾರಿಕತೆಗೆ ವಿರುದ್ಧವಲ್ಲವೇ?

ನಿಜ. ಅವರು ನೀಡಿದ ನಿಂಬೆ ಹಣ್ಣಿನ ವೈಚಾರಿಕತೆಯ ಬಗ್ಗೆ ಪ್ರಶ್ನೆ ಮಾಡಿ ನಂತರ ಅದನ್ನು ಪಡೆದು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರೂ, ಏನೊಂದೂ ಪ್ರಶ್ನಿಸದೇ ಅದನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರೂ ಅದರಿಂದ ಅವರಿಗಾಗುವ ಪ್ರಯೋಜನಗಳಂತೂ ಆಗಿಯೇ ಆಗುತ್ತವೆ. ಏಕೆಂದರೆ ಅದರ ಹಿಂದಿನ ವೈಚಾರಿಕತೆ ತಿಳಿದಿಲ್ಲ ಎಂದ ಮಾತ್ರಕ್ಕೆ ಆ ನಿಂಬೆಹಣ್ಣಿನ ಉಪಯುಕ್ತತೆಗಳು ನಾಶವಾಗಲಾರವು. ಅದೇ ಕಾರಣಕ್ಕೆ ನಾವು ಹಿಂದಿನಿಂದಲೂ ಬಂದ ನಮ್ಮ ಹಿಂದೂ ಸಂಪ್ರದಾಯಗಳ ವೈಜ್ಞಾನಿಕ ಕಾರಣಗಳನ್ನು ವಿವರಿಸಲಿ ಅಥವಾ ವಿವರಿಸದಿರಲಿ,ಅವುಗಳನ್ನು ನಾವು ಪಾಲಿಸುತ್ತಿದ್ದೇವೆ. ಏಕೆಂದರೆ ನಮ್ಮ ಎಲ್ಲಾ ಆಚರಣೆಗಳ ಹಿಂದೆಯೂ ಏನಾದರೊಂದು ವೈಚಾರಿಕ ಕಾರಣ ಇದ್ದೇ ಇರುತ್ತದೆ ಎನ್ನುವುದು ನಮಗೆ ಚೆನ್ನಾಗಿ ಗೊತ್ತು.

ಇವತ್ತು ಸಮಾಜವಾದಿ ಮುಖ್ಯಮಂತ್ರಿಗಳು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಡಿದು ಚುನಾವಣಾ ಪ್ರಚಾರ ಮಾಡಿದ ಸಲುವಾಗಿ ಅದರ ಹಿಂದಿನ ವೈಚಾರಿಕತೆಯ ಬಗ್ಗೆ ಸಮರ್ಥಿಸಿಕೊಳ್ಳುತ್ತಿರುವವರು ಅದೇ ರೀತಿಯ ನಮ್ಮ ಹಲವು ಸಂಪ್ರದಾಯಗಳ ಬಗ್ಗೆ ಟೀಕಿಸಿದ್ದು ಏಕೆ? ಅದರ ಹಿಂದೆ ಏನೋ ಒಂದು ವೈಚಾರಿಕ ಕಾರಣವಿದೆ ಎಂದು ಅಥವಾ ಅವರ ಮನ ನೋಯಿಸಬಾರದು ಎಂದು ಏನನ್ನೂ ಪ್ರಶ್ನಿಸದೆ ನಿಂಬೆ ಹಣ್ಣನ್ನು ಪಡೆದು ಕೈಯಲ್ಲಿ ಹಿಡಿದುಕೊಂಡರು ಎಂದರೆ ಅದೇ ನೀತಿ ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗಬಾರದು ಎನ್ನುವ ನಿಯಮಕ್ಕೂ ಅನ್ವಯವಾಗಬೇಕಲ್ಲವೇ? ಅಲ್ಲಿನ ಆ ಸಂಪ್ರದಾಯದ ಹಿಂದೆಯೂ ಏನೋ ಒಂದು ವೈಚಾರಿಕ ಕಾರಣ ಇರಲೇ ಬೇಕಲ್ಲವೇ?ಆ ಸಂಪ್ರದಾಯವನ್ನು ಮುರಿದು “ಮಾಂಸ ತಿಂದು ಬರಬೇಡ ಎಂದು ಮಂಜುನಾಥ ಹೇಳಿದ್ದನಾ..?” ಎಂದು ವ್ಯಂಗ್ಯವಾಡಿದಾಗ ಕೂಡಾ ಕೋಟ್ಯಂತರ ಹಿಂದೂಗಳ ಮನಸ್ಸಿಗೆ ನೋವಾಗಿಯೇ ಆಗುತ್ತದೆ ಅಲ್ಲವೇ?ಹಾಗಾದರೆ ಆಗ ಏಕೆ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದು ಹೋಗಿದ್ದೆ ಎಂದು ಅವರು ಸಮರ್ಥಿಸಿಕೊಂಡರು?

