ಅಂಕಣ ಪ್ರಚಲಿತ

ಅಧಿಕಾರದಾಸೆಗೆ ಒಡೆದಾಳುವ “ಸಿದ್ಧ-ಹಸ್ತ”ರು!

ಧರ್ಮ – ಭಾರತದ ಮೂಲ ಸತ್ವ, ಅಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿ ರೂಪಗೊಂಡಿವೆ. ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ. ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್ ನಂತಹ ಧರ್ಮಗಳು ಹಾಗೂ ರಾಮಾಯಣ, ಮಹಾಭಾರತದಾದಿಯಾಗಿ ಹಲವಾರು ಧಾರ್ಮಿಕ ನೈಜ ಘಟನೆಗಳು, ಆರ್ಯ ಸಮಾಜ, ದ್ವೈತ, ಅದ್ವತ, ಶೈವ, ವೀರಶೈವ, ವೈಷ್ಣವ, ಶಕ್ತಿ, ಸ್ಮಾರ್ಥ, ಬ್ರಹ್ಮ ಸಮಾಜ, ಲಿಂಗಾಯತ ನಂತಹ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಧಾರ್ಮಿಕ ಸುಧಾರಕರು ಕಾಲಕಾಲಕ್ಕೆ ಅವತರಿಸಿ ಧರ್ಮದುದ್ಧಾರ ಮಾಡಿ ಹೋಗಿದ್ದಾರೆ. ತಮ್ಮ ವಿಶಿಷ್ಠ ಧಾರ್ಮಿಕ ವಿಚಾರಗಳಿಂದ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರೂ ಭಾರತಕ್ಕೆ ಆಧ್ಯಾತ್ಮದ ಮೂಲಕ ಜಗತ್ತಿನ ಗುರುವಾಗಬಲ್ಲ ಶಕ್ತಿ ಇದೆ ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರ್ನಾಟಕದಲ್ಲಿಯೂ ಶಂಕರಾಚಾರ್ಯ, ಮದ್ವಾಚಾರ್ಯ, ರಾಮಾನುಜಾಚಾರ್ಯ, ಬಸವಾದಿ ಶರಣರು, ಕನಕದಾಸ, ಪುರಂದರದಾಸ, ಸರ್ವಜ್ಞ, ರಾಘವೇಂದ್ರ ಸ್ವಾಮಿಗಳಂತಹ ಹಲವಾರು ಧಾರ್ಮಿಕ ಸುಧಾರಕರು ಕಾಲಕಾಲಕ್ಕೆ ಧರ್ಮದ ಜಾಗೃತಿ ಮೂಡಿಸಿ ಜನರ ಮೌಡ್ಯತೆಯನ್ನು ಹೊಗಲಾಡಿಸಿದ್ದಾರೆ. ಇವಲ್ಲದೇ ವಿದೇಶದಿಂದ ಬಂದ ಕ್ರಿಶ್ಚಿಯನ್, ಇಸ್ಲಾಂ, ಪಾರ್ಸಿ ಧರ್ಮಗಳಿಗೂ ಕೂಡಾ ಭರತ ಖಂಡದಲ್ಲಿ ಭವ್ಯ ಇತಿಹಾಸವಿದೆ.

