ನನಗೂ ನನ್ನ ಮಡದಿ ರಚನಾಳಿಗೂ ಮದುವೆಯಾಗಿ ಹದಿನಾರು ವರ್ಷಗಳೇ ಕಳೆದರೂ ಯಾವ ವಿಷಯಕ್ಕೂ ಗಂಭೀರವಾದ ಜಗಳವಾದದ್ದೇ ಇಲ್ಲ. ದಿನಾಲೂ ಮಕ್ಕಳಿಗಿಂತಲೂ ಕೆಟ್ಟದಾಗಿ ಜಗಳವಾಡುವ ವಿಷಯವೆಂದರೆ ಕನ್ನಡಿ. ನನಗೋ ಕನ್ನಡಿಯೆಂದರೆ ಕುತೂಹಲ. ಕನ್ನಡಿಯ ಮುಂದೆ ನಿಂತು ಏನನ್ನೇ ಮಾಡಿದರೂ ಅದು ಬೇಸರಿಸದೆ ಬಿಂಬಿಸುತ್ತದೆ. ನನಗೆ ಅದನ್ನು ನೋಡುವುದೇ ಖುಶಿ. ನನ್ನವಳಿಗೆ ನಾ ಕನ್ನಡಿಯ ಮುಂದೆ ನಿಂತರೆ ಸಾಕು ದಾರಿಯಲ್ಲಿ ಹೋಗುತ್ತಿದ್ದ ಮಾರಿ ಮೈಮೇಲೇ ಬಂದಂತಾಗಿ ಅಡಿಗೆ ಮನೆಯ ಪಾತ್ರೆಗಳೆಲ್ಲ ನೆಲಕ್ಕೆ ಜಿಗಿದು ಮುತ್ತಿಡತೊಡಗುತ್ತವೆ. ಮಗಳು ನಿತ್ಯಾ ಹೊರಗಿನಿಂದ ‘ಅಮ್ಮಾ ಏನಾಯ್ತು?’ ಅಂತ ಕೂಗುತ್ತಾಳೆ. ಮಗ ಸುಜಯ್ ತನಗೆ ಇದಕ್ಕೆ ಯಾವುದೇ ಸಂಬಂಧವಿಲ್ಲವೆಂಬಂತಿರುತ್ತಾನೆ. ಆಗ ನಾನು ಮಾತ್ರ ಅಳಬೇಕೋ-ನಗಬೇಕೋ-ಕೋಪಿಸಿಕೊಳ್ಳಬೇಕೋ ಎಂಬುದು ತಿಳಿಯದೆ ಏನೋ ಎಡವಟ್ಟು ಪ್ರಶ್ನೆ ಕೇಳಿಬಿಡುತ್ತೇನೆ. ಆಗ ಶುರು ಸಹಸ್ರನಾಮಾರ್ಚನೆ. ದೇವರ ಕೋಣೆಯಲ್ಲಿ ದೇವರು ನೋಡಿ ನಕ್ಕಂತೆ ಅನಿಸುತ್ತದೆ ನನಗೆ. ನಾನು ಕನ್ನಡಿಯನ್ನು ಪದೇ-ಪದೇ ನೋಡುವದಾಗಲಿ, ಕನ್ನಡಿಯೆದುರು ನಿಂತು ಮಂಗನಂತಾಡುವದಾಗಲಿ ಅವಳಿಗೆ ಸಿಟ್ಟು ಬರಿಸುವುದಿಲ್ಲ. ಅವಳೇನೋ ಗಂಭೀರ ವಿಷಯ ಹೇಳುತ್ತಾ ಇರುತ್ತಾಳೆ, ಆಗಲೇ ನಾನು ಕನ್ನಡಿಯ ಮುಂದಿರುತ್ತೇನೆ. ಕನ್ನಡಿಯೆದುರು ನಿಂತಾಗ ನನ್ನ ಕಿವಿಗೆ ಹತ್ತಿ ತುರುಕಿದಂತೆ ನಾನು ಏನನ್ನೂ ಸರಿಯಾಗಿ ಕೇಳಿಸಿಕೊಳ್ಳುವದಿಲ್ಲ. ಅಲ್ಲೇ ಕದನ ಕಹಳೆ ಊದಿದಂತಾಗಿ ಮುಗುದೆ ಮುನಿಸಿಕೊಂಡ ಮೇಲೆ ನಾನು ಯಾವುದೇ ತಗಾದೆ ಇಲ್ಲದೆ ಕನ್ನಡಿಗೆ ಬೈದು ಅವಳ ಮುಂದೆ ಹಲ್ಕಿರಿದು ನಿಂತಲ್ಲಿಗೆ ಮಹಾಯುದ್ಧಕ್ಕೆ ವಿರಾಮ ಘೋಷಿಸಿದಂತೆ. ನಿನ್ನೆ ತವರಿಗೆ ಹೋಗಿದ್ದಾಳೆ. ಇನ್ನೆರಡು ದಿನ ಮನೆಯೆಲ್ಲಿ ಟಿವಿ ಬಿಟ್ಟರೆ ಮತ್ಯಾವುದೂ ಶಬ್ಧ ಮಾಡುವುದಿಲ್ಲ. ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ನೆರಿಗೆಗಳು ಹೆಚ್ಚಾದದ್ದನ್ನು ಕನ್ನಡಿಯಲ್ಲಿ ನೋಡುತ್ತಿರುವೆನಾದರೂ ಯಾವುದೇ ಹಳೆಯ ನೆನಪುಗಳು ಕಾಡುವುದಿಲ್ಲ.
ಇಂದು ಬೆಳಿಗ್ಗೆ ಏಳುತ್ತಿರುವಾಗಲೇ ಬುಡಕಳಚಿದ ಬಲ್ಬೊಂದು ಫಳಾರ್ ಅಂತ ಬಿತ್ತು. ಸದ್ಯ ತಲೆಯ ಮೇಲೆ ಬೀಳಲಿಲ್ಲ. ತಡೆಯಲಾರದ ಸಿಟ್ಟು ಬಂದೇ ಬಿಟ್ಟಿತು. ನನಗೆ ಅಂತ ಅಲ್ಲ ಎಲ್ಲರಿಗೂ ಅಷ್ಟೆ, ಹಾಲುಕ್ಕಿಸಿಕೊಂಡರೆ, ನೀರು ಚೆಲ್ಲಿಕೊಂಡರೆ, ಬೇಯಿಸಲು ಇಟ್ಟಿದ್ದು ಕರಟಿ ಹೋದರೆ ವಿಪರೀತ ಕೋಪ ಬಂದು ಬಿಡುತ್ತದೆ. ಆದರೂ ಅಸಹಾಯಕರು. ಮುಖ ತೊಳೆದವನೇ ಬಿದ್ದ ಗಾಜಿನ ಚೂರುಗಳನ್ನೆಲ್ಲಾ ತೆಗೆದು ಸ್ವಚ್ಚಗೊಳಿಸಿದೆ. ಆದರೂ ಅಲ್ಲೆಲ್ಲೋ ಉಳಿದ ಚೂಪಾದ ಚುರೊಂದು ನನ್ನ ಕಾಲಿಗೆ ಚುಚ್ಚಿತು. ಚುಚ್ಚಿದ್ದು ಗಾಜಿನ ಚುರಾಗಿದ್ದರಿಂದ ಕೇವಲ ಕಾಲಲ್ಲ ಹೃದಯಕ್ಕೂ-ಮನಸಿಗೂ ಇರಿದಂತಾಯಿತು. ಹೌದು.. ನನಗೆ ಕನ್ನಡಿಯ ಬಗ್ಗೆ ಅತಿಯಾದ ಮೋಹವಿದ್ದರೂ ಈ ಗಾಜಿನ ಚೂರಿಗೂ ನನಗೂ ಒಂದು ಕಹಿಯ ಸಂಬಂಧವಿದೆ. ಅದೊಂದು ದಿನ ನನ್ನ ಕಾಲಿಗೆ ಗಾಜಿನ ಚೂರೊಂದು ಚುಚ್ಚದೆ ಇದ್ದಿದ್ದರೆ, ಕಾಲಚಕ್ರದ ಕಪಿಮುಷ್ಟಿಯಿಂದಪಾರಾಗಿ, ಅಪರಾಧಿ ಭಾವ ಕಾಡುವುದು ತಪ್ಪೇ ಬಿಡುತ್ತಿತ್ತೇನೊ. ಈ ಸಂಗತಿ ಮಾತ್ರ ಇವತ್ತಿಗೂ ಯಾರಿಗೂ ತಿಳಿಯದೆ ಇರುವುದಕ್ಕೂ ಕಾರಣ ಕಾಲಚಕ್ರವೇ ಇರಬಹುದೇನೊ. ವಿಧಿಯು ನಮ್ಮ ಅಳಿಸಿಯೂ ನಗುತ್ತಾನೆ- ನಗಿಸಿಯೂ ನಗುತ್ತಾನೆ. ನಮ್ಮನ್ನು ನೋಡಿ ಅವನು ನಕ್ಕರೆ ನಾವು ಸತ್ತಂತೆ.