ಪ್ರತಿ ಹಿಂದೂವಿನ ಮನೆಯಲ್ಲಿ ಇರುವ ತುಳಸಿ ಗಿಡದಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಆಪತ್ಕಾಲದಲ್ಲಿ ಅದೊಂದು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಂತೆ ಬಳಸಬಹುದು ಎನ್ನುವ ಕಾರಣ ಅದೇ ವಿಚಾರವಾದಿಗಳಿಗೆ ತಿಳಿದಿಲ್ಲವೇ? ಅದರ ಹಿಂದಿನ ವೈಚಾರಿಕತೆ ತಿಳಿದು ಉಪಯೋಗಿಸುವವರಿಗೂ, ತಿಳಿಯದೆ ಉಪಯೋಗಿಸುವವರಿಗೂ ಯಾವುದೇ ಭೇದ ಭಾವವೂ ಇಲ್ಲದಂತೆ ಒಂದೇ ರೀತಿಯ ಪರಿಣಾಮ ಬೀರುತ್ತದೆ. ಆದರೂ ಏಕೆ ಸರ್ಕಾರೀ ಕೃಪಾಪೋಷಿತ ಬುದ್ದಿಜೀವಿಗಳು ನಮ್ಮ ಹಿಂದೂ ಸಂಪ್ರದಾಯಗಳನ್ನು ವೈಚಾರಿಕತೆಯ ಹೆಸರಿನಲ್ಲಿ ಟೀಕಿಸುತ್ತಾರೆ?

ಸಂಕ್ರಾಂತಿಯಂದು ನಾವು ನಮ್ಮ ಸಂಪ್ರದಾಯದ ಹೆಸರಿನಲ್ಲಿ ಹಂಚಿ ತಿನ್ನುವ ಎಳ್ಳು, ಬೆಲ್ಲ, ಶೇಂಗಾಗಳು ದೇಹಕ್ಕೆ ಅಗತ್ಯ ಪೋಷಕಾಂಶ ನೀಡುತ್ತವೆ. ಅವುಗಳ ಸೇವನೆಯಿಂದ ಮುಖದ ಕಾಂತಿವೃದ್ಧಿಯಾಗುತ್ತದೆ, ಹೃದಯದ ಆರೋಗ್ಯ ವೃದ್ಧಿಸುತ್ತದೆ. ಹಲ್ಲು, ಮೂಳೆಗಳು ಗಟ್ಟಿಯಾಗುತ್ತದೆ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅದರ ಹಿಂದಿನ ವೈಚಾರಿಕತೆ ತಿಳಿದು ತಿನ್ನುವವರಿಗೂ, ತಿಳಿಯದೆ ತಿನ್ನುವವರಿಗೂ ಯಾವುದೇ ಭೇದಭಾವವೂ ಇಲ್ಲದಂತೆ ಒಂದೇ ರೀತಿಯ ಪರಿಣಾಮ ಬೀರುತ್ತದೆ. ಆದರೂ ಏಕೆ ಅವರ ಬೆಂಬಲಿಗ ಬುದ್ದಿಜೀವಿಗಳು ನಮ್ಮ ಹಿಂದೂ ಸಂಪ್ರದಾಯಗಳನ್ನು ವೈಚಾರಿಕತೆಯ ಹೆಸರಿನಲ್ಲಿ ಸದಾ ಟೀಕಿಸುತ್ತಲೇ ಇರುತ್ತಾರೆ?

