ಅಂಕಣ ಪ್ರಚಲಿತ

ಜಾತ್ಯಾತೀತ ಸರ್ಕಾರವೋ ಜಾತಿ-ಅತೀತ ಸರ್ಕಾರವೋ?

ಕರ್ನಾಟಕ ರಾಜ್ಯವನ್ನು ಕಳೆದ ಐದು ವರ್ಷ ಸರ್ಕಾರ ಅಹಿಂದ ಮತ್ತು ಜಾತ್ಯಾತೀತ ಸರ್ಕಾರದ ಹೆಸರಲ್ಲಿ ನಮ್ಮನ್ನು ಆಳಿತು. ನುಡಿದಂತೆ ನಡೆಯದ ಸರ್ಕಾರ ಜನರನ್ನು ಒಗ್ಗೂಡಿಸುವ ಬದಲು ಜನರಲ್ಲಿ ಒಡಕು ತಂದದ್ದೆ ಜಾಸ್ತಿ.  ಸಾಮಾಜಿಕ ನ್ಯಾಯದಲ್ಲಿ ಸರ್ಕಾರವೆಂದು ಹೇಳಿದವರು ಸಾಮಾಜಿಕ ನ್ಯಾಯದ ಬುನಾದಿಯಲ್ಲಿ ಸಮಾಜವನ್ನು ಸಮಷ್ಠಿಯಲ್ಲಿ ಕಟ್ಟುವ ಬದಲು ಸಮಾಜವನ್ನು ಒಡೆದು ಆಳುವುದು ಯಾವ ನ್ಯಾಯ? ಅಹಿಂದದ ಹೆಸರಲ್ಲಿ ಸಮಾಜವನ್ನು ಒಡೆದು ಆಳಿದರೆ ಅದು ಸಾಮಾಜಿಕ ನ್ಯಾಯವೇ?

ಈ ಸರ್ಕಾರಗಳು ನಮ್ಮಲ್ಲಿನ ಸಾಮರಸ್ಯವನ್ನು ಹಾಳು ಮಾಡಲು ಹಾಕುವ ಯೋಜನೆಗಳು ಒಂದಾ ಎರಡಾ? ಈ ಸರ್ಕಾರ ಆಡಳಿತಕ್ಕೆ ಬಂದ ಕೂಡಲೆ ಜಾತಿಗಣತಿ ಆರಂಭಿಸಿತು. ಈ ಜಾತಿಗಣತಿಯಿಂದ ಸಾರ್ವಜನಿಕರಿಗೆ ಒಂದು ರುಪಾಯಿಯ ಉಪಯೋಗವಿಲ್ಲ. ಆದರು ಸರ್ಕಾರ ಜಾತಿಗಣತಿಗಾಗಿ ಕೋಟಿ ಕೋಟಿ ಖರ್ಚು ಮಾಡುತ್ತದೆ! ಜಾತಿಗಣತಿ ಮಾಡಿಸಿದ ಸರ್ಕಾರ ಮುಂದುವರೆದು, ಶಾಲೆಗಳ ಕೆಲ ಜಾತಿಗಳಿಗೆ ಶೂಗಳನ್ನು ನೀಡಿ ಉಳಿದವರಿಗೆ ಕೊಡುವುದಿಲ್ಲ. ಸಮಾನತೆಯ ಸಮವಸ್ತ್ರ ಹಾಕಿಕೊಂಡು ಜನಗಣಮನ ಹೇಳುವ ಪುಟ್ಟ ಮನಸ್ಸುಗಳಲ್ಲಿ ತನ್ನ ಸ್ನೇಹಿತ/ತೆ ಯಾವ ಜಾತಿ ಎಂದು ಯೋಚಿಸಿರುವುದಿಲ್ಲ. ಆದರೆ ನಿಮ್ಮ ಭಾಗ್ಯಗಳು ವಿದ್ಯಾರ್ಥಿಗಳ ಬಳಿ ಅನಾವಶ್ಯವಾಗಿ ಜಾತಿಯ ವಾಸನೆಯನ್ನು ಪಸರಿಸಿತು. ಮುಗ್ಧ ಮನಗಳಲ್ಲಿ ಜಾತಿಯ ವಿಷಬೀಜ ಬಿತ್ತಿತು. ಮುಂದೆ ಈ ಜಾತಿಯ ಬೀಜವೇ ಸಮಾಜಕ್ಕೆ ವಿಷ ಬೀಜವಾಗಿ ಮೊಳಕೆಯೊಡೆದು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಬಹುದಲ್ಲವೆ? ತಮ್ಮ ಭಾಗ್ಯಗಳು ವಿದ್ಯಾರ್ಥಿಗಳಲ್ಲಿ ತಾರತಮ್ಯ ತರಲಿಲ್ಲವೆ? ಈ ತಾರತಮ್ಯ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯದ ಮೊದಲ ಪಾಠವೇ?

ವಿದ್ಯಾರ್ಥಿಗಳನ್ನು ದಾಟಿ  ಸದಾಶಿವ ಆಯೋಗ ಜಾರಿ ವಿಚಾರವನ್ನು ಮುಂದೆ ತಂದು ಒಳ ಮೀಸಲಾತಿ ಹೆಸರಲ್ಲಿ ದಲಿತರನ್ನು ಎರಡು ಭಾಗಮಾಡಿ, ದಲಿತಮುಂಖಡರನ್ನು ಎರಡು ಭಾಗಮಾಡಿ; ಪರ ವಿರೋಧ ಹುಟ್ಟು ಹಾಕಿದರಿ. ಇದರಿಂದ ಯಾರಿಗೆ ಲಾಭ? ‘ಸದಾಶಿವ ಆಯೋಗ’ ಕೊಡುವ ವರದಿಯನ್ನು ಒಪ್ಪುವುದು ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಆಯಿತು ದಲಿತರ ಒಳ ಮೀಸಲಾತಿ ವಿಚಾರದಲ್ಲಿ ಏನಾದರು ಜಾರಿಗೆ ತಂದರೋ ಇಲ್ಲ, ಬರಿ ಚರ್ಚೆಗೆ ಬಿಟ್ಟು ಅವರಲ್ಲಿ ವೈಮನಸ್ಸು ಮೂಡಿಸಿ ದಲಿತರನ್ನು ಮತ್ತಷ್ಟು ವಿಭಜಿಸಿದಿರಿ. ವಿದ್ಯಾರ್ಥಿಗಳು, ದಲಿತರ ನಂತರ ಅಂದಿನ ಸ್ಥಳಿಯ ಆಡಳಿತಗಳ ವಿರೋಧಿಗಳಾಗಿ ನಮ್ಮವರ ಮೇಲೆ ಆಕ್ರಮಣ ಮಾಡಿದ ಟಿಪ್ಪುಸುಲ್ತಾನ್ ಮತ್ತು ಬಹುಮನಿ ಸುಲ್ತಾನರ ಜಯಂತಿ ಮಾಡಿ ಹಿಂದುಗಳು ಮತ್ತು ಮುಸಲ್ಮಾನರ ನಡುವೆ ಬಿರುಕು ತರುತ್ತೀರಿ.

ಎಲ್ಲಾ ತರಹದ ಸಣ್ಣಸಣ್ಣ ವಿಭಜನೆಗಳನ್ನು ಮಾಡಿ ಯಶಸ್ವಿಯಾಗಿ ಸಾಧಿಸಿ ವಿಭಜನೆಗೆ ಸದಾ ಸಿದ್ದ ಸರ್ಕಾರವೆಂದು ತಿಳಿಸಲು ರಾಜ್ಯದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಲಿಂಗಾಯತ ಜಾತಿಯಲ್ಲಿ ಕೈ ಆಡಿಸಿ; ಅವರಲ್ಲಿ ವೀರಶೈವ ಮತ್ತು ಲಿಂಗಾಯತರಲ್ಲಿ ಒಡಕು ಮೂಡಿಸಿದಿರಿ. ಅವರನ್ನು ಹಿಂದು ಧರ್ಮದಿಂದ ದೂರಸರಿಯಿರಿ ನಿಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುತ್ತೇವೆ ಎಂದು ಹೇಳುತ್ತೀರಿ. ರಾಜ್ಯದಲ್ಲಿನ ಹಿಂದು ಧರ್ಮದ ಅತಿಹೆಚ್ಚಿನ ಜನಸಂಖ್ಯೆಯಿರುವ ಲಿಂಗಾಯತರು ಅದ್ಹೇಗೆ ಅಲ್ಪಸಂಖ್ಯಾತರಾಗಲು ಹೇಗೆ ಸಾಧ್ಯ? ಲಿಂಗಾಯತ-ವೀರಶೈವ ಎಂದು ವಿಭಜನೆಗೊಳಿಸಿ ಸರ್ಕಾರ ಸಾಧಿಸಿದ್ದಾದರು ಏನು? ಶೂನ್ಯ ಸಂಪಾದನೆಗೆ ಸರ್ಕಾರ ಐದು ವರ್ಷಗಳು ಶ್ರಮಿಸಿದ್ದಾದರು ಏಕೆ ಎಂಬುದು ಮಾತ್ರ ಜನರಿಗಿರುವ ದೊಡ್ಡ ಪ್ರಶ್ನೆ?