ಅವಳಿಲ್ಲದಿರುವಾಗ ಈ ಚುಚ್ಚಿದ ಗಾಜು ಹಳೆಯ ನೆನಪೊಂದನ್ನು ಕೆದಕಿಬಿಟ್ಟಿತು.
ಬಾಲ್ಯ ಯಾರಿಗೆ ಬೇಡ ಹೇಳಿ. ಈಗಲೂ ಅವಕಾಶವಿದ್ದರೆ ಮತ್ತೆ ಬಾಲ್ಯ ಬರಲೆಂದು ಆಶಿಸುವವರೇ ಇರುವುದು ಈ ಜಗದಲ್ಲಿ. ಆ ತುಂಟಾಟಿಕೆ, ಗೆಳೆಯರೊಡನೆ ಆಟ-ಪಾಠ-ಮುನಿಸು ಒಂದೇ ಎರಡೇ.. ಸಾವಿರಾರು ಸಿಹಿ ನೆನೆಪುಗಳು.. ಅವನ್ನೆಲ್ಲಾ ನೆನೆಸಿಕೊಂಡರೆ ಈಗ ಚಿಂತೆಯ ಸಂತೆಯಲ್ಲಿ ಬದುಕುತ್ತಿದ್ದೇವೆ ಎಂದೆನೆನಿಸುತ್ತದೆ.
ಬಾಲ್ಯ ಎಂದರೆ ಅನಿವಾರ್ಯವಾಗಿ ಮರೆತಂತಿರುವ ಪರಮೇಶ ಮಾಸ್ತರರು ಈಗ ನೆನಪಾಗಿ ಕಾಡುತ್ತಾರೆ. ಪರಮೇಶ ಮಾಸ್ತರರಿಗೆ ಮಕ್ಕಳೆಂದರೆ ಪರಮ ಪ್ರೀತಿ. ನನಗೂ ಅಷ್ಟೆ ಅವರೆಂದರೆ ತುಂಬಾ ಇಷ್ಟ. ಅವರಿಗೂ ನಾನೆಂದರೆ ಅಧಮ್ಯ ಪ್ರೀತಿ. ನನ್ನನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ತಿಂಗಳಲ್ಲಿ ಒಂದು ಬಾರಿಯಾದರೂ ನಾನು ಅವರ ಮನೆಗೆ ಹೋಗಲೇಬೇಕಿತ್ತು. ಅವರ ಹೆಂಡತಿ ಜಾನಕಿ ಅವರಿಗೂ ನಾನೆಂದರೆ ಅಚ್ಚುಮೆಚ್ಚು. ಮದುವೆಯಾಗಿ ಎಂಟು ವರ್ಷಗಳಾಗಿದ್ದರೂ ಮಕ್ಕಳಾಗದ ಕೊರಗು ಅವರನ್ನು ಬಿಡದೆ ಕಾಡುತ್ತಿತ್ತು. ಆ ನೋವನ್ನು ಮರೆಯಲೆಂದೇ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಮಗನಂತೆ ಮುದ್ದಿಸುತ್ತಿದ್ದರು. ಜಾನಕಿಯವರು ನನಗಾಗಿ ತಿಂಡಿ ತಿನಿಸುಗಳನ್ನು ಮಾಡಿ, ಮನೆಗೂ ಕಳುಹಿಸಿಕೊಡುತ್ತಿದ್ದರು. ರಜೆ ಇದ್ದಾಗೆಲ್ಲಾ ನಾನು ಅವರ ಮನೆಗೆ ಹೋಗಿರುತ್ತಿದ್ದೆ. ಮಾಸ್ತರರು ಎಲೆಕ್ಷನ್ ಡ್ಯುಟಿಗೊ, ಇನ್ನೇನೋ ತರಬೇತಿಗೋ ಹೋಗುವಾಗ ನಾನು ಅವರ ಮನೆಯಲ್ಲಿಯೇ ಉಳಿಯುವಂತೆ ಹೇಳುತ್ತಿದ್ದರು. ನಾನೂ ಅವರಿಗೊಂದು ಮಗು ಕರುಣಿಸೆಂದು ದೇವರಲ್ಲಿ ಬೇಡುತ್ತಿದ್ದೆ. ಆದರೆ ವಿಧಿ ಯಾಕೋ ಕ್ರೂರವಾಗಿ ನಗುತ್ತಿತ್ತು.
ನನ್ನದು ಪಿಯುಸಿ ಮುಗಿಯುತ್ತಾ ಬಂದಿತ್ತು. ಅ ದಿನ ನನ್ನ ಪಾಲಿಗೆ ಕೆಟ್ಟದಿನವಾಗಿತ್ತೆಂಬುದನ್ನು ಇಂದಿಗೂ ನೆನೆಪಿಸಿಕೊಳ್ಳಲಾರೆ. ಅದರೆ ನಡೆದದ್ದು ಮಾತ್ರ ಕಹಿಯಾದರೂ ಸತ್ಯ. ಮಾಸ್ತರರು ಎರಡು ದಿನದ ಮಟ್ಟಿಗೆ ದೂರದೂರಿಗೆ ಹೋಗಬೇಕಾಗಿ ಬಂತು. ನನಗೆ ಮನೆಗೆ ಬಂದು ಉಳಿಯುವಂತೆ ಹೇಳಿದ್ದರಿಂದ ನಾನು ಹೋಗಿದ್ದೆ. ಆದರೆ ಜಾನಕಿಯವರು ಯಾವುದೋ ಬೇಸರದಲ್ಲಿದ್ದುದು ಕಂಡು ಬಂತು. ಮಾಸ್ತರರು ತರಬೇತಿಗೆ ಹೋಗುವುದು ಇಷ್ಟವಿರಲಿಲ್ಲವೇನೋ ಎಂದುಕೊಂಡೆ. ಈಗ ನಾನು ಬೆಳೆದ ಹುಡುಗ, ಮೊದಲಿನಷ್ಟು ಸಲಿಗೆ ಅವರ ಜೊತೆಗಿಲ್ಲ. ಆದರೂ ಮನಸ್ಸು ತಡೆಯದೆ “ಏನಾಯಿತು? ತುಂಬಾ ಬೇಸರದಲ್ಲಿದ್ದೀರಲ್ಲ ಯಾಕೆ?” ಎಂದು ಕೇಳಿದೆ.
“ನಿನಗೆ ಅರ್ಥವಾಗುವುದಾದರೆ ಹೇಳುತ್ತೇನೆ.”