ಪ್ರತೀ ವರ್ಷ ಹಿಂದೂಗಳ ಹಬ್ಬ ರಾಮನವಮಿಯಂದು ಮನೆಗಳಲ್ಲಿ, ದೇವಾಲಯಗಳಲ್ಲಿ, ರಸ್ತೆಗಳಲ್ಲಿ ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ಮಾಡಿ ಎಲ್ಲರೊಂದಿಗೆ ಹಂಚಿಕೊಂಡು ಸೇವಿಸುತ್ತೇವೆ. ಬೇಸಿಗೆಯ ಸುಡುವ ಬಿಸಿಲಿಗೆ ತಂಪಾಗಲು ಆ ಆಚರಣೆ ಕೂಡಾ ಸಹಕಾರಿ. ನೀವು ರಾಮನನ್ನು ಅಥವಾ ರಾಮನವಮಿ ಹಬ್ಬದ ಆಚರಣೆಯ ಹಿಂದಿನ ವೈಚಾರಿಕತೆಯನ್ನು ನಂಬಿ ಅಥವಾ ಬಿಡಿ. ಅಂದು ನೀವು ಕುಡಿಯುವ ಪಾನಕ, ಮಜ್ಜಿಗೆ, ಕೋಸಂಬರಿಗಳು ಆ ಬೇಸಿಗೆಯ ದಾಹವನ್ನಂತೂ ನೀಗಿಸಿಯೇ ನೀಗಿಸುತ್ತವೆ. ಅದರ ಹಿಂದಿನ ವೈಚಾರಿಕತೆ, ವೈಜ್ಞಾನಿಕತೆ ಎಲ್ಲವನ್ನೂ ತಿಳಿದು ಸೇವಿಸುವವರಿಗೂ, ತಿಳಿಯದೆ ಸೇವಿಸುವವರಿಗೂ ಯಾವುದೇ ಭೇದಭಾವವೂ ಇಲ್ಲದಂತೆ ಒಂದೇ ರೀತಿಯ ಪರಿಣಾಮ ಬೀರುತ್ತದೆ. ಆದರೂ ಏಕೆ ಕೆಲ ಸ್ವಘೋಷಿತ ಜಾತ್ಯತೀತ ಬುದ್ದಿಜೀವಿಗಳು ನಮ್ಮ ಹಿಂದೂ ಆಚರಣೆಗಳನ್ನು ಪದೇ ಪದೇ ವೈಚಾರಿಕತೆಯ ಹೆಸರಿನಲ್ಲಿ ವ್ಯಂಗ್ಯವಾಡುತ್ತಾರೆ?