ಅತೀವ ಧಾರ್ಮಿಕ ಭಾವನೆಗಳುಳ್ಳ ಭಾರತದಲ್ಲಿ ವಾಯುವ್ಯದಿಂದ ಸುಮಾರು 300 ವರ್ಷಗಳ ಕಾಲ ಘೋರಿ, ಘಝನಿ, ತೈಮೂರ್ ನಂತಹ ಇಸ್ಲಾಮಿಕರ ಆಕ್ರಮಣ, ತದನಂತರ ಇನ್ನೇನೂ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಗ್ರೀಕರು, ಪೊರ್ಚುಗೀಸರು, ಡಚ್ಚರು, ಪ್ರೆಂಚರು ಮತ್ತು ಇಂಗ್ಲೀಷರ ಆಕ್ರಮಣ, ಮೇಕಾಲೆ ಮತ್ತು ಮಾಕ್ಸ್ ಮುಲ್ಲರ್ ನಂತಹ ಸೈದ್ಧಾಂತಿಕ ವಿಚಾರಹೀನರಿಂದ ಹಿಂದೂ ಧರ್ಮಕ್ಕೆ ಬಹುದೊಡ್ಡ ಕೊಡಲಿಪೆಟ್ಟು; ಇಷ್ಟೆಲ್ಲ ಆಕ್ರಮಣ, ಹೊಡೆತಗಳ ಹೊರತಾಗಿಯೂ ಆಳವಾಗಿ ಬೇರೂರಿದ್ದ ಹಿಂದೂಗಳ ಧಾರ್ಮಿಕ ಭಾವನೆಗಳು ಕೊಚ್ಚಿ ಹೋಗಿರಲಿಲ್ಲ. ಸ್ವಾಮಿ ವಿವೇಕಾನಂದರಿಂದ ಹಿಂದೂ ಧರ್ಮ ಮತ್ತೆ ವೈಭವಕ್ಕೆ ಮರಳುವ ಕಾಲಘಟ್ಟದಲ್ಲಿಯೇ ಭಾರತಕ್ಕೆ ಬ್ರೀಟಿಶರಿಂದ ಮುಕ್ತಿ ಮತ್ತು ದುರ್ಬಲರ ಕೈಯಲ್ಲಿ ಆಡಳಿತ, ತದನಂತರ ಅಧಿಕಾರದಾಹಕ್ಕಾಗಿ ಕೋಮುವಾದ, ತುಷ್ಟೀಕರಣಗಳಿಂದಾಗಿ ವೈಭವೀಕರಣದತ್ತ ಚಿಗುರೊಡೆದಿದ್ದ ಹಿಂದೂ ಧರ್ಮ ಆಂತರಿಕ ಹಿತ-ಶತ್ರುಗಳು, ಸ್ವಾರ್ಥ ಸಾಧಕ ನಪುಂಸಕರಿಂದಾಗಿ ಹೆಮ್ಮರವಾಗಿ ಬೆಳೆಯಬೇಕಿದ್ದ ಚಿಗುರು ಕಮರಿ ಹೋಗುವತ್ತ ಸಾಗಿದೆ ಎಂಬುದು ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವ ಗಂಭೀರ ವಿಚಾರವಾಗಿದೆ. ಇದರ ಮುಂದುವರಿದ ಭಾಗವೇ ಕರ್ನಾಟಕದಲ್ಲಾದ ವೀರಶೈವ-ಲಿಂಗಾಯತರ ವಿಭಜನೆ.

ಲಾಭನಷ್ಟದ ಲೆಕ್ಕಾಚಾರ

ಪ್ರತ್ಯೇಕ ಧರ್ಮದ ನಿರ್ಧಾರಗಳಿಗೆ ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ತಿಳಿದಿದ್ದರೂ ರಾಜ್ಯ ಸರ್ಕಾರವಂತು ಸಂವಿಧಾನ ವಿರೋಧಿಸಿ ಪ್ರತ್ಯೇಕ ಧರ್ಮವನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿ ತನ್ನ ಕೈ ತೊಳೆದುಕೊಂಡಿದೆ. ಒಂದು ವೇಳೆ ಕೇಂದ್ರ ಸರ್ಕಾರ ಜಾರಿಗೊಳಿಸಿದರೆ ಅದರ ಸಂಪೂರ್ಣ ಶ್ರೇಯಸ್ಸು ತನ್ನನೆಂದು, ಜಾರಿಗೊಳಿಸದಿದ್ದರೆ ಕೇಂದ್ರದತ್ತ ಬೆರಳು ಮಾಡಿ ರಾಜಕೀಯವಾಗಿ ತನ್ನ ಜವಾಬ್ದಾರಿ ನಿರ್ವಹಿಸಿದ್ದಾಗಿ, ಕೇಂದ್ರ ಸರ್ಕಾರವೇ ವಿಲನ್ ಎಂದು ಬಿಂಬಿಸಿ, ಒಟ್ಟಿನಲ್ಲಿ ತನ್ನ ಲಾಭದ ಸ್ವಾರ್ಥ ಸಾಧನೆ ಮಾಡಿಕೊಂಡಿದೆ. ಆದರೆ ಅರಿತೋ-ಅರಿಯದೆಯೋ ಈ ಚಳುವಳಿಯಲ್ಲಿ ಭಾಗಿಯಾದ ಜನಸಾಮಾನ್ಯರ ಮೂಗಿಗೆ ತುಪ್ಪ ಸವರುವಂತಹ ನಿರ್ಧಾರ. ಹಾವು ಸಾಯಬಾರದು, ಕೋಲು ಕೂಡಾ ಮುರಿಯಬಾರದೆಂಬಂತೆ ಸರ್ಕಾರ ಸದ್ಯ ಅಲ್ಪಸಂಖ್ಯಾತ ಸವಲತ್ತುಗಳನ್ನು ಸವಿಯುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳಿಗೆ ತೊಂದರೆ ಇಲ್ಲದಂತೆಯೂ ಲಿಂಗಾಯತರಿಗೆ ಲಾಭವಿಲ್ಲದಂತೆಯೂ ಜಾಣ ನಡೆಯನ್ನು ಇಟ್ಟಿದ್ದು; ರಾಜಕೀಯ, ಶೈಕ್ಷಣಿಕ, ಉದ್ಯೋಗ ಹೀಗೆ ಯಾವ ಕ್ಷೇತ್ರದಲ್ಲಿಯೂ ಅಲ್ಪಸಂಖ್ಯಾತರಿಗೆ ಕೊಡಲ್ಪಡುವ ಸವಲತ್ತುಗಳು ದೊರೆಯದೆ, ಕೇವಲ ಶೈಕ್ಷಣಿಕ ಸಂಸ್ಥೆಗಳ ಮಾಲಿಕರಿಗೆ, ಮಠ-ಮಾನ್ಯಗಳ ಸ್ವಾಮೀಜಿಗಳಿಗೆ ವೈಯಕ್ತಿಕ ಲಾಭಗಳಾಗುವಂತಹ ನಿರ್ಧಾರ ಕೈಗೊಂಡಿದೆ. ಹೀಗಾಗಿ ಜನಸಾಮಾನ್ಯರು ಅಲ್ಪಸಂಖ್ಯಾತರೆಂದು ಹೇಳಿಕೊಳ್ಳಬಹುದೆ ಹೊರತು, ಈಗಿರುವ ಮೀಸಲಾತಿ ಸ್ತರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ವಿಚಾರಗಳನ್ನು ಜನಸಾಮಾನ್ಯರಿಗೆ ವಿವರಿಸದೆ ತರಾತುರಿಯಲ್ಲಿ ಶಿಫಾರಸ್ಸು ಮಾಡಿರುವುದು ಕೇವಲ ರಾಜಕೀಯ ಲಾಭದ ನಾಟಕವಷ್ಟೇ.

ಧರ್ಮದ ಒಡಕಿಗೆ ರಾಜಕೀಯದ ಕರಿಛಾಯೆ :

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಗಳು ಭಾರತ ಸ್ವತಂತ್ರವಾದ ನಂತರದ ದಿನಗಳಲ್ಲಿ ಚಿಕ್ಕದಾಗಿ ಪ್ರಾರಂಭಗೊಂಡು, ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಂಡಿದ್ದು ಬೃಹತ್ ಸಭೆಗಳ ಮೂಲಕ ಹೋರಾಟದ ಕಿಚ್ಚು ಹೆಚ್ಚಿದೆ. ಆದರೆ ಈ ಕಿಚ್ಚು ಯಾವುದೇ ಸೈದ್ಧಾಂತಿಕ ಚರ್ಚೆಗಳಿಲ್ಲದೆ, ಕೇವಲ ನಿಂದನೆ, ಆರೋಪ-ಪ್ರತ್ಯಾರೋಪಗಳಿಂದಾಗಿ ಗೊಂದಲಗಳ ಗೂಡಾಗಿ ರಾಜಕೀಯದ ಕರಿಛಾಯೆಯ ಲಕ್ಷಣಗಳು ಗೊಚರಿಸುತ್ತಿವೆ, ಇದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿರುವ ಶಂಕೆಗಳು ದಟ್ಟವಾಗಿವೆ. 