“ಹಾಂ, ಹೇಳಿ, ನಾನು ನಿಮ್ಮನೆ ಹುಡುಗನೇ ಅಲ್ವಾ”
ಗೋಳೋ ಅಂತ ಅತ್ತು ಸುಮ್ಮನಾದರು. ಎರಡು ನಿಮಿಷದ ಮೌನದ ನಂತರ ಮಾತನಾಡಿದರು. “ ನಮಗೆ ಮಕ್ಕಳಿಲ್ಲದ ಸಂಕಟದ ನಿನಗೆ ಗೊತ್ತುತಾನೆ?, ಆ ನೋವು ಚುಚ್ಚುತ್ತಿದೆ. ಜಗತ್ತು ಎಷ್ಟೇ ಮುಂದುವರಿದಿದ್ದರೂ ನನ್ನನ್ನು ಬಂಜೆ ಎಂದು ಕರೆಯುವರೇ ಹೊರತಾಗಿ ನನ್ನ ನೋವನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿನ್ನ ಮಾಸ್ತರರು ಇಷ್ಟು ದುಡಿಯುವುದದರೂ ಯಾರಿಗೆ ಹೇಳು..ಮುಂದೆ ನಮಗೇನಿದೆ? ಸತ್ತರೆ ಸುಡುವುದಿರಲಿ, ಎರಡು ಹನಿ ಕಣ್ಣೀರು ಹಾಕಲು ನಮ್ಮವರು ಅಂತ ಯಾರೂ ಇಲ್ಲ. ನಿನ್ನ ಮಾಸ್ತರರಿಗೆ ದತ್ತು ಮಗು ಪಡೆಯೋಣ ಎಂದಿದೆ. ನನಗೆ ಅದು ಇಷ್ಟ ಇಲ್ಲ. ಮಗುವನ್ನು ದತ್ತು ಪಡೆದರೂ ಬಂಜೆ ಎಂಬ ಪಟ್ಟ ನನಗೆ ತಪ್ಪಿದ್ದಲ್ಲ. ಅಂಥಾದ್ದರಲ್ಲಿ ದತ್ತು ಮಗುವನ್ನು ಪಡೆದು ನನ್ನ ನೋವು ಕಡಿಮೆಯಾಗುವುದಿಲ್ಲವಷ್ಟೆ. ನಾವಿಬ್ಬರೂ ಪ್ರೀತಿಸಿ ಮದುವೆ ಆದವರು. ಆ ಕಾಲದಲ್ಲಿ ಮನೆಯಿಂದ ಹೊರ ತಳ್ಳಲ್ಪಟ್ಟವರು. ನಮಗೆ ಇಂದಿಗೂ ನೆಂಟರು ಅಂತ ಯಾರೂ ಇಲ್ಲ. ನಿನಗೇ ತಿಳಿದಂತೆ ನಿನ್ನ ಬಿಟ್ಟು ನೆಂಟರಾಗಲಿ, ಬಂಧುಗಳಾಗಲೀ ಇಲ್ಲಿಗೆ ಬಂದಿದ್ದೇ ಇಲ್ಲ. ನನಗೆ ಅವರು, ಅವರಿಗೆ ನಾನು ಅಷ್ಟೆ. ಇವತ್ತಿಗೂ ನಮ್ಮ ನಡುವಿನ ಪ್ರೀತಿಗೆ ಯಾವುದೇ ಕುಂದಿಲ್ಲ. ಮಾಸ್ತರರಿಗೆ ನಲವತ್ತು ವರ್ಷ ಕಳೆಯಿತು. ಇನ್ನು ಮಗು ಯಾವಾಗ? ಹೇಗೋ ?” ಎಂದು ಮತ್ತೆ ಅತ್ತರು.
ಈಗಷ್ಟೆ ಹರೆಯಕ್ಕೆ ಕಾಲಿಡುತ್ತಿದ್ದ ನನಗೆ ಅಲ್ಪ ಸ್ವಲ್ಪ ಅರ್ಥವಾಗುತ್ತಿತ್ತು. ಕೇಳಲೋ- ಬೇಡವೋ ಎಂದು ತಡವರಿಸುತ್ತಾ “ಡಾಕ್ಟರ್ ಬಳಿ ಕೇಳಿದ್ದೀರಾ” ಅಂತ ಕೇಳಿಯೇ ಬಿಟ್ಟೆ. ನನ್ನ ಮನಸ್ಸು ಆಗಲೇ ಒದ್ದೆಯಾಗತೊಡಗಿತ್ತು.
“ಎಲ್ಲ ಮುಗಿದಿದೆ. ಅದೆಷ್ಟೋ ಕಡೆ ಆಗುತ್ತೆ ಅಂತ ಸಾವಿರಾರು ಬಗೆಯ ಚಿಕಿತ್ಸೆ ಅಂತ, ಮಾತ್ರೆ ನುಂಗಿಸಿ ತಾವು ದುಡ್ಡು ನುಂಗಿದರೇ ಹೊರತು ಫಲಿತಾಂಶ ಶೂನ್ಯ. ನಿನಗಿದೆಲ್ಲಾ ಅರ್ಥವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಂದು ಸತ್ಯವನ್ನು ಹೇಳುತ್ತೇನೆ, ನೀನು ಯಾರಿಗೂ ಹೇಳಬಾರದು, ಮಾಸ್ತರರಿಗೂ ಹೇಳಬಾರದು, ಆಣೆ ಮಾಡು” ಎಂದರು. ಆಗ ನಾನು ಸಂಪೂರ್ಣವಾಗಿ ಗದ್ಗದಿತನಾಗಿದ್ದೆ. ಅವರ ಮನಸ್ಸು ಹಗುರಾಗಲೆಂದು ಆಣೆ ಮಾಡಿದೆ. ಅವರು ಮಾತು ಮುಂದುವರಿಸಿದರು. ಹಿಂದಿನ ತಿಂಗಳು ನನ್ನ ಗೆಳತಿ ವನಜಾ ಸಿಕ್ಕಿದ್ದಳು ತನ್ನ ಮಾವ ಫೇಮಸ್ ಡಾಕ್ಟರ್, ಅವರ ಬಳಿ ಒಮ್ಮೆ ತೋರಿಸೆಂದು ಪರಿಚಯಿಸಿ ಕೊಟ್ಟಳು, ತೋರಿಸಿಯೂ ಆಯಿತು. ನಾನವಳಿಗೆ ನನ್ನವರು ತುಂಬಾ ಸೂಕ್ಷ್ಮ ಮನಸ್ಸಿನವರು ರಿಪೋರ್ಟ್ ಏನೇ ಬಂದರೂ ಮೊದಲು ನನಗೆ ತಿಳಿಸಬೇಕೆಂದು ಆ ಡಾಕ್ಟರ್ ಬಳಿ ಕೇಳಿಕೊಳ್ಳುವಂತೆ ತಿಳಿಸಿದ್ದೆ. ಅದರಂತೆ ಡಾಕ್ಟರ್ ಮೊದಲು ನನ್ನೊಬ್ಬಳನ್ನೆ ಕರೆದು ‘ನಮ್ಮವರಿಂದ ಮಗುವಾಗುವದಿಲ’್ಲವೆಂದರು. ನನಗೆ ಬರಸಿಡಿಲೆರಗಿದಂತಾಯಿತು. ಇಲ್ಲಿಯವರೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಸುಳ್ಳು ಹೇಳಿ ತಾವು ದುಡ್ಡು ಮಾಡಿಕೊಂಡರೇ ವಿನಹ ಅದರಿಂದ ನಮಗೇನೂ ಪ್ರತಿಫಲ ಸಿಗಲಿಲ್ಲ. ಈ ರಿಪೋರ್ಟ್ ನನಗೆ ಮಹದಾಘಾತ ಉಂಟು ಮಾಡಿತ್ತು. ಕಣ್ಣುಗಳು ಒದ್ದೆಯಾದವು, ನನ್ನ ಬದುಕಲ್ಲಿ ಇನ್ನೇನು ಉಳಿದಿಲ್ಲವೆಂದುಕೊಂಡೆ. ಸಮಾಧಾನ ಮಾಡಿಕೊಂಡು ಕೃತಕ ನಗುವಿನೊಂದಿಗೆ ನನ್ನವರ ಬಳಿ ಬಂದೆ ಈ ಕಟು ಸತ್ಯವನ್ನು