ಚಲಿಸುವ ಬೆಂಕಿ ಚರ್ಮವನ್ನು ಸುಡುವುದಿಲ್ಲ. ಕೆಂಡ ಹಾಯುವಾಗ ಜನರು ಚಲಿಸುತ್ತಾರೆ. ಆದ್ದರಿಂದ ಕೆಂಡ ಹಾಯುವವರ ಕಾಲು ಸುಡುವುದಿಲ್ಲ. ಜೊತೆಗೆ ಆ ಆಚರಣೆಯ ಹಿಂದೆ ಕೂಡಾ ಒಂದಷ್ಟು ವೈಚಾರಿಕ ಕಾರಣಗಳು ಇದ್ದೇ ಇರಬಹುದು. ಇತ್ತೀಚಿನ ದಿನಗಳಲ್ಲಿ ಆಯೋಜಕರುಗಳ ನಿರ್ಲಕ್ಷ್ಯತೆಯಿಂದಾಗಿ ಕೆಂಡ ಹಾಯುವಾಗ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ. ಇವೆಲ್ಲಾ ಗೊತ್ತಿದ್ದೂ ಕೆಂಡ ಹಾಯುವ ಪದ್ಧತಿಯೇ ಒಂದು ಮೂಢನಂಬಿಕೆ ಎಂದು ಏಕಪಕ್ಷೀಯವಾಗಿ ಮುಖ್ಯಮಂತ್ರಿಗಳ ಕೆಲ ಆತ್ಮೀಯ ಬುದ್ದಿಜೀವಿಗಳ ತಂಡ ಅದು ಹೇಗೆ ನಿರ್ಧರಿಸುತ್ತದೆ?

ಮಳೆ ಬಂದಾಗ ರೈತರ ಹೊಲಗಳೂ ಸೇರಿದಂತೆ ಎಲ್ಲೆಡೆ ಕಪ್ಪೆಗಳು ಹಿಂಡು ಹಿಂಡಾಗಿ ವಟಗುಟ್ಟುವುದು ಸಾಮಾನ್ಯ. ಕಪ್ಪೆಗಳು ನಿರಂತರವಾಗಿ ವಟಗುಟ್ಟಿದವೆಂದರೆ ವ್ಯಾಪಕವಾಗಿ ಮಳೆಯಾಗುತ್ತಿದೆ, ಮುಂದೆ ನಮ್ಮ ನೆಲ ಸಮೃದ್ಧಿಯಾಗುತ್ತದೆ ಎಂದೇ ಅರ್ಥ. ಹಾಗಾಗಿ ಕಪ್ಪೆಗಳು ವಟಗುಟ್ಟುವಿಕೆ ಸಮೃದ್ಧಿಯ ಸಂಕೇತ. ಕಾಲಕ್ಕೆ ಸರಿಯಾಗಿ ಮಳೆ ಬೀಳದಿದ್ದರೆ ಕಪ್ಪೆಗಳು ವಟಗುಟ್ಟುವುದಿಲ್ಲ. ಆಗ ನಮ್ಮ ಅನ್ನದಾತನಿಗೆ ನೆಮ್ಮದಿಯಿಲ್ಲ. ಅದೇ ಕಾರಣಕ್ಕೆ ಒಮ್ಮೊಮ್ಮೆ ಬರ ಬರುವ ಸಾಧ್ಯತೆ ಕಾಣಿಸಿದಾಗ ಕಪ್ಪೆಗಳು ಒಂದಾಗಿ ಅವುಗಳ ಸಂಖ್ಯೆ ಹೆಚ್ಚಾಗಿ ಎಲ್ಲೆಡೆ ವಟಗುಟ್ಟಲಿ ಎಂದು ಸಾಂಕೇತಿಕವಾಗಿ ಕಪ್ಪೆಗಳ ಮದುವೆ ಮಾಡುವ ಸಂಪ್ರದಾಯ ಕೆಲವು ಭಾಗದ ಹಳ್ಳಿಗರಲ್ಲಿ ಹುಟ್ಟಿಕೊಂಡಿರಬಹುದು. ಹಾಗಾದರೆ ಕಪ್ಪೆಗಳ ಮದುವೆ ಮಾಡುವ ಆಚರಣೆಯಲ್ಲೂ ಒಂದೇನೋ ವೈಚಾರಿಕತೆ ಇದೆ ಎಂದೇ ಆಯಿತಲ್ಲವೇ? ಅದೇನನ್ನೂ ವಿಚಾರಿಸದೆ ಎಲ್ಲೋ ಬೆಂಗಳೂರಿನಲ್ಲಿ ಸರ್ಕಾರೀ ಪ್ರಶಸ್ತಿಗಳಿಗಾಗಿ ಚಾಪೆ ಹಾಸಿ ಕುಳಿತಿರುವ ವಿಚಾರವಾದಿಗಳು ಆ ಆಚರಣೆಯನ್ನು ವ್ಯಂಗ್ಯವಾಡುವುದು, ಮೌಢ್ಯವೆಂದು ಹೀಯಾಳಿಸುವುದು ಎಷ್ಟು ಸರಿ?