2014ರಲ್ಲಿ ಮಾಹಾಪತನ ಕಂಡು ಪಾತಾಳಕ್ಕೆ ಕುಸಿದಿರುವ ಪಕ್ಷ, ಇಂದು ತನ್ನ ಅಸ್ತಿತ್ವಕ್ಕಾಗಿ ಭಾರತದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ನಡೆಗಳನ್ನು ಗಮನಿಸಿದರೆ ಹರಿಯಾಣದಲ್ಲಿ ಜಾಟ್ ಸಮುದಾಯ, ಆಂಧ್ರದಲ್ಲಿ ಕಾಪು ಸಮುದಾಯ, ಮಹಾರಾಷ್ಟ್ರದಲ್ಲಿ ಮರಾಠಿ ಸಮುದಾಯ, ಗುಜರಾತಿನಲ್ಲಿ ಪಾಟಿದಾರ್/ಪಟೇಲ್ ಸಮುದಾಯಗಳು ಮೀಸಲಾತಿಗಾಗಿ ಮತ್ತು ಪ್ರತ್ಯೇಕ ಧರ್ಮಕ್ಕಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಲಿಂಗಾಯತರ ಹೋರಾಟಗಳೆಲ್ಲ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದತ್ತ ಬೆರಳು ಮಾಡಿರುವದು ಮತ್ತು ಈ ಎಲ್ಲಾ ಹೋರಾಟಗಳಲ್ಲಿ ಕಾಂಗ್ರೆಸ್ಸಿನ ನಾಯಕರು ಅಥವಾ ಬೆಂಬಲಿತ ನಾಯಕರು ಮುಂಚೂಣಿಯಲ್ಲಿರುವದು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿವೆ.ಉತ್ತರ ದೃವದಿಂದ ದಕ್ಷಿಣ ಧ್ರುವದವರೆಗೂ, ಪೂರ್ವದಿಂದ ಪಶ್ಚಿಮದಲ್ಲೆಲ್ಲ ತನ್ನ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ಸಿಗೀಗ ಕರ್ನಾಟಕವೇ ಏಕೈಕ ಖಜಾನೆ. ಹೀಗಾಗಿ ಅಧಿಕಾರ ಉಳಿಸಿಕೊಳ್ಳುವದು ಅನಿವಾರ್ಯವು ಹಾಗೂ ಅತ್ಯಗತ್ಯತೆಯೂ ಹೌದು. ಈ ಅಗತ್ಯತೆ ಪೂರೈಸುವದಕ್ಕಾಗಿ 5 ವರ್ಷದಲ್ಲಿ ಮಾಡಿದ  ಗಮನಾರ್ಹ ಸಾಧನೆಗಳೇನು ಇಲ್ಲ. ಮಹಾದಾಯಿ, ಕಾವೇರಿ, ರೈತರ ಸಮಸ್ಯೆಗಳು, ಅಭಿವೃದ್ದಿ ಶೂನ್ಯ ಇಲಾಖೆಗಳು, ದೇಶದಲ್ಲಿಯೆ ಅತಿ ಹೆಚ್ಚಿ ರೈತರ ಆತ್ಮಹತ್ಯೆಗಳೂ, ಹಿಂದೂ ಯುವಕರ ಕಗ್ಗೋಲೆಗಳು, ನಿಯತ್ತಿನ ಅಧಿಕಾರಿಗಳ ಕೊಲೆ ಮತ್ತು ಕಿರುಕುಳಗಳು, ಸರ್ಕಾರದ ಇಂತಹ ನೂರಾರು ವೈಪಲ್ಯಗಳಿಂದ ಜನರ ದೃಷ್ಟಿಯನ್ನು ಬದಲಿಸಲು ಭಾವನಾತ್ಮಕ ವಿಚಾರಗಳಾದ ಪ್ರತ್ಯೇಕ ಧ್ವಜ, ಪ್ರತ್ಯೇಕ ಧರ್ಮದಂತಹ ಮನೆಮುರುಕುತನದ ವಿಚಾರಗಳೇ ಕಾಂಗ್ರೆಸ್ಸಿಗೆ ಮುಂದಿನ ಚುನಾವಣಾ ಅಸ್ತ್ರಗಳು.