ಇದು ಕೇವಲ ನಮ್ಮ ರಾಜ್ಯದ ಸಮಸ್ಯೆಯಲ್ಲ. ಭಾರತದಾದ್ಯಂತ ಸಣ್ಣದಾಗಿ ರಾಜಕೀಯ ಪಕ್ಷಗಳು ಇಂತಹ ಕೆಲಸ ಮಾಡುತ್ತಿವೆ. ಕೆಲ ಪಕ್ಷಗಳು ಹಿಂದು, ಮುಸ್ಲಿಮ್, ಕ್ರಿಸ್ತ ಎಂದು ವಿಭಜಿಸಿದರೆ, ಕೆಲ ಪಕ್ಷಗಳು ಜಾತಿಗಳನ್ನು ವಿಭಜಿಸಿ ಎತ್ತುಕಟ್ಟುತ್ತವೆ. ಗುಜರಾತನಲ್ಲಿ ಪಾಟೇಲ್ ಸಮುದಾಯ, ಮಹರಾಷ್ಟ್ರದಲ್ಲಿ ದಲಿತ ಮತ್ತು ಮರಾಠ ಗಲಾಟೆ, ಕರ್ನಾಟಕದಲ್ಲಿ ಲಿಂಗಾಯತ-ವೀರಶೈವ. ಹೀಗೆ ಒಂದೊಂದು ರಾಜ್ಯದಲ್ಲಿ ಅತಿ ಹೆಚ್ಚು ಮತದಾರರಿರುವ ಜಾತಿಗಳನ್ನು ಎತ್ತಿಕಟ್ಟಿ ಅಥವಾ ವಿಭಜಿಸಿ, ಮತಗಳ ವಿಭಜನೆಗಳಿಗೆ ಅಥವಾ ಮತಗಳ ಕೃಢಿಕರಣಕ್ಕೆ ನಮ್ಮನ್ನು ವಿಭಜಿಸಿ ನಮ್ಮಲ್ಲಿ ಕದನ ಮತ್ತು ಕಂದಕ ಸೃಷ್ಟಿಸಿ ರಾಜಕೀಯ ಮಾಡುವುದು ಇಂದಿನ ರಾಜಕೀಯದ ಹಾದಿಯಾಗಿದೆ. ಜಾತ್ಯಾತೀತದ ಹೆಸರಲ್ಲಿ ಜಾತಿಗಳ ಪುಷ್ಠಿಕರಣವೇ ರಾಜಕೀಯದ ಮುಖ್ಯ ಭೂಮಿಕೆಯಾಗಿದೆ. ಜಾತ್ಯಾತೀತ ಜಾತೀ-ಅತೀತವಾಗುತ್ತಿದೆ.