ಇದಕ್ಕಿಂತಲೂ ವಿಚಿತ್ರವೆಂದರೆ ದೇಹದ ಶೇ.60 ಕ್ಕೂ ಹೆಚ್ಚು ಭಾಗವನ್ನು ಬೇವಿನ ಎಲೆಗಳಿಂದ ಮುಚ್ಚಿಕೊಂಡರೂ ಆ ಆಚರಣೆಗೆ ಬೆತ್ತಲೆ ಸೇವೆ ಎನ್ನುವ ಹೆಸರು ನೀಡಿ ಎಲ್ಲೋ ಒಂದೆರಡು ಕಡೆ ನಡೆಯುವ ಆ ಆಚರಣೆಯ ಹೆಸರಿನಿಂದಲೇ ಇಡೀ ಹಿಂದೂ ಸಂಪ್ರದಾಯಗಳನ್ನೇ ಮೌಢ್ಯವೆಂಬಂತೆ ಬಿಂಬಿಸುತ್ತಿರುವುದು! ಹರಕೆಯ ಹೆಸರಿನಲ್ಲಿ ದೇಹದ ಶೇ.60 ಕ್ಕೂ ಹೆಚ್ಚು ಭಾಗವನ್ನು ಮುಚ್ಚಿಕೊಳ್ಳುವುದು ಬೆತ್ತಲೆ ಸೇವೆಯಾದರೆ ಸ್ವೇಚ್ಛೆಯ ಹೆಸರಿನಲ್ಲಿ, ಫ್ಯಾಶನ್ ಹೆಸರಿನಲ್ಲಿ ದೇಹದ ಶೇ.90 ಕ್ಕೂ ಹೆಚ್ಚು ಭಾಗವನ್ನು ಬಿಚ್ಚಿ ತೋರಿಸುವುದು ಕೂಡಾ ಬೆತ್ತಲೆ ಸೇವೆಯೇ ಅಲ್ಲವೇ?ಹಾಗಾದರೆ ಒಂದಕ್ಕೆ ಮೌಢ್ಯವೆನ್ನುವ ಕಳಂಕ ಹೊರಿಸುವುದು ಹಾಗೂ ಇನ್ನೊಂದಕ್ಕೆ ಕಾನೂನಿನ ರಕ್ಷಣೆ ನೀಡುವುದು ಕೂಡಾ ತಪ್ಪಲ್ಲವೇ?

ಬೇವಿನ ಮರದ ಭಾಗಗಳಾದ ಎಲೆ,ತೊಗಟೆ,ಹೂ,ಹಣ್ಣು,ಕಡ್ಡಿ,ಬೀಜ,ಬೇರುಗಳು ಹಲವಾರು ಔಷಧೀಯ ಗುಣಗಳನ್ನು ಮೈದುಂಬಿಕೊಂಡಿವೆ. ಬೇವಿನ ಮರದಲ್ಲಿ ಸುಮಾರು ನೂರಕ್ಕೂ ಹೆಚ್ಚು ರೋಗನಿವಾರಕ ಗುಣಗಳಿವೆ ಎನ್ನುವುದು ಸಂಶೋಧನೆಗಳಿಂದಲೇ ತಿಳಿದುಬಂದಿವೆ. ಅನಾದಿ ಕಾಲದಿಂದಲೂ ಬೇವಿನ ಎಣ್ಣೆಯನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾ ಬಂದಿದ್ದೇವೆ. ಹಲ್ಲುಜ್ಜುವ ಪೇಸ್ಟ್ ಗಳಿಂದ ಹಿಡಿದು ಮೈ ಉರಿ,ತುರಿಕೆ,ಕಜ್ಜಿ ಮುಂತಾದ ಹಲವು ಚರ್ಮದ ಖಾಯಿಲೆಗಳಿಗೆ ವೈಜ್ಞಾನಿಕವಾಗಿಯೇ ಬೇವನ್ನು ಉಪಯೋಗಿಸುತ್ತಾ ಬಂದಿದ್ದೇವೆ.ಇಷ್ಟೆಲ್ಲಾ ತಿಳಿದೂ ಮೈ ಮೇಲೆ ಬೇವಿನ ಎಲೆ ಕಟ್ಟಿಕೊಳ್ಳುವುದು ಮೂಢ ನಂಬಿಕೆ ಎಂದು ಹೇಳುತ್ತಾ ಅದೇ ಕಾರಣವನ್ನು ತೋರಿಸಿ ಸಮಸ್ತ ಹಿಂದೂ ಸಮಾಜವನ್ನು ಕಳಂಕಿತವಾಗಿಸುವುದು ಕೂಡಾ ತಪ್ಪಲ್ಲವೇ?

ಸರ್ಕಾರದ ಕೆಲ ಎಡಗೈ ಬಂಟರುಗಳು ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ‘ಹೋಮ ಹವನಗಳಿಂದಲೇ ದೇಶದಲ್ಲಿ ಆಹಾರದ ಅಭಾವವುಂಟಾಯಿತು’ ಎನ್ನುವಂತಹಾ ಪಠ್ಯಗಳನ್ನು ರಚಿಸುವ ಮೂಲಕ ಮಕ್ಕಳಲ್ಲೂ ಹಿಂದೂ ಆಚರಣೆಗಳ ವಿರುದ್ಧ ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡುವ ಮುಂಚೆ ಹೋಮ ಹವನಗಳಿಂದ ಬೇರೆ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಡಿಸಿಕೊಳ್ಳಲಾಗಿತ್ತೆ? ಕೇವಲ ಒಂದು ಸೊಳ್ಳೆ ಬತ್ತಿ ಹಚ್ಚಿದರೆ ಅದು ಒಂದು ರಾತ್ರಿಯಿಡೀ ಸೊಳ್ಳೆಗಳಿಂದ ಮುಕ್ತಿ ನೀಡಬಹುದಾದರೆ ಹಲವು ನಿರ್ದಿಷ್ಟ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೋಮದ ಹೆಸರಿನಲ್ಲಿ ಉರಿಸಿದಾಗ ವಾತಾವರಣದಲ್ಲಿ ಏನೇನು ಬದಲಾವಣೆಯಾಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಿದ ವರದಿಗಳು ಹೋಮ ಹವನಗಳು ಮೌಢ್ಯ ಎಂದು ಸಾರಾಸಗಟಾಗಿ ಹೀಗಳೆಯುವ ಎಡಗೈ ಬಂಟರುಗಳ ಬಳಿ ಇದೆಯೇ?

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಸಂದರ್ಭಗಳಲ್ಲೇ ನಾವು ಸಾಗರದಲ್ಲಿ ಉಬ್ಬರಗಳನ್ನು ಮತ್ತು ಇಳಿತಗಳನ್ನು ಹೆಚ್ಚಾಗಿ ಕಾಣುತ್ತೇವೆ. ಶೇ.75 ರಷ್ಟು ನೀರಿರುವ ಇಡೀ ಭೂಮಿಯ ಮೇಲೆ ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಪ್ರಭಾವ ಬೀರುತ್ತವೆ ಎಂದ ಮೇಲೆ ಅದೇ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ಮನುಷ್ಯನ ಮೇಲೆ ಅವು ಯಾವ ಪರಿಣಾಮವನ್ನೂ ಬೀರುವುದಿಲ್ಲವೇ? ವಿಚಾರ ಇಷ್ಟು ಸ್ಪಷ್ಟವಿರುವಾಗ ಹುಣ್ಣಿಮೆ, ಅಮಾವಾಸ್ಯೆಗಳನ್ನು ವಿಶೇಷ ದಿನಗಳನ್ನಾಗಿ ಪರಿಗಣಿಸಿದ ಹಿಂದೂಗಳ ಮೇಲೆ ಸರ್ಕಾರೀ ಕೃಪಾ ಪೋಷಿತ ವಿಚಾರವಾದಿಗಳ ವಿಕೃತ ಕಣ್ಣು ಏಕೆ? ಹಿಂದೂ ಪಂಚಾಂಗದ ಬಗ್ಗೆ ಅವರುಗಳ ಕಾಕದೃಷ್ಟಿ ಏಕೆ?

ಹೀಗೆ ಏಕಪಕ್ಷೀಯವಾಗಿ ಹಿಂದೂ ಆಚರಣೆಗಳನ್ನು ಟೀಕಿಸುತ್ತಲೇ, ವ್ಯಂಗ್ಯ ಮಾಡುತ್ತಲೇ, ಯಾವುದೇ ಸಂಶೋಧನೆಯನ್ನೂ ನಡೆಸದೆ ಆ ಆಚರಣೆಗಳನ್ನು ಮೂಢ ನಂಬಿಕೆ ಎನ್ನುತ್ತಲೇ ಇರುವ ಬುದ್ಧಿಜೀವಿಗಳನ್ನು, ಪ್ರಗತಿಪರರನ್ನು, ಸ್ವ-ಘೋಷಿತ ವಿಚಾರವಾದಿಗಳನ್ನು ಯಾವುದು ಮೌಢ್ಯ, ಯಾವುದು ಮೌಢ್ಯವಲ್ಲ ಎಂದು ತೀರ್ಮಾನಿಸಲು ನಿಯೋಜಿಸಿದ, ಅವರಿಗೆ ಅರ್ಹತೆ ಮೀರಿದ ಸ್ಥಾನ-ಸನ್ಮಾನಗಳನ್ನು ನೀಡಿದ ಮುಖ್ಯಮಂತ್ರಿಗಳಿಗೆ “ನೀವು ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಪ್ರಚಾರಕ್ಕೆ ಹೋಗಿದ್ದರ ಹಿಂದಿನ ವೈಜ್ಞಾನಿಕ ಕಾರಣವೇನು” ಎಂದು ಯಾರಾದರೂ ಪ್ರಶ್ನಿಸಿದ್ದರೆ ಅದರಲ್ಲಿ ಯಾವ ತಪ್ಪೂ ಇಲ್ಲ.

ಗೋಡೆಗೆ ಚೆಂಡು ಬೀಸಿ ಎಸೆದಾಗ ಆ ಚೆಂಡು ತಿರುಗಿ ನಿಮ್ಮ ಕಡೆ ಬಂದರೆ ಅದು ಆ ಚೆಂಡಿನ ತಪ್ಪಲ್ಲ. ಆದರೆ ಅದು ನನ್ನ ಕಡೆಗೇ ಏಕೆ ತಿರುಗಿ ಬರುತ್ತಿದೆ ಎಂದು ಕೇಳಿದರೆ ಅದು ನಿಮ್ಮ ತಪ್ಪು. ಹಾಗೆ ಬರುವ ಚೆಂಡನ್ನು ಕ್ಯಾಚ್ ಹಿಡಿಯುತ್ತೀರೋ ಅಥವಾ ಮುಖಕ್ಕೆ ಬಡಿಸಿಕೊಳ್ಳುತ್ತೀರೋ ಎನ್ನುವುದು ನಿಮಗೆ ಬಿಟ್ಟಿದ್ದು.

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!