ಬ್ರಿಟಿಷರಿಂದ ಬಳುವಳಿಯಾಗಿ ಪಡೆದ ಒಡೆದಾಳುವ ಕಲೆ ಕರಗತ ಮಾಡಿಕೊಂಡಿರುವ ಕಾಂಗ್ರೆಸ್ಸಿಗೆ ದೇಶ ವಿಭಜಿಸುವ, ಜಾತಿ-ಜಾತಿಗಳ ನಡುವೆ ವೈಷಮ್ಯದ ಬೀಜ ಬಿತ್ತುವ, ಸಮಾಜದ ಒಗ್ಗಟ್ಟು ಒಡೆಯುವ, ಓಲೈಕೆ ರಾಜಕಾರಣ, ತುಷ್ಟಿಕರಣ, ಭಾಷೆಗಳ ನಡುವೆ ಕಲಹ ಎಬ್ಬಿಸುವಂತಹ ಭಾವನಾತ್ಮಕ ವಿಚಾರಗಳಿಂದ ಜನಸಾಮಾನ್ಯರ ನೆಮ್ಮದಿಗೆ ಎಮೊಷನಲ್ ಅತ್ಯಾಚಾರ ಮಾಡುವಂತಹ ವಿಧ್ಯೇಗಳು ನೀರು ಕುಡಿದಷ್ಟೇ ಸುಲಭ. ನಾವು ಒಂದು ಸಾರಿ ಭಾರತದ ಇತಿಹಾಸದ ಹಾಳೆಗಳನ್ನು ಹಾಗೆಯೇ ತಿರುವಿ ನೋಡಿದಾಗ ಬಂಗಾಳದ ಸಿರಾಜುದ್ದೌಲನ ಅಸ್ಥಾನ ದ್ರೋಹಿ ಮೀರ್ ಜಾಫರ್, ಕರ್ನಾಟಕದ ಕಿತ್ತೂರು ಚೆನ್ನಮ್ಮನ ಆಸ್ಥಾನ ದ್ರೋಹಿ ಮಲ್ಲಪ್ಪ ಶೆಟ್ಟಿಯಿಂದ ಹಿಡಿದು ದೇಶ ವಿಭಜಿಸಿದ ಮೊಹಮ್ಮದ ಅಲಿ ಜಿನ್ನಾ-ನೆಹರು ವರೆಗೂ ನಿಯತ್ತಿಲ್ಲದ, ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಉಂಡ ಮೆನೆಗೆ ಕನ್ನ ಹಾಕಿದ ಅದೆಷ್ಟೋ ದ್ರೋಹಿಗಳು ಕಣ್ಣು ಮುಂದೆ ಬಂದು ಹೋಗುತ್ತಾರೆ. ತನ್ನ ರಾಜಕೀಯ ಲಾಭಕ್ಕಾಗಿ ಇಂತಹ ಒಡೆದಾಳುವ ನೀತಿಗಳ ನೈಜ ಇತಿಹಾಸ ಕಾಂಗ್ರೇಸ್ಸಿನ ಕ್ಯಾರೆಕ್ಟರ್ ಸರ್ಟೀಫಿಕೇಟ್ ಎಂದರೆ ಅತಿಶಯೊಕ್ತಿಯಾಗಲಾರದು.

ಸರ್ಕಾರ ಮತ್ತು ಧಾರ್ಮಿಕ ಗುರುಗಳು ಯಾರನ್ನ ಕೇಳಿ ನಿಮ್ಮ ನಿರ್ಧಾರ ಪ್ರಕಟಿಸಿದ್ದಿರಿ?

ಭಾರತದಲ್ಲಿ ವೀರಶೈವ/ಲಿಂಗಾಯತ ಜಾತಿಯನ್ನು ಪಾಲಿಸುವ ಜನಸಂಖ್ಯೆ ಎಷ್ಟು ಎಂಬುದು ನಿಖರವಾಗಿ ಹೇಳಲಸಾಧ್ಯ. ಇದುವರೇಗೂ ಎರಡು ಒಂದೇ ಎಂದು ನಂಬಿದ್ದೂ ಹೀಗಾಗಿ ಸರ್ಕಾರಿ ದಾಖಲೆಗಳಲ್ಲಿ ಸರ್ವೇಸಾಮಾನ್ಯವಾಗಿ ಲಿಂಗಾಯತ ಶಬ್ದ ಅತಿ ಹೆಚ್ಚು ಬಳಕೆಯಲ್ಲಿದೆ. ಇದರರ್ಥ ಲಿಂಗಾಯತ ಎಂದು ಜಾತಿ ನಮೂದಿಸಿಕೊಂಡವರೆಲ್ಲ ಏಕದೇವೊಪಾಸಕರೆನಲ್ಲ, ಬಹುತೇಕರು ಏಕದೇವೋಪಾಸನೆಯನ್ನು ಒಪ್ಪುವದೂ ಇಲ್ಲ. ಸ್ವತಂತ್ರ ಧರ್ಮ ಬಯಸುವ ಪ್ರತ್ಯೇಕತಾವಾದಿ ಗುರುಗಳು, ರಾಜಕೀಯ ಮುಖಂಡರುಗಳು ಇಂತಹ ಗಂಭೀರ ವಿಚಾರವನ್ನು ಆಯಾ ತಾಲೂಕು-ಜಿಲ್ಲೆಗಳಲ್ಲಿ ಜನಸಾಮಾನ್ಯರಿಂದ ಅಭಿಪ್ರಾಯ ಸ್ವೀಕರಿಸಿ ನಂತರ ನಿರ್ಧಾರ ತೆಗೆದುಕೊಂಡಿದ್ದರೆ ಸೂಕ್ತವೆನಿಸುತ್ತಿತ್ತೇನೋ. ಒಂದೊಮ್ಮೆ ಸಮಾಜದ ಶ್ರೇಯೋಭಿವೃದ್ದಿಗಾಗಿ ನೀವುಗಳು ಕೈಗೊಳ್ಳುವ ನಿರ್ಧಾರದ ಹಿಂದೆ ಯಾವ ಭಿನ್ನಾಭಿಪ್ರಾಯಗಳಿಲ್ಲದಿದ್ದಲ್ಲಿ ನಿಮ್ಮ ನಡೆಯನ್ನು ಪ್ರಶಂಸಿಸಬಹುದಿತ್ತು, ಆದರೇ ಗೊಂದಲಗಳ ಗೂಡಾಗಿರುವ, ಭಾವನಾತ್ಮಕವಾದ ಧಾರ್ಮಿಕ ವಿಚಾರಗಳನ್ನು ನಿಮ್ಮಗಳ ವೈಯಕ್ತಿಕ ಲಾಭಗಳಿಗಾಗಿ ಸಮಾಜದ ಹಿತವನ್ನು ಬಲಿಕೊಟ್ಟಿದ್ದು ಮಾತ್ರ ಕ್ಷಮಿಸಲಾಧ್ಯವಾದ ಘೋರ ಅಪರಾಧವೇ ಸರಿ. ಇದೇ ಸರ್ಕಾರ ಇನ್ನೊಂದೆರಡು ಅವಧಿಗೆ ಆಯ್ಕೆಗೊಂಡರೆ ಇಂದು ವೀರಶೈವ-ಲಿಂಗಾಯತದಂತಹ ಭಿನ್ನಾಭಿಪ್ರಾಯಗಳನ್ನು, ಹಿಂದೂ ಧರ್ಮದ ಅನ್ಯಜಾತಿಗಳಲ್ಲಿಯೂ ಸೃಷ್ಟಿಸಿ, ಶೈವ ಬ್ರಾಹ್ಮಣ-ವೈಷ್ಣವ ಬ್ರಾಹ್ಮಣ, ಜೇನು ಕುರುಬ-ಕಾಡು ಕುರುಬ, ಆದಿಬಣಜಿಗ-ಬಣಜಿಗ, ಅಗಸ-ಮಡಿವಾಳ, ಹಡಪದ-ಕ್ಷೌರಿಕ, ಹರಿಜನ-ಮಾದಿಗ, ಗೌಡ-ಒಕ್ಕಲಿಗ, ತಳವಾರ-ವಾಲಿಕಾರ, ಶ್ವೆತಾಂಬರ-ದಿಗಂಬರ, ಕೊರವ-ಭಜಂತ್ರಿ, ಸುಡುಗಾಡು ಸಿದ್ದ-ಹೇಳವ, ನಾಡು ಜಂಗಮ-ಕಾಡು ಜಂಗಮ ಹೀಗೆ ಎಲ್ಲಾ ಜಾತಿಗಳನ್ನು ಒಡೆದು ಆ ಗುರುಗಳಿಗೆ ಅಧಿಕಾರ, ಮಠ, ಪ್ರಶಸ್ತಿ, ಬಿರುದುಗಳೆಂಬ ಆಮಿಷಗಳನ್ನೊಡ್ಡಿ ಪ್ರತ್ಯೇಕ ಧರ್ಮಗಳನ್ನಾಗಿ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಧರ್ಮ ವಿಭಜಕಸಿದ್ದಹಸ್ತರೇಶಾಂತವಾಗಿದ್ದ ಕರ್ನಾಟಕದ ಜನರಲ್ಲಿ 1 ವರ್ಷದ ಹಿಂದೆ ಬಿತ್ತಿದ್ದ ಜಾತಿಯ ವಿಷಬೀಜ ಇಂದು ತಾವಂದುಕೊಂಡಂತೆಯೆ ಫಲ ನೀಡುವ ಹೆಮ್ಮರವಾಗಿ ಬೆಳೆದು ನಿಂತಿದೆ, ಫಲದ ರುಚಿಯೂ ಸಿಹಿಯೋಕಹಿಯೋ ಎಂಬುದನ್ನರಿಯಲು ಚುನಾವಣೆಯವರೆಗೂ ಕಾಯಲೇಬೇಕು.

ಸರ್ವರಿಗೂ ಲೇಸನ್ನೆ ಬಯಸಿದ ಬಸವಣ್ಣನವರನ್ನು ಧರ್ಮ ಸ್ಥಾಪಕ ಎಂಬ ಬಿರುದು-ಬಿನ್ನಾವಳಿಯನ್ನಿತ್ತು, ಕೇವಲ ಲಿಂಗಾಯತರಿಗಷ್ಟೇ ಸೀಮಿತರೆಂಬ ಧರ್ಮದ ಸಂಕೋಲೆ ತೊಡಿಸದಿರಿ, ಬಸವಣ್ಣನವರ ವಿಚಾರದಾರೆಗಳು ಸರ್ವರಿಗೂ ಸಲ್ಲಬೇಕಾದ ವಿಶ್ವಮಾನವ ಸಂದೇಶಗಳು, ಅವರ ಹೆಸರನ್ನೇಳಿ ನಿಮ್ಮಗಳ ವೈಯಕ್ತಿಕ ವರ್ಚಸ್ಸು, ಲಾಭ, ಪ್ರಚಾರ, ಪೀಠ, ಪ್ರಶಸ್ತಿ, ಬಿರುದು-ಭಿನ್ನಾವಳಿಗಳಿಗಾಗಿ ಬಳಸಿಕೊಳ್ಳದೆ, ಎಲ್ಲರಿಗೂ ತಮಗಿಷ್ಟವಿರುವ ದೈವಾಚರಣೆ ಮಾಡುವದನ್ನು ಅವರವರ ಇಷ್ಟಕ್ಕೆ ಬಿಟ್ಟು ಬಸವಣ್ಣನವರ ವಿಚಾರಗಳ ಮೂಲಕ ಜನರನ್ನು ಅಧ್ಯಾತ್ಮದತ್ತ ಕರೆದೊಯ್ಯುವ ಧರ್ಮ-ಜಾಗೃತಿ ಕಾಯಕದಲ್ಲಿ, ಕೈಲಾಸವನ್ನು ಕಂಡು ಅವರನ್ನು ವಿಶ್ವಮಾನವರನ್ನಾಗಿರಲು ಬಿಡಿ. ಹೀಗಾದರೆ ಧರ್ಮವೂ ಬೆಳೆಯುತ್ತದೆ, ತಮ್ಮಗಳ ಗೌರವವೂ ಬೆಳೆಯುತ್ತದೆ. ಇಂದು ವೀರಶೈವರೊಂದಿಗೆ ಬಂದಂತಹ ಭಿನ್ನಾಭಿಪ್ರಾಯಗಳು, ಸ್ವಪ್ರತಿಷ್ಠೆ, ಅಧಿಕಾರದ ಆಶೆಗಳು ಮುಂದೊಂದು ದಿನ ಲಿಂಗಾಯತದ ಉಪಪಂಗಡಗಳಲ್ಲಿಯೂ ಒಡಕು, ಮನಸ್ತಾಪಗಳು ಬರುವದಿಲ್ಲವೆಂಬ ಖಾತರಿ ಇದೇಯೇ? ಮಡಿವಾಳ ಪಂಗಡದವರೆಲ್ಲ ಮಾಚೀದೇವನನ್ನು, ಮಾದಿಗರೆಲ್ಲ ಚೆನ್ನಯ್ಯನವರನ್ನು, ಅಂಬಿಗರೆಲ್ಲ ಚೌಡಯ್ಯನವರನ್ನು, ಹಡಪದ ಪಂಗಡದವರೆಲ್ಲ ಅಪ್ಪಣ್ಣನವರನ್ನು ಗುರುವಾಗಿ ಮತ್ತು ಅವರ ವಚನಗಳನ್ನು ಗ್ರಂಥವಾಗಿ ಮಾಡುತ್ತಾ ಹೋದರೆ ಲಿಂಗಾಯತವು ಚೂರು-ಚೂರಾಗಿ ನಾಶವಾಗುತ್ತದೆ. ಎಲ್ಲರೂ ನಮ್ಮವರೆಂಬ ಭಾವ ಸೃಷ್ಟಿಸುವ ಬಸವಣ್ಣನವರ ವಚನವನ್ನೊಮ್ಮೆ ನೆನಪಿಸಿಕೊಳ್ಳಿ – ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ನಮ್ಮ ಮನೆ ಮಗನೆಂದಿಸಯ್ಯ ಕೂಡಲ ಸಂಗಮದೇವ.

ಹಿಂದೂ ಎನ್ನಲೂ ಭಯವೇಕೆ? ಕೇವಲ 800 ವರ್ಷಗಳ ಬಸವಣ್ಣನವರ ಕಾಲ್ಪನಿಕ ಧರ್ಮದ ಬಗ್ಗೆ ಇಷ್ಟೊಂದು ಪ್ರಶ್ನೆಗಳಿದ್ದರೆ, 5000 ವರ್ಷಗಳ ಧರ್ಮದಲ್ಲಿ ಸಾಕಷ್ಟು ವೈವಿಧ್ಯಮಯ ಆಚಾರಗಳಿರಿವುದು ಸಹಜವೆ, ಅಂಕು-ಡೊಂಕುಗಳಿದ್ದರೆ ಅದನ್ನು ತಿದ್ದಿ ತೀಡಲು ಅವಕಾಶಗಳಿಗೇನು ಕೊರತೆಯಿಲ್ಲ. ಆದರೆ ಅದನ್ನು ವಿರೋಧಿಸುತ್ತಾ ಪಲಾಯನವಾದ ಮಾಡಿ ಪ್ರತ್ಯೇಕತೆಯ ಕೂಗು ಝೇಂಕರಿಸುವದು ಇದ್ದ ಧರ್ಮಕ್ಕೂ ಪ್ರತ್ಯೇಕಿಸಿಸುವ ಹೊಸ ಧರ್ಮಕ್ಕೂ ಮಾಡುವ ಘನಗೋರ ಅಪಚಾರವಾದಿತು. ಸ್ವಾಮೀಜಿಗಳಿಗೆ ಬುದ್ದಿ ಹೇಳುವಷ್ಟು ದೊಡ್ಡವನು ನಾನಲ್ಲ, ಆದರೆ ಏನನ್ನೂ ಅರಿಯದ ಅಮಾಯಕ ಜನರನ್ನೂ ಹೊಸ ಧರ್ಮದಿಂದ ಲಾಭಗಳಾಗುತ್ತದೆ ಎಂಬ ಭಾವನೆಗಳಿಂದ ಬಂಧಿಸದಿರಿ, ಕೂಡಿ ಬಾಳಿದರೆ ಸ್ವರ್ಗಸುಖ ಎಂದು ಅರಿತು ನಡೆದರೆ ಸಮಾಜ ಸ್ವಸ್ಥವಾಗಿ ಆಧ್ಯಾತ್ಮದ ಉತ್ತುಂಗಕ್ಕೆ ತಲುಪಬಹುದು.

  • ಪರಪ್ಪ ಶಾನವಾಡ,ಗದಗ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!