ಮುಚ್ಚಿಟ್ಟು ‘ಯಾವುದೇ ತೊಂದರೆ ಇಲ್ಲವಂತೆ, ಪೊಸಿಟೀವ್ ಆಗಿರಿ, ಟೆನ್ಶನ್ ಬಿಟ್ಟು ಪ್ರಯತ್ನಿಸುತ್ತಿರಿ. ಶೀಘ್ರದಲ್ಲೇ ಪ್ರತಿಫಲ ಖಂಡಿತ’ ಎಂತೆಂದೆರೆಂದು ಸಂಶಯಬಾರದಂತೆ ಸುಳ್ಳು ಹೇಳಿ ಬಿಟ್ಟೆ. ಅವರಲ್ಲಿ ಆ ದಿನ ಎಲ್ಲಿಲ್ಲದ ಸಂತೋಷವನ್ನು ಕಂಡೆ. ಮಗುವಾದಷ್ಟೇ ಸಂತಸಪಟ್ಟರು. ಮತ್ತೆ ಹೊಸ ಕನಸುಗಳನ್ನು ಕಟ್ಟ ಹತ್ತಿದರು. ನನ್ನೆದೆ ಸುಡುತ್ತಿತ್ತು. ಒತ್ತಿಬರುತ್ತಿರುವ ಅಳುವನ್ನು ತಡೆದುಕೊಳ್ಳುತ್ತಿದ್ದೆ. ಅವರಿನ್ನೂ ಬಲವಾಗಿ ನಂಬಿದ್ದಾರೆ. ಇತ್ತಿಚಿಗೇಕೊ ಅವರ ತಾಳ್ಮೆಯ ಕಟ್ಟೆ ಒಡೆದಂತಿತ್ತು..ಮೊನ್ನೆಯಷ್ಟೆ ‘ನನ್ನ ಮಗು ಬೇಕು ನನಗೆ, ನನ್ನ ರಕ್ತದ ಕುಡಿ ಬೇಕು ನನಗೆ, ಈ ಡಾಕ್ಟರ್ ಪರಿಚಯದವರಾಗಿದ್ದರಿಂದ ಸುಳ್ಳು ಹೇಳಿರುವುದಿಲ್ಲ ಎಂಬ ನಂಬಿಕೆ ನನಗಿದೆ, ಇನ್ನು ನನಗೆ ಸಹಿಸಲಸಾಧ್ಯ. ಇನ್ನು ವರುಷದೊಳಗೆ ಮಗುವಾಗದಿದ್ದರೆ ನನಗೆ ಈ ಜೀವನ ಬೇಡ. ಸಾವಿನ ಹಾದಿ ದೂರವಲ’್ಲ ಎಂದು ಕಣ್ಣೀರಿಟ್ಟರು. ನನ್ನೆದೆಯ ಬಡಿತ ಇವತ್ತಿಗೂ ಎಚ್ಚರಿಸುತ್ತಲೇ ಇದೆ. ತನ್ನಿಂದ ಮಗುವಾಗದೆಂಬ ಸತ್ಯ ಗೊತ್ತಾದರೆ ನಾನು ವಿದವೆಯಾಗುವುದು ಖಂಡಿತ. ಅದಕ್ಕೆ ನಾನೊಂದು ಕಡು ನಿರ್ಧಾರಕ್ಕೆ ದೃಢವಾಗಿ ಬಂದಿದ್ದಾಗಿದೆ. ನನಗೆ ಯಾವುದೇ ಕಾಮಾಸಕ್ತಿಯಾಗಲೀ, ದೇಹದ ವಾಂಛೆಯಾಗಲೀ ಇಲ್ಲ. ನನಗೊಂದು ಕರುಳ ಕುಡಿ ಬೇಕು ಅಷ್ಟೆ. ಅದಕ್ಕೆ ನಿನಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ನನಗೆ ಮಗುವಾಗಲು ಸಹಕರಿಸು.” ಎನ್ನುತ್ತ ಮತ್ತೆ ಅತ್ತಾಗ ನನ್ನೆದೆ ಝೆಲ್ ಎಂದಿತು. ನಾನು ಗರಬಡಿದಂತಾದೆ. ನನ್ನಿಂದ ಮಾತೇ ಹೊರಡಲಿಲ್ಲ. ಅವರು ಕೈ ಮುಗಿದು ನಿಂತಿದ್ದರು. ನಾನು ತಲೆ ತಗ್ಗಿಸಿನಿಂತೆ. ಎದೆ ಬಡಿತ ಹೆಚ್ಚುತ್ತಲೇ ಇತ್ತೇ ಹೊರತು ಬಾಯಿಬಿಡಲಾಲಿಲ್ಲ. ನನ್ನಿಂದಾಗುವುದಿಲ್ಲ ಎಂದು ಗಟ್ಟಿಯಾಗಿ ಕಿರುಚಿದೆ. ಇದೆಂಥಾ ಸಂಕಷ್ಟವೆಂದು ಕೊರಗಿದೆ. ನಾನೆಂದಿಗೂ ಈ ಕೆಲಸ ಮಾಡಲಾರೆ. ನನ್ನ ಮನಸ್ಸು ಎಂದಿಗೂ ಒಪ್ಪುವುದಿಲ್ಲ. ಇವೊತ್ತೊಂದು ದಿನ ತಪ್ಪಿಸಿಕೊಂಡರೆ ಮುಂದೆಂದೂ ಇಲ್ಲಿಗೆ ಬರಲಾರೆ. ಅದೊಂದು ಪಾಪ ಕಾರ್ಯವೇ ಸರಿ. ಅಂಥಹ ಗುರುದ್ರೋಹಿಯಾಗಲಿ, ಅಕ್ಷರ ಕಲಿಸಿದ ದೇವರಿಗೇ ಮೋಸ ಮಾಡುವಷ್ಟು ಕೆಟ್ಟ ಮನಸ್ಸು ನನ್ನದಲ್ಲ. ಹರೆಯದಲ್ಲಿ ಉಂಟಾಗುವ ಮನೋಸ್ವಾಭಾವಿಕ ಕುತೂಹಲ, ಹೆಣ್ಣಿನಕಡೆಗೆ ಆಕರ್ಷಣೆಗಳೇನೇ ಇದ್ದರೂ ನಾನಿಂಥ ಪಾಪದ ಕಾರ್ಯ ಮಾಡಲಾರೆ. ಅವರು ಬೇಡುತ್ತಲೇ ಇದ್ದರು ನಾನು ಕೋಣೆಗೆ ಓಡಿ ಹೋಗಿ ಬಾಗಿಲೆಳೆದು ಚಿಲಕ ಹಾಕಿಕೊಂಡು ಮಲಗಿಬಿಟ್ಟೆ. ಅವರು ಬಾಗಿಲು ತಟ್ಟುತ್ತಾ ಅಳುತ್ತಿದ್ದರು, ಪರಿಪರಿಯಾಗಿ ಬೇಡುತ್ತಿದ್ದರು. ನನ್ನ ಮನಸ್ಸು ಒಪ್ಪಲಿಲ್ಲ. ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದೆ. ಬೆಳಗಿನ ಜಾವ ಸ್ವಲ್ಪ ನಿದ್ರೆ ಬಂದಿರಬೇಕು. ಭಯಾನಕ ಕನಸುಗಳು, ನನ್ನನ್ನಾರೋ ಸಾಯಿಸಲೆಂದು ಓಡಿಸಿಕೊಂಡು ಬಂದಂತೆ, ನಾನು ದೊಡ್ಡ ಕಂದಕಕ್ಕೆ ಬಿದ್ದಂತೆ, ನನ್ನನ್ನು ಸಮುದ್ರದ ಮಧ್ಯದಲ್ಲಿ ನೂಕಿಬಿಟ್ಟಂತೆ, ಕಾಲೇಜಿನಲ್ಲಿ ನನಗೆ ಛೀಮಾರಿ ಹಾಕಿದಂತೆ.. ನನಗೆ ಎದೆನಡುಕ ಹೆಚ್ಚಿ ಕನಸುಗಳನ್ನು ಒಡೆದೆದ್ದೆ. ಸ್ವಲ್ಪ-ಸ್ವಲ್ಪವಾಗಿ ಬೆಳಕು ಹರಿಯುತ್ತಿತ್ತು. ಜಾನಕಿಯವರು ಏಳುವ ಮೊದಲೇ ಸದ್ದು ಮಾಡದೆ ಅಲ್ಲಿಂದ ಕಾಲ್ಕಿತ್ತೆ. ಇನ್ಯಾವತ್ತೂ ಇಲ್ಲಿಗೆ ಕಾಲಿಡಲೇ ಬಾರದೆಂದು ನಿರ್ಧರಿಸಿದೆ.