ಆಡಳಿತದ ಸಂಧ್ಯಾಕಾಲದಲ್ಲಿರುವ ಈ ಸರ್ಕಾರವಂತು ಜಾತಿಗಳ ಹೆಸರಲ್ಲಿ ಭಾಗ್ಯಗಳ ಹೆಸರಲ್ಲಿ ನಮ್ಮಲ್ಲಿ ಬಹುದೊಡ್ಡ ಭಿನ್ನಮತ ಮೂಡಿಸಲು ಪ್ರಯತ್ನಿಸಿತು. ಕರ್ನಾಟಕದ ಜನ ಪ್ರಜ್ಞಾವಂತರಾಗಿದ್ದು ಆದಷ್ಟು ಅದಕ್ಕೆ ಸೊಪ್ಪು ಹಾಕದೆ ವಿಭಜಕರಿಗೆ ಉಪ್ಪುತಿನ್ನಿಸಿದ್ದಾರೆ. ಮುಂಬರುವ ಸರ್ಕಾರವಾದರು ಜನರನ್ನು ಜಾತಿ ಮತ ಧರ್ಮಗಳ ಆದಾರದಲ್ಲಿ ಆಳದೆ ಅಭಿವೃದ್ಧಿಪರ ನಿಲ್ಲಲಿ. ರಾಜ್ಯವನ್ನು ಭಾರತದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲಿ ಎಂಬುದಷ್ಟೆ ಕನ್ನಡಿಗರ ಬೇಡಿಕೆ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಪ್ರಣಾಲಿಕೆಗಳನ್ನು ಪಕ್ಷಗಳು ತರಲಿ, ಮತ್ತದೆ ಜಾತಿಗಳ ಓಲೈಕೆಯ ರಾಜಕಾರಣಕ್ಕೆ ಪೂರ್ಣವಿರಾಮ ಹಾಕಲಿ.

ಯುವ ಸಮೂಹವೇ ಹೆಚ್ಚಿರುವ ರಾಜ್ಯದಲ್ಲಿ ಓಲೈಕೆ ರಾಜಕಾರಣ ನಿಲ್ಲದಿದ್ದರೆ ಬಹಳ ಅನಾನುಕೂಲವಾಗುತ್ತವೆ. ಎಷ್ಟು ದಿನ ಯುವಕರು ದುಡಿಯದೆ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ತಿಂದು ಕಾಲ ಕಳೆಯಬೇಕು? ಉದ್ಯೋಗದ ಸೃಷ್ಟಿಯೊಂದಿಗೆ ಪ್ರಗತಿಯತ್ತ ಕೃಷಿಸಾಗಬೇಕು ಆಗ ಸಮತೋಲಿನ ಅಭಿವೃದ್ಧಿಯಾಗುವುದು. ಕೃಷಿ ಮತ್ತು ಖಾಸಗಿ ಉದ್ಯಮ ಎರಡನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮ ಆಶಯ. ಮುಂಬರುವ ಸರ್ಕಾರಗಳು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿಟ್ಟಿನಲ್ಲಿ ಹೆಜ್ಜೆಹಾಕಲಿ, ವಿಭಜನೆಗಳು ಸಾಕಾಗಿವೆ ವಿಕಾಸ ಬೇಕಿದೆ.

 – ಪುನೀತ್.ಜಿ.ಕೂಡ್ಲೂರು.

Facebook ಕಾಮೆಂಟ್ಸ್

ಲೇಖಕರ ಕುರಿತು

Puneeth G

ಎಂ.ಸಿ.ಎ. ವಿದ್ಯಾಭ್ಯಾಸ ಮುಗಿಸಿ ಸೀನಿಯರ್ ಸಾಫ್ಟ್’ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲೇಖನಗಳನ್ನು ಕಳೆದ 2 ವರ್ಷಗಳಿಂದ ಬರೆಯುತ್ತಿದ್ದು ಲೇಖನಗಳು ರಾಷ್ಟ್ರೀಯ ಹಿತಾಸಕ್ತಿಯಿಂದಕೂಡಿರುತ್ತದೆ. ದೇಶದಲ್ಲಿನ ಸ್ಥಳಿಯ ವಿದ್ಯಮಾನಗಳ ಆಗುಹೋಗುಗಳನ್ನು ವಿಮರ್ಶಿಸಿ ಬರೆಯುವುದು ಇವರ ಹವ್ಯಾಸ. ಇವರ ಲೇಖನಗಳು ಚಾಮರಾಜನಗರದ ರೇಷ್ಮೆನಾಡು, ಮೈಸೂರಿನ ಜನಮನ, ಮೈಸೂರು ವಿಜಯ, ತ್ರಿವೇಣಿಸಂಗಮ ಹಾಗೂ ಹಾಸನದ ಜನಮನದಲ್ಲಿ ಪ್ರಕಟಗೊಂಡಿರುತ್ತದೆ. ‘ವಿದ್ಯಾಸ್ಪಂದನ’ವೆಂಬ ಸಂಸ್ಥೆಯನ್ನು ಕಟ್ಟಿ ಅದರಲ್ಲಿ ಸ್ಥಳೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಗಳಿಗೆ ಪ್ರೋತ್ಸಾಹ ಮಾಡುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!