ನನ್ನ ಮನದನ್ನೆ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ಎರಡು ಮೀನುಗಳನ್ನು ಒಂದು ಬೌಲ್‍ನಲ್ಲಿ ಇರುವ ತಿಳಿನೀರಿನೊಂದಿಗೆ ಉಡುಗೊರೆಯಾಗಿ ನೀಡಿದ್ದಳು. ಒಂದು ಸಣ್ಣ ಗಾತ್ರದ ಹಳದಿ ಮೀನಾದರೆ ಮತ್ತೊಂದು ಕೇಸರಿ ಬಣ್ಣದ ಸ್ವಲ್ಪ ದೊಡ್ಡ ಗಾತ್ರದ್ದಾಗಿತ್ತು. ಅದನ್ನು ನೋಡಿ ಅಚ್ಚರಿಯೊಂದಿಗೆ ಹೇಳಿದೆ ಈ ಹಳದಿ ಮೀನು ನೀನು ಕೇಸರಿಯದ್ದು ನಾನು ಎಂದು. ಮನೆಗೆ ಅವೆರಡನ್ನು ಕೊಂಡೊಯ್ದ ನಾನು ಅವುಗಳನ್ನು ನೋಡಿ ಸಂತಸದೊಂದಿಗೆ ಅವುಗಳಿಗೆ ಆಹಾರ ಹಾಕಿ ರಾತ್ರಿ ನಿದ್ರೆಗೆ ಜಾರಿದೆ. ಮನೆಯವರು ಯಾರು ಕೊಟ್ಟಿದ್ದು ಎಂದು ಕೇಳಿದ್ದಕ್ಕೆ ನಾನೇ ಕೊಂಡು ತಂದೆ ಎಂದೆ. ಆದರೂ ಅಪ್ಪ, ಅಮ್ಮ, ಅಜ್ಜಿ ಯಾರೂ ನಂಬಿರಲಿಲ್ಲ. ಮನೆಯಲ್ಲಿ ಅವಳ ವಿಚಾರ ಗೊತ್ತಿದ್ದರಿಂದಾಗಿ ಅವರಿಗೆ ಅವಳೇ ನೀಡಿರಬಹುದು ಎಂಬ ಊಹೆ ಇತ್ತು. ಮತ್ತು ಅದು ನಿಜವೂ ಆಗಿತ್ತು. ಮರು ದಿನ ಬೆಳಿಗ್ಗೆ ಎದ್ದು ನೋಡಿದರೆ ಕೇಸರಿ ಬಣ್ಣದ ಮೀನು ಆ ಹೂಜಿಯಲ್ಲಿರಲಿಲ್ಲ. ನಾನು ಗಾಬರಿಗೊಂಡು ಅಮ್ಮನಿಗೆ ಕೇಳಿದೆ. ಅವರೂ ಗೊತ್ತಿಲ್ಲ ಎಂದರು. ಆಸು ಪಾಸಿನ ಜಾಗವನ್ನು ಗಮನಿಸಿದೆ, ಸುತ್ತಮುತ್ತಲಿನ ನೆಲವನ್ನು ನೋಡಿದೆ. ಕೇಸರಿ ಮೀನು ಸತ್ತು ಬಿದ್ದಿತ್ತು. ಅವಳಿಗೆ ಕರೆ ಮಾಡಿ ಈ ವಿಷಯ ಆತಂಕದಿಂದ ಹೇಳಿದೆ ದನಿ ಬಿಕ್ಕಳಿಸುತ್ತಿತ್ತು. ಅವು ಕೇವಲ ಮೀನುಗಳಾಗಿರಲಿಲ್ಲ ನನ್ನ ವರ್ಣನೆಯ ಅನುಸಾರ. ಅದಕ್ಕೆ ತಕ್ಷಣದ ಅವಳ ಪ್ರತಿಕ್ರಿಯೆ ಏನಾಗಿತ್ತು ಗೊತ್ತಾ? `ಹೌದಾ ಛೇ! ಹೀಗಾಗ್ಬಾರ್ದಿತ್ತು. ನಾನ್ ಹೇಳೋ ಮಾತನ್ನು ನಡೆಸಿಕೊಡ್ತೀಯ ಅಂತ ಮಾತು ಕೊಡು’ಎಂದಳು. ನಾನು ಮಾತು ಕೊಟ್ಟೆ. `ಆ ಉಳಿದಿರುವ ಮೀನನ್ನು ನೆಲಕ್ಕೆ ಕೆಡವಿ ಸಾಯಿಸಿ ಬಿಡು’ ಎಂದಳು. ಅಬ್ಬಾ ಇದೆಂಥಹಾ ಮಾತು ಇವಳದು ಎಂದುಕೊಂಡೆ.`It was like a metaphor,And it was a strong message of love from her side’. ಆ ಮಾತಿನಿಂದ ಅವಳ ಪ್ರೀತಿ ಎಂಥಹ ಅಗಾಧ ಎಂಬುದು ಸ್ಪಷ್ಟವಾಯಿತು. ಆದರೆ ನಾನು ಅವಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲ. ಏಕೆಂದರೆ ಅದಕ್ಕೂ ಕಾರಣ ಅವಳ ಮೇಲಿನ ಪ್ರೀತಿ. ಆ ಹಳದಿ ಮೀನು ಒಂಟಿಯಾಗಿ ದೀರ್ಘ ಕಾಲದವರೆಗೂ ಬದುಕಿತು.
ರಜತ್ ರಾಜ್ ಡಿ.ಹೆಚ್.
ಮಡಿಕೇರಿ