ಕೇವಲ ನಾನು ನಿರ್ಧರಿಸಿದರೆ ಮುಗಿಯಿತೇ? ಇಲ್ಲಾ, ವಿಧಿಯು ಸುಮ್ಮನಿರಬೇಕಲ್ಲ. ಅವನಾಡಿಸುವ ಆಟದಲ್ಲಿ ನಾವು ಕೇವಲ ಪಾತ್ರಧಾರಿಗಳಗಿದ್ದಾಗ ನಮ್ಮ ನಿರ್ಧಾರಗಳು ಯಾವಾಗ ಬೇಕಾದರೂ ಅಡಿಮೇಲಾಗಬಹುದು. ಆ ದಿವಸ ನಮ್ಮ ಕಾಲೇಜಿನಲ್ಲಿ ಕ್ರೀಡಾಕೂಟವಿತ್ತು. ನಾನು ಓಟ ಸ್ಪರ್ಧೆಯೆಲ್ಲಿ ಭಾಗವಹಿಸುವವನಿದ್ದೆ. ಅಥಿತಿಯಾಗಿ ಅದೇ ಊರಿನವರಾದ ನನ್ನ ಮಾಸ್ತರರು ಬಂದಿದ್ದರು. ‘ಕಾಣದೆ ತುಂಬಾ ದಿನವಾಯಿತಲ್ಲ, ಯಾಕೆ ಬರಲಿಲ್ಲ ಮನೆಗೆ?’ ಎಂದರು. ಅದೂ-ಇದೂ ಸುಳ್ಳು ಹೇಳಿದೆ. ಇವತ್ತು ಹೋಗೋಣವೆಂದು ಒತ್ತಾಯ ಮಾಡಿದರು. ಇನ್ನೊಂದು ದಿನ ಬರುವೆನೆಂದು ಹೇಳಿ ತಪ್ಪಿಸಿಕೊಂಡೆ. ನನಗೆ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡಲಾಗುತ್ತಿರಲಿಲ್ಲ. ಓಟದ ಸ್ಪರ್ಧೆ ಶುರುವಾಯಿತು. ನಾನು ಓಡುತ್ತಿದ್ದಂತೆ ಕಾಲಿಗೆ ಏನೋ ಬಲವಾಗಿ ನಾಟಿದಂತಾಗಿ ಅಲ್ಲಿಯೇ ಬಿದ್ದು ಬಿಟ್ಟೆ. ಚೂಪಾದ ಗಾಜಿನ ಚೂರೊಂದು ನನ್ನ ಅಂಗಾಲನ್ನು ಸೀಳಿ ಬಿಟ್ಟಿತ್ತು. ರಕ್ತ ಸೋರಲು ಶುರುವಾಯಿತು. ಮಾಸ್ತರರು ಓಡಿ ಬಂದು ನನ್ನನ್ನೆತ್ತಿ ಆಸ್ಪತ್ರೆಗೆ ಒಯ್ದರು. ಕಾಲಿಗೆ ಔಷಧಿ ಹಾಕಿ, ಬೇಂಡೇಜು ಕಟ್ಟಿದ ಡಾಕ್ಟರ್ ಒಂದೆರೆಡು ದಿನ ನಡೆಯುವುದು ಬೇಡವೆನ್ನುತ್ತಿದ್ದಂತೆ ನನ್ನ ಮಾತಿಗೆ ಅವಕಾಶವನ್ನೂ ಕೊಡದೆ ಮಾಸ್ತರರು ಅವರ ಮನೆಗೆ ಕರೆದುಕೊಂಡು ಹೋಗಿ ‘ಎರಡು ದಿನ ಇಲ್ಲೆ ಉಳಿದುಕೋ’ ಎಂದು ಗದರಿಸಿದರು. ನನಗೆ ತುಂಬಾ ಇರಿಸು-ಮುರುಸಾಗುತ್ತಿತ್ತು. ಜಾನಕಿಯವರು ಯಾವುದನ್ನೂ ತೋರಿಸಿಕೊಳ್ಳದೆ ನನಗಾದ ಗಾಯವನ್ನು ನೋಡಿ ನೊಂದುಕೊಂಡರು. ನನಗೆ ಮನೆಗೆ ಹೋಗುವದಕ್ಕಾಗಲೀ, ಅಲ್ಲಿಂದ ಹೊರ ಹೋಗುವದಕ್ಕಾಗಲಿ ಅವಕಾಶವೇ ಇರಲಿಲ್ಲ. ಅಲ್ಲಿ ಉಳಿದುಕೊಳ್ಳಲು ಮನಸ್ಸು ಕೇಳುತ್ತಿರಲಿಲ್ಲ. ವಿಧಿ ಮತ್ತೆ ನಕ್ಕಿದ್ದ. ಮಾಸ್ತರರ ದೂರದ ಸಂಬಂಧಿಯೊಬ್ಬರ ಆರೋಗ್ಯ ಹದಗೆಟ್ಟಿದ್ದು ಕೂಡಲೆ ಅವರು ಅಲ್ಲಿಗೆ ಹೋಗಬೇಕಾಗಿ ಬಂತು. ಇಲ್ಲೇ ಇರು, ನಾನು ತಿರುಗಿ ಬಂದಮೇಲೆ ಮನೆಗೆ ಬಿಡುತ್ತೇನೆ ಎಂದು ಹೊರಟು ಬಿಟ್ಟರು. ನಾನು ಚಡಪಡಿಸತೊಡಗಿದೆ. ಮಾಸ್ತರರು ಜೊತೆಗಿದ್ದರೆ ಮತ್ತೆ ಹಿಂದಾದ ಸಂದರ್ಭ ಮತ್ತೆ ಒದಗಿಬಾರದೆಂಬ ಧೈರ್ಯ ಇತ್ತು. ಈಗ ಆಕಾಶ ಕಳಚಿ ಬಿದ್ದಂತಾಯಿತು.
ರಾತ್ರಿ ಊಟದ ನಂತರ ಮತ್ತೆ ಅದೇ ಬೇಡಿಕೆ. “ಇಲ್ಲ ಅನ್ನಬೇಡ, ನಿನ್ನ ಕಾಲು ಹಿಡಿದು ಕೇಳಿಕೊಳ್ಳುತ್ತೀದ್ದೇನೆ. ನನಗೆ ಮಗು ಬೇಕು ಸಹಕರಿಸು. ಇನ್ನೊಂದು ವರ್ಷದೊಳಗೆ ಮಗುವಾಗದಿದ್ದರೆ ನಾವು ಬದುಕುಳಿಯುವುದಿಲ್ಲ. ನಮ್ಮ ಸಾವು ನಿನಗಿಷ್ಟವಾ ಹೇಳು? ನೀನು ನೀತಿಗೆಟ್ಟವನಾಗುವುದಿಲ್ಲ. ನಮಗೊಂದು ಮಗು ಕರುಣಿಸಿದ ಪುಣ್ಯ ನಿನಗೆ ಬರುತ್ತದೆ. ಆಗಲ್ಲ ಎನ್ನಬೇಡ”
ಯಾಕೋ ಭಾವನಾತ್ಮಕವಾಗಿ ಬೆದರಿಸುತ್ತಿದ್ದಾರೆ ಅನ್ನಿಸಿತು. ‘ನನ್ನಿಂದ ಸಾಧ್ಯವಿಲ್ಲ’ ಎಂದು ಬಿಟ್ಟೆ.
“ಸಾಧ್ಯವಿದೆ. ನಾನು ಗುರುವಿನ ಹೆಂಡತಿ ಎಂಬುದನ್ನು ಒಂದು ಕ್ಷಣ ಮರೆತುಬಿಡು. ನಾನು ಕೇಳುತ್ತಿರುವುದು ದೇಹ ಸುಖವಲ್ಲ, ಮಗು ಬೇಕು ನನಗೆ. ಕಾಮದ ಕಣ್ಣಿಂದಲ್ಲ, ಜ್ಞಾನದ ಕಣ್ಣಿಂದ ನೋಡು. ಇನ್ನೂ ನೀನು ಒಪ್ಪದಿದ್ದರೆ ನಾನೇ ಕೂಗಿಕೊಂಡು ಅತ್ಯಾಚಾರಕ್ಕೆ ಮುಂದಾದೆ ಎಂದು ಹೇಳುತ್ತೇನೆ” ಎಂದು ಅತ್ತು ಬಿಟ್ಟರು.
ಕಾಲು ತುಂಬಾ ನೋಯುತ್ತಿತ್ತು. ಅವರೇನೇ ಮಾಡಿದರೂ ನಾನು ಪ್ರತಿಭಟಿಸಲಾಗದ ಸ್ಥಿತಿಯಲ್ಲಿದ್ದೆ. ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಅವರು ಬಲಾತ್ಕಾರವಾಗಿ ತಮ್ಮ ಕೆಲಸ ಮಾಡಿಸಿಕೊಂಡರು. ನಾನು ನನ್ನ ಬ್ರಹ್ಮಚರ್ಯ ಕಳೆದುಕೊಂಡೆ.
“ನನ್ನನ್ನು ಕ್ಷಮಿಸಿಬಿಡು, ಈ ವಿಷಯವನ್ನು ಯಾರಲ್ಲೂ ಹೇಳಬೇಡ, ನಾನು ಯಾರಿಗೂ ಹೇಳುವುದಿಲ್ಲ. ಮಾಸ್ತರರಿಗೆ ಈ ಸಂಗತಿ ಯಾವೊತ್ತಿಗೂ ಗೊತ್ತಾಗಕೂಡದು. ನೀನು ಮೊದಲಿನಂತೆಯೆ ಈ ಮನೆಗೆ ಬರುತ್ತಿರು. ನನ್ನ-ನಿನ್ನ ಬಿಟ್ಟು ಈ ಜಗದಲ್ಲಿ ಇನ್ನೊಬ್ಬರಿಗೆ ಈ ಬಗ್ಗೆ ತಿಳಿದ ದಿನ ನಾನು ಬದುಕಿರುವುದಿಲ್ಲ. ಇದು ಸದಾ ನಿನ್ನ ನೆನಪಿನಲ್ಲಿರಲಿ. ನನಗೆ ಮಗುವಾದ ದಿನ ನನ್ನ ಜನ್ಮ ಪಾವನ. ಇಷ್ಟರ ಮೇಲೂ ನೀನೇನಾದರೂ ಇನ್ನೊಬ್ಬರಿಗೆ ಹೇಳಿದ್ದು ತಿಳಿದರೆ ನಾನು ಸೇರುವುದು ಮಸಣವನ್ನು.”
ನಾನವರ ಮುಖವನ್ನೂ ನೋಡಲಿಲ್ಲ. ನನ್ನ ಬಗ್ಗೆ ನನಗೇ ಹೇಸಿಗೆ ಅನಿಸುತ್ತಿತ್ತು. ಒಮ್ಮೆ ಸತ್ತು ಬಿಡಬೇಕೆಂದು ನಿರ್ಧರಿಸಿದೆ. ಆದರೆ ನಾನು ಮಾಡದ ತಪ್ಪಿದು, ನಾನು ಬದುಕಿಗೆ ಹೆದರುವವನಲ್ಲ. ಈ ವಿಷಯದಲ್ಲಿ ತಟಸ್ಥನಾಗಿಬಿಟ್ಟೆ. ಬೆಳಿಗ್ಗೆ ತಿಂಡಿಯನ್ನೂ ತಿನ್ನದೆ ಅಲ್ಲಿಂದ ಹೊರಟು ಬಂದೆ. ಕಾಲಿಗೆ ಚುಚ್ಚಿದ ಗಾಜನ್ನು ಶಪಿಸಲೋ, ಕಾಲನ್ನು ಶಪಿಸಲೋ ಅರಿಯದಾದೆ. ಎಲ್ಲವೂ ಕಾಲನ ಮಹಿಮೆ. ಮಾಸ್ತರರು ಮಧ್ಯಾಹ್ನವೇ ಬರುವವರಿದ್ದರು. ನಾ ಬರುವ ತನಕ ಹೋಗಬೇಡ ಎಂದಿದ್ದರು. ನನಗೆ ಜೀವವೇ ಬೇಡವೆಂದೆನಿಸಿದ ಕ್ಷಣ ಕಾಲು ನೋವು ದೊಡ್ಡದಾಗಿರಲಿಲ್ಲ. ನೇರವಾಗಿ ಮನೆಗೆ ಬಂದೆ. ಎಲ್ಲವನ್ನೂ ಮರೆಯಲು ಪ್ರಯತ್ನಿಸಿದೆ. ಯಾರಲ್ಲೂ ಹೇಳಿಕೊಳ್ಳಲಾಗದ ಸಂಕಟ ನನ್ನನ್ನು ಕೊರೆಯುತ್ತಲೇ ಇತ್ತು. ಮತ್ತೆ ಆ ಕಡೆ ತಲೆಹಾಕಲಿಲ್ಲ.
ಅದೊಂದು ದಿನ ನಾನು ಅನಿವಾರ್ಯವಾಗಿ ಮತ್ತೆ ಅವರ ಮನೆಗೆ ಹೋಗಬೇಕಾಗಿ ಬಂತು. ನಮ್ಮ ಕಾಲೇಜಿನ ವಾರ್ಷಿಕೋತ್ಸವದ ಸಂಚಿಕೆಗೆ ಅವರ ಹಿತನುಡಿ ಸೇರಿಸಬೇಕಾಗಿತ್ತು. ನಮ್ಮ ಪ್ರಾಂಶುಪಾಲರು ನನ್ನನ್ನು ಕರೆದು ಮಾಸ್ತರರ ಮನೆಗೆ ಹೋಗಿ ಅವರ ಲೇಖನವನ್ನು ತರಲು ಹೇಳಿದರು. ನಾನೊಬ್ಬನೇ ಅವರ ಮನೆಗೆ ಪರಿಚಿತನಾಗಿದ್ದರಿಂದ ಆಗದು ಅನ್ನಲಾಗಲಿಲ್ಲ. ಆದರೆ ಹೋಗಲು ಖಂಡಿತ ಮನಸಿರಲಿಲ್ಲ. ಆದರೂ ಹೋಗಲೇ ಬೇಕಾಗಿತ್ತು ಹೋದೆ. ಮಾಸ್ತರರು ಹೊರಗಡೆ ಕುಳಿತಿದ್ದರು. ಗೇಟಿನ ಸದ್ದು ಕೇಳಿ ನನ್ನತ್ತ ನೋಡಿದರಾದರೂ ನೋಡದಂತೆ ಇದ್ದರು. ನಮಸ್ತೆ ಅಂದೆ. ಅವರಿಂದ ಪ್ರತ್ಯುತ್ತರವಿಲ್ಲ. ಬಾ ಎಂದು ಕರೆಯಲೂ ಇಲ್ಲ. ಎಲ್ಲವೂ ಬದಲಾದ ಹಾಗಿತ್ತು. ಮನದೊಳಗೇ ಭಯವಾಯಿತು. ಆದಿನದ ಸಂಗತಿ ಎನಾದರೂ ಇವರಿಗೆ ತಿಳಿದುಬಿಟ್ತಿತೇ, ಈ ಮೊದಲೇ ಒಮ್ಮೆ ಬಂದು ಏಲ್ಲಾ ವಿಚಾರವನ್ನು ಹೇಳದೆ ತಪ್ಪು ಮಾಡಿ ಬಿಟ್ಟೆನೇ ಅನ್ನಿಸಿತಾದರೂ ಹಾಗೇನಿರಲಿಕ್ಕಿಲ್ಲವೆಂದು ಇನ್ನೊಂದು ಮನಸ್ಸು ಹೇಳುತ್ತಿತ್ತು. ನಾನು ಅಂಗಳಕ್ಕೆ ಹೋಗುತ್ತಿದ್ದಂತೆ ತಮ್ಮ ಲೇಖನವನ್ನು ನನಗೆ ಕೊಟ್ಟು ಒಳನಡೆದರು. ನನ್ನ ಮುಖಕ್ಕೆ ಹೊಡೆದಂತಾಯಿತು. ಆದರೂ ಕರೆದು ಕೇಳಿಬಿಟ್ಟೆ ‘ಏನಾಯಿತು ಗುರುಗಳೇ? ನನ್ನನ್ನು ಈ ರೀತಿ ತಿರಸ್ಕರಿಸುವುದಾದರೂ ಯಾಕೆ?, ಅವರು ಕೆಂಡಾಮಂಡಲರಾದರು. ಇಷ್ಟು ವರ್ಷದಲ್ಲಿ ಅವರ ಈ ರೂಪ ನಾ ನೋಡಿರಲಿಲ್ಲ. ಒಂದೇ ಸಮನೆ ಬೈಯತೊಡಗಿದರು. ‘ನಾನು ತಪ್ಪು ಮಾಡಿದೆ. ನಿನ್ನನ್ನ ಮನೆ ಮಗ ಅಂತ ಕರೆದರೆ ಗುರುವಿನ ಹೆಂಡತಿಯನ್ನೇ ಕಾಮದೃಷ್ಟಿಯಿಂದ ನೋಡುತ್ತೀಯಾ?. ಮಗನಂತೆ ಕಂಡ ನಮಗೆ ಇದೇನಾ ನೀ ಕೊಡುವ ಕಾಣಿಕೆ? ನಮಗೆ ಮಕ್ಕಳಾಗದಿದ್ದರೂ ನಿನ್ನ ನೋಡಿ ಆ ನೋವನ್ನು ಮರೆಯುತ್ತಿದ್ದೆವು. ಆದರೆ ನೀನು ಉಂಡ ಮನೆಗೆ ದ್ರೋಹ ಬಗೆಯುವಂತ ಕೆಲಸ ಮಾಡಿದೆ. ನಿನ್ನ ಕಾಲು ಪೆಟ್ಟಾದಾಗ ಮನೆಗೆ ಕರೆತಂದು ಅರೈಕೆ ಮಾಡಿದರೆ ಆ ನೋವಿನಲ್ಲೂ ನಿನಗೆ ಕಾಮಾಸಕ್ತಿ ಉಂಟಾಯಿತಾ? ಗುರುವಿನ ಹೆಂಡತಿ ತಾಯಿ ಸಮಾನವೆಂಬುದೇ ಮರೆತು ಹೋಯಿತಾ? ಕಾಮಾತುರಾಣಾಮ್ ನರುಚಿಂ ನ ವೇದಾ, ನಲಜ್ಜಾ ಎಂಬ ಮಾತಿದೆ. ಅದರಂತೆ ನಿನಗೆ ನೀತಿಯಾಗಲಿ, ಮರ್ಯಾದೆಯಗಲೀ ಇಲ್ಲವೇ ಇಲ್ಲ. ಸ್ಕೂಲಿನಲ್ಲಿ ನೀನು ಬಿದ್ದು ಪೆಟ್ಟು ಮಾಡಿಕೊಂಡರೆ ನನ್ನವಳ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ ಅದಕ್ಕೆ ಸಿಕ್ಕ ಪ್ರತಿಫಲವಾದರೂ ಏನು?
ನನಗೆ ತಾಳ್ಮೆ ತಪ್ಪುತ್ತಿತ್ತು, ಕೋಪವೂ ಬಂತು. ನಾನವರ ಮಾತನ್ನು ಅರ್ಧಕ್ಕೆ ತುಂಡರಿಸಿ ನಾನಂಥವನಲ್ಲ ನನ್ನ ಮಾತನ್ನು ಸ್ವಲ್ಪ ಕೇಳಿ ಎಂದು ಕಿರುಚಿದೆ. ಆದರೆ ಅವರು ನನ್ನ ಮಾತಿಗೆ ಬೆಲೆಕೊಡದೆ ಮತ್ತೆ ಮುಂದುವರಿಸಿದರು.
“ಇಲ್ಲಿ ನಿನ್ನ ಮಾತನ್ನು ಕೇಳುವ ಅಗತ್ಯವಿಲ್ಲ. ಕಾಲು ನೋವಿದ್ದವನಿಗೆ ನಾನು ಬರುವ ಮೊದಲೇ ಮನೆಗೆ ಹೋಗಬೇಕಾದ ಅಗತ್ಯವಾದರೂ ಏನಿತ್ತು. ನಾನು ಮನೆಗೆ ಬಂದು ನೋಡುವಾಗ ಜಾನಕಿ ಕಣ್ಣೀರಿಡುತ್ತಿದ್ದಳು, ನೀನು ಹೋಗಿಯಾಗಿತ್ತು. ನನ್ನವಳು ಎಂದಿಗೂ ಸುಳ್ಳಾಡುವದಿಲ್ಲ. ಸಧ್ಯ ನಿನಗೆ ಕಾಲು ನೋವಿದ್ದದ್ದು ಒಳ್ಳೆಯದೇ ಆಯಿತು. ಇಲ್ಲವಾಗಿದ್ದಲ್ಲಿ ನಿನ್ನಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಅವಳ ಮಾನ ಉಳಿಯಿತು. ಹರೆಯ ಎಲ್ಲರಿಗೂ ಬರುತ್ತದೆ. ಇಲ್ಲ ಸಲ್ಲದ ಕುತೂಹಲ, ಆಸೆಗಳು ಸಹಜ. ಆದರೆ ಅವನ್ನು ನಿಗ್ರಹಿಸಬೇಕಪ್ಪ. ಈ ರೀತಿಮಾಡುವುದಲ್ಲ. ನಿನ್ನ ಒಳ್ಳೆಯತನ ಎಲ್ಲಾ ಸುಟ್ಟು ಭಸ್ಮವಾಗಿದೆ. ಜಾನಕಿ ನಿನ್ನ ಮುಖ ನೋಡಲಾರೆನೆಂದು ಹೊರ ಬರುತ್ತಿಲ್ಲ. ಒಳಗೇ ಅಳುತ್ತಾ ಕುಳಿತಿದ್ದಾಳೆ. ನಾವು ಕೊಟ್ಟ ಪ್ರೀತಿಗೆ, ನೀ ಕೊಟ್ಟ ಉಡುಗೋರೆಗೆ ನಾವು ಧನ್ಯ. ಮಕ್ಕಳಿಲ್ಲವೆಂಬ ನೋವು ನಮ್ಮನ್ನು ಬಾಧಿಸುತ್ತಿದ್ದರೆ ನಿನಗೆ ನನ್ನವಳ ದೇಹ ಸುಖ ಬೇಕಾ? ಅಪ್ಪ-ಅಮ್ಮ, ಅಣ್ಣ-ತಂಗಿ ಎಂಬ ಸಂಬಂಧವರಿಯದೆ ದೇಹ ತೀಟೆ ತೀರಿಸಿಕೊಳ್ಳುವ ಪ್ರಾಣಿಗಿಂತಲೂ ಕಡೆ ನೀನು. ಮುಂದೆಂದೂ ಈ ಕಡೆ ಮುಖ ಹಾಕಬೇಡ. ನನ್ನದೇ ಕರುಳ ಕುಡಿ ಅವಳ ಹೊಟ್ಟೆಯಲ್ಲಿ ಬೆಳೆಯಿತ್ತಿದೆ. ಆ ದೇವರು ನಮ್ಮ ಕೈ ಬಿಟ್ಟಿಲ್ಲ. ನನ್ನ ನಿನ್ನ ಋಣತೀರಿತು. ನಿನ್ನ ತಪ್ಪಿಗೆ ಇದೇ ಶಿಕ್ಷೆ. ನಿನ್ನ ವಂಚಕ ಮುಖ ನನ್ನಿಂದ ನೋಡಲಸಾಧ್ಯ. ತೊಲಗಿಬಿಡು ಇಲ್ಲಿಂದ.” ಕರ್ಣಕಠೋರ ನುಡಿಗಳು ನನ್ನ ಕಿವಿಗಪ್ಪಳಿಸಿದವು. ನಾನು ಕುಸಿದೇ ಹೋದೆ. ಪರಿಸ್ಥಿತಿಯ ಸಂಪೂರ್ಣ ಅರಿವಾಗಿತ್ತು ನನಗೆ. ಈ ನಡುವೆ ಏನಾಗಿತ್ತೆಂಬುದನ್ನು ನಾನು ಊಹಿಸಬಲ್ಲೆ. ಜಾನಕಿಯವರು ಗುರುಗಳಿಗೆ ಸತ್ಯ ಗೊತ್ತಾಗಬಾರದೆಂದು ಈ ನಾಟಕವಾಡಿ ಗುರುಗಳು ನನ್ನನ್ನು ದ್ವೇಷಿಸುವಂತೆ ಮಾಡಿದ್ದಾರೆ. ಅವರ ಬಸಿರಿನಲ್ಲಿ ನನ್ನ ಮಗುವಿದೆ ಎಂಬ ಸತ್ಯ ಈಗ ತಿಳಿಯಿತು. ಇನ್ನು ನನ್ನ ಅಗತ್ಯ ಇಬ್ಬರಿಗೂ ಇಲ್ಲ. ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಎಂಜಿಲೆಲೆಯಂತೆ ನನ್ನ ದೂರ ಬಿಸಾಡಿ ಬಿಟ್ಟರು. ನಾನು ಇಲ್ಲಿ ಯಾವುದೇ ವಾದ ಮಾಡಿ ಪ್ರಯೋಜನವಿಲ್ಲ. ಗುರುವೇ ನಂಬದ ಮೇಲೆ ನಾನು ಇನ್ನಾರನ್ನು ಒಪ್ಪಿಸಲಿ. ಮತ್ತು ಯಾಕಾಗಿ ಒಪ್ಪಿಸಲಿ. ನನ್ನಿಂದ ಪಡೆದ ಮಗುವಾದರೂ ಸ್ವಂತ ಮಗುವೆಂದುಕೊಂದು ಸಂತೋಷದಿಂದಿರಲಿ ಎಂದುಕೊಳ್ಳುತ್ತಾ ತಲೆತಗ್ಗಿಸಿಕೊಂಡು ಬಂದುಬಿಟ್ಟೆ.
ಇಪ್ಪತ್ತಾರು ವರುಷಗಳ ಹಿಂದಿನ ನೆನಪೊಂದನ್ನು ಈ ಚುಚ್ಚಿದ ಗಾಜಿನ ಚೂರೊಂದು ಒಮ್ಮೆ ನನ್ನನ್ನು ಮತ್ತೆ ಕೊರಗುವಂತೆ ಮಾಡಿತು. ಅಂದು ಅಲ್ಲಿಂದ ಹೊರಬಿದ್ದವನು ಮತ್ತೆಂದೂ ಅವರ ಮುಖ ನೋಡಲಿಲ್ಲ. ಈಗ ಪ್ರಶ್ನೆಗಳು ಉದ್ಭವಿಸುತ್ತಿದೆ. ಈ ಸಂಬಂಧಗಳೆಂದರೆ ಏನು? ಇಷ್ಟೇನಾ? ಹತ್ತು ವರ್ಷಗಳ ಕಾಲ ತನ್ನ ಮಗನಂತೆ ಕಂಡ ಗುರುಗಳು ಆ ಕ್ಷಣ ಕುರುಡರಾಗಿ ಬಿಟ್ಟರಾ? ನನ್ನನ್ನು ಅಷ್ಟೊಂದು ಬೈಯುವಾಗ ಯಾಕೆ ಹೀಗಾಯಿತೆಂದು ಕೇಳದಷ್ಟೂ ಅನ್ಯನಾಗಿ ಬಿಟ್ಟಿದ್ದೆನಾ ನಾನು? ಅವರ ಹೆಂಡತಿ ಜಾನಕಿಯದರೂ ಮಾಡಿದ್ದು ಸರೀನಾ? ನನ್ನನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿ, ಬಲಾತ್ಕಾರವಾಗಿ ಅವರು ಮಾಡಿಸಿಕೊಂಡ ಕಾರ್ಯಕ್ಕೆ ನಾನು ಪಾಪಿಯಾಗಿಬಿಟ್ಟೆನಾ? ತನ್ನವರು ಸುಖವಾಗಿರಲೆಂದು ನನ್ನಿಂದ ಮಗು ಪಡೆದದ್ದು ಸರೀನಾ? ಇದಕ್ಕೆ ನಾನೇ ಬೇಕಾಗಿತ್ತಾ? ಯಾರಲ್ಲಿಯೂ ಹೇಳಬೇಡವೆಂದ ಅವರು ಈ ರೀತಿಯ ನಾಟಕವಾಡಿ ಗುರುಗಳಿಂದ ನನ್ನ ದೂರ ಮಾಡಿದ್ದು ಸರಿಯೇನು? ನನ್ನಿಂದಾದದ್ದು ಪಾಪದ ಕೆಲಸವೇ ಆದರೂ ಮಗುವಿನ ಮುಖ ನೋಡಿ ಗುರುಗಳು ಹರುಷ ಪಟ್ಟ ಕ್ಷಣ ನನ್ನ ಪಾಪ ಕಳೆಯಿತಾ? ಅವರಿಂದು ಸುಖವಾಗಿರಬಹುದು ಅದರೆ ಜಾನಕಿಯರಿಗೆ ನಾನೇನಾದೆನೆಂದು ಪ್ರಶ್ನೆ ಬಂದಿರಲಾರದೆ? ಒಂದುವೇಳೆ ನಾನು ಧೈರ್ಯಮಾಡಿ ಎಲ್ಲವನ್ನೂ ಗುರುಗಳಿಗೆ ಅಂದೇ ಹೇಳಿಬಿಡುತ್ತಿದ್ದರೆ ಏನಾಗುತ್ತಿತ್ತು? ಮಾಸ್ತರರು ನನ್ನನ್ನು ಮರೆತಿರಬಹುದಾ? ಇಂದಿಗೂ ಸತ್ಯ ಗೊತ್ತಾಗಿರಲಿಕ್ಕಿಲ್ಲವೇ? ಜಾನಕಿಯವರಿಗೆ ಪಾಪ ಪ್ರಜ್ಞೆ ಕಾಡುತ್ತಿರಬಹುದೆ? ಅವರ ಮಗು ನನ್ನ ರಕ್ತದಿಂದ ಹುಟ್ಟಿದ್ದು ಎಂದಾದರೇ ನನಗೆ ಮೂವರು ಮಕ್ಕಳಾ? ಆದರೆ ನನಗೇಕೆ ಅವರ ಮಗುವನ್ನು ಆಗಾಗ ನೋಡಬೇಕೆಂದೆನಿಸುವುದಿಲ್ಲ? ನಾನು ಈ ಸತ್ಯವನ್ನು ಜಗತ್ತಿಗೆ ಹೇಳಿದ್ದರೆ ಏನಾಗುತ್ತಿತ್ತು? ಜಗತ್ತು ಯಾವ ರೀತಿ ಸ್ವೀಕರಿಸುತ್ತಿತ್ತು? ನನ್ನವಳಿಗೆ ನಾನಿದನ್ನು ಹೇಳಬೇಕಿತ್ತಾ? ಅವಳಿಗೆ ಮೋಸ ಮಾಡಿದಂತಾಯಿತಾ? ಈ ವಿಷಯ ತಿಳಿದರೆ ಅವಳು ಸಹಿಸುತ್ತಾಳೆಯೆ? ಮಕ್ಕಳು ಏನೆಂದುಕೊಂಡಾರು? ಆ ಮಗುವನ್ನು ಒಮ್ಮೊಮ್ಮೆ ನೋಡಬೇಕೆಂದೆನಿಸಿದರೂ ಆ ಆಸೆಯನ್ನು ಅದುಮಿ ಕುಳಿತಿರುವುದು ನನ್ನ ಮನೋಶಕ್ತಿಯಾ? ಅಥವಾ ಮನೋದೌರ್ಬಲ್ಯವಾ? ಸುಜಯ್-ನಿತ್ಯಾರನ್ನು ಮುದ್ದಿಸಿದಂತೆ ಆ ಮಗುವನ್ನು ಮುದ್ದಿಸಬೇಕೆಂಬ ಆಸೆ ಉದ್ಭವಿಸಿದರೆ ಅದು ತಪ್ಪಾ? ನಾನೀಗ ಹೋಗಿ ಅವರ ಮಗನನ್ನು ನನ್ನವನೆಂದರೆ ಅವರು ಒಪ್ಪುತ್ತಾರಾ? ಆತ ಒಪ್ಪಿಯಾನಾ? ಮಗುವಾದ ಮೇಲೆ ಜಾನಕಿಯವರಿಗೆ ನಾನು ನೆನಪಾಗದೇ ಹೋದೆನೆ, ಒಂದು ಕೃತಜ್ಞತೆಯನ್ನೂ ಸಲ್ಲಿಸದಾದರೆ? ನನ್ನಿಂದಾದದ್ದು ತಪ್ಪೋ-ಸರಿಯೋ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಗುರುಗಳು ನನ್ನನು ದ್ವೇಷಿಸುತ್ತಾರೆ ಅದೇ ಸಮಯದಲ್ಲಿ ನನ್ನ ಮಗನನ್ನು ಪ್ರೀತಿಸುತ್ತಾರೆ ಇದೊಂದು ವಿಪರ್ಯಾಸವಲ್ಲವೆ? ನಾನು ಗುರುದ್ರೋಹಿಯೇ ಆಗಿದ್ದಲ್ಲಿ ನನ್ನ ಬದುಕು ಹೀಗಿರುತ್ತಿತ್ತಾ? ಅಥವಾ ಮುಂದಿನ ಜನ್ಮದಲ್ಲಿ ಈ ಪಾಪ ಅಂಟಿಕೊಳ್ಳುವುದೇ? ಇದೊಂದು ವಿಧಿ ನನ್ನ ಬದುಕಿನಲ್ಲಿ ಆಡಿದ ಮಹದಾಟವೇ? ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳು ಅಂತ್ಯವಿಲ್ಲದೆ ಕಾಡುತ್ತಿವೆ. ಕಹಿಯಾದ ನೆನೆಪಿನ ಹಿಂದೆ ಚುಚ್ಚುವ ಕಟುವಾದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ನಾನು ಸರಿ ಅಂದುಕೊಂಡರೆ ಸರಿ, ತಪ್ಪು ಅಂದುಕೊಂಡರೆ ತಪ್ಪು. ಏನೇ ಇದ್ದರೂ ನನ್ನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರವಿಲ್ಲ.
ಕಾಲಿಂಗ್ ಬೆಲ್ ಸದ್ದು ಮಾಡಿತು. ನೆನಪಿನ ಗೂಡಿಂದ ಹೊರಬಿದ್ದೆ.
Vishnu Bhat